ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದ ಹಿರಿಯ ನಾಯಕ
► ಹರಿಪ್ರಸಾದ್ ಮಾತುಗಳ ಮುಜುಗರವನ್ನು ಹೇಗೆ ಎದುರಿಸಲಿದೆ ಕಾಂಗ್ರೆಸ್ ?
CM ಸಿದ್ದರಾಮಯ್ಯ
ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ಸಿಗದಿರುವುದರ ಕುರಿತು ಕಾಂಗ್ರೆಸ್ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಅವರಿಗೆ ಇರುವ ಅಸಮಾಧಾನ ಕಾಂಗ್ರೆಸ್ನಲ್ಲಿ ಬಿಕ್ಕಟ್ಟಿಗೆ ಕಾರಣವಾಗಲಿದೆಯೆ?. ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಈಡಿಗ, ಬಿಲ್ಲವ, ನಾಮಧಾರಿ, ದೀವರು ಮತ್ತು ಅತಿ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ ಆಯೋಜಿಸಿದ್ದು ತಮ್ಮ ಶಕ್ತಿಪ್ರದರ್ಶನಕ್ಕಾಗಿಯೆ?.
ತಮ್ಮನ್ನು ಕಡೆಗಣಿಸಿದರೆ ಸುಮ್ಮನಿರುವುದಿಲ್ಲ ಎಂಬ ಸಂದೇಶವನ್ನು ಹೈಕಮಾಂಡ್ಗೆ ಮುಟ್ಟಿಸುವುದು ಅವರ ಉದ್ದೇಶವಾಗಿದೆಯೆ?. ಇದೆಲ್ಲಕ್ಕಿಂತ ಹೆಚ್ಚಾಗಿ ಗಮನ ಸೆಳೆಯುತ್ತಿರುವ ಸಂಗತಿಯೆಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸಿಟ್ಟನ್ನು ಅವರು ನೇರವಾಗಿಯೇ ಹೊರಹಾಕಿರುವುದು.
ತನ್ನನ್ನು ಮಂತ್ರಿ ಮಾಡದಿದ್ದಕ್ಕೆ ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳುತ್ತೇನೆ ಎಂದು ಅವರು ವ್ಯಂಗ್ಯವಾಗಿ ಹೇಳುವ ಮೂಲಕವೂ ತಮ್ಮ ಅಸಮಾಧಾನ, ಬೇಸರ, ಸಿಟ್ಟನ್ನು ಹೊರಹಾಕಿದ್ದಾರೆ.
ಹಿಂದಿನ ಯಾವ ಮುಖ್ಯಮಂತ್ರಿಗಳೂ ಜಾತಿ ರಾಜಕಾರಣ ಮಾಡಲಿಲ್ಲ. ಪಂಚೆ ಹಾಕಿಕೊಂಡು ವಾಚ್ ಕಟ್ಟಿಕೊಂಡು ಖಾಕಿ ಚಡ್ಡಿ ಹಾಕೊಂಡು, ಸಮಾಜವಾದಿ ಅಂತಾ ಹೇಳಿದರೆ ಆಗುವುದಿಲ್ಲ. ದೇವರಾಜ ಅರಸು ಕಾರಿನಲ್ಲಿ ಕುಳಿತರೆ ದೇವರಾಜ ಅರಸು ಆಗಲ್ಲ. ದೇವರಾಜ ಅರಸು ಚಿಂತನೆ ಇರಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ ಬಿ ಕೆ ಹರಿಪ್ರಸಾದ್ .
ಅಧಿಕಾರಕ್ಕೆ ಬರಲು ಏನೇನೋ ಭರವಸೆ ನೀಡಿದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಅತೀ ಹಿಂದುಳಿದ ವರ್ಗಗಳ ನೆನಪೇ ಆಗಿಲ್ಲ. ಅಧಿಕಾರ ಸಿಕ್ಕ ತಕ್ಷಣವೇ ಸಮುದಾಯಕ್ಕೆ ಕೊಡಬೇಕಾಗಿರುವುದು ಇನ್ನೂ ಸಿಕ್ಕಿಲ್ಲ ಎಂದು ಅವರು ಅಸಹನೆ ಹೊರಹಾಕಿದ್ದಾರೆ. ಇದರಿಂದ, ಚುನಾವಣೆ ಎದುರಿಗಿರುವ ಹೊತ್ತಲ್ಲಿ ಇರಿಸುಮುರಿಸಿನ ಸ್ಥಿತಿಯನ್ನು ಕಾಂಗ್ರೆಸ್ ಎದುರಿಸುವಂತಾಗಿದೆ.
ಅರ್ಹತೆ ಇದ್ದರೂ ಪರಮೇಶ್ವರ್ ಅವರಿಗೆ ಸಿಎಂ ಸ್ಥಾನ ಸಿಗಲಿಲ್ಲ. ಆದರೆ ಅವರನ್ನು ಡಿಸಿಎಂ ಸ್ಥಾನಕ್ಕೂ ತೆಗೆದುಕೊಳ್ಳಲಿಲ್ಲ ಎಂದು ಹೇಳುವ ಮೂಲಕ ದಲಿತರನ್ನು ಕಡೆಗಣಿಸಲಾಗಿದೆ, ಕಾಂಗ್ರೆಸ್ನಲ್ಲಿ ಸಾಮಾಜಿಕ ನ್ಯಾಯ ಇಲ್ಲ ಎಂಬಂತೆ ಬಿಂಬಿಸುವ ಯತ್ನವನ್ನೂ ಹರಿಪ್ರಸಾದ್ ಮಾಡಿದ್ದಾರೆ.
ಆದರೆ, ಪಕ್ಷದ ವಿರುದ್ಧವೇ, ಪಕ್ಷದ ನಾಯಕರ ವಿರುದ್ಧವೇ ಹೀಗೆಲ್ಲ ಟೀಕೆ ಮಾಡುವ ಹರಿಪ್ರಸಾದ್ ಪಕ್ಷಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂಬ ಪ್ರಶ್ನೆಯನ್ನೂ ಕೇಳಲಾಗುತ್ತಿದೆ. ಹರಿಪ್ರಸಾದ್ ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದೂ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದೂ ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ ವೈ ನಂಜೇಗೌಡ ಒತ್ತಾಯಿಸಿದ್ದಾರೆ.
ಪಕ್ಷದಲ್ಲಿ ಎಲ್ಲಾ ರೀತಿಯ ಅವಕಾಶ ಪಡೆದವರು ಹರಿಪ್ರಸಾದ್. ಎಐಸಿಸಿವರೆಗೂ ಅವರಿಗೆ ಸ್ಥಾನಮಾನಗಳು ಸಿಕ್ಕಿವೆ. ಈಗ ಮಂತ್ರಿ ಮಾಡಿಲ್ಲವೆಂದು, ಹಿಂದೆ ಕೊಟ್ಟಿದ್ದ ಅವಕಾಶಗಳು ಮತ್ತು ಸ್ಥಾನಮಾನಗಳನ್ನು ಮರೆತು ಮಾತನಾಡುವುದು ಖಂಡನೀಯ ಎಂದು ನಂಜೇಗೌಡ ಹೇಳಿದ್ದಾರೆ.
ಪಕ್ಷದಲ್ಲಿ ಇಷ್ಟೆಲ್ಲ ಅವಕಾಶ ಪಡೆದಿದ್ದರೂ ಕಾಂಗ್ರೆಸ್ಗೆ ಹರಿಪ್ರಸಾದ್ ಕೊಡುಗೆ ಏನು? ಎಂದು ನಂಜೇಗೌಡ ಪ್ರಶ್ನಿಸಿದ್ದಾರೆ. ಲೋಕಸಭಾ ಚುನಾವಣೆ ಸಮೀಪದಲ್ಲಿರುವಾಗ ಪಕ್ಷದ ಹಿರಿಯ ನಾಯಕರೊಬ್ಬರು ಈ ರೀತಿ ಮಾತನಾಡುವುದು ಸರಿ ಅಲ್ಲ. ಕಾಂಗ್ರೆಸ್ಗೆ ಡ್ಯಾಮೇಜ್ ಆಗುವ ರೀತಿ ಹೇಳಿಕೆ ನೀಡಿರುವ ಅವರ ವಿರುದ್ಧ ಕೆಪಿಸಿಸಿ ಮತ್ತು ಎಐಸಿಸಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಬಿಕೆ ಹರಿಪ್ರಸಾದ್ ತಮ್ಮ ಮುನಿಸು ಹೊರಹಾಕಿರುವುದು ಇದೇ ಮೊದಲೇನೂ ಅಲ್ಲ. ಹಿಂದೆಯೂ ಹಲವು ವೇದಿಕೆಗಳಲ್ಲಿ ಪರೋಕ್ಷವಾಗಿಯೇ ಅವರು ತಮ್ಮ ಅಸಮಾಧಾನ ತೋರಿಸಿದ್ದಿದೆ.
ನನಗೆ ಸಿಎಂ ಮಾಡುವುದೂ ಗೊತ್ತಿದೆ, ಕೆಳಕ್ಕಿಳಿಸುವುದೂ ಗೊತ್ತಿದೆ ಎಂದು ಕೆಲ ದಿನಗಳ ಹಿಂದೆ ಅವರು ಹೇಳಿದ್ದರು. ತಮ್ಮ ಸಮುದಾಯವನ್ನು ಬಹಳ ವ್ಯವಸ್ಥಿತವಾಗಿ ತುಳಿಯಲಾಗುತ್ತಿದೆ. ಅವಕಾಶ ವಂಚಿತರಾಗುತ್ತಿರುವುದನ್ನು ನೋಡಿದರೆ ಯಾರದೋ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದೇವೆ ಎನಿಸುತ್ತಿದೆ ಎಂದು ಹೇಳಿದ್ದು ವರದಿಯಾಗಿತ್ತು.
ಬೆಂಗಳೂರು ಸಮಾವೇಶಕ್ಕೂ ಮೊದಲು ಚಿಕ್ಕಮಗಳೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ವಿಧಾನಸಭೆ ಅಥವಾ ಲೋಕಸಭೆಯಲ್ಲಿ ಯಾರನ್ನು ಬೇಕಾದರೂ ಸೋಲಿಸುವ ಶಕ್ತಿ ಸಣ್ಣ ಸಮುದಾಯಗಳಿಗೆ ಇದೆ. ಈ ತೀರ್ಮಾನವನ್ನು ಸಣ್ಣ ಸಮುದಾಯಗಳು ತೆಗೆದುಕೊಳ್ಳಬೇಕು. ಲೋಕಸಭಾ ಚುನಾವಣೆ ಒಳಗಾಗಿ ಶಕ್ತಿ ಪ್ರದರ್ಶನ ಮಾಡಬೇಕು. ಇಲ್ಲವಾದರೆ ಯಾರೂ ಮಾತನಾಡಿಸುವುದಿಲ್ಲ ಎಂದಿದ್ದರು.
ಈ ಮಧ್ಯೆ, ಹರಿಪ್ರಸಾದ್ ಮಾತಿಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ಕೊಡಲು ನಿರಾಕರಿಸಿದ್ದಾರೆ. ಹರಿಪ್ರಸಾದ್ ತಮ್ಮ ಹೆಸರು ಹೇಳಿಲ್ಲ. ಹಾಗಾಗಿ ಪ್ರತಿಕ್ರಿಯೆ ಕೊಡುವುದಿಲ್ಲ ಎಂದಿದ್ದಾರೆ. ಆದರೆ, ಕೇಳಿಬರುತ್ತಿರುವ ಮಾತೊಂದರ ಪ್ರಕಾರ, ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ಕೊಡುವ ಸಾಧ್ಯತೆಗಳಿವೆ. ಲೋಕಸಭೆ ಚುನಾವಣೆಗೆ ಮುಂಚೆಯೇ ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದೆಯೆಂದು ಹೇಳಲಾಗುತ್ತಿದೆ. ಆದರೆ ಸಂಪುಟದಲ್ಲಿ ಜಾಗ ಖಾಲಿ ಇಲ್ಲ. ಹಾಗಾಗಿ ಹರಿಪ್ರಸಾದ್ ರಿಗೆ ಹೇಗೆ ಸ್ಥಾನ ನೀಡಲಾಗುವುದು ಎಂದು ಕಾದು ನೋಡಬೇಕು.
ಕಾಂಗ್ರೆಸ್ಗೆ ಬೆಂಬಲವಾಗಿ ನಿಂತ ಹಿಂದುಳಿದ ವರ್ಗಗಳು ಸುಮಾರು ಶೇ.35ರಷ್ಟು ಮತದಾರರನ್ನು ಹೊಂದಿದ್ದರೂ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ಇಲ್ಲವೆಂಬ ಆರೋಪದ ಹಿನ್ನೆಲೆಯಲ್ಲಿ, ಹರಿಪ್ರಸಾದ್ ಅವರನ್ನು ಸಂಪುಟಕ್ಕೆ ತೆಗೆದುಕೊಂಡರೆ ಹಿಂದುಳಿದ ವರ್ಗಗಳ ಮೇಲೆ ಕಾಂಗ್ರೆಸ್ ತನ್ನ ಹಿಡಿತ ಸಾಧಿಸಲು ನೆರವಾಗಲಿದೆ ಎಂಬ ಅಭಿಪ್ರಾಯವನ್ನೂ ರಾಜಕೀಯ ವಿಶ್ಲೇಷಕರು ವ್ಯಕ್ತಪಡಿಸಿದ್ದಾರೆ.
ಹರಿಪ್ರಸಾದ್ ಅವರನ್ನು ಕಾಂಗ್ರೆಸ್ ಎಂದೂ ಕಡೆಗಣಿಸಿದಂತಿಲ್ಲ. ಚುನಾವಣೆಗಳಲ್ಲಿ ಅವರು ಸೋತರೂ ಅವರಿಗೆ ಸ್ಥಾನಮಾನ ನೀಡುತ್ತಲೇ ಬರಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಹಲವು ರಾಜ್ಯಗಳ ಉಸ್ತುವಾರಿಯಾಗಿದ್ದವರು ಬಿ ಕೆ ಹರಿಪ್ರಸಾದ್. ನಾಲ್ಕು ಬಾರಿ ಅವರಿಗೆ ರಾಜ್ಯಸಭಾ ಸ್ಥಾನ ನೀಡಲಾಗಿದೆ. 2020 ರಲ್ಲಿ ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡಲಾಯಿತು. ಪರಿಷತ್ ನಲ್ಲಿ ವಿಪಕ್ಷ ನಾಯಕನೂ ಆಗಿದ್ದರು. 2019 ರಲ್ಲಿ ಬೆಂಗಳೂರು ದಕ್ಷಿಣದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು.
ಕಳೆದ ಆಗಸ್ಟ್ನಲ್ಲಿ ರಚನೆಯಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಖಾಯಂ ಆಹ್ವಾನಿತರಾಗಿ ಹರಿಪ್ರಸಾದ್ ಅವರಿಗೆ ಸ್ಥಾನ ನಿಡಲಾಗಿದೆ. ಆದರೆ ಹೊಸ ಸರಕಾರದ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ ಎಂಬುದರ ಕುರಿತ ಅವರ ಅಸಮಾಧಾನ ಕಮ್ಮಿಯಾಗಿಲ್ಲ ಎಂಬುದು ಅವರು ಮತ್ತೆ ಮತ್ತೆ ನೀಡುತ್ತಿರುವ ಹೇಳಿಕೆಗಳಿಂದಲೇ ಬಹಿರಂಗವಾಗುತ್ತಿದೆ.
ಸಿದ್ದರಾಮಯ್ಯ ಅವರ ಬಗ್ಗೆ ಬಿ ಕೆ ಹರಿಪ್ರಸಾದ್ ಅವರಿಗೆ ಮೊದಲೇ ಭಾರೀ ಪ್ರೀತಿ ಏನಿಲ್ಲ. ಹರಿಪ್ರಸಾದ್ ಹಳೆ ಕಾಂಗ್ರಸಿಗರು. ಸೋನಿಯಾ ಗಾಂಧಿಗೆ ಆಪ್ತರು. ದಶಕಗಳ ಕಾಲ ದಿಲ್ಲಿಯಲ್ಲಿ ಮೆರೆದವರು. ಜೆಡಿಎಸ್ ನಿಂದ ಬಂದ ಸಿದ್ದರಾಮಯ್ಯ ರಾಜ್ಯ ಕಾಂಗ್ರೆಸ್ ಅನ್ನು ಸಂಪೂರ್ಣ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದು ಹರಿಪ್ರಸಾದ್ ರಂತಹ ಹಿರಿಯ ಕಾಂಗ್ರೆಸ್ ನಾಯಕರಿಗೆ ಪಥ್ಯವಾಗಿರಲಿಲ್ಲ. ಬೇರೆ ಪಕ್ಷದಿಂದ ಕಾಂಗ್ರೆಸ್ ಗೆ ಬಂದರೆ ವರ್ಷಗಟ್ಟಲೆ ಇಲ್ಲಿ ಸ್ಥಾನಮಾನಕ್ಕಾಗಿ ಕಾಯಬೇಕು. ಅಂತದ್ದರಲ್ಲಿ ಸಿದ್ದರಾಮಯ್ಯ ಬಂದು ಇಡೀ ಪಕ್ಷಕ್ಕೇ ನಂಬರ್ ಒನ್ ಲೀಡರ್ ಆಗಿ 2013 ರಲ್ಲಿ ಸಿಎಂ ಕೂಡ ಆದಾಗ ಈ ಹಿರಿತಲೆಗಳು ಅಸಮಾಧಾನಗೊಂಡಿದ್ದವು.
ಸಿದ್ದರಾಮಯ್ಯ ಅವರ ಕಾರ್ಯವೈಖರಿ ಕೂಡ ಹಳೆ ಕಾಂಗ್ರೆಸಿಗರಿಗೆ ಒಪ್ಪೋದಿಲ್ಲ. ಆದರೆ ಹೆಚ್ಚುತ್ತಲೇ ಹೋದ ಸಿದ್ದರಾಮಯ್ಯ ಅವರ ಖ್ಯಾತಿ ಹಾಗು ವರ್ಚಸ್ಸು ಪಕ್ಷದೊಳಗೆ ಸಹಜವಾಗಿ ಅವರ ಪ್ರಭಾವ ಹೆಚ್ಚಿಸಿತು. ಮಾಸ್ ಲೀಡರ್ ಆಗಿ ಸಿದ್ದರಾಮಯ್ಯ ಪಕ್ಷಕ್ಕೆ ಅನಿವಾರ್ಯವಾದರು. ಹರಿಪ್ರಸಾದ್ ರಂತಹ ಹಿರಿಯರನ್ನು ಗೌರವಿಸುವ ಸೋನಿಯಾ, ರಾಹುಲ್ ಕೂಡ ರಾಜ್ಯದಲ್ಲಿ ಸಿದ್ದರಾಮಯ್ಯರನ್ನು ಸೈಡ್ ಲೈನ್ ಮಾಡಿದ್ರೆ ಪಕ್ಷಕ್ಕೆ ಕಷ್ಟ ಎಂದು ಅರಿತುಕೊಂಡು ಅವರಿಗೆ ಮಹತ್ವ , ಸ್ಥಾನಮಾನ ಎಲ್ಲವನ್ನೂ ನೀಡಿದರು. ಅವರ ಮಾತಿಗೆ ಮನ್ನಣೆ ನೀಡುತ್ತಾ ಬಂದರು.
ಕೆಪಿಸಿಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಬಹಳ ಒಳ್ಳೆಯ ಕೆಲಸ ಮಾಡಿ , ವರಿಷ್ಠರ ವಿಶ್ವಾಸಕ್ಕೂ ಪಾತ್ರರಾಗಿದ್ದರೂ ಸಿಎಂ ಸ್ಥಾನವನ್ನು ಸಿದ್ದರಾಮಯ್ಯ ಅವರಿಗೇ ಕೊಡಬೇಕಾಗುತ್ತದೆ ಎಂದು ಅರಿತುಕೊಂಡು ಹೈಕಮಾಂಡ್ ಹಾಗೇ ಮಾಡಿತು. ಡಿ ಕೆ ಶಿವಕುಮಾರ್ ರನ್ನು ಸಮಾಧಾನಪಡಿಸಲು ಏಕೈಕ ಡಿಸಿಎಂ ಮಾಡಲಾಯಿತು.
ಎರಡನೇ ಬಾರಿ ಸಿಎಂ ಆದ ಸಿದ್ದರಾಮಯ್ಯ ಅವರೂ ಸಂಪುಟ ರಚನೆ ವೇಳೆ ಅನುಭವೀ ಹರಿಪ್ರಸಾದ್ ಅವರನ್ನು ಸೇರಿಸಿಕೊಳ್ಳಲು ಒಲವು ತೋರಿಸಲಿಲ್ಲ. ಈಡಿಗ ಕೋಟಾದಲ್ಲಿ ಮಧು ಬಂಗಾರಪ್ಪ ಅವರನ್ನು ಸೇರಿಸಿಕೊಳ್ಳಲು ಪಟ್ಟು ಹಿಡಿದರು. ಹೈಕಮಾಂಡ್ ಅದಕ್ಕೆ ಒಪ್ಪಬೇಕಾಯಿತು. ಇದು ಹರಿಪ್ರಸಾದ್ ರನ್ನು ಇನ್ನಿಲ್ಲದಂತೆ ಕೆರಳಿಸಿದೆ. ಹಿರಿಯ ನಾಯಕನೊಬ್ಬನ ಅಸಹನೆ ಮತ್ತು ಅಸಮಾಧಾನದ ವಿಚಾರವನ್ನು ಕಾಂಗ್ರೆಸ್ ಹೇಗೆ ನಿಭಾಯಿಸಲಿದೆ ಮತ್ತು ಅದರ ತೀರ್ಮಾನ ಏನಿರಲಿದೆ ಎಂಬುದನ್ನು ನೋಡಬೇಕಿದೆ.