ದಿಲ್ಲಿ, ಜಮ್ಮು-ಕಾಶ್ಮೀರ ಮತ್ತು ಲಡಾಖ್ ; ಬಿಜೆಪಿಗೆ ಕಠಿಣ ಪೈಪೋಟಿ ನೀಡಲು ಸಿದ್ಧವಾಗುತ್ತಿರುವ ‘ಇಂಡಿಯಾ’ ಮೈತ್ರಿಕೂಟ
ಕೇಂದ್ರಾಡಳಿತ ಪ್ರದೇಶಗಳಾದ ದಿಲ್ಲಿ ಮತ್ತು ಜಮ್ಮು-ಕಾಶ್ಮೀರ ಮತ್ತು ಲಡಾಖ್ನಲ್ಲಿನ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ದಿಲ್ಲಿಯಲ್ಲಿ ಎಎಪಿ ವಿರುದ್ಧ ಅಬಕಾರಿ ಹಗರಣದ ತನಿಖೆಯ ತೂಗುಕತ್ತಿ ಒಂದೆಡೆಯಾದರೆ, ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿ ಎಎಪಿ ಮತ್ತು ಕಾಂಗ್ರೆಸ್ ತೆಗೆದುಕೊಳ್ಳಲಿರುವ ನಿರ್ಧಾರಗಳು ಏನಿರಲಿವೆ ಎಂಬುದು ಕೂಡ ಮಹತ್ವ ಪಡೆಯಲಿದೆ.
ಇನ್ನು ಜಮ್ಮು-ಕಾಶ್ಮೀರದಲ್ಲಿ ಲೋಕಸಭೆ ಚುನಾವಣೆಯ ಜೊತೆಗೇ ವಿಧಾನಸಭೆಗೂ ಚುನಾವಣೆ ನಡೆಯಬಹುದು ಎನ್ನಲಾಗುತ್ತಿದೆ. ಇದು ಅಲ್ಲಿನ ರಾಜಕಾರಣದಲ್ಲಿ ಹೊಸ ಉತ್ಸಾಹಕ್ಕೆ ಕಾರಣವಾಗಿದೆ.
7 ಲೋಕಸಭಾ ಕ್ಷೇತ್ರಗಳಿರುವ ದಿಲ್ಲಿಯ ಒಟ್ಟು ಜನಸಂಖ್ಯೆ 3.3 ಕೋಟಿ. ಅದರಲ್ಲಿ ಹಿಂದೂಗಳು ಶೇ. 81.68, ಮುಸ್ಲಿಮರು ಶೇ. 12.86, ಕ್ರೈಸ್ತರು ಶೇ. 0.87 ಮತ್ತು ಸಿಖ್ಖರು ಶೇ. 3.40
2009ರ ಲೋಕಸಭೆ ಚುನಾವಣೆಯಲ್ಲಿ ಎಲ್ಲ 7 ಸ್ಥಾನಗಳು ಕಾಂಗ್ರೆಸ್ ಪಾಲಾಗಿದ್ದರೆ. 2014ರಲ್ಲಿ ಎಲ್ಲ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತು. 2019ರ ಲೋಕಸಭೆ ಚುನಾವಣೆಯಲ್ಲಿ ಕೂಡ ಬಿಜೆಪಿಯೇ ಎಲ್ಲ 7 ಸ್ಥಾನಗಳನ್ನು ಗೆದ್ದಿದೆ.
ಈ ಸಲ ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ ರಚನೆಯಾಗಿದೆ. ಆದರೆ ಕಳೆದೆರಡು ಲೋಕಸಭಾ ಚುನಾವಣೆಗಳಲ್ಲಿನ ಶೂನ್ಯ ಸಾಧನೆಯ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ಸಮಾನ ದುಃಖಿ ಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಎಎಪಿ ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿ ಕಣಕ್ಕಿಳಿಯುವವೇ ಅಥವಾ ಪ್ರತ್ಯೇಕವಾಗಿ ಸ್ಪರ್ಧಿಸುವವೇ ಎಂಬುದು ದೊಡ್ಡ ಪ್ರಶ್ನೆ.
ಪಂಜಾಬ್ ರಾಜ್ಯದಲ್ಲಿ ಅವುಗಳು ಪರಸ್ಪರ ಎದುರಾಳಿಗಳಾಗಲು ಸನ್ನದ್ಧವಾಗಿರುವುದನ್ನು ನೋಡಿದರೆ ದಿಲ್ಲಿಯಲ್ಲೂ ಅದೇ ಸ್ಥಿತಿ ತಲೆದೋರಬಹುದು ಎಂಬ ಅನುಮಾನ ಮೂಡದೇ ಇರುವುದಿಲ್ಲ.
ಕಾಂಗ್ರೆಸ್ ಎಲ್ಲ 7 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಕಾಂಗ್ರೆಸ್ ವಕ್ತಾರೆ ಅಲ್ಕಾ ಲಾಂಬಾ ಕೆಲವು ತಿಂಗಳುಗಳ ಹಿಂದೆ ಹೇಳಿದಾಗ ಅದು ವಿವಾದಕ್ಕೆ ಕಾರಣವಾಗಿತ್ತು.
ಎಲ್ಲ ಸೀಟುಗಳಿಗಾಗಿ ಕಾಂಗ್ರೆಸ್ ಕಣಕ್ಕಿಳಿಯುವುದಾದರೆ ‘ಇಂಡಿಯಾ’ ಮೈತ್ರಿಕೂಟಕ್ಕೆ ಏನು ಅರ್ಥ ಎಂಬ ಪ್ರಶ್ನೆಯನ್ನು ಎಎಪಿ ಎತ್ತಿತ್ತು.
ಆದರೆ, ಆಗ ಕಾಂಗ್ರೆಸ್ ಅಲ್ಕಾ ಲಾಂಬಾ ಅವರ ಹೇಳಿಕೆಯಿಂದ ದೂರ ಕಾಯ್ದುಕೊಂಡಿತ್ತಲ್ಲದೆ, ಅಂಥ ಯಾವುದೇ ವಿಚಾರ ಚರ್ಚೆಯಾಗಿಲ್ಲ ಎಂದು ನಿರಾಕರಿಸಿತ್ತು. ಲಾಂಬಾ ಅವರು ಪಕ್ಷದ ವಕ್ತಾರೆ ಹೌದಾದರೂ ಇಂಥ ಬಹುಮುಖ್ಯ ವಿಚಾರಗಳನ್ನು ಹೇಳಲು ಅವರು ಅಧಿಕೃತ ವ್ಯಕ್ತಿಯಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿತ್ತು.
ಹಾಗಾದರೆ ಕಾಂಗ್ರೆಸ್ ನಿಲುವೇನಿರಬಹುದು?
ಒಂದು ಕಾಲದಲ್ಲಿ ಎಲ್ಲ ಏಳೂ ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಈಗಲೂ ಅಂಥ ಅವಕಾಶಕ್ಕಾಗಿ ಕಾಯದೇ ಇಲ್ಲ. ಇನ್ನೊಂದೆಡೆ, ದಿಲ್ಲಿಯಲ್ಲಿ ಅಧಿಕಾರದಲ್ಲಿರುವ ಎಎಪಿಗೂ ಲೋಕಸಭೆ ಕ್ಷೇತ್ರಗಳನ್ನೂ ತನ್ನದಾಗಿಸಿಕೊಳ್ಳುವ ಆಸೆಯಿಲ್ಲದೆ ಇಲ್ಲ.
ಸೀಟು ಹಂಚಿಕೆ ವಿಚಾರ ಚರ್ಚೆಯಾಗಬೇಕಿದೆಯಾದರೂ, ಪಂಜಾಬ್ನಲ್ಲಿನ ಬೆಳವಣಿಗೆಗಳನ್ನು ನೋಡಿದರೆ, ಎರಡೂ ಪಕ್ಷಗಳ ನಡುವೆ ಒಮ್ಮತ ಮೂಡುವುದು ದಿಲ್ಲಿ ವಿಚಾರದಲ್ಲೂ ಕಷ್ಟ ಎಂದೇ ಸದ್ಯಕ್ಕೆ ಅನ್ನಿಸುತ್ತದೆ.
ಇನ್ನೊಂದೆಡೆ ಬಿಜೆಪಿಯಂತೂ ಮತ್ತೊಮ್ಮೆ ದಿಲ್ಲಿಯ ಎಲ್ಲ ಲೋಕಸಭಾ ಕ್ಷೇತ್ರಗಳನ್ನು ತನ್ನ ಕಡೆಯೇ ಉಳಿಸಿಕೊಳ್ಳುವ ಸನ್ನಾಹದಲ್ಲಿದೆ.
ಅಬಕಾರಿ ಹಗರಣದಲ್ಲಿ ಎಎಪಿಯನ್ನು ಸಿಲುಕಿಸಿರುವ ಅದು, ಈಗ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರ ಮೇಲೆಯೂ ತನಿಖೆಯ ಕತ್ತಿಯನ್ನು ತೂಗುಬಿಟ್ಟಿದೆ.
ಈ.ಡಿ. ವಿಚಾರಣೆಗೆ ಕೇಜ್ರಿವಾಲ್ ಐದನೇ ಬಾರಿಯೂ ಗೈರಾಗಿದ್ದು, ಮುಂದಿನ ಬೆಳವಣಿಗೆಗಳೇನು ಎಂಬುದು ಕುತೂಹಲ ಕೆರಳಿಸಿದೆ.
ಬಿಜೆಪಿ ತಮ್ಮ ವಿರುದ್ಧ ಕತ್ತಿ ಮಸೆಯುತ್ತಿರುವ ಸುಳಿವಿನ ಹಿನ್ನೆಲೆಯಲ್ಲಿಯೇ ಕೇಜ್ರಿವಾಲ್ ತಿಂಗಳ ಹಿಂದೆಯೇ ಒಂದು ಹೇಳಿಕೆ ನೀಡಿದ್ದು, ತಾನು ಅರೆಸ್ಟ್ ಆದರೂ ದಿಲ್ಲಿ ಲೋಸಕಭಾ ಚುನಾವಣೆಯನ್ನು ತಮ್ಮ ಪಕ್ಷ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಬಾರಿ ಎಎಪಿಯನ್ನು ಸೋಲಿಸಲಾಗದು ಎಂಬುದು ಗೊತ್ತಿರುವುದರಿಂದಲೇ ಬಿಜೆಪಿ ಸಂಚಿನಲ್ಲಿ ತೊಡಗಿದೆ ಎಂಬುದು ಎಎಪಿ ನಾಯಕರ ಆರೋಪ.
ಈ ನಡುವೆ ಬಿಜೆಪಿ ಈಗಾಗಲೇ ಎಲ್ಲ 7 ಲೋಕಸಭಾ ಕ್ಷೇತ್ರಗಳಿಗೆ ತನ್ನ ಉಸ್ತುವಾರಿಗಳನ್ನು ನೇಮಿಸಿ ಚುನಾವಣಾ ತಯಾರಿಯಲ್ಲಿ ತೊಡಗಿದೆ.
ಮತದಾರರೊಂದಿಗೆ ಪರಿಣಾಮಕಾರಿ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಪಕ್ಷವನ್ನು ಸಂಘಟಿಸುವುದು ಈ ಲೋಕಸಭಾ ಪ್ರಭಾರಿಗಳ ಜವಾಬ್ದಾರಿಯಾಗಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಇನ್ನು ಜಮ್ಮು-ಕಾಶ್ಮೀರದ ವಿಚಾರಕ್ಕೆ ಬರುವುದಾದರೆ,
ಒಟ್ಟು 1.25 ಕೋಟಿ ಜನಸಂಖ್ಯೆ ಇರುವ ಜಮ್ಮು-ಕಾಶ್ಮೀರದಲ್ಲಿ
ಮುಸ್ಲಿಮರು ಒಟ್ಟು ಜನಸಂಖ್ಯೆಯ ಶೇ. 68.31 ಇದ್ದರೆ ಹಿಂದೂಗಳು ಶೇ. 28.44 ಮತ್ತು ಸಿಖ್ಖರು ಶೇ.1.9.
ಜಮ್ಮು ಕಾಶ್ಮೀರದ ಒಟ್ಟು ಲೋಕಸಭಾ ಕ್ಷೇತ್ರಗಳು 6
ಇದರಲ್ಲಿ 5 ಸ್ಥಾನಗಳು ಜಮ್ಮು-ಕಾಶ್ಮೀರ ಮತ್ತು 1 ಲಡಾಖ್.
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 3 ಹಾಗೂ ನ್ಯಾಷನಲ್ ಕಾನ್ಫರೆನ್ಸ್ 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು.
2014ರಲ್ಲಿ ಬಿಜೆಪಿ 3 ಹಾಗೂ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ 3 ಸ್ಥಾನ ಗೆದ್ದಿದ್ದವು.
ಈ ಸಲ ರಾಜಕೀಯವಾಗಿ ಬಹಳಷ್ಟು ವಿದ್ಯಮಾನಗಳು ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದಂತೆ ನಡೆದಿವೆ. ಮುಖ್ಯವಾಗಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದತಿ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ನೀಡುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಜೊತೆಗೆ 2024ರ ಸೆಪ್ಟಂಬರ್ 30ರ ಒಳಗಾಗಿ ಜಮ್ಮು-ಕಾಶ್ಮೀರ ವಿಧಾನಸಭೆಗೆ ಚುನಾವಣೆ ನಡೆಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಇನ್ನೊಂದೆಡೆ ಸಂಸತ್ತಿನಲ್ಲಿ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ ತಿದ್ದುಪಡಿ ಮಸೂದೆ -2019 ಹಾಗೂ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ತಿದ್ದುಪಡಿ ಮಸೂದೆ 2019ನ್ನು ಅಂಗೀಕರಿಸಲಾಗಿದೆ.
ಕಾಶ್ಮೀರದ ಈ ಎರಡು ಮಸೂದೆಗಳಲ್ಲಿ ಒಂದು ಮಸೂದೆ ಮಹಿಳೆ ಸೇರಿದಂತೆ ಇಬ್ಬರು ಕಾಶ್ಮೀರಿ ವಲಸಿಗ ಸಮುದಾಯದ ಸದಸ್ಯರನ್ನು ವಿಧಾನಸಭೆಗೆ ನಾಮನಿರ್ದೇಶನ ಮಾಡಲು ಅವಕಾಶ ಕಲ್ಪಿಸುತ್ತದೆ ಎಂದು ಹೇಳಲಾಗಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಈ ಎರಡು ಮಸೂದೆಗಳು ಕಳೆದ 70 ವರ್ಷಗಳಿಂದ ತಮ್ಮ ಹಕ್ಕುಗಳಿಂದ ವಂಚಿತರಾದವರಿಗೆ ನ್ಯಾಯವನ್ನು ನೀಡಲಿವೆ ಎಂಬ ಪ್ರತಿಪಾದನೆಯನ್ನು ಬಿಜೆಪಿ ಮುಂದೆ ಮಾಡಿದೆ.
ಈಗಾಗಲೇ ಸುಪ್ರೀಂ ಕೋರ್ಟ್ ಸೆಪ್ಟಂಬರ್ 30ರೊಳಗಾಗಿ ಜಮ್ಮು-ಕಾಶ್ಮೀರ ವಿಧಾನಸಭೆಗೆ ಚುನಾವಣೆ ನಡೆಸುವಂತೆ ಆದೇಶಿಸಿರುವುದರಿಂದ, ಬಿಜೆಪಿ ಆಗಲೇ ಒಂದು ರೀತಿಯಲ್ಲಿ ಚುನಾವಣೆಗೆ ತಯಾರಿ ನಡೆಸಿಬಿಟ್ಟಿದೆ.
ಲೋಕಸಭಾ ಚುನಾವಣೆಯ ಜೊತೆಗೇ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯನ್ನೂ ನಡೆಸಲು ಕೇಂದ್ರ ನಿರ್ಧರಿಸುವ ಸಾಧ್ಯತೆ ಹೆಚ್ಚು ಎಂಬ ಮಾತುಗಳಿವೆ.
ಬಹುತೇಕ ಎಲ್ಲಾ ಪಕ್ಷಗಳು ಜಮ್ಮು ಮತ್ತು ಕಾಶ್ಮೀರದಾದ್ಯಂತ ಸಮಾವೇಶಗಳು ಮತ್ತು ರ್ಯಾಲಿಗಳನ್ನು ನಡೆಸುವ ಮೂಲಕ ಚುನಾವಣೆಗೆ ತಯಾರಾಗುತ್ತಿರುವ ವರದಿಗಳಿವೆ.
ವಿಶೇಷವಾಗಿ ಮೂರು ಪ್ರಮುಖ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ), ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮತ್ತು ಕಾಂಗ್ರೆಸ್ ಇಂಡಿಯಾ ಮೈತ್ರಿಕೂಟದ ಭಾಗಗಳಾಗಿದ್ದು, 6 ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ನಿರ್ಧರಿಸಲಿವೆ.
ಲೋಕಸಭೆ ಚುನಾವಣೆಗೆ ತಯಾರಿಯಾಗಿ ಕಾಶ್ಮೀರದ ವಿವಿಧ ಭಾಗಗಳಲ್ಲಿ, ಅದರಲ್ಲೂ ವಿಶೇಷವಾಗಿ ಅದರ ಭದ್ರಕೋಟೆ ದಕ್ಷಿಣ ಕಾಶ್ಮೀರದಲ್ಲಿ ಪಿಡಿಪಿ ತನ್ನ ಸಂಸದೀಯ ಮಂಡಳಿಯ ಸಭೆಗಳನ್ನು ನಡೆಸುತ್ತಿದೆ.
ಎಲ್ಲಾ ಸ್ಥಾನಗಳಲ್ಲಿ ಬಿಜೆಪಿಗೆ ಕಠಿಣ ಪೈಪೋಟಿ ನೀಡಲು ‘ಇಂಡಿಯಾ’ ಮೈತ್ರಿಕೂಟ ಸಿದ್ಧವಾಗುತ್ತಿದೆ. ಎನ್ಸಿ ಮತ್ತು ಕಾಂಗ್ರೆಸ್ ತಲಾ 2, ಪಿಡಿಪಿ ಒಂದು ಸ್ಥಾನಗಳಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚೆನ್ನಲಾಗುತ್ತಿದೆ.
ಫಾರೂಕ್ ಅಬ್ದುಲ್ಲಾ, ಉಮರ್ ಅಬ್ದುಲ್ಲಾ ಮತ್ತು ಮೆಹಬೂಬ ಮುಫ್ತಿ ಕಣಿವೆಯ ಮೂರು ಸ್ಥಾನಗಳಲ್ಲಿ ಸ್ಪರ್ಧಿಸಬೇಕೆಂಬುದು ‘ಇಂಡಿಯಾ’ ಮೈತ್ರಿಕೂಟದ ನಾಯಕರ ಒತ್ತಾಯವೂ ಆಗಿದೆ ಎಂದು ವರದಿಗಳು ಹೇಳುತ್ತಿವೆ.
ಈ ನಡುವೆ ಎನ್ಸಿ ಕಳೆದ ಲೋಕಸಭಾ ಚುನಾವಣೆಯಲ್ಲಿ 3 ಸ್ಥಾನಗಳಲ್ಲಿ ಗೆದ್ದಿದ್ದ ಹಿನ್ನೆಲೆಯಲ್ಲಿ ಈ ಬಾರಿಯೂ ಆ ಮೂರೂ ಸ್ಥಾನಗಳಲ್ಲಿ ಸ್ಪರ್ಧಿಸಬೇಕು ಎಂಬ ಒತ್ತಾಯವೂ ಪಕ್ಷದೊಳಗೆ ಇದೆ.
ಹಾಗಿದ್ದೂ, ಇದು ವೈಯಕ್ತಿಕ ಹಿತಾಸಕ್ತಿಯ ಬಗ್ಗೆ ಯೋಚಿಸುವ ಸಮಯವಲ್ಲ, ನಾವು ಯಾವುದೇ ತ್ಯಾಗಕ್ಕೆ ಸಿದ್ಧರಾಗಿರಬೇಕು. ಇಲ್ಲದಿದ್ದರೆ ಎಲ್ಲವೂ ಕಷ್ಟಕರವಾಗುತ್ತದೆ ಎಂಬ ಎಚ್ಚರವನ್ನೂ ನಾಯಕರು ಹೊಂದಿದ್ದಾರೆ.
ಮಾಜಿ ಸಚಿವ ಅಲ್ತಾಫ್ ಬುಖಾರಿ ನೇತೃತ್ವದ ಅಪ್ನಿ ಪಾರ್ಟಿ ಮತ್ತು ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಝಾದ್ ನೇತೃತ್ವದ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಝಾದ್ ಪಾರ್ಟಿ ವಿವಿಧ ಭಾಗಗಳಲ್ಲಿ ರ್ಯಾಲಿಗಳನ್ನು ಆಯೋಜಿಸುವಲ್ಲಿ ನಿರತವಾಗಿವೆ.
ಲೋಕಸಭೆ ಚುನಾವಣೆಯಲ್ಲಿ ದೊಡ್ಡ ರಾಜಕೀಯ ಪರೀಕ್ಷೆಯನ್ನು ಎದುರಿಸಲು ತನ್ನ ಕಾರ್ಯಕರ್ತರನ್ನು ಅದು ಸಜ್ಜುಗೊಳಿಸುತ್ತಿದೆ.
ಆಝಾದ್ ಜಮ್ಮು ಪ್ರಾಂತದಿಂದ ಸ್ಪರ್ಧಿಸಲು ಬಯಸಿದ್ದಾರೆ. ಕೆಲವು ನಾಯಕರು ಅಲ್ತಾಫ್ ಬುಖಾರಿ ಅವರ ತವರು ಜಿಲ್ಲೆ ಬಾರಾಮುಲ್ಲಾದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಸಲಹೆ ನೀಡಿರುವುದಾಗಿಯೂ ವರದಿಯಿದೆ.
ಪೀಪಲ್ಸ್ ಕಾನ್ಫರೆನ್ಸ್ ಕೂಡ ಚುನಾವಣೆಗೆ ಸ್ಪರ್ಧಿಸಲು ಯೋಚಿಸುತ್ತಿದೆ. ಈ ಬಾರಿ ಪಕ್ಷಕ್ಕೆ ಗೆಲ್ಲಲು ಹೆಚ್ಚು ಅವಕಾಶವಿದೆ ಎಂದು ಅದರ ನಾಯಕರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.
ಕಾಶ್ಮೀರದಿಂದ ವಿಧಾನಸಭೆ ಅಥವಾ ಲೋಕಸಭೆ ಸ್ಥಾನವನ್ನು ಎಂದಿಗೂ ಗೆದ್ದಿರದ ಬಿಜೆಪಿ ಕೂಡ ಈ ಬಾರಿ ಅತ್ತ ಗಮನ ಕೊಡುತ್ತಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ತಾನು ಗೆದ್ದಿದ್ದ ಜಮ್ಮು ಮತ್ತು ಉಧಂಪುರ ಲೋಕಸಭಾ ಸ್ಥಾನಗಳನ್ನು ಹೊರತುಪಡಿಸಿ ಕಾಶ್ಮೀರದ ಮೂರು ಲೋಕಸಭಾ ಸ್ಥಾನಗಳ ಮೇಲೆ ಅದು ಈ ಸಲ ಗಮನ ಕೇಂದ್ರೀಕರಿಸಿದೆ.
ಲೋಕಸಭೆ ಚುನಾವಣೆಯ ಜೊತೆಗೇ ಅಥವಾ ಆನಂತರ ಸ್ವಲ್ಪ ಸಮಯದಲ್ಲಾದರೂ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯೂ ನಡೆಯಲಿರುವುದು ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಖಚಿತವಾಗಿರುವುದರಿಂದ, ಪ್ರಾದೇಶಿಕ ಪಕ್ಷಗಳು ಚುರುಕುಗೊಂಡಿದ್ದು, ಜಮ್ಮು-ಕಾಶ್ಮೀರ ರಾಜಕಾರಣದಲ್ಲಿ ಹೊಸ ಉಮೇದು ಮೂಡಿರುವುದಂತೂ ನಿಜ.