ಜನಾರ್ದನ ಪೂಜಾರಿಗೆ ಕೈ ಕೊಟ್ಟ ಬಿಲ್ಲವರು, ಪದ್ಮರಾಜ್ ರ ಕೈ ಹಿಡಿಯುವರೇ ?
► ಶಾಸಕ ಉಮಾನಾಥ್ ಕೋಟ್ಯಾನ್ ರ ಮಾತು ಪಾಲಿಸ್ತಾರ ಬಿಲ್ಲವರು ? ► ಸುಲಭವಾಗಿ ಟಿಕೆಟ್ ಪಡೆದ ಪದ್ಮರಾಜ್ ಗೆ ಗೆಲುವು ಎಷ್ಟು ಕಷ್ಟ ?
ಮತ್ತೊಮ್ಮೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಬಿಲ್ಲವ ಸಮುದಾಯದ ಪದ್ಮರಾಜ್ ಪಾಲಾಗಿದೆ. ದಕ್ಷಿಣ ಭಾರತದ ಹಿಂದುತ್ವ ಹೆಡ್ ಕ್ವಾರ್ಟರ್ ಎಂದೇ ಗುರುತಿಸಲಾಗುವ ದ.ಕ. ಜಿಲ್ಲೆಯಲ್ಲಿ ಬಿಜೆಪಿ ಬಂಟ ಸಮುದಾಯದ, ನಿವೃತ್ತ ಸೇನಾಧಿಕಾರಿ ಬೃಜೇಶ್ ಚೌಟ ಅವರನ್ನು ಲೋಕಸಭಾ ಚುನಾವಣೆಗೆ ಈಗಾಗಲೇ ಕಣಕ್ಕಿಳಿಸಿದ್ದರೆ, ಕಾಂಗ್ರೆಸ್ ಪಕ್ಷ ನ್ಯಾಯವಾದಿ, ಬಿಲ್ಲವ ಸಮುದಾಯದ ಯುವ ನಾಯಕ ಪದ್ಮರಾಜ್ ಆರ್. ಅವರಿಗೆ ಟಿಕೆಟ್ ನೀಡಿದೆ. ತಮ್ಮದೇ ಸಮುದಾಯದ ಹಿರಿಯ ನಾಯಕ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರನ್ನು ಹಿಂದಿಕ್ಕಿ ಪದ್ಮರಾಜ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.
ಕಾಂಗ್ರೆಸ್ ನಲ್ಲಿ ದಶಕಗಳ ಕಾಲ ಕೆಲಸ ಮಾಡಿದವರಿಗೂ ಎಂಪಿ / ಎಮ್ಮೆಲ್ಲೆ ಸೀಟು ಬಿಡಿ ಒಂದು ನಿಗಮದ ಅಧ್ಯಕ್ಷತೆ ಸಿಗೋದು ಸುಲಭವಿಲ್ಲ. ಅಷ್ಟು ಟಫ್ ಕಾಂಪಿಟೇಷನ್ ಅಲ್ಲಿದೆ. ಆದರೆ ಕೆಲವೇ ತಿಂಗಳ ಹಿಂದೆ ಪಕ್ಷ ಸೇರಿದ ಪದ್ಮರಾಜ್ ಕೇವಲ ಬಿಲ್ಲವ ಕೋಟಾದಿಂದಾಗಿ ಲೋಕಸಭಾ ಟಿಕೆಟನ್ನೇ ಜೇಬಿಗಿಳಿಸಿ ಎಲ್ಲರ ಹುಬ್ಬೇರಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಯಾರೇ ಆದರೂ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಗೆಲ್ಲೋದು ಮಾತ್ರ ಬಿಜೆಪಿನೇ ಎಂಬ ಮಾತು ಇಲ್ಲಿನ ಜನರ ನಡುವೆ ಸಾಮಾನ್ಯವಾಗಿದೆ. ಆದರೆ ಪದ್ಮರಾಜ್ ಹೆಸರು ಘೋಷಣೆ ಬಳಿಕ ಜಿಲ್ಲೆಯ ಕಾಂಗ್ರೆಸ್ ಬೆಂಬಲಿಗರಲ್ಲಿ ಹೊಸ ಉತ್ಸಾಹ ಕಂಡು ಬಂದಿದೆ.
ಇದಕ್ಕೆ ಮೂರು ಪ್ರಮುಖ ಕಾರಣಗಳಿವೆ. ಒಂದು ಪದ್ಮರಾಜ್ ಹೊಸ ಮುಖ, ಜೊತೆಗೆ ನಗುಮುಖ. ಈ ಯುವನಾಯಕ ಉತ್ಸಾಹದಿಂದ ಸ್ಪರ್ಧಿಸಿ ಬಿಜೆಪಿಗೆ ಒಳ್ಳೆಯ ಫೈಟ್ ಕೊಡಬಹುದು ಎಂಬ ನಿರೀಕ್ಷೆ. ಎರಡನೆಯದು, ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಬಿಲ್ಲವರ ನಡುವೆ ಪದ್ಮರಾಜ್ ಅವರಿಗಿರುವ ಜನಪ್ರಿಯತೆ. ಮೂರನೆಯದು, ಪದ್ಮರಾಜ್ ಮೂಲಕ ಈ ಬಾರಿಯಾದರೂ ಜಿಲ್ಲೆಯ ಬಿಲ್ಲವರಲ್ಲಿ ಗಣನೀಯ ಸಂಖ್ಯೆಯ ಮತದಾರರು ಕಾಂಗ್ರೆಸ್ ಕಡೆ ಬರಬಹುದು ಎಂಬ ಆಶಾಭಾವನೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಕಳೆದ ಸುಮಾರು ಮೂರೂವರೆ ದಶಕದಿಂದ ಬಿಜೆಪಿ ತೆಕ್ಕೆಯಲ್ಲಿದೆ. 2024ರ ಮಾರ್ಚ್ 15ರ ಮತದಾರರ ಪಟ್ಟಿ ಪ್ರಕಾರ ಕ್ಷೇತ್ರದಲ್ಲಿ 17,96,826 ಮತದಾರರಿದ್ದಾರೆ. ಒಂದು ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ ಸುಮಾರು ಮೂರು ಲಕ್ಷ ಎಂಬತ್ತು ಸಾವಿರ ಬಿಲ್ಲವ ಮತದಾರರಿದ್ದಾರೆ. ಆದರೆ ಬಿಲ್ಲವರಲ್ಲಿ ಬಹುಪಾಲು ಮತದಾರರು ಕಳೆದ ನಾಲ್ಕೈದು ಚುನಾವಣೆಗಳಲ್ಲಿ ಸತತವಾಗಿ ಬಿಜೆಪಿಯನ್ನೇ ನೆಚ್ಚಿಕೊಂಡು ಬಂದಿದ್ದಾರೆ. ಅದರಲ್ಲೂ ವಿಶೇಷವಾಗಿ ಬಿಲ್ಲವ ಯುವಕರು ಹಿಂದುತ್ವದ ಕಾಲಾಳುಗಳಾಗಿ ಬಿಜೆಪಿಯ ಕಟ್ಟಾ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದಾರೆ. 18 ರಿಂದ 24 ವರ್ಷದೊಳಗಿನ ಬಿಲ್ಲವ ಯುವಕರು ಮೋದಿಯ ಕಟ್ಟರ್ ಅಭಿಮಾನಿಗಳಾಗಿ ಬಿಜೆಪಿ ಜೊತೆಗೆ ಗಟ್ಟಿಯಾಗಿ ನಿಂತಿದ್ದಾರೆ ಎಂದೇ ಹೇಳಲಾಗುತ್ತಿದೆ.
ಜಿಲ್ಲೆಯನ್ನು ಆರೆಸ್ಸೆಸ್‌ನ ಕೋಮುದ್ವೇಷದ ಪ್ರಯೋಗ ಶಾಲೆಯಾಗಿಸಿ , ಜನರಲ್ಲಿ ಕೋಮು ಭಾವನೆಯನ್ನು ಕೆರಳಿಸಿ ತನ್ನ ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಬಿಜೆಪಿ 1991ರಿಂದ 2019ರವರೆಗಿನ ಸತತ 8 ಲೋಕಸಭಾ ಚುನಾವಣೆಗಳಲ್ಲಿ ಇಲ್ಲಿ ಗೆದ್ದು ಬೀಗಿದೆ. ಹಾಗಾಗಿ ಈಗ ಇದು ಬಿಜೆಪಿ ಭದ್ರಕೋಟೆ. ಬಿಜೆಪಿಯ ಈ ಸರಣಿ ಗೆಲುವಿನಲ್ಲಿ ಇಲ್ಲಿನ ಬಿಲ್ಲವ ಮತದಾರರ ಪಾತ್ರ ಬಹಳ ದೊಡ್ಡದು.
ಜಿಲ್ಲೆಯಲ್ಲಿ ಸುಮಾರು 4 ಲಕ್ಷ ಮುಸ್ಲಿಂ ಮತದಾರರಿದ್ದು, ಸುಮಾರು ಒಂದೂ ಕಾಲು ಲಕ್ಷದಷ್ಟು ಬಂಟ ಸಮುದಾಯದವರಿದ್ದಾರೆ. ಒಂದೂವರೆ ಲಕ್ಷದಷ್ಟು ಕ್ರೈಸ್ತ ಮತದಾರರು, 75 ಸಾವಿರ ಬ್ರಾಹ್ಮಣ, 75 ಸಾವಿರ ಕೊಂಕಣಿ (ಜಿಎಸ್‌ಬಿ), ಸುಮಾರು 2 ಲಕ್ಷದಷ್ಟು ಎಸ್ಸಿ ಎಸ್ಟಿ, ಒಂದೂವರೆ ಲಕ್ಷದಷ್ಟು ಗೌಡ (ಒಕ್ಕಲಿಗ) ಹಾಗೂ ಇತರ ಹಿಂದುಳಿದ ವರ್ಗದ 2.5 ಲಕ್ಷಕ್ಕೂ ಅಧಿಕ ಮತದಾರರು ಇದ್ದಾರೆ ಎಂದು ಅಂದಾಜಿಸಲಾಗಿದೆ.
ಇಲ್ಲಿನ ಮುಸ್ಲಿಂ ಮತದಾರರು ಬಹುತೇಕ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಅನ್ನೇ ಬೆಂಬಲಿಸುತ್ತಾ ಬಂದಿದ್ದಾರೆ. ಕ್ರೈಸ್ತರಲ್ಲೂ ಬಹುಪಾಲು ಮತದಾರರು ಕಾಂಗ್ರೆಸ್ ಜೊತೆ ನಿಲ್ಲುತ್ತಾರೆ.
ಬಿಜೆಪಿಯಿಂದ ಕಳೆದ ಮೂರು ಚುನಾವಣೆಗಳಲ್ಲಿ ಬಂಟರೇ ಸ್ಪರ್ಧಿಸಿದ್ದು ಹೆಚ್ಚಿನ ಬಂಟರು ಬಿಜೆಪಿಗೇ ಮತ ಹಾಕುತ್ತಿದ್ದಾರೆ. ಬ್ರಾಹ್ಮಣರು, ಕೊಂಕಣಿಗಳು, ಮೊಗವೀರರು ಹಾಗು ಇತರ ಹಿಂದುಳಿದ ವರ್ಗಗಳಲ್ಲೂ ದೊಡ್ಡ ಸಂಖ್ಯೆಯ ಮತಗಳನ್ನು ಪ್ರತಿ ಬಾರಿ ಹಿಂದುತ್ವದ ಹೆಸರಲ್ಲಿ ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.
ಆದರೆ ಬಿಲ್ಲವ ಅಭ್ಯರ್ಥಿಯೇ ಕಾಂಗ್ರೆಸ್ ನಿಂದ ನಿಂತರೂ ಜಿಲ್ಲೆಯ ಬಿಲ್ಲವರು ಮಾತ್ರ ಸತತ ಬಿಜೆಪಿಯನ್ನೇ ಬೆಂಬಲಿಸಿಕೊಂಡು ಬಂದಿರುವುದು ದೊಡ್ಡ ಚರ್ಚೆಯ ವಿಷಯವಾಗಿದೆ.
ಬಿಲ್ಲವರು ಇಷ್ಟು ದೊಡ್ಡ ಸಂಖ್ಯೆಯಲ್ಲಿದ್ದರೂ , 1977ರಿಂದ 1989ರವರೆಗೆ ಸತತ ನಾಲ್ಕು ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದ್ದ, ಕೇಂದ್ರ ಸಚಿವರೂ ಆಗಿದ್ದ ಜನಾನುರಾಗಿ ನಾಯಕ ಜನಾರ್ದನ ಪೂಜಾರಿ ಅವರನ್ನು 1991