ರೈತರು ಅಪರಾಧಿಗಳಲ್ಲ ಎಂದ ಭಾರತ ರತ್ನ ಸ್ವಾಮಿನಾಥನ್ ಪುತ್ರಿ ಮಧುರಾ
ರೈತರ ಪ್ರತಿಭಟನೆ ಹತ್ತಿಕ್ಕುವ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ► ಕನಿಷ್ಠ ಬೆಂಬಲ ಬೆಲೆ ಬಗ್ಗೆ ಸುಳ್ಳು ಹೇಳುತ್ತಿರುವ ಬಿಜೆಪಿ ಸರ್ಕಾರ
Madhura Swaminathan slammed | Photo: PTI
ಇತ್ತೀಚಿಗೆ ನೀಡಿದ ಮರಣೋತ್ತರ ಭಾರತ ರತ್ನಗಳನ್ನು ಅಣಕಿಸುವಂತೆ ಪೊಲೀಸರ ಮೂಲಕ, ಮುಳ್ಳು ಬೇಲಿಗಳ ಮೂಲಕ, ಕೋವಿಗಳ ಮೂಲಕ ರೈತರನ್ನು ಕೇಂದ್ರ ಸರಕಾರ ಬಗ್ಗು ಬಡಿಯಲು ಸಿದ್ಧತೆ ನಡೆಸಿದೆ. ರೈತರು ಮತ್ತು ಕೇಂದ್ರ ಸರಕಾರದ ನಡುವಿನ ಸಮರದ ಎರಡನೇ ಅಧ್ಯಾಯವೊಂದು ಈ ಮೂಲಕ ತೆರೆದುಕೊಂಡಿದೆ.
ನ್ಯಾಯ ಕೇಳಲು ಬರುತ್ತಿರುವ ರೈತರ ಈ ಬಾರಿಯ ಹೋರಾಟದ ಹಾದಿ ಕಠಿಣವಾಗಿದೆ. ಅವರು ಪೊಲೀಸರನ್ನು ಎದುರಿಸುತ್ತಲೇ ತಮ್ಮ ಹೋರಾಟ ಮುಂದುವರಿಸಿದ್ದಾರೆ. ದೆಹಲಿ-ಹರ್ಯಾಣ ಗಡಿಯಲ್ಲಿ ರೈತರ ಮೇಲೆ ಅಶ್ರುವಾಯು ಪ್ರಯೋಗ ಮಾಡಲಾಗಿದೆ. ಮೋದಿ ಸರ್ಕಾರ ಹೀಗೆ ರೈತರನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಅದರ ವಿರುದ್ಧ ಒಬ್ಬರು ಅತಿ ಪ್ರಬಲವಾಗಿ ಧ್ವನಿಯೆತ್ತಿದ್ದಾರೆ.
ಅವರು, ಭಾರತ ರತ್ನ, ಹಸಿರು ಕ್ರಾಂತಿಯ ಹರಿಕಾರ ಎಂ ಎಸ್ ಸ್ವಾಮಿನಾಥನ್ ಅವರ ಪುತ್ರಿ, ಅರ್ಥಶಾಸ್ತ್ರಜ್ಞೆ ಮಧುರಾ ಸ್ವಾಮಿನಾಥನ್.
ರೈತರ ಪ್ರತಿಭಟನೆಯ ವಿಚಾರದಲ್ಲಿ ಮೋದಿ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆ ಮಧುರಾ ಸ್ವಾಮಿನಾಥನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರು, ಅಪರಾಧಿಗಳಲ್ಲ ಎಂದಿದ್ದಾರೆ ಮಧುರಾ ಸ್ವಾಮಿನಾಥನ್.
ಮಧುರಾ ಸ್ವಾಮಿನಾಥನ್ ಅವರ ಈ ಮಾತು ವಿಶ್ವಗುರು ದೇಶದ ಆಡಳಿತಾರೂಢರಿಗೆ ನಾಟುವುದೆ ಎಂಬುದು ಈಗಿನ ಪ್ರಶ್ನೆ. ಒಂದೆಡೆ ಹಸಿರು ಕ್ರಾಂತಿಯ ಹರಿಕಾರ ಎಂ ಎಸ್ ಸ್ವಾಮಿನಾಥನ್ ಅವರಿಗೆ ಭಾರತ ರತ್ನ ನೀಡುವ ಮೋದಿ ಸರ್ಕಾರ, ಯಾವ ರೈತರನ್ನು ಸ್ವಾಮಿನಾಥನ್ ಅತೀವ ಗೌರವದಿಂದ ಕಂಡಿದ್ದರೋ ಅದೇ ರೈತರನ್ನು ಕ್ರಿಮಿನಲ್ಗಳಂತೆ ನಡೆಸಿಕೊಳ್ಳುತ್ತಿದೆ.
ಆ ಹಿನ್ನೆಲೆಯಲ್ಲಿಯೇ ಅವರ ಪುತ್ರಿ ಅದರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ರೈತರನ್ನು ಗೌರವದಿಂದ ನಡೆಸಿಕೊಳ್ಳಿ ಎಂದು ಕೇಳಿಕೊಂಡಿದ್ದಾರೆ. ರೈತರನ್ನು ಬಡಿದಟ್ಟಲು ಮಾತ್ರವೇ ನೋಡುತ್ತಿರುವ ಮೋದಿ ಸರ್ಕಾರ, ಅವರ ಮೂಲಭೂತ ಬೇಡಿಕೆಗಳ ಬಗ್ಗೆ ಯಾವುದೇ ಚಿಂತೆಯನ್ನೂ ಮಾಡುತ್ತಿಲ್ಲ.
ಮೋದಿ ಬಿಟ್ಟರೆ ಬೇರೇನೂ ಇಲ್ಲವೆಂದುಕೊಂಡಿರುವ ಮಡಿಲ ಮೀಡಿಯಾಗಳಿಗೂ ರೈತರ ಹೋರಾಟದ ಹಿಂದಿನ ಬೇಡಿಕೆಗಳು ಕಾಣಿಸುತ್ತಿಲ್ಲ.
ಕನಿಷ್ಠ ಬೆಂಬಲ ಬೆಲೆ ಖಾತರಿಗೆ ಒತ್ತಾಯಿಸಿ ರೈತರು ತಮ್ಮ ಹೊಲ ಮನೆಗಳನ್ನು ತೊರೆದು ದೆಹಲಿ ಗಡಿಯಲ್ಲಿ ಪೊಲೀಸರನ್ನು ಎದುರಿಸಿ ನಿಂತಿದ್ದಾರೆ. ಅವರು ಭಾರತರತ್ನ ಎಂಎಸ್ ಸ್ವಾಮಿನಾಥನ್ ಪರಿಚಯಿಸಿದ ಸೂತ್ರದ ಅನ್ವಯವಾಗಿ ಕನಿಷ್ಠ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ.
ಆದರೆ, ಕಳೆದ ಹತ್ತು ವರ್ಷಗಳಲ್ಲಿ ಅತಿ ಹೆಚ್ಚಿನ ಕನಿಷ್ಠ ಬೆಂಬಲ ಬೆಲೆ ನೀಡಲಾಗಿದೆ ಎಂದು ಬಿಜೆಪಿ ಸರ್ಕಾರ ಹೇಳಿಕೊಳ್ಳುತ್ತಿದೆ. ಇದು ನಿಜವೆ? ಇದು ಮೋದಿ ಸರ್ಕಾರ ಹೇಳುತ್ತಿರುವ ಮತ್ತೊಂದು ಸುಳ್ಳೇ ಅಲ್ಲವೆ? ರೈತರು ದೆಹಲಿಯತ್ತ ಹೊರಟಿರುವಾಗ ಬರುತ್ತಿರುವ ಪತ್ರಿಕೆಗಳ ವರದಿಗಳು ಆತಂಕ ಹುಟ್ಟಿಸುತ್ತಿವೆ. ಈಗಾಗಲೇ ನಾಲ್ಕೂ ದಿಕ್ಕಿನಿಂದ ರೈತರನ್ನು ಅಡ್ಡಗಟ್ಟಲಾಗಿದೆ. ಎಲ್ಲ ದಾರಿಗಳನ್ನೂ ಬಂದ್ ಮಾಡಲಾಗಿದೆ. ಮೆರವಣಿಗೆಯಲ್ಲಿ ಸಾಗಿದ್ದ ರೈತರ ಮೇಲೆ ಅಶ್ರುವಾಯು ಪ್ರಯೋಗಿಸಲಾಗಿದೆ.
ಇದೆಲ್ಲದರ ನಡುವೆಯೇ ಹರಿಯಾಣದಲ್ಲಿ ಜೈಲುಗಳನ್ನು ಸಿದ್ದಪಡಿಸಲಾಗುತ್ತಿದೆ ಎಂಬ ವರದಿಗಳಿವೆ. ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಹಲವು ಬೇಡಿಕೆಗಳಿಗೆ ಒತ್ತಾಯಿಸಿ ಪಂಜಾಬ್, ಹರಿಯಾಣ ಹಾಗೂ ಉತ್ತರ ಪ್ರದೇಶದ ಒಂದು ಲಕ್ಷಕ್ಕೂ ಅಧಿಕ ರೈತರು ಫೆ.13ರಿಂದ ದೆಹಲಿ ಚಲೋ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಪಂಜಾಬ್ – ಹರಿಯಾಣ ಗಡಿಯಲ್ಲಿ ಮೆರವಣಿಗೆ ಸಾಗುವಾಗ ರೈತರ ಮೇಲೆ ಪೊಲೀಸರು ಅಶ್ರುವಾಯು ಶೆಲ್, ಸ್ಮೋಕ್ ಬಾಂಬ್, ರಬ್ಬರ್ ಬುಲೆಟ್ಗಳು, ಜಲ ಫಿರಂಗಿಗಳನ್ನು ಬಳಸಿದ್ದಾರೆ.
ಪೊಲೀಸರ ದಾಳಿಯಿಂದಾಗಿ ಹಲವು ರೈತರು ಗಾಯಗೊಂಡಿದ್ದು, ಕೆಲವರನ್ನು ಬಂಧಿಸಲಾಗಿರುವ ವರದಿಗಳಿವೆ. ರೈತರು ದೆಹಲಿಯತ್ತ ಬರುವುದನ್ನು ತಡೆಯುವ ಸಲುವಾಗಿಯೇ ಮುಳ್ಳುತಂತಿಗಳ ಬ್ಯಾರಿಕೇಡ್ಗಳನ್ನು ಹಾಕಲಾಗಿದೆ. ಚೂಪಾದ ಬಾಣದ ರೀತಿಯ ಸಲಾಕೆಗಳು, ಸಿಮೆಂಟ್ ತಡೆಗೋಡೆ ಎಲ್ಲವನ್ನೂ ರೈತರ ದಾರಿಗೆ ಅಡ್ಡ ಇಡಲಾಗಿದೆ. ಇಂಥ ಹೊತ್ತಿನಲ್ಲಿಯೇ, ಅವರು ರೈತರು, ಅಪರಾಧಿಗಳಲ್ಲ ಎಂದು ಮಧುರಾ ಸ್ವಾಮಿನಾಥನ್ ಅವರು ಹೇಳಿರುವುದು. ಮುಂಚೂಣಿಯಲ್ಲಿರುವ ಭಾರತದ ಎಲ್ಲ ವಿಜ್ಞಾನಿಗಳಿಗೆ ನಾನು ಮನವಿ ಮಾಡುವುದೇನೆಂದರೆ, ನಾವು ಅನ್ನದಾತರೊಂದಿಗೆ ಮಾತನಾಡಬೇಕು. ನಾವು ಅವರನ್ನು ಅಪರಾಧಿಗಳಂತೆ ಪರಿಗಣಿಸಬಾರದು. ನಾವು ಇದಕ್ಕೆ ಪರಿಹಾರ ಹುಡುಕಬೇಕು ಎಂದು ಮಧುರಾ ಸ್ವಾಮಿನಾಥನ್ ಹೇಳಿದ್ದಾರೆ.
ಇದು ನನ್ನ ಮನವಿ. ನಾವು ಎಂ ಎಸ್ ಸ್ವಾಮಿನಾಥನ್ ಅವರನ್ನು ಗೌರವಿಸಬೇಕೆಂದರೆ, ಭವಿಷ್ಯತ್ತಿನಲ್ಲಿ ಯಾವುದೇ ಯೋಜನೆಗಳನ್ನು ರೂಪಿಸಿದರೂ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಮಧುರಾ ಸ್ವಾಮಿನಾಥನ್ ಪ್ರತಿಪಾದಿಸಿದ್ಧಾರೆ. ಮೋದಿ ಸರ್ಕಾರದಿಂದ ಮರಣೋತ್ತರವಾಗಿ ಭಾರತ ರತ್ನ ಗೌರವಕ್ಕೆ ಪಾತ್ರರಾಗಿರುವ ಚೌಧರಿ ಚರಣ್ ಸಿಂಗ್ ಕೂಡ ರೈತರಿಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದವರು.
ಆದರೆ ಅವರ ಮೊಮ್ಮಗ ಜಯಂತ್ ಚೌಧರಿಗೆ ಮಾತ್ರ ಅಜ್ಜನ ಆದರ್ಶದ ನೆನಪಿದ್ದಂತಿಲ್ಲ. ಭಾರತ ರತ್ನ ಘೋಷಿಸುತ್ತಿದ್ದಂತೆ ಅವರು ಬಿಜೆಪಿ ಜೊತೆ ಹೋಗಿಬಿಟ್ಟರು. ಬಿಜೆಪಿ ಮತ್ತದರ ಸಿದ್ಧಾಂತ ಹಾಗೂ ಆಡಳಿತವನ್ನು ಅತ್ಯಂತ ಕಟುವಾಗಿ ಟೀಕಿಸುತ್ತಿದ್ದ ಈ ಸುಶಿಕ್ಷಿತ ನಾಯಕ ಒಂದಿಷ್ಟೂ ಹಿಂಜರಿಕೆ ಇಲ್ಲದೆ ತಿಪ್ಪರಲಾಗ ಹೊಡೆದು ಬಿಟ್ಟರು.
ಮೋದಿ ಸರ್ಕಾರ ರೈತರ ವಿಚಾರದಲ್ಲಿ ಎಸಗುತ್ತಿರುವ ಅನ್ಯಾಯದ ಬಗ್ಗೆ ಅವರು ದನಿಯೆತ್ತಲಾರರು. ಆ ಇಬ್ಬರು ಮಹಾನುಭಾವರಿಗೂ ಭಾರತ ರತ್ನ ಕೊಟ್ಟ ಮೋದಿ ಸರ್ಕಾರ ರೈತರನ್ನು ಇಷ್ಟೊಂದು ಅನ್ಯಾಯವಾಗಿ, ಕ್ರೂರತೆಯಿಂದ ನಡೆಸಿಕೊಳ್ಳುತ್ತಿದೆ ಎಂದಾದರೆ, ಆ ಭಾರತ ರತ್ನಕ್ಕೆ ಏನು ಬೆಲೆ?. ರೈತರ ವಿಚಾರದಲ್ಲಿ ಮೋದಿ ಸರ್ಕಾರಕ್ಕೆ ಇರುವ ಕಾಳಜಿ ಎಂಥದು?.
ಈಗ ಮಧುರಾ ಸ್ವಾಮಿನಾಥನ್ ಅವರ ಮಾತುಗಳನ್ನು ಮೋದಿ ಎಷ್ಟು ಗಂಭೀರವಾಗಿ ತೆಗೆದುಕೊಳ್ಳಬಲ್ಲರು?. ಕೃಷಿ ವಿಜ್ಞಾನಿ ಮತ್ತು ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂ ಎಸ್ ಸ್ವಾಮಿನಾಥನ್ ಅಧಿಕ ಇಳುವರಿಯ ಭತ್ತದ ತಳಿ ಅಭಿವೃದ್ಧಿಯಿಂದ ದೇಶದ ಆಹಾರ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ಅದು ಅವರಿಗೆ ಜಾಗತಿಕ ಮನ್ನಣೆಯನ್ನು ತಂದುಕೊಟ್ಟಿದೆ.
ಸಸ್ಯ ತಳಿವಿಜ್ಞಾನಿಯೂ ಆಗಿದ್ದ ಅವರು, ಭಾರತದ ಕೃಷಿ ಉತ್ಪನ್ನಗಳ ಅಭಿವೃದ್ಧಿ ಮೂಲಕ ದೇಶದ ಆರ್ಥಿಕತೆ ಉತ್ತಮಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎಂ ಎಸ್ ಸ್ವಾಮಿನಾಥನ್ ಆಯೋಗದ ವರದಿ 2010ರಿಂದಲೂ ನೆನೆಗುದಿಗೆ ಬಿದ್ದಿದೆ. ದಶಕವೇ ದಾಟಿದರೂ ಅದರ ಶಿಫಾರಸುಗಳ ಜಾರಿಗಾಗಿ ರೈತರು ಹೋರಾಟ ನಡೆಸುತ್ತಲೇ ಇರುವಂತಾಗಿದೆ.
ಎಂಎಸ್ ಸ್ವಾಮಿನಾಥನ್ ಆಯೋಗದ ಶಿಫಾರಸನ್ನು ಯಥಾವತ್ತಾಗಿ ಜಾರಿಗೆ ತರಬೇಕು ಎನ್ನುವುದು ಅನ್ನದಾತರ ಆಗ್ರಹ. ಇದು ಮುತ್ತಿಗೆ ಹಾಕಲು ತೆರಳಿರುವ ವಿವಿಧ ರಾಜ್ಯಗಳ ರೈತರದ್ದು ಮಾತ್ರವಲ್ಲ, ದೂರದ ಹಳ್ಳಿಗಳಲ್ಲಿನ ಅನ್ನದಾತರ ಬೇಡಿಕೆಯೂ ಹೌದು. ರೈತರ ಬೇಡಿಕೆಗಳಲ್ಲಿ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನಿನ ಜತೆ, ವಿದ್ಯುತ್ ತಿದ್ದುಪಡಿ ಮಸೂದೆ ಮತ್ತು ಸಾಲ ಮನ್ನಾ ಕೂಡ ಸೇರಿವೆ. ರೈತರ ಈ ಬೇಡಿಕೆಗಳಿಗೆ ಪ್ರತಿಪಕ್ಷ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದೆ.
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದರೆ ಆಯೋಗದ ಶಿಫಾರಸಿನಂತೆ ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನು ಗ್ಯಾರಂಟಿ ನೀಡಲಿದೆ ಎಂದು ಸಂಸದ ರಾಹುಲ್ ಗಾಂಧಿ ಆಶ್ವಾಸನೆ ನೀಡುತ್ತಿದ್ದಾರೆ. ವಿಪರ್ಯಾಸವೆಂದರೆ, ರೈತರ ಬೆಳೆಗಳಿಗೆ ಪ್ರತಿಫಲದಾಯಕ ದರ ನಿಗದಿಪಡಿಸಬೇಕು ಎಂಬ ಸ್ವಾಮಿನಾಥನ್ ಆಯೋಗದ ಶಿಫಾರಸನ್ನು 2010ರಲ್ಲಿ ಇದೇ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವೇ ತಿರಸ್ಕರಿಸಿತ್ತು.
ಏನಿದು ಸ್ವಾಮಿನಾಥನ್ ಆಯೋಗ?
ರಾಷ್ಟ್ರೀಯ ಕೃಷಿಕರ ಆಯೋಗದ (ಎನ್ಸಿಎಫ್) ಅಧ್ಯಕ್ಷರಾಗಿ ಎಂಎಸ್ ಸ್ವಾಮಿನಾಥನ್ 2004ರಿಂದ 2006ರ ಅವಧಿಯಲ್ಲಿ ಒಟ್ಟು ಐದು ವರದಿಗಳನ್ನು ಸಲ್ಲಿಸಿದ್ದರು. ಸ್ವಾಮಿನಾಥನ್ ಆಯೋಗದ ಶಿಫಾರಸುಗಳಲ್ಲಿ ಕನಿಷ್ಠ ಬೆಂಬಲ ಬೆಲೆ ಅಂದ್ರೆ ಎಂ ಎಸ್ ಪೀ ಮುಖ್ಯವಾಗಿತ್ತು. ಉತ್ಪಾದನೆಯ ಸರಾಸರಿ ವೆಚ್ಚಕ್ಕಿಂತ ಕನಿಷ್ಠ ಶೇ 50ರಷ್ಟು ಎಂಎಸ್ಪಿ ಇರಬೇಕು ಎಂದು ಆಯೋಗ ಶಿಫಾರಸು ಮಾಡಿತ್ತು.
ಅದನ್ನು ಸಿ2+50 ಪರ್ಸೆಂಟ್ ಸೂತ್ರ ಎಂದೇ ಕರೆಯಲಾಗುತ್ತದೆ. ಅದರಲ್ಲಿ ಬಂಡವಾಳದ ಹೂಡಿಕೆ ವೆಚ್ಚ, ಭೂಮಿಯ ಬಾಡಿಗೆ ವೆಚ್ಚ, ರೈತರಿಗೆ ಆದಾಯದ ಶೇ 50ರಷ್ಟನ್ನು ನೀಡುವುದು ಸೇರುತ್ತದೆ.
ಆದರೆ 2007ರಲ್ಲಿ ಆಗಿನ ಯುಪಿಎ ಸರ್ಕಾರ ಎಂಎಸ್ಪಿ ಜಾರಿ ಸಾಧ್ಯವಿಲ್ಲ ಎಂದುಬಿಟ್ಟಿತ್ತು.
ಎಂಎಸ್ಪಿ ಬಿಟ್ಟು ಬೇರೆಲ್ಲವನ್ನೂ ಮಾತನಾಡಲಾಗುತ್ತಿದೆ. ಆಗಲೂ ವರದಿ ಜಾರಿಯಾಗಲಿಲ್ಲ. ಈಗ 10 ವರ್ಷಗಳಿಂದ ಅಧಿಕಾರದಲ್ಲಿರುವ ಮೋದಿ ಸರ್ಕಾರವೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ.
ದೊಡ್ಡ ದೊಡ್ದ ಸುಧಾರಣೆಗಳ ಮಾತನಾಡುವ ಮೋದಿ ಸರ್ಕಾರಕ್ಕೆ ಸ್ವಾಮಿನಾಥನ್ ಶಿಫಾರಸಿನಂತೆ ಎಂಎಸ್ಪಿ ಕೊಡಲು ಏಕೆ ಸಾಧ್ಯವಾಗಿಲ್ಲ?
ಮತ್ತು ಯಾಕೆ ಅದನ್ನು ಕೊಡಲೇ ಬೇಕಿದೆ? ಒಂದು ವಿಚಾರವಿದೆ. ವರ್ಕಿಂಗ್ ಗ್ರೂಪ್ ಆನ್ ಕನ್ಸೂಮರ್ ಅಫೇರ್ ವರದಿಯನ್ನು 2011ರಲ್ಲಿ ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಲ್ಲಿಸಿದ್ದರು.
ಎಂಎಸ್ಪಿ ಜಾರಿಗೆ ಆ ವರದಿಯಲ್ಲಿ ಹೇಳಲಾಗಿತ್ತು. ತಮಾಷೆಯೆಂದರೆ, ಎಂಎಸ್ಪಿ ಬಗ್ಗೆ ಸಮಿತಿ ರಚನೆ ವಿಚಾರ ಆಗಿನಿಂದಲೂ ಇದೆ, ಈಗಲೂ ಅದೇ ಮಾತನ್ನೇ ಹೇಳಲಾಗುತ್ತಿದೆ. ಒಂದು ಕಾಲದಲ್ಲಿ ತಾವೇ ಅಧ್ಯಕ್ಷರಾಗಿದ್ದ ಸಮಿತಿಯ ವರದಿಯಲ್ಲಿನ ಶಿಫಾರಸನ್ನು ಈಗ ಪ್ರಧಾನಿಯಾಗಿರುವ ಮೋದಿಗೆ ಏಕೆ ಇಷ್ಟು ವರ್ಷಗಳಲ್ಲಿ ಜಾರಿಗೆ ತರಲು ಆಗಲಿಲ್ಲ?
ಸ್ವಾಮಿನಾಥನ್ ಅವರಿಗೆ ಭಾರತ ರತ್ನ ನೀಡಿರುವುದು ಮಹತ್ವದ ನಿರ್ಧಾರ ಮತ್ತು ಅದು ಆಗಬೇಕಿತ್ತು. ಆದರೆ ಅವರದೇ ಸೂತ್ರದ ಆಧಾರದಲ್ಲಿನ ಎಂಎಸ್ಪಿ ಜಾರಿಗೆ ಮಾತ್ರ ಏಕೆ ಮೋದಿ ಸರ್ಕಾರಕ್ಕೆ ಇಚ್ಛಾ ಶಕ್ತಿ ಇಲ್ಲ? ಸ್ವಾಮಿನಾಥನ್ ಹೇಳಿದ್ದ ಎಂಎಸ್ಪಿಯನ್ನು ಅವತ್ತು ಕಾಂಗ್ರೆಸ್ ಕೂಡ ಜಾರಿಗೆ ತರಲಿಲ್ಲ. ಈಗ ಮೋದಿ ಸರ್ಕಾರವೂ ತರಲಿಲ್ಲ. ಆದರೆ, ಸ್ವಾಮಿನಾಥ್ ಆಯೋಗದ ವರದಿಯಂತೆ ಎಂಎಸ್ಪಿ ಜಾರಿಯಾಗಬೇಕಿರುವುದು ಅತ್ಯಂತ ಅಗತ್ಯವಿದೆ.
ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರ ಮಾಡಿದ್ದಾದರೂ ಏನು? ಭಾರತದ ಅಕ್ಕಿ ರಫ್ತು ನಿಷೇಧ ನೀತಿ ರೈತರ ಆದಾಯಕ್ಕೆ ದೊಡ್ಡ ಹೊಡೆತ ಕೊಟ್ಟಿತೆಂಬ ಆರೋಪವನ್ನು ರೈತ ಸಂಘಟನೆಗಳು ಕಳೆದ ಆಗಸ್ಟ್ನಲ್ಲಿ ಮಾಡಿದ್ದವು. ಮೋದಿ ಸರ್ಕಾರದ ನೀತಿಯಿಂದಾಗಿ ಗೋದಿ ಬೆಳೆದ ರೈತರು 40,000 ಕೋಟಿ ರೂ ನಷ್ಟ ಅನುಭವಿಸಿದ್ದಾಗಿ ಇಂಡಿಯನ್ ಕೌನ್ಸಿಲ್ ಫಾರ್ ರಿಸರ್ಚ್ ಆನ್ ಇಂಟರ್ನ್ಯಾಷನಲ್ ಎಕನಾಮಿಕ್ ರಿಲೇಷನ್ಸ್ (ICRIER) ವರದಿ ಹೇಳಿತ್ತು
ಹಾಗೆಯೇ, ಈರುಳ್ಳಿ ರಫ್ತು ನಿಷೇಧ ಕೂಡ ನಷ್ಟಕ್ಕೆ ಕಾರಣವಾಗಿ ರೈತರಿಗೆ ಕಣ್ಣೀರು ತರಿಸಿತ್ತು. ಸರ್ಕಾರದ ನೀತಿ ನಿರ್ಧಾರಗಳು ರೈತರನ್ನು ಕಷ್ಟಕ್ಕೇ ನೂಕುತ್ತಿವೆ ಎಂದಾದ ಮೇಲೆ, ಅವು ಯಾರ ಲಾಭಕ್ಕಾಗಿ ಆಗುತ್ತಿವೆ ಹಾಗಾದರೆ? ಎಂಎಸ್ಪಿ ಏರಿಕೆ ಬಗ್ಗೆ ಪೋಸ್ಟರುಗಳಲ್ಲಿ ಮಾತ್ರ ಹೇಳಿಕೊಳ್ಳುತ್ತಲೇ ಇದೆ ಮೋದಿ ಸರ್ಕಾರ. ಹಾಗಾದರೆ ಎಷ್ಟು ಸಿಗುತ್ತಿದೆ? ಸ್ವಾಮಿನಾಥನ್ ವರದಿ ಶಿಫಾರಸು ಮಾಡಿದ ಸೂತ್ರಕ್ಕೆ ಅನುಗುಣವಾಗಿಯೇ ಸಿಗುತ್ತಿದೆಯೆ ಇಲ್ಲವೆ? ಪೋಸ್ಟರುಗಳಲ್ಲಿ ಮಾತ್ರ ಹೇಳಿಕೊಳ್ಳಲಾಗುತ್ತಿರುವ ಎಂಎಸ್ಪಿ ಹೆಚ್ಚಳ ಎಷ್ಟೆಂಬುಕ್ಕೆ ಯಾವ ಆಧಾರವನ್ನೂ ಸರ್ಕಾರ ಕೊಡುತ್ತಿಲ್ಲ.
ಅಂಕಿಅಂಶಗಳನ್ನು ಗಮನಿಸುವುದಾದರೆ,
2003-4ರಲ್ಲಿ ಗೋದಿಗೆ ಎಂಎಸ್ಪಿ 630 ರೂ. ಇತ್ತು.
2013-14ರಲ್ಲಿ ಗೋಧಿಗೆ ಕ್ವಿಂಟಾಲ್ಗೆ ಎಂಎಸ್ಪಿ 1400 ರೂ. ಇತ್ತು.
ಅಂದರೆ, 2003ರಿಂದ 2014ರವರೆಗೆ 10 ವರ್ಷಗಳಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಎಂಎಸ್ಪಿ ಶೇ.122ರಷ್ಟು ಹೆಚ್ಚಳ ಕಂಡಿತ್ತು.
ಈಗ ಎನ್ಡಿಎ ಸರ್ಕಾರದ 10 ವರ್ಷಗಳಲ್ಲಿ ಪ್ರತಿ ಕ್ವಿಂಟಾಲ್ಗೆ ಎಂಎಸ್ಪಿ ಅವತ್ತು 1400 ಇದ್ದದ್ದು 2275 ಆಗಿದೆ. ಅಂದರೆ 2014ರಿಂದ 2024ರ ಅವಧಿಯಲ್ಲಿ ಎಂಎಸ್ಪಿ ಏರಿಕೆ ಶೇ.63 ಮಾತ್ರ. ಯುಪಿಎ ಕಾಲದ 10 ವರ್ಷಗಳಲ್ಲಿ ಶೇ. 122 ಏರಿಕೆ ಕಂಡಿದ್ದ ಎಂಎಸ್ಪಿ, ಮೋದಿ ಕಾಲದ 10 ವರ್ಷಗಳಲ್ಲಿ ಹೆಚ್ಚಳವಾಗಿರುವುದು ಶೇ.63ರಷ್ಟು ಮಾತ್ರ.
ಹಾಗಾದರೆ ಮೋದಿ ಸರ್ಕಾರ ಹೇಳಿಕೊಳ್ಳುತ್ತಿರುವ ಹೆಚ್ಚಳ ಯಾವುದು ಮತ್ತು ಎಲ್ಲಿದೆ? ಮೋದಿ ಕಾಲದಲ್ಲಿ ಎಲ್ಲವೂ ತುಟ್ಟಿಯಾಗಿದೆ. ವಿದ್ಯುತ್ ಬಿಲ್ ಹೆಚ್ಚಿದೆ. ಉಪಕರಣಗಳ ಬೆಲೆ ಏರಿಕೆಯಾಗಿದೆ. ಆದರೆ ಎಂಎಸ್ಪಿ ಮಾತ್ರ ಎಷ್ಟು ಏರಿದೆ? ಎಂಎಸ್ಪಿ ಸರಿಯಾಗಿ ಹೆಚ್ಚಳ ಕಂಡಿದ್ದರೆ ಏಕೆ ರೈತರ ಆದಾಯ ಕುಸಿದಿರುತ್ತಿತ್ತು ಸುಳ್ಳುಗಳನ್ನೇ ಹೇಳುತ್ತ ಜನರನ್ನು ಮರುಳು ಮಾಡುತ್ತಿರುವ ಮೋದಿ ಸರ್ಕಾರ, ಭಾರತ ರತ್ನ ನೀಡುವಲ್ಲಿನ ನಿಲುವಿಗೂ ವಾಸ್ತವದಲ್ಲಿ ಹೊಂದಿರುವ ನಿಲುವಿಗೂ ಸಂಬಂಧವೇ ಇಲ್ಲವಾಗಿದೆ.
ಇಲ್ಲಿಯೂ ಅದು ಮತ್ತೊಮ್ಮೆ ಸೋಗಲಾಡಿತನವನ್ನೇ ತೋರಿಸಿದೆ. ಸ್ವಾಮಿನಾಥನ್ ಅವರಿಗೆ ನೀಡಲಾಗಿರುವ ಭಾರತ ರತ್ನಕ್ಕೆ ಗೌರವ ಸಿಗಬೇಕೆಂದರೆ, ರೈತರಿಗೆ ನ್ಯಾಯ ಸಿಗಬೇಕಿದೆ. ಇದನ್ನೇ ಅವರ ಪುತ್ರಿ ಮಧುರಾ ಸ್ವಾಮಿನಾಥನ್ ಈಗ ಹೇಳುತ್ತಿರುವುದು. ಆದರೆ ನ್ಯಾಯ ಕೇಳಲು ಬಂದ ರೈತರ ದಾರಿಯಲ್ಲಿ ಎಲ್ಲ ಅಡೆತಡೆಗಳನ್ನೂ ಹಾಕಲಾಗಿದೆ. ನಾಲ್ಕೂ ದಿಕ್ಕುಗಳಿಂದ ಅವರನ್ನು ನಿರ್ಬಂಧಿಸಲಾಗಿದೆ. ಅವರ ದಾರಿಯಲ್ಲಿ ಮೊಳೆಗಳನ್ನು ನೆಡಲಾಗಿದೆ.
ಅವರು ರೈತರು, ಕ್ರಿಮಿನಲ್ಗಳಲ್ಲ ಎಂಬ ಮಧುರಾ ಸ್ವಾಮಿನಾಥನ್ ಅವರ ಮಾತು ಸರ್ಕಾರಕ್ಕೆ ಕೇಳಿಸೀತೆ? ಹಿಂದೆ ಮಾಡಿದ ತಪ್ಪುಗಳಿಂದ ಆದ ಅನಾಹುತಗಳನ್ನು ಸರಕಾರ ಕಣ್ಣೆದುರು ತಂದು, ತಕ್ಷಣ ರೈತರ ಅಳಲಿಗೆ ಕಿವಿಯಾಗಬೇಕಾಗಿದೆ. ಇಲ್ಲದೆ ಇದ್ದರೆ ಈ ಹೋರಾಟದ ಕಿಚ್ಚು ಇಡೀ ದೇಶವನ್ನು ಆವರಿಸುವ ಸಾಧ್ಯತೆಗಳಿವೆ. ಕನಿಷ್ಠ ಕೃಷಿ ತಜ್ಞ ಸ್ವಾಮಿನಾಥನ್ ಅವರು ಬೆಂಬಲ ಬೆಲೆ ನಿಗದಿಯ ಬಗ್ಗೆ ತಳೆದ ಅಭಿಪ್ರಾಯವನ್ನಾದರೂ ಗೌರವಿಸಿ, ಅವರಿಗೆ ನೀಡಿದ ಭಾರತ ರತ್ನ ಗೌರವವು ಹರ್ಯಾಣದ ಬೀದಿಯಲ್ಲಿ ಮಣ್ಣುಪಾಲಾಗದಂತೆ ನೋಡಿಕೊಳ್ಳುವುದು ಸರಕಾರದ ಹೊಣೆಗಾರಿಕೆಯಾಗಿದೆ. ಆದರೆ, ರೈತರ ವಿಚಾರದಲ್ಲಿ ಮೋದಿ ಸರ್ಕಾರದ ನಡೆ ಬದಲಾದೀತೆ?