ಕಾರ್ಬನ್ ಕ್ರೆಡಿಟ್ ಕಾರ್ಡ್ ಸ್ಕೀಂ ಎಂದು ರೈತರ ಕಣ್ಣೊರೆಸುವ ತಂತ್ರಗಳು
ಹಲವಾರು ಕಾರಣಗಳನ್ನು ಮುಂದಿಟ್ಟುಕೊಂಡು ಈ ಸ್ಕೀಂಗಳನ್ನು ನೋಡುವುದಾದರೆ, ರೈತರಿಗೆ ಒಂದಷ್ಟು ಬಿಡಿಗಾಸನ್ನು ನೀಡಿ ತಮ್ಮಿಷ್ಟ ಬಂದಷ್ಟು ಶಾಖವರ್ಧಕ ಅನಿಲಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತೇವೆ, ನಮ್ಮನ್ನು ಯಾರೂ ದೂಷಿಸಬೇಡಿ ಎನ್ನುವಂತಿದೆ ಅವರ ಧೋರಣೆ. ಇನ್ನು ಈ ಸ್ಕೀಂಗಳನ್ನು ಪ್ರೋತ್ಸಾಹಿಸುತ್ತಿರುವ ಕೆಲವು ಸಂಘ-ಸಂಸ್ಥೆಗಳಿಗೆ ನಾಲ್ಕಾರು ಕಾಸು ಸಿಗುತ್ತಿದೆ. ಆದರೆ ಅವರು ಮರೆಯುತ್ತಿರುವುದು ಏನೆಂದರೆ ಮುಂದಾಗುವ ಅನಾಹುತಗಳಲ್ಲಿ ನಾವೂ ಭಾಗಿಯಾಗುತ್ತಿದ್ದೇವೆ ಎನ್ನುವುದನ್ನು. ಹಾಗಾಗಿ ಇಂತಹ ಸ್ಕೀಂಗಳ ಬದಲು ನಾವೆಲ್ಲರೂ ಅ ಶಾಖವರ್ಧಕ ಅನಿಲಗಳ ಉತ್ಪಾದನೆಯನ್ನು ಕಡಿಮೆ ಮಾಡುವುದರ ಬಗ್ಗೆ ಗಮನಹರಿಸಬೇಕಾಗಿದೆ.
ಕಾರ್ಬನ್ ಡೈಆಕ್ಸೈಡ್ (CO2) ಒಂದು ರೀತಿಯ ಔಷಧಿಯೂ ಹೌದು, ವಿಷವೂ ಹೌದು. ವಿಷವನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದರೆ ಔಷಧಿಯಾಗಿ ಕೆಲಸಮಾಡುತ್ತದೆ. ಅದೇ ಸ್ವಲ್ಪ ಹೆಚ್ಚಾದರೆ ಸಾವು ಖಚಿತ. ಈಗ CO2 ಪರಿಸ್ಥಿತಿಯೂ ಇದೇ ಆಗಿದೆ. ನಾವು ಯಾವಾಗ CO2 ಅನ್ನು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಮಾಡಲು ಆರಂಭಿಸಿದೆವೋ ಅಂದಿನಿಂದ ಸಕಲ ಜೀವರಾಶಿಗಳನ್ನು ಪ್ರತಿದಿನ ಪ್ರತಿಕ್ಷಣ ಸಾವಿನ ದವಡೆಗೆ ನೂಕುತ್ತಿದೆ. ಇಂದು ಪ್ರಪಂಚದಾದ್ಯಂತ ಪ್ರತಿವರ್ಷವೂ ಸರಿಸುಮಾರು ಟನ್ನಷ್ಟು ಉತ್ಪಾದಿಸಲ್ಪಡುತ್ತಿದೆ. ಭಾರತ ದೇಶದಲ್ಲಿಯೇ ಸರಿಸುಮಾರು ೩ ಗಿಗಾ ಟನ್ನಷ್ಟು ಉತ್ಪಾದನೆಯಾಗುತ್ತಿದೆ.
ಹೀಗೆ ಈ CO2 ಅನ್ನು ಉತ್ಪತ್ತಿ ಮಾಡುತ್ತಿರುವವರಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದು ಕಾರ್ಖಾನೆಗಳು. ಹಾಗಾಗಿ ಹಲವಾರು ದೇಶಗಳು ಈ ಕಾರ್ಖಾನೆಗಳಿಗೆ ಇಂತಿಷ್ಟೇ ಪ್ರಮಾಣದಲ್ಲಿ ಶಾಖವರ್ಧಕ ಅನಿಲಗಳನ್ನು ಬಿಡುಗಡೆ ಮಾಡಬೇಕು ಎನ್ನುವ ನಿರ್ಬಂಧವನ್ನೇ ನಿರ್ಬಂಧಿಸಲು ಹೊರಟಿವೆ. ಹಾಗೆಯೇ ಈ ನಿರ್ಬಂಧಿಸಿದ ಪ್ರಮಾಣಕ್ಕಿಂತ ಹೆಚ್ಚು ಅನಿಲಗಳನ್ನು ಬಿಡುಗಡೆ ಮಾಡಿದರೆ ಅಂತಹವರು ಸರಕಾರಕ್ಕೆ ದಂಡವನ್ನು ತೆರಬೇಕು ಅಥವಾ ಆ ಹೆಚ್ಚುವರಿ ಅನಿಲವನ್ನು ಪುನರ್ಬಳಕೆ ಮಾಡಿಕೊಳ್ಳುವ ವಿಧಾನಗಳೇನಾದರೂ ಇದ್ದರೆ ಆ ದಂಡದ ಹಣವನ್ನು ಇಲ್ಲಿ ಖರ್ಚು ಮಾಡಬಹುದು ಎನ್ನುವ ಕಂಡಿಷನ್ ಹಾಕುತ್ತಿವೆ.
ಈಗ ಈ CO2 ಅನ್ನು ಪುನರ್ಬಳಕೆ ಮಾಡಿಕೊಳ್ಳಲು ಎರಡು ವಿಧಾನಗಳಿವೆ. ಮೊದಲನೆಯದು, ವಾತಾವರಣದಲ್ಲಿರುವ ಈ CO2 ಅನ್ನು ಸಮುದ್ರ ಹಾಗೂ ಭೂಮಿಯ ಗರ್ಭದಲ್ಲಿ ದೊಡ್ಡ ದೊಡ್ಡ ಕಂಟೈನರ್ಗಳಲ್ಲಿ ತುಂಬಿಸಿ ಅದರ ಸಾಧಕ ಬಾಧಕಗಳನ್ನು ಅರಿಯಲು ಹಲವಾರು ಪ್ರಯೋಗಗಳು ನಡೆಯುತ್ತಿವೆ. ಇದು ಬಲು ದುಬಾರಿಯ ಕೆಲಸ ಎಂದು ಸದ್ಯಕ್ಕೆ ತಿಳಿದ ವಿಚಾರ. ಎರಡನೆಯದು, ಮರಗಿಡಗಳ ಆಹಾರ ತಯಾರಿಕಾ ಕ್ರಿಯೆಯಾದ ದ್ಯುತಿಸಂಶ್ಲೇಷಣೆ ಕ್ರಿಯೆಯಲ್ಲಿ CO2 ಅತ್ಯವಶ್ಯಕವಾದ ಪೋಷಕಾಂಶ. ಆದ್ದರಿಂದ ಹೆಚ್ಚು ಹೆಚ್ಚು ಮರಗಿಡಗಳನ್ನು ಬೆಳೆಸಿದಂತೆಲ್ಲಾ CO2ವನ್ನು ಪುನರ್ಬಳಕೆ ಮಾಡಿಕೊಳ್ಳಬಹುದಾಗಿದೆ. ಅದು ಕಾಡಾದರೂ ಸರಿ. ಕೃಷಿ ಭೂಮಿಯಾದರೂ ಸರಿ.
ಇದೇ ಕಾರಣಕ್ಕಾಗಿ ರೈತರ ಭೂಮಿಯಲ್ಲಿ ಬೆಳೆದಿರುವ ಮರಗಿಡಗಳ ಸಂಖ್ಯೆಯ ಆಧಾರದ ಮೇಲೆ ಅವು ಎಷ್ಟು ಪ್ರಮಾಣದ CO2 ಅನ್ನು ಸ್ವೀಕರಿಸುತ್ತಿವೆ ಹಾಗೂ ಆ ಭೂಮಿಯಲ್ಲಿ ಸಾವಯವ ಇಂಗಾಲದ ಪ್ರಮಾಣ ಎಷ್ಟಿದೆ ಎನ್ನುವ ಅಧಾರದ ಮೇಲೆ ಇಂತಿಷ್ಟು ಹಣವನ್ನು ನೀಡಬೇಕು ಎನ್ನುವ ಯೋಜನೆಗಳಾದ ಕಾರ್ಬನ್ ಕ್ರೆಡಿಟ್ ಕಾರ್ಡ್, ಕಾರ್ಬನ್ ಕ್ರೆಡಿಟ್ ಸ್ಕೀಂಗಳನ್ನು ಹಲವಾರು ದೇಶಗಳು ಈಗಾಗಲೇ ಜಾರಿಗೊಳಿಸಿವೆ. ಇನ್ನು ಹಲವು ದೇಶಗಳು ಜಾರಿಗೊಳಿಸಲು ಚಿಂತನೆ ನಡೆಸುತ್ತಿವೆ. ನಮ್ಮ ಕೇಂದ್ರ ಸರಕಾರವೂ ಈ ಸ್ಕೀಂಗಳನ್ನು ಜಾರಿಗೊಳಿಸಲು ಆಸಕ್ತಿ ತೋರಿಸುತ್ತಿದ್ದು ಹೆಚ್ಚಿನ ಅಧ್ಯಯನಕ್ಕಾಗಿ ಕಾಸರಗೋಡಿನ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಗೆ ಹೊಣೆಗಾರಿಕೆಯನ್ನು ನೀಡಲಾಗಿದೆಯಂತೆ.
ಈ ಸಂಶೋಧನೆಯಲ್ಲಿ ಅಡಿಕೆ-ತೆಂಗಿನ ಮರದ ಕಾಂಡ, ಬೇರುಗಳು ಇತರ ಮರಗಿಡಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ CO2 ಅನ್ನು ಬಳಸಿಕೊಳ್ಳುತ್ತವೆ, ಹೀಗಾಗಿ ಈ ಎರಡು ಬೆಳೆಗಳ ಮೇಲೆ ಪ್ರಯೋಗಗಳನ್ನು ನಡೆಸಲಾಗುತ್ತಿದೆ ಎಂದು ವರದಿಯಾಗಿದೆ. ಆರೇಳು ವರ್ಷದ ಒಂದು ತೆಂಗಿನ ಮರ ಸುಮಾರು 300ರಿಂದ 400 ಕೆಜಿ ತೂಗಬಹುದು. ಹಾಗೆಯೇ ಆರೇಳು ವರ್ಷದ ಒಂದು ನೇರಳೆ, ಹುಣಸೆ, ಮಾವಿನಂತಹ ಮರಗಳು ಕೂಡಾ 300ರಿಂದ 400 ಕೆಜಿ ತೂಗುತ್ತದೆ. ಅಂದರೆ ಈ ಎರಡೂ ಪ್ರಭೇದದ ಮರಗಳು ಒಂದೇ ಸಮನಾದ CO2 ಬಳಸಿಕೊಳ್ಳುತ್ತದೆ ಎಂದಾಯಿತು ಹಾಗೂ ಮಾವು, ಹುಣಸೆ, ನೇರಳೆ ಮುಂತಾದ ಮರಗಿಡಗಳ ಆಯಸ್ಸು ಸರಿಸುಮಾರು 150ಕ್ಕೂ ಅಧಿಕ ವರ್ಷಗಳು. ಅಲ್ಲಿಗೆ ತೆಂಗು-ಅಡಿಕೆ ಮರಗಿಡಗಳಿಗಿಂತ ಹೆಚ್ಚಿನ ಆಯಸ್ಸು ಇದೆ ಎಂದಾಯಿತಲ್ಲವೆ?. ಬಹಳ ಮುಖ್ಯವಾಗಿ ಈ ಪ್ರಭೇದದ ಮರಗಿಡಗಳು ಪ್ರಾಣಿಪಕ್ಷಿಗಳಿಗೆ, ಜೀವಾಣುಗಳಿಗೆ ಅನ್ನ, ನೀರನ್ನು ನೀಡುತ್ತಾ ತನ್ನೊಡಲಲ್ಲಿಟ್ಟುಕೊಂಡು ಬೆಳೆಸುವ ಶಕ್ತಿ, ಸಾಮರ್ಥ್ಯ ಸ್ವಲ್ಪ ಹೆಚ್ಚಾಗಿಯೇ ಇದೆ ಎಂದರೆ ತಪ್ಪಾಗಲಾರದು.
ಇನ್ನು ಈ ತೆಂಗು-ಅಡಿಕೆಯಂತಹ ಮರಗಿಡಗಳ ಮೂಲ ಗುಣಲಕ್ಷಣ ಎಂದರೆ ಬಾಷ್ಪವಿಸರ್ಜನಾ ಕ್ರಿಯೆಯ ಮೂಲಕ ಭೂಮಿಯಲ್ಲಿರುವ ನೀರಿನ ತೇವಾಂಶವನ್ನು ಇತರ ಮರಗಿಡಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ವಾತಾವರಣಕ್ಕೆ ಕಳುಹಿಸುತ್ತಿರುತ್ತದೆ. ಹಾಗೆಯೇ ವಾತಾವರಣದಲ್ಲಿರುವ ಮಳೆ ಮೋಡಗಳನ್ನು ಆಕರ್ಷಿಸುವ ಶಕ್ತಿ, ಸಾಮರ್ಥ್ಯವು ಇನ್ನಿತರ ಮರಗಿಡಗಳಿಗಿಂತ ಕಡಿಮೆ ಇರುತ್ತದೆ. ನಾವಿಂದು ತೆಂಗು-ಅಡಿಕೆಯನ್ನು ಬಯಲು ಸೀಮೆಯಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದೇವೆ. ಇದರಿಂದ ಆ ಭಾಗಗಳಲ್ಲಿ ಮಳೆಯ ಪ್ರಮಾಣ ಕಮ್ಮಿ ಆಗುತ್ತಿದ್ದು ಅಂತರ್ಜಲ ಮಟ್ಟವೂ ಕುಸಿಯುತ್ತಿದೆ.
ಹೀಗಿರುವಾಗ ತೆಂಗು-ಅಡಿಕೆಯಂತಹ ಮರಗಿಡಗಳನ್ನು ಮಾತ್ರ ಸಂಶೋಧನೆ ಮಾಡುತ್ತೇವೆ ಹಾಗೂ ಇದಕ್ಕೆ ಒಂದಷ್ಟು ಹಣವನ್ನು ಅಧಿಕವಾಗಿ ನೀಡುತ್ತೇವೆ ಎಂದರೆ ಹೇಗೆ? ಇಂತಹ ಸಂಶೋಧನೆಗಳಿಂದ ನಮ್ಮ ರೈತರು ಉತ್ತೇಜನಗೊಂಡು ಏಕ ಬೆಳೆ ಪದ್ಧತಿಯಲ್ಲಿ ತೆಂಗು-ಅಡಿಕೆ ಬೆಳೆಯುವಂತಾಗುವುದರಿಂದ ಸಸ್ಯವೈವಿಧ್ಯತೆಗೆ ಹಾಗೂ ಜೀವವೈವಿಧ್ಯತೆಗೆ ಧಕ್ಕೆಯಾಗುವುದಿಲ್ಲವೆ? ಈಗಾಗಲೇ ಏಕಬೆಳೆ ಪದ್ಧತಿಯಿಂದ ಸಂಕಷ್ಟದಲ್ಲಿರುವ ಕೃಷಿ ಇನ್ನಷ್ಟು ನರಳಾಡುವಂತಾಗುವುದಿಲ್ಲವೆ? ಇದರಿಂದ ರೈತರು ತತ್ತರಿಸಿ ಹೋಗುವುದಕ್ಕೆ ನಾವೇ ಕಾರಣರಾಗುವುದಿಲ್ಲವೇ? ಇಂತಹ ಅನೇಕ ಪ್ರಶ್ನೆಗಳು ಕಾಡತೊಡಗುತ್ತಿವೆ.
ಕಾರ್ಬನ್ ಕ್ರೆಡಿಟ್ ಸ್ಕೀಂನ ಬಗ್ಗೆ:
ನಮ್ಮ ಕೃಷಿ ಭೂಮಿಯಲ್ಲಿ ಲಭ್ಯವಿರುವ ಸಾವಯವ ಇಂಗಾಲದ ಪ್ರಮಾಣವನ್ನು ಸ್ಯಾಟಲೈಟ್ನ ಮೂಲಕ ಅಳೆದು ಅದರ ಆಧಾರದ ಮೇಲೆ ಆಯಾ ರೈತರಿಗೆ ಇಂತಿಷ್ಟು ಹಣವನ್ನು ನೀಡುವ ಸ್ಕೀಂ ಇದು.1000 ಕೆಜಿಯಷ್ಟು ಸಾವಯವ ಇಂಗಾಲ ನಮ್ಮ ಭೂಮಿಯಲ್ಲಿದ್ದರೆ ಅದಕ್ಕೆ ಸರಿಸುಮಾರು 10-12 ಸಾವಿರ ರೂ. ನೀಡಲಾಗುವುದು ಎನ್ನುತ್ತಿದ್ದಾರೆ. ಇಲ್ಲಿ ನಾವು 2 ವಿಚಾರಗಳನ್ನು ಗಮನಿಸಬೇಕು.
ಒಂದು ಎಕರೆ ಪ್ರದೇಶದಲ್ಲಿ ಕನಿಷ್ಠ 30 ಪ್ರಭೇದದ ಬೆಳೆಗಳು ಜೀವಿಸುತ್ತಿದ್ದು ಅದರಿಂದ ಒದಗುವ ತ್ಯಾಜ್ಯಗಳು, ಬೇರುಗಳಿಂದ ಹೊರಬರುವ ರಾಸಾಯನಿಕಗಳು, ಆಮ್ಲಗಳ ಜೊತೆ ಜೀವಾಣುಗಳು, ಪ್ರಾಣಿಪಕ್ಷಿಗಳ ಹಿಕ್ಕೆ, ಪಿಕ್ಕೆ, ಅವುಗಳ ದೇಹದಿಂದ ಹೊರಬರುವ ರಾಸಾಯನಿಕಗಳಂತಹ ಹಲವಾರು ಅಂಶಗಳು ಒಟ್ಟಿಗೆ ಸೇರಿದಾಗ ಅಲ್ಲಿ ಸಿ.ಎನ್. ಪ್ರಮಾಣ ಕಾಪಾಡಿಕೊಳ್ಳುತ್ತಾ ಹ್ಯೂಮಸ್ ಆಗಿ ಪರಿವರ್ತನೆಗೊಳ್ಳುತ್ತದೆ. ತದನಂತರ ಇದೇ ಹ್ಯೂಮಸ್ ಸಾವಯವ ಇಂಗಾಲವಾಗಿ ರೂಪಾಂತರಗೊಳ್ಳುತ್ತದೆ. ಇಂತಹ ಜಾಗದಲ್ಲಿ ಯಾವುದೇ ಕಾರಣಕ್ಕೂ ಉಳುಮೆ ಮಾಡಬಾರದು. ರಾಸಾಯನಿಕಗಳು, ಕ್ರಿಮಿನಾಶಕ-ಕೀಟನಾಶಕಗಳ ಬಳಕೆ ಮಾಡಲೇಬಾರದು.
ಆದರೆ ಇಂದು ನಮ್ಮ ಕೃಷಿ ಪದ್ಧತಿಯನ್ನೊಮ್ಮೆ ಅವಲೋಕಿಸಿದರೆ, ಏಕಬೆಳೆ ಪದ್ಧತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಮರಗಿಡಗಳ ಸಂಖ್ಯೆ ಬೆರಳೆಣಿಕೆಯಷ್ಟಾಗಿದೆ. ಬಹುಮುಖ್ಯವಾಗಿ ವರ್ಷಕ್ಕೆ ನಾಲ್ಕೈದು ಬಾರಿ ಉಳುಮೆ ಮಾಡಲಾಗುತ್ತಿದೆ. ಅದು ದೊಡ್ಡ ದೊಡ್ಡ ಟ್ರ್ಯಾಕ್ಟರ್ ಗಳಿಂದ. ಇದರಿಂದ ಭೂಮಿಗೆ ಹೊದಿಕೆ ಇಲ್ಲದಂತಾಗಿ ಮಣ್ಣು, ನೀರು ಹಾಗೂ ಸಸ್ಯಪೋಷಕಾಂಶಗಳ ಆವಿಯಾಗುವಿಕೆ ಹೆಚ್ಚಾಗುತ್ತಿದೆ. ಹಾಗೆಯೇ ಭಾರತ ದೇಶದ ಶೇ. 60ರಷ್ಟು ಕೃಷಿಕರು ಜೋಳ, ರಾಗಿ, ಭತ್ತ, ದ್ವಿದಳ ಧಾನ್ಯಗಳಂತಹ ಮಳೆ ಆಶ್ರಿತ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಆದರೆ ರಾಸುಗಳಿಗೆ ಅವಶ್ಯವಿರುವ ಹುಲ್ಲು ಇದಾಗಿರುವುದರಿಂದ ಮಣ್ಣಿಗೆ ಸೇರಿಸುವ ಪ್ರಮಾಣ 20 ರಿಂದ 30 ಪ್ರತಿಶತದಷ್ಟಿರಬಹುದು.
ಉದಾಹರಣೆಗೆ, ಒಂದು ಎಕರೆ ಪ್ರದೇಶದಲ್ಲಿ ಜೋಳ ಬೆಳೆಯುತ್ತಿದ್ದರೆ ಅಲ್ಲಿ ಸುಮಾರು 5 ಸಾವಿರ ಕೆಜಿಯಷ್ಟಾದರೂ ಒಣ ಹುಲ್ಲು ದೊರೆಯುತ್ತದೆ. ಇದರಲ್ಲಿ ಮಣ್ಣಿಗೆ ಸೇರುವ ಪ್ರಮಾಣ ಶೇ. 30 ಎಂದುಕೊಂಡರೂ ಅದು ಸುಮಾರು 1500 ಕೆಜಿಯಷ್ಟಾಗಬಹುದು. ಹೀಗೆ ಅಲ್ಪ ಪ್ರಮಾಣದ ಹಾಗೂ ಏಕರೂಪದ ತ್ಯಾಜ್ಯವನ್ನು (ತೆಂಗು-ಅಡಿಕೆಯನ್ನು ಒಳಗೊಂಡಂತೆ) ಮಣ್ಣಿಗೆ ಸೇರುತ್ತಿರುವುದರಿಂದ ತ್ಯಾಜ್ಯದಲ್ಲಿನ ರಸಸಾರಸತ್ವವು ನಿರಂತರವಾಗಿ ಆವಿಯಾಗುತ್ತಲೇ ಹೋಗುತ್ತದೆ. ಇದರಿಂದ ನಮ್ಮ ಭೂಮಿಯಲ್ಲಿ ಎಂದೆಂದಿಗೂ ಸಾವಯವ ಇಂಗಾಲದ ಪ್ರಮಾಣವನ್ನು ವೃದ್ಧಿಸುವುದು ಕಷ್ಟಸಾಧ್ಯ. ಹೀಗಾಗಿಯೇ ನಾವು ಮಣ್ಣಿಗೆ ಸೇರಿಸುವ, ಕೃಷಿ ಭೂಮಿಯಲ್ಲಿ ಶೇ. 3ರಷ್ಟು ಇರಬೇಕಾಗಿದ್ದ ಸಾವಯವ ಇಂಗಾಲದ ಪ್ರಮಾಣ ಇಂದು 0.05ರ ಆಜುಬಾಜಿನಲ್ಲಿದೆ. ರಾಸಾಯನಿಕ ಕೃಷಿ ಪದ್ಧತಿಯಲ್ಲಿ ಸಾವಯವ ಇಂಗಾಲದ ಪ್ರಮಾಣ ಶೇ. 3ಕ್ಕೆ ಹೆಚ್ಚಿಸಲು ಸಾಧ್ಯವೇ ಇಲ್ಲ. ಹೀಗಾಗಿ ಶೇ. 3 ಎನ್ನುವುದನ್ನು ಶೇ. 0.5 ಇದ್ದರೆ ಸಾಕು ಎಂದು ಹೇಳುತ್ತಿದ್ದಾರೆ. ಈ ಆದಾರದ ಮೇಲೆ ನೋಡುವುದಾದರೆ ಕಾರ್ಬನ್ ಕ್ರೆಡಿಟ್ ಕಾರ್ಡ್ ಅಥವಾ ಸ್ಕೀಂಗಳಿಂದ ನಮಗೆ ಒಂದು ವರ್ಷಕ್ಕೆ ಸಿಗುವುದು 2-3 ಸಾವಿರದಷ್ಟು ಮಾತ್ರ.
ಇಳುವರಿಯ ಜೊತೆ ಇಷ್ಟಾದರೂ ಸಿಕ್ಕರೆ ಅದು ಆರ್ಥಿಕತೆಯ ದೃಷ್ಟಿಯಿಂದ ಒಳ್ಳೆಯದೇ. ಆದರೆ ಇಂತಹ ಸ್ಕೀಂಗಳಿಂದ ತಾಪಮಾನ ಏರಿಕೆಯನ್ನು ಕಮ್ಮಿ ಮಾಡಲಿಕ್ಕಾಗದು, ಸೈಕ್ಲೋನ್ಗಳ ಹಾವಳಿಯನ್ನು ತಡೆಯಲಾಗದು, ಪತ್ರಹರಿತ್ತು ರಂಧ್ರಗಳ ಹುಟ್ಟು ಮತ್ತು ಸಾವನ್ನು ನಿಯಂತ್ರಿಸಲಾಗದು, ಹವಾಮಾನದಲ್ಲಾಗುತ್ತಿರುವ ಬದಲಾವಣೆಯನ್ನು ನಿಲ್ಲಿಸಲಿಕ್ಕಾಗದು. ಈಗ ಕಾರ್ಖಾನೆಗಳು ರೈತರಿಗೆ ಒಂದಷ್ಟು ಹಣವನ್ನು ನೀಡಿ ತಮ್ಮಿಷ್ಟ ಬಂದಷ್ಟು ಶಾಖವರ್ಧಕ ಅನಿಲಗಳನ್ನು ಉತ್ಪಾದನೆ ಮಾಡುತ್ತಲೇ ಇರುತ್ತೇವೆ ಎನ್ನುವುದಾದರೆ ಮುಂದಾಗುವ ದುರಂತದಿಂದ ನಮ್ಮನ್ನು ಕಾಪಾಡುವವರು ಯಾರು?
ಏಕೆಂದರೆ, ಏರುತ್ತಿರುವ ತಾಪಮಾನದಿಂದ ಹಾಗೂ ಹವಾಮಾನದಲ್ಲಾಗುತ್ತಿರುವ ಬದಲಾವಣೆಯಿಂದ ಸಮಯಕ್ಕೆ ಸರಿಯಾಗಿ ಮಳೆ ಬಾರದೆ, ಬಿಸಿಲಿನ ತೀವ್ರತೆ ಹೆಚ್ಚಾಗಿ, ಸೈಕ್ಲೋನ್ಗಳ ಹಾವಳಿಯಿಂದ ವರ್ಷದಲ್ಲಿ ಒಂದೇ ಬೆಳೆ ಬೆಳೆಯುವ ವಾತಾವರಣ ನಿರ್ಮಾಣವಾಗುತ್ತಿದೆ. ಇದರಿಂದ ಮಳೆ ಆಶ್ರಿತ ಪ್ರದೇಶದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿದ್ದಾರೆ. ಹೀಗಾಗಿಯೇ ಕರ್ನಾಟಕದಲ್ಲಿ ಕಳೆದ 6-7 ವರ್ಷಗಳಲ್ಲಿ ಸರಿಸುಮಾರು 5 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೆಳೆ ನಷ್ಟ ಆಗಿದೆ ಎಂದು ವರದಿಯಾಗಿದೆ. ಇಂತಹ ರೈತರಿಗೆ ನೇರವಾದ ಪರಿಹಾರ ಇಲ್ಲ ಎನ್ನುವುದಾದರೆ ಹೇಗೆ?
ಬಹಳ ಮುಖ್ಯವಾಗಿ ಕಾರ್ಖಾನೆಗಳು ಬರಿ ಕಾರ್ಬನ್ ಡೈಆಕ್ಸೈಡ್ ಅನ್ನು ಮಾತ್ರವೇ ಬಿಡುಗಡೆ ಮಾಡುವುದಿಲ್ಲ. ಮಿಥೇನ್, ನೈಟ್ರಸ್ ಆಕ್ಸೈಡ್, ಹೈಡ್ರೋಫ್ಲೋರೋ ಕಾರ್ಬನ್ಸ್, ಸಲ್ಫರ್ ಡೈಆಕ್ಸೈಡ್, ನೈಟ್ರೋಜನ್ ಆಕ್ಸೈಡ್ನಂತಹ ಹಲವಾರು ಅನಿಲಗಳು ಬಿಡುಗಡೆ ಮಾಡುತ್ತವೆ. ಈ ಅನಿಲಗಳು ವಾತಾವರಣದಲ್ಲಿ ಸಾವಿರಾರು ವರ್ಷಗಳ ಕಾಲ ನೆಲೆಯೂರುತ್ತದೆ. ಮಿಥೇನ್ ಸುಮಾರು 13 ವರ್ಷಗಳ ಕಾಲ. ನೈಟ್ರಸ್ ಆಕ್ಸೈಡ್ ಸುಮಾರು 114 ವರ್ಷಗಳ ಕಾಲ, ಫ್ಲೋರೈಡ್ ಅನಿಲಗಳು ಸಾವಿರಾರು ವರ್ಷಗಳ ಕಾಲ ವಾತಾವರಣದಲ್ಲಿ ನೆಲೆಯೂರುತ್ತವೆ. ಒಂದು ಕೆಜಿ ಮಿಥೇನ್ 24 ಕೆಜಿ ಕಾರ್ಬನ್ ಡೈಆಕ್ಸೈಡ್ಗೆ ಸಮನಾಗಿರುತ್ತದೆ. ಒಂದು ಕೆಜಿ ನೈಟ್ರಸ್ ಆಕ್ಸೈಡ್ ೨೯೮ ಕೆಜಿ ಕಾರ್ಬನ್ ಡೈಆಕ್ಸೈಡ್ಗೆ ಸಮನಾಗಿರುತ್ತದೆ. ಒಂದು ಕೆಜಿ ಪ್ಲೋರೈಡ್ ಅನಿಲಗಳು 22,800 ಕೆಜಿ ಕಾರ್ಬನ್ ಡೈಆಕ್ಸೈಡ್ಗೆ ಸಮನಾಗಿರುತ್ತದೆ. ಇಲ್ಲಿ ಕಾರ್ಬನ್ ಡೈಆಕ್ಸೈಡ್ ಅನ್ನು ಮರಗಿಡಗಳು, ಕೆಲವು ರಾಸಾಯನಿಕ ಕ್ರಿಯೆಗಳಿಗೆ ಬಳಕೆಯಾಗುತ್ತದೆಯಾದರೂ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗಿ ಉಲ್ಭಣವಾಗಿರುವುದರಿಂದ ಸಾವಿರಾರು ವರ್ಷಗಳ ಕಾಲ ವಾತಾವರಣದಲ್ಲಿರುವ ಅದು ಪ್ರಕೃತಿಯ ಮೇಲೆ ತನ್ನ ದೌರ್ಜನ್ಯವನ್ನು ಎಸಗುತ್ತಲೇ ಇರುತ್ತದೆ ಅಲ್ಲವೇ?
ಇಂತಹ ಹಲವಾರು ಕಾರಣಗಳನ್ನು ಮುಂದಿಟ್ಟುಕೊಂಡು ಈ ಸ್ಕೀಂಗಳನ್ನು ನೋಡುವುದಾದರೆ, ರೈತರಿಗೆ ಒಂದಷ್ಟು ಬಿಡಿಗಾಸನ್ನು ನೀಡಿ ತಮ್ಮಿಷ್ಟ ಬಂದಷ್ಟು ಶಾಖವರ್ಧಕ ಅನಿಲಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತೇವೆ, ನಮ್ಮನ್ನು ಯಾರೂ ದೂಷಿಸಬೇಡಿ ಎನ್ನುವಂತಿದೆ ಅವರ ಧೋರಣೆ. ಇನ್ನು ಈ ಸ್ಕೀಂಗಳನ್ನು ಪ್ರೋತ್ಸಾಹಿಸುತ್ತಿರುವ ಕೆಲವು ಸಂಘ-ಸಂಸ್ಥೆಗಳಿಗೆ ನಾಲ್ಕಾರು ಕಾಸು ಸಿಗುತ್ತಿದೆ. ಆದರೆ ಅವರು ಮರೆಯುತ್ತಿರುವುದು ಏನೆಂದರೆ ಮುಂದಾಗುವ ಅನಾಹುತಗಳಲ್ಲಿ ನಾವೂ ಭಾಗಿಯಾಗುತ್ತಿದ್ದೇವೆ ಎನ್ನುವುದನ್ನು. ಹಾಗಾಗಿ ಇಂತಹ ಸ್ಕೀಂಗಳ ಬದಲು ನಾವೆಲ್ಲರೂ ಅ ಶಾಖವರ್ಧಕ ಅನಿಲಗಳ ಉತ್ಪಾದನೆಯನ್ನು ಕಡಿಮೆ ಮಾಡುವುದರ ಬಗ್ಗೆ ಗಮನಹರಿಸಬೇಕಾಗಿದೆ.
ಹಾಗೆಯೇ ಕೈಗಾರೀಕರಣವಾದ ನಂತರ ತಮ್ಮ ನೆಲೆಯನ್ನು ಗಟ್ಟಿಯಾಗಿ ರೂಪಿಸಿಕೊಂಡಿರುವ ಉದ್ಯಮಿಗಳು ಶಾಖವರ್ಧಕ ಅನಿಲಗಳ ಉತ್ಪಾದನೆಯನ್ನು ಕಮ್ಮಿ ಮಾಡುವಲ್ಲಿ ಸಹಕಾರಿಯಾಗುವ ಪರ್ಯಾಯ ಮಾರ್ಗಗಳನ್ನು ಸಂಶೋಧಿಸಿ, ಅದನ್ನು ಬಡವರಿಗೆ, ರೈತರಿಗೆ ಕೈಗೆಟಕುವ ಬೆಲೆಗೆ ಕೊಡುವಂತಹ ಪುಣ್ಯದ ಕೆಲಸವನ್ನು ಮಾಡುವಂತಾಗಲಿ. ಉದಾ: ಸೌರ, ಪವನ ಶಕ್ತಿಯಿಂದ ತಯಾರಿಸುವ ವಿದ್ಯುತ್ ಉತ್ಪಾದನೆ ಸ್ಥಾವರಗಳು, ಬ್ಯಾಟರಿ ಚಾಲಿತ ವಾಹನಗಳಿಗೆ ರೀಚಾರ್ಚ್ ಬಂಕ್ಗಳು, ಪುನರ್ ಬಳಕೆ ಪ್ಲಾಸ್ಟಿಕ್ ಅನ್ನು ಉತ್ಪಾದಿಸುವುದು ಹಾಗೂ ಮರುಬಳಕೆಗೆ ಅವಶ್ಯವಿರುವ ಕಾರ್ಖಾನೆಗಳನ್ನು ಸ್ಥಾಪಿಸುವುದು, ಕಾಡು-ಕೆರೆಕಟ್ಟೆಗಳನ್ನು ಸಂರಕ್ಷಿಸುವ ಹಾಗೂ ಅಭಿವೃದ್ಧಿ ಪಡಿಸುವ ಹೊಣೆಗಾರಿಕೆಯನ್ನು ನಿಭಾಯಿಸುವುದು, ಕೃಷಿ ಭೂಮಿಯಲ್ಲಿ ಮಳೆ ನೀರನ್ನು ಹಿಡಿದಿಟ್ಟುಕೊಳ್ಳಲು ಸಹಕಾರಿಯಾಗುವ ವಿಧಾನಗಳಿಗೆ ಸಹಾಯಧನ ನೀಡುವುದು, ರಾಸಾಯನಿಕ ಮುಕ್ತ ಕೃಷಿಯ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು ಅನುಕೂಲವಾಗುವ ವಿಶ್ವ ವಿದ್ಯಾನಿಲಯವನ್ನು ಸ್ಥಾಪಿಸುವುದು, ಹೀಗೆ...