ರಾಹುಲ್ ಗಾಂಧಿಯನ್ನು ಸೋಲಿಸಿದ ವೃದ್ಧ, ಅಹಂಕಾರಿ ನಾಯಕ
ವಂಚಕ ಬಾಬಾಗೆ ಮಂಡಿಯೂರಿ ಬಿಜೆಪಿ ಸಂಘಟನೆಯನ್ನು ಸೋಲಿಸೋದು ಸಾಧ್ಯನಾ ? ► ಮಧ್ಯಾಹ್ನವೇ ಮನೆಗೆ ಹೋಗುವ ಕಮಲ್ ನಾಥ್, ಗ್ರಾಮ ಗ್ರಾಮ ಸುತ್ತಿದ ಶಿವರಾಜ್ ಸಿಂಗ್
ದೇಶದ ಎರಡನೇ ಅತಿ ದೊಡ್ಡ ರಾಜ್ಯ ಮಧ್ಯಪ್ರದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಬಂದಿದೆ. ಅದೂ ಅತ್ಯಂತ ಪ್ರಚಂಡ ಬಹುಮತದೊಂದಿಗೆ ಅಲ್ಲಿನ ಜನರು ಬಿಜೆಪಿಗೆ ಮತ್ತೊಮ್ಮೆ ಅಧಿಕಾರ ಕೊಟ್ಟಿದ್ದಾರೆ. ಮೊನ್ನೆವರೆಗೆ ಮಧ್ಯ ಪ್ರದೇಶದಲ್ಲಿ ಬಿಜೆಪಿ ಸೋತೇ ಬಿಟ್ಟಿತು, ನಾವು ಸರಕಾರ ರಚಿಸೋದು ಮಾತ್ರ ಬಾಕಿ ಎಂಬಂತಿದ್ದ ಕಾಂಗ್ರೆಸ್ ಅಲ್ಲಿ ಅತ್ಯಂತ ಹೀನಾಯವಾಗಿ ಸೋತಿದೆ.
ರಾಜಸ್ತಾನ ಹಾಗು ಛತ್ತೀಸ್ ಗಢಗಳಲ್ಲಿ ಐದು ವರ್ಷಗಳ ಆಡಳಿತ ವಿರೋಧಿ ಅಲೆಯನ್ನು ನಿಭಾಯಿಸಿ ಗೆಲ್ಲೋದು ಕಾಂಗ್ರೆಸ್ ಗೆ ಸಾಧ್ಯವಾಗಲಿಲ್ಲ.
ಆದರೆ ಮಧ್ಯ ಪ್ರದೇಶದಲ್ಲಿ ಹದಿನೆಂಟು ವರ್ಷಗಳ ಆಡಳಿತದ ಬಳಿಕವೂ ಆಡಳಿತ ವಿರೋಧಿ ಅಲೆಯನ್ನು ತನ್ನ ಪರವಾಗಿ ಬದಲಾಯಿಸಿಕೊಂಡು ಬಿಜೆಪಿ ಮೂರನೇ ಎರಡರಷ್ಟು ಬಹುಮತ ಪಡೆದಿದೆ.
ಹಾಗಾದರೆ ಬಿಜೆಪಿಯ ಗೆಲುವು ಅದೆಷ್ಟು ದೊಡ್ಡದು , ಕಾಂಗ್ರೆಸ್ ನ ಸೋಲು ಅದೆಷ್ಟು ಹೀನಾಯವಾಗಿದೆ ಎಂದು ಯಾರಾದರೂ ಸುಲಭವಾಗಿ ಊಹಿಸಬಹುದು. ಮಧ್ಯ ಪ್ರದೇಶದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಈ ಬಾರಿ ಅವರ ಪಕ್ಷದ ವರಿಷ್ಠರೇ ಬದಿಗೆ ಸರಿಸಿಬಿಟ್ಟಿದ್ದರು. ಸಾಮಾನ್ಯವಾಗಿ ಹಾಲಿ ಪಕ್ಷದ ಸಿಎಂ ಇರುವವರನ್ನೇ ಮುಂದಿನ ಸಿಎಂ ಎಂದು ಬಿಂಬಿಸಿ ಬಿಜೆಪಿ ಚುನಾವಣೆ ಎದುರಿಸುತ್ತದೆ. ಆದರೆ ಮಧ್ಯ ಪ್ರದೇಶದಲ್ಲಿ ಆ ಸಂಪ್ರದಾಯವನ್ನು ಬಿಜೆಪಿ ಮುರಿಯಿತು. ಅಲ್ಲಿನ ಅತ್ಯಂತ ಜನಪ್ರಿಯ , ಅತ್ಯಂತ ಪ್ರಭಾವಿ ನಾಯಕನನ್ನೇ ಬದಿಗೆ ಸರಿಸಿತು.
ಶಿವರಾಜ್ ಸಿಂಗ್ ಚೌಹಾಣ್ ಸಿಎಂ ಅಭ್ಯರ್ಥಿ ಎಂದು ಎಲ್ಲೂ ಬಿಜೆಪಿ ಬಿಂಬಿಸಲಿಲ್ಲ. ಪೋಸ್ಟರ್ ಗಳಲ್ಲಿ , ಮಧ್ಯ ಪ್ರದೇಶ ಬಿಜೆಪಿಯ ಸೋಷಿಯಲ್ ಮೀಡಿಯಾಗಳಲ್ಲಿ ಎಲ್ಲ ಕಡೆ ಮಿಂಚಿದ್ದು ಪ್ರಧಾನಿ ಮೋದಿ. ಸಾಲದ್ದಕ್ಕೆ ಅದೇ ಪೋಸ್ಟರ್ ಗಳಲ್ಲಿ ಮೋದಿಯನ್ನು ಅತ್ಯಂತ ದೊಡ್ಡದಾಗಿ ತೋರಿಸಿ ಶಿವರಾಜ್ ಸಿಂಗ್ ಚೌಹಾಣ್ ರನ್ನು ಇತರ ಹತ್ತು , ಹನ್ನೊಂದು ಮಂದಿ ನಾಯಕರ ಜೊತೆ ಸೇರಿಸಿಬಿಡಲಾಯಿತು. ಪ್ರಧಾನಿ ಮೋದಿ ದೊಡ್ಡದಾಗಿ ಮಧ್ಯದಲ್ಲಿ ಮಿಂಚುತ್ತಿದ್ದರೆ ಶಿವರಾಜ್ ಇತರ ಹತ್ತು ಮಂದಿ ನಾಯಕರ ಜೊತೆ ಸೈಡಿಗೆ ಸರಿದು ಬಿಟ್ಟಿದ್ದರು.
ಎಂ ಪಿ ಕೆ ಮನ್ ಮೇ ಮೋದಿ ಎಂದೇ ಪ್ರಚಾರ ಮಾಡಲಾಯಿತು. ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಭಾರೀ ಆಕ್ರೋಶ ಜನರಲ್ಲಿದೆ ಎಂದು ಕಾಂಗ್ರೆಸ್ ಮಾತ್ರವಲ್ಲ, ಬಿಜೆಪಿ ಮಂದಿ ಹಾಗು ಅದರ ಬೆಂಬಲಿಗ ಚಾನಲ್ ಗಳು ಹೇಳುತ್ತಿದ್ದವು.
ಅವರ ವಿರುದ್ಧ ಭ್ರಷ್ಟಾಚಾರದ ಆರೋಪಗಳೂ ದೊಡ್ಡದೇ ಇದ್ದವು.
ಎಲ್ಲಿವರೆಗೆಂದರೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವಾಗ ಮೊದಲ ಮೂರು ಪಟ್ಟಿಯಲ್ಲಿ ಶಿವರಾಜ್ ಸಿಂಗ್ ಅವರ ಹೆಸರೇ ಇರಲಿಲ್ಲ. ಕೊನೆಗೆ ಅವರೇ ಸಾರ್ವಜನಿಕ ಸಭೆಯಲ್ಲಿ ನಾನು ಚುನಾವಣೆಗೆ ಸ್ಪರ್ಧಿಸಬೇಕೇ ಬೇಡವೇ ? ನನ್ನ ಸರಕಾರ ಮುಂದುವರಿಯಬೇಕೇ ಬೇಡವೇ ಎಂದು ಕೇಳಬೇಕಾಯಿತು.
ಆದರೆ ಶಿವರಾಜ್ ಸಿಂಗ್ ಚೌಹಾಣ್ ಎಲ್ಲವನ್ನೂ ಸಹಿಸಿಕೊಂಡರು.
ಎಲ್ಲೂ ಬಹಿರಂಗವಾಗಿ ಪಕ್ಷದ ವಿರುದ್ಧ, ವರಿಷ್ಠರ ವಿರುದ್ಧ ಒಂದಿಷ್ಟೂ ಅಸಮಾಧಾನ ತೋರಿಸಲಿಲ್ಲ.
ಮೊದಲು ಆದಿತ್ಯ ನಾಥ್ ಅವರನ್ನು ಅನುಸರಿಸಿ ಬುಲ್ಡೋಜರ್ ರಾಜಕೀಯ ಮಾಡಿದರು. ಅದ್ಯಾಕೋ ನಡೆಯೋದಿಲ್ಲ ಎಂದು ಅವರಿಗೆ ಬಹಳ ಬೇಗ ಗೊತ್ತಾಯಿತು. ಕೂಡಲೇ ವರಸೆ ಬದಲಾಯಿಸಿ ಮಾಮಾ ಆಗಿಬಿಟ್ಟರು. ರಾಜ್ಯದ ಮಹಿಳೆಯರ ಪಾಲಿಗೆ ಅಣ್ಣ ಎಂದು ಬಿಂಬಿಸಿಕೊಂಡರು.
ರಾಜ್ಯದ ಮೂಲೆ ಮೂಲೆಗೆ ಹೋಗಿ ಮಹಿಳೆಯರನ್ನು, ಕಾರ್ಮಿಕರನ್ನು, ರೈತರನ್ನು, ದಲಿತರನ್ನು ಭೇಟಿಯಾದರು.
" ನಾನು ಸರಿಯಾಗಿ ಆಡಳಿತ ನಡೆಸಿದ್ದೇನೋ ಇಲ್ಲವೇ ಎಂದು ನನ್ನ ಮುಖದ ಮೇಲೆ ಹೇಳಿ ಬಿಡಿ. ನನ್ನ ಕೆಲಸ ಮುಂದುವರಿಸಬೇಕೋ ಬೇಡವೋ ಎಂದು ಮುಲಾಜಿಲ್ಲದೆ ಹೇಳಿಬಿಡಿ" ಎಂದು ಜನರಲ್ಲಿ ಹೇಳಿದರು. ಚುನಾವಣೆಗೆ ತಿಂಗಳಿರುವಾಗ ಪ್ರಧಾನಿ ಮೋದಿ ರಾಜ್ಯದಲ್ಲಿ 15 ದೊಡ್ಡ ಸಮಾವೇಶಗಳಲ್ಲಿ ಭಾಗವಹಿಸಿದರೆ ಶಿವರಾಜ್ ಸಿಂಗ್ ಚೌಹಾಣ್ 160 ಕಡೆಗಳಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿದ್ರು.
ಈಗ ಪ್ರಚಂಡ ಬಹುಮತದಿಂದ ಗೆದ್ದ ಮೇಲೆ ಎಲ್ಲೆಡೆ ಶಿವರಾಜ್ ಸಿಂಗ್ ಚೌಹಾಣ್ ಅವರೇ ಆವರಿಸಿಕೊಂಡಿದ್ದಾರೆ. ಮೋದಿ ಭಟ್ಟಂಗಿ ಚಾನಲ್ ಗಳು ಮೋದಿಯಿಂದ ಮಧ್ಯ ಪ್ರದೇಶ ಗೆದ್ದಿತು ಬಿಜೆಪಿ ಅಂತ ಅದೆಷ್ಟೇ ಹೇಳಿದರೂ ಅಲ್ಲಿ ಜನರು ಗೆಲ್ಲಿಸಿದ್ದು ಶಿವರಾಜ್ ಸಿಂಗ್ ಚೌಹಾಣ್ ರನ್ನೇ ಎಂಬುದನ್ನು ಮುಚ್ಚಿಡಲು ಸಾಧ್ಯವಿಲ್ಲದಷ್ಟು ಅದು ಸ್ಪಷ್ಟವಾಗಿ ಕಾಣುತ್ತಿದೆ.
ಆದರೆ ಚಾಣಾಕ್ಷ ಚೌಹಾಣ್ ಮಾತ್ರ ನಿನ್ನೆಯೂ ಮೋದೀಜಿ ಅವರಿಂದಾಗಿ ನಾವು ಗೆದ್ದೆವು ಎಂದೇ ಹೇಳಿಕೆ ಕೊಟ್ಟರು. ಇಂತಹ ಮಹಾ ಚಾಣಾಕ್ಷನನ್ನು ಸೋಲಿಸುವ ಹೊಣೆ ಹೊತ್ತಿದ್ದ ಕಾಂಗ್ರೆಸ್ ನ ಕಮಲ್ ನಾಥ್ ಎಂಬ 77 ವರ್ಷದ ವೃದ್ಧ, ಅಹಂಕಾರಿ ನಾಯಕ ಭಾಗೇಶ್ವರ್ ಬಾಬಾ ಎಂಬ ವಂಚಕನ ಮುಂದೆ ಮಂಡಿಯೂರಿ ಮಧ್ಯ ಪ್ರದೇಶ ಗೆಲ್ಲಲು ಹೊರಟರು.
ಬಿಜೆಪಿಯ ಹಿಂದುತ್ವವನ್ನು ಸೋಲಿಸಬೇಕಿದ್ದ ಕಮಲ್ ನಾಥ್ ತಾನು ಹಿಂದುತ್ವದಲ್ಲಿ ಕಡಿಮೆಯಲ್ಲ ಎಂದು ಸಾಬೀತುಪಡಿಸಲು ಹೆಣಗಾಡಿದರು.
ಸಿಖ್ ಹತ್ಯಾಕಾಂಡದ ಕಳಂಕ ಹೊತ್ತು ಬಳಿಕ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಮುಕ್ತರಾಗಿದ್ದ ಕಮಲ್ ನಾಥ್ ಗೆ ಬಿಜೆಪಿಯ ಹಿಂದುತ್ವ ಹಾಗು ದ್ವೇಷ ರಾಜಕೀಯವನ್ನು ವಿರೋಧಿಸುವ ನೈತಿಕತೆಯೂ ಇರಲಿಲ್ಲ.
ಪಕ್ಷದ ಹೈಕಮಾಂಡ್ ನ , ಸೋನಿಯಾ ಗಾಂಧಿಯ, ರಾಹುಲ್ ಗಾಂಧಿಯ ಒಂದೇ ಒಂದು ಮಾತು ಕೇಳಲಿಲ್ಲ. ಅವರ ಸಲಹೆ ಪಡೆಯಲೇ ಇಲ್ಲ. ಕಾಂಗ್ರೆಸ್ ಮೂಲಗಳ ಪ್ರಕಾರ ಕಾಂಗ್ರೆಸ್ ಹೈಕಮಾಂಡ್ ಗೂ ಕಮಲ್ ನಾಥ್ ಗೂ ಯಾವುದೇ ಸಂವಹನವೇ ಇಲ್ಲದಂತಿತ್ತು.
ಮಧ್ಯ ಪ್ರದೇಶವನ್ನು ಸಂಪೂರ್ಣವಾಗಿ ಕಮಲ್ ನಾಥ್ ಹಾಗು ಇನ್ನೊಬ್ಬ ವೃದ್ಧ ನಾಯಕ ದಿಗ್ವಿಜಯ್ ಸಿಂಗ್ ಅವರಿಗೆ ಬಿಟ್ಟು ಕೊಟ್ಟಂತಿತ್ತು.
ಆ ರಾಜ್ಯದಲ್ಲಿ ಏನೇ ಇದ್ದರೂ ಇವರಿಬ್ಬರು ವೃದ್ಧ ನಾಯಕರು, ಇವರ ಮಕ್ಕಳೇ ನಿರ್ಧರಿಸೋದು ಎಂಬಂತಹ ವಾತಾವರಣವಿತ್ತು. ಅಷ್ಟೇ ಅಲ್ಲ, ರಾಜ್ಯದಲ್ಲೂ, ಅಲ್ಲಿನ ಎರಡನೇ ಹಂತದ ಹಾಗು ಸ್ಥಳೀಯ ನಾಯಕರ ಯಾವ ಸಲಹೆಯನ್ನೂ ಕಮಲ್ ನಾಥ್ ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ.
ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಬಹಿಷ್ಕಾರ ಹಾಕಿದ್ದ ಆಂಕರ್ ರನ್ನೇ ಹೆಲಿಕಾಪ್ಟರ್ ನಲ್ಲಿ ಕರೆದುಕೊಂಡು ಹೋಗಿ ವಿಶೇಷ ಸಂದರ್ಶನ ಕೊಟ್ಟರು ಕಮಲ್ ನಾಥ್. ಆದರೆ ಹೀಗೇಕೆ ಮಾಡಿದಿರಿ ಎಂದು ಅವರನ್ನು ಪಕ್ಷದ ಹೈಕಮಾಂಡ್ ಕೇಳುವಂತೆಯೇ ಇರಲಿಲ್ಲ. ಅಷ್ಟು ಧಿಮಾಕಿನವರು ಈ ಕಮಲ್ ನಾಥ್.
ಸಾಕಷ್ಟು ವಯಸ್ಸೂ ಆಗಿದ್ದ ಕಮಲ್ ನಾಥ್ ಸಕ್ರಿಯವಾಗಿ ಚುನಾವಣಾ ಪ್ರಚಾರದಲ್ಲೂ ಭಾಗವಹಿಸುತ್ತಿರಲಿಲ್ಲ ಎಂದೂ ಸ್ಥಳೀಯ ಕಾಂಗ್ರೆಸಿಗರು ಸಿಟ್ಟಾಗಿದ್ದರು. ಕಮಲ್ ನಾಥ್ ಮಧ್ಯಾಹ್ನವೇ ಮನೆಗೆ ವಾಪಸ್ ಬಂದು ಬಿಡುತ್ತಿದ್ದರು , ಹಾಗಾಗಿ ಮಧ್ಯ ಪ್ರದೇಶದಲ್ಲಿ ಬಿಜೆಪಿ ವಾಪಸ್ ಅಧಿಕಾರಕ್ಕೆ ಬಂದಿದೆ ಎಂಬ ಜೋಕು ನಿನ್ನೆಯಿಡೀ ಆ ರಾಜ್ಯದಲ್ಲಿ ಹರಿದಾಡುತ್ತಿತ್ತು.
ರಾಹುಲ್ ಗಾಂಧಿ ಕೂಡ ಮಧ್ಯ ಪ್ರದೇಶದಲ್ಲಿ ಹೆಚ್ಚು ಕಾಣಿಸಿಕೊಳ್ಳಲೇ ಇಲ್ಲ. ಅವರಿಗೂ ಕಮಲ್ ನಾಥ್ ಗೂ ಅಷ್ಟಕ್ಕಷ್ಟೇ ಎಂಬುದು ಕಾಂಗ್ರೆಸ್ ನಲ್ಲಿ ಎಲ್ಲರಿಗೂ ಗೊತ್ತು. ರಾಹುಲ್ ಮಾತನ್ನು ಕಮಲ್ ನಾಥ್ ಲೆಕ್ಕಕ್ಕೇ ತೆಗೆದುಕೊಳ್ಳೋದಿಲ್ಲ ಎಂಬ ಅಸಮಾಧಾನವೂ ಪಕ್ಷದ ನಾಯಕರಲ್ಲಿತ್ತು.
ಕಮಲ್ ನಾಥ್ ರ ಅದೇ ಹಠದಿಂದಾಗಿ ಕಾಂಗ್ರೆಸ್ ಜ್ಯೋತಿರಾದಿತ್ಯ ಸಿಂಧಿಯಾ ತರದ ಯುವ ನಾಯಕನನ್ನು ಕಳೆದುಕೊಂಡಿತು. ಆದರೆ ಸಿಂಧಿಯಾ ಕೂಡ ಶಿವರಾಜ್ ರಂತೆ ತಾಳ್ಮೆ ಪ್ರದರ್ಶಿಸಲಿಲ್ಲ. ಅಧಿಕಾರದ ಲಾಲಸೆಯಿಂದಾಗಿ ಬಿಜೆಪಿ ಸೇರಿಕೊಂಡರು.
ಇನ್ನು ದಿಗ್ವಿಜಯ್ ಸಿಂಗ್ ಅವರಿಗೆ ಸೈದ್ಧಾಂತಿಕ ಬದ್ಧತೆ ಇದ್ದರೂ ಈ ಹೊತ್ತಿನ ಚುನಾವಣಾ ರಾಜಕೀಯದ ಆಳ ಅಗಲ ಅರಿಯುವಲ್ಲಿ ಅವರು ಸಂಪೂರ್ಣ ಫೇಲ್ ಆಗಿದ್ದಾರೆ. ಬಿಜೆಪಿಯ ಚುನಾವಣಾ ವ್ಯವಸ್ಥೆ ಅಂದ್ರೆ ಅದು ಸಾಮಾನ್ಯವಾದುದಲ್ಲ. ಅದನ್ನು ಅರಗಿಸಿಕೊಂಡು ಅದಕ್ಕಿಂತ ಒಂದು ಹೆಜ್ಜೆ ಮುಂದಿರಬೇಕು.
ಆದರೆ ವೃದ್ಧ ಕಮಲ್ ನಾಥ್ ಹಾಗು ದಿಗ್ವಿಜಯ್ ಸಿಂಗ್ ಗಾಗಲಿ ಹಾಗು ಅವರ ಮಕ್ಕಳು ನಕುಲ್ ನಾಥ್ , ಜೈವರ್ಧನ ಸಿಂಗ್ ಗಾಗಲಿ ಆ ಸಾಮರ್ಥ್ಯ ಇರಲೇ ಇಲ್ಲ. ಕಮಲ್ ನಾಥ್ ಹಾಗು ದಿಗ್ವಿಜಯ್ ಸಿಂಗ್ ರಾಜೀವ್ ಗಾಂಧಿ ಹೆಸರಲ್ಲಿ ಪಕ್ಷದಲ್ಲಿ ಗಟ್ಟಿಯಾಗಿದ್ದರೆ ಅವರ ಮಕ್ಕಳು ತಮ್ಮ ತಂದೆಯ ಹೆಸರಲ್ಲಿ ಟಿಕೇಟು ಹಾಗು ಪ್ರಭಾವ ಗಿಟ್ಟಿಸಿಕೊಂಡವರು.
ಇವರೆಲ್ಲರ ಪರಿಶ್ರಮದಿಂದ ಮಧ್ಯಪ್ರದೇಶದಲ್ಲಿ ಬಿಜೆಪಿ ಮತ್ತೊಮ್ಮೆ ಭಾರೀ ದೊಡ್ಡ ಜಯ ಗಳಿಸಿದೆ. ಕಮಲ್ ನಾಥ್ ಆ ರಾಜ್ಯದಲ್ಲಿ ಕಮಲವನ್ನು ಮತ್ತೆ ಅರಳಿಸಿದ್ದಾರೆ. ಅವರು ಈಗಲಾದರೂ ರಾಜಕೀಯದಿಂದ ನಿವೃತ್ತಿ ಪಡೆದು ಅದೇ ಬಾಬಾ ಭಾಗೇಶ್ವರ್ ನ ಕಾಲಡಿ ಹೋಗಿ ಕೂತುಕೊಳ್ಳೋದು ಅವರಿಗೂ, ಕಾಂಗ್ರೆಸ್ ಗೂ ಒಳ್ಳೆಯದು. ಅವರ ಜೊತೆಗೇ ಅವರ ಮಗನಿಂದಲೂ ಪಕ್ಷಕ್ಕೆ ಮುಕ್ತಿ ಕೊಡಿಸಬೇಕು ಕಾಂಗ್ರೆಸ್. ಇಲ್ಲದಿದ್ದರೆ ಆತ ಬಂದು ಮಧ್ಯ ಪ್ರದೇಶದ ಕಾಂಗ್ರೆಸಿಗರ ತಲೆ ಮೇಲೆ ಕೂತುಕೊಳ್ಳುತ್ತಾನೆ. ಬಿಜೆಪಿಗೆ ಇನ್ನಷ್ಟು ವರ್ಷಗಳ ಕಾಲ ಅಧಿಕಾರ ನಡೆಸಲು ಅವಕಾಶ ಮಾಡಿಕೊಡುತ್ತಾನೆ.