ಅಪಪ್ರಚಾರ, ಅಶ್ರುವಾಯುಗೆ ಬಗ್ಗದ ಅನ್ನದಾತ
ದಿಲ್ಲಿಯಲ್ಲೇ ಮಾರ್ಚ್ 14ಕ್ಕೆ ಮಹಾ ಪಂಚಾಯತ್ ಘೋಷಿಸಿದ ರೈತರು
Photo: PTI
ರೈತರ ಹೋರಾಟ ಇಂದಿನಿಂದ ಮತ್ತೆ ಶುರುವಾಗಿದೆ ಮತ್ತು ಅದಕ್ಕೆ ಇನ್ನಷ್ಟು ತೀವ್ರತೆ ಬಂದಿದೆ. ಯುವ ರೈತ ಶುಭಕರಣ್ ಸಿಂಗ್ ಸಾವಿಗೆ ತೀವ್ರ ಆಕ್ರೋಶಗೊಂಡಿರುವ ರೈತರು ಸರ್ಕಾರಕ್ಕೆ ಸವಾಲೆಸೆದು ನಿಂತಿದ್ದಾರೆ. ಶಾಂತಿಯುತವಾಗಿಯೇ ಆಂದೋಲನಕ್ಕೆ ಇಳಿದಿದ್ದವರ ಮೇಲೆ ಖಿನೌರಿ ಗಡಿಯಲ್ಲಿ ಅಶ್ರುವಾಯು ಪ್ರಯೋಗದ ಬಳಿಕ ಯುವರೈತನ ಸಾವಿಗೂ ಕಾರಣವಾದ ವ್ಯವಸ್ಥೆಯ ಬಗ್ಗೆ ಸಹಜವಾಗಿಯೇ ಅನ್ನದಾತರು ಸಿಟ್ಟಾಗಿದ್ದಾರೆ.
ದುಷ್ಕರ್ಮಿಗಳ ಮೇಲೆ ದಾಳಿ ಮಾಡಿದಂತೆ ತಮ್ಮ ಮೇಲೆ ಹರ್ಯಾಣ ಬಿಜೆಪಿ ಸರಕಾರ ಅಶ್ರುವಾಯು ಪ್ರಯೋಗಿಸಿ ಅದರಿಂದ ಓರ್ವ ಯುವ ರೈತ ಬಲಿಯಾಗಿರುವುದಕ್ಕೆ ರೈತರು ರೊಚ್ಚಿಗೆದ್ದಿದ್ದಾರೆ. ಹರ್ಯಾಣ ಸಿಎಂ ಹಾಗು ಅಲ್ಲಿನ ಗೃಹಸಚಿವರ ವಿರುದ್ಧ ಎಫ್ ಐ ಆರ್ ಹಾಗು ಅವರಿಬ್ಬರ ಸಹಿತ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ರೈತರು ಆಗ್ರಹಿಸಿದ್ದಾರೆ.
ಶುಭಕರಣ್ ಸಿಂಗ್ ನಿಧನಕ್ಕೆ ಎರಡು ದಿನಗಳ ಶೋಕಾಚರಣೆ ಬಳಿಕ ಮತ್ತೆ ಆಂದೋಲನ ಶುರುವಾಗಿದೆ. ದೆಹಲಿಯನ್ನು ತಲುಪಿಯೇ ಸಿದ್ಧ ಎಂದು ಈಗ ರೈತರು ಸನ್ನದ್ಧರಾಗಿದ್ದಾರೆ. ಮಾರ್ಚ್ 14ರಂದು ದಿಲ್ಲಿಯಲ್ಲೇ ಮಹಾ ಪಂಚಾಯತ್ ನಡೆಸುವ ಘೋಷಣೆಯನ್ನೂ ಮಾಡಿದ್ದಾರೆ.
ಮೋದಿ ಸರಕಾರ ಬೀದಿಯಲ್ಲಿ ಮೊಳೆ ನೆಟ್ಟಿರುವ ದಿಲ್ಲಿಯಲ್ಲೇ ಮಹಾ ಪಂಚಾಯತ್ ನಡೆಸುವ ಘೋಷಣೆ ಮಾಡಿರುವ ರೈತರು, ದಿಲ್ಲಿ ಗದ್ದುಗೆಗೆ ದೊಡ್ಡ ಸವಾಲು ಹಾಕಿದ್ದಾರೆ. ತಾಕತ್ತಿದ್ದರೆ ನಮ್ಮನ್ನು ತಡೆಯಿರಿ ಎಂದು ಪ್ರಭುತ್ವದೆದುರು ತೊಡೆ ತಟ್ಟಿದ್ದಾರೆ.
ಫೆಬ್ರವರಿ 21ರಂದು ಶಂಭು ಗಡಿ ಮತ್ತು ಖಿನೌರಿ ಗಡಿಯಲ್ಲಿ 170ಕ್ಕೂ ಹೆಚ್ಚು ರೈತರು ಗಾಯಗೊಂಡರು. ಅದಕ್ಕಿಂತ ಹೆಚ್ಚಾಗಿ ಯುವ ರೈತನೊಬ್ಬನನ್ನು ಆ ಘಟನೆ ಬಲಿ ತೆಗೆದುಕೊಂಡಿತು. ರೈತರ ಮೇಲೆ ಹಾಗೆಲ್ಲ ಅಶ್ರುವಾಯು ಸಿಡಿಸುವ ನಿರ್ಧಾರದ ಅಗತ್ಯವಿತ್ತೆ?
ಅವತ್ತು ಬಂದಿರುವ ವರದಿಗಳ ಪ್ರಕಾರ ರೈತರ ಮೇಲೆ ಎಲ್ಲೆಡೆಯಿಂದ ಅಶ್ರುವಾಯು ಪ್ರಯೋಗಿಸಲಾಯಿತು.
ನ್ಯಾಯ ಕೇಳಲು ಬಂದ ರೈತರ ವಿಚಾರವಾಗಿ ಅಷ್ಟೂ ತಾಳ್ಮೆ ಮೋದಿ ಸರ್ಕಾರಕ್ಕೆ ಇಲ್ಲದಾಯಿತೆ?
ರೈತರನ್ನು ದಮನಿಸುವ ನೀತಿಯನ್ನೇ ಒಳಗೊಳಗೇ ಅನುಸರಿಸಿಕೊಂಡು ಬಂದಿರುವ ಮೋದಿ ಸರ್ಕಾರದ ಮಸಲತ್ತು, ಅಸಲೀಯತ್ತಿನ ಭಾಗವೆಂಬಂತೆ ರೈತರ ಮೇಲೆ ಪೊಲೀಸರು ಮುಗಿಬಿದ್ದಿದ್ದರು. ಈಗ ಅದರ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ ಮತ್ತು ಯುವರೈತನ ಸಾವಿಗೆ ಕಾರಣರಾದವರ ವಿರುದ್ದ ಕ್ರಮಕ್ಕೆ ಒತ್ತಾಯ ಜೋರಾಗಿ ಕೇಳಿಬರುತ್ತಿದೆ.
ಈಗಿನ ಮತ್ತೊಂದು ಮುಖ್ಯ ಬೆಳವಣಿಗೆಯೆಂದರೆ, ದಿಲ್ಲಿ ಚಲೋ ಆಂದೋಲನದೊಂದಿಗೆ ಕೈಜೋಡಿಸಲು ಸಂಯುಕ್ತ ಕಿಸಾನ್ ಮೋರ್ಚಾ ಮುಂದಾದದ್ದು. ರೈತರ ಬೇಡಿಕೆಗಳ ಬಗ್ಗೆ ಸಹಮತವಿದ್ದೂ ಆಂದೋಲನದಿಂದ ದೂರವಿದ್ದ ಸಂಯುಕ್ತ ಕಿಸಾನ್ ಮೋರ್ಚಾ ಇವತ್ತಿನಿಂದ ಆಂದೋಲನಕ್ಕಿಳಿದಿದೆ.
ಇದು ರೈತರ ಆಂದೋಲನಕ್ಕೆ ಇನ್ನಷ್ಟು ಶಕ್ತಿ ತುಂಬಿದೆ. ಆಕ್ರೋಶ್ ದಿವಸ್ ಆಚರಿಸಲಾಗುತ್ತಿದೆ ಮತ್ತು ಟ್ರ್ಯಾಕ್ಟರ್ ಮಾರ್ಚ್ ಘೋಷಿಸಿದೆ.
ರೈತರ ಪಾಲಿನ ಎಲ್ಲ ಕರಾಳತೆಗೂ ಕಾರಣವಾಗುತ್ತಿರುವ ದೆಹಲಿಯಲ್ಲಿಯೇ ಮಾರ್ಚ್ 14ರಂದು ರೈತರು ಮಹಾಪಂಚಾಯತ್ ನಡೆಸಲಿದ್ದಾರೆ.
ಹೀಗೆ ದೆಹಲಿಯಲ್ಲಿಯೇ ಮಹಾಪಂಚಾಯತ್ ಘೋಷಿಸುವ ಮೂಲಕ ರೈತರು ಮೋದಿ ಸರ್ಕಾರದ ಮುಳ್ಳು, ಮೊಳೆ ನೀತಿಗೆ ಸವಾಲೆಸೆದಿದ್ದಾರೆ. ಅದನ್ನು ಧಿಕ್ಕರಿಸಿದ್ದಾರೆ. ನಾವು ಅಂತಹ ಬಗ್ಗು ಬಡಿಯುವ ಕ್ರಮಗಳಿಗೆ ಜಗ್ಗುವವರಲ್ಲ ಎಂದು ಸಂದೇಶ ರವಾನಿಸಿದ್ದಾರೆ.
ರೈತರ ಪ್ರತಿಭಟನೆ ಬಗ್ಗೆ ಅಪಪ್ರಚಾರ ಮಾಡುವ, ಪ್ರತಿಭಟನೆಯಲ್ಲಿ ಭಾಗವಹಿಸಿದ ರೈತರೆಲ್ಲ ಭಾರಿ ಕುಳಗಳು ಎಂದು ಬಿಂಬಿಸುವ ಮಡಿಲ ಮೀಡಿಯಾಗಳಿಗೆ ರೈತ ಕುಟುಂಬವೊಂದರಲ್ಲಿನ ಒಂದು ಸಾವು ಅರ್ಥವಾಗಲಾರದು. ಅತ್ಯಂತ ಬಡತನದಲ್ಲಿರುವ, ಅದರ ನಡುವೆಯೂ ಆತ್ಮಾಭಿಮಾನದಿಂದ ಬದುಕಲು ಬಯಸುವ ರೈತ ಕುಟುಂಬದ ಮನಃಸ್ಥಿತಿ, ಅಂಥ ಕುಟುಂಬದಲ್ಲಿ ಆಧಾರವಾಗಬೇಕಿದ್ದ ಯುವಕನ ಇಂಥ ದುರ್ಮರಣ ಅದೆಷ್ಟು ಮಟ್ಟಿಗೆ ಭರಿಸಲಾಗದ ಸಾವಾದೀತು ಎಂಬುದನ್ನು ಮೋದಿ ಸರ್ಕಾರದ ಕೃಪಾ ಪೋಷಿತ ಮೀಡಿಯಾಗಳು, ಅದರ ಪತ್ರಕರ್ತರು ಯೋಚಿಸಲು ಸಾಧ್ಯವಿಲ್ಲ.
ಮೃತ ಶುಭಕರಣ್ ಸಿಂಗ್ ತನ್ನ ಕುಟುಂಬಕ್ಕೆ ಆಧಾರವಾಗಿದ್ದ. ವಿವಾಹಿತನಾಗಿದ್ದ. ಈಗ ಆತನೇ ಇಲ್ಲವಾಗಿ ಹೋಗಿದ್ದಾನೆ. ಇದು ಆತನ ಮನೆಯ ಪರಿಸ್ಥಿತಿ. ಮಡಿಲ ಮೀಡಿಯಾಗಳು ಹೇಳಿದ ಹಾಗೆ ಇದೇ ಶ್ರೀಮಂತ ರೈತರ ಅರಮನೆ ಎಂದಾದರೆ ಇನ್ನು ಬಡ ರೈತರ ಮನೆಗಳು ಹೇಗಿರಬಹುದು ?
ಆತನ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ಸಿಗಬೇಕೆಂಬುದು ಆತನ ಗ್ರಾಮಸ್ಥರ ಒತ್ತಾಯ.
ಅನಗತ್ಯವಾಗಿ ಪೊಲೀಸರು ಅಶ್ರುವಾಯು ಪ್ರಯೋಗಿಸಿದ ಬಳಿಕ ನಡೆದ ಅವಾಂತರದಲ್ಲಿ ರೈತರಿಗೆ ಆಗಿರುವ ನಷ್ಟ ತುಂಬಿಕೊಡಬೇಕಾದವರು ಯಾರು? ಇದು ಸುದೀರ್ಘ ಹೋರಾಟವಾಗಲಿರುವ ಎಚ್ಚರಿಕೆಯನ್ನು ರೈತ ಮುಖಂಡ ರಾಕೇಶ್ ಟಿಕಾಯತ್ ನೀಡಿದ್ದಾರೆ.
ಶುಭಕರಣ್ ಸಾವು ಎಲ್ಲ ರೈತರಲ್ಲಿ ಆಕ್ರೋಶ ಮೂಡಿಸಿದೆ. ಅದೆಷ್ಟೋ ಸಂಘಟನೆಗಳು ಎಲ್ಲೆಡೆಯೂ ಈ ಘಟನೆಯನ್ನು ಖಂಡಿಸುತ್ತಿವೆ, ಪ್ರತಿಭಟಿಸುತ್ತಿವೆ. ಶುಭಕರಣ್ ಸಾವಿನ ಬಳಿಕ ಚಂಡೀಘಡದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಸಭೆ ಸೇರಿತ್ತು. ಘಟನೆಯನ್ನು ಖಂಡಿಸಿ ಕರಾಳ ದಿನ ಅಥವಾ ಆಕ್ರೋಶ ದಿನ ಆಚರಿಸುವ ಘೋಷಣೆ ಆ ಸಭೆಯಿಂದಲೇ ಬಂತು.
ಘಟನೆ ಖಂಡಿಸಿ ದೇಶಾದ್ಯಂತ ಬೃಹತ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಕ್ಕೂ ಅದು ನಿರ್ಧರಿಸಿದ್ದು, ಮೊದಲ ಕಾರ್ಯಕ್ರಮವಾಗಿ ಆಕ್ರೋಶ್ ದಿವಸ್ ಆಚರಿಸಲಾಗುತ್ತಿದೆ. ಫೆ.26ರಂದು ದೇಶಾದ್ಯಂತ ರೈತರು ತಮ್ಮ ಟ್ರ್ಯಾಕ್ಟರ್ ಗಳೊಂದಿಗೆ ಮೆರವಣಿಗೆ ಹೋಗಲಿದ್ದಾರೆ. ವಿಶ್ವ ವಾಣಿಜ್ಯ ಸಂಘಟನೆ (ಡಬ್ಲ್ಯುಟಿಒ)ಯಿಂದ ಹೊರಬರುವಂತೆ ಸರಕಾರವನ್ನು ಆಗ್ರಹಿಸಲಿದ್ಧಾರೆ.
ಮಾ.14ರಂದು ದಿಲ್ಲಿಯ ರಾಮ್ಲೀಲಾ ಮೈದಾನದಲ್ಲಿ ಅಖಿಲ ಭಾರತ ಕಿಸಾನ್ ಮಜ್ದೂರ್ ಮಹಾ ಪಂಚಾಯತ್ ನಡೆಯಲಿದೆ. ಒಂದು ಲಕ್ಷಕ್ಕೂ ಅಧಿಕ ಜನರು ಭಾಗಿಯಾಗಲಿದ್ದಾರೆ ಎಂದು ಸಂಯುಕ್ತ ಸಮಾಜ ಮೋರ್ಚಾ ಪಾರ್ಟಿ ಮುಖ್ಯಸ್ಥ ಬಲಬೀರ್ ಸಿಂಗ್ ರಾಜೆವಾಲ್ ಹೇಳಿದ್ದಾರೆ. ಶುಭಕರಣ ಸಿಂಗ್ ಸಾವಿಗೆ ಸಂಬಂಧಿಸಿದಂತೆ ಕೊಲೆ ಪ್ರಕರಣ ದಾಖಲಿಸುವಂತೆ ಎಸ್ ಕೆ ಎಂ ಆಗ್ರಹಿಸಿದೆ. ಖನೌರಿ ಗಡಿಯಲ್ಲಿ ಘರ್ಷಣೆಗೆ ಹೊಣೆಗಾರರಾದವರ ವಿರುದ್ಧ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ವಿಚಾರಣೆಗೂ ಎಸ್ ಕೆ ಎಂ ಆಗ್ರಹಿಸಿದೆ.
ಮೋದಿ ಸರ್ಕಾರಕ್ಕೆ ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಇದ್ದುದಾಗಿದ್ದರೆ ಯುವ ರೈತನ ಸಾವಿನ ಪ್ರಕರಣಕ್ಕೆ ಅವಕಾಶವೇ ಇದ್ದಿರಲಿಲ್ಲ. ಆದರೆ ಮೋದಿ ಸರ್ಕಾರ ರೈತರ ಬಗ್ಗೆ ಯಾವತ್ತೂ ಕಾಳಜಿ ತೋರಿಸಿದ್ದಿಲ್ಲ, ಕಳವಳಗೊಂಡದ್ದೂ ಇಲ್ಲ. ಅದು ಕಾರ್ಪೊರೇಟ್ ಹಿತಾಸಕ್ತಿಗಳನ್ನು ಕಾಯಲು ರೈತರ ಹಿತವನ್ನೇ ಬಲಿ ಕೊಡಲು ಹೊರಟಿತ್ತೆಂಬುದನ್ನು ಕರಾಳ ಕೃಷಿ ಕಾಯ್ದೆಗಳನ್ನು ತರಲು ಮುಂದಾದಾಗಲೇ ಕಂಡಿದ್ದೇವೆ.
ಈಗಲೂ ರೈತರಿಗೆ ಏನೇನೆಲ್ಲ ಮಾಡಿದ್ದೇವೆ ಎಂದು, ಲಜ್ಜೆಯೇ ಇಲ್ಲದೆ ಸುಳ್ಳುಗಳನ್ನೇ ಸುರಿಸುವ ಸರ್ಕಾರ, ರೈತರನ್ನೇ ಅಸ್ತ್ರ ಬಳಸಿ ಹೆದರಿಸಲು, ಓಡಿಸಲು ನೋಡಿತ್ತು. ಅದಕ್ಕೆ ಯುವರೈತನೊಬ್ಬ ಬಲಿಯಾಗಿ ಹೋಗುವಂತಾಯಿತು. ಅತ್ತ ರೈತ ಆಂದೋಲನದ ಬಗ್ಗೆ ಟ್ವೀಟ್ ಮಾಡಿದವರ ಖಾತೆಗಳನ್ನೇ ಅಮಾನತು ಮಾಡಲು ಎಕ್ಸ್ ಗೆ ಮೋದಿ ಸರಕಾರ ಒತ್ತಡ ಹಾಕಿದೆ.
ಇದು ಸರಿಯಲ್ಲ, ಇದಕ್ಕೆ ತನ್ನ ಒಪ್ಪಿಗೆಯಿಲ್ಲ, ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇರಬೇಕು, ಆದರೂ ಸರಕಾರದ ಆದೇಶ ಆಗಿರುವುದರಿಂದ ಭಾರತದಲ್ಲಿ ಮಾತ್ರ ಸರಕಾರ ಹೇಳಿರುವ ನಿರ್ದಿಷ್ಟ ಖಾತೆಗಳನ್ನು ಅಮಾನತು ಮಾಡುವುದಾಗಿ ಎಕ್ಸ್ ಹೇಳಿದೆ.
ಇದರಿಂದ ಮೋದಿ ಸರಕಾರ ರೈತ ಆಂದೋಲನದ ಬಗ್ಗೆ ಅದೆಷ್ಟು ತಲೆಕೆಡಿಸಿಕೊಂಡಿದೆ ಎಂಬುದು ಜಗಜ್ಜಾಹೀರಾಗಿದೆ. ಅಷ್ಟೇ ಅಲ್ಲ ಒಳಗೊಳಗೇ ರೈತ ಆಂದೋಲನದ ಧ್ವನಿ ಹತ್ತಿಕ್ಕಲು ನೋಡಿದ ಅದರ ಕ್ರಮ ಅದಕ್ಕೇ ತಿರುಗುಬಾಣವಾಗಿದೆ. ಮೋದಿ ಸರ್ಕಾರ ಈ ರೀತಿ ಎಕ್ಸ್ ಮೇಲೆ ಒತ್ತಡ ಹಾಕಿತ್ತು ಎಂಬ ಸತ್ಯ ಇಡೀ ಜಗತ್ತಿನೆದುರು ತೆರೆದುಕೊಂಡಿದೆ.
ಆದರೆ ಮೋದಿ ಸರ್ಕಾರ ಒಂದು ವಿಚಾರವನ್ನು ನೆನಪಿಡಬೇಕು. ಈ ರೈತರು ಮೋದಿ ಸರ್ಕಾರ ಹೆದರಿಸಿದರೆ ಹೆದರಲು, ಓಡಿಸಿದರೆ ಓಡಲು ಬಂದವರಂತೂ ಅಲ್ಲ. ಮೋದಿ ಸರ್ಕಾರದ ವಿರುದ್ಧ ಅವರದು ಅತ್ಯಂತ ದಿಟ್ಟ ಮುಖಾಮುಖಿ. ಮಾರ್ಚ್ 14ರ ಮಹಾ ಪಂಚಾಯತ್ ಮೋದಿ ಸರ್ಕಾರಕ್ಕೆ ಮಹಾ ಸವಾಲೇ ಆಗಲಿದೆ. ಈ ಹಿಂದಿನ ಆಂದೋಲನದಲ್ಲೂ ಕೊನೆಗೆ ಮಂಡಿಯೂರಿದ್ದು ಮೋದಿ ಸರಕಾರವೇ ಹೊರತು ರೈತರಲ್ಲ.
ಈಗಲೂ ಸೋಲಲು ಬಂದವರು ತಾವಲ್ಲ ಎಂದೇ ರೈತರು ದಿಲ್ಲಿ ಕಡೆ ಹೊರಟಿದ್ದಾರೆ.