ಕೇಸರಿ ಶಾಲು ಹಾಕಿಕೊಂಡ ಕುಮಾರಸ್ವಾಮಿಗೆ ಕೈಕೊಟ್ಟಿತಾ ಬಿಜೆಪಿ ?
ಚುನಾವಣೆಗೆ ಮೊದಲೇ ಮುರಿದು ಬೀಳುತ್ತಾ ಬಿಜೆಪಿ ಜೆಡಿಎಸ್ ದೋಸ್ತಿ ? ► ಮೋದಿ ಶಾ ಲೆಕ್ಕಾಚಾರಕ್ಕೆ ಎಚ್ ಡಿ ಕೆ ಗರಂ !
ಕುಮಾರಸ್ವಾಮಿ | Photo:| PTI
ಕೇಸರಿ ಶಾಲು ಹಾಕಿಕೊಂಡು ಆರೆಸ್ಸೆಸ್ ಶಾಲೆಗೂ ಹೋಗಿ ಹೊಗಳಿ ಬಂದಿದ್ದ ಕುಮಾರಸ್ವಾಮಿಯವರಿಗೆ ಕಸಿವಿಸಿಯಾಗಿದೆ.
ಬಿಜೆಪಿ ಜೆಡಿಎಸ್ ಮೈತ್ರಿಯಲ್ಲಿ ಚುನಾವಣೆಗೆ ಮೊದಲೇ ಅಪಸ್ವರ ಶುರುವಾಗಿದೆ.
ಸೀಟು ಹಂಚಿಕೆ ವಿಚಾರದಲ್ಲಿ ಎರಡೂ ಪಕ್ಷಗಳ ನಡುವೆ ಒಮ್ಮತ ಮೂಡದೇ ಇರುವುದು ಒಂದೆಡೆಯಾದರೆ, ಜೆಡಿಎಸ್ ಅಭ್ಯರ್ಥಿ ವಿಚಾರಕ್ಕೂ ಬಿಜೆಪಿ ಆಕ್ಷೇಪ ಎತ್ತುತ್ತಿರುವುದು ಇನ್ನೊಂದೆಡೆ ನಡೆದಿದೆ.
ಕೋಲಾರ ಸೀಟು ಕಗ್ಗಂಟಾಗುವ ಲಕ್ಷಣ ಕಾಣುತ್ತಿದೆ. ಮಂಡ್ಯದಲ್ಲೂ ಭಾರೀ ತಿಕ್ಕಾಟ ನಡೀತಿದೆ.
ಇದೇ ಹೊತ್ತಲ್ಲಿ ಶಿವಮೊಗ್ಗದ ಪ್ರಧಾನಿ ಮೋದಿ ಸಮಾವೇಶದಲ್ಲೂ ಜೆಡಿಎಸ್ ಅನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಕುಮಾರಸ್ವಾಮಿ ಆಗಲೇ ಅಸಮಾಧಾನದ ಮಾತಾಡಿದ್ದಾರೆ. ಕಡೆಗಣಿಸಿದರೆ ಸುಮ್ಮನಿರಲ್ಲ ಎಂದೂ ಎಚ್ಚರಿಸಿದ್ದಾರೆ.
ಇದು ಎಲ್ಲಿಗೆ ಹೋಗಿ ತಲುಪಲಿದೆ ? ಕೇಸರಿ ಶಾಲು ಹಾಕಿ ತಮ್ಮ ಪ್ರಾದೇಶಿಕ ಅಸ್ಮಿತೆಯನ್ನೂ ಬದಿಗೊತ್ತಿರುವ ಕುಮಾರಸ್ವಾಮಿಯವರಿಗೆ ಬಿಜೆಪಿ ಕೈ ಕೊಡಲಿದೆಯೇ ?
ಕೊನೆಗೂ ಸೀಟು ಹಂಚಿಕೆ ಒಪ್ಪಂದ ಆದರೂ ಒಳಗೊಳಗೇ ಅಸಮಾಧಾನ ಇದ್ದರೆ ಪರಸ್ಪರ ಓಟು ವರ್ಗಾವಣೆ ಆಗುತ್ತದೆಯೇ ?
ಇದೆಲ್ಲ ಏನು ಸೂಚಿಸುತ್ತಿದೆ ?
ಈ ಮೈತ್ರಿ ಕೆಲಸ ಮಾಡಲಿದೆಯೇ ಅಥವಾ 2019ರ ಕಾಂಗ್ರೆಸ್ ಜೆಡಿಎಸ್ ಮೈತ್ರಿಯ ಹಾಗೆ ತಿರುಗುಬಾಣ ಆಗಲಿದೆಯೇ ?
ಈಗಾಗಲೇ ಬಹಳ ಸಲ ಬಹಿರಂಗವಾಗಿರುವ ಹಾಗೆ ಬಿಜೆಪಿ-ಜೆಡಿಎಸ್ ಮೈತ್ರಿ ಬಿಜೆಪಿಯ ರಾಜ್ಯ ನಾಯಕರಿಗೆ ಬೇಕಾಗಿಯೇ ಇರದ ಮೈತ್ರಿ.
ಇನ್ನೊಂದೆಡೆ ಜೆಡಿಎಸ್ ನ ಸ್ಥಳೀಯ ನಾಯಕರು ಹಾಗು ತಳಮಟ್ಟದ ಕಾರ್ಯಕರ್ತರಿಗೂ ಇದರ ಬಗ್ಗೆ ಸಮಾಧಾನ ಇಲ್ಲವೆಂಬುದರ ಸುಳಿವೂ ಸಾಕಷ್ಟು ಬಾರಿ ಸಿಕ್ಕಿದ್ದಿದೆ.
ಬಿಜೆಪಿಯ ದೆಹಲಿ ನಾಯಕರು ಮತ್ತು ದೇವೇಗೌಡ ಹಾಗೂ ಕುಮಾರಸ್ವಾಮಿ ಮಟ್ಟದಲ್ಲಿ ಮಾತ್ರವೇ ಮೈತ್ರಿ ನಿಶ್ಚಯವಾಗಿದ್ದು ಎಂಬುದು ನಿಜ.
ನೂತನ ಸಂಸತ್ ಭವನದಲ್ಲಿ ಮೋದಿ ಸೆಂಗೋಲ್ ಹಿಡಿದು ನಿಂತಾಗ ಮತ್ತು ಆ ಸಮಾರಂಭವನ್ನು ವಿರೋಧಪಕ್ಷಗಳು ಬಹಿಷ್ಕರಿಸಿದ್ದಾಗ ದೇವೇಗೌಡರು ಮಾತ್ರ ಹೋಗಿ ಮೋದಿ ಕೈಕುಲುಕಿದ್ದು, ಆಮೇಲೆ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ಖಚಿತವಾದದ್ದು ಎಲ್ಲವನ್ನೂ ಇಲ್ಲಿ ಗಮನಿಸಬಹುದು.
ಈ ಮೈತ್ರಿಯ ಹಿನ್ನೆಲೆಯಲ್ಲಿ ಬಿಜೆಪಿಯ ದೆಹಲಿ ಜೋಡಿ ಹೇಗೆ ಒಂದು ಲೆಕ್ಕಾಚಾರ ಇಟ್ಟುಕೊಂಡಿದೆಯೊ ಹಾಗೆಯೇ ಇಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿ ಕೂಡ ಒಂದು ಲೆಕ್ಕಾಚಾರ ಇಟ್ಟುಕೊಂಡಿದ್ದಾರೆ.
ಮೋದಿ ಶಾ ಗೆ ಜೆಡಿಎಸ್ ಅನ್ನು ಬಳಸಿಕೊಂಡು ಲಾಭ ಮಾಡಿಕೊಳ್ಳುವ ಉದ್ದೇಶವಿದೆ.
ಇವರಿಗೆ ರಾಜ್ಯದಲ್ಲಿನ ಚೌಕಾಸಿ ರಾಜಕಾರಣದ ಜೊತೆಗೇ ದೆಹಲಿ ರಾಜಕೀಯದಲ್ಲಿ ನಿಖಿಲ್ ಪಾಲಿಗೊಂದು ಜಾಗ ಮಾಡಿಕೊಡುವ ಆಸೆ ಇದ್ದ ಹಾಗಿದೆ.
ಇನ್ನು, ಎರಡೂ ಪಕ್ಷಗಳಿಗೂ ಕಾಂಗ್ರೆಸ್ ಹಾಗು ಸಿದ್ದರಾಮಯ್ಯ ಬಗ್ಗೆ ಇರುವ ದ್ವೇಷ ಮತ್ತು ಸೇಡಿನ ಭಾವನೆ ಕೂಡ ಈ ಒಲ್ಲದ ಮೈತ್ರಿಗೆ ತೇಪೆ ಹಚ್ಚುವುದಕ್ಕೆ ಇರುವ ಇನ್ನೊಂದು ನೆಪ.
ಇದು ಬಿಟ್ಟರೆ, ರಾಜ್ಯದ ಅಭಿವೃದ್ಧಿಗಾಗಿ ಮೈತ್ರಿ ಮಾಡಿಕೊಳ್ಳಲಾಗಿದೆ, ರಾಜ್ಯದ ಜನತೆಗೋಸ್ಕರ ಈ ಮೈತ್ರಿ ಎಂಬುದೆಲ್ಲ ಲೊಳಲೊಟ್ಟೆ ಎಂಬುದು ಜನರಿಗೂ ಗೊತ್ತು ಮತ್ತು ಸ್ವತಃ ಆ ಪಕ್ಷಗಳ ನಾಯಕರಿಗೂ ಗೊತ್ತು.
ಆದರೆ ಹೀಗೆ ಉಭಯ ಪಕ್ಷಗಳು ತಂತಮ್ಮ ಸ್ವಾರ್ಥಕ್ಕೋಸ್ಕರ ಮಾಡಿಕೊಂಡ ಈ ಒತ್ತಾಯದ ಮದುವೆಯಲ್ಲಿ ಆಗಲೇ ವಿರಸ ಎದ್ದುಬಿಟ್ಟಿದೆ.
ಮತ್ತು ಈಗಿನ ಒಂದೊಂದೇ ವಿದ್ಯಮಾನಗಳನ್ನು ನೋಡುತ್ತಿದ್ದರೆ, ಅದು ಚುನಾವಣೆಗೆ ಮೊದಲೇ ಮುರಿದುಬಿದ್ದರೂ ಅಚ್ಚರಿ ಪಡಬೇಕಾಗಿಲ್ಲ.
ಹಾಸನ ಮತ್ತು ಮಂಡ್ಯ ಕ್ಷೇತ್ರಗಳನ್ನು ಜೆಡಿಎಸ್ಗೆ ಬಿಟ್ಟುಕೊಡಲು ಮುಂದಾಗಿರುವ ಬಿಜೆಪಿ, ಕೋಲಾರ ವಿಚಾರದಲ್ಲಿ ಅಷ್ಟಾಗಿ ಮನಸ್ಸು ಮಾಡುತ್ತಿಲ್ಲ.
ಕುಮಾರಸ್ವಾಮಿಯವರಿಗೆ ಈಗ ತಲೆಬಿಸಿಯಾಗಿರುವುದೇ ಈ ವಿಚಾರಕ್ಕೆ.
ದೆಹಲಿಗೆ ಹೋಗಿ ಶಾ ಮುಂದೆ ಗೋಗರೆದರೂ ಭರವಸೆ ಸಿಕ್ಕಿಲ್ಲ. ರಾಜ್ಯ ನಾಯಕರ ಜೊತೆ ಚರ್ಚಿಸಿ ಹೇಳುತ್ತೇನೆ ಎಂದುಬಿಟ್ಟಿದ್ದಾರೆ.
ಅಲ್ಲಿಗೆ ಕೋಲಾರವನ್ನು ಬಿಟ್ಟುಕೊಡುವ ಮನಸ್ಸು ದೆಹಲಿ ನಾಯಕರಿಗಿಲ್ಲ ಎಂಬುದು ಬಹುತೇಕ ಖಚಿತವಾದಂತಿದೆ.
ಆದರೆ, ಕೋಲಾರ ಸೀಟ್ ಬಿಜೆಪಿ ಬಿಟ್ಟು ಕೊಡದಿದ್ದರೂ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸಿದೆ.
ಶಾ ಭೇಟಿಯ ನಂತರ ಮಾಧ್ಯಮಗಳ ಜೊತೆ ಮಾತಾಡುವುದಕ್ಕೂ ಮನಸ್ಸಿಲ್ಲದಷ್ಟು ಮಟ್ಟಿಗೆ ಕುಮಾರಸ್ವಾಮಿ ದುಗುಡಗೊಂಡಿದ್ದರು ಎನ್ನಲಾಗಿದೆ.
ಹೀಗಾಗಿ, ಎರಡು ಸೀಟುಗಳಿಗಾಗಿ ಇಷ್ಟೆಲ್ಲಾ ಒದ್ದಾಡಬೇಕಿತ್ತಾ? ಇದಕ್ಕಾಗಿ ಹೊಂದಾಣಿಕೆ ಬೇಕಿತ್ತಾ? ಎಂದು ಕುಮಾರಸ್ವಾಮಿಯೇ ಕೇಳುವ ಮಟ್ಟಕ್ಕೆ ಪರಿಸ್ಥಿತಿ ಹೋಗಿ ಮುಟ್ಟಿದೆ.
ತಾವು ಕೇಳಿರೋದೇ ಮೂರರಿಂದ ನಾಲ್ಕು ಸೀಟು. ನಾಲ್ಕು ಸೀಟು ಸಿಗುವ ನಂಬಿಕೆ ಇದೆ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ಆದರೆ ಹಾಗೆ ಹೇಳುವಾಗಲೂ ಅವರ ಮಾತಿನ ಮೇಲೆ ಅವರಿಗೇ ನಂಬಿಕೆಯಿಲ್ಲದ್ದು ಸ್ಪಷ್ಟ.
ಅಧಿಕೃತ ಘೋಷಣೆಯಾಗುವವರೆಗೂ ಸುಮ್ಮನಿರುತ್ತೇನೆ ಎಂದಿರುವ ಕುಮಾರಸ್ವಾಮಿ ಆಮೇಲೆ ಏನು ಮಾಡಬಹುದು ಎಂಬುದಕ್ಕೂ ಕೆಲವು ನೆಲೆಯಿಂದ ಉತ್ತರವನ್ನು ಊಹಿಸಬಹುದೆನ್ನಿಸುತ್ತದೆ.
ಮೊದಲನೆಯದಾಗಿ, ಅವರು ಈ ಮೈತ್ರಿಯಿಂದ ಜೆಡಿಎಸ್ಗೆ ಲಾಭವೇನಿಲ್ಲ. ಲಾಭವಾದರೆ ತಮ್ಮಿಂದಾಗಿ ಬಿಜೆಪಿಗೆ ಎಂಬುದನ್ನು ಹೇಳಿದ್ದಾರೆ.
18 ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ನ ಶೇ.3 ಮತಗಳು ಸ್ವಿಂಗ್ ಆದರೆ ಬಿಜೆಪಿಗೆ ಅನುಕೂಲವಾಗುತ್ತದೆ ಎಂದಿದ್ದಾರೆ.
ಆದರೆ ಇಂಥದೊಂದು ಅವಕಾಶಕ್ಕೆ ಮುಂದೆ ಪೆಟ್ಟು ಬಿದರೆ ಅದರ ಸಾಧಕ ಬಾಧಕಕ್ಕೆ ಅವರೇ ಜವಾಬ್ದಾರಿ ಎಂದು ಹೇಳುವುದರೊಂದಿಗೆ ಬಿಜೆಪಿಗೆ ಪರೋಕ್ಷ ಎಚ್ಚರಿಕೆಯನ್ನು ಕುಮಾರಸ್ವಾಮಿ ಕೊಟ್ಟಿದ್ಧಾರೆ.
ಹಾಗೆಯೇ ತಮಗೆ ಈತನಕ ಬಿಟ್ಟುಕೊಡಲಾಗಿರುವ ಎರಡು ಕ್ಷೇತ್ರಗಳಾಗಿರುವ ಮಂಡ್ಯ ಮತ್ತು ಹಾಸನದಲ್ಲಿ ಸ್ವತಂತ್ರವಾಗಿಯೇ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ. ತ್ರಿಕೋನ ಸ್ಪರ್ಧೆಯಾದರೆ ಸುಲಭವಾಗಿ ಗೆಲ್ಲುತ್ತೇವೆ ಎಂದಿದ್ಧಾರೆ.
ಹಾಗೆನ್ನುವುದರೊಂದಿಗೆ, ಬಿಜೆಪಿಯ ಸಹಕಾರದ ಅಗತ್ಯವೇನಿಲ್ಲ ಎಂದು ಮಾತ್ರ ಅವರು ಹೇಳಿಲ್ಲ. ಬದಲಾಗಿ ಮೈತ್ರಿಯಿಲ್ಲದೆ, ಬಿಜೆಪಿಯ ಎದುರಾಳಿಯಾಗಿಯೂ ಜೆಡಿಎಸ್ ಈ ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಸೂಚ್ಯವಾಗಿ ಹೇಳಿದಂತಿದೆ.
ಆ ಮೂಲಕ, ಚುನಾವಣೆ ಹೊತ್ತಿಗೆ ಅಂಥ ಪರಿಸ್ಥಿತಿಯೇ ಏರ್ಪಟ್ಟರೂ ಚಿಂತೆಯಿಲ್ಲ ಎಂಬ ಧೋರಣೆಯನ್ನು ಅವರು ವ್ಯಕ್ತಪಡಿಸಿದರಾ ?
ತಮ್ಮನ್ನು ಕಡೆಗಣಿಸಿದರೆ ಬಿಜೆಪಿಗೆ ಕಷ್ಟವಿದೆ ಎಂಬ ಕುಮಾರಸ್ವಾಮಿ ಮಾತು ಅವರಲ್ಲಿ ಅಂಥ ಧೋರಣೆಯೊಂದು ಆಗಲೇ ಮೂಡಿರಬಹುದಾದ ಸಾಧ್ಯತೆಯ ಸೂಚನೆಯಂತಿದೆ.
ಬಿಜೆಪಿ-ಜೆಡಿಎಸ್ ನಡುವೆ ಎದ್ದಿರುವ ಅಸಮಾಧಾನವನ್ನು, ತಳಮಳವನ್ನು ಬಹಿರಂಗಪಡಿಸಿರುವ ಎರಡು ಮುಖ್ಯ ಬೆಳವಣಿಗೆಗಳನ್ನು ಗಮನಿಸಬೇಕು.
ಮೊದಲನೆಯದು, ಶಿವಮೊಗ್ಗದಲ್ಲಿನ ಮೋದಿ ಕಾರ್ಯಕ್ರಮಕ್ಕೆ ಜೆಡಿಎಸ್ ನಾಯಕರಿಗೆ ಆಹ್ವಾನ ಇರಲಿಲ್ಲ ಎಂಬುದು.
ಶಿವಮೊಗ್ಗದ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಜೊತೆಗೆ ಅದು ಬಿಜೆಪಿಯ ಮಿತ್ರಪಕ್ಷ.
ಹಾಗಿರುವಾಗಲೂ ಮೋದಿ ಕಾರ್ಯಕ್ರಮಕ್ಕೆ ಜೆಡಿಎಸ್ ನಾಯಕರಿಗೆ ಆಹ್ವಾನ ಇಲ್ಲದೇ ಹೋದದ್ದು ಜೆಡಿಎಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.
ಸೌಜನ್ಯಕ್ಕಾದರೂ ಆಹ್ವಾನ ನೀಡಬಹುದಾಗಿದ್ದ ಕಾರ್ಯಕ್ರಮದಿಂದ ಜೆಡಿಎಸ್ಅನ್ನು ಉದ್ದೇಶಪೂರ್ವಕವಾಗಿ ದೂರ ಇಡಲಾಯಿತೆ? ಆ ಮೂಲಕ ಜೆಡಿಎಸ್ಗೆ ಬಿಜೆಪಿ ಒಂದು ಪರೋಕ್ಷ ಸಂದೇಶವನ್ನೇನಾದರೂ ನೀಡಿತೆ?
ಎರಡನೆಯ ಬೆಳವಣಿಗೆಯೆಂದರೆ, ಹಾಸನ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ಬಿಜೆಪಿ ಆಕ್ಷೇಪ ಎತ್ತಿದೆ. ಪ್ರಜ್ವಲ್ ರನ್ನು ಬದಲಿಸುವಂತೆ ಕುಮಾರಸ್ವಾಮಿ ಅವರಿಗೆ ಅಮಿತ್ ಶಾ ಸೂಚಿಸಿರುವುದಾಗಿ ವರದಿಯಾಗಿದೆ.
ಪ್ರಜ್ವಲ್ ಅನರ್ಹತೆ ವಿಚಾರವನ್ನು ಮುಂದೆ ಮಾಡಿ, ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಜ್ವಲ್ ಬದಲು ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಲು ರಾಜ್ಯ ಬಿಜೆಪಿ ನಾಯಕರೇ ದೆಹಲಿ ವರಿಷ್ಠರನ್ನು ಕೇಳಿಕೊಂಡಿದ್ದಾರೆ ಎನ್ನಲಾಗಿದೆ.
ಹಾಗೆ ನೋಡಿದರೆ ಈ ವಿಚಾರ ಕುಮಾರಸ್ವಾಮಿ ದೃಷ್ಟಿಯಿಂದ ಅನುಕೂಲಕರ ಬೆಳವಣಿಗೆಯೇ ಆಗಿದ್ದಿರಬಹುದೆ? ಅವರು ನೇರವಾಗಿ ಮಾಡಲಿಕ್ಕಾಗದ ಕೆಲಸವೊಂದು ಈಗ ಬಿಜೆಪಿ ಹೈಕಮಾಂಡ್ ಮೂಲಕ ಆಗಲಿದೆಯೆ?
ಪ್ರಜ್ವಲ್ ಬದಲಿಸಬೇಕೆಂಬುದು ರಾಜ್ಯ ಬಿಜೆಪಿ ನಾಯಕರ ಒತ್ತಾಯ ಎಂಬುದು ಒಂದು ನೆಪವೆ?
ಪ್ರಜ್ವಲ್ ಬದಲಿಸುವುದಾದರೆ ಅದು ಜೆಡಿಎಸ್ ಕುಟುಂಬದೊಳಗೆ ಏನೆಲ್ಲ ಬೆಳವಣಿಗೆಗೆ ಕಾರಣವಾಗಬಹುದು? ಅದು ಹಾಸನ ಲೋಕಸಭಾ ಕ್ಷೇತ್ರದ ಫಲಿತಾಂಶದ ಮೇಲೆ ಏನು ಪರಿಣಾಮ ಬೀರಬಹುದು?
ಈಗಾಗಲೇ ಅರಕಲಗೂಡು ಜೆಡಿಎಸ್ ಶಾಸಕ ಎ ಮಂಜು ಅವರು ಕುಮಾರಸ್ವಾಮಿ ಅವರೊಡನೆ ಮಾತುಕತೆ ನಡೆಸಿದ್ದು, ಬೇರೆ ಅಭ್ಯರ್ಥಿ ಯಾರಾಗಬಹುದು?
ಅಲ್ಲಿ ಪ್ರಜ್ವಲ್ ರೇವಣ್ಣ ಕಣಕ್ಕಿಳಿಯಲು ಅವಕಾಶ ತಪ್ಪುವುದು, ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯಲು ನಿರ್ಧರಿಸುವುದು ಇವೆಲ್ಲ ವ್ಯವಸ್ಥಿತವಾಗಿಯೇ ನಡೆಯುತ್ತಿವೆಯೆ?
ಅಷ್ಟಕ್ಕೂ ಮಂಡ್ಯದಲ್ಲಿ ನಿಖಿಲ್ ಸ್ಪರ್ಧೆಗೂ ಅಮಿತ್ ಶಾ ಆಕ್ಷೇಪ ಎತ್ತಿದ್ದಾರೆ, ಅಲ್ಲಿ ನೀವೇ ನಿಂತರೆ ಹೆಚ್ಚು ಲಾಭವಿದೆ ಎಂದು ಕುಮಾರಸ್ವಾಮಿಯವರಿಗೆ ಹೇಳಿದ್ದಾರೆ ಎಂಬ ವರದಿಯೂ ಇದೆ. ಅದಕ್ಕೆ ಕುಮಾರಸ್ವಾಮಿ ತಮ್ಮ ಅನಾರೋಗ್ಯದ ಬಗ್ಗೆ ಹೇಳಿದ್ದಾರಂತೆ.
ಇದೆಲ್ಲವೂ ಒಂದೆಡೆ ಬಿಜೆಪಿ-ಜೆಡಿಎಸ್ ನಡುವಿನ ದುಗುಡ ದುಮ್ಮಾನಗಳು ಬೆಳೆಯುವುದರ ಜೊತೆಗೇ, ದೇವೇಗೌಡರ ಕುಟುಂಬದೊಳಗೇ ಇರುವ ರಾಜಕೀಯ ವೈಮನಸ್ಯದ ಸ್ಫೋಟಕ್ಕೂ ಎಡೆ ಮಾಡಿಕೊಡಲಿದೆಯೆ?
ತಮಾಷೆ ಅಂದ್ರೆ,
ಇಲ್ಲೆಲ್ಲ ಯಾವ ಮೂಲೆಯಿಂದಲಾದರೂ ಕರ್ನಾಟಕ ರಾಜ್ಯದ ಹಿತಾಸಕ್ತಿ, ಕರ್ನಾಟಕದ ಜನತೆಗಾಗಿ ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿ ಆಗಿದೆ ಎನ್ನುವುದು ಕಾಣಿಸುತ್ತಿದೆಯೆ?