ಮುಸ್ಲಿಂ ವ್ಯಕ್ತಿಯನ್ನು ಸಿಲುಕಿಸಲು ಎರಡು ಬಾರಿ ಗೋ ಹತ್ಯೆ ಮಾಡಿಸಿದ ಬಜರಂಗದಳ ಅಧ್ಯಕ್ಷ ! |
Photo : thewire.com
ನಾವು ಗೋರಕ್ಷಕರು ಎಂದು ಹೇಳಿಕೊಳ್ಳುವ, ಆ ನೆಪದಲ್ಲಿಯೇ ಮುಸ್ಲಿಮರ ವಿರುದ್ಧ ದಾಳಿ, ಹಲ್ಲೆ ಎಸಗುವ, ಕಡೆಗೆ ಕೊಲೆಗೂ ಹೇಸದ ಸಂಘ ಪರಿವಾರದ ಬಜರಂಗಿಗಳು, ತಾವೆಂಥ ಹೀನ ಮನಃಸ್ಥಿತಿಯವರು ಎಂಬುದನ್ನು ತಾವೇ ತೋರಿಸಿಕೊಂಡುಬಿಟ್ಟಿದ್ದಾರೆ.
ದ್ವೇಷ ಹರಡಲು, ಮುಸ್ಲಿಮರ ವಿರುದ್ಧ ಜನರನ್ನು ಪ್ರಚೋದಿಸುವಂಥ ಸನ್ನಿವೇಶ ಸೃಷ್ಟಿಸಲು ಹೊರಟಿದ್ದವರು ತಾವು ಮಾಡಿದ್ದ ಪಾಪದ ಕೂಪದಲ್ಲಿ ತಾವೇ ಬಿದ್ದಿದ್ದಾರೆ. ಮತ್ತು ಈ ದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಇವರು ನಡೆಸುತ್ತಿರುವ ಅನಾಚಾರಗಳ ಹಿಂದಿನ ಕಟು ಸತ್ಯ ಏನಿರುತ್ತದೆ ಎಂಬುದು ಇದರಿಂದ ಬಟಾ ಬಯಲಾಗಿದೆ.
ಅದೊಂದು ಘಟನೆಯಲ್ಲಿ, ಹೇಗೆ ತಾವೇ ಗೋಹತ್ಯೆ ಮಾಡಿ ಬಜರಂಗದಳ ಮುಖಂಡರು ಅದನ್ನು ಮುಸ್ಲಿಮರ ತಲೆಗೆ ಕಟ್ಟಲು ಯತ್ನಿಸಿದರು ?
ಅದಕ್ಕೆ ಏನೇನು ಷಡ್ಯಂತ್ರ ರಚಿಸಲಾಯಿತು ? ಹೇಗೆ ಅವರೇ ಕೊಂದು ಅವರೇ ಪ್ರತಿಭಟನೆ ನಡೆಸಿದರು ? ಹೇಗೆ ಠಾಣಾಧಿಕಾರಿಯನ್ನೇ ವರ್ಗಾವಣೆ ಮಾಡಿಸಲು ಆ ದುಷ್ಕ್ರತ್ಯವನ್ನು ಬಳಸಿಕೊಳ್ಳಲಾಯಿತು ?
ಅದು ನಿಜಕ್ಕೂ ಒಂದು ಕರಾಳ ಸ್ಟೋರಿ.
ಸಂಚು ಮಾಡುವುದಕ್ಕಾಗಿಯೇ, ಗೋಹತ್ಯೆ ಮಾಡಿದ್ದ ಬಜರಂಗಿ ನಾಯಕರೇ ಅರೆಸ್ಟ್ ಆಗುವುದರೊಂದಿಗೆ ಅವರ ಅಸಲಿ ಬಣ್ಣ ಬಯಲಾಗಿದೆ.
ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ಎರಡು ವಾರಗಳಲ್ಲಿ ಎರಡು ಹಸುಗಳನ್ನು ಕೊಂದ ಆರೋಪದ ಮೇಲೆ ಬಜರಂಗದಳದ ಜಿಲ್ಲಾ ಮುಖ್ಯಸ್ಥ ಸುಮಿತ್ ವಿಷ್ಣೋಯಿ ಅಲಿಯಾಸ್ ಮೋನು 'ಬಜರಂಗಿ' ಮತ್ತು ಮೂವರು ಸಹಚರರನ್ನು ಬಂಧಿಸಲಾಗಿದೆ.
ಗೋಹತ್ಯೆ ಆರೋಪವನ್ನು ಮುಸ್ಲಿಂ ಯುವಕನ ತಲೆಗೆ ಕಟ್ಟಲೆಂದೇ ಹಾಗೆ ಮಾಡಲಾಗಿತ್ತು.
ಕಡೆಗೆ ಛಜಲತ್ ಪೊಲೀಸ್ ಸ್ಟೇಷನ್ನಿನ ಠಾಣಾಧಿಕಾರಿಯ ವಿರುದ್ಧ ಅದೇ ಘಟನೆಯನ್ನು ಬಳಸಲೂ ಹೊರಟಿದ್ದರು ಈ ಬಜರಂಗಿಗಳು.
ಆದರೆ, ಇಡೀ ಸನ್ನಿವೇಶವನ್ನು ತಿರುಚಿದ್ದವರ ಸಂಚು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಎರಡು ವಾರಗಳ ಅಂತರದಲ್ಲಿ ಎರಡು ಹಸುಗಳ ಹತ್ಯೆ ನಡೆದ ನಂತರ,
ಬಜರಂಗದಳದ ಜಿಲ್ಲಾ ಮುಖ್ಯಸ್ಥ ಸುಮಿತ್ ವಿಷ್ಣೋಯ್ ಜನವರಿ 30ರಂದು ಬೆಂಬಲಿಗರೊಂದಿಗೆ ಛಜಲತ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುತ್ತಾನೆ.
ಛಜಲತ್ ಪ್ರದೇಶದಲ್ಲಿ ಗೋಹತ್ಯೆ ಘಟನೆಗಳು ಹೆಚ್ಚುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳದ ಠಾಣಾಧಿಕಾರಿಯನ್ನು ಕೂಡಲೇ ಅಮಾನತು ಮಾಡಬೇಕೆಂದು, ಆತನೂ ಅತನ ಬಾಲಬಡುಕರೂ ಭಾರಿ ಅಬ್ಬರದಿಂದ ಆಗ್ರಹಿಸುತ್ತಾರೆ.
ಉದ್ವಿಗ್ನತೆ ಹೆಚ್ಚಿದಾಗ, ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಹೇಮರಾಜ್ ಮೀನಾ, ಎಸ್ಪಿ ನೇತೃತ್ವದಲ್ಲಿ ಉನ್ನತ ಮಟ್ಟದ ತಂಡ ರಚಿಸಿದರು.
ಘಟನೆಗಳನ್ನು ಪರಿಶೀಲಿಸಲು ವಿಚಕ್ಷಣಾ ದಳವನ್ನೂ ನಿಯೋಜಿಸಲಾಯಿತು. ಪೊಲೀಸರು ಅನುಮಾನಾಸ್ಪದ ಮೊಬೈಲ್ ಸಂಖ್ಯೆಗಳ ಮೂಲಕ ವಿಚಾರಣೆ ಶುರು ಮಾಡಿದರು.
ಆಗಲೇ ಇದರಲ್ಲೇನೂ ಪಿತೂರಿ ಇದೆ ಎಂಬುದರ ವಾಸನೆ ಪೊಲೀಸರ ಮೂಗಿಗೆ ಬಡಿದಿತ್ತು.
ಇದೆಲ್ಲದರ ಹಿಂದೆ ಪೂರ್ವಯೋಜಿತ ಪಿತೂರಿ ಇದೆ ಎಂಬ ಅನುಮಾನದ ಗುಂಟವೇ ಅವರ ತನಿಖೆ ಮುಂದುವರಿಯಿತು.
ಮೊದಲ ಘಟನೆ ಛಜಲತ್ ಪೊಲೀಸ್ ಠಾಣೆ ವ್ಯಾಪ್ತಿಯ ಕನ್ವರ್ ಪಥ್ ಬಳಿ ಸಂಭವಿಸಿತ್ತು.
ಜನವರಿ 16ರಂದು ಹಸುವಿನ ತಲೆ ಮತ್ತು ಚರ್ಮ ಪತ್ತೆಯಾಗಿ, ಆತಂಕಕ್ಕೆ ಕಾರಣವಾಗಿತ್ತು.
ಆದರೆ ಅದು ಪಕ್ಕಾ ಪ್ಲಾನ್ ಮಾಡಿ ರೂಪಿಸಲಾಗಿದ್ದ ಸಂಚಾಗಿತ್ತೆಂಬುದು ಪೊಲೀಸರಿಗೆ ತಿಳಿದುಹೋಯಿತು. ಹಸುವಿನ ಅಂಗಾಂಗಗಳನ್ನು ಬೇರೆಡೆಯಿಂದ ತಂದು ಕನ್ವರ್ ಪಥದಲ್ಲಿ ಹಾಕಲಾಗಿತ್ತು. ಧಾರ್ಮಿಕ ಭಾವನೆಗಳನ್ನು ಬಳಸಿಕೊಳ್ಳುವ ಉದ್ದೇಶ ಮತ್ತು ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳುವ ಚಾಣಾಕ್ಷತನ ಅದರಲ್ಲಿ ಇತ್ತು.
ಜನವರಿ 29ರಂದು ಚೆಟ್ರಾಮ್ಪುರ ಗ್ರಾಮದ ಕಾಡಿನಲ್ಲಿ ಮತ್ತೊಮ್ಮೆ ಹಸುವಿನ ಅಂಗಾಂಗಳು ಕಂಡುಬಂದಾಗ ಪರಿಸ್ಥಿತಿ ಇನ್ನಷ್ಟು ಸಂಕೀರ್ಣಗೊಂಡಿತ್ತು. ಅಲ್ಲಂತೂ, ಕೊಲ್ಲಲು ಬಳಸಲಾಗಿದ್ದ ಸಾಧನ ಮಾತ್ರವಲ್ಲದೆ, ಹಣ, ಫೋಟೋ, ಹೆಸರುಗಳು ಮತ್ತು ಮೊಬೈಲ್ ನಂಬರ್ ಇದ್ದ ಡೈರಿ ಇವೆಲ್ಲವೂ ಕಂಡುಬಂದಿದ್ದವು.
ಜನವರಿ 29ರಂದು ಸತ್ತ ಹಸುವಿನ ಅಂಗಾಂಗ ಪತ್ತೆಯಾದ ಸ್ಥಳದಲ್ಲಿ, ಛಜಲತ್ನ ಚೆಟ್ರಾಮ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಮಹಮೂದ್ಗೆ ಸೇರಿದ ಫೋಟೋ ಮತ್ತು ಮೊಬೈಲ್ ನಂಬರ್ ಪೊಲೀಸರಿಗೆ ಸಿಕ್ಕಿದ್ದವು. ವಿಚಾರಣೆಗಾಗಿ ಮಹಮೂದ್ನನ್ನು ಠಾಣೆಗೆ ಕರೆಸಿದಾಗ, ತಮ್ಮೊಡನೆ ತಮ್ಮ ಹಳ್ಳಿಯ ಮುಝಫರ್ ಹುಸೇನ್ ಎಂಬವರ ಮಗ ಶಹಾಬುದ್ದೀನ್ ಮನಸ್ತಾಪ ಹೊಂದಿರುವುದನ್ನು ಹೇಳಿದರು.
ಇತ್ತೀಚೆಗೆ ತೀರಿಕೊಂಡಿದ್ದ ಶಹಾಬುದ್ದೀನ್ ಸಹೋದರ ರುಕ್ಸಾದ್ ಸಾವಿಗೆ ಮಹಮೂದ್ ಮತ್ತು ಅವರ ಕುಟುಂಬವೇ ಕಾರಣ ಎಂಬುದು ಶಹಾಬುದ್ದೀನ್ ಭಾವನೆಯಾಗಿತ್ತು. ಶಹಾಬುದ್ದೀನ್ ಇತ್ತೀಚೆಗೆ ಮಹಮೂದ್ ಅವರ ಮೊಬೈಲ್ ನಂಬರನ್ನೂ ತಿಳಿದುಕೊಂಡಿದ್ದ. ಬೇಡದ ವಿಚಾರದಲ್ಲಿ ಸಿಲುಕಿಸದೆ ಬಿಡಲಾರೆ ಎಂದೂ ಹಿಂದೊಮ್ಮೆ ಆತ ಬೆದರಿಸಿದ್ದ.
ಮಹಮೂದ್ನ ವಿಚಾರಣೆ ಬಳಿಕ ಪೊಲೀಸರು ಶಹಾಬುದ್ದೀನ್ನನ್ನು ವಿಚಾರಣೆಗೆ ಒಳಪಡಿಸಿದರು. ಆತನ ಮೊಬೈಲ್ ಸಂಖ್ಯೆಯ ಕಾಲ್ ವಿವರಗಳನ್ನು ಪರಿಶೀಲಿಸಿದರು. ಆಗ ಬಹಿರಂಗವಾಗಿದ್ದೇ ಗೋಹತ್ಯೆ ಪ್ರಕರಣದ ಭಜರಂಗಿ ಕನೆಕ್ಷನ್ !
ಶಹಾಬುದ್ದೀನ್ ಬಜರಂಗದಳದ ಜಿಲ್ಲಾಧ್ಯಕ್ಷ ಸುಮಿತ್ ವಿಷ್ಣೋಯ್ ಜೊತೆ ಸತತ ಸಂಪರ್ಕದಲ್ಲಿದ್ದುದು ತಿಳಿಯಿತು. ತೀವ್ರ ವಿಚಾರಣೆಗೊಳಪಡಿಸಿದಾಗ, ನಡೆದ ಪಿತೂರಿ ಏನೆಂಬುದು ಬಯಲಾಯಿತು. ಈ ಘಟನೆಗಳು ಭಜರಂಗದಳದ ಜನ ಕೋಮುಬಣ್ಣ ಕೊಡಲೆಂದೇ ಮಾಡಿದ್ದ ದೊಡ್ಡ ಕುತಂತ್ರದ ಭಾಗವಾಗಿದ್ದವು ಎಂಬುದು ಒಂದೊಂದಾಗಿ ತನಿಖೆಯಲ್ಲಿ ಹೊರ ಬಂತು.
ಶಹಾಬುದ್ದೀನ್ ಮತ್ತು ಆತನ ಸಹೋದರನಿಗೆ ರಮಣ್ ಚೌಧರಿ ಎಂಬವನ ಮೂಲಕ ಸುಮಾರು 20 ದಿನಗಳ ಹಿಂದೆ ಸುಮಿತ್ ವಿಷ್ಣೋಯ್ ಮತ್ತು ರಾಜೀವ್ ಚೌಧರಿಯ ಪರಿಚಯವಾಗಿತ್ತು. ಗೋವಿನ ತಲೆ, ಚರ್ಮವನ್ನೆಲ್ಲ ಆ ನಿರ್ದಿಷ್ಟ ಜಾಗದಲ್ಲಿ ತಂದುಹಾಕಲು ಅವರೇ ಶಹಾಬುದ್ದೀನ್ ಗೆ ಹೇಳಿದ್ದರು.
ಆ ಮೂಲಕ, ಗೋಹತ್ಯೆ ಪ್ರಕರಣದ ನೆಪ ಮಾಡಿ ಪೊಲೀಸರ ಮೇಲೆ ಒತ್ತಡ ಹೇರಲು ಮತ್ತು ಮಹಮೂದ್ ಮತ್ತು ಆತನ ಸಹವರ್ತಿ ಅಜರ್ನನ್ನು ಜೈಲಿಗೆ ಕಳಿಸಲು ಸಂಚು ಮಾಡಲಾಗಿತ್ತು. ಹಸುವನ್ನು ಕೊಲ್ಲುವುದಕ್ಕಾಗಿ ರಾಜೀವ್ ಚೌಧರಿ, ಸಿಕ್ರಿ ನಿವಾಸಿ ನಯೀಮ್ ಎಂಬವನಿಗೆ ಹಣದ ಆಮಿಷವನ್ನೂ ಒಡ್ಡಿದ್ದ.
ಜನವರಿ 16ರಂದು ತನ್ನ ಸಹೋದರ ಜಮ್ಶೆದ್ , ನಯೀಮ್ ಜೊತೆಗೂಡಿ ಬೀಡಾಡಿ ಹಸುವನ್ನು ಕೊಂದಿದ್ದರ ಬಗ್ಗೆಯೂ ಶಹಾಬುದ್ದೀನ್ ಪೊಲೀಸರಿಗೆ ಮಾಹಿತಿ ನೀಡಿದ. ಹಸುವಿನ ತಲೆ ಮತ್ತು ಚರ್ಮವನ್ನು ತಾವೇ ತಂದು ಕನ್ವರ್ ಪಥದಲ್ಲಿ ಇರಿಸಿದ್ದರ ಬಗ್ಗೆಯೂ ಹೇಳಿದ.
ಆದರೆ ಆ ಘಟನೆ ಹೆಚ್ಚು ಗಮನ ಸೆಳೆಯಲಿಲ್ಲ. ಹೆಚ್ಚು ಚರ್ಚೆಯೂ ಆಗಲಿಲ್ಲ. ಪೊಲೀಸರು ಅದನ್ನು ಗಮನಿಸಲಿಲ್ಲ. ತಾವು ಯಾರ ವಿರುದ್ದ ಕ್ರಮ ಜರುಗಬೇಕು ಎಂದುಕೊಂಡಿದ್ದೆವೊ ಅದು ಆಗದ ಹಿನ್ನೆಲೆಯಲ್ಲಿ ಮತ್ತೆ ಅಂಥದೇ ಕೆಲಸ ಮಾಡಲು ಸುಮಿತ್ ಸೂಚನೆ ಕೊಟ್ಟ ವಿಚಾರವನ್ನೂ ತನಿಖೆಯ ವೇಳೆ ಶಹಾಬುದ್ದೀನ್ ಬಾಯ್ಬಿಟ್ಟಿದ್ದ.
ಮತ್ತೊಮ್ಮೆ ಅದೇ ಥರ ಮಾಡುವಂತೆ ಹೇಳಿದ ರಮಣ್ ಚೌಧರಿ, ಈ ಬಾರಿ ಪೊಲೀಸರ ಮೇಲೆ ಒತ್ತಡ ಹೇರುತ್ತೇವೆ ಎಂದಿದ್ದರ ಬಗ್ಗೆ ಶಹಾಬುದ್ದೀನ್ ಪೊಲೀಸರೆದುರು ಒಪ್ಪಿಕೊಂಡ. ಮೆಹಮೂದ್ ಮತ್ತು ಅಜರ್ ಹೆಸರನ್ನು ಡೈರಿಯಲ್ಲಿ ಇರಿಸಿ, ಗೋವಿನ ದೇಹದ ಅವಶೇಷಗಳ ಜಾಗದಲ್ಲಿ ಇಡುವಂತೆ ಶಹಾಬುದ್ದೀನ್ ಗೆ ಸುಮಿತ್ ವಿಷ್ಣೋಯ್ ಸೂಚಿಸಿದ್ದ.
ಈ ಕೃತ್ಯಕ್ಕಾಗಿ ತನ್ನ ಹಳ್ಳಿಯಲ್ಲಿನ ವಿಧವೆಯೊಬ್ಬಳ ಹಸುವನ್ನು ಕದಿಯಲಾಗಿತ್ತು ಎಂಬುದನ್ನೂ ಶಹಾಬುದ್ದೀನ್ ಹೇಳಿದ್ದಾನೆ. ಅದಾದ ಬಳಿಕ ಮಹಿಪಾಲ್ ಜಾತವ್ ಎಂಬಾತ ಗೋವನ್ನು ಕೊಲ್ಲುತ್ತಾನೆ. ಸುಮಿತ್ ವಿಷ್ಣೋಯ್, ರಮಣ್ ಮತ್ತು ರಾಜೀವ್ ಚೌಧರಿ ಸೂಚನೆಯಂತೆ ಫೇಸ್ಬುಕ್ನಿಂದ ತೆಗೆದ ಮಹಮೂದ್ ಫೊಟೊವನ್ನು ಬಳಸಿ,
ಅದನ್ನು ಡೈರಿಯೊಳಗಿಟ್ಟು, ಅನುಮಾನ ಬಾರದ ಹಾಗೆ ಹಣವನ್ನೂ ಸೇರಿಸಿ ನಿರ್ದಿಷ್ಟ ಜಾಗದಲ್ಲಿ ಇಡಲಾಗುತ್ತದೆ.
ಇಷ್ಟೆಲ್ಲ ನಾಟಕವಾಡಿದ ನಂತರ, ರಮಣ್ , ಸುಮಿತ್ ಮತ್ತು ರಾಜೀವ್ ಪೊಲೀಸರಿಗೆ ಮಾಹಿತಿ ನೀಡಿ ಪ್ರತಿಭಟನೆ ಶುರು ಮಾಡುತ್ತಾರೆ. ಎರಡೂ ಪ್ರಕರಣಗಳಲ್ಲಿನ ಗಮನಾರ್ಹ ಸಾಮ್ಯತೆಯನ್ನು ಗಮನಿಸಿದ ಪೊಲೀಸರಿಗೆ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆಯೇ ಅನುಮಾನ ಶುರುವಾಗಿತ್ತು.
ಆ ಅನುಮಾನದ ನೇರದಲ್ಲೇ ತನಿಖೆ ನಡೆಸಿದ ಪೊಲೀಸರು, ಆರೋಪಿಗಳಾದ ರಮಣ್ , ಸುಮಿತ್ ಮತ್ತು ರಾಜೀವ್ ಅವರ ಕಾಲ್ ವಿವರಗಳನ್ನು ಸಂಗ್ರಹಿಸಿದಾಗ, ಸಂಪೂರ್ಣ ಸಂಚು ಬಯಲಾಗಿತ್ತು.
ಗೋಹತ್ಯೆ ಘಟನೆಯ ಸಂಚಿನ ಈ ಪ್ರಕರಣದಲ್ಲಿ ಬಜರಂಗ ದಳ ಜಿಲ್ಲಾಧ್ಯಕ್ಷ ಸುಮಿತ್ ವಿಷ್ಣೋಯ್ ಅಲಿಯಾಸ್ ಮೋನು ಭಜರಂಗಿ, ರಮಣ್ ಚೌಧರಿ, ಶಹಾಬುದ್ದೀನ್ ಹಾಗು ಜಮ್ ಶೇದ್ ಈಗ ಅರೆಸ್ಟ್ ಆಗಿದ್ಧಾರೆ.
ತಲೆಮರೆಸಿಕೊಂಡಿರುವ ರಾಜೀವ್ ಚೌಧರಿ ಮತ್ತು ನಯೀಮ್ ರನ್ನು ಹಿಡಿದುಕೊಟ್ಟವರಿಗೆ ಬಹುಮಾನ ಘೋಷಿಸಲಾಗಿದೆ.
ಬಂಧಿತರು ಕ್ರಿಮಿನಲ್ ಇತಿಹಾಸ ಹೊಂದಿದ್ದಾರೆ.
ಭಜರಂಗಿ ಸುಮಿತ್ ವಿಷ್ಣೋಯಿ ಈ ಹಿಂದೆಯೂ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಬಂಧಿತನಾಗಿದ್ದ.
ಪೊಲೀಸರ ಸಕಾಲಿಕ ಎಚ್ಚರದಿಂದಾಗಿ ಮತ್ತು ಜಾಡು ತಪ್ಪದ ತನಿಖೆಯಿಂದಾಗಿ ಅಮಾಯಕರು ಬಲಿಪಶುಗಳಾಗುವುದು ಈ ಪ್ರಕರಣದಲ್ಲೇನೋ ತಪ್ಪಿದೆ. ಆದರೆ ಎಲ್ಲ ಸಂದರ್ಭಗಳೂ ಹೀಗೆಯೇ ಇರುವುದಿಲ್ಲವಲ್ಲ? ಬಯಲಾಗದೇ ಇರುವ ಪಿತೂರಿಗಳು ಅದೆಷ್ಟಿರಬಹುದು?
ಅದೆಷ್ಟು ಅಮಾಯಕರು ಇಂಥ ಕೋಮು ಗೂಂಡಾಗಳ ಸಂಚಿಗೆ ಬಲಿಯಾಗಿರಬಹುದು?
ಸ್ವತಃ ಪ್ರಧಾನಿ ಮೋದಿಯವರೇ " ಗೋ ರಕ್ಷಕರ ಹೆಸರಲ್ಲಿ ಅಂಗಡಿ ತೆರೆದು ಕೂತವರನ್ನು ನೋಡುವಾಗ ಸಿಟ್ಟು ಬರುತ್ತೆ " ಅಂತ ಹೇಳಿದ್ರು.
ಆದರೆ ಅವರು ಹಾಗೆ ಹೇಳಿದ ಮೇಲೆ ದೇಶದಲ್ಲಿ ಮತ್ತು ಅವರದೇ ಪಕ್ಷದ ಆಡಳಿತ ಇರುವ ರಾಜ್ಯಗಳಲ್ಲಿ ಗೋ ರಕ್ಷಕರ ಕಾಟ ವಿಪರೀತವಾಗಿ ಹೆಚ್ಚಿದೆ. ಹಾಗಾದರೆ ಪ್ರಧಾನಿಯವರು ಹೇಳಿದ ಮೇಲೂ ಇದೆಲ್ಲ ನಡೆಯುತ್ತಲೇ ಇದೆ ಅಂದ್ರೆ ಅದರ ಅರ್ಥ ಏನು ?
ಇದಕ್ಕೆ ಉತ್ತರಿಸುವವರು ಯಾರು ?