ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ : ಸರಕಾರದ ಘೋಷಣೆ
ಬಿಜೆಪಿಗೆ ಬಿಸಿತುಪ್ಪವಾದ ಸಿದ್ದರಾಮಯ್ಯ ಸರಕಾರದ ನಡೆ
ಸಾಮಾಜಿಕ ನ್ಯಾಯದ ಹರಿಕಾರ ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ.
ರಾಜ್ಯ ಸರ್ಕಾರ ಇಂಥದೊಂದು ಮಹತ್ವದ ಅಧಿಕೃತ ಘೋಷಣೆ ಮಾಡುವ ಮೂಲಕ, ತಾನು ನಂಬಿರುವ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಇನ್ನಷ್ಟು ಗಟ್ಟಿಗೊಳಿಸಿದೆ.
ಜಾತಿಭೇದವಿಲ್ಲದ, ವರ್ಗ ತಾರತಮ್ಯವಿಲ್ಲದ, ಲಿಂಗ ತಾರತಮ್ಯವಿಲ್ಲದ ಸಮಾಜವನ್ನು ರೂಪಿಸುವ ಕೆಲಸ ಬಸವಣ್ಣನವರ ನೇತೃತ್ವದಲ್ಲಿ 12ನೇ ಶತಮಾನದಲ್ಲೇ ನಡೆಯಿತು.
ಅದೇ ತತ್ವಗಳನ್ನೇ ನಮ್ಮ ಸಂವಿಧಾನ ಕೂಡ ಎತ್ತಿ ಹಿಡಿದಿದೆ.
ಕನ್ನಡದ ನೆಲದಲ್ಲಿ ಅನುಭವ ಮಂಟಪದ ಮೂಲಕ ಆದ ವೈಚಾರಿಕ ಮತ್ತು ಸಾಮಾಜಿಕ ಕ್ರಾಂತಿ ಇವತ್ತಿಗೂ ಒಂದು ಆದರ್ಶದಂತೆ, ಸಾಧ್ಯತೆಯಂತೆ ಕಾಣಿಸುತ್ತದೆ.
ಅಂಥ ಮಹತ್ವವುಳ್ಳ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ರಾಜ್ಯ ಸರ್ಕಾರ ಘೋಷಣೆ ಮಾಡುವ ಮೂಲಕ ಬಸವಣ್ಣನವರ ತತ್ವಗಳನ್ನು ಪ್ರಚುರಪಡಿಸುವ ಕೆಲಸವೂ ಆಗಲಿದೆ.
ಸಿಎಂ ಸಿದ್ದರಾಮಯ್ಯ ಕೂಡ ಆ ಮಾತನ್ನು ಹೇಳಿದ್ದಾರೆ.
ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಸರ್ಕಾರದ ಪರವಾಗಿ ಘೋಷಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಿವರಾತ್ರಿ ದೇಶಿಕೇಂದ್ರ ಮಠಾಧೀಶರ ನೇತೃತ್ವದಲ್ಲಿ ನಾಡಿನ ವಿವಿಧ ಲಿಂಗಾಯತ ಮಠಗಳ ಸ್ವಾಮೀಜಿಗಳ ನಿಯೋಗ ಮನವಿ ಮಾಡಿತ್ತು.
ಅದರ ಬೆನ್ನಲ್ಲೇ ಸಚಿವ ಪ್ರಿಯಾಂಕ್ ಖರ್ಗೆ ಸಿಎಂಗೆ ಪತ್ರ ಬರೆದಿದ್ದರು.
ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಭಾರತ ದೇಶದಲ್ಲಿ ಮೊದಲ ಬಾರಿಗೆ ಪರಿಚಯಿಸಿದ ಗುರು ಬಸವಣ್ಣನವರು ಅಸ್ಪೃಶ್ಯತೆ ವಿರುದ್ಧ ಚಳುವಳಿ ರೂಪಿಸಿ ದೀನ, ದಲಿತ, ಶೋಷಿತ ಸಮಾಜದ ಸಮಾನತೆಗೆ ಧ್ವನಿ ಎತ್ತಿದ ಇತಿಹಾಸದ ಮೊದಲ ನಾಯಕ.
ಅವರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿ ಘೋಷಣೆ ಮಾಡಬೇಕು ಎಂದು ಮನವಿ ಮಾಡಿದ್ದರು.
ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಈಗ ಈ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
ಈ ತೀರ್ಮಾನ ತಮಗೆ ಅತೀವ ತೃಪ್ತಿ ತಂದಿರುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಕೆಲವು ವಿಚಾರಗಳನ್ನು ಗಮನಿಸಬೇಕು.
1. ಇದು ಕೇವಲ ಘೋಷಣೆ ಅಲ್ಲ, ಬಸವ ತತ್ವದ ಮೇಲಿರುವ ನಮ್ಮ ನಂಬಿಕೆ ಮತ್ತು ಬದ್ದತೆ.
2. ನಾಡಿನ ಲಿಂಗಾಯತ ಮಠಗಳ ಸ್ವಾಮಿಗಳು ನನ್ನ ಬಳಿ ಬಂದು ಮನವಿ ಮಾಡಿದ್ದರು.
ಇದು ವೈಯಕ್ತಿಕವಾಗಿ ನನ್ನ ಅಪೇಕ್ಷೆಯೂ ಆಗಿತ್ತು. ಸ್ವಾಮಿಗಳ ಈ ಬೇಡಿಕೆಯನ್ನು ಈಡೇರಿಸಿದ ತೃಪ್ತಿ ನಮ್ಮ ಸರ್ಕಾರಕ್ಕೆ ಇದೆ.
3. ವೈಯಕ್ತಿಕವಾಗಿ ಮತ್ತು ರಾಜಕೀಯವಾಗಿ ಬಸವಣ್ಣ ನನ್ನ ವೈಚಾರಿಕ ಗುರು.
ಬಸವ ಜಯಂತಿಯ ದಿನವೇ ನಾನು ಮೊದಲ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದೆ.
4. ಬಸವಣ್ಣನವರು, ರಾಜಿ ಇಲ್ಲದ ಬದ್ಧತೆ, ಪ್ರಶ್ನಾತೀತವಾದ ಜನಪರ ಕಾಳಜಿ ಮೂಲಕ ಮಾಡಿದ ಪ್ರಯತ್ನ-ಪ್ರಯೋಗಗಳು ಪ್ರಪಂಚದ ಎಲ್ಲ ಆಡಳಿತಗಾರರ ಆದರ್ಶವೆಂದು ನಾನು ನಂಬಿದ್ದೇನೆ.
5. ಕಾಯಕ ಮತ್ತು ದಾಸೋಹ ನನ್ನ ಇಷ್ಟದ ಬಸವಣ್ಣನನವರ ತತ್ವದ ಮೂಲಧಾತುಗಳು. ಕಾಯಕ ಎಂದರೆ ಉತ್ಪಾದನೆ, ದಾಸೋಹ ಎಂದರೆ ವಿತರಣೆ. ಸಂಪತ್ತಿನ ಉತ್ಪಾದನೆಯ ಶಕ್ತಿ ಎಲ್ಲರದ್ದಾಗಬೇಕು, ಅದರ ವಿತರಣೆ ಸಮನಾಗಿ ನಡೆಯಬೇಕು ಎಂದು ಬಸವಣ್ಣನವರ ಆಶಯವಾಗಿತ್ತು.
6. ಅಣ್ಣನ ಅನ್ನದಾಸೋಹದ ಸಂದೇಶಕ್ಕೆ ಅನುಗುಣವಾಗಿ ಮುಖ್ಯಮಂತ್ರಿಯಾದ ಮರುಗಳಿಗೆಯಲ್ಲಿಯೇ ಅನ್ನಭಾಗ್ಯ’ಯೋಜನೆಯನ್ನು ಜಾರಿಗೊಳಿಸಿದೆ. ಈ ಮೂಲಕ ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಸಂಕಲ್ಪ ಕೈಗೊಂಡೆ.
7. ವಿದ್ಯಾರ್ಥಿಗಳಿಗೆ ಬಿಸಿಯೂಟ, ಕ್ಷೀರಭಾಗ್ಯದ ಮೂಲಕ ಹಾಲು, ಇಂದಿರಾ ಕ್ಯಾಂಟೀನ್, ಗರ್ಭಿಣಿ ಮತ್ತು ಬಾಣಂತಿಯರಿಗಾಗಿ ಮಾತೃಪೂರ್ಣ ಯೋಜನೆಗಳು ಬಸವಣ್ಣನವರ ಅನ್ನದಾಸೋಹದ ಚಿಂತನೆಯಿಂದಲೇ ಪ್ರೇರಿತವಾದುದು.
8. ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅವಕಾಶಗಳು ಸಿಗಬೇಕು ಎಂದು ಬಸವಣ್ಣ ಬಯಸಿದ್ದರು. ನಮ್ಮ ಸರ್ಕಾರದ ಯೋಜನೆಗಳತ್ತ ಕಣ್ಣು ಹಾಯಿಸಿದರೆ ಬಸವಣ್ಣನ ಆಶಯಗಳ ಪ್ರಭಾವ ಪ್ರತಿಯೋಜನೆಯಲ್ಲಿಯೂ ಕಾಣಬಹುದು.
9. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆಯನ್ನಷ್ಟೇ ಮಾಡಿ ನಾವು ವಿರಮಿಸುವುದಿಲ್ಲ. ಬಸವ ತತ್ವವನ್ನು ಮನೆಮನೆಗೆ ತಲುಪಿಸುವ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತರುತ್ತೇವೆ. ಸಮಸಮಾಜ ನಿರ್ಮಾಣದ ಬಗ್ಗೆ ಬಸವಣ್ಣ ಕಂಡ ಕನಸನ್ನು ಸಾಕಾರಗೊಳಿಸಲು ಎಲ್ಲರ ಸಹಕಾರ ಇರಲಿ.
ಖುಷಿಪಡುವ ವಿಚಾರವೆಂದರೆ,
ಸಿದ್ದರಾಮಯ್ಯ ಅವರು ವೈಯಕ್ತಿಕವಾಗಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಅಳವಡಿಸಿಕೊಂಡು ತಮ್ಮ ರಾಜಕೀಯ ನಡೆಯನ್ನು ನಿರ್ಧರಿಸುವವರು.
ಅವರ ನೇತೃತ್ವದ ಸರ್ಕಾರ ಮೊದಲ ಗಮನ ಕೊಟ್ಟಿರುವುದೇ ಬಡವರ ಕಡೆಗೆ, ಹಸಿದವರ ಕಡೆಗೆ.
ಅವರ ಪರಿಕಲ್ಪನೆಯ ಅನ್ನಭಾಗ್ಯ ಯೋಜನೆ, ಕರ್ನಾಟಕದ ಯಾರೊಬ್ಬರೂ ಹಸಿದು ಮಲಗಬಾರದು ಎಂಬ ಸದಾಶಯದ್ದು.
ಸಿದ್ದರಾಮಯ್ಯನವರ ಸಮಾಜವಾದಿ ಹಿನ್ನೆಲೆಯ ಮನಸ್ಸು ಮತ್ತು ಆಡಳಿತದಲ್ಲಿ ಅವರ ಧೋರಣೆ ಎಷ್ಟು ಜನಪರವಾದುದು ಎಂಬುದಕ್ಕೆ ಅನ್ನಭಾಗ್ಯ ಸೇರಿದಂತೆ ಅವರು ತಂದಿರುವ ಹಲವು ಯೋಜನೆಗಳೇ ಸಾಕ್ಷಿ.
ಹಾಗಾಗಿ ಅವರ ಸರ್ಕಾರ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದರಲ್ಲಿ ಡಾಂಭಿಕತೆ ಖಂಡಿತ ಇಲ್ಲ.
ಅದು ಸಿದ್ಧರಾಮಯ್ಯನವರ ಪ್ರಾಮಾಣಿಕ ಕಳಕಳಿಯಿಂದ ಬಂದಿರುವ ಘೋಷಣೆ ಎಂಬುದು ನಿಚ್ಚಳ.
ಅವರು ಹೇಳಿರುವಂತೆ,
ಮೊದಲ ಬಾರಿಗೆ ಸಿಎಂ ಆದಾಗ ಬಸವಣ್ಣನವರ ಜಯಂತಿಯಂದೇ ಪ್ರಮಾಣವಚನ ಸ್ವೀಕರಿಸಿದ್ದು ಕಾಕತಾಳೀಯವಲ್ಲ, ಉದ್ದೇಶಪೂರ್ವಕ.
ಆ ದಿನ ಬಸವಣ್ಣನವರ ಚಿಂತನೆಗಳ ಹಾದಿಯಲ್ಲಿ ನಡೆಯುತ್ತೇನೆ ಎಂದು ನನ್ನ ಮನಸ್ಸಿನೊಳಗೆ ಪ್ರಮಾಣ ಮಾಡಿದ್ದೆ.
ಅದರಂತೆ ಬಸವಣ್ಣನವರ ತತ್ವದ ದಾರಿಯಲ್ಲಿಯೇ ನಮ್ಮ ಸರ್ಕಾರ ಈಗಲೂ ಸಾಗುತ್ತಿದೆ ಎಂದಿದ್ದಾರೆ ಅವರು.
ಈ ಜಾಗೃತಿ ತಮ್ಮ ಸರ್ಕಾರದ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಇರಬೇಕೆಂಬ ಉದ್ದೇಶದಿಂದಲೇ ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಕಡ್ಡಾಯವಾಗಿ ಹಾಕಬೇಕೆಂಬ ಆದೇಶವನ್ನೂ ಮಾಡಿದ್ದಾರೆ.
ಕನ್ನಡ ಭಾಷೆಯ ಬಗೆಗಿನ ತಮ್ಮ ಸರ್ಕಾರದ ಬದ್ಧತೆಗೂ ಬಸವಣ್ಣನೇ ಪ್ರೇರಕ ಶಕ್ತಿ ಎಂದಿದ್ಧಾರೆ ಸಿದ್ದರಾಮಯ್ಯನವರು.
ಬಸವಣ್ಣನವರು ಕನ್ನಡವನ್ನು ಅಂದಿನ ಧರ್ಮದ ಭಾಷೆಯಾಗಿ, ವಿಚಾರದ ಭಾಷೆಯಾಗಿ, ಸಂವಹನದ ಭಾಷೆಯಾಗಿ ಬಳಸಿಕೊಳ್ಳುವ ಮೂಲಕ ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಬೆಲೆ ಕಟ್ಟಲಾರದ್ದು. ಹಾಗೆ ನೋಡಿದರೆ ಕನ್ನಡ ಮಾಧ್ಯಮ ಪರಿಣಾಮಕಾರಿಯಾಗಿ ಜಾರಿಗೆ ಬಂದದ್ದೇ ಹನ್ನೆರಡನೇ ಶತಮಾನದಲ್ಲಿ ಎನ್ನುವುದು ಆಶ್ಚರ್ಯದ ಸಂಗತಿಯಾದರೂ ವಾಸ್ತವ ಎಂಬ ಅವರ ಮಾತು ಬಹಳ ಮಹತ್ವದ್ದು.
ಇನ್ನು, ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಸಿದ್ದರಾಮಯ್ಯ ಸರ್ಕಾರ ಘೋಷಿಸಿರುವುದು ರಾಜಕೀಯವಾದುದಕ್ಕಿಂತ ಹೆಚ್ಚಾಗಿ ತಾತ್ವಿಕ ಗೌರವವಾಗಿ ವ್ಯಕ್ತವಾಗಿರುವಂಥದ್ದು.
ಆದರೆ ಅದಕ್ಕೆ ತಾನೇ ತಾನಾಗಿ ರಾಜಕೀಯ ಆಯಾಮವೊಂದು ಒದಗುವುದನ್ನು ಇವತ್ತಿನ ಸಂದರ್ಭದಲ್ಲಿ ನಿರಾಕರಿಸುವುದಕ್ಕೆ ಆಗುವುದಿಲ್ಲ.
ರಾಜಕೀಯವಾಗಿ ಈ ಘೋಷಣೆಯ ಪರಿಣಾಮಗಳು ಏನಿರಬಹುದು ಹಾಗಾದರೆ?
ಬಿಜೆಪಿ ಸರ್ಕಾರ ಬೆಂಗಳೂರಿನ ಏರ್ಪೋರ್ಟ್ನಲ್ಲಿ ಕೆಂಪೇಗೌಡ ಪ್ರತಿಮೆಯನ್ನು ಮೋದಿಯವರನ್ನು ಕರೆಸಿ ಅನಾವರಣ ಮಾಡಿದಾಗ ಬಿಜೆಪಿ ರಾಜಕೀಯ ಉದ್ದೇಶವನ್ನೇ ಹೊಂದಿತ್ತು.
ಉರಿಗೌಡ, ನಂಜೇಗೌಡ ಎಂಬವರ ಚರಿತ್ರೆಯಲ್ಲೆಲ್ಲೂ ಇದ್ದಿರದ ಕಥೆ ಹೇಳುವಾಗ ಅದಕ್ಕೆ ಬಹಳ ಕುತ್ಸಿತ ರಾಜಕೀಯ ಉದ್ದೇಶವೇ ಇತ್ತು.
ಆದರೆ, ಬಸವಣ್ಣನವರನ್ನು ಒಂದು ಆದರ್ಶದಂತೆ ಪರಿಭಾವಿಸುವ ಮತ್ತು ಸಾಮಾಜಿಕ ನ್ಯಾಯದ ಕುರಿತ ನಂಬಿಕೆಯನ್ನು ಇನ್ನಷ್ಟು ದೃಢಗೊಳಿಸುವುದರ ಭಾಗವಾಗಿ ಸಿದ್ದರಾಮಯ್ಯ ಸರ್ಕಾರ ಈ ಘೋಷಣೆ ಮಾಡಿರುವುದು ರಾಜಕೀಯ ಉದ್ದೇಶದಿಂದ ಅಲ್ಲ ಎನ್ನುವುದನ್ನು ಹೇಳಲೇಬೇಕು.
ಅಂಥದೊಂದು ಒತ್ತಾಯ ಲಿಂಗಾಯತ ಮಠಗಳಿಂದಲೇ ಇತ್ತು.
ಮತ್ತದು ಸಿದ್ದರಾಮಯ್ಯನವರ ಇಚ್ಛೆಯೂ ಆಗಿತ್ತು.
ಅದು ಈಗ ಈ ಘೋಷಣೆ ಮೂಲಕ ಸಾಕಾರಗೊಂಡಿದೆ.
ಆದರೆ, ಲೋಕಸಭಾ ಚುನಾವಣೆ ಎದುರಲ್ಲಿ ಇರುವ ಹೊತ್ತಿನಲ್ಲಿ ಸಹಜವಾಗಿಯೇ ಈ ನಿರ್ಧಾರ ಕಾಂಗ್ರೆಸ್ಗೆ ರಾಜಕೀಯವಾಗಿ ಲಾಭ ತರಬಹುದು ಎಂಬ ಲೆಕ್ಕಾಚಾರಗಳೂ ಶುರುವಾಗದೇ ಇರುವುದಿಲ್ಲ.
ಸ್ವಾಮೀಜಿಗಳ ಬೇಡಿಕೆ ಈಡೇರಿಸಿದ ತೃಪ್ತಿಯಿದೆ ಎಂದು ಹೇಳುವಾಗಲೇ ಸಿದ್ದರಾಮಯ್ಯನವರು, ಈ ಎಲ್ಲ ಸ್ವಾಮೀಜಿಗಳ ಆಶೀರ್ವಾದ ನಮ್ಮ ಸರ್ಕಾರದ ಮೇಲೆ ಇರಲಿ ಎಂದು ಕೇಳಿಕೊಂಡಿದ್ದಾರೆ.
ಇದೇ ವೇಳೆ ಅವರು, ಲಿಂಗಾಯತ ಮಠಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಅನ್ನದಾಸೋಹ ಮತ್ತು ಜ್ಞಾನದಾಸೋಹದ ಮೂಲಕ ರಾಜ್ಯದ ಲಿಂಗಾಯತ ಮಠಗಳು ನಾಡಿನ ಸರ್ವಾಂಗೀಣ ಏಳಿಗೆಗೆ ಶ್ರಮಿಸುತ್ತಿರುವುದನ್ನು ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.
ಬಡತನ ಮತ್ತು ಅಜ್ಞಾನದ ನಿವಾರಣೆಯಲ್ಲಿ ಈ ಮಠಗಳು ವಿಶೇಷ ಪಾತ್ರವಹಿಸಿವೆ. ಶಿಕ್ಷಣ ಪ್ರಸಾರಕ್ಕೆ ಧಾರ್ಮಿಕ ಮಠಮಾನ್ಯಗಳು ನೀಡಿರುವ ಕೊಡುಗೆ ಅಪಾರವಾದುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಒಂದು ಮಾತನ್ನಂತೂ ಹೇಳಲೇಬೇಕು.
ಕಾಂಗ್ರೆಸ್ ಸರ್ಕಾರದ ಎಲ್ಲ ಒಳ್ಳೆಯ ಕೆಲಸಗಳನ್ನೂ ಬೇಕೆಂತಲೇ ಟೀಕಿಸುವ, ಏನಾದರೊಂದು ಅಪಸ್ವರ ತೆಗೆದು, ಅಪಪ್ರಚಾರಕ್ಕೆ ಸದಾ ಯತ್ನಿಸುತ್ತಲೇ ಇರುವ ಬಿಜೆಪಿಗೆ ಮಾತ್ರ ಈಗ ಕೈಕೈ ಹೊಸಕಿಕೊಳ್ಳುವ ಹಾಗಾಗಿರಲೇಬೇಕು.
ಮತ್ತು ಈಗ ಈ ಘೋಷಣೆಯಿಂದಾಗಿ ಬಿಜೆಪಿಗೇ ದೊಡ್ಡ ಮಟ್ಟದಲ್ಲಿ ತಳಮಳ, ಆತಂಕ ಆಗದೇ ಇಲ್ಲ.
ಚುನಾವಣೆ ಬಂದಾಗೆಲ್ಲ ಪೌರಾಣಿಕ, ಚಾರಿತ್ರಿಕ ವ್ಯಕ್ತಿಗಳನ್ನು ಹೈಜಾಕ್ ಮಾಡುವ ಮತ್ತದರ ಲಾಭವನ್ನು ರಾಜಕೀಯವಾಗಿ ಮಾಡಿಕೊಳ್ಳುವ ಬಿಜೆಪಿ ಈಗ ರಾಜ್ಯ ಸರ್ಕಾರದ ಇಂಥದೊಂದು ಘೋಷಣೆಯಿಂದಾಗಿ ತಕರಾರು ತೆಗೆಯಲಾರದೆ ಚಡಪಡಿಸುವ ಕಷ್ಟಕ್ಕಂತೂ ಸಿಲುಕಿದೆ.