ಬಿಜೆಪಿ, ಮೋದಿ ವಿರುದ್ಧ ಇಂಡಿಯಾ ಒಕ್ಕೂಟದ ಬೃಹತ್ ಸಮಾವೇಶ
► ತಿರುಗಿ ಹೊಡೆಯಿತೇ ವಿಪಕ್ಷ ಒಕ್ಕೂಟ ಒಡೆಯುವ ಮೋದಿ ಪ್ರಯತ್ನ ? ► ದಿಲ್ಲಿಯ ಸಮಾವೇಶ ನೋಡಿ ಬಿಜೆಪಿ ಪಾಳಯದಲ್ಲಿ ನಡುಕ
ಮೋದಿ | PC : PTI
ಭಾನುವಾರ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ನಡೆದ ಇಂಡಿಯಾ ಒಕ್ಕೂಟದ ವಿರೋಧ ಪಕ್ಷಗಳ ಬೃಹತ್ ರ್ಯಾಲಿ, ಮತ್ತದರ ಮೂಲಕ ವ್ಯಕ್ತವಾದ ವಿಚಾರಗಳು ಈ ದೇಶದಲ್ಲಿನ ವಾಸ್ತವದ ಬಗ್ಗೆ ಮತದಾರರಲ್ಲಿ ಒಂದು ಎಚ್ಚರವನ್ನು ಮೂಡಿಸುವ ಹಾದಿಯಲ್ಲಿದ್ದವು ಎಂಬುದು ಸ್ಪಷ್ಟ. ವಿಪಕ್ಷಗಳನ್ನು ಒಡೆಯಲು, ಅವುಗಳ ನಾಯಕರಿಗೇ ಭಯ ಕಾಡುವಂತೆ ಮಾಡಲು ಮೋದಿ ಸರಕಾರ ಪ್ರಯತ್ನಿಸಿದಷ್ಟೂ ವಿಪಕ್ಷಗಳು ತಮ್ಮ ಭಿನ್ನಾಭಿಪ್ರಾಯ ಗಳನ್ನು ಬದಿಗೊತ್ತಿ ಒಗ್ಗಟ್ಟಾಗುತ್ತಿವೆ , ಇನ್ನಷ್ಟು ಧೈರ್ಯದಿಂದ ಸರಕಾರವನ್ನು ಪ್ರಶ್ನಿಸುತ್ತಿವೆ ಎಂಬುದೂ ರವಿವಾರ ಸಾಬೀತಾಯಿತು.
ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ತೃಣಮೂಲ ಕಾಂಗ್ರೆಸ್, ಉದ್ಧವ್ ಠಾಕ್ರೆ ಬಣದ ಶಿವಸೇನೆ, ಸಿಪಿಐ, ಸಿಪಿಎಂ, ಜಾರ್ಖಂಡ್ ಮುಕ್ತಿ ಮೋರ್ಚಾ, ಶರದ್ ಪವಾರ್ ಎನ್ಸಿಪಿ, ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಮುಂತಾದ ಪಕ್ಷಗಳು ಒಗ್ಗಟ್ಟಿನ ದನಿಯಲ್ಲಿ ಮೋದಿ ಸರ್ಕಾರದ ವಿರುದ್ದ ಬಹಳ ಪ್ರಖರ ಪ್ರಶ್ನೆಗಳನ್ನು ಎತ್ತಿದವು. ರವಿವಾರದ ಈ ಮಹಾ ಸಮಾವೇಶ ಈ ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬುದನ್ನು ಬಹಳ ವಿಸ್ತಾರವಾಗಿ ಅಷ್ಟೇ ಸಶಕ್ತವಾಗಿ ದೇಶದ ಜನತೆಯ ಮುಂದಿಟ್ಟಿತು.
ದೇಶದ ಪ್ರಜಾಪ್ರಭುತ್ವವನ್ನು ಉಳಿಸಲು ಜನರು ಬಹು ದೊಡ್ಡ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳಬೇಕಿದೆ. ಇಲ್ಲದೇ ಹೋದರೆ ಆಳುವ ಪಕ್ಷ ತನ್ನದೇ ಆಟವಾಡಿ, ದೇಶದ ಪ್ರಜಾಸತ್ತೆಯನ್ನೇ ಮುಗಿಸುವುದಕ್ಕೆ ಮುಂದಾಗಲಿದೆ ಎಂಬುದು ವಿಪಕ್ಷ ನಾಯಕರ ಪ್ರತಿಪಾದನೆಯಾಗಿತ್ತು. ಈ ಸಮಾವೇಶದ ಮೂಲಕ ದೇಶದ ಜನರಿಗೆ ಬಹಳ ದೊಡ್ಡ ಸತ್ಯವೊಂದು ಅತ್ಯಂತ ಪರಿಣಾಮಕಾರಿಯಾಗಿ ತಲುಪಿದೆ ಎಂದು ಭಾವಿಸಬಹುದೆ ?
ಒಂದೆಡೆ ಈಡಿ ತನಿಖೆಗೆ ಒಳಗಾಗಿದ್ದ ನಾಯಕರು ಬಿಜೆಪಿ ಸೇರಿದ ಕೂಡಲೇ ಶುದ್ಧರಾಗಿ ತನಿಖೆಯಿಂದ ಮುಕ್ತರಾಗುತ್ತಿರುವಾಗ ಇನ್ನೊಂದೆಡೆ ಅದೇ ಈ ಡಿ ವಿಪಕ್ಷದ ಮುಖ್ಯಮಂತ್ರಿಗಳನ್ನೂ ಬಂಧಿಸಿ ಜೈಲಿಗೆ ಕಳಿಸುತ್ತಿದೆ.
ಇಂಥ ಹೊತ್ತಲ್ಲಿ ವಿಪಕ್ಷಗಳು ಎತ್ತಿರುವ ಪ್ರಶ್ನೆಗಳು ಮೋದಿ ಸರ್ಕಾರ ನಿಜವಾಗಿಯೂ ಎಂಥ ಅಪಾಯಕಾರಿ ಆಟದಲ್ಲಿ ತೊಡಗಿದೆ ಎಂಬುದನ್ನು ಜನರಿಗೆ ತಲುಪಿಸುವಲ್ಲಿ ಗೆದ್ದಿವೆಯೆ ? ತನಿಖಾ ಏಜನ್ಸಿಗಳ ಮೂಲಕ ನಡೆದಿರುವ ಭಯೋತ್ಪಾದನೆಯ ಬಗ್ಗೆ ವಿಪಕ್ಷಗಳ ಎಲ್ಲ ನಾಯಕರೂ ಮುಕ್ತವಾಗಿ ಮಾತನಾಡಿರುವ ಈ ಸಮಾವೇಶ ದೇಶ ಮಹಾ ಚುನಾವಣೆಯ ಹೊಸ್ತಿಲಲ್ಲಿ ನಿಂತಿರುವ ಈ ಹೊತ್ತಿನಲ್ಲಿ ಎಷ್ಟು ದೊಡ್ಡ ಮತ್ತು ಮಹತ್ದದ ವಿದ್ಯಮಾನವಾಗಿದೆ ?
ಸಂವಿಧಾನ ಉಳಿಸಿ ಮತ ನೀಡುವಂತೆ ಎಲ್ಲ ಮುಖಂಡರು ಜನತೆಗೆ ಮನವಿ ಮಾಡಿರುವುದು, ಮತ್ತು ಸಮಾವೇಶ ದೊಡ್ಡ ಜನಸ್ಥೋಮಕ್ಕೆ ಸಾಕ್ಷಿಯಾದದ್ದು, ತನ್ನ ವಿಚಾರಗಳನ್ನು ಅದು ಅತ್ಯಂತ ಸ್ಪಷ್ಟ ಮತ್ತು ಒಗ್ಗಟ್ಟಿನ ದನಿಯಲ್ಲಿ ವ್ಯಕ್ತಪಡಿಸಿದ್ದು, ಈ ದೇಶದ ರಾಜಕೀಯದಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡಬಲ್ಲುದೆ?
ಹಾಗೆ ನೋಡಿದರೆ, ಸರ್ಕಾರದ ಸರ್ವಾಧಿಕಾರಿ ಧೋರಣೆಯ ವಿರುದ್ದ, ಅದರ ಒಟ್ಟು ಪ್ರಜಾಸತ್ತಾತ್ಮಕ ವಿರೋಧಿ ನಡೆಯ ವಿರುದ್ಧ ಇಂಥದೊಂದು ಪ್ರಖರ ಪ್ರತಿ ದಾಳಿ ದೇಶದ ಇತ್ತೀಚಿನ ರಾಜಕಾರಣದಲ್ಲಿ ಆಗಿದ್ದ ಉದಾಹರಣೆಗಳಿಲ್ಲ. ಅದು ಭಾನುವಾರ ದೆಹಲಿಯ ರಾಮ್ಲೀಲಾ ಮೈದಾನದಲ್ಲಿ ಆಯಿತು.
ಎಲ್ಲ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತ, ವಿಪಕ್ಷಗಳನ್ನು ಚುನಾವಣೆಗೆ ಮೊದಲೇ ಅಸಹಾಯಕವಾಗಿಸಲು ಕೇಂದ್ರ ಏಜನ್ಸಿಗಳನ್ನು ಬಳಸುತ್ತಿರುವ ಕೇಂದ್ರದ ಮೋದಿ ಸರ್ಕಾರ ಮುಂಬರುವ ಚುನಾವಣೆ ಒಂದು ವಂಚಕ ಚುನಾವಣೆಯಾಗಲು ಕಾರಣವಾಗಲಿದೆಯೆ? ಇಂಥದೊಂದು ಪ್ರಶ್ನೆಯನ್ನು ರಾಮ್ಲೀಲಾ ಮೈದಾನದಲ್ಲಿ ನಡೆದ ಇಂಡಿಯಾ ವಿಪಕ್ಷ ಒಕ್ಕೂಟದ ಲೋಕತಂತ್ರ ಬಚಾವೋ ಮಹಾ ಸಮಾವೇಶದಲ್ಲಿ ಪ್ರತಿಪಕ್ಷ ನಾಯಕರು ಎತ್ತಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡುವ ಯತ್ನ ಮೋದಿಯಿಂದ ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇರವಾಗಿ ಆರೋಪಿಸಿದ್ದಾರೆ. ಒಂದು ವೇಳೆ ಚುನಾವಣೆ ಮ್ಯಾಚ್ ಫಿಕ್ಸಿಂಗ್ ಆಗಿದ್ದಲ್ಲಿ ಚುನಾವಣೆಗೂ ಮೊದಲೇ ಬಿಜೆಪಿ ಗೆಲ್ಲುವುದು ನಿಶ್ಚಿತವಾಗಲಿದೆ. ಹಾಗೆ ಗೆಲ್ಲುವ ಬಿಜೆಪಿ ದೇಶದ ಸಂವಿಧಾನವನ್ನೇ ಬದಲಾಯಿಸಿ, ಜನರ ಹಕ್ಕುಗಳನ್ನು ಕಸಿದುಕೊಳ್ಳಲಿದೆ ಎಂಬ ಆತಂಕವನ್ನು ರಾಹುಲ್ ವ್ಯಕ್ತಪಡಿಸಿದ್ದಾರೆ.
ಸಂವಿಧಾನವನ್ನು ಬದಲಾಯಿಸಲು ತಮಗೆ 400ಕ್ಕೂ ಹೆಚ್ಚು ಸ್ಥಾನಗಳು ಬೇಕಾಗಿವೆ ಎಂಬ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆಯನ್ನೂ ರಾಹುಲ್ ಪ್ರಸ್ತಾಪಿಸಿ, ದೇಶದೆದುರು ಇರುವ ಅಪಾಯ ಎಂಥದು ಎಂಬುದನ್ನು ವಿವರಿಸಿದರು. ಬೇರೆ ಬೇರೆ ಸ್ವಾಯತ್ತ ಸಂಸ್ಥೆಗಳನ್ನೆಲ್ಲ ಒಮ್ಮೆಲೆ ಪೂರ್ತಿಯಾಗಿ ಕಾನೂನಿನ ಮೂಲಕ ಹಿಡಿತಕ್ಕೆ ತೆಗೆದುಕೊಳ್ಳುವ ಬಹಳ ದೊಡ್ಡ ಆಘಾತಕಾರಿ ನಡೆಯೊಂದು ಕಾಣಿಸುತ್ತಿರುವ ಸಂದರ್ಭ ಇದು.
ಹಾಗಾಗಿಯೇ ಪ್ರತಿಪಕ್ಷಗಳ ಎದುರು ಈಗ ಇರುವುದು ಬಹಳ ದೊಡ್ಡ ಸವಾಲು. ಅವುಗಳ ಪಾಲಿಗೆ ಇದು ಸಾಮಾನ್ಯ ಚುನಾವಣೆಯಲ್ಲ, ದೇಶದ ಪ್ರಜಾಪ್ರಭುತ್ವವನ್ನು ಉಳಿಸುವ ನಿರ್ಣಾಯಕ ಚುನಾವಣೆಯಾಗಲಿದೆ. ರಾಮ್ಲೀಲಾ ಮೈದಾನದಲ್ಲಿ ನಡೆದ ವಿಪಕ್ಷ ಒಕ್ಕೂಟದ ರ್ಯಾಲಿಯಲ್ಲಿ ಮೂರು ಮುಖ್ಯ ವಿಚಾರಗಳು ಗಮನ ಸೆಳೆದವು. ಮೊದಲನೆಯದಾಗಿ, ಎಲ್ಲ ವಿಪಕ್ಷಗಳ ದನಿ ಇಲ್ಲಿ ಒಗ್ಗಟ್ಟಾಯಿತು ಮತ್ತು ಮೋದಿ ಸರ್ಕಾರದ ವಿರುದ್ಧ ಅದು ಪ್ರಬಲ ಶಕ್ತಿಯಾಗುವ ಸುಳಿವನ್ನು ಕೊಟ್ಟಿತು.
ಎರಡನೆಯದಾಗಿ, ಮೋದಿ ಸರ್ಕಾರ ಬಂಧಿಸಿ ಜೈಲಿಗೆ ಕಳಿಸಿದ ಇಬ್ಬರು ಮುಖ್ಯಮಂತ್ರಿಗಳ ಪತ್ನಿಯರು ಈ ಸಮಾವೇಶದಲ್ಲಿ ಪಾಲ್ಗೊಳ್ಳುವುದರ ಮೂಲಕ, ಹೇಗೆ ಬಿಜೆಪಿ ಅಥವಾ ಮೋದಿ ಸರ್ಕಾರ ಪ್ರಜಾಸತ್ತೆಯ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ ಎಂಬುದರ ಬಗೆಗಿನ ತಮ್ಮ ತೀವ್ರ ನೋವನ್ನು ಹೇಳಿಕೊಂಡರು.
ಮೂರನೆಯದಾಗಿ, ಇಡೀ ಚುನಾವಣೆ ಮ್ಯಾಚ್ ಫಿಕ್ಸಿಂಗ್ ಆದ ಕ್ರಿಕೆಟ್ ಪಂದ್ಯದಂತೆಯೇ ಆಗಿಬಿಟ್ಟರೆ, ಅವರದೇ ಹಿಡಿತದಲ್ಲಿರುವ ಅಂಪೈರ್ಗಳು ಅವರ ಗೆಲುವಿಗೆ ವ್ಯವಸ್ಥೆ ಮಾಡಿಕೊಡಲಿದ್ದಾರೆ. ಈಗಾಗಲೇ ಪಂದ್ಯ ಆರಂಭಕ್ಕೆ ಮೊದಲೇ ವಿಪಕ್ಷಗಳ ಇಬ್ಬರು ಪ್ರಮುಖ ಆಟಗಾರರನ್ನು ಬಂಧಿಸಲಾಗಿರುವುದು ಮ್ಯಾಚ್ ಫಿಕ್ಸಿಂಗ್ ಮೂಲಕ ಗೆಲ್ಲುವ ಸೂಚನೆಯಾಗಿದೆ ಎಂಬುದನ್ನು ಸಮಾವೇಶದಲ್ಲಿ ಪ್ರತಿಪಾದಿಸಲಾಯಿತು ಮತ್ತು ಬಡವರಿಂದ ಸಂವಿಧಾನವನ್ನು ಕಸಿದುಕೊಳ್ಳುವ ಯತ್ನ ನಡೆದಿದೆ ಎಂದು ಆರೋಪಿಲಾಯಿತು.
ಈ ದೇಶದಲ್ಲಿ ಚುನಾವಣಾ ಆಯೋಗದ ಮೇಲೆ ಪೂರ್ತಿ ನಿಯಂತ್ರಣ ಹೇರಲಾಗಿದೆ. ನ್ಯಾಯಾಂಗದ ಮೇಲೆ ಹಿಡಿತ ಸಾಧಿಸುವ ಹುನ್ನಾರಗಳು ಅಥವಾ ಅದರ ದಾರಿ ತಪ್ಪಿಸುವ ನಡೆಗಳನ್ನು ಇತ್ತೀಚಿಗೆ ಕಾಣಬಹುದಾಗಿದೆ. ಪ್ರಮುಖ ಪ್ರತಿಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ ಅದನ್ನು ಅಸಹಾಯಕವಾಗಿಸುವ ಹುನ್ನಾರವೂ ನಡೆದಿದೆ. ಹಾಗೆಯೇ ಜನರು ಆರಿಸಿದ ಮುಖ್ಯಮಂತ್ರಿಗಳನ್ನೇ ಬಂಧಿಸುವ ಮಟ್ಟಕ್ಕೆ ಸರ್ಕಾರ ಹೋಗುತ್ತಿದೆ.
ಮತ್ತು ಆ ಮೂಲಕ ತನಗೆ ಇರುವ ಎದುರಾಳಿಗಳನ್ನು ಚುನಾವಣೆಗೆ ಮೊದಲೇ ನಿವಾರಿಸಿಕೊಳ್ಳಲು ಮೋದಿ ಸರ್ಕಾರ ಯತ್ನಿಸುತ್ತಿರುವುದು ಸ್ಪಷ್ಟವಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕಿರುವ ಚುನಾವಣಾ ಆಯೋಗವೇ ಮೋದಿ ಸರ್ಕಾರದ ಮ್ಯಾಚ್ ಫಿಕ್ಸಿಂಗ್ ವ್ಯವಹಾರದಲ್ಲಿ ಭಾಗಿಯಾಗುತ್ತಿದೆ ಎಂಬ ಗಂಭೀರ ಆರೋಪವನ್ನು ವಿಪಕ್ಷಗಳು ಮಾಡಿರುವುದು ಗಮನಾರ್ಹ.
ಬಿಜೆಪಿ 400 ಸೀಟುಗಳನ್ನು ಗೆಲ್ಲುವುದಾಗಿ ಹೇಳುತ್ತಿದೆ. ಆದರೆ, ಇವಿಎಂ, ಮ್ಯಾಚ್ ಫಿಕ್ಸಿಂಗ್, ವಿರೋಧ ಪಕ್ಷಗಳ ನಾಯಕರ ಮೇಲೆ ಒತ್ತಡ ಹೇರುವುದು ಹಾಗೂ ಮಾಧ್ಯಮಗಳನ್ನು ಖರೀದಿಸದಿದ್ದಲ್ಲಿ ಬಿಜೆಪಿ 180 ಸೀಟುಗಳನ್ನು ಗೆಲ್ಲುವುದು ಕೂಡ ಕಷ್ಟವಿದೆ ಎಂದು ರಾಹುಲ್ ಗಾಂಧಿ ನೇರವಾಗಿಯೇ ದೇಶದ ಜನರಿಗೆ ಹೇಳಿದ್ದಾರೆ.
ಚುನಾವಣೆಗೆ ಆರೇಳು ತಿಂಗಳು ಇದೆಯೆನ್ನುವಾಗ ಅಲ್ಲ, ಇನ್ನು ಕೆಲವೇ ದಿನಗಳು ಇರುವಾಗ ಇಬ್ಬರು ಮುಖ್ಯಮಂತ್ರಿಗಳನ್ನು ಜೈಲಿಗೆ ಕಳಿಸುವುದು ಎಂದರೇನು ಎಂದು ರಾಹುಲ್ ಪ್ರಶ್ನಿಸಿದರು. ಹಾಗೆಯೇ ಕಾಂಗ್ರೆಸ್ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವುದು ಕೂಡ ಈಗ ಚುನಾವಣೆ ಹೊತ್ತಿನಲ್ಲಿಯೇ ಆಗಿರುವುದು ಚುನಾವಣೆಯನ್ನು ಅದು ಸಮರ್ಥವಾಗಿ ಎದುರಿಸಬಾರದು ಎಂಬುದಕ್ಕಾಗಿ ಎಂದರು ರಾಹುಲ್ ಗಾಂಧಿ.
ಹೀಗೆಲ್ಲ ಮಾಡುವ ಮೂಲಕ, ಚುನಾವಣಾ ಆಯೋಗದ ಮೇಲೆ ತನ್ನ ಹತೋಟಿ ಸಾಧಿಸುವ ಮೂಲಕ ಚುನಾವಣೆಯನ್ನು ಮ್ಯಾಚ್ ಫಿಕ್ಸಿಂಗ್ ಮಾಡಲು ಮೋದಿ ಸರ್ಕಾರ ಯತ್ನಿಸುತ್ತಿದೆ ಎಂದು ರಾಹುಲ್ ಆರೋಪಿಸಿದರು.
ಎಲ್ಲ ವಿಪಕ್ಷಗಳೂ ಇದೆಲ್ಲ ವಿಚಾರವಾಗಿಯೂ ದನಿಯೆತ್ತಿದವು ಮತ್ತು ಚುನಾವಣಾ ಬಾಂಡ್ ಮೂಲಕ ಹೇಗೆ ಮೋದಿ ಸರ್ಕಾರ ಭ್ರಷ್ಟ ವ್ಯವಸ್ಥೆಯನ್ನು ರೂಪಿಸಿಕೊಂಡು ತನ್ನನ್ನು ತಾನು ಬಲಿಷ್ಠವಾಗಿಸಿಕೊಳ್ಳಲು ಅದನ್ನು ಬಳಸಿಕೊಂಡಿತು ಎಂಬುದರ ಬಗ್ಗೆ ಕಿಡಿ ಕಾರಿದವು. ಚುನಾವಣಾ ಬಾಂಡ್ ಮೂಲಕ ಏನೇನು ಆಯಿತು ಈ ದೇಶದಲ್ಲಿ ಎಂಬುದೂ ಸಮಾವೇಶದಲ್ಲಿ ಪ್ರಸ್ತಾಪಕ್ಕೆ ಬಂತು.
ಯಾವ ವ್ಯಕ್ತಿಯ ಹೇಳಿಕೆ ಮೇಲೆ ಅರವಿಂದ್ ಕೇಜ್ರಿವಾಲ್ ಅವರನ್ನು ಜೈಲಿಗೆ ಕಳಿಸಲಾಗಿದೆಯೊ ಆ ಶರತ್ ರೆಡ್ಡಿಯಿಂದ ಬಿಜೆಪಿ ಚುನಾವಣಾ ಬಾಂಡ್ ಮೂಲಕ 55 ಕೋಟಿ ತೆಗೆದುಕೊಂಡಿರುವುದರ ಬಗ್ಗೆ ಸಮಾವೇಶದಲ್ಲಿ ಆಪ್ ನಾಯಕ ಗೊಪಾಲ್ ರಾಯ್ ಪ್ರಸ್ತಾಪಿಸಿದರು. ಎಲ್ಲ ವಿಪಕ್ಷಗಳ ದನಿ ಹೀಗೆ ರಾಮ್ಲೀಲಾ ಮೈದಾನದ ಈ ಸಮಾವೇಶದ ಮೂಲಕ ಒಗ್ಗೂಡಿತ್ತು ಎಂಬುದು ವಿಶೇಷ.
ಸಮಾವೇಶದ ವೇದಿಕೆಯಲ್ಲಿ ಎರಡು ಖಾಲಿ ಕುರ್ಚಿಗಳನ್ನು ಇಡಲಾಗಿತ್ತು. ಒಂದು ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಅವರಿಗಾಗಿ ಮತ್ತು ಇನ್ನೊಂದು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗಾಗಿ.
ಇದು ಇಬ್ಬರ ಬಂಧನದ ವಿರುದ್ಧದ ಸ್ಪಷ್ಟ ದನಿ ಮಾತ್ರವಾಗಿರದೆ, ನಿಜವಾಗಿಯೂ ಇಂಡಿಯಾ ಒಕ್ಕೂಟದ ಒಗ್ಗಟ್ಟಿನ ಬಹುದೊಡ್ಡ ಸಂಕೇತವೂ ಆಗಿತ್ತು. ಬಿಜೆಪಿ ಚುನಾವಣೆ ಗೆದ್ದರೆ ಅದು ತನ್ನ ಬಲ ಬಳಸಿಕೊಂಡು ಸಂವಿಧಾನವನ್ನೇ ಬದಲಾಯಿಸಲಿದೆ ಎಂಬ ಎಚ್ಚರಿಕೆಯನ್ನು ಈ ರ್ಯಾಲಿ ಕೊಟ್ಟಿತು. ಮಾತ್ರವಲ್ಲ, ಒಂದು ವೇಳೆ ಮ್ಯಾಚ್ ಫಿಕ್ಸಿಂಗ್ ಆಗಿಲ್ಲವೆಂದಾದರೆ ಬಿಜೆಪಿ 200 ಸೀಟುಗಳನ್ನು ಗೆಲ್ಲುವುದೂ ಕಷ್ಟವಾಗಲಿದೆ ಎಂಬ ಸತ್ಯವನ್ನೂ ಹೇಳಿತು.
ಸೀಟುಗಳನ್ನು ಗೆಲ್ಲುವುದಕ್ಕಾಗಿಯೇ ಬಿಜೆಪಿ ವಿಪಕ್ಷ ನಾಯಕರ ವಿರುದ್ದ ತನಿಖಾ ಸಂಸ್ಥೆಗಳನ್ನು ಅಸ್ತ್ರವಾಗಿಸಿರುವುದನ್ನೂ, ತನ್ನ ಕಡೆಗೆ ಸೆಳೆಯುತ್ತಿರುವುದನ್ನೂ, ಆ ಮೂಲಕ ವಿಪಕ್ಷಗಳನ್ನು ದುರ್ಬಲವಾಗಿಸುವ ಹುನ್ನಾರ ನಡೆದಿರುವುದನ್ನೂ ಈ ರ್ಯಾಲಿ ಮನದಟ್ಟು ಮಾಡಿತು. ಶ್ರೀಮಂತರ ಜೊತೆಗಿನ ಮೋದಿ ಸರ್ಕಾರದ ಮ್ಯಾಚ್ ಫಿಕ್ಸಿಂಗ್ ಈ ದೇಶದ ಬಡವರಿಂದ ಎಲ್ಲ ಹಕ್ಕುಗಳನ್ನೂ ಕಸಿದುಕೊಳ್ಳಲಿದೆ ಎಂಬ ಆತಂಕವನ್ನೂ ರಾಹುಲ್ ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸಿದರು.
ವಿಪಕ್ಷ ನಾಯಕರನ್ನು ಹೆದರಿಸಲಾಗುತ್ತಿದೆ. ವಿಪಕ್ಷಗಳನ್ನು ಖರೀದಿಸಿ, ಚುನಾಯಿತ ಸರ್ಕಾರಗಳನ್ನೇ ಬೀಳಿಸಲಾಗುತ್ತಿದೆ. ಚುನಾಯಿತ ಮುಖ್ಯಮಂತ್ರಿಗಳನ್ನು ಜೈಲಿಗೆ ಕಳಿಸಲಾಗುತ್ತಿದೆ. ಹಾಗಾದರೆ ಇದೆಲ್ಲವೂ ಏನು? ಇದು ಮ್ಯಾಚ್ ಫಿಕ್ಸಿಂಗ್ ಮಾಡುವ ಯತ್ನ ಎಂದು ಅವರು ಟೀಕಿಸಿದರು. ಈ ಮ್ಯಾಚ್ ಫಿಕ್ಸಿಂಗ್ ಅನ್ನು ನರೇಂದ್ರ ಮೋದಿ ಒಬ್ಬರೇ ಮಾಡುತ್ತಿಲ್ಲ. ಮೋದಿ ಜೊತೆ ಈ ದೇಶದ ನಾಲ್ಕೈದು ಶ್ರೀಮಂತರು ಸೇರಿ ಮಾಡುತ್ತಿದ್ದಾರೆ ಎಂದೂ ರಾಹುಲ್ ಆರೋಪಿಸಿದರು.
ಜೈಲುಪಾಲಾದ ಇಬ್ಬರು ಮುಖ್ಯಮಂತ್ರಿಗಳ ಪತ್ನಿಯರು ಸಮಾವೇಶದಲ್ಲಿ ಮಾತಾಡಿದ್ದಂತೂ ಬಹು ದೊಡ್ಡ ಸಂದೇಶವನ್ನು ಮೋದಿ ಸರ್ಕಾರದ ವಿರುದ್ದ ಜನರ ಮನಸ್ಸಿಗೆ ಖಂಡಿತ ಮುಟ್ಟಿಸಿರುತ್ತದೆ. ಕಲ್ಪನಾ ಸೊರೇನ್ ಮತ್ತು ಸುನಿತಾ ಕೇಜ್ರಿವಾಲ್ ಮಾತುಗಳು ಈ ದೃಷ್ಟಿಯಿಂದ ಮಹತ್ವ ಪಡೆದವು.
ಇಬ್ಬರೂ ಪ್ರಜಾಸತ್ತೆಯ ನಾಶ ಈ ಸರ್ಕಾರದಿಂದ ನಡೆದಿರುವುದರ ಬಗ್ಗೆ ಮಾತಾಡಿದರು. ಸರ್ವಾಧಿಕಾರಿ ಮನಃಸ್ಥಿತಿ ಇದೆಯೆಂದು ಟೀಕಿಸಿದರು.
ಹೀಗೆ ಮುಖ್ಯಮಂತ್ರಿಗಳನ್ನೇ ಜೈಲಿನಲ್ಲಿಡುವುದು ಪ್ರಜಾಸತ್ತೆಯಲ್ಲಿ ಸಾಧ್ಯವೇ ಇಲ್ಲ. ಈ ದೇಶದಲ್ಲಿ ಸರ್ವಾಧಿಕಾರಿ ಧೋರಣೆ ಕೆಲಸ ಮಾಡುತ್ತಿದೆ ಎಂಬುದರ ಸೂಚನೆ ಇದು ಎಂದರು. ಕಲ್ಪನಾ ಸೊರೇನ್ ಮತ್ತು ಸುನಿತಾ ಕೇಜ್ರಿವಾಲ್ ಇಬ್ಬರೂ ಪ್ರಧಾನಿ ಮೋದಿ ಮಾಡಿರುವುದು ಸರಿಯೆ ಎಂಬ ಪ್ರಶ್ನೆಯನ್ನೆತ್ತಿದ್ದು ಈ ದೇಶದ ಜನರಿಂದ ಉತ್ತರ ಬಯಸಿದ ರೀತಿಯಲ್ಲಿತ್ತು.
ಕಲ್ಪನಾ ಸೊರೇನ್ ಒಬ್ಬ ಆದಿವಾಸಿ ಸಮುದಾಯದ ನಾಯಕಿಯಾಗಿ ಗಮನ ಸೆಳೆದರು ಮಾತ್ರವಲ್ಲ, ಅವರ ಮಾತುಗಳು ಕೂಡ ಅಷ್ಟೇ ಖಡಕ್ ಆಗಿದ್ದವು.ರಾಮ್ಲೀಲಾ ಮೈದಾನ ರಾಮನ ಕಥೆ ಹೇಳುವ ನೆಲವಾಗಿದೆ, ರಾಮ ಯುದ್ಧದ ಸಮಯದಲ್ಲಿಯೂ ನೀತಿ ನಿಯಮ ಆದರ್ಶವನ್ನು ಬಿಟ್ಟಿರಲಿಲ್ಲ. ಮೋದಿ ಅದನ್ನು ಕಲಿಯಬೇಕಿದೆ ಎಂದು ಕಲ್ಪನಾ ಸೊರೇನ್ ಹೇಳಿದರು.
ಇಬ್ಬರ ಜೊತೆಗೂ ಇಡೀ ದೇಶ ಬೆಂಬಲವಾಗಿ ನಿಲ್ಲುವ ಬಗ್ಗೆ ಉದ್ಧವ್ ಠಾಕ್ರೆ ಭರವಸೆ ಕೊಟ್ಟರು. ನ್ಯಾಯಕ್ಕಾಗಿ ಸಹೋದರಿಯರಿಬ್ಬರು ಹೋರಾಟಕ್ಕೆ ಇಳಿದಿರುವಾಗ ಅಣ್ಣಂದಿರು ಕೈಕಟ್ಟಿ ಕೂರಲು ಸಾಧ್ಯವಿಲ್ಲ ಎಂದರು. ಸೊರೇನ್ ಪತ್ನಿ ಕಲ್ಪನಾ ಸೊರೇನ್, ಕೇಜ್ರಿವಾಲ್ ಪತ್ನಿ ಸುನಿತಾ ಕೇಜ್ರಿವಾಲ್ ಮಾತ್ರವಲ್ಲದೆ, ಜೈಲಿನಲ್ಲಿರುವ ಎಎಪಿ ನಾಯಕರ ಪತ್ನಿಯರೂ ರ್ಯಾಲಿಯಲ್ಲಿ ಉಪಸ್ಥಿತರಿದ್ದುದು ವಿಶೇಷವಾಗಿತ್ತು. ಅನಾರೋಗ್ಯದ ಕಾರಣದಿಂದಾಗಿ ಸಿಸೋಡಿಯಾ ಅವರ ಪತ್ನಿ ಮಾತ್ರ ಪಾಲ್ಗೊಂಡಿರಲಿಲ್ಲ.
ಒಬ್ಬ ವ್ಯಕ್ತಿಯ ಸರ್ಕಾರ ನಡೆದಿದೆ, ಸರ್ವಾಧಿಕಾರಿ ಧೋರಣೆ ಕಾಣಿಸುತ್ತಿದೆ ಎಂಬ ಆಕ್ಷೇಪವನ್ನು ಉದ್ಧವ್ ಠಾಕ್ರೆ, ತೇಜಸ್ವಿ ಯಾದವ್ ಮೊದಲಾದ ಎಲ್ಲ ಪ್ರಮುಖ ಪ್ರತಿಪಕ್ಷ ನಾಯಕರು ಎತ್ತಿದರು. ಪ್ರಿಯಾಂಕಾ ಚೋಪ್ರಾ ಭೇಟಿಗೆ ಮೋದಿ ಬಳಿ ಸಮಯವಿದೆ, ಆದರೆ ರೈತರನ್ನು ಭೇಟಿಯಾಗಲು ಇಲ್ಲ ಎಂದು ತೇಜಸ್ವಿ ಯಾದವ್ ಟೀಕಿಸಿದರು
ಅಡ್ವಾಣಿಗೆ ಭಾರತ ರತ್ನ ಪ್ರದಾನ ಮಾಡುವ ಸಂದರ್ಭದ ಬಗ್ಗೆ ಪ್ರಸ್ತಾಪಿಸಿದ ತೇಜಸ್ವಿ ಯಾದವ್, ರಾಷ್ಟ್ರಪತಿ ಅವರು ಪ್ರದಾನ ಮಾಡುತ್ತಿರುವಾಗ, ಮೋದಿ ಅಡ್ವಾಣಿಯ ಪಕ್ಕ ಕುಳಿತೇ ಇದ್ದುದನ್ನು ಪ್ರಸ್ತಾಪಿಸಿದರು. ಸಂವಿಧಾನದ ಬಗ್ಗೆ ವಿಶ್ವಾಸ ಇಲ್ಲದ ನಡೆ ಅದೆಂದು ಟೀಕಿಸಿದರು. ಟಿಎಂಸಿ ನಾಯಕ ಡೆರೇಕ್ ಅವರು ಪುಲ್ವಾಮಾ ಘಟನೆ ಬಗ್ಗೆ ಸತ್ಯಪಾಲ್ ಮಲಿಕ್ ಎತ್ತಿದ ವಿಚಾರಗಳ ಬಗ್ಗೆ ಯಾಕೆ ಮೋದಿ ಇವತ್ತಿನವರೆಗೂ ಏನೂ ಮಾಡಲಿಲ್ಲ? ಯಾಕೆ ಯೋಧರ ಸಾವಿನ ಬಗ್ಗೆ ಸತ್ಯ ಹೊರಬರುತ್ತಿಲ್ಲ ಎಂದು ಪ್ರಶ್ನಿಸಿದರು.
ಅಖಿಲೇಶ್ ಯಾದವ್, ಸೀತಾರಾಂ ಯೆಚೂರಿ, ಫಾರೂಖ್ ಅಬ್ದುಲ್ಲಾ ಮೊದಲಾದ ಎಲ್ಲ ವಿಪಕ್ಷ ನಾಯಕರು ಕೂಡ, ಈ ದೇಶದಲ್ಲಿ ಪ್ರಜಾಸತ್ತೆಯನ್ನೇ ಕೊನೆಗೊಳಿಸುವ ಹುನ್ನಾರ ನಡೆದಿರುವ ಬಗ್ಗೆ, ಸಂವಿಧಾನದ ಮೂಲಕ ಜನತೆ ಪಡೆಯುತ್ತಿದ್ದ ಹಕ್ಕುಗಳನ್ನು ಕಸಿದುಕೊಳ್ಳುವ ಅಪಾಯವೊಂದು ಜರುಗಲಿದೆ ಎಂಬುದರ ಬಗ್ಗೆ ಸಮಾವೇಶದಲ್ಲಿ ಮಾತನಾಡಿದರು.
ಹಾಗೆಯೇ, ಪ್ರಿಯಾಂಕಾ ಗಾಂಧಿ ಲೆವೆಲ್ ಪ್ಲೇಯಿಂಗ್ ಫೀಲ್ಡ್ ಎಂಬ ಚುನಾವಣಾ ಆಯೋಗದ ಮಾತು ಪ್ರಸ್ತಾಪಿಸಿ, ಅದನ್ನು ನಿಜವಾದ ಅರ್ಥದಲ್ಲಿ ಅನುಷ್ಠಾನಗೊಳಿಸುವ ಕೆಲಸವನ್ನು ಆಯೋಗ ಮಾಡಬೇಕಿದೆ ಎಂದರು. ರಾಮ್ಲೀಲಾ ಮೈದಾನದ ವಿಪಕ್ಷಗಳ ಸಮಾವೇಶ ಚುನಾವಣಾ ಸಮಾವೇಶವಾಗಿರದೆ, ಪ್ರಜಾಪ್ರಭುತ್ವದ ವಿರುದ್ಧ ನಡೆದಿರುವ ಹುನ್ನಾರಗಳನ್ನು ಬಯಲಿಗೆ ತರುವ, ಈ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಸಮಾವೇಶವಾಗಿತ್ತು.
ಪಂಜಾಬ್ ಮುಖ್ಯಮಂತ್ರಿ, ರೈತರನ್ನು ಭಯೋತ್ಪಾದಕರೆಂದು ಮೋದಿ ಸರ್ಕಾರ ಕರೆದದ್ದನ್ನು ನೆನಪಿಸಿದರು. ನ್ಯಾಯ ಕೇಳಲು ಬರುವ ರೈತರನ್ನು ದೆಹಲಿಗೆ ಬರದಂತೆ ತಡೆದ ಸರ್ಕಾರವನ್ನು ದೆಹಲಿಯಲ್ಲಿ ಅಧಿಕಾರಕ್ಕೆ ಬರದಂತೆ ತಡೆಯಬೇಕಿದೆ ಎಂದರು. ಈ ದೇಶ ಯಾರಪ್ಪನ ಜಹಗೀರೂ ಅಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ದೇಶದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ನಿಜವಾಗಿಯೂ ವಿಪಕ್ಷ ಒಕ್ಕೂಟದ ಈ ಸಮಾವೇಶ ಜನರನ್ನು ಆಲೋಚನೆಗೆ ಹಚ್ಚುವುದೆ?
ಚುನಾವಣೆಗೆ ಬಹಳ ಮೊದಲಾಗಲೀ, ಚುನಾವಣೆಯ ನಂತರವಾಗಲೀ ಕೇಜ್ರಿವಾಲ್, ಸೊರೇನ್ ಬಂಧನ ಮಾಡಬಹುದಿತ್ತು. ಆದರೆ ಚುನಾವಣೆ ನಡೆಯಬೇಕಿರುವ ಹೊತ್ತಲ್ಲಿಯೇ ಏಕೆ ಬಂಧಿಸಲಾಯಿತು? ಇದೇ ಪ್ರಶ್ನೆ ಕಾಂಗ್ರೆಸ್ ಬ್ಯಾಂಕ್ ಖಾತೆಗಳನ್ನು ಸೀಝ್ ಮಾಡಿರುವ ವಿಚಾರದಲ್ಲಿಯೂ ಬರುತ್ತದೆ. ಯಾಕೆ ಮೊದಲೂ ಇಲ್ಲ, ನಂತರವೂ ಇಲ್ಲ. ಚುನಾವಣೆ ನಡೆಯಬೇಕಿರುವ ಹೊತ್ತಿನಲ್ಲೇ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಸಿರುವುದರ ಉದ್ದೇಶವೇನು? ಇದಾವುದರ ಬಗ್ಗೆಯೂ ಯಾಕೆ ಚುನಾವಣಾ ಆಯೋಗ ಏನನ್ನೂ ಮಾಡಲಾರದ, ಯಾವ ಪ್ರಶ್ನೆಯನ್ನೂ ಎತ್ತಲಾರದ ಸ್ಥಿತಿಯಲ್ಲಿದೆ?
ಚುನಾವಣಾ ಬಾಂಡ್ಗಳ ಮೂಲಕ ಬಿಜೆಪಿ ದೊಡ್ಡ ವಸೂಲಿ ಆಟವನ್ನೇ ಆಡಿದೆ ಎಂಬುದು ಚುನಾವಣಾ ಆಯೋಗಕ್ಕೆ ತಿಳಿಯುತ್ತಿಲ್ಲವೆ? ಅದೇನು ಏನೂ ಅರಿಯದಷ್ಟು ಮುಗ್ಧವೆ? ಹಾಗಾದರೆ ಚುನಾವಣಾ ಬಾಂಡ್ ದಂಧೆಯ ಬಗ್ಗೆ ಏಕೆ ಚುನಾವಣಾ ಆಯೋಗ ಬಿಜೆಪಿಯನ್ನು ಪ್ರಶ್ನೆ ಮಾಡಲಾರದಷ್ಟು ಅಸಹಾಯಕವಾಗಿದೆ?
ಚುನಾವಣೆ ಅಧಿಕಾರದಲ್ಲಿರುವ ಪಕ್ಷಕ್ಕೆ ಅನುಕೂಲಕರವಾಗಿ ಇರಬಲ್ಲುದಾದರೆ ಅದು ಹೇಗೆ ಚುನಾವಣೆ ಎನ್ನಿಸಿಕೊಳ್ಳುತ್ತದೆ? ಈ ಪ್ರಶ್ನೆಯನ್ನು ಕೂಡ ಚುನಾವಣಾ ಆಯೋಗ ತನಗೆ ತಾನೇ ಕೇಳಿಕೊಳ್ಳಲಾರದೆ? ಅದೂ ಸಾಧ್ಯವಾಗದ ಮಟ್ಟಿಗೆ ಚುನಾವಣಾ ಆಯೋಗವನ್ನು ಕಟ್ಟಿಹಾಕಲಾಗಿದೆಯೆ? ಇಂಡಿಯಾ ಮೈತ್ರಿಕೂಟ ರವಿವಾರ ಕೇಳಿರುವ ಈ ಪ್ರಶ್ನೆಗಳಿಗೆ ಮುಂಬರುವ ಮಹಾ ಚುನಾವಣೆಯಲ್ಲಿ ಈ ದೇಶದ ಜನ ಉತ್ತರಿಸುತ್ತಾರಾ... ಕಾದು ನೋಡೋಣ.