ಮೋದಿ ಸರಕಾರದಿಂದ ರೈತರಿಗೆ ಮಹಾ ದ್ರೋಹ ?
ಕಾರ್ಪೊರೇಟ್ ಲಾಬಿಗಾಗಿ ತರಲಾಗಿತ್ತು ಮೂರು ಕೃಷಿ ಕಾಯ್ದೆಗಳು ! ► ಕೃಷಿಗೆ ಸಂಬಂಧವೇ ಇಲ್ಲದ ವ್ಯಕ್ತಿಯ ಐಡಿಯಾ !
ಸಾಂದರ್ಭಿಕ ಚಿತ್ರ.| Photo: PTI
ನರೇಂದ್ರ ಮೋದಿ ಸರಕಾರ ತಂದು, ರೈತರ ಸುದೀರ್ಘ ಹೋರಾಟದ ಬಳಿಕ ವಾಪಸ್ ಪಡೆದ ಮೂರು ಕೃಷಿ ಕಾನೂನುಗಳು ರೈತರನ್ನು ಉದ್ದಾರ ಮಾಡಲು ತಂದದ್ದಲ್ಲ, ಅವುಗಳನ್ನು ಕಾರ್ಪೊರೇಟ್ ಕಂಪೆನಿಗಳ ಲಾಭಕ್ಕಾಗಿ ತರಲಾಗಿತ್ತು ಎಂದು ರೈತರು ಆಗಲೇ ಗಂಭೀರ ಆರೋಪ ಮಾಡಿದ್ದರು. ಈಗ ಆ ಗಂಭೀರ ಆರೋಪ ನಿಜ ಎಂಬುದು ಸಾಬೀತಾಗಿದೆ. ಹೊಸ ಕೃಷಿ ಕಾನೂನುಗಳನ್ನು ಜಾರಿ ಮಾಡುವಾಗ ರೈತರಿಗಾಗಿ ಎಂದು ಹೇಳಲಾಗಿತ್ತು. ಆದರೆ ಅದರ ಹಿಂದಿದ್ದದ್ದು ರೈತರ ಜೊತೆ ಯಾವುದೇ ಸಂಬಂಧವಿಲ್ಲದ ಕಾರ್ಪೊರೇಟ್ ಲಾಬಿ ಎಂಬ ಸತ್ಯ ಈಗ ಬಯಲಾಗಿದೆ.
ಕೃಷಿಯೊಂದಿಗೆ ಯಾವುದೇ ಸಂಬಂಧವಿಲ್ಲದ ಅಮೇರಿಕದ NRI ಒಬ್ಬರು ಕೃಷಿಕರು ಮತ್ತು ಕೃಷಿ ಭೂಮಿಯನ್ನು ಕಾರ್ಪೊರೇಟ್ಗಳಿಗೆ ಹಸ್ತಾಂತರಿಸುವ ಆಲೋಚನೆಯೊಂದಿಗೆ ಬರುತ್ತಾನೆ. ಇದನ್ನು ಆಕರ್ಷಕ ವ್ಯಾಪಾರ ಪರಿಭಾಷೆಯಲ್ಲಿ 'ಕೃಷಿಯ ಕಾರ್ಪೊರೇಟೀಕರಣ' ಎಂದು ಕರೆದು ರೈತರ ಮೇಲೆ ಹೇರುವ ಪ್ರಯತ್ನ ನಡೆದಿತ್ತು ಎಂಬುದು ಈಗ ಜಗಜ್ಜಾಹೀರಾಗಿದೆ.
ನವೆಂಬರ್ 19, 2021 ರಂದು ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಾಗ ಪ್ರಧಾನ ಮಂತ್ರಿ ಏನು ಹೇಳಿದ್ದರು ? . “ಇಂದು, ದೇಶವಾಸಿಗಳಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ನಾನು ಪ್ರಾಮಾಣಿಕ ಮತ್ತು ಶುದ್ಧ ಹೃದಯದಿಂದ ಹೇಳಲು ಬಯಸುತ್ತೇನೆ, ಬಹುಶಃ ನಮ್ಮ ತಪಸ್ಸಿನಲ್ಲಿ ಏನಾದರೂ ಕೊರತೆ ಇದ್ದಿರಬಹುದು. ಇದರಿಂದಾಗಿ ದೀಪದ ಬೆಳಕಿನಂತ ಸತ್ಯವನ್ನು ಕೆಲವು ಕೃಷಿಕ ಸಹೋದರರಿಗೆ ಮನದಟ್ಟು ಮಾಡಲು ನಮಗೆ ಸಾಧ್ಯವಾಗಲಿಲ್ಲ. ಇಂದು ಗುರುನಾನಕ್ ಜಯಂತಿಯ ಶುಭ ದಿನ. ಇದು ಯಾರನ್ನೂ ದೂರುವ ದಿನವಲ್ಲ.
ಹೀಗೆ ಹೇಳಿದ್ದರು ಅವತ್ತು ಪ್ರಧಾನಿ ಮೋದಿ. ಇವತ್ತು ರಿಪೋರ್ಟರ್ಸ್ ಕಲೆಕ್ಟಿವ್ನ ಶ್ರೀಗಿರೀಶ್ ಜಾಲಿಹಾಳ್ ಪ್ರಧಾನಿ ತಪಸ್ಸಿನ ಹಿಂದಿನ ಹಿಂದಿನ ಬೊಗಳೆಯನ್ನು ಬಯಲು ಮಾಡಿದ್ದಾರೆ. ಕೃಷಿ ಕಾಯ್ದೆ ತರುವ ಮೊದಲೇ ಅದಕ್ಕೆ ಹೇಗೆಲ್ಲ ವೇದಿಕೆ ಸಿದ್ಧಪಡಿಸಲಾಗಿತ್ತು ಮತ್ತು ಕೃಷಿ ಕಾರ್ಪೊರೇಟೀಕರಣ ಬೀಜವನ್ನು ನೀತಿ ಆಯೋಗದ ತಲೆಯೊಳಗೆ ಹಾಕಿದ್ದೇ ಒಬ್ಬ ಎನ್ಆರ್ಐ ಎಂಬುದು ಬಯಲಾಗಿದೆ.
ಬಿಜೆಪಿ, ಉದ್ಯಮಿಗಳು, ಅನಿವಾಸಿ ಭಾರತೀಯ ರಾಜಕಾರಣ ಒಟ್ಟಾಗಿ ಕೃಷಿಯನ್ನು ಕಾರ್ಪೋರೇಟ್ ವಲಯಕ್ಕೆ ಒಪ್ಪಿಸಿ ಬಿಡಲು ಉತ್ಸುಕವಾಗಿದ್ದುದನ್ನು ಡಿಜಿಟಲ್ ಸುದ್ದಿ ವೇದಿಕೆಯಾಗಿರುವ ರಿಪೋರ್ಟರ್ಸ್ ಕಲೆಕ್ಟಿವ್ ನ ಶ್ರೀಗಿರೀಶ್ ಜಾಲೀಹಾಳ್ ಅವರ ತನಿಖಾ ವರದಿ ಬಿಚ್ಚಿಟ್ಟಿದೆ.
ರೈತರ ಆದಾಯ ದ್ವಿಗುಣಗೊಳಿಸುವ ಬಗ್ಗೆ ಮೋದಿ ಘೋಷಿಸಿದ್ದಕ್ಕೆ ಸರಿಯಾಗಿ, ಬಿಜೆಪಿಗೆ ಬೇಕಾದ ಒಬ್ಬ ಅನಿವಾಸಿ ಭಾರತೀಯ ಉದ್ಯಮಿ ಕಡೆಯಿಂದ ನೀತಿ ಆಯೋಗದ ಮುಂದೆ ಒಂದು ಪ್ರಸ್ತಾವನೆ ಬಂದಿತ್ತು. ಆ ಪ್ರಸ್ತಾವನೆಯೇ, ರೈತರ ಆದಾಯ ಡಬಲ್ ಮಾಡುವ ದಾರಿಯಾಗಿ ಕೃಷಿ ಕಾರ್ಪೊರೇಟೀಕರಣವನ್ನು ಪ್ರತಿಪಾದಿಸಿದ ಕಾರ್ಯಪಡೆ ರಚನೆಗೆ ಕಾರಣವಾಗಿತ್ತು ಎಂದು ರಿಪೋರ್ಟರ್ಸ್ ಕಲೆಕ್ಟಿವ್ ವರದಿ ಹೇಳುತ್ತದೆ.
ತಮಾಷೆಯೆಂದರೆ, ನೀತಿ ಆಯೋಗಕ್ಕೆ ಮೋಡಿ ಮಾಡಿ, ಕೃಷಿ ವಲಯದಲ್ಲಿ ಇಷ್ಟೆಲ್ಲ ಅವಾಂತರ ಸೃಷ್ಟಿಸಿದ, ಬಿಜೆಪಿಗೆ ಬೇಕಾದ ಆ ಎನ್ಆರ್ಐ ಉದ್ಯಮಿ ಶರದ್ ಮರಾಠೆಗೆ ಕೃಷಿ ವಿಚಾರದಲ್ಲಿ ಪರಿಣತಿಯೂ ಇಲ್ಲ, ಕೃಷಿ ಜೊತೆ ಯಾವುದೇ ನಂಟೂ ಇಲ್ಲ. ಆತ ಸಾಫ್ಟ್ವೇರ್ ಕಂಪನಿಯನ್ನು ನಡೆಸುತ್ತಿರುವ ಉದ್ಯಮಿ ಅಷ್ಟೆ.
2016ರಲ್ಲಿ ಯುಪಿಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿಯವರು 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳ್ಳಲಿದೆ ಎಂದು ಹೇಳಿದ್ದರು. 2022 ಬಂದು ಹೋಯಿತು, ಆದರೆ ಇವತ್ತಿನವರೆಗೆ, ರೈತರ ಆದಾಯವು ದ್ವಿಗುಣಗೊಂಡಿದೆಯೇ ಎಂದು ಹೇಳಲು ಪ್ರಧಾನಿಗೆ ಸಾಧ್ಯವಾಗಲಿಲ್ಲ. ಆದರೆ 2016 ರಿಂದ, ರೈತರನ್ನು ಹೊರತುಪಡಿಸಿ ಬೇರೆಯವರ ಆದಾಯವನ್ನು ದ್ವಿಗುಣಗೊಳಿಸಲು ತೆರೆಮರೆಯಲ್ಲಿ ಈ ಇನ್ನೊಂದು ಆಟ ಪ್ರಾರಂಭವಾಯಿತು. ಅದು ಈಗ ಬೆಳಕಿಗೆ ಬಂದಿದೆ.
2020 ರಲ್ಲಿ ಮೂರು ಕೃಷಿ ಕಾನೂನುಗಳನ್ನು ಅಂಗೀಕರಿಸುವ ಮೊದಲು ಮೂರರಿಂದ ನಾಲ್ಕು ವರ್ಷಗಳ ಕಾಲ ಏನಾಯಿತು ಎಂದು ಶ್ರೀಗಿರೀಶ್ ಅವರ ಈ ವರದಿ ಹೇಳುತ್ತದೆ. ಈಗ ಪ್ರಶ್ನೆ ಇರೋದು : ಜನವರಿ 2018 ರಲ್ಲಿ ಮರಾಠೆಯವರ ನಿರ್ದೇಶನದ ಮೇರೆಗೆ ರಚಿಸಲಾದ ಕಾರ್ಯಪಡೆಗೆ ರೈತರೊಂದಿಗೆ ಮಾತನಾಡಲು ಸಾಕಷ್ಟು ಸಮಯವಿತ್ತು. ಹಾಗಾದರೆ ರೈತರನ್ನು ಏಕೆ ಸೇರಿಸಲಿಲ್ಲ? ರೈತರ ಜೊತೆ ಏಕೆ ಮಾತನಾಡಲಿಲ್ಲ? ಕಾರ್ಪೊರೇಟ್ಗಳ ಸಮಿತಿಯನ್ನೇ ಏಕೆ ರಚಿಸಲಾಯಿತು?
ರಾಹುಲ್ ಗಾಂಧಿ ಆ ಕೃಷಿ ಕಾನೂನುಗಳನ್ನು ಪ್ರಧಾನಿಯವರ ಸ್ನೇಹಿತರಿಗಾಗಿ, ಅವರ ಕಾರ್ಪೊರೇಟ್ ಸ್ನೇಹಿತರಿಗಾಗಿ ತರಲಾಗಿದೆ ಎಂದು ಹೇಳಿದ್ದರು. ಈಗದು ಸಾಬೀತಾಗಿದೆ. ಆದರೆ, ಕಾರ್ಪೊರೇಟ್ ಕಂಪನಿಗಳಿಗೆ ರೈತರು ತಮ್ಮ ಭೂಮಿ ಗುತ್ತಿಗೆ ನೀಡಬೇಕೆಂಬ ಆ ಉದ್ಯಮಿಯ ಆಕ್ಷೇಪಾರ್ಹ ಪ್ರಸ್ತಾಪದ ಬಗ್ಗೆ ಸ್ವಲ್ಪವೂ ಹಿಂದೆ ಮುಂದೆ ನೋಡದೆ, ಅದನ್ನು ಅತಿ ವೇಗದಿಂದ ಕಾರ್ಯರೂಪಕ್ಕೆ ತರಲು ನೀತಿ ಆಯೋಗ ಹೊರಟಿತು ಎಂಬ ವಿಚಾರ ರಿಪೋರ್ಟರ್ಸ್ ಕಲೆಕ್ಟಿವ್ಗೆ ಸಿಕ್ಕಿರುವ ದಾಖಲೆಗಳಿಂದ ಗೊತ್ತಾಗಿದೆ.
ಸ್ವತಃ ಶರದ್ ಮರಾಠೆ ಕೂಡ ಇದ್ದ ನೀತಿ ಆಯೋಗದ ಕಾರ್ಯಪಡೆ, ಕೃಷಿ ಉತ್ಪನ್ನಗಳ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ಅದಾನಿ ಗ್ರೂಪ್, ಪತಂಜಲಿ, ಬಿಗ್ಬಾಸ್ಕೆಟ್, ಮಹೀಂದ್ರಾ ಗ್ರೂಪ್ ಮತ್ತು ಐಟಿಸಿಯಂತಹ ದೊಡ್ಡ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿತು. ವ್ಯಂಗ್ಯವೆಂದರೆ, 2018ರಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಮೊದಲು ಯಾವುದೇ ರೈತರು, ಅರ್ಥಶಾಸ್ತ್ರಜ್ಞರು ಅಥವಾ ರೈತ ಸಂಘಟನೆಗಳ ಜೊತೆ ನೆಪಕ್ಕೂ ಅದು ಸಮಾಲೋಚನೆ ನಡೆಸಲಿಲ್ಲ,
ಪ್ರಧಾನಿ ನರೇಂದ್ರ ಮೋದಿ ಘೋಷಿಸಿದಂತೆ ಕೃಷಿಕರ ಆದಾಯ ದ್ವಿಗುಣಗೊಳಿಸುವುದು ಅದರ ಗುರಿಯೆನ್ನಲಾಗಿದೆ. ಆದರೆ ಆ ವರದಿಯನ್ನು ಈವರೆಗೂ ಸಾರ್ವಜನಿಕವಾಗಿ ಪ್ರಕಟಿಸಿಲ್ಲ. ಕಡೆಗೆ, ಮೋದಿ ಸರ್ಕಾರ ತಂದಿದ್ದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳು ಭಾರೀ ವಿರೋಧ ಎದುರಿಸಬೇಕಾಯಿತು. ರೈತರ ಸುದೀರ್ಘ ಪ್ರತಿಭಟನೆ ನಡೆಯಿತು. ಕಾನೂನುಗಳನ್ನು ರದ್ದುಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿ ದೆಹಲಿಯ ಗಡಿಯಲ್ಲಿ ಸಾವಿರಾರು ರೈತರು ಪ್ರತಿಭಟನೆಗೆ ಕುಳಿತರು ಮತ್ತು ಅವರಲ್ಲಿ ಕನಿಷ್ಠ 500 ರೈತರು ಬಿಸಿಲಿನ ತಾಪ, ಚಳಿ ಮತ್ತು ಕೋವಿಡ್ನಿಂದ ಸಾವನ್ನಪ್ಪಿದರು,
ರೈತರ ಆದಾಯವನ್ನು ದ್ವಿಗುಣಗೊಳಿಸುವ ತನ್ನ ಯೋಜನೆಯನ್ನು ಮೋದಿ ಸರ್ಕಾರ ಹೇಗೆ ಜಾರಿಗೆ ತಂದಿತು ಎಂಬುದನ್ನು ರಿಪೋರ್ಟರ್ಸ್ ಕಲೆಕ್ಟಿವ್ ಬಹಿರಂಗಪಡಿಸಿದೆ. ಕೃಷಿಯಲ್ಲಿ ಯಾವುದೇ ಅನುಭವವಿಲ್ಲದವರೊಬ್ಬರ ಪ್ರಸ್ತಾವನೆ ಪ್ರಧಾನಿ ಕಚೇರಿಯವರೆಗೂ ಹೇಗೆ ಮುಟ್ಟಿತೆಂಬ ಕಥೆಯನ್ನು ವಿವರಿಸುವ ದಾಖಲೆಗಳು, ದೇಶದ ಅತ್ಯಂತ ನಿರ್ಣಾಯಕ ಕ್ಷೇತ್ರಗಳಲ್ಲಿ ಸರ್ಕಾರ ಹೇಗೆಲ್ಲ ಆಟವಾಡಿದೆ ಎಂಬುದನ್ನು ಬಹಿರಂಗಪಡಿಸುತ್ತವೆ.
ಎಲ್ಲವೂ ಶುರುವಾದದ್ದು ಒಂದು ಪತ್ರದೊಂದಿಗೆ. ಅಕ್ಟೋಬರ್ 2017ರಲ್ಲಿ ಶರದ್ ಮರಾಠೆ ನೀತಿ ಆಯೋಗದ ಅಂದಿನ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರಿಗೆ ಕೃಷಿಯಲ್ಲಿ ಬೆರಗನ್ನೇ ಸೃಷ್ಟಿಸಬಹುದು ಎಂಬಂಥ ಪರಿಕಲ್ಪನೆಯನ್ನು ವಿವರಿಸಿ ಒಂದು ಪತ್ರವನ್ನು ಮೇಲ್ ಮೂಲಕ ಕಳಿಸುತ್ತಾರೆ.
ಮರಾಠೆ ಮತ್ತು ರಾಜೀವ್ ಕುಮಾರ್ ಪರಿಚಿತರು. ಮಾತ್ರವಲ್ಲ, ಮರಾಠೆ ಬಿಜೆಪಿಯ ಓವರ್ಸೀಸ್ ಫ್ರೆಂಡ್ಸ್ ಘಟಕದ ಜೊತೆ ಸಂಪರ್ಕವುಳ್ಲವರು. ಸಹಜವಾಗಿಯೇ ಅವರ ಪತ್ರಕ್ಕೆ ಮಾನ್ಯತೆ ಸಿಕ್ಕಿತು. ಸೆಪ್ಟೆಂಬರ್ 2019ರಲ್ಲಿ ನಬಾರ್ಡ್ನಲ್ಲಿ ಅಂದ್ರೆ ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್ಮೆಂಟ್ ಸ್ಪೇನ್ ರಾಜಕುಮಾರಿಯನ್ನು ಭೇಟಿ ಮಾಡಿದ ಸರ್ಕಾರಿ ನಿಯೋಗದಲ್ಲಿ ಸೇರುವ ಮಟ್ಟಿಗೆ ಅಧಿಕಾರಸ್ಥರ ಜೊತೆಗಿನ ಮರಾಠೆ ಸಂಬಂಧ ಆಳವಾಗಿದೆ.
ಅಮೆರಿಕದಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಮರಾಠೆ, ಅಮೆರಿಕದಲ್ಲಿ ಯೂನಿವರ್ಸಲ್ ಟೆಕ್ನಿಕಲ್ ಸಿಸ್ಟಮ್ಸ್ ಇಂಕ್ ಎಂಬ ಸಾಫ್ಟ್ವೇರ್ ಕಂಪನಿಯನ್ನೂ ಭಾರತದಲ್ಲಿ ಯುನಿವರ್ಸಲ್ ಟೆಕ್ನಿಕಲ್ ಸಿಸ್ಟಮ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನೂ ನಡೆಸುತ್ತಿದ್ದಾರೆ.
60ರ ದಶಕದಿಂದ ಅಮೆರಿಕದಲ್ಲಿದ್ದೇನೆ. ಸಾಮಾಜಿಕವಾಗಿ ಪ್ರಭಾವ ಬೀರುವ ವಿಷಯಗಳಲ್ಲಿ ನನಗೆ ಬಹಳ ಆಸಕ್ತಿ. ಸಾಫ್ಟ್ವೇರ್ ಕಂಪನಿ ನಡೆಸುವುದಕ್ಕೆ ಕೊಡುವಷ್ಟೇ ಸಮಯವನ್ನು ನಾನು ಕಲಿತದ್ದನ್ನು ಸಮಾಜಕ್ಕೆ ಹೇಳುವುದಕ್ಕೂ ಕೊಡುತ್ತೇನೆ ಎಂದೆಲ್ಲ ತನ್ನ ಬಗ್ಗೆ ದೊಡ್ಡದಾಗಿ ಹೇಳಿಕೊಳ್ಳುವ ಮರಾಠೆಯ ಮರ್ಮ ಸಮಾಜೋದ್ಧಾರಕ್ಕಿಂತಲೂ ಬೇರೆಯೇ ಇದೆ.
ಮಾಜಿ ಪ್ರಧಾನಿ ವಾಜಪೇಯಿ ಕಾಲದಲ್ಲಿಯೇ ಈ ಮರಾಠೆ ಭಾರತದಲ್ಲಿ ಸಾಫ್ಟ್ವೇರ್ ಪಾರ್ಕ್ಗಳನ್ನು ಸ್ಥಾಪಿಸುವ ಐಡಿಯಾ ಕೊಡುವುದರಲ್ಲಿ ತೊಡಗಿಸಿಕೊಂಡಿದ್ದರ ಬಗ್ಗೆ ದಾಖಲೆಗಳು ಹೇಳುತ್ತವೆ. 2016ರಲ್ಲಿ ಉತ್ತರ ಪ್ರದೇಶದಲ್ಲಿ ರೈತರ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಬಗ್ಗೆ ಹೇಳಿದ್ದರು. ಅದಕ್ಕೆ ಸರಿಯಾಗಿ ಎಂಬಂತೆ ಮರಾಠೆ ಐಡಿಯಾ ಕಂಡಿದ್ದೇ ನೀತಿ ಆಯೋಗ ತುದಿಗಾಲಲ್ಲಿ ನಿಂತುಬಿಟ್ಟಿತು.
ರೈತರಿಂದ ಗುತ್ತಿಗೆ ಪಡೆದ ಭೂಮಿಯನ್ನು ಒಟ್ಟುಗೂಡಿಸುವುದು, ಸರ್ಕಾರದ ಸಹಾಯದಿಂದ ದೊಡ್ಡ ಮಾರ್ಕೆಟಿಂಗ್ ಕಂಪನಿ ಮಾಡುವುದು ಮತ್ತು ಸಂಸ್ಕರಣೆ ಮತ್ತು ಕೃಷಿಗಾಗಿ ಸಣ್ಣ ಕಂಪನಿಗಳನ್ನು ಸ್ಥಾಪಿಸುವುದು. ಕೃಷಿ ಉತ್ಪಾದನೆ ಮತ್ತು ಮಾರಾಟದಲ್ಲಿ ಆ ಕಂಪನಿಗಳು ಒಟ್ಟಾಗಿ ಕೆಲಸ ಮಾಡುವುದು, ಭೂಮಿ ಗುತ್ತಿಗೆ ನೀಡಿದ ರೈತರು ಸಹ ಅದರ ಭಾಗವಾಗಿ ಲಾಭದ ಪಾಲು ಪಡೆಯುವ ಮೂಲಕ ಹೆಚ್ಚು ಹಣ ಗಳಿಸಬಹುದೆಂಬುದು ಮರಾಠೆ ಪ್ರಸ್ತಾವನೆಯಾಗಿತ್ತು.
ಅಲ್ಲಿಗೇ ನಿಲ್ಲಲಿಲ್ಲ. ಅದರ ಮೇಲ್ವಿಚಾರಣೆಗಾಗಿ ವಿಶೇಷ ಕಾರ್ಯಪಡೆ ಸ್ಥಾಪಿಸುವುದಕ್ಕೂ ಮರಾಠೆ ಶಿಫಾರಸು ಮಾಡಿದರು. ಆ ಕಾರ್ಯಪಡೆಯ ಭಾಗವಾಗಬೇಕಾದ 11 ಮಂದಿಯ ಪಟ್ಟಿಯನ್ನೂ ತಾವೇ ಸಿದ್ಧಪಡಿಸಿದರು. ಆ ಪಟ್ಟಿಯಲ್ಲಿ ತಮ್ಮನ್ನೂ ಸೇರಿಸಿಕೊಂಡರು. ಮತ್ತು ಆಗಿನ ಕೃಷಿ ಖಾತೆ ರಾಜ್ಯ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಗೂ ಜಾಗ ಕೊಟ್ಟರು.
ಮರಾಠೆ ಇದ್ದುದು ಇದೊಂದೇ ಕಾರ್ಯಪಡೆಯಲ್ಲಲ್ಲ. 2018ರಲ್ಲಿ, ಈ ಸಾಫ್ಟ್ವೇರ್ ಕಂಪನಿ ಮಾಲೀಕ ಆಯುಷ್ ಸಚಿವಾಲಯದ ಕಾರ್ಯಪಡೆಯ ಅಧ್ಯಕ್ಷರಾಗಿಯೂ ನೇಮಕಗೊಂಡಿದ್ದರು. ಇಲ್ಲಿಯೂ ಅಷ್ಟೆ, ಆಯುಷ್ ಔಷಧ ವಿಚಾರವಾಗಿ ಅವರಿಗೆ ಏನೇನೂ ಗೊತ್ತಿಲ್ಲ. ಆದರೂ ಕಾರ್ಯಪಡೆಗೆ ಅವರದೇ ನೇತೃತ್ವ. ರೈತರ ಆದಾಯ ದ್ವಿಗುಣಗೊಳಿಸುವ ಕಾರ್ಯಪಡೆಯಲ್ಲಿ ಮರಾಠೆ ಸೇರಿಸಿದ್ದ ಮತ್ತೊಂದು ಹೆಸರು ಉದ್ಯಮಿ ಸಂಜಯ ಮಾರಿವಾಲಾ. ಈತ ಆಹಾರ ಮತ್ತು ನ್ಯೂಟ್ರಾಸ್ಯುಟಿಕಲ್ ವ್ಯವಹಾರದಲ್ಲಿ ತೊಡಗಿರುವ ಹದಿನೆಂಟು ಕಂಪನಿಗಳನ್ನು ನಡೆಸುತ್ತಿರುವವರು. ಮಾರಿವಾಲಾ ಜೊತೆ ಮರಾಠೆಗೆ ಉದ್ಯಮ ಸಂಬಂಧವಿತ್ತು.
ತಮಗೆ ಬೇಕಾದವರನ್ನೆಲ್ಲ ಇದರಲ್ಲಿ ಒಳಪಡಿಸುವ ಮರಾಠೆ ಮಾಯೆ ಇಷ್ಟಕ್ಕೇ ನಿಲ್ಲುವುದಿಲ್ಲ. ನೀತಿ ಆಯೋಗಕ್ಕೆ ಸಲ್ಲಿಸಿದ್ದ ಅವರ ಪ್ರಸ್ತಾವನೆಯಲ್ಲಿ, ರೈತರ ಆದಾಯ ದ್ವಿಗುಣಗೊಳಿಸುವ ಕುರಿತು ಅನಿವಾಸಿ ಭಾರತೀಯರು ಮತ್ತು ಉದ್ಯಮಿಗಳಿಂದ ಸಲಹೆಗಳನ್ನು ಪಡೆಯುವ ಅಭಿಯಾನದ ವಿಚಾರವೂ ಇತ್ತು. ಮೋದಿಯವರ ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸುವ ಮತ್ತು ಬಿಜೆಪಿ ಸಾಗರೋತ್ತರ ಘಟಕದ ಜೊತೆ ಸಂಪರ್ಕವಿರುವ ವಿಜಯ್ ಚೌತೈವಾಲೆ ಎಂಬವರನ್ನು ಮರಾಠೆ ಈ ಉದ್ದೇಶಕ್ಕೆ ಹೆಸರಿಸಿದ್ದರು. ಆದರೂ ಕಡೆಗೆ ಅದೇಕೋ ಆಗಲಿಲ್ಲ.
ನೀತಿ ಆಯೋಗವಂತೂ ಮರಾಠೆಯ ಯೋಜನೆ ಬಗ್ಗೆ ಅತೀವ ಶ್ರದ್ಧೆ ಹೊಂದಿತ್ತು. ಕೆಲವೇ ದಿನಗಳಲ್ಲಿ, ಮರಾಠೆ ಪರಿಕಲ್ಪನೆಯನ್ನು ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಲು ನೀತಿ ಆಯೋಗ ನಿರ್ಧರಿಸಿತು. ಉನ್ನತ ಮಟ್ಟದ 16 ಅಧಿಕಾರಿಗಳ ಆ ಸಭೆಯಲ್ಲಿ 7 ಮಂದಿ ಮರಾಠೆ ಶಿಫಾರಸು ಮಾಡಿದ್ದವರೇ ಆಗಿದ್ದರು. ಕಾರ್ಯಪಡೆ ರಚನೆಯ ಬಗ್ಗೆ ಚರ್ಚೆಯಾಯಿತು.
2017ರ ಡಿಸೆಂಬರ್ 8ರಂದು ನೀತಿ ಆಯೋಗದ ಸದಸ್ಯ ರಮೇಶ್ ಚಂದ್, ಕಾರ್ಯಪಡೆ ಸ್ಥಾಪನೆ ಪ್ರಸ್ತಾಪವನ್ನು ಪಿಎಂಒ ಜೊತೆ ಚರ್ಚಿಸಲಾಗಿದೆ ಮತ್ತು ಪ್ರತಿಕ್ರಿಯೆಗಾಗಿ ಕಾಯಲಾಗುತ್ತಿದೆ ಎಂದು ಟಿಪ್ಪಣಿ ಬರೆದರು. ಆದರೆ, ನೀತಿ ಆಯೋಗ ಪಿಎಂಒ ಪ್ರತಿಕ್ರಿಯೆಯನ್ನು ಉಲ್ಲೇಖಿಸುವುದಿಲ್ಲ. ಅದೇನಿತ್ತು ಎಂಬುದನ್ನು ಸುಲಭವಾಗಿ ಊಹಿಸಬಹುದೆಂಬುದು ಬೇರೆ. ಜನವರಿ 2018ರ ಹೊತ್ತಿಗೆ, ಅಂದರೆ ಮರಾಠೆ ಪ್ರಸ್ತಾವನೆ ಕಳಿಸಿದ ಮೂರೇ ತಿಂಗಳೊಳಗೆ ನೀತಿ ಆಯೋಗ ಅಧಿಕೃತವಾಗಿ ಕಾರ್ಯಪಡೆ ರಚಿಸಿತು.
ನವೆಂಬರ್ 2018 ರಲ್ಲಿ, ಅಮಿತಾಬ್ ಕಾಂತ್ ಅವರು ಕನಿಷ್ಠ ಬೆಂಬಲ ಬೆಲೆಯನ್ನು (MSP) ರದ್ದುಗೊಳಿಸಬೇಕು ಎಂದು NITI ಆಯೋಗದ ವರದಿಯನ್ನು ಬಿಡುಗಡೆ ಮಾಡಿದರು. ಇಲ್ಲೊಂದು ಸಂಗತಿ ಗಮನಿಸಬೇಕಿದೆ. ರೈತರ ಆದಾಯ ದ್ವಿಗುಣಗೊಳಿಸುವ ಸಂಬಂಧ ಸರ್ಕಾರ ಆಗಲೇ ಬೃಹತ್ ಅಧಿಕೃತ ಅಂತರ್ ಸಚಿವಾಲಯ ಸಮಿತಿಯನ್ನು ರಚಿಸಿತ್ತು. ಹಾಗಿದ್ದೂ ಮರಾಠೆ ಮಾತಿನ ಮೇಲೆ ವಿಶೇಷ ಕಾರ್ಯಪಡೆಯನ್ನು ಏಕೆ ಗುಟ್ಟಾಗಿ ಸ್ಥಾಪಿಸಲಾಯಿತು ಎಂಬ ಪ್ರಶ್ನೆಯೇಳುತ್ತದೆ.
ಈ ಸಂದೇಹ ಬಗೆಹರಿಸುವ ಏನನ್ನೂ ನೀತಿ ಆಯೋಗದ ದಾಖಲೆಗಳು ತೋರಿಸುವುದಿಲ್ಲ. ಆಯೋಗದ ವಾರ್ಷಿಕ ವರದಿಗಳಲ್ಲಿ ಕೂಡ ಸದಸ್ಯರ ವಿವರಗಳಿಲ್ಲದೆ ಅಥವಾ ಯಾರೊಡನೆ ಸಮಾಲೋಚಿಸಲಾಯಿತು ಎಂಬುದನ್ನು ಹೇಳದೆ, ಸಂಕ್ಷಿಪ್ತ ಉಲ್ಲೇಖ ಮಾತ್ರವೇ ಇದೆ. ಕಾರ್ಯಪಡೆಯ ವರದಿಯನ್ನೂ ಬಹಿರಂಗಪಡಿಸಿಲ್ಲ.
ರೈತರ ಆದಾಯ ದ್ವಿಗುಣಗೊಳಿಸುವ ಕುರಿತ ಮೋದಿ ಭಾಷಣದ ಎರಡು ತಿಂಗಳಲ್ಲೇ ಈ ಅಂತರ್ ಸಚಿವಾಲಯ ಸಮಿತಿ ರಚಿಸಲಾಗಿತ್ತು. ಒಂದು ವರ್ಷ ನಾಲ್ಕು ತಿಂಗಳ ನಂತರ ಸಮಿತಿ 14 ಸಂಪುಟಗಳಲ್ಲಿ ವರದಿ ಸಲ್ಲಿಸಲು ಪ್ರಾರಂಭಿಸಿತು. ರೈತರ ಆದಾಯವೇನೂ ದ್ವಿಗುಣಗೊಳ್ಳಲಿಲ್ಲವಾದರೂ, 3,000 ಪುಟಗಳಿಗಿಂತ ಹೆಚ್ಚಿದ್ದ ವರದಿಯನ್ನು ಸಾರ್ವಜನಿಕರ ಮುಂದೆ ಇಡಲಾಯಿತೆಂಬುದು ನಿಜ.
ಮರಾಠೆ ಮಾತಿನ ಪ್ರಕಾರ ಕಾರ್ಯಪಡೆ ಸ್ಥಾಪಿಸಿದ ತಿಂಗಳಲ್ಲೇ ಈ ಅಧಿಕೃತ ಸಮಿತಿ ತನ್ನ ವರದಿಯ ಕಡೇ ಎರಡು ಸಂಪುಟಗಳನ್ನು ಕೊಟ್ಟಿತ್ತು ಮತ್ತು ಅದರಲ್ಲಿ, ರೈತರ ಆದಾಯ ದ್ವಿಗುಣಗೊಳಿಸಲು ವ್ಯಾಪಾರ ಮಾದರಿಗಳನ್ನು ರೂಪಿಸುವುದಕ್ಕೆ ಮೀಸಲಾದ ಕಾರ್ಯಪಡೆಯ ಅಗತ್ಯವನ್ನು ಹೇಳಿತ್ತು. ಆದರೆ ಅಷ್ಟು ಹೊತ್ತಿಗೆ, ನೀತಿ ಆಯೋಗದ ಕಾರ್ಯಪಡೆಯ ಆಟ ಜೋರಾಗಿ ಸಾಗಿತ್ತು. ಮರಾಠೆ ಕೇಳಿದ ಸವಲತ್ತುಗಳನ್ನೆಲ್ಲ ನೀತಿ ಆಯೋಗ ಆ ಕ್ಷಣದಲ್ಲೇ ಅವರಿಗೆ ಒದಗಿಸಿತ್ತು.
ಅಧಿಕೃತ ಕಾರ್ಯಪಡೆ ಕೃಷಿ ಕಾರ್ಯಕರ್ತರನ್ನೂ ಸಮಾಲೋಚನೆಗೆ ಪರಿಗಣಿಸಿತ್ತು. ಆದರೆ ಮರಾಠೆ ಕಾರ್ಯಪಡೆ ಮಾತ್ರ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ವೇದಿಕೆಯಾಗಿ ಕೆಲಸ ಮಾಡಿತು. ಆ ಕಾರ್ಯಪಡೆಯ ಮೊದಲ ಸಭೆಯಲ್ಲಿ, ಕೃಷಿಯಿಂದ ಕೃಷಿ ಉದ್ಯಮದತ್ತ ಸಾಗುವ ಸಮಯ ಇದು ಎಂದು ಮರಾಠೆ ಹೇಳಿದ್ದರು. ರಿಪೋರ್ಟರ್ಸ್ ಕಲೆಕ್ಟಿವ್ ತನ್ನ ಎರಡನೇ ವರದಿಯಲ್ಲಿ ಕೃಷಿ ಕಾನೂನುಗಳ ಹಿಂದೆ ಗೌತಮ್ ಅದಾನಿ ಸಮೂಹದ ಪಾತ್ರವನ್ನು ಪ್ರಶ್ನಿಸಿದೆ.
ನೀತಿ ಆಯೋಗದ ಕಾರ್ಯಪಡೆಯ ರಚನೆಯ ಮೊದಲು, ಅದಾನಿ ಗುಂಪು ಅಗತ್ಯ ಸರಕುಗಳ ಕಾಯಿದೆಯಲ್ಲಿ ಬದಲಾವಣೆಗಳಿಗೆ ಲಾಬಿ ಮಾಡಿತ್ತು ಎಂದು ಈ ವರದಿ ಬಹಿರಂಗಪಡಿಸಿದೆ. ರೈತರ ಆಂದೋಲನದ ಸಮಯದಲ್ಲಿ, ಅದಾನಿ ಅವರ ಬೃಹತ್ ಗೋದಾಮಿನ ಫೋಟೋಗಳು ವೈರಲ್ ಆಗಿದ್ದು ನಿಮಗೆ ನೆನಪಿರಬಹುದು. ಈ ಗೋದಾಮುಗಳನ್ನು ತುಂಬಲು ಅಗತ್ಯ ವಸ್ತುಗಳ ಕಾಯಿದೆಯನ್ನು ಬದಲಾಯಿಸಲಾಗಿದೆ ಮತ್ತು ಅಕ್ರಮ ದಾಸ್ತಾನಿಗೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ ಎಂದು ರೈತರು ಆರೋಪಿಸಿದ್ದರು. ಇದರಿಂದ ರೈತರು ಆಕ್ರೋಶಗೊಂಡಿದ್ದರು. ಕೊಯ್ಲು ಕಾಲದಲ್ಲಿ ದೊಡ್ಡ ಕಾರ್ಪೊರೇಟ್ಗಳು ಬೆಲೆ ಕಡಿಮೆ ಮಾಡಿ ಧಾನ್ಯವನ್ನೆಲ್ಲ ಖರೀದಿಸುತ್ತಾರೆ. ಅದನ್ನು ಅಕ್ರಮ ದಾಸ್ತಾನು ಮಾಡುತ್ತಾರೆ ಮತ್ತು ನಂತರ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ರೈತರ ಶ್ರಮ ಮತ್ತು ಕಾರ್ಪೊರೇಟ್ ನವರಿಗೆ ಮಾತ್ರ ಲಾಭ. ಆದ್ದರಿಂದ ಇದು ಕೇವಲ ತಮ್ಮ ಸಲುವಾಗಿ ಮಾತ್ರ ಚಳುವಳಿಯಲ್ಲ ಎಂದು ರೈತರು ಪದೇ ಪದೇ ಹೇಳುತ್ತಿದ್ದರು. ಧಾನ್ಯ ತಲುಪುವ ಪ್ರತಿ ಮನೆಯವರ ಹೋರಾಟವಿದು ಎಂದು ರೈತರು ಹೇಳುತ್ತಿದ್ದರು.
ರೈತರ ಚಳವಳಿಯಲ್ಲಿ ಅದಾನಿ ಗುಂಪಿನ ವಿರುದ್ಧ ಹಲವು ಘೋಷಣೆಗಳು ಮೊಳಗಿದವು. ರಿಪೋರ್ಟರ್ಸ್ ಕಲೆಕ್ಟಿವ್ ದಾಖಲೆಗಳನ್ನು ಪರಿಶೀಲಿಸಿದೆ ಮತ್ತು ಅದಾನಿ ಸಮೂಹ ಏಪ್ರಿಲ್ 2018 ರಲ್ಲಿ ಅಕ್ರಮ ದಾಸ್ತಾನು ವಿರೋಧಿ ಕಾನೂನನ್ನು ತೆಗೆದುಹಾಕಲು ಸರ್ಕಾರದೊಂದಿಗೆ ಲಾಬಿ ಮಾಡಿದ್ದಾರೆ ಎಂದು ಹೇಳಿದೆ. ಇದಾಗಿ ಎರಡೂವರೆ ವರ್ಷಗಳ ನಂತರ, ಜೂನ್ 5 2020 ರಂದು, ಕೃಷಿ ಸುಗ್ರೀವಾಜ್ಞೆಯನ್ನು ತಂದಾಗ ಯಾರಿಗೂ ಸಂಶಯವೇ ಆಗಲಿಲ್ಲ. ಮತ್ತೆ ಕಾನೂನನ್ನು ಬದಲಾಯಿಸಲಾಯಿತು. ಅಕ್ರಮ ದಾಸ್ತಾನಿಗೆ ಕಡಿವಾಣ ಹಾಕುವ ರಾಜ್ಯಗಳ ಹಕ್ಕನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿತು. ಕೇವಲ, ಕೇಂದ್ರ ಸರ್ಕಾರವು ಸ್ಟಾಕ್ ಮಿತಿಯನ್ನು ನಿರ್ಧರಿಸಬಹುದು ಮತ್ತು ಅದು ಕೂಡ ಬರಗಾಲದಂತಹ ಅನಿರೀಕ್ಷಿತ ಸಂದರ್ಭಗಳಲ್ಲಿ ಮಾತ್ರ ಎಂದು ಕಾನೂನು ಬದಲಾಯಿಸಲಾಯಿತು.
NITI ಆಯೋಗ ಕಾರ್ಯಪಡೆ ಸಭೆಯಲ್ಲಿ ಭಾಗವಹಿಸಿದ ಅದಾನಿ ಸಮೂಹದ ಪ್ರತಿನಿಧಿಯು ಅಕ್ರಮ ದಾಸ್ತಾನು ವಿರೋಧಿ ಕಾನೂನು ಉದ್ಯಮ ಮತ್ತು ವ್ಯಾಪಾರಕ್ಕೆ ಅಡ್ಡಿಯಾಗಿದೆ ಎಂದು ಹೇಳಿದ್ದರು. ಕೃಷಿ ಕಾನೂನು ತರುವಲ್ಲಿ ಅದಾನಿ ಗ್ರೂಪ್ನ ಸಹಭಾಗಿತ್ವಕ್ಕೆ ಇದು ಮೊದಲ ಸಾಕ್ಷಿಯಾಗಿದೆ ಎಂದು ಹೇಳುತ್ತದೆ ಶ್ರೀಗಿರೀಶ್ ಜಾಲಿಹಾಳ್ ವರದಿ. ರಿಪೋರ್ಟರ್ಸ್ ಕಲೆಕ್ಟಿವ್ ತನ್ನ ಪ್ರಶ್ನೆಗಳನ್ನು ಅದಾನಿ ಗ್ರೂಪ್ ಮತ್ತು NITI ಆಯೋಗಕ್ಕೆ ಕಳುಹಿಸಿದೆ, ಆದರೆ ಯಾವುದೇ ಉತ್ತರ ಬಂದಿಲ್ಲ.
ರೈತರಿಗೆ ಹೊಸ ಕೃಷಿ ಕಾನೂನುಗಳ ಹಿಕ್ಮತ್ತು ಏನು ಎಂಬುದು ನಿಜವಾಗಿ ಅರ್ಥವಾಗಿತ್ತು. ಕರೋನದ ಹೊರತಾಗಿಯೂ, ಅವರು ರಸ್ತೆಗಿಳಿದರು ಮತ್ತು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಅವರು ಮಹಾ ಹೋರಾಟವನ್ನೇ ನಡೆಸಿದರು.
ಭಟ್ಟಂಗಿ ಮಾಧ್ಯಮಗಳು ಅವರನ್ನು ಭಯೋತ್ಪಾದಕರು ಎಂದು ಕರೆದವು, ಆಗ ರೈತರು ತಮ್ಮ ಪ್ರತಿಭಟನೆಯಿಂದ ಭಟ್ಟಂಗಿ ಮಾಧ್ಯಮವನ್ನು ಹೊರಹಾಕಿದರು. ಅವರು ತಮ್ಮದೇ ಪತ್ರಿಕೆಯನ್ನು ಹೊರತಂದರು
ರೈತರನ್ನು ತಡೆಯಲು ಸರ್ಕಾರ ದೊಡ್ಡ ಬ್ಯಾರಿಕೇಡ್ಗಳನ್ನು ಹಾಕಿತು, ಅವುಗಳ ಕೆಳಗೆ ಮೊಳೆಗಳನ್ನು ಹಾಕಿತು. ಒಂದು ವರ್ಷದವರೆಗೆ, ಎಲ್ಲಾ ರೀತಿಯ ಪ್ರತಿಕೂಲ ಹವಾಮಾನ, ರಾಜಕೀಯ ಮತ್ತು ಪೊಲೀಸರನ್ನು ಎದುರಿಸಿದ ನಂತರ, ರೈತರು ಹಿಂದೆ ಸರಿಯುವುದಿಲ್ಲ ಎಂದು ಸಾಬೀತುಪಡಿಸಿದರು.
ಈ ಚಳವಳಿಯ ಸಂದರ್ಭದಲ್ಲಿ, 600 ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದರು. ಎಷ್ಟು ರೈತರು ಸತ್ತಿದ್ದಾರೆ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ ಎಂದು ಸರ್ಕಾರ ಹೇಳಿದೆ. ಸುಮಾರು 670 ರೈತರು ಸಾವನ್ನಪ್ಪಿದ್ದಾರೆ ಎಂದು ರೈತ ಸಂಘಟನೆಗಳು ಹೇಳುತ್ತವೆ. ಇಷ್ಟನ್ನೆಲ್ಲ ಪತ್ತೆ ಮಾಡಿರುವ ರಿಪೋರ್ಟರ್ಸ್ ಕಲೆಕ್ಟಿವ್, ಹಲವು ಪ್ರಶ್ನೆಗಳನ್ನು ನೀತಿ ಆಯೋಗ, ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಮತ್ತು ಕಾರ್ಯಪಡೆ ಸಮಾಲೋಚಿಸಿದ ಸಂಸ್ಥೆಗಳಿಗೆ ಕಳಿಸಿದೆ. ಉತ್ತರಕ್ಕಾಗಿ ಬೆನ್ನುಬಿದ್ದರೂ ಯಾರ ಕಡೆಯಿಂದಲೂ ಪ್ರತಿಕ್ರಿಯೆ ಬಂದಿಲ್ಲ. ಮೋದಿ ಸರ್ಕಾರದಲ್ಲಿ ಬಿಜೆಪಿಗೆ ಬೇಕಾದ ಮಂದಿ ಹೇಗೆಲ್ಲ ಮೇಯಬಲ್ಲರು ಮತ್ತು ಬೇಳೆ ಬೇಯಿಸಿಕೊಳ್ಳಬಲ್ಲರು, ಹಾಗೂ ಅದಕ್ಕೆ ಹೇಗೆ ಮೇಕ್ ಇನ್ ಇಂಡಿಯಾ ಬಣ್ಣ ಕೊಡಲಾಗುತ್ತದೆ ಎಂಬುದಕ್ಕೆ ಈ ಮರಾಠೆ ಮಾಯೆ ಮತ್ತೊಂದು ಉದಾಹರಣೆ.