ಪಾಟ್ನಾದ ಗಾಂಧಿ ಮೈದಾನದಲ್ಲಿ 'ಸಂಪೂರ್ಣ ಕ್ರಾಂತಿ' ಯನ್ನು ನೆನಪಿಸಿದ ಜನಸ್ತೋಮ
ಮಹಾ ಸಮಾವೇಶದ ನೇರ ಪ್ರಸಾರ ನಿಲ್ಲಿಸಲು ಆದೇಶಿಸಿದ್ದು ಯಾರು ? ► ಲಾಲು, ರಾಹುಲ್, ತೇಜಸ್ವಿ, ಅಖಿಲೇಶ್ ಟೀಮ್ ಗೆ ಬೆಚ್ಚಿತೇ ಬಿಜೆಪಿ ?
Photo: X
ರವಿವಾರ ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಮಹಾ ರ್ಯಾಲಿಯಿಂದ ದಿಲ್ಲಿಯ ಗದ್ದುಗೆ ನಡುಗಿ ಬಿಟ್ಟಿದೆಯೆ ?. ನ್ಯೂಸ್ ಚಾನಲ್ ಗಳು ಕೆಲವೇ ನಿಮಿಷಗಳಲ್ಲಿ ಆ ಮಹಾ ರ್ಯಾಲಿಯ ನೇರ ಪ್ರಸಾರವನ್ನು ಕಟ್ ಮಾಡಿದ್ದು ಯಾಕೆ ?.
ಇಂದಿರಾ ಗಾಂಧಿಯ ವಿರುದ್ಧ ಜಯ ಪ್ರಕಾಶ್ ನಾರಾಯಣ್ ಸಂಪೂರ್ಣ ಕ್ರಾಂತಿಯ ಕರೆ ನೀಡಿದ್ದಾಗ ಇದೇ ಗಾಂಧಿ ಮೈದಾನದಲ್ಲಿ ಸೇರಿದ್ದ ಜನಸ್ತೋಮವನ್ನೇ ದಶಕಗಳ ಬಳಿಕ ನೆನಪಿಸಿದ ರವಿವಾರದ ಆ ದೃಶ್ಯ ದೇಶಕ್ಕೆ ಸಾರಿದ ಸಂದೇಶವೇನು ?. ತೇಜಸ್ವಿ , ಅಖಿಲೇಶ್ ಹಾಗೂ ರಾಹುಲ್ ಗಾಂಧಿ - ಈ ಮೂವರು ನಾಯಕರು ಯುಪಿ, ಬಿಹಾರದ 120 ಸೀಟುಗಳಲ್ಲಿ ಹಾಗೂ ಅಕ್ಕಪಕ್ಕದ ರಾಜ್ಯಗಳಲ್ಲೂ ಬಿಜೆಪಿಗೆ ನೀರು ಕುಡಿಸಲಿದ್ದಾರೆಯೆ ?.
ರವಿವಾರ ಬಾಡಿಗೆ ಬಸ್ಸು, ಲಾರಿ ಗಳು ಇಲ್ಲದೆಯೇ ಗುಂಪು ಗುಂಪಾಗಿ ಬಂದಿರುವ ಜನಸ್ತೋಮ ಬಿಹಾರದಲ್ಲಿ ಏನಾದರೂ ದೊಡ್ಡ ಬದಲಾವಣೆಗೆ ಮನಸ್ಸು ಮಾಡಿದೆಯೇ ?. ಹೊಸ ಹವಾ ಅಂತೂ ಬಿಹಾರದಲ್ಲಿ ಶುರುವಾಗಿದೆ. ಅದು ತೇಜಸ್ವಿ ಯಾದವ್ ಅವರ ಮೂಲಕ.
ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ಮೋಡಿಗೆ ದಿಲ್ಲಿ ನಡುಗಿದೆ. ನಿಜಕ್ಕೂ ದಿಲ್ಲಿ ಗದ್ದುಗೆ ನಡುಗಿ ಹೋಗಿದೆ ಎನ್ನುವುದಕ್ಕೆ, ರ್ಯಾಲಿ ನೇರಪ್ರಸಾರವನ್ನು ಚಾನೆಲ್ಲುಗಳೆಲ್ಲ ಕೆಲವೇ ನಿಮಿಷಗಳಲ್ಲಿ ನಿಲ್ಲಿಸಿಬಿಟ್ಟವು ಎಂಬುದೇ ಸಾಕ್ಷಿ.ಸುದ್ದಿ ವಾಹಿನಿಗಳಿಗೆ ಅಂಥದೊಂದು ಸೂಚನೆ ಬಂದಿರಬೇಕೆಂದರೆ, ಹೇಗೆ ಪ್ರಭುತ್ವ ಕಂಗೆಟ್ಟಿರಬಹುದು ಎಂಬುದನ್ನು ಸುಲಭವಾಗಿ ಊಹಿಸಬಹುದಾಗಿದೆ.
ಕೆಲವು ಚಾನಲ್ ಗಳು ನೇರ ಪ್ರಸಾರವನ್ನು ತೋರಿಸುವ ಧೈರ್ಯ ಮಾಡಿದ್ದರೂ ಶುರುವಾಗಿ ಕೆಲವೇ ನಿಮಿಷಗಳಲ್ಲಿ ಅಲ್ಲಿಗೆ ಕಾಲ್ ಹೋಗಿದೆ. ಲೈವ್ ನಿಂತಿದೆ. ಆ ಕಾಲ್ ಮಾಡಿದ್ದು ಯಾರು ?
ಬಿಜೆಪಿಗೆ ಹೆಚ್ಚಿನ ಸೀಟುಗಳನ್ನು ಕೊಡುವ ಯುಪಿ ಮತ್ತು ಬಿಹಾರದಲ್ಲಿನ ಈ ಸಲದ ಚುನಾವಣೆ ಹೇಗಿರಬಹುದೆಂಬುದು ಈಗ ತೀವ್ರ ಕುತೂಹಲ ಕೆರಳಿಸಿದೆ.ದೇಶಾದ್ಯಂತ ರಕ್ತಪಾತಕ್ಕೆ ಕಾರಣವಾಗಿದ್ದ ಅಡ್ವಾಣಿ ರಥಯಾತ್ರೆ ವೇಳೆ ಇದೇ ಬಿಹಾರದಲ್ಲಿ ಅಡ್ವಾಣಿಯನ್ನು ಬಂಧಿಸುವ ಧೈರ್ಯ ತೋರಿಸಿದ್ದವರು ಆಗಿನ ಬಿಹಾರ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್.
ಈಗಲೂ ಅದೇ ಬಿಹಾರ ಮತ್ತೊಮ್ಮೆ ಬಹು ಮುಖ್ಯ ರಾಜಕೀಯ ಸಾಧ್ಯತೆಯ ಕೇಂದ್ರವಾಗುವಂತೆ ಕಾಣಿಸುತ್ತಿದೆ.ರಾಹುಲ್ ಗಾಂಧಿ ಕೂಡ ಅದನ್ನು ಹೇಳಿದ್ದಾರೆ. ದೇಶದಲ್ಲಿ ಬದಲಾವಣೆಯಾಗುತ್ತಿದೆ. ಬಿಹಾರದಲ್ಲಿ ತೂಫಾನ್ ಶುರುವಾಗಿದೆ. ಅದರ ಪ್ರಭಾವ ಇಲ್ಲಿಂದ ಬೇರೆಡೆಗೂ ಹೋಗಲಿದೆ ಎಂದು ರಾಹುಲ್ ಜನವಿಶ್ವಾಸ ಮಹಾ ರ್ಯಾಲಿಯಲ್ಲಿ ಹೇಳಿದ್ದಾರೆ.
ಮೋದಿ ಎರಡೋ ಮೂರೋ ಜನರಿಗಾಗಿ ಕೆಲಸ ಮಾಡುತ್ತಿದ್ದಾರೆ.ಅವರಿಗಾಗಿ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಆದರೆ ರೈತರಿಗಾಗಿ, ಕಾರ್ಮಿಕರಿಗಾಗಿ ಅವರೇನನ್ನು ಮಾಡಿಲ್ಲ. ದ್ವೇಷವನ್ನು ಮಾತ್ರ ಹರಡಲಾಗುತ್ತಿದೆ ಎಂದಿದ್ದಾರೆ.ಬಿಜೆಪಿಯಿಂದ ಜನಸಾಮಾನ್ಯರಿಗೆ, ರೈತರಿಗೆ, ಸಣ್ಣ ಉದ್ಯಮಿಗಳಿಗೆ ಅನ್ಯಾಯವಾಗಿದೆ ಎಂದು ರಾಹುಲ್ ಟೀಕಿಸಿದ್ದಾರೆ. ಹಿಂದುಳಿದ ವರ್ಗಗಳಿಗೆ ಸೇರಿದ ಶೇ.73ರಷ್ಟು ಜನಸಂಖ್ಯೆಯನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಪಾಟ್ನಾದಲ್ಲಿನ ರ್ಯಾಲಿ ನಿಜಕ್ಕೂ ಜನರಿಗೆ ತಮ್ಮ ತಾಕತ್ತೇನು ಎಂಬುದನ್ನು ಮನವರಿಕೆ ಮಾಡಿಕೊಡುವ ಹಾಗಿತ್ತು ಎಂದರೆ ತಪ್ಪಲ್ಲ.
ಜನರು ತಮ್ಮೊಂದಿಗಿದ್ದರೆ ಅವರಿಗಾಗಿ ಹೋರಾಡುವ ಮಾತನ್ನು ಮತ್ತೊಮ್ಮೆ ತೇಜಸ್ವಿ ಯಾದವ್ ಈ ರ್ಯಾಲಿ ಮೂಲಕ ಹೇಳಿದ್ದಾರೆ.ತಮ್ಮ ಬೆನ್ನಿಗೇ ಚೂರಿ ಇರಿದು ಹೋದ ನಿತೀಶ್ ಕುಮಾರ್ ವಿರುದ್ಧ ಯಾವುದೇ ಸಿಟ್ಟು ತೋರಿಸದೆ ಅಪಾರ ಗೌರವ ಪ್ರಕಟಿಸುತ್ತಲೇ ಜೆಡಿಯು ಈ ಚುನಾವಣೆ ಬಳಿಕ ನಿರ್ನಾಮ ಆಗಲಿದೆ ಎಂದು ತೇಜಸ್ವಿ ಹೇಳಿದ್ದಾರೆ.
ಆರ್ಜೆಡಿ ಎಂದರೆ ಎಂ-ವೈ (ಮುಸ್ಲಿಂ ಮತ್ತು ಯಾದವ್) ಪಕ್ಷ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ನಮ್ಮದು ಎಂ-ವೈ ಮತ್ತು BAAP ಪಕ್ಷವಾಗಿದೆ. B ಎಂದರೆ ಬಹುಜನ, A ಎಂದರೆ ಅಗ್ಡಾ (ಮೇಲ್ಜಾತಿ) ಇನ್ನೊಂದು A ಎಂದರೆ ಆದಿ ಆಬಾದಿ (ಅಂದ್ರೆ ಮಹಿಳೆಯರು ) ಮತ್ತು P ಎಂದರೆ ಬಡವರು ಎಂದು ತೇಜಸ್ವಿ ವಿವರಣೆ ಕೊಟ್ಟಿದ್ದಾರೆ.
17 ತಿಂಗಳುಗಳ ತಮ್ಮ ಸರಕಾರದ ಅವಧಿಯಲ್ಲಿ ನಾಲ್ಕೈದು ಲಕ್ಷ ಜನರಿಗೆ ಸರಕಾರೀ ಉದ್ಯೋಗ ಕೊಟ್ಟಿದ್ದನ್ನು ತೇಜಸ್ವಿ ಮತ್ತೆ ಮತ್ತೆ ಹೇಳಿದ್ದಾರೆ.
ತಮ್ಮ ಆರ್ಜೆಡಿ ಪಕ್ಷದ ಆರ್ ಎಂದರೆ ರೈಟ್ಸ್ ಅಂದ್ರೆ ಹಕ್ಕುಗಳು, ಜೇ ಅಂದ್ರೆ ಜಾಬ್ಸ್ ಅಥವಾ ಉದ್ಯೋಗಗಳು ಮತ್ತು ಡಿ ಅಂದ್ರೆ ಅಭಿವೃದ್ಧಿಗಾಗಿ ನಿಂತಿದೆ ಎಂದು ತೇಜಸ್ವಿ ಯಾದವ್ ಪ್ರತಿಪಾದಿಸಿದ್ದಾರೆ.
ಬಿಜೆಪಿ ಸುಳ್ಳಿನ ಕಾರ್ಖಾನೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. ಬಿಜೆಪಿ ನಾಯಕರು ಸುಳ್ಳು ಭರವಸೆಗಳನ್ನು ನೀಡುತ್ತಾರೆ ಆದರೆ, ಆರ್ಜೆಡಿ ಹಕ್ಕುಗಳು, ಉದ್ಯೋಗಗಳು ಮತ್ತು ಅಭಿವೃದ್ಧಿಗಾಗಿ ಹೋರಾಡುತ್ತಿದೆ ಎಂದಿದ್ದಾರೆ.
ನಿತೀಶ್ ಅವರು ಕಳೆದ 17 ವರ್ಷಗಳಲ್ಲಿ ಬಿಜೆಪಿ ಜೊತೆಗೆ ಏನನ್ನೂ ಮಾಡಲಾಗಲಿಲ್ಲ ಎಂದು ಟೀಕಿಸಿದ ಅವರು, ಕಳೆದ 17 ತಿಂಗಳಲ್ಲಿ ಮಹಾಘಟಬಂಧನ್ ಸರ್ಕಾರ ಮಾಡಿರುವ ಸಾಧನೆಗಳನ್ನು ವಿವರಿಸಿದ್ಧಾರೆ.
ಬಿಜೆಪಿ ನೇತೃತ್ವದ ಎನ್ಡಿಎ ಕುದುರೆ ವ್ಯಾಪಾರದಲ್ಲಿ ತೊಡಗಿದೆ ಎಂದು ಆರೋಪಿಸಿದ ಅವರು, ಆರ್ಜೆಡಿಯ ಐವರು ಶಾಸಕರು ಇತ್ತೀಚೆಗೆ ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ. ಆದರೆ ಮಹಾ ಮೈತ್ರಿಕೂಟಕ್ಕೆ ಯಾವುದೇ ವ್ಯತ್ಯಾಸ ಆಗಲಾರದು. ಚುನಾವಣೆಯಲ್ಲಿ ಜನರು ಅವರ ಭವಿಷ್ಯ ನಿರ್ಧರಿಸುತ್ತಾರೆ ಎಂದಿದ್ಧಾರೆ.
ಲಕ್ಷ ಲಕ್ಷ ನೌಕರಿಯ ಮಾತು ತೇಜಸ್ವಿ ಜೊತೆಗಿರುವ ಬಹುದೊಡ್ಡ ಬಲವಾಗಿದೆ. ಅದು ಮೋದಿಯಿಂದ ಹಿಡಿದು ಎಲ್ಲರನ್ನೂ ಕಾಡಲಿದೆ.
ತೇಜಸ್ವಿ ಯಾದವ್ ಬತ್ತಳಿಕೆಯಲ್ಲಿ ಅದು ಮಹತ್ವದ ಸಾಧ್ಯತೆಯ ಹಾಗಿದೆ. ಬಡವರು, ಕಾರ್ಮಿಕರ ಪರವಾದ ದನಿಯೊಂದು ರಾಹುಲ್ ಮತ್ತು ತೇಜಸ್ವಿ ಯಾದವ್ ಅವರ ಮೂಲಕ ತೀವ್ರ ರೀತಿಯಲ್ಲಿ ವ್ಯಕ್ತವಾಗುತ್ತಿದೆ.
ಇನ್ನು ಅದೇ ಸಮಾವೇಶದಲ್ಲಿ ಮಾತಾಡಿದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು 2024 ರ ಚುನಾವಣೆಯಲ್ಲಿ ಸಂವಿಧಾನ ಮಂಥನ ನಡೆಯಲಿದೆ. ಸಂವಿಧಾನ ಉಳಿಸುವವರು ಹಾಗೂ ಸಂವಿಧಾನವನ್ನು ಮುಗಿಸಿ ನೀಡುವವರ ನಡುವಿನ ಹೋರಾಟವಿದು ಎಂದು ಹೇಳಿದ್ದಾರೆ. ಯುಪಿ ಹಾಗೂ ಬಿಹಾರದಲ್ಲಿ ಒಟ್ಟು 120 ಸ್ಥಾನಗಳಲ್ಲಿ ಬಿಜೆಪಿಯನ್ನು ಸೋಲಿಸುವುದು ನಮ್ಮ ಮೈತ್ರಿಕೂಟದ ಗುರಿ ಎಂದು ಸಾರಿದ್ದಾರೆ ಅಖಿಲೇಶ್.
ಎ ಐ ಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಪಿಎಂ ನಾಯಕ ಯೆಚೂರಿ ಸಹಿತ ಇಂಡಿಯಾ ಮೈತ್ರಿಯ ಪ್ರಮುಖ ನಾಯಕರೆಲ್ಲರೂ ಭಾಗವಹಿಸಿದ್ದರು. ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆ ಮತ್ತು ತೇಜಸ್ವಿ ಯಾದವ್ ಅವರ ಜನ ವಿಶ್ವಾಸ ರ್ಯಾಲಿ ನಿಜಕ್ಕೂ ಬಿಹಾರದಂಥ ರಾಜ್ಯದಲ್ಲಿನ ರಾಜಕಾರಣದಲ್ಲಿ ಮಹತ್ವದ ತಿರುವಿಗೆ ಕಾರಣವಾಗುವ ಸಾಧ್ಯತೆ ನಿಚ್ಚಳವಾಗುತ್ತಿದೆ.
ರಾಹುಲ್ ಅವರೇ ಹೇಳಿದಂತೆ ಅದು ದೇಶಾದ್ಯಂತ ವ್ಯಾಪಿಸುವ ಕಾಲವೂ ದೂರವಿಲ್ಲ.