ಪ್ರಾಥಮಿಕ ಹಂತದಲ್ಲೇ ಗುರುತಿಸಿದರೆ ಕ್ಯಾನ್ಸರ್ನಿಂದ ಸಂಪೂರ್ಣ ಮುಕ್ತಿ ಸಾಧ್ಯ
ಇಂದು ವಿಶ್ವ ಕ್ಯಾನ್ಸರ್ ದಿನ
ಕ್ಯಾನ್ಸರ್ ಎನ್ನುವುದು ವಿಶ್ವದ ಮಾರಣಾಂತಿಕ ಕಾಯಿಲೆಗಳ ಪಟ್ಟಿಯಲ್ಲಿ 2ನೇ ಅಗ್ರಸ್ಥಾನವನ್ನು (ಮೊದಲ ಸ್ಥಾನ ಹೃದಯಾಘಾತ) ಅಲಂಕರಿಸಿದೆ. ವಿಶ್ವದಾದ್ಯಂತ ಕೋಟ್ಯಂತರ ಮಂದಿ ಕ್ಯಾನ್ಸರ್ನಿಂದಾಗಿ ಸಾಯುತ್ತಿದ್ದಾರೆ. ಸರಿಸುಮಾರು ವರ್ಷದಲ್ಲಿ 15 ಮಿಲಿಯನ್ ಮಂದಿ ವಿಶ್ವದಾದ್ಯಂತ ಕ್ಯಾನ್ಸರ್ನಿಂದಾಗಿ ಬಳಲುತ್ತಿದ್ದಾರೆ ಮತ್ತು 8 ಮಿಲಿಯನ್ ಮಂದಿ ಸಾವನ್ನಪ್ಪುತ್ತಿದ್ದಾರೆ. ಬಾಯಿ, ಗಂಟಲು, ಶ್ವಾಸಕೋಶ, ಕರುಳಿನ ಕ್ಯಾನ್ಸರ್ ಮತ್ತು ಪ್ರೋಸ್ಟೆಟ್ ಕ್ಯಾನ್ಸರ್ ಪುರುಷರಲ್ಲಿ ಹೆಚ್ಚಾಗಿರುತ್ತದೆ. ಸ್ತನ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್ ಮತ್ತು ಜನನಾಂಗ (ಸರ್ವಿಕ್ಸ್ ಅಂದರೆ ಗರ್ಭಕೋಶದ ಕುತ್ತಿಗೆ)ದ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ.
ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿದಲ್ಲಿ ಕ್ಯಾನ್ಸರನ್ನು ಸಂಪೂರ್ಣವಾಗಿ ಗುಣಪಡಿಸ ಬಹುದು. ಮುಂದುವರಿದ ರಾಷ್ಟ್ರಗಳಲ್ಲಿ ಒಂದು ಅಥವಾ 2ನೇ ಹಂತದಲ್ಲಿ ಗುರುತಿಸಿ ಪರಿಣಾಮಕಾರಿ ಚಿಕಿತ್ಸೆ ನೀಡುತ್ತಾರೆ. ಆದರೆ ಭಾರತದಂತಹ ಇನ್ನೂ ಮುಂದುವರಿಯುತ್ತಿರುವ ದೇಶಗಳಲ್ಲಿ ಜನರು ಬಡತನ, ಮೂಢನಂಬಿಕೆ, ಅನಕ್ಷರತೆ, ಅಜ್ಞಾನ ಮತ್ತು ಮೂಲಭೂತ ಸೌಕರ್ಯದ ಕೊರತೆಯಿಂದಾಗಿ ವೈದ್ಯರ ಬಳಿ ಬರುವಾಗ ಕ್ಯಾನ್ಸರ್ ಮೂರು ಅಥವಾ ನಾಲ್ಕನೇ ಹಂತಕ್ಕೆ ತಲಪಿರುತ್ತದೆ. ಈ ಹಂತದಲ್ಲಿ ಕ್ಯಾನ್ಸರನ್ನು ಗುಣಮುಖವಾಗಿಸುವ ಸಾಧ್ಯತೆ ಬಹಳ ಕಡಿಮೆ ಇರುತ್ತದೆ. ಈ ನಿಟ್ಟಿನಲ್ಲಿ ಫೆಬ್ರವರಿ 4ರಂದು ‘ವಿಶ್ವ ಕ್ಯಾನ್ಸರ್ ದಿನ’ ಎಂದು ಆಚರಿಸಿ ಜನರಲ್ಲಿ ಕ್ಯಾನ್ಸರ್ ಬಗೆಗಿನ ಮೂಢನಂಬಿಕೆ ಮತ್ತು ಅಜ್ಞಾನಗಳನ್ನು ತೊಡೆದು ಹಾಕಿ ಹೆಚ್ಚಿನ ತಿಳುವಳಿಕೆ ಮತ್ತು ಅರಿವು ನೀಡುವ ಕಾರ್ಯ ನಡೆಸಲಾಗುತ್ತದೆ. 2024 ಕ್ಯಾನ್ಸರ್ ದಿನ ಆಚರಣೆಯ ಧ್ಯೇಯವಾಕ್ಯ ‘ಚಿಕಿತ್ಸೆಯ ಅಂತರವನ್ನು ಕಿರಿದಾಗಿಸಿ’ ಎಂಬುದಾಗಿದೆ.
ಭಾರತದಲ್ಲಿ ವರ್ಷಕ್ಕೆ ಅಂದಾಜು 10 ಲಕ್ಷ ಜನರು ಕ್ಯಾನ್ಸರ್ಗೆ ತುತ್ತಾಗುತ್ತಾರೆ ಮತ್ತು ವಿಶ್ವದ ಕ್ಯಾನ್ಸರ್ ರ್ಯಾಂಕ್ ಪಟ್ಟಿಯಲ್ಲಿ ಭಾರತಕ್ಕೆ 3ನೇ ಸ್ಥಾನ ಲಭಿಸಿದೆ. ಈ ಪೈಕಿ ಶೇ. 90ರಷ್ಟು ಕ್ಯಾನ್ಸರ್ ತಂಬಾಕಿನ ಸೇವನೆಯಿಂದ ಬರುತ್ತದೆ. ತಂಬಾಕಿನ ವಿವಿಧ ರೂಪಗಳಾದ ಗುಟ್ಕಾ ಮುಂತಾದುವುಗಳಿಂದ ಬಾಯಿ, ಗಂಟಲು ಮುಂತಾದ ಅಂಗಗಳು ಕ್ಯಾನ್ಸರ್ಗೆ ತುತ್ತಾಗುತ್ತದೆ. ಇದರ ಜೊತೆಗೆ ಧೂಮಪಾನ, ಮದ್ಯಪಾನ ಸೇರಿಕೊಂಡು ಶ್ವಾಸಕೋಶ, ಕರುಳು, ಅನ್ನನಾಳ, ಯಕೃತ್, ಮೂತ್ರಪಿಂಡ ಇತ್ಯಾದಿ ಅಂಗಗಳು ಕ್ಯಾನ್ಸರ್ಗೆ ತುತ್ತಾಗುತ್ತವೆ. ಸಮಾಧಾನಕರವಾದ ಅಂಶವೆಂದರೆ ಕ್ಯಾನ್ಸರನ್ನು ಈ ದುಶ್ಚಟಗಳಿಂದ ನಿಯಂತ್ರಿಸಿ ಪರಿಣಾಮಕಾರಿಯಾಗಿ ತಡೆಗಟ್ಟ ಬಹುದು ಮತ್ತು ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಿದಲ್ಲಿ ಕ್ಯಾನ್ಸರನ್ನು ಗುಣಪಡಿಸಬಹುದು.
ತಡೆಗಟ್ಟುವುದು ಹೇಗೆ?
ಧೂಮಪಾನ, ಮದ್ಯಪಾನ ವರ್ಜಿಸಬೇಕು. ತಂಬಾಕು ಮತ್ತು ತಂಬಾಕು ಉತ್ಪನ್ನಗಳನ್ನು ಖಂಡಿತವಾಗಿಯೂ ಸೇವಿಸಬಾರದು. ಆರೋಗ್ಯಪೂರ್ಣ ಜೀವನ ಪದ್ಧತಿ, ಪರಿಪೂರ್ಣ ಸಮತೋಲಿತ ಆಹಾರ, ಶಿಸ್ತುಬದ್ಧ ಜೀವನ ಶೈಲಿ, ನಿರಂತರ ದೈಹಿಕ ವ್ಯಾಯಾಮ ಒತ್ತಡವಿಲ್ಲದ ಜೀವನ ಕ್ರಮ ರೂಢಿಸಿಕೊಳ್ಳಬೇಕು. ಕಲುಷಿತ ವಾತಾವರಣ, ವಿಕಿರಣ ಸೂಸುವ ವಾತಾವರಣವಿದ್ದಲ್ಲಿ ಅಥವಾ ವೃತ್ತಿ ಸಂಬಂಧಿ ಕ್ಯಾನ್ಸರ್ಕಾರಕ ವಸ್ತುಗಳಿಗೆ ತೆರೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿ ಇದ್ದಲ್ಲಿ ವೃತ್ತಿಯನ್ನು ಬದಲು ಮಾಡಬೇಕು. ಆನುವಂಶೀಯ ಕಾರಣವಿದ್ದಲ್ಲಿ ನಿರಂತರವಾಗಿ ವೈದ್ಯರ ಸಲಹೆ ಮತ್ತು ಮಾರ್ಗದರ್ಶನ ಪಡೆಯಬೇಕು. ಅತಿಯಾದ ಗರ್ಭನಿರೋಧಕ ಮಾತ್ರೆ ಮತ್ತು ರಸದೂತಗಳ ಅನಿಯಂತ್ರಿಕ ಬಳಕೆಗೆ ಕಡಿವಾಣ ಹಾಕಬೇಕು. ಆರೋಗ್ಯಪೂರ್ಣ ಲೈಂಗಿಕ ಜೀವನ ರೂಢಿಸಿಕೊಂಡಿರಬೇಕು.
ಆರಂಭಿಕ ಹಂತದಲ್ಲಿ ಗುರುತಿಸಿ, ಕಾಲಕಾಲಕ್ಕೆ ನಿಯಮಿತವಾಗಿ ಮತ್ತು ನಿರಂತರವಾಗಿ ವೈದ್ಯರ ಮಾರ್ಗದರ್ಶನದಿಂದ ಕ್ಯಾನ್ಸರನ್ನು ಸಂಪೂರ್ಣವಾಗಿ ಗುಣಪಡಿಸಬಹುದು.