ಕರ್ನಾಟಕದಲ್ಲಿ ಬಿಜೆಪಿ ಲೋಕಸಭಾ ಚುನಾವಣಾ ತಯಾರಿ ಶುರು !
ಮಹಾ ಚುನಾವಣೆ ಮುನ್ನ ಡಿ ಕೆ ಶಿ ಯನ್ನು ಕಟ್ಟಿ ಹಾಕಲು ಬಿಜೆಪಿ ತಯಾರಿ
ಸಾಂದರ್ಭಿಕ ಚಿತ್ರ
ಮತ್ತೆ ಡಿಕೆ ಶಿವಕುಮಾರ್ ಹಿಂದೆ ಸಿಬಿಐ ಬಿದ್ದಿದೆ. ಅಂದರೆ, ಕರ್ನಾಟಕದಲ್ಲಿ ಬಿಜೆಪಿ ಚುನಾವಣಾ ತಯಾರಿಯನ್ನು ಈ ರೀತಿಯಲ್ಲಿ ಶುರು ಮಾಡಿದೆಯೇ?. ಅದು ಡಿಸಿಎಂ ಡಿಕೆ ಶಿವಕುಮಾರ್ ಅವರ ಬೆನ್ನುಬಿದ್ದಿರುವುದನ್ನು ನೋಡಿದರೆ ಹಾಗೆನ್ನಿಸುತ್ತದೆ ಮತ್ತು ಚುನಾವಣೆಯನ್ನು ಎದುರಿಸೋ ಮೊದಲ ಅಸ್ತ್ರವಾಗಿಯೇ ಡಿಕೆಶಿಯನ್ನು ಕಟ್ಟಿಹಾಕಲು ನೋಡುತ್ತಿದೆ.
ಡಿಕೆಶಿಯನ್ನು ಹಣಿಯದೆ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಗೆಲ್ಲೋದು ಕಷ್ಟ ಎಂದು ಬಿಜೆಪಿ ನಿರ್ಧರಿಸಿದ ಹಾಗೆ ಕಾಣುತ್ತಿದೆ. ಕಾಂಗ್ರೆಸ್ ಚುನಾವಣೆ ಗೆಲ್ಲಲು ದೊಡ್ಡ ಬಲವಾಗಿರುವ ಡಿಕೆಶಿಯನ್ನೇ ಟಾರ್ಗೆಟ್ ಮಾಡಿದರೆ ತನ್ನ ಉದ್ದೇಶ ಸಾಧಿಸಿಕೊಳ್ಳಬಹುದು ಎಂಬುದು ಬಿಜೆಪಿ ಲೆಕ್ಕಾಚಾರ.
ಡಿಕೆ ಶಿವಕುಮಾರ್ ಹೀಗೆ ಬಿಜೆಪಿ ತಂತ್ರಕ್ಕೆ ತುತ್ತಾದರೆ, ಕಾಂಗ್ರೆಸ್ ಎದುರಿಸಬೇಕಾಗುವ ಸವಾಲು ಮತ್ತು ಸಮಸ್ಯೆಗಳೇನೇನು?. ಪಕ್ಷದೊಳಗೂ ಶತ್ರುಗಳೇ ಇರುವುದರಿಂದ, ಈಗ ಬಿಜೆಪಿಯಿಂದಲೂ ಟಾರ್ಗೆಟ್ ಆಗುತ್ತಿರುವ ಡಿಕೆ ಶಿವಕುಮಾರ್ ಈ ಸ್ಥಿತಿಯನ್ನು ಹೇಗೆ ಎದುರಿಸುತ್ತಾರೆ?.
ಬಿಜೆಪಿ ಹೇಗೆಲ್ಲ ಸುತ್ತುಬಳಸಿ ಡಿಕೆ ಶಿವಕುಮಾರ್ ಅವರನ್ನು ಕಟ್ಟಿಹಾಕಲು ತಂತ್ರ ಹೂಡುತ್ತಿದೆ ಎಂಬುದಕ್ಕೆ ಈಗ ಅದು ಕೇರಳದ ಜೈಹಿಂದ್ ವಾಹಿನಿಗೆ ಸಿಬಿಐ ಮೂಲಕ ನೊಟೀಸ್ ಕೊಡಿಸಿರುವುದೇ ಒಂದು ಉದಾಹರಣೆ. ಕೇರಳ ಮೂಲದ ಜೈಹಿಂದ್ ವಾಹಿನಿಯಲ್ಲಿ ಡಿ ಕೆ ಶಿವಕುಮಾರ್ ಅವರು ಮಾಡಿರುವ ಹೂಡಿಕೆಯ ವಿವರಗಳನ್ನು ನೀಡುವಂತೆ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ ನೋಟಿಸ್ ಜಾರಿ ಮಾಡಿದೆ.
ಡಿಸಿಎಂ ಡಿ ಕೆ ಶಿವಕುಮಾರ್ ವಿರುದ್ಧದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಬೆಂಗಳೂರು ಘಟಕ ಜೈಹಿಂದ್ ಕಮ್ಯುನಿಕೇಷನ್ಸ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಿಗೆ ನೊಟೀಸ್ ಜಾರಿ ಮಾಡಿದೆ. ಕೇಳಿರುವ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಇದೇ ಜನವರಿ 11 ರಂದು ತನಿಖೆಗೆ ಹಾಜರಾಗುವಂತೆ ಆದೇಶ ಹೊರಡಿಸಿದೆ.
ಡಿಕೆ ಶಿವಕುಮಾರ್, ಅವರ ಪತ್ನಿ ಉಷಾ ಶಿವಕುಮಾರ್ ಮತ್ತು ಮಕ್ಕಳು ಮಾಡಿರುವ ಹೂಡಿಕೆಗಳು, ಅವರಿಗೆ ಪಾವತಿಸಿದ ಲಾಭಾಂಶಗಳು, ಷೇರು ವಹಿವಾಟುಗಳು, ಹಣಕಾಸಿನ ವಹಿವಾಟುಗಳ ಜೊತೆಗೆ ಅವರ ಬ್ಯಾಂಕ್ ವಿವರಗಳನ್ನು ಕೊಡಲು ಚಾನಲ್ಗೆ ಸಿಬಿಐ ಕೇಳಿದೆ. ಹಿಡುವಳಿಗಳ ಹೇಳಿಕೆ, ಅವರ ಲೆಡ್ಜರ್ ಖಾತೆಗಳು, ಒಪ್ಪಂದದ ಟಿಪ್ಪಣಿಗಳು ಮತ್ತು ಇತರ ವಿವರಗಳ ಜೊತೆಗೆ ಎಲ್ಲಾ ಷೇರು ವಹಿವಾಟುಗಳ ವಿವರಗಳನ್ನು ಕೇಳಿದೆ.
ಜೈಹಿಂದ್ ವ್ಯವಸ್ಥಾಪಕ ನಿರ್ದೇಶಕ ಬಿ ಎಸ್ ಶಿಜು ಅವರು, ಎಲ್ಲಾ ದಾಖಲೆಗಳು ತಮ್ಮ ಬಳಿ ಇವೆ ಮತ್ತು ವ್ಯವಹಾರ ಕಾನೂನುಬದ್ಧವಾಗಿಯೇ ಇವೆ ಎಂದು ಹೇಳಿದ್ದಾರೆ. ಆದರೆ ಕಿರುಕುಳ ಕೊಡಬೇಕೆಂದೇ ಬಿಜೆಪಿ ನಿಂತರೆ ಇದು ಡಿಕೆ ಶಿವಕುಮಾರ್ ಪಾಲಿಗೆ ಮತ್ತು ಆ ಮೂಲಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಿಗೆ ಕಷ್ಟಕರವೇ ಆದೀತು.
ಕಾಂಗ್ರೆಸ್ ಪಾಲಿಗೆ ಕರ್ನಾಟಕ ಬಹಳ ಮುಖ್ಯ. ಇಲ್ಲಿನ 28 ಕ್ಷೇತ್ರಗಳಲ್ಲಿ ಆದಷ್ಟು ಹೆಚ್ಚು ಸೀಟುಗಳನ್ನು ಬಾಚಿಕೊಳ್ಳುವ ನಿರೀಕ್ಷೆಯಲ್ಲಿ ಪಕ್ಷವಿದೆ. ಆದರೆ ಅದು ಅಷ್ಟು ಸುಲಭವಿಲ್ಲ. ಇತ್ತೀಚಿನ ಪಂಚ ರಾಜ್ಯ ಚುನಾವಣಾ ಫಲಿತಾಂಶ, ಬಿಜೆಪಿ ಜೆಡಿಎಸ್ ಮೈತ್ರಿ ಹಾಗು ರಾಮ ಮಂದಿರ ಉದ್ಘಾಟನೆ - ಇವೆಲ್ಲ ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ನಿಚ್ಚಳವಾಗಿದೆ.
ಅವೆಲ್ಲವನ್ನೂ ನಿಭಾಯಿಸಿಕೊಂಡು ಆದಷ್ಟು ಹೆಚ್ಚು ಸ್ಥಾನ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಹಾಗು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಮೇಲಿದೆ. ಅವರಿಬ್ಬರೂ ಕಳೆದ ವಿಧಾನ ಸಭಾ ಚುನಾವಣೆಯಂತೆ ಒಗ್ಗಟ್ಟಿನಿಂದ ದುಡಿದರೆ ಮಾತ್ರ ಬಿಜೆಪಿಗೆ ಪ್ರಬಲ ಸ್ಪರ್ಧೆ ಒಡ್ಡೋದು ಸಾಧ್ಯ.
ಅವರಿಬ್ಬರಲ್ಲಿ ಒಬ್ಬರು ಮೆತ್ತಗಾದರೂ ಕಾಂಗ್ರೆಸ್ ಗೆ ಸಂಕಷ್ಟ ಖಚಿತ. ಶಿವಕುಮಾರ್ ಕೂಡ ಈ ನೊಟೀಸ್ ತಮ್ಮನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರದ ಭಾಗ ಎಂದೇ ಹೇಳಿದ್ದಾರೆ. ಪ್ರಕರಣದ ತನಿಖೆಗೆ ನೀಡಿದ್ದ ಅನುಮತಿಯನ್ನು ರಾಜ್ಯ ಸರ್ಕಾರ ಈಚೆಗೆ ಹಿಂಪಡೆದಿತ್ತು. ಅದರ ನಂತರವೂ ಸಿಬಿಐ ನೊಟೀಸ್ ನೀಡಿರುವುದು ಮತ್ತೊಂದು ಸಮರದ ವ್ಯೂಹದ ಹಾಗೆಯೇ ಕಾಣಿಸತೊಡಗಿದೆ.
ಪ್ರಕರಣವನ್ನು ರಾಜ್ಯ ಸರ್ಕಾರ ಈಗಾಗಲೇ ಲೋಕಾಯುಕ್ತಕ್ಕೆ ಕೊಟ್ಟಿರುವ ವಿಚಾರವನ್ನೂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇನ್ನೊಂದೆಡೆ ಸಿಬಿಐ ಕೂಡ ತನಿಖೆಯನ್ನು ಮುಂದುವರಿಸುತ್ತಿದೆ ಎಂದಾದರೆ ಏಕಕಾಲಕ್ಕೆ ಎರಡು ಕಡೆಯಿಂದ ತನಿಖೆಯೆ?. ರಾಜ್ಯ ಸರ್ಕಾರ ಅನುಮತಿ ಹಿಂತೆಗೆದುಕೊಂಡದ್ದರ ಹೊರತಾಗಿಯೂ ಸಿಬಿಐ ನೊಟೀಸ್ ನೀಡಿದೆ ಎಂದಾದರೆ ಅದರ ಮರ್ಮವೇನು? ಅದರ ಹಿಂದಿರುವ ಶಕ್ತಿ ಯಾವುದು ಎಂಬುದು ಊಹೆಗೆ ಸಿಗದ ವಿಚಾರವೇನೂ ಅಲ್ಲ.
ಅಂತೂ ಚುನಾವಣೆಯ ರಣತಂತ್ರವಾಗಿ ಡಿಕೆ ಶಿವಕುಮಾರ್ ಟಾರ್ಗೆಟ್ ಆಗುತ್ತಿರುವುದು ಬಹುತೇಕ ಖಚಿತವಾಗುತ್ತಿದೆ. ಶಿವಕುಮಾರ್ ವಿರುದ್ಧ ಸಿಬಿಐ 2020ರಲ್ಲಿ ಪ್ರಕರಣ ದಾಖಲಿಸಿತ್ತು. 2013 ಮತ್ತು 2018ರ ಅವಧಿಯಲ್ಲಿ ಅವರು 74 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿಯನ್ನು ಗಳಿಸಿದ್ದು, ಅದು ಅವರ ಆದಾಯಕ್ಕೆ ಅನುಗುಣವಾಗಿಲ್ಲ ಎಂಬುದು ಆರೋಪ.
ನನ್ನ ಮೇಲೆ ದೌರ್ಜನ್ಯ ನಡೆಸಿ ಹಾಗೂ ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಎಂದು ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ದೊಡ್ಡ ದೊಡ್ಡವರಿದ್ದಾರೆ, ದೊಡ್ಡ ಪಿತೂರಿ ನಡೆಯುತ್ತಿದೆ ಎಂದು ಡಿಕೆ ಶಿವಕುಮಾರ್ ಮಾರ್ಮಿಕವಾಗಿಯೇ ಹೇಳಿದ್ದಾರೆ. ಹೀಗೆ ಹೇಳುವಾಗ, ಪಕ್ಷದೊಳಗೂ ತಮ್ಮ ವಿರುದ್ಧ ನಡೆದಿರುವ ಷಡ್ಯಂತ್ರದ ಬಗ್ಗೆಯೂ ಸೂಚ್ಯವಾಗಿ ಹೇಳುತ್ತಿದ್ಧಾರೆ ಎಂಬುದು ಕಾಣಿಸುತ್ತಿದೆ.
ಆದರೆ, ಡಿಕೆ ಶಿವಕುಮಾರ್ ಅವರನ್ನು ಪಕ್ಷದೊಳಗೇ ವಿರೋಧಿಸುವ ಬಹಳಷ್ಟು ಜನರು ಪಕ್ಷಕ್ಕೆ ಬಲವಾಗಿ ನಿಲ್ಲಬಲ್ಲವರಂತೂ ಅಲ್ಲ ಎಂಬುದು ಕೂಡ ತೀರಾ ಗೊತ್ತಿರದ ವಿಚಾರವಲ್ಲ. ಪಕ್ಷವನ್ನು ಸಂಘಟನಾತ್ಮಕವಾಗಿ ಕಟ್ಟಲು ಮತ್ತು ಚುನಾವಣೆಯಲ್ಲಿ ದೊಡ್ಡ ಮಟ್ಟದ ಬಲವನ್ನು ಪಕ್ಷಕ್ಕೆ ತುಂಬಲು ಡಿಕೆಶಿವಕುಮಾರ್ ಅವರ ಅಗತ್ಯ ಕಾಂಗ್ರೆಸ್ಗೆ ಬಹಳ ಇದೆ.
ಡಿಕೆ ಶಿವಕುಮಾರ್ ಇಲ್ಲದೆ ಚುನಾವಣೆ ಎದುರಿಸುವುದು ಕಾಂಗ್ರೆಸ್ ಪಾಲಿಗೆ ಕಷ್ಟ ಎಂಬುದನ್ನು ಬಿಜೆಪಿ ಹೇಗೆ ತಿಳಿದಿದೆಯೊ ಕಾಂಗ್ರೆಸ್ ಕೂಡ ತಿಳಿದಿದೆ. ಅವರ ವಿರುದ್ಧದ ಸಿಬಿಐ ತನಿಖೆಗೆ ಅನುಮತಿ ವಾಪಸ್ ಪಡೆದಿರುವ ನಿರ್ಧಾರ ಇಡೀ ಸಂಪುಟವೇ ಒಗ್ಗಟ್ಟಾಗಿ ತೆಗೆದುಕೊಂಡದ್ದಾಗಿದೆ ಎಂಬುದು ಪಕ್ಷದ ಚೌಕಟ್ಟಿನಲ್ಲಿ ಮಹತ್ವವಿರುವ ಅಂಶವಾಗಿದೆ.
ಆದರೆ ಈಗ ಅವರೇ ಬಿಜೆಪಿಯ ತಂತ್ರದ ಭಾಗವಾಗಿ ಸಿಬಿಐ ಆಟಕ್ಕೆ ಮಣಿಯಬೇಕಾಗಿ ಬಂದರೆ ಕಾಂಗ್ರೆಸ್ ಪಾಲಿಗೆ ಆಘಾತವಾಗುವುದಂತೂ ನಿಜ. ಇದನ್ನು ಎದುರಿಸಲು ಕಾಂಗ್ರೆಸ್ ಒಳಗೆ ಪರ್ಯಾಯ ಮಾರ್ಗಗಳಿವೆಯೆ? ಅಥವಾ ಸಂಕಷ್ಟ ಕಾಲದಲ್ಲಿ ಅದು ಮತ್ತೇನಾದರೂ ಪರ್ಯಾಯವನ್ನು ಕಂಡುಕೊಂಡೀತೆ? ಇದು ಈಗಿರುವ ಪ್ರಶ್ನೆ.
ಈಚೆಗಷ್ಟೇ ತೆಲಂಗಾಣ ವಿಧಾನಸಭೆಯಲ್ಲಿ ಕಾಂಗ್ರೆಸ್ ಗೆಲುವಿನ ಹಿಂದೆ ಕೂಡ ಡಿಕೆ ಶಿವಕುಮಾರ್ ಪಾತ್ರ ಇದ್ದುದನ್ನು ಅಲ್ಲಗಳೆಯುವಂತಿಲ್ಲ. ಅಂಥ ಗೆಲುವಿನ ಮುಂದುವರಿಕೆಯನ್ನು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೂ ತೆಗೆದುಕೊಂಡು ಹೋಗಬಲ್ಲ ಸಂಘಟನಾ ಶಕ್ತಿ ಹಾಗು ಚಾಣಾಕ್ಷತನ ಅವರಿಗಿದೆ.
ಅವರನ್ನು ಬಿಜೆಪಿ ಸಿಬಿಐ ತನಿಖೆಯ ಹೆಸರಲ್ಲಿ ಕಟ್ಟಿಹಾಕಿದರೆ ಕಾಂಗ್ರೆಸ್ ಆತ್ಮವಿಶ್ವಾಸವೇ ಕುಸಿಯಲಿದೆ. ಮತ್ತು ಕಾಂಗ್ರೆಸ್ ಪಾಳಯದ ಆ ಭಯವನ್ನು ತನ್ನ ಗೆಲುವಿನ ಹಾದಿಯಲ್ಲಿ ಬಳಸಿಕೊಳ್ಳುವುದು ಬಿಜೆಪಿಗೆ ಸುಲಭವಾಗಬಹುದು. ತನ್ನನ್ನು ಜೈಲಿಗೆ ಹಾಕಬೇಕೆಂದಿದ್ದರೆ ಹಾಕಲಿ ಎಂಬ ಡಿಕೆ ಶಿವಕುಮಾರ್ ಮಾತಿನಲ್ಲಿ ಸಿಬಿಐ ತಮ್ಮ ಬೆನ್ನುಬಿದ್ದೇ ಇರುವ ಹಿನ್ನೆಲೆಯಲ್ಲಿನ ಹತಾಶೆಯಿದೆಯೊ, ತಮ್ಮ ರಾಜಕೀಯ ಬದುಕಿನಲ್ಲಿ ದೊಡ್ಡ ಕಂಟಕವೊಂದು ಅವರಿಗೆ ಈ ಮೂಲಕ ಕಾಣಿಸುತ್ತಿದೆಯೊ ಗೊತ್ತಿಲ್ಲ.
ತಪ್ಪು ಮಾಡಿಲ್ಲ. ಹಾಗಾಗಿ ಹೆದರುವ ಅಗತ್ಯವಿಲ್ಲ ಎಂದು ಹೇಳುತ್ತಲೇ ಇದ್ದಾರೆ ಅವರು. ಆದರೆ ಸಿಬಿಐ ಆಟ ನಿಂತಿಲ್ಲ. ಮಣಿಸಲೇಬೇಕೆಂದು ಬಿಜೆಪಿಯ ಅಸ್ತ್ರವಾಗಿ ಅದು ಡಿಕೆಶಿ ಹಿಂದೆ ಬಿದ್ದಿದ್ದರೆ ಅದನ್ನು ಎದುರಿಸುವುದು ತೊಡಗಿನ ಸಂಗತಿಯೇ ಆಗಲೂ ಬಹುದು. ಇನ್ನೊಂದೆಡೆ ಲೋಕಸಭೆ ಚುನಾವಣೆಯ ಹೊತ್ತಿನಲ್ಲಿ ಇದೆಲ್ಲವೂ ಕಗ್ಗಂಟಿನಂತೆ ಎದುರಾಗಿ, ಕಾಂಗ್ರೆಸ್ ತತ್ತರಿಸಲೂ ಬಹುದು. ದಕ್ಷಿಣ ರಾಜ್ಯಗಳಲ್ಲಿ ನೆಲೆ ಕಂಡುಕೊಳ್ಳಲು ಹೆಣಗಾಡುತ್ತಿರುವ ಬಿಜೆಪಿ, ಕರ್ನಾಟಕದಲ್ಲಿನ ಕಳೆದ ಸಲದ ಗೆಲುವನ್ನಾದರೂ ಉಳಿಸಿಕೊಳ್ಳಲು ರಚಿಸಿರುವ ರಣವ್ಯೂಹವೇ ಇದಾಗಿದ್ದರೆ, ಕಾಂಗ್ರೆಸ್ಗೆ ದೊಡ್ಡ ಬಿಕ್ಕಟ್ಟೇ ಎದುರಾಗಲಿದೆ.