ಬಸವಣ್ಣನವರ ಕುಟುಂಬ ಪರಿಕಲ್ಪನೆ
ಮನುಸ್ಮತಿಯ ಪ್ರಕಾರ ಬ್ರಾಹ್ಮಣ ಕನ್ಯೆಯನ್ನು ಕೆಳಜಾತಿಯ ವರ ಮದುವೆಯಾಗುವುದು ವಿಲೋಮ ವಿವಾಹ. ಇಂತಹ ವಿವಾಹಗಳು ಮನುಧರ್ಮ ಬಾಹಿರ. ಆದರೆ ಇಂತಹ ಮನುಧರ್ಮ ಬಾಹಿರ ಕುಟುಂಬಗಳ ಸೃಷ್ಟಿಯಾಗಬೇಕೆಂಬುದೇ ಬಸವಣ್ಣನವರ ಧರ್ಮದ ಗುರಿ. ಆ ಮೂಲಕ ಮಾನವ ಸಮಾಜದಲ್ಲಿ ಎಲ್ಲ ರೀತಿಯಿಂದಲೂ ಸಮಾನತೆ ಸಾಧಿಸಬೇಕೆಂಬುದೇ ಆಶಯ.
ಬಸವಣ್ಣನವರ ಕುಟುಂಬ ಪರಿಕಲ್ಪನೆ ಮನೆಯಿಂದ ಮಹಾಮನೆಯವರೆಗೆ, ಅಂದರೆ ವ್ಯಷ್ಟಿಯಿಂದ ಸಮಷ್ಟಿಯವರೆಗೆ ವಿಸ್ತರಿಸಿದೆ. ಬಸವ ಧರ್ಮ ನಿಜವಾದ ಅರ್ಥದಲ್ಲಿ ಕುಟುಂಬ ಧರ್ಮವೇ ಆಗಿದೆ.
ಈ ಜೀವನ್ಮುಖಿ ಧರ್ಮದಲ್ಲಿ ಸಂಸಾರ ಪ್ರಮುಖ ಪಾತ್ರ ವಹಿಸುತ್ತದೆ. ಇದು ಮಹಾಮನೆಯ ಸಂಸಾರ. ಈ ವಿಶ್ವವೆಂಬ ಮಹಾಮನೆಯಲ್ಲಿ ಸಕಲ ಜೀವಾತ್ಮರಿದ್ದಾರೆ. ಇಲ್ಲಿ ಪರಮಾತ್ಮ ಪತಿ, ಜೀವಾತ್ಮ ಸತಿ. ಪರಮಾತ್ಮ ಲಿಂಗ, ಜೀವಾತ್ಮರಾದ ನಾವು ಅಂಗ. ಜೀವಾತ್ಮನೊಳಗೆ ಪರಮಾತ್ಮ. ಜೀವಾತ್ಮ ಮತ್ತು ಪರಮಾತ್ಮರ ಸಾಮರಸ್ಯವೇ ಲಿಂಗಾಂಗ ಸಾಮರಸ್ಯ.
ಈ ತತ್ವವೇ ಸಂಸಾರವೆಂಬ ಕುಟುಂಬತತ್ವ. ಇದುವೇ ಬಸವತತ್ವ. ಈ ಲಿಂಗತತ್ತ್ವವನ್ನು ಮಾನವ ಸಮಾಜದಲ್ಲಿ ಅಳವಡಿಸುವುದೇ ಬಸವಣ್ಣನವರ ಮಹೋದ್ದೇಶವಾಗಿತ್ತು.
ಜೀವಾತ್ಮ ಪರಮಾತ್ಮರ ಸಮ್ಮಿಲನದಿಂದ ಕೂಡಿದ ಇಡೀ ಮಾನವಕುಲವೇ ಒಂದು ಕುಟುಂಬವೆಂದು ಪರಿಗಣಿಸಿದಾಗ, ಲಿಂಗಭೇದ, ಅಸ್ಪಶ್ಯತೆ, ಜಾತಿಭೇದ, ವರ್ಣಭೇದ ಮತ್ತು ವರ್ಗಭೇದಗಳು ಸಹಜವಾಗಿಯೇ ನಿರ್ನಾಮವಾಗುವವು. ಇಂತಹ ವಿಶ್ವಮಾನವ ಸಮಾಜಕ್ಕೆ ‘ಶರಣಸಂಕುಲ’ ಎಂದು ಕರೆಯುವರು.
ಶರಣ ಸಂಕುಲದಲ್ಲಿ ಯಾರೂ ಬಡವರಿಲ್ಲ, ಯಾರೂ ಶ್ರೀಮಂತರಿಲ್ಲ. ಎಲ್ಲರೂ ಹೆಚ್ಚಿನದನ್ನು ಶಿವನಿಧಿ ಎಂಬ ಸಾಮಾಜಿಕ ನಿಧಿಗೆ ಅರ್ಪಿಸಿ ಉಳಿದದ್ದನ್ನು ದೇವರ ಪ್ರಸಾದವೆಂದು ಸ್ವೀಕರಿಸಿ ಇಂದಿಗೆ ನಾಳಿಗೆ ಎನ್ನದೆ ಅಂದಂದಿಗೆ ಬದುಕುತ್ತ ಕಾಯಕ ಸಿದ್ಧಾಂತವನ್ನು ಎತ್ತಿಹಿಡಿಯುವವರಾಗಿದ್ದರು. ದಾಸೋಹ ಭಾವದಿಂದ ಒಬ್ಬರು ಇನ್ನೊಬ್ಬರ ಬಗ್ಗೆ ಕಾಳಜಿ ಮಾಡುವವರಾಗಿದ್ದರು.
ಭಕ್ತಿ ಸಂಬಂಧ:
ಮಾನವರೆಲ್ಲ ಒಂದೇ ಎನ್ನುವ ಶರಣ ಸಂಕುಲದ ಕುಟುಂಬ ವ್ಯವಸ್ಥೆ ರಕ್ತ ಸಂಬಂಧದಿಂದ ಕೂಡಿರಲಿಲ್ಲ, ಅದು ಭಕ್ತಿಸಂಬಂಧ ದಿಂದ ಕೂಡಿತ್ತು. ಇಲ್ಲಿ ಎಲ್ಲರೂ ಭಕ್ತಿ ಸಂಬಂಧದ ಅಣ್ಣ, ಅಕ್ಕ, ಅಪ್ಪ, ಬೊಪ್ಪ, ಅಬ್ಬೆ, ಮುತ್ತಬ್ಬೆ ಮುಂತಾದವರು ಆಗಿದ್ದಾರೆ.
ಮನುಧರ್ಮದಲ್ಲಿ ಗಂಡ ಹೆಂಡಿರ ಮಧ್ಯೆ ಅನುಚರ ಭಾವವಿದೆ. ಸತಿಗೆ ಪತಿಯೇ ಪರದೈವ ಎಂಬ ಭ್ರಮೆಯನ್ನು ಮೂಡಿಸಲಾಗಿದೆ. ಗಂಡನ ಯಾವ ತಪ್ಪನ್ನೂ ಪ್ರಶ್ನಿಸುವ ಹಾಗಿಲ್ಲ. ಆತ ನೀಚ ಮತ್ತು ವಿಷಯಲಂಪಟ ಆಗಿದ್ದರೂ ಪತಿಸೇವೆಯೇ ಆಕೆಯ ಧರ್ಮ. ಅನುಚರ ಭಾವದಿಂದ ಗುಲಾಮಳಂತೆ ಬದುಕುತ್ತ ‘ತಾನು ಎಡ, ಗಂಡ ಬಲ’ ಎಂಬ ಭ್ರಮೆಗೆ ಒಳಗಾಗಿದ್ದಳು. ಗಂಡ ಮುಂದೆ ಮುಂದೆ ತಾನು ಹಿಂದೆ ಹಿಂದೆ ಎಂಬ ಸೇವಾಭಾವದಿಂದ ಬದುಕುವುದೇ ಆಕೆಯ ಜೀವನಕ್ರಮವಾಗಿತ್ತು. ಆದರೆ ಶರಣ ಧರ್ಮದಲ್ಲಿ ಬಸವಣ್ಣನವರು ಸತಿಪತಿಯರ ಮಧ್ಯೆ ಸಹಚರ ಭಾವವನ್ನು ರೂಢಿಗತ ಮಾಡಿದರು.
ಪ್ರಶ್ನಿಸುವ ಹಕ್ಕು
ಶರಣಸಂಕುಲದಲ್ಲಿ ಸತಿಪತಿ ಸಂಬಂಧ ನಿಜದ ನಿಲುವಿನ ಮೇಲೆ ನಿಂತಿತ್ತು. ಸತಿಯು ತನಗೆ ಸರಿ ಅನಿಸಿದ್ದನ್ನು ಹೇಳುವ ಮೂಲಕ ಪತಿಯನ್ನು ತಿದ್ದುವ ಅವಕಾಶವನ್ನು ಪಡೆದಳು. ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಮೊದಲ ಬಾರಿಗೆ ಮಹಿಳೆ ತನ್ನ ಪುರುಷನನ್ನು ಪ್ರಶ್ನಿಸುವ ಹಕ್ಕನ್ನು ಪಡೆದಳು. ವಚನ ಸಾಹಿತ್ಯದಲ್ಲಿ ಮಾತ್ರ ಇಂಥ ಪ್ರಸಂಗಗಳು ಕಾಣ ಸಿಗುತ್ತವೆ.
‘‘ಆಸೆಯೆಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಾ’’ ಎಂದು ಆಯ್ದಕ್ಕಿ ಲಕ್ಕಮ್ಮ, ಹೆಚ್ಚಿನ ಅಕ್ಕಿಯನ್ನು ಆಯ್ದು ತಂದ ಗಂಡ ಆಯ್ದಕ್ಕಿ ಮಾರಯ್ಯನವರನ್ನು ಪ್ರಶ್ನಿಸುತ್ತಾಳೆ.
‘‘ಸಕಲ ದೇಶ ಕೋಶ ವಾಸ ಭಂಡಾರ ಸವಾಲಾಕ್ಷ ಮುಂತಾದ ಸಂಬಂಧ ಸ್ತ್ರೀಯರ ಬಿಟ್ಟು ಬಂದೆನೆಂಬ ಕೈಕೂಲಿಯೆ ನಿಮ್ಮ ಭಕ್ತಿ’’ ಎಂದು ಮೋಳಿಗೆ ಮಹಾದೇವಿ ಗಂಡ ಮೋಳಿಗೆ ಮಾರಯ್ಯನಿಗೆ ಕೇಳುತ್ತಾಳೆ.
‘‘ಹೆಣ್ಣು ಬಿಟ್ಟು ಲಿಂಗವನೊಲಿಸಬೇಕೆಂಬರು, ಹೆಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ’’ ಎಂದು ಗಜೇಶ ಮಸಣಯ್ಯಗಳ ಪುಣ್ಯ ಸ್ತ್ರೀ ಪುರುಷ ಪ್ರಧಾನ ಸಮಾಜಕ್ಕೆ ಸವಾಲು ಹಾಕುತ್ತಾಳೆ.
‘‘ಮೊಲೆ ಮುಡಿ ಬಂದಡೆ ಹೆಣ್ಣೆಂಬರು, ಮೀಸೆ ಕಾಸೆ ಬಂದಡೆ ಗಂಡೆಂಬರು, ಈ ಉಭಯಜ್ಞಾನ ಹೆಣ್ಣೊ ಗಂಡೊ ನಾಸ್ತಿನಾಥಾ’’ ಎಂದು ಗೊಗ್ಗವ್ವೆ ಕೇಳುತ್ತಾಳೆ. ಹೆಣ್ಣು ಗಂಡಿನ ಚೈತನ್ಯ ಒಂದೇ ಆಗಿರುತ್ತದೆ ಎಂಬ ಸತ್ಯವನ್ನು ಸಾರುತ್ತಾಳೆ.
‘‘ಲೋಕದ ಗಂಡರನ್ನೊಲ್ಲೆ’’ ಎಂದು ಅಕ್ಕ ಮಹಾದೇವಿ ಸ್ಪಷ್ಟಪಡಿಸುತ್ತಾಳೆ. ಆದರೆ ಸಂಸಾರಿಗರನ್ನು ತ್ಯಜಿಸುವುದಿಲ್ಲ. ‘‘ಲೋಕವೆ ತಾನಾದ ಬಳಿಕ ಏಕಾಂತದ ಹಂಗೇಕಯ್ಯಾ’’ ಎಂದು ಹೇಳುತ್ತಾಳೆ.
‘‘ನಿಮ್ಮ ಗುರುತನಕ್ಕಿದು ಪಥವೆ, ನಾರಿಯರಿಬ್ಬರೊಡನೆ ಇಪ್ಪುದ? ಶಿವಶಿವಾ ನಿಮ್ಮ ನಡವಳಿ’’ ಎಂದು ಕಸಗುಡಿಸುವ ಸತ್ಯಕ್ಕ ಶಿವನನ್ನೇ ಕೇಳುತ್ತಾಳೆ.
ಹೀಗೆ ಭಾರತದಲ್ಲಿ ಮೊದಲಬಾರಿಗೆ ಶರಣಸಂಕುಲದ ಮಹಿಳೆಯರು ತಮ್ಮ ಅಭಿಪ್ರಾಯ ಸ್ವಾತಂತ್ರ್ಯ ಪಡೆಯುತ್ತಾರೆ. ದೈನಂದಿನ ಬದುಕಿನ ಕುಟುಂಬ ವ್ಯವಸ್ಥೆಯಲ್ಲಿ ತಮ್ಮ ಸ್ಥಾನ ಯಾವುದು ಎಂಬುದನ್ನು ಸಾಮಾಜಿಕವಾಗಿ ನಿಷ್ಕರ್ಷೆಗೆ ಒಳಪಡಿಸುತ್ತಾರೆ. ಹೆಣ್ಣು ಗಂಡು ಸಮಾನ, ನಿಜದ ನೆಲೆಯಲ್ಲಿ ಒಬ್ಬರಿಗೊಬ್ಬರು ಪ್ರಶ್ನಿಸುವ ಹಕ್ಕನ್ನು ಹೊಂದಿರುತ್ತಾರೆ ಎಂಬುದನ್ನು ಸಿದ್ಧಪಡಿಸುತ್ತಾರೆ. ಕೊನೆಗೆ, ಹೆಣ್ಣು ಗಂಡಿನ ಒಳಗಿರುವ ಆತ್ಮ ಒಂದೇ ಎಂಬ ಸತ್ಯದ ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾರೆ.
ಅವರಿಗೆ ಅಭಿಪ್ರಾಯ ಸ್ವಾತಂತ್ರ್ಯ ವ್ಯಕ್ತಪಡಿಸಲು ಶರಣಸಂಕುಲದಲ್ಲಿ ಬಸವಣ್ಣನವರು ಸೃಷ್ಟಿಸಿದ ‘ಅನುಭವ ಮಂಟಪ’ವಿತ್ತು.
ಅದೇ ಅನುಭವ ಮಂಟಪದಲ್ಲಿ ಮಹಿಳೆಯರು ಮತ್ತು ತುಳಿತಕ್ಕೊಳಗಾದ ಅಸ್ಪಶ್ಯರೂ ಸೇರಿದಂತೆ ಸರ್ವರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶವಿತ್ತು.
ಈ ಅವಕಾಶದ ಸದುಪಯೋಗ ಪಡೆದ ಮಹಿಳೆಯರು ಸೈದ್ಧಾಂತಿಕವಾಗಿ ಪುರುಷ ಪ್ರಾಧಾನ್ಯವನ್ನು ವಿರೋಧಿಸುತ್ತ ಕುಟುಂಬದಲ್ಲಿ ಸಹಚರಭಾವದ ವಾತಾವರಣ ಸೃಷ್ಟಿಸಿದರು. ಪತಿ ಪತ್ನಿ ಸಮಾನರಾಗಿ ಮತ್ತು ಒಬ್ಬರಿಗೊಬ್ಬರು ಪೂರಕವಾಗಿ ಬದುಕುವ ಸಂಸ್ಕೃತಿಯನ್ನು ಬೆಳೆಸಿದರು. ಹೀಗೆ ಬಸವಣ್ಣನವರ ಕನಸು ಅವರ ಕಾಲದಲ್ಲೇ ನನಸಾಯಿತು.
ಬಸವಣ್ಣನವರು ಸೃಷ್ಟಿಸಿದ ಇಷ್ಟಲಿಂಗವು ಸ್ತ್ರೀ ಪುರುಷ ಸಮಾನತೆಯಲ್ಲಿ ಕೂಡ ಮಹತ್ವದ ಪಾತ್ರವನ್ನು ವಹಿಸಿತು. ಮಹಿಳೆಯರ ಎದೆಯ ಮೇಲೆಯೂ ಇಷ್ಟಲಿಂಗ ಬಂದಿತು. ಅವರು ಕೂಡ ಇಷ್ಟಲಿಂಗ ಧರಿಸುವ ಮತ್ತು ಪೂಜಿಸುವ ಹಕ್ಕನ್ನು ಪಡೆದರು. ಗಂಡಿಗೆ ಇರುವ ಎಲ್ಲ ಸಮಾಜೋ ಧಾರ್ಮಿಕ ಮುಂತಾದ ಹಕ್ಕುಗಳನ್ನು ಹೆಣ್ಣೂ ಪಡೆದಳು.
ವಿಶ್ವಪ್ರಜ್ಞೆಯ ಕುಟುಂಬ:
ಬಸವಣ್ಣನವರ ವಿಶ್ವಕುಟುಂಬ ಪರಿಕಲ್ಪನೆ ಸಾಕಾರಗೊಳ್ಳ ಬೇಕಾದರೆ ಸಮಾಜದೊಳಗಣ ಕುಟುಂಬ ವ್ಯವಸ್ಥೆಯಲ್ಲಿ ಕೂಡ ಆ ಪರಿಕಲ್ಪನೆಯ ಅಂಶಗಳು ಸಾಕಾರಗೊಳ್ಳಬೇಕು. ಪುರುಷ ಪ್ರಾಧಾನ್ಯ ವ್ಯವಸ್ಥೆಯ ಜೊತೆ ಜಾತಿ ಮತ್ತು ಕುಲಗೋತ್ರಗಳ ಹಾಗೂ ಆರ್ಥಿಕ ಅಂತಸ್ತಿನ ಭೇದಗಳೂ ನಾಶವಾಗಬೇಕು. ಇವುಗಳನ್ನೆಲ್ಲ ಇಟ್ಟುಕೊಂಡು ‘ವಸುಧೈವ ಕುಟುಂಬಕಂ’ ಎಂಬ ವಿಶ್ವಪ್ರಜ್ಞೆಯ ಕುಟುಂಬ ವ್ಯವಸ್ಥೆಯನ್ನು ಸಾಧಿಸಲಿಕ್ಕಾಗದು.
ಇಂತಹ ಎಲ್ಲ ಅಡೆತಡೆಗಳ ನಿರ್ನಾಮ ಮಾಡಿ ವಿಶ್ವಮಾನ್ಯ ಕುಟುಂಬ ವ್ಯವಸ್ಥೆಯನ್ನು ಸಮಾಜದಲ್ಲಿ ಅಳವಡಿಸುವ ಉದ್ದೇಶದಿಂದಲೇ ಶರಣ ಸಂಕುಲದಲ್ಲಿ ಸಮಗಾರ ಹರಳಯ್ಯನವರ ಮಗ ಶೀಲವಂತ ಮತ್ತು ಮಧುವರಸರ ಮಗಳು ಲಾವಣ್ಯಳ ವಿವಾಹ ಏರ್ಪಡಿಸಲಾಯಿತು.
ಬಸವಾದಿ ಶರಣರ ನವಕುಟುಂಬ ವ್ಯವಸ್ಥೆ ಇದಾಗಿತ್ತು. ಜಾತಿ, ಕುಲ, ಅಂತಸ್ತುಗಳನ್ನು ಮೀರಿದ ಮತ್ತು ಹೆಣ್ಣು ಗಂಡಿನ ಸಮಾನತೆಯ ಮದುವೆಯಾಗಿತ್ತು. ಈ ಸಾಧನೆಯ ಮೂಲಶಕ್ತಿಯೇ ಇಷ್ಟಲಿಂಗವಾಗಿತ್ತು.
‘‘ದಾಸೀಪುತ್ರನಾಗಲಿ, ವೇಶ್ಯಾಪುತ್ರನಾಗಲಿ ಶಿವದೀಕ್ಷೆಯಾದ ಬಳಿಕ ಸಾಕ್ಷಾತು ಶಿವನೆಂದು ವಂದಿಸಿ ಪೂಜಿಸಿ ಪಾದೋದಕ ಪ್ರಸಾದವ ಕೊಂಬುದೇ ಯೋಗ್ಯ’’ ಎಂದು ಬಸವಣ್ಣನವರು ಹೇಳಿದ್ದಾರೆ. ಇದು ಲಿಂಗಪ್ರಜ್ಞೆ.
ಅನೈತಿಕ ಸಂಬಂಧದಿಂದ ಹುಟ್ಟಿದ ದಾಸೀಪುತ್ರರು ಮತ್ತು ವೇಶ್ಯಾಪುತ್ರರು, ಅಸ್ಪಶ್ಯರ ಪುತ್ರರು, ವಿವಿಧ ಜಾತಿ-ವರ್ಣಗಳ ಪುತ್ರರು, ಬಡವ-ಶ್ರೀಮಂತರ ಪುತ್ರರು ಇಷ್ಟಲಿಂಗ ಧಾರಣೆಯಾದ ಬಳಿಕ ಒಂದೇ ಆಗುತ್ತಾರೆ. ಹರಳಯ್ಯ ಮತ್ತು ಮಧುವರಸರ ಮಕ್ಕಳ ಮದುವೆಯ ಪ್ರಸಂಗದಲ್ಲಿ ಇದನ್ನೇ ಸಾಧಿಸುವ ಉದ್ದೇಶವಿತ್ತು.
ಇಷ್ಟಲಿಂಗ ದೀಕ್ಷೆಯಾದ ಬಳಿಕ ಸಮಗಾರ ಹರಳಯ್ಯನವರು ಸಮಗಾರ ಜಾತಿ ವ್ಯವಸ್ಥೆಯಿಂದ ಹೊರಬಂದರು. ಸಮಗಾರ ಎಂಬ ಪದ ಜಾತಿಸೂತಕವನ್ನು ಕಳೆದುಕೊಂಡು ಕೇವಲ ಕಾಯಕದ ರೂಪ ಪಡೆಯಿತು. ಬ್ರಾಹ್ಮಣ ಮೂಲದ ಮಂತ್ರಿ ಮಧುವರಸರು ಇಷ್ಟಲಿಂಗ ದೀಕ್ಷೆಯಾದ ಕೂಡಲೇ ತಮ್ಮ ಬ್ರಾಹ್ಮಣ್ಯವನ್ನು ಕಳೆದುಕೊಂಡು ಸಮಗಾರ ಹರಳಯ್ಯನವರ ಹಾಗೆ ಲಿಂಗವಂತರಾದರು. ಅಂದರೆ ಜಾತಿಭೇದ, ವರ್ಣಭೇದ, ವರ್ಗಭೇದ ಮತ್ತು ಲಿಂಗಭೇದಗಳನ್ನು ಮೀರಿ ಸಮಗಾರ ಹರಳಯ್ಯನವರಿಗೆ ಸಮಾನರಾದರು!
ಬಸವಧರ್ಮವು ಜಾತಿಗಳಿಲ್ಲದ ಧರ್ಮ. ಆದರೆ ಮನುಧರ್ಮವು ವರ್ಣ, ಕುಲಗೋತ್ರ, ಜಾತಿ ಮತ್ತು ಉಪಜಾತಿಗಳಿಂದ ಕೂಡಿದ ಧರ್ಮ. ಮನುಸ್ಮತಿಯ ಪ್ರಕಾರ ಬ್ರಾಹ್ಮಣ ಕನ್ಯೆಯನ್ನು ಕೆಳಜಾತಿಯ ವರ ಮದುವೆಯಾಗುವುದು ವಿಲೋಮ ವಿವಾಹ. ಇಂತಹ ವಿವಾಹಗಳು ಮನುಧರ್ಮ ಬಾಹಿರ. ಆದರೆ ಇಂತಹ ಮನುಧರ್ಮ ಬಾಹಿರ ಕುಟುಂಬಗಳ ಸೃಷ್ಟಿಯಾಗಬೇಕೆಂಬುದೇ ಬಸವಣ್ಣನವರ ಧರ್ಮದ ಗುರಿ. ಆ ಮೂಲಕ ಮಾನವ ಸಮಾಜದಲ್ಲಿ ಎಲ್ಲ ರೀತಿಯಿಂದಲೂ ಸಮಾನತೆ ಸಾಧಿಸಬೇಕೆಂಬುದೇ ಆಶಯ.
ಇಷ್ಟೇ ಅಲ್ಲದೆ ಅದಾಗಲೇ ವೇಶ್ಯಾವೃತ್ತಿಯಲ್ಲಿ ತೊಡಗಿ ಪಣ್ಯಾಂಗನೆಯರು ಎಂದು ಅಪಮಾನಕ್ಕೀಡಾದ ಮಹಿಳೆಯರಿಗೂ ಇಷ್ಟಲಿಂಗ ದೀಕ್ಷೆ ಕೊಟ್ಟು ಪುಣ್ಯಾಂಗನೆಯರನ್ನಾಗಿಸಿ ಅವರನ್ನು ಕುಟುಂಬ ವ್ಯವಸ್ಥೆಯೊಳಗೆ ತಂದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ.
ಕೇವಲ ಇಡೀ ವಿಶ್ವವೇ ಒಂದು ಕುಟುಂಬ ಎಂದು ಗಳಪುವುದರಿಂದ ವಿಶ್ವಕುಟುಂಬ ಆಗುವುದಿಲ್ಲ. ವಿಶ್ವಕುಟುಂಬ ವ್ಯವಸ್ಥೆಗಾಗಿ ನಿರಂತರ ಪ್ರಯತ್ನಿಸಬೇಕು.
ಸತತ ಪ್ರಯತ್ನದ ಮೂಲಕ ಸಮಾಜದಲ್ಲಿನ ಕುಟುಂಬ ವ್ಯವಸ್ಥೆಯಲ್ಲಿ ಔನ್ನತ್ಯ ಸಾಧಿಸುವ ಮಹಾನ್ ಕನಸನ್ನು ಬಸವಣ್ಣನವರು ಹೊಂದಿದ್ದರು. ಆದರೆ ವರ್ಣಾಶ್ರಮಗಳಿಂದ ಕೂಡಿದ ಮನುವಾದಿ ವ್ಯವಸ್ಥೆ ಇದಕ್ಕೆ ತದ್ವಿರುದ್ಧವಾಗಿತ್ತು. ಬಸವಣ್ಣನವರ ಗುರಿ ವರ್ಣ ವ್ಯವಸ್ಥೆಯನ್ನು ನಾಶ ಮಾಡುವುದೇ ಆಗಿದೆ ಎಂದು ವೈದಿಕರು ಗುಲ್ಲೆಬ್ಬಿಸಿದರು. ವರ್ಣಾಶ್ರಮ ವ್ಯವಸ್ಥೆಯನ್ನು ಸಂರಕ್ಷಿಸುವುದೇ ರಾಜಧರ್ಮ ಎಂದು ಬಿಜ್ಜಳ ರಾಜನ ಮುಂದೆ ವಾದಿಸಿದರು. ವರ್ಣ ಸಂಕರದಿಂದ ಸಾಮಾಜಿಕ ಕ್ಷೋಭೆ ಉಂಟಾಗುತ್ತದೆ ಎಂದು ಅಂಜಿಸಿದರು. ಇಡೀ ಕಲ್ಯಾಣ ನಾಡು ಬಸವಾ ಬಸವಾ ಎನ್ನುತ್ತಿರುವುದರಿಂದ ಮನುಧರ್ಮ ಸಿಂಹಾಸನ ಮತ್ತು ರಾಜಸಿಂಹಾಸನಗಳೆರಡೂ ಗಂಡಾಂತರದಲ್ಲಿವೆ ಎಂದು ಬಿಜ್ಜಳನಿಗೆ ಎಚ್ಚರಿಸಿದರು. ಕೊನೆಗೂ ವೈದಿಕರ ಶಾಸ್ತ್ರಗಳು ಹೇಳಿದಂತೆ ಬಿಜ್ಜಳನ ಶಸ್ತ್ರಗಳು ಕೇಳಿದವು.
ಮನುವಾದಿಗಳ ಕುತಂತ್ರದ ಪರಿಣಾಮವಾಗಿ ಕಲ್ಯಾಣದಲ್ಲಿ ಅಲ್ಲೋಲಕಲ್ಲೋಲವಾಯಿತು. ಹರಳಯ್ಯ ಮಧುವರಸರಿಗೆ ಎಳೆಹೂಟೆ ಶಿಕ್ಷೆ ವಿಧಿಸಲಾಯಿತು. ಶರಣರ ಕೊಲೆಸುಲಿಗೆ ಗಳಾದವು. ಅವರ ವಚನ ಕಟ್ಟುಗಳನ್ನು ಸುಡಲಾಯಿತು. ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶರಣರು ಚೆಲ್ಲಾಪಿಲ್ಲಿಯಾಗಿ ದಿಕ್ಕಾಪಾಲಾದರು.
ಈ ದುರಂತ ಸಂಭವಿಸಿದ ನಂತರ ಬಸವಣ್ಣನವರ ಜಾತಿರಹಿತ ಕುಟುಂಬ ಪರಿಕಲ್ಪನೆ ಲಿಂಗಾಯತರಲ್ಲೂ ಉಳಿಯಲಿಲ್ಲ. ಇಂದು ಲಿಂಗಾಯತ ಧರ್ಮ, ಮನುವಾದಿಗಳ ನೂರೆಂಟು ಜಾತಿ ವಿಜಾತಿಗಳಿಂದ ಕೂಡಿದೆ. ಅಸ್ಪಶ್ಯತೆ ಆಚರಣೆ ಕೂಡ ಸಂಪೂರ್ಣವಾಗಿ ನಾಶವಾಗಿಲ್ಲ. ಬಹುಪಾಲು ಕುಟುಂಬಗಳು ಜಾತಿಮೂಲದಿಂದಲೇ ಮುಂದುವರಿದಿವೆ.
21ನೇ ಶತಮಾನದ ವಿಚಾರವಾದಿಗಳು ಬಸವಣ್ಣನವರ ಪರಿಕಲ್ಪನೆಯ ಜಾತ್ಯತೀತ ಕುಟುಂಬ ಮತ್ತು ವಿಶ್ವಕುಟುಂಬ ವ್ಯವಸ್ಥೆಯ ಕುರಿತು ಗಂಭೀರವಾಗಿ ಚಿಂತನೆ ಮಾಡುತ್ತ ಕಾರ್ಯಗತಗೊಳಿಸುವಲ್ಲಿ ತಲ್ಲೀನರಾಗದಿದ್ದರೆ ಜಗತ್ತು ಇನ್ನೂ ಅಧೋಗತಿಗೆ ಹೋಗುವುದು.