ದ್ವೇಷ ಕಾರುವ ಆಂಕರ್ ಗಳಿಂದಾಗಿ ಜಾಗತಿಕ ಗಣ್ಯಾತಿಗಣ್ಯರೆದುರು ಭಾರೀ ಅವಮಾನ
ಅಮೀಶ್ , ಅಮನ್ ರ ಕಾರ್ಯಕ್ರಮವನ್ನು ತಮ್ಮ ಅತಿಥಿಗಳಿಗೆ ತೋರಿಸಬಲ್ಲರೇ ಅಂಬಾನಿ ? ► ಮಡಿಲ ಆಂಕರ್ ಗಳಿಗೆ ಛೀಮಾರಿ, ದಂಡ : ಏನಾದರೂ ಪ್ರಯೋಜನ ಆದೀತೇ ?
(Photo credit: thewire.in)
ಮಡಿಲ ಮೀಡಿಯಾದ ನಾಲ್ವರು ಆಂಕರ್ ಗಳು ಛೀಮಾರಿಗೆ ಒಳಗಾಗಿದ್ದಾರೆ. ಮೂವರ ಮೇಲೆ ದಂಡ ಬಿದ್ದಿದೆ. ಒಬ್ಬರಿಗೆ ಎಚ್ಚರಿಕೆ ಕೊಡಲಾಗಿದೆ.
ಲವ್ ಜಿಹಾದ್ ಹಾಗು ಮುಸ್ಲಿಂ ಷಡ್ಯಂತ್ರದ ಕಪೋಲ ಕಲ್ಪಿತ ಸುದ್ದಿ ಮಾಡಿ ಇವರು ನಾಲ್ವರು ಈಗ ಛೀಮಾರಿ ಹಾಕಿಸಿಕೊಂಡಿದ್ದಾರೆ.
ರಾಜಸ್ತಾನದ ಕೋಟಾದಲ್ಲೂ ಇವರ ಲವ್ ಜಿಹಾದ್ ಸುಳ್ಳು ಆರೋಪದ ಬಣ್ಣ ಬಯಲಾಗಿದೆ. ಅಲ್ಲಿನ ವಿದ್ಯಾರ್ಥಿಗಳು ನಮ್ಮ ಪಾಲಿನ ಭರವಸೆಯ ಬೆಳಕಾಗಿದ್ದಾರೆ.
ಲವ್ ಜಿಹಾದ್ ಮತ್ತು ಮುಸ್ಲಿಂ ಪಿತೂರಿಯ ಕಟ್ಟುಕಥೆಗಳನ್ನು ಹಬ್ಬಿಸಿದ್ದ ಗೋದಿ ಮೀಡಿಯಾದ ನಾಲ್ವರು ಆ್ಯಂಕರ್ಗಳ ವಿರುದ್ದ ತೆಗೆದುಕೊಳ್ಳಲಾದ ಕ್ರಮ ಅವರಿಗೆ ಪಾಠವಾದೀತೆಂದು ಹೇಳಲು ಸಾಧ್ಯವಿಲ್ಲ. ಈ ಹಿಂದೆಯೂ ಅವರು ದಂಡವನ್ನು ಕಟ್ಟಿದವರೇ. ಈ ಹಿಂದೆಯೂ ಅವರು ಛೀಮಾರಿ ಹಾಕಿಸಿ ಕೊಂಡವರೇ.
ಆದರೆ ಅವರು ಒಂದಿಷ್ಟೂ ಬದಲಾಗಲಿಲ್ಲ. ಈ ನಾಲ್ವರು ಆಂಕರ್ಗಳ ಕಾರ್ಯಕ್ರಮಗಳು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಯಾವುದೇ ಆಳವಾದ ತನಿಖೆಯಿಲ್ಲದೆ, ಸೂಕ್ತ ಸಾಕ್ಷ್ಯ ಗಳಿಲ್ಲದೆ ಕೇವಲ ದ್ವೇಷವನ್ನು ಹರಡುವುದರಲ್ಲಿ ತೊಡಗಿವೆ ಎಂಬುದು ಬಯಲಾಗಿದೆ.
ದಿ ನ್ಯೂಸ್ ಬ್ರಾಡ್ ಕಾಸ್ಟಿಂಗ್ ಮತ್ತು ಡಿಜಿಟಲ್ ಸ್ಟ್ಯಾಂಡರ್ಡ್ಸ್ ಅಥಾರಿಟಿ ಅಂದ್ರೆ
ಎನ್ಬಿಡಿಎಸ್ಎ ಎಂಬ ಸುದ್ದಿ ವಾಹಿನಿಗಳ ಸಂಸ್ಥೆ ಮೂರು ಚಾನೆಲ್ಗಳ ನಾಲ್ವರು ಆ್ಯಂಕರ್ಗಳನ್ನು ತಪ್ಪಿತಸ್ಥರೆಂದು ಘೋಷಿಸಿದೆ. ಈ ಸಂಸ್ಥೆಗೆ ಈಗ ಮಾಜಿ ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿ ಎ ಕೆ ಸಿಕ್ರಿ ಮುಖ್ಯಸ್ಥರು.
ಅವರ ವಿರುದ್ಧ ಕ್ರಮವಾಗಿ ಒಬ್ಬರಿಗೆ ಎಚ್ಚರಿಕೆ ನೀಡಲಾಗಿದ್ದು, ಮೂವರ ಚಾನಲ್ ಗಳಿಗೆ ದಂಡ ವಿಧಿಸಲಾಗಿದೆ. ಅವರ ಆ ಕಾರ್ಯಕ್ರಮಗಳನ್ನು ಇಂಟರ್ನೆಟ್ನಿಂದ ಎಲ್ಲ ವೇದಿಕೆಗಳಿಂದ ತೆಗೆದುಹಾಕಲಾಗುತ್ತದೆ.
ಟೈಮ್ಸ್ ನೌ ನವಭಾರತ ಚಾನಲ್ ಗೆ ಒಂದು ಲಕ್ಷ , ನ್ಯೂಸ್ 18 ಇಂಡಿಯಾಗೆ 50 ಸಾವಿರ ದಂಡ ಹಾಕಲಾಗಿದ್ದು ಆಜ್ ತಕ್ ಗೆ ಎಚ್ಚರಿಕೆ ನೀಡಲಾಗಿದೆ.
ಟೈಮ್ಸ್ ನೌ ನವಭಾರತ ಚಾನಲ್ ನ ಹಿಮಾಂಶು ದೀಕ್ಷಿತ್, ನ್ಯೂಸ್ 18 ಇಂಡಿಯಾದ ಅಮನ್ ಚೋಪ್ರ ಹಾಗೂ ಅಮಿಶ್ ದೇವಗನ್ , ಆಜ್ ತಕ್ ನ ಸುಧೀರ್ ಚೌಧರಿ ಈ ದ್ವೇಷದ ವಿಷ ಕಾರುವ ಕಾರ್ಯಕ್ರಮಗಳನ್ನು ಮಾಡಿ ತಮ್ಮ ಚಾನಲ್ ಗಳಿಗೆ ದಂಡ ಹಾಗೂ ಎಚ್ಚರಿಕೆ ಬೀಳುವಂತೆ ಮಾಡಿದವರು.
ಸಾಮಾಜಿಕ ಕಾರ್ಯಕರ್ತ ಇಂದ್ರಜಿತ್ ಘೋರ್ಪಡೆ ಅವರು ನೀಡಿದ್ದ ದೂರಿನ ಆಧಾರದಲ್ಲಿ ವಿಚಾರಣೆ ನಡೆಸಿ ಈ ಕ್ರಮ ಕೈಗೊಳ್ಳಲಾಗಿದೆ.
ಆದರೆ ಇಂತಹ ಎಚ್ಚರಿಕೆಗಳು ಅಥವಾ ದಂಡಗಳು ಗೋದಿ ಮೀಡಿಯಾದ ಮುಸ್ಲಿಂ ವಿರೋಧಿ ಪ್ರಚಾರದ ಮೇಲೆ ಕಡಿವಾಣ ಹಾಕುತ್ತವೆ ಎಂದು ಮಾತ್ರ ಹೇಳಲಾಗದು.
ಈ ಯಾವ ಕ್ರಮಗಳೂ ಮುಸ್ಲಿಂರ ವಿರುದ್ಧ ದ್ವೇಷ ಹರಡುವವರಿಗೆ ಅಡ್ಡಿಯಾಗುವುದೆ ಇಲ್ಲ ಎಂಬುದೇ ವಿಪರ್ಯಾಸ ಮತ್ತು ನೋವಿನ ಸಂಗತಿ.
ಇಲ್ಲಿ ಯಾವುದೇ ವ್ಯತ್ಯಾಸವೂ ಆಗುವುದಿಲ್ಲ.
ಇದೇ ವಾಹಿನಿಗಳು ಲವ್ ಜಿಹಾದ್ ಎಂಬ ಬೋಗಸ್ ವಿಚಾರವನ್ನು ಸತ್ಯಾಸತ್ಯತೆಯನ್ನು ಪರಿಶೀಲಿಸುವ ವ್ಯವಧಾನವನ್ನೂ ತೋರಿಸದೆ ಪ್ರಸಾರ ಮಾಡಬಲ್ಲವು ಎಂಬುದಕ್ಕೆ ಕೋಟಾ ಘಟನೆಯ ವರದಿಗಳೇ ಸಾಕ್ಷಿ.
ಇದೆಲ್ಲವೂ ಪ್ರಮಾದವಶಾತ್ ಆಗುವುದೇನಲ್ಲ. ಇವರುಗಳು ಉದ್ಧೇಶಪೂರ್ವಕವಾಗಿಯೇ ಇವನ್ನು ಮಾಡುತ್ತಿರುತ್ತಾರೆ.
ಮತ್ತೆ ಮತ್ತೆ ಅದನ್ನೇ ಮಾಡುತ್ತಾರೆ.
ಈ ಚಾನೆಲ್ಗಳು, ಆಂಕರ್ಗಳು ಹೀಗೆ ವಾತಾವರಣವನ್ನು ಪೂರ್ತಿ ಹದಗೆಡಿಸುತ್ತಾರೆ. ಬಾಯಿಗೆ ಬಂದ ಹಾಗೆ ಹಸಿ ಹಸಿ ಸುಳ್ಳನ್ನೇ ಹರಡುತ್ತಾರೆ.
ರಾಜಸ್ಥಾನದ ಕೋಟಾದಲ್ಲಿನ ಶಾಲೆಯೊಂದರಲ್ಲಿ ಆಗಿರುವುದು ಕೂಡ ಇದೇ. ಧಾರ್ಮಿಕ ಮತಾಂತರ ಮತ್ತು ಲವ್ ಜಿಹಾದ್ ಆರೋಪದ ಮೇಲೆ, ಅಲ್ಲದೆ ನಿಷೇಧಿತ ಸಂಘಟನೆಗಳ ಜೊತೆ ಸಂಪರ್ಕವಿತ್ತು ಎಂದು ಆರೋಪಿಸಿರುವುದು ಅಲ್ಲಿನ ಮೂವರು ಮುಸ್ಲಿಂ ಶಿಕ್ಷಕರ ಕೆಲಸಕ್ಕೇ ಸಂಚಕಾರ ತಂದಿದೆ.
ಹಾಗೆ ಅನ್ಯಾಯವಾಗಿ ಅಮಾನತಿಗೊಳಗಾಗಿರುವ ಆ ಮೂರೂ ಮುಸ್ಲಿಂ ಶಿಕ್ಷಕರ ಪರವಾಗಿ ಆ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನಿಂತಿರುವುದು ಮಹತ್ವದ ಬೆಳವಣಿಗೆ.ಈಗ ಛೀಮಾರಿ ಹಾಕಿಸಿಕೊಂಡಿರುವ ಆಂಕರ್ಗಳಿಗೆ ಪ್ರತಿಭಟಸುತ್ತಿರುವ ಮಕ್ಕಳಿಗೆ ಇರುವಷ್ಟಾದರೂ ತಿಳುವಳಿಕೆ ಇದ್ದಿದ್ದರೆ ಹೀಗಾಗುತ್ತಿರಲಿಲ್ಲವೇನೊ?
ಕೋಟಾದ ಸಂಗೋಡ್ನಲ್ಲಿರುವ ಆ ಶಾಲೆಯಲ್ಲಿ ಶಿಕ್ಷಕರ ವಿರುದ್ಧ ಕ್ರಮ ಕೈಗೊಂಡಿರುವುದನ್ನು ಮರುಪರಿಶೀಲಿಸಬೇಕಾದ ಅಗತ್ಯವಿದೆ. ಶಿಕ್ಷಣ ಸಚಿವರು ಈ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ.
ವಿನಾಕಾರಣ ಆರೋಪಕ್ಕೆ ತುತ್ತಾಗಿರುವವರನ್ನು ತನಿಖೆ ಮುಗಿಯುವ ದೀರ್ಘ ಸಮಯದವರೆಗೂ ಇಂಥದೊಂದು ಸುಳಿಯಲ್ಲಿ ಅವರು ಸಿಲುಕಿಕೊಂಡಿರುವಂತೆ ಮಾಡುವುದು ಖಂಡಿತ ಸರಿಯಲ್ಲ.
ಆ ಶಾಲೆಯಲ್ಲಿ ಹಿಂದು ಶಿಕ್ಷಕರೇ ಹೆಚ್ಚಿದ್ದಾರೆ. ಹಾಗಿರುವಾಗ ಮಾತಾಂತರ, ಲವ್ ಜಿಹಾದ್ ನಡೆಯುವುದಾದರೂ ಹೇಗೆ ಸಾಧ್ಯ? ವಾಸ್ತವ ಹೀಗಿರುವಾಗಲೂ ಮುಸ್ಲಿಂ ಶಿಕ್ಷಕರ ವಿರುದ್ಧ ಅಂಥದೊಂದು ಗಂಭೀರ ಹಾಗೂ ನಿರಾಧಾರ ಆರೋಪ ಹೊರಿಸಲಾಗಿದೆ. ಹಾಗೆ ಯಾವ ಪರಿಶೀಲನೆಯನ್ನು ಮಾಡದೆ ಆರೋಪಿಸಲಾಗಿದೆ ಎಂದರೆ ಅದೆಂಥ ದ್ವೇಷ ಇದ್ದಿರಬಹುದು?
ಮುಸ್ಲಿಂರ ವಿರುದ್ಧ ಬುಲ್ಡೋಜರ್ ರಾಜಕೀಯವೊಂದು ಇಂದು ವ್ಯಾಪಕವಾಗಿ ನಡೆಯುತ್ತಿದೆ. ಹಾಗಿರುವಾಗ ಆ ಶಾಲೆಯಲ್ಲಿ ಅಮಾನತುಗೊಂಡ ಮುಸ್ಲಿಂ ಶಿಕ್ಷಕರ ಬೆಂಬಲಕ್ಕೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನಿಂತಿರುವುದು ಸಣ್ಣ ವಿದ್ಯಮಾನವಲ್ಲ.
ವಾಟ್ಸ್ಯಾಪ್ ಯೂನಿವರ್ಸಿಟಿಯವರು ಇದನ್ನು ಗಮನಿಸಬೇಕಿದೆ. ಮುಸ್ಲಿಮರ ವಿರುದ್ಧ ಮಡಿಲ ಮಿಡಿಯಾಗಳ ಕಟ್ಟುಕಥೆಗಳಿಗೆ ಒಂದು ನಿಯಂತ್ರಣವೇ ಇಲ್ಲವಾಗಿಬಿಟ್ಟಿದೆ. ಶಾಲೆಯ ಮೂವರು ಶಿಕ್ಷಕರು ನಿಷೇಧಿತ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ, ಪಾಕಿಸ್ತಾನದ ಸಂಘಟನೆಗಳೊಂದಿಗೆ ನಂಟು ಹೊಂದಿದ್ದಾರೆ ಎಂದು ಸರ್ವ ಹಿಂದೂ ಸಮಾಜ ಎಂಬ ಸಂಘಟನೆ ಶಿಕ್ಷಕರ ವಿರುದ್ಧ ಆರೋಪ ಮಾಡಿತ್ತು.
ಈ ಬಗ್ಗೆ ಈ ಹಿಂದೆ ಸಂಗೋಡು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಶಾಲಾ ದಾಖಲೆಯಲ್ಲಿ ಮುಸ್ಲಿಂ ಎಂದು ಹೆಸರಿಸಲಾದ ಒಬ್ಬ ಹಿಂದೂ ಹುಡುಗಿಯನ್ನು ಮುಸ್ಲಿಂ ಯುವಕರು ಅಪಹರಿಸಿದ್ದಾರೆ ಮತ್ತು ಇನ್ನೂ ಪತ್ತೆಯಾಗಿಲ್ಲ ಎಂದು ಆರೋಪಿಸಲಾಗಿತ್ತು.
ಆದರೆ, ಲವ್ ಜಿಹಾದ್ ಹಾಗೂ ಧಾರ್ಮಿಕ ಮತಾಂತರದ ಆರೋಪ ಹೊತ್ತಿರುವ ಕೋಟಾ ಶಿಕ್ಷಕರ ಬೆಂಬಲಕ್ಕೆ ಅದೇ ಶಾಲೆಯ ಹಿಂದೂ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನಿಂತಿದ್ದಾರೆ. ಮುಂದೊಂದು ದಿನ ಈ ದ್ವೇಷದಿಂದ ಎಲ್ಲರಿಗೂ ಮುಕ್ತಿ ಸಿಗುತ್ತದೆ ಎಂಬ ಭರವಸೆಗೆ ಆ ವಿದ್ಯಾರ್ಥಿಗಳ ಪ್ರತಿಭಟನೆ ಕಾರಣವಾಗಿದೆ. ಒಂದು ಭರವಸೆಯ ಬೆಳಕು ವಿದ್ಯಾರ್ಥಿಗಳ ಈ ಪ್ರತಿಭಟನೆಯಿಂದ ಸಿಕ್ಕಿದೆ.
ಈ ದ್ವೇಷ ಕಾರುವ ಆಂಕರ್ ಗಳಿಂದಾಗಿ ಈಗ ದಂಡ ಹಾಗೂ ಛೀಮಾರಿ ಹಾಕಿಸಿ ಕೊಂಡ ಚಾನಲ್ ಗಳನ್ನೇ ನೋಡಿ. ಒಂದು ಬೃಹತ್ ಟೈಮ್ಸ್ ಗ್ರೂಪ್ ಗೆ ಸೇರಿದ್ದು, ಇನ್ನೊಂದು ದೇಶದ ಮಾತ್ರವಲ್ಲ ಏಷ್ಯಾದ ಅತಿದೊಡ್ಡ ಶ್ರೀಮಂತ ಮುಖೇಶ್ ಅಂಬಾನಿ ಅವರಿಗೆ ಸೇರಿದ್ದು , ಇನ್ನೊಂದು ಇಂಡಿಯಾ ಟುಡೇ ಗ್ರೂಪ್ ಗೆ ಸೇರಿದ್ದು.
ತನ್ನ ಮಗನ ಮದುವೆಗಿಂತ ಮುಂಚಿನ ಕಾರ್ಯಕ್ರಮಕ್ಕೆ ಇಡೀ ಜಗತ್ತಿನ ಗಣ್ಯಾತಿಗಣ್ಯರು ಬರುವಂತೆ ಮಾಡಬಲ್ಲ ಮುಖೇಶ್ ಅಂಬಾನಿಗೆ ತನ್ನ ಚಾನಲ್ ನಲ್ಲಿ ಮುಸ್ಲಿಂ ದ್ವೇಷ ಹರಡಿ ಟಿ ಆರ್ ಪೀ ಬಾಚಿಕೊಳ್ಳುವ ಅನಿವಾರ್ಯತೆ ಇದೆಯೇ ? ಅಂತಹ ಟಿ ಆರ್ ಪೀ ಯಿಂದ ಬರುವ ಜಾಹೀರಾತಿನ ಆದಾಯದಿಂದ ಚಾನಲ್ ನಡೆಸುವಷ್ಟು ಅನಿವಾರ್ಯತೆ ಇದೆಯೇ ?
ಜಗತ್ತಿನ ಗಣ್ಯಾತಿಗಣ್ಯರು ಅವರ ಕಾರ್ಯಕ್ರಮಕ್ಕೆ ಬಂದಾಗ ಅವರಿಗೆ ತಮ್ಮ ಈ ಚಾನಲ್ ನಲ್ಲಿ ಬರುವ ಅಮನ್ ಚೋಪ್ರ ಹಾಗೂ ಅಮಿಶ್ ದೇವಗನ್ ಅವರ ಕಾರ್ಯಕ್ರಮ ತೋರಿಸಲು ಮುಖೇಶ್ ಅಂಬಾನಿ ಗೆ ಸಾಧ್ಯ ಇದೆಯೇ ? ಅಮನ್ ಚೋಪ್ರ ಎಂಬಾತ ಅದೆಷ್ಟು ಛೀಮಾರಿ ಹಾಕಿಸಿ ಕೊಂಡಿದ್ದಾನೆ ಎಂದು ಲೆಕ್ಕ ಇಡೋದೇ ಕಷ್ಟ. ಆತನ ಕಾರ್ಯಕ್ರಮ ದಲ್ಲಿ ಹಸಿ ಹಸಿ ಸುಳ್ಳು ಹೇಳಿದ್ದಕ್ಕೆ ಸ್ಟುಡಿಯೋಗೆ ಪೊಲೀಸರು ಬಂದು ಆತ ತಲೆಮರೆಸಿಕೊಂಡು ಓಡಾಡುವ ಪರಿಸ್ಥಿತಿ ಕೂಡ ಬಂದಿತ್ತು.
ಅಂತಹವರು ನನ್ನ ಚಾನಲ್ ನ ಸ್ಟಾರ್ ಆಂಕರ್ ಗಳು ಎಂದು ಅವರನ್ನು ತೋರಿಸಲು ಮುಖೇಶ್ ಅಂಬಾನಿ ಗೆ ಸಾಧ್ಯ ಇದೆಯೇ ? ಅಮನ್ ಚೋಪ್ರ ಹಾಗೂ ಅಮಿಶ್ ದೇವಗನ್ ರನ್ನು ತನ್ನ ಪಕ್ಕದಲ್ಲಿ ನಿಲ್ಲಿಸಿಕೊಂಡು ಜಾಗತಿಕ ಗಣ್ಯರಿಗೆ ಪರಿಚಯಿಸಲು ಸಾಧ್ಯವೇ ಮುಖೇಶ್ ಅಂಬಾನಿ ಗೆ ?
ಹಾಗಾದರೆ ಅವರೇಕೆ ತಮ್ಮ ಚಾನಲ್ ನಲ್ಲಿ ಇಂತಹ ಕೂಗು ಮಾರಿ ದ್ವೇಷ ಕಾರುವ ಆಂಕರ್ ಗಳನ್ನೂ ಸಾಕುತ್ತಿದ್ದಾರೆ ? ಮದುವೆಯ ಮೊದಲಿನ ಕಾರ್ಯಕ್ರಮಕ್ಕೆ ನೂರಾರು ಕೋಟಿ ಖರ್ಚು ಮಾಡುವ ಅಂಬಾನಿಗೆ ಈ ರೀತಿ ಚಾನಲ್ ನಡೆಸುವ , ಇಂತಹ ಆಂಕರ್ ಗಳನ್ನ ಇಟ್ಟುಕೊಳ್ಳುವ
ಅನಿವಾರ್ಯತೆ ಏನಿದೆ ? ಈ ಅನಿವಾರ್ಯತೆಯನ್ನು ಅಂಬಾನಿ ಯಂತಹ ದೊಡ್ಡ ವ್ಯಕ್ತಿಗೆ ಸೃಷ್ಟಿಸಿದವರು ಯಾರು ?