ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ : ಕಾಂಗ್ರೆಸ್ ನ ಭದ್ರಕೋಟೆ ಮತ್ತೆ ಕೈವಶವಾಗಲಿದೆಯೇ?
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ನ ಭದ್ರ ಕೋಟೆ. ಒಮ್ಮೆ ಜನತಾದಳ ಗೆದ್ದುಕೊಂಡಿದ್ದ ಈ ಕ್ಷೇತ್ರವನ್ನು ಕಳೆದ ಚುನಾವಣೆಯಲ್ಲಿ ಬಿಜೆಪಿ ಮೊದಲ ಸಲ ಗೆದ್ದುಕೊಂಡಿತು. ಈ ಬಾರಿ ಕ್ಷೇತ್ರ ಮತ್ತೆ ಕೈವಶವಾಗಲಿದೆಯೇ ಅಥವಾ ಬಿಜೆಪಿ-ಜೆಡಿಎಸ್ ಮೈತ್ರಿಯ ಪಾಲಾಗಲಿದೆಯೇ ಎಂಬ ಕುತೂಹಲವಿದೆ. ಕಾಂಗ್ರೆಸ್ನಿಂದ ಬಲಿಜ ಸಮುದಾಯದ ಅಭ್ಯರ್ಥಿ ಕಣದಲ್ಲಿದ್ದರೆ, ಬಿಜೆಪಿಯಿಂದ ಒಕ್ಕಲಿಗ ಅಭ್ಯರ್ಥಿ ಇದ್ದಾರೆ. ಒಕ್ಕಲಿಗ ಸಮುದಾಯ ಪ್ರಬಲವಾಗಿದ್ದರೂ, ಗೆಲುವಿನಲ್ಲಿ ಸಣ್ಣ ಸಮುದಾಯಗಳು ಮಹತ್ವದ ಪಾತ್ರ ವಹಿಸುವುದು, ಸಣ್ಣಪುಟ್ಟ ಸಮುದಾಯಕ್ಕೆ ಸೇರಿದವರೇ ಆಯ್ಕೆಯಾಗುತ್ತಾ ಬಂದಿರುವುದು ಈ ಕ್ಷೇತ್ರದ ವಿಶೇಷತೆ.
ಕೆಲವು ಪ್ರಾಥಮಿಕ ಮಾಹಿತಿಗಳು
ಶೇ.67.92 ಸಾಕ್ಷರತೆ ಪ್ರಮಾಣವಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿನ ಒಟ್ಟು ವಿಧಾನಸಭೆ ಕ್ಷೇತ್ರಗಳು 8. ಅವೆಂದರೆ, ಗೌರಿಬಿದನೂರು, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಯಲಹಂಕ, ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ.
5 ಕ್ಷೇತ್ರಗಳಲ್ಲಿ ಕಾಂಗ್ರೆಸ್, 2ರಲ್ಲಿ ಬಿಜೆಪಿ ಹಾಗೂ ಒಂದು ಕ್ಷೇತ್ರದಲ್ಲಿ ಪಕ್ಷೇತರ ಶಾಸಕರಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಒಟ್ಟು ಮತದಾರರು 18,80,988, ಪುರುಷ ಮತದಾರರಿಗಿಂತ ಮಹಿಳಾ ಮತದಾರರು ಹೆಚ್ಚಿದ್ದಾರೆ. ಕ್ಷೇತ್ರದಲ್ಲಿ ಒಕ್ಕಲಿಗರು, ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಬಲಿಜ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ.
ಹಿಂದಿನ ಚುನಾವಣೆಗಳಲ್ಲಿನ ಫಲಿತಾಂಶ ನೋಡುವುದಾದರೆ,
2009 ಮತ್ತು 2014ರಲ್ಲಿ ಕಾಂಗ್ರೆಸ್ನ ಎಂ. ವೀರಪ್ಪ ಮೊಯ್ಲಿ ಗೆಲುವು ಕಂಡಿದ್ದರೆ, 2019ರಲ್ಲಿ ಬಿಜೆಪಿಯ ಬಿ.ಎನ್. ಬಚ್ಚೇಗೌಡ ಗೆಲುವು ಸಾಧಿಸಿದ್ದಾರೆ.
ಹಿಂದಿನ ಚುನಾವಣೆಗಳಲ್ಲಿನ ಮತ ಹಂಚಿಕೆ ವಿವರ:
2009 ಕಾಂಗ್ರೆಸ್ಗೆ ಶೇ.39.90, ಬಿಜೆಪಿಗೆ ಶೇ.34.65.
2014 ಕಾಂಗ್ರೆಸ್ಗೆ ಶೇ.33.61, ಬಿಜೆಪಿಗೆ ಶೇ.32.86.
2019 ಬಿಜೆಪಿಗೆ ಶೇ.53.78, ಕಾಂಗ್ರೆಸ್ಗೆ ಶೇ.40.65.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ನಾಲ್ಕು ಜಿಲ್ಲೆಗಳನ್ನು ಮತ್ತು ಎಂಟು ವಿಧಾನ ಸಭಾ ಕ್ಷೇತ್ರಗಳನ್ನು ಹೊಂದಿರುವ ಕ್ಷೇತ್ರ.
ಚಿಕ್ಕಬಳ್ಳಾಪುರ ಜಿಲ್ಲೆಯ ಮೂರು ವಿಧಾನ ಸಭಾ ಕ್ಷೇತ್ರಗಳು, ಬೆಂಗಳೂರು ನಗರ ಜಿಲ್ಲೆಯ ಒಂದು ವಿಧಾನ ಸಭಾ ಕ್ಷೇತ್ರ, ಬೆಂಗಳೂರು ಗ್ರಾಮಾಂತರದ ಮೂರು ಕ್ಷೇತ್ರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರಗಳಿಗೆ ಹೊಂದಿಕೊಂಡಿರುವ ಒಂದು ಕ್ಷೇತ್ರವನ್ನು ಹೊಂದಿದೆ.
ಈ ಹಿಂದೆ ಈ ಲೋಕಸಭಾ ಕ್ಷೇತ್ರ ಕೋಲಾರ ಕ್ಷೇತ್ರವೆಂದು ಗುರುತಿಸಿಕೊಂಡಿತ್ತು ನಂತರ ಮಧುಗಿರಿ ಕ್ಷೇತ್ರವಾಗಿ ಮಾರ್ಪಟ್ಟಿತ್ತು.
ಆನಂತರ ಚಿಕ್ಕಬಳ್ಳಾಪುರ ಕ್ಷೇತ್ರವಾಗಿ ಮಾರ್ಪಟ್ಟಿದ್ದು, ಹಿಂದಿನಿಂದಲೂ ಕಾಂಗ್ರೆಸ್ನದ್ದೇ ಭದ್ರಕೋಟೆಯಾಗಿದೆ.
1996ರಲ್ಲಿ ನಡೆದ ಚುನಾವಣೆಯಲ್ಲಿ ಜನತಾದಳದ ಆಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆರ್.ಎಲ್.ಜಾಲಪ್ಪ ಮತ್ತು 2019ರಲ್ಲಿ ಬಿಜೆಪಿಯ ಬಿ.ಎನ್.ಬಚ್ಚೇಗೌಡರನ್ನು ಹೊರತುಪಡಿಸಿದರೆ ಮಿಕ್ಕೆಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವೇ ಗೆದ್ದಿದೆ. 1977ರಿಂದ 12 ಚುನಾವಣೆಗಳು ನಡೆದಿದ್ದು, 10ರಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ.
1977ರಲ್ಲಿ ಕಾಂಗ್ರೆಸ್ನ ಎಂ.ವಿ. ಕೃಷ್ಣಪ್ಪ ಗೆಲುವು ಸಾಧಿಸಿದ್ದರೆ, 1980ರಲ್ಲಿ ಕಾಂಗ್ರೆಸ್ನ ಎಸ್.ಎನ್. ಪ್ರಸನ್ನ ಕುಮಾರ್ ಗೆಲುವು ಕಂಡಿದ್ದರು. 1984, 1989 ಹಾಗೂ 1991ರಲ್ಲಿ ಕಾಂಗ್ರೆಸ್ನ ವಿ.ಕೃಷ್ಣರಾವ್ ಗೆಲುವು ಪಡೆದುಕೊಂಡಿದ್ದರು.
1996ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಗೆ ಕೈಕೊಟ್ಟ ಮತದಾರರು ಜನತಾದಳದ ಅಭ್ಯರ್ಥಿ ಆರ್.ಎಲ್. ಜಾಲಪ್ಪ ಅವರನ್ನು ಗೆಲ್ಲಿಸಿದ್ದರು.
ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಉರುಳಿ, 1998ರಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ರಾಜಕೀಯ ಮೇಲಾಟಗಳಿಂದಾಗಿ ಜನತಾದಳ ಬಿಟ್ಟು ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದ ಆರ್.ಎಲ್. ಜಾಲಪ್ಪ ಮತ್ತೆ ಗೆದ್ದರು.
1999ರಲ್ಲಿ ನಡೆದ ಮರು ಚುನಾವಣೆ ಹಾಗೂ 2004ರ ಚುನಾವಣೆಯಲ್ಲಿ ಪುನಃ ಆರ್.ಎಲ್. ಜಾಲಪ್ಪ ಗೆದ್ದರು.
2009ರ ಚುನಾವಣೆಯಲ್ಲಿ ರಾಜಕೀಯದಿಂದ ದೂರ ಸರಿದಿದ್ದ ಜಾಲಪ್ಪ ಸ್ಥಾನದಲ್ಲಿ ಕಾಂಗ್ರೆಸ್ನಿಂದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಕಣಕ್ಕಿಳಿದು ಗೆದ್ದರು. 2014ರಲ್ಲೂ ಪುನಃ ಮೊಯ್ಲಿ ಗೆಲುವು ಸಾಧಿಸಿದರು.
2019ರಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡ ಗೆದ್ದರು. ಅದು ಈ ಕ್ಷೇತ್ರದಲ್ಲಿ ಬಿಜೆಪಿಗೆ ಮೊದಲ ಗೆಲುವು.
ಈ ಬಾರಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ
ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಕಣದಲ್ಲಿದ್ದಾರೆ. ಅವರು ಬಲಿಜ ಸಮುದಾಯಕ್ಕೆ ಸೇರಿದವರು.
ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಸಚಿವ ಡಾ. ಕೆ. ಸುಧಾಕರ್ ಒಕ್ಕಲಿಗ ಸಮುದಾಯದವರು.
ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಕ್ಷೇತ್ರದಲ್ಲಿ ಎರಡೂ ಸಮುದಾಯದ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ.
ಜಾತಿಗೆ ಅಂಟಿಕೊಳ್ಳದ ಮತದಾರರು
ಈ ಕ್ಷೇತ್ರದ ಇನ್ನೊಂದು ವಿಶೇಷತೆಯೆಂದರೆ, ಒಕ್ಕಲಿಗ ಸಮುದಾಯದ ಮತದಾರರು ಬಹುಸಂಖ್ಯೆಯಲ್ಲಿದ್ದರೂ, ತೀರಾ ಕಡಿಮೆ ಸಂಖ್ಯೆಯ ಮತದಾರರನ್ನು ಹೊಂದಿರುವ ಸಮುದಾಯಗಳ ಅಭ್ಯರ್ಥಿಗಳೇ ಕಾಂಗ್ರೆಸ್ನಿಂದ ಹೆಚ್ಚು ಬಾರಿ ಗೆದ್ದಿದ್ದಾರೆ.ಈವರೆಗಿನ ಯಾವ ಚುನಾವಣೆಯಲ್ಲೂ ಇಲ್ಲಿನ ಮತದಾರರು ಜಾತಿಗೆ ಅಂಟಿಕೊಂಡಿದ್ದಿಲ್ಲ.
ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರು ಹೆಚ್ಚಿದ್ದರೂ, ಇಲ್ಲಿಯವರೆಗೆ ಇಬ್ಬರು ಒಕ್ಕಲಿಗರಷ್ಟೇ ಗೆದ್ದಿರುವುದು.
ಹಿಂದುಳಿದ ವರ್ಗದ ಈಡಿಗ ಜನಾಂಗದ ಆರ್.ಎಲ್. ಜಾಲಪ್ಪ 3 ಬಾರಿ, ದೇವಾಡಿಗ ಸಮುದಾಯದ ವೀರಪ್ಪ ಮೊಯ್ಲಿ 2 ಬಾರಿ ಗೆದ್ದಿದ್ದಾರೆ. 40 ವರ್ಷಗಳ ಕಾಲ ಹಿಂದುಳಿದ ವರ್ಗಕ್ಕೆ ಮನ್ನಣೆ ನೀಡಿದ ಕ್ಷೇತ್ರ ಇದಾಗಿದೆ. ಇದೆಲ್ಲ ಚರಿತ್ರೆಯ ನಡುವೆಯೂ ಜಾತಿಯ ಲೆಕ್ಕಾಚಾರ ಈ ಬಾರಿ ಜೋರಾಗಿದೆ ಎಂಬ ಮಾತುಗಳಿವೆ.
ವಿಧಾನಸಭಾ ಚುನಾವಣೆಯಲ್ಲಿ ಸೋತ ಡಾ. ಸುಧಾಕರ್ ಈಗ ಗೆಲ್ಲಲೇ ಬೇಕೆಂಬ ಹಠಕ್ಕೆ ಬಿದ್ದು ಕಣದಲ್ಲಿದ್ದಾರೆ. ಆದರೆ ಟಿಕೆಟ್ ತಪ್ಪಿದ ಬಿಜೆಪಿ ಮುಖಂಡರಿಂದ ಅವರಿಗೆ ಸಾಕಷ್ಟು ವಿರೋಧವೂ ಇದೆ. ಅಸಮಾಧಾನಿತರನ್ನು ಸಮಾಧಾನಪಡಿಸುವ ಪ್ರಯತ್ನ ಕೂಡ ಅಷ್ಟು ಯಶಸ್ಸು ಪಡೆದಿಲ್ಲ.
ಇತ್ತ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆಯೂ ಅಲ್ಲಲ್ಲಿ ಅಪಸ್ವರ ಇತ್ತಾದರೂ ಅದು ತೀರಾ ಬಂಡಾಯದ ಸ್ವರೂಪ ಪಡೆದಿಲ್ಲ. ಟಿಕೆಟ್ ವಂಚಿತರೂ ಹೆಚ್ಚು ಅಸಮಾಧಾನ ಬಹಿರಂಗವಾಗಿ ತೋರಿಸಿಲ್ಲ.
ಕಾಂಗ್ರೆಸ್ ಭದ್ರಕೋಟೆ ಎನಿಸಿಕೊಂಡಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಈ ಚುನಾವಣೆಯಲ್ಲಿ ಮತ್ತೆ ಕೈವಶವಾಗುವುದೋ ಅಥವಾ ಮೂರನೇ ಬಾರಿಗೆ ಬೇರೆ ಪಕ್ಷದ ಪಾಲಾಗುವುದೋ ಎಂಬುದನ್ನು ಕಾದು ನೋಡಬೇಕಿದೆ.