ಹಲವು ತಿರುವುಗಳುಳ್ಳ ಭಾವನಾತ್ಮಕ ಮಿಸ್ಟರಿ ಕ್ರೈಂ ಥ್ರಿಲ್ಲರ್ : ಜಾನೇ ಜಾನ್
ಪಶ್ಚಿಮ ಬಂಗಾಳದ ಗಿರಿಧಾಮ ಪಟ್ಟಣ ಕಲಿಂಪಾಂಗ್ ಎಂಬ ಊರಲ್ಲಿ ಮಾಯಾ(ಕರೀನಾ ಕಪೂರ್) ಸಣ್ಣ ಕೆಫೆ ನಡೆಸುತ್ತಾ ಸುಂದರ ಬದುಕಿನ ಕನಸು ಕಟ್ಟಿಕೊಂಡು ತನ್ನ ಗಂಡನಿಂದ ದೂರವಾಗಿ ತನ್ನ ಹದಿ ಹರೆಯದ ಮಗಳೊಂದಿಗೆ ಬದುಕು ನಡೆಸುತ್ತಿರುತ್ತಾಳೆ. ಮಾಯಾಳ ಪಕ್ಕದ ಮನೆಯಲ್ಲಿ ಏಕಾಂಗಿಯಾಗಿ ವಾಸ ಇರುವ ಚತುರ ಗಣಿತಜ್ಞ ಮತ್ತು ಸ್ಥಳೀಯ ಶಾಲೆಯಲ್ಲಿ ಲೆಕ್ಕದ ಮೇಷ್ಟ್ರಾಗಿ ಕೆಲಸ ಮಾಡುವ ನರೇನ್ ವ್ಯಾಸ್(ಜಯದೀಪ್ ಅಹ್ಲಾವತ್) ಮಾಯಾಳ ಬಗ್ಗೆ ವ್ಯಾಮೋಹ ಬೆಳೆಸಿಕೊಂಡಿರುತ್ತಾನೆ.
ಹಲವು ವರ್ಷಗಳ ನಂತರ ತನ್ನ ಹೆಂಡತಿ ಮಗಳ ಇರುವಿಕೆ ಕಂಡು ಕೊಂಡ ಭ್ರಷ್ಟ ಪೊಲೀಸ್ ಅಧಿಕಾರಿಯಾದ ಮಾಯಾಳ ಪರಿತ್ಯಕ್ತ ಗಂಡ ಅಜಿತ್ (ಸೌರಭ್ ಸಚ್‌ದೇವ್) ಮಾಯಾಳ ಮನೆ ಹುಡುಕಿಕೊಂಡು ಬಂದಾಗ ನಡೆಯುವ ಸಣ್ಣದೊಂದು ಸಂಘರ್ಷ ಮಾಯಾಳ ಮತ್ತು ಮಗಳ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಮಾಯಾಳ ಗಂಡನ ಕೊಲೆಯಲ್ಲಿ ಪರ್ಯಾವಸಾನಗೊಳ್ಳುತ್ತದೆ. ತನ್ನ ಮೇಧಾವಿತನದಿಂದ ಕೊಲೆಯ ವಿಚಾರ ತಿಳಿದುಕೊಳ್ಳುವ ನರೇನ್ ತನ್ನ ಕೈಯಾರೆ ನಡೆದ ತನ್ನ ಮಾಜಿ ಗಂಡನ ಕೊಲೆಯಿಂದ ಪತರಗುಟ್ಟಿ ನಿಂತ ಮಾಯಾಳ ಸಹಾಯಕ್ಕೆ ಧಾವಿಸುತ್ತಾನೆ. ನಡೆದ ಕೊಲೆಯನ್ನು ಮುಚ್ಚಿ ಹಾಕಲು ನರೇನ್ ತನ್ನ ಚತುರ ಬುದ್ಧಿಯನ್ನು ಪ್ರಯೋಗಿಸುತ್ತಾನೆ.
ಇತ್ತ ಕಾಣೆಯಾದ ಅಜಿತ್‌ನ ಮಿಸ್ಸಿಂಗ್ ಕೇಸಿನ ತನಿಖೆಗೆ ಇಳಿಯುವ ನರೇನ್‌ನ ಕಾಲೇಜು ಸಹಪಾಠಿ ಪೊಲೀಸ್ ಇನ್‌ಸ್ಪೆಕ್ಟರ್ ಕರಣ್ ಆನಂದ್(ವಿಜಯ್ ವರ್ಮಾ) ತನಿಖೆ ನಡೆಸುತ್ತಾ ನಡೆಸುತ್ತಾ ಕಲಿಂಗ್‌ಪಾಂಗ್‌ನ ಹೆಬ್ಬಾಗಿಲಿನಲ್ಲಿ ಬಂದು ನಿಲ್ಲುತ್ತಾನೆ. ನಂತರ ಚಿತ್ರ ಭಾವನೆಗಳ ತಾಕಲಾಟದೊಂದಿಗೆ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ.
೨೦೨೩ರಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ನೇರ ಬಿಡುಗಡೆಯಾದ ಭಾವನಾತ್ಮಕ ಅಂಶಗಳು ಮಿಳಿತವಾದ ಮಿಸ್ಟರಿ ಕ್ರೈಂ ಥ್ರಿಲ್ಲರ್ ಹಿಂದಿ ಚಲನ ಚಿತ್ರ ‘ಜಾನೇ ಜಾನ್’ ಪ್ರೇಕ್ಷಕನನ್ನು ಕೊನೆ ನಿಮಿಷದವರೆಗೂ ಕುರ್ಚಿಯ ತುದಿಯಲ್ಲಿ ಕೂರಿಸುತ್ತದೆ. ಕರೀನಾ ಕಪೂರ್ ಹಲವು ವರ್ಷಗಳ ನಂತರ ಮಹಿಳಾ ಪ್ರಧಾನ ಚಿತ್ರವೊಂದರಲ್ಲಿ ಬಣ್ಣ ಹಚ್ಚಿದ್ದಾರೆ. ವಿಜಯ್ ವರ್ಮಾ, ಜಯದೀಪ್ ಅಹ್ಲಾವತ್ ಮತ್ತಿತರರು ನಟಿಸಿದ ಈ ಚಿತ್ರದ ನಿರ್ದೇಶಕ ಕಹಾನಿ ಖ್ಯಾತಿಯ ಸುಜಯ್ ಘೋಷ್. ಚಿತ್ರದಲ್ಲಿನ ಥ್ರಿಲ್ಲರ್ ಅಂಶವನ್ನು ನಿರ್ದೇಶಕ ಸುಜಯ್ ಘೋಷ್ ಆರಂಭದಿಂದ ಅಂತ್ಯದವರೆಗೂ ತುಂಬಾ ಚೆನ್ನಾಗಿ ಕಾಯ್ದುಕೊಂಡಿದ್ದಾರೆ.
೨೦೦೮ರಲ್ಲಿ ತೆರೆಕಂಡು ಜಗತ್ತನ್ನು ಅಚ್ಚರಿಗೆ ದೂಡಿದ suspect X ಜಪಾನೀಸ್ ಚಿತ್ರದ ಅಧಿಕೃತ ರಿಮೇಕ್ ಇದು. ೨೦೦೫ರಲ್ಲಿ ಬಿಡುಗಡೆಯಾದ ಜಪಾನ್ ದೇಶದ ಪ್ರಖ್ಯಾತ ಬರಹಗಾರ ‘ಕೀಗೋ ಹಿಕಶಿನೋ’ರವರು ಬರೆದ Devotion of suspect x ಕೃತಿ ಆಧಾರಿತ ಚಿತ್ರವಿದು. ೨೦೧೩ರಲ್ಲಿ ಮಲಯಾಳಂನಲ್ಲಿ ತೆರೆಕಂಡು ದೇಶದಾದ್ಯಂತ ಸಂಚಲನ ಉಂಟು ಮಾಡಿದ ‘ದೃಶ್ಯಂ’ ಚಿತ್ರದ ಕಥೆಯನ್ನು ಕೂಡ ಇದೇ ಕಾದಂಬರಿಯ ಒಂದು ಎಳೆಯನ್ನು ಆಧರಿಸಿ ರಚಿಸಲಾಗಿತ್ತು.
ಕರೀನಾ ಕಪೂರ್, ಜಯದೀಪ್ ಅಹ್ಲಾವತ್, ವಿಜಯ್ ವರ್ಮಾ ಮೂವರೂ ತುಂಬಾ ಸೊಗಸಾಗಿ ನಟಿಸಿದ್ದಾರೆ. ಅದರಲ್ಲೂ ಜಯದೀಪ್ ಅಹ್ಲಾವತ್‌ರವರ ಕಣ್ಣಲ್ಲೇ ತನ್ನ ಭಾವನೆಗಳನ್ನು ತಣ್ಣಗೆ ಹೊರಸೂಸುವ ಅಭಿನಯವಂತೂ ಚಿತ್ರದ ಹೈಲೈಟ್ಸ್‌ಗಳಲ್ಲಿ ಒಂದು.
ಅವಿಕ್ ಮುಖೋಪಾಧ್ಯಾಯ್ ಛಾಯಾಗ್ರಹಣ, ಕ್ಲಿಂಟನ್ ಸೆರೇಯೊ ಸಂಗೀತ, ಊರ್ವಶಿ ಸಕ್ಸೇನಾರವರ ಎಡಿಟಿಂಗ್ ಚಿತ್ರದ ಕಥೆಯ ಓಟಕ್ಕೆ ಪೂರಕವಾಗಿದೆ.
ಈ ಚಲನಚಿತ್ರ ೨೦೨೩ರಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಜಾಗತಿಕವಾಗಿ ಅತ್ಯಧಿಕ ವೀಕ್ಷಣೆಯಾದ ಭಾರತೀಯ ಚಲನ ಚಿತ್ರಗಳಲ್ಲಿ ಒಂದು ಎಂಬ ಮನ್ನಣೆಗೆ ಪಾತ್ರವಾಗಿದೆ. ಅಲ್ಲದೇ ೨೦೨೩ ರ ಹಿಮಾಲಯನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕೂಡ ಪ್ರದರ್ಶಿತಗೊಂಡಿದೆ. ಒಟ್ಟಿನಲ್ಲಿ ಮೂಲ ಚಿತ್ರವನ್ನು ನೋಡದವರನ್ನು ‘ಜಾನೇ ಜಾನ್’ ರಂಜಿಸುವುದಂತೂ ಖಂಡಿತ.
ಮೂಲ ಹಿಂದಿ ಭಾಷೆಯ ಈ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಇಂಗ್ಲಿಷ್, ತಮಿಳು, ತೆಲುಗು ಡಬ್ಬಿಂಗ್‌ನಲ್ಲೂ ಇಂಗ್ಲಿಷ್ ಸಬ್ ಟೈಟಲ್‌ನೊಂದಿಗೆ ಲಭ್ಯವಿದೆ.
ಚಿತ್ರದ ರೇಟಿಂಗ್-
IMDb-7/10
Rotten Tomatoes-75%
Maturity Rating-U/A (16+)