ಲೋಕಸಭಾ ಚುನಾವಣೆಗೆ ಚಿತ್ರದುರ್ಗದಲ್ಲಿ ಮೊಳಗಿದ ಅಹಿಂದ ಕಹಳೆ
ಸಿದ್ದರಾಮಯ್ಯ
ಒಂದೆಡೆ ಜಾತಿ ಗಣತಿ ಜಾರಿಗೆ ತರಲು ಒಕ್ಕಲಿಗ– ಲಿಂಗಾಯತ ಸಮಾಜದ ವಿರೋಧ. ಜೊತೆಗೇ ಆಡಳಿತಾರೂಢ ಕಾಂಗ್ರೆಸ್ ನೊಳಗೇ ಒಕ್ಕಲಿಗ - ಲಿಂಗಾಯತ ನಾಯಕರಿಂದಲೂ ವಿರೋಧ.
ಈ ನಡುವೆಯೇ ನಿನ್ನೆ ಚಿತ್ರದುರ್ಗದಲ್ಲಿ ಕರ್ನಾಟಕ ಶೋಷಿತ ಜಾತಿ-ಸಮುದಾಯಗಳ ಮಹಾ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಯೋಜಿಸಿದ್ದ ಶೋಷಿತರ ಬೃಹತ್ ಜಾಗೃತಿ ಸಮಾವೇಶದಲ್ಲಿ ಜಾತಿಗಣತಿ ವರದಿಯನ್ನು ಸ್ವೀಕಾರ ಮಾಡಿಯೇ ಸಿದ್ಧ ಎಂದು ಸಿಎಂ ಸಿದ್ದರಾಮಯ್ಯ ಶೋಷಿಸಿದ್ದಾರೆ.
ಚಿತ್ರದುರ್ಗದಲ್ಲಿ ಅಹಿಂದ ಶಕ್ತಿ ಪ್ರದರ್ಶನ ದೊಡ್ಡದಾಗಿಯೇ ನಡೆದಿದೆ. ಸಿದ್ದರಾಮಯ್ಯ ಅವರೂ ಲೋಕಸಭಾ ಚುನಾವಣೆಗೆ ಮೊದಲು ಅಹಿಂದ ವರ್ಗಗಳ ಬೆಂಬಲ ಕ್ರೋಢೀಕರಿಸಲು ಈ ಮೂಲಕ ಸಜ್ಜಾಗಿದ್ದಾರೆ.
ಸಾಮಾಜಿಕ ಆರ್ಥಿಕ ಸಮೀಕ್ಷೆಯ ಹೆಸರಿನಲ್ಲಿ ಜಾತಿ ಗಣತಿ ನಡೆಸಿದ್ದು, ಇದು ವೈಜ್ಞಾನಿಕವಾಗಿ ನಡೆದಿಲ್ಲ.
ಈ ಸಮೀಕ್ಷೆಯಲ್ಲಿ ವೀರಶೈವ–ಲಿಂಗಾಯತ ಮತ್ತು ಒಕ್ಕಲಿಗರ ಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ.
ಅಲ್ಲದೇ, ವರದಿ ಮಂಡಿಸುವುದಕ್ಕೂ ಮೊದಲೇ ಸೋರಿಕೆ ಮಾಡಲಾಗಿದೆ ಎಂಬುದು ಒಕ್ಕಲಿಗ– ಲಿಂಗಾಯತ ಸಮುದಾಯಗಳ ಆಕ್ಷೇಪವಾಗಿತ್ತು.
‘ಸೋರಿಕೆ ಆಗಿರುವ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ವೀರಶೈವ– ಲಿಂಗಾಯತರ ಸಂಖ್ಯೆ ಕ್ರಮವಾಗಿ 59 ಲಕ್ಷ ಮತ್ತು ಒಕ್ಕಲಿಗರ ಸಂಖ್ಯೆ 43 ಲಕ್ಷ ತೋರಿಸಲಾಗಿದೆ. ಇದು ದೋಷಪೂರಿತ ವರದಿ. ಅಹಿಂದ ವರ್ಗಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಇತರ ಸಮುದಾಯಗಳಿಗೆ ಅನ್ಯಾಯ ಮಾಡಬಾರದು. ಅಹಿಂದ ವರ್ಗಕ್ಕೆ ಅನುಕೂಲ ಮಾಡಿಕೊಡುವ ಬಗ್ಗೆ ನಮ್ಮ ಆಕ್ಷೇಪವಿಲ್ಲ’ ಎಂಬುದು ಎರಡು ಸಮುದಾಯಗಳ ಪ್ರಮುಖರ ಪ್ರತಿಪಾದನೆ.
ಈ ಎರಡು ಪ್ರಬಲ ಸಮುದಾಯಗಳ ಆಕ್ಷೇಪಕ್ಕೆ ಕಾಂಗ್ರೆಸ್ ನ ಒಕ್ಕಲಿಗ ಲಿಂಗಾಯತ ಮುಖಂಡರೂ ಧ್ವನಿ ಗೂಡಿಸಿದ್ದಾರೆ.
ಇದು ಸಿದ್ದರಾಮಯ್ಯ ಸರಕಾರದ ಪಾಲಿಗೆ ದೊಡ್ಡ ಸವಾಲಾಗಿತ್ತು.
ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ಸ್ವೀಕರಿಸಲು ಬದ್ಧರಾಗಿದ್ದಾರೆ.
ಅತ್ತ ರಾಹುಲ್ ಗಾಂಧಿ ಕೂಡ ಜಾತಿ ಗಣತಿ ಬಗ್ಗೆ ಬಹಳ ಒತ್ತು ಕೊಟ್ಟು ಮಾತಾಡುತ್ತಿದ್ದಾರೆ.
ದೇಶಾದ್ಯಂತ ಜಾತಿ ಗಣತಿ ಆಗಬೇಕು ಅಂತಿದ್ದಾರೆ.
ನಿನ್ನ ಚಿತ್ರದುರ್ಗದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ, " ಕಾಂತರಾಜು ಸಮಿತಿ ರಚನೆ ಮಾಡಿದ್ದು ನಾನು ಮುಖ್ಯಮಂತ್ರಿಯಾಗಿದ್ದಾಗ. 2018ರಲ್ಲಿ ನಾನು ಸಿಎಂ ಸ್ಥಾನದಿಂದ ಇಳಿಯುವಾಗ ವರದಿ ಪೂರ್ಣ ಆಗಿರಲಿಲ್ಲ. ನಂತರ ಬಂದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಮಾಜಿ ಸಿಎಂಗಳಾದ ಹೆಚ್ಡಿ. ಕುಮಾರಸ್ವಾಮಿ ಮತ್ತು ನಂತರ ಬಂದ ಬಿಜೆಪಿ ಸರ್ಕಾರದಲ್ಲಿ ಬಸವರಾಜ ಬೊಮ್ಮಾಯಿ ಅವರು ವರದಿ ಪಡೆಯಲಿಲ್ಲ. ಈಗ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆಯವರಲ್ಲಿ ವರದಿ ಕೊಡಿ ಅಂತ ನಾನು ಹೇಳಿದ್ದೇನೆ. ಲೋಪದೋಷ ಇದ್ದರೆ ತಜ್ಞರ ಸಲಹೆ ಪಡೆಯುತ್ತೇವೆ " ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಜಾತಿ ಗಣತಿ ವರದಿ ಬಿಡುಗಡೆ ಮಾಡಬಾರದು ಎಂದು ಒಕ್ಕಲಿಗರ ಸಂಘ ಸೇರಿದಂತೆ ಹಲವಾರು ಸಂಘಸಂಸ್ಥೆಗಳು ವಿರೋಧ ವ್ಯಕ್ತಪಡಿಸಿರುವ ಪತ್ರಕ್ಕೆ ಡಿಕೆ ಶಿವಕುಮಾರ್ ಅವರೂ ಕೂಡ ಸಹಿ ಹಾಕಿದ್ದರು. ಇದು ಸರ್ಕಾರವನ್ನು ತೀವ್ರ ಮುಜುಗರಕ್ಕೀಡಾಗುವಂತೆ ಮಾಡಿತ್ತು.
ಆ ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ಡಿಕೆ ಶಿವಕುಮಾರ್ ಸೇರಿದಂತೆ ಹಲವರ ನಿಲುವು ಖಂಡಿಸಿದ ಬಳಿಕ ಡಿಕೆಶಿ 'ನಾನು ಜಾತಿ ಗಣತಿಯನ್ನು ಎಲ್ಲಿಯೂ ವಿರೋಧಿಸಿಲ್ಲ. ನನ್ನ ಸ್ವಂತ ಮನೆ ಸೇರಿದಂತೆ ವ್ಯವಸ್ಥಿತವಾಗಿ ಜನಗಣತಿ ನಡೆಯಬೇಕು. ಆದರೆ, ಜಾತಿ ಗಣತಿ ವರದಿಗೆ ಅಂದಿನ ಕಾರ್ಯದರ್ಶಿ ಸಹಿ ಮಾಡಿರಲಿಲ್ಲ, ಇತರೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಅದನ್ನು ಸರಿಪಡಿಸಲಿದ್ದಾರೆ ಎಂದು ಹೇಳಿದ್ದರು.
ಚಿತ್ರದುರ್ಗದ ಶೋಷಿತ ವರ್ಗಗಳ ಸಮಾವೇಶದ ಪ್ರಮುಖ 5 ಉದ್ದೇಶಗಳು ಹಾಗು ಆಗ್ರಹಗಳು - ಕಾಂತರಾಜ ಆಯೋಗದ ವರದಿ ಜಾರಿ, ಎಸ್ಸಿ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸುವ ಸದಾಶಿವ ಆಯೋಗ ವರದಿ ಜಾರಿ, ಈಗಾಗಲೇ ಪ್ರಾತಿನಿಧ್ಯ ಪಡೆದಿರುವ ಜಾತಿಗಳ ಮೀಸಲಾತಿ ರದ್ದು , ಚುನಾವಣೆಯಲ್ಲಿ ಅಹಿಂದ ವರ್ಗಕ್ಕೆ ಮೀಸಲಾತಿ ಹಾಗು ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಜಾರಿ .
ಈ ಮೂಲಕ ಅಹಿಂದ ಮತಗಳನ್ನು ಒಟ್ಟುಗೂಡಿಸುವುದು ಹಾಗು ಪ್ರಬಲ ಲಿಂಗಾಯತ ಹಾಗು ಒಕ್ಕಲಿಗ ಸಮುದಾಯಗಳಿಗೆ ಸಂದೇಶ ರವಾನಿಸುವುದು ಸಮಾವೇಶದ ಮುಖ್ಯ ಉದ್ದೇಶವಾಗಿತ್ತು. ಇದಕ್ಕೆ ಆ ಎರಡು ಸಮುದಾಯಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂದು ಕಾದು ನೋಡಬೇಕು.