ಅಕ್ರಮ ಎಸಗಿ, ನಮಗೆ ದೇಣಿಗೆ ಕೊಡಿ ಎಂದೇ ನಡೆಯಿತೇ ಲೂಟಿ ?
► ಇಷ್ಟು ದೊಡ್ಡ ಅಕ್ರಮ ಬಯಲಾದ ಬಳಿಕ ಪ್ರಧಾನಿ ಇನ್ನೂ ಹುದ್ದೆಯಲ್ಲಿ ಹೇಗೆ ಮುಂದುವರಿದಿದ್ದಾರೆ ? ► ಬಂಧಿತ ಲಾಟರಿ ಕಿಂಗ್ ಪತ್ನಿ ಜೊತೆ ಮೋದಿ ವೇದಿಕೆ ಹಂಚಿಕೊಂಡಿದ್ದು ಏಕೆ ?
ಇಲೆಕ್ಟೊರಲ್ ಬಾಂಡ್ ಎಂಬ ಮಹಾ ಹಗರಣದ ಒಂದೊಂದೇ ಮಜಲುಗಳು ಬಯಲಾಗುತ್ತಿವೆ. ಇದರ ಮಾಹಿತಿ ಕೊಡುವಾಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಾಂಡ್ ಯಾವ ಪಕ್ಷ ಪಡೆದಿದೆ ಎಂದು ಗೊತ್ತಾಗುವ ಯುನೀಕ್ ನಂಬರ್ ಕೊಟ್ಟಿಲ್ಲ. ಅದನ್ನೂ ಕೊಡಬೇಕು ಎಂದು ಶುಕ್ರವಾರ ಸುಪ್ರೀಂ ಕೋರ್ಟ್ ಎಸ್ ಬಿ ಐ ಗೆ ತಾಕೀತು ಮಾಡಿದೆ. ಹಾಗಾಗಿ ಅದೂ ಸಿಕ್ಕಿದರೆ ಬಾಂಡ್ ಗಳ ಹಿಂದಿರುವ ರಾಜಕೀಯ ಪಕ್ಷಗಳ ಜೇಮ್ಸ್ ಬಾಂಡ್ ಗಳು ಬಯಲಾಗಲಿದ್ದಾರೆ.
ಆದರೆ ಈಗಾಗಲೇ ಬಯಲಾಗಿರುವ ಮಾಹಿತಿ ಏನೂ ಕಡಿಮೆ ಅಲ್ಲ. ಇದರಲ್ಲಿ ಸರಕಾರದ ದೊಡ್ಡ ಕಾಮಗಾರಿಗಳನ್ನು ಪಡೆಯಲು, ಲೈಸೆನ್ಸ್ ಪಡೆಯಲು ಅಥವಾ ಆಮೇಲೆ ಕಾನೂನು ಕ್ರಮ ಆಗದಂತೆ ಸರಕಾರವನ್ನು ಅವಲಂಬಿಸಿದ್ದ ಕಂಪೆನಿಗಳನ್ನೇ ಟಾರ್ಗೆಟ್ ಮಾಡಿ ಹಣ ಬಾಚಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿದೆ.
ಹೆಚ್ಚಿನ ಕಂಪೆನಿಗಳು ಕೇಂದ್ರ ತನಿಖಾ ಸಂಸ್ಥೆಗಳಿಂದ ಕಾನೂನು ಕ್ರಮ ಎದುರಿಸಿದ ಬೆನ್ನಿಗೇ ಕೋಟಿ ಕೋಟಿ ದುಡ್ಡು ಕೊಟ್ಟಿವೆ.
ಕೆಲವರಿಗೆ ದುಡ್ಡು ಕೊಟ್ಟ ಮೇಲೆ ದೊಡ್ಡ ದೊಡ್ಡ ಸರಕಾರಿ ಯೋಜನೆ ಸಿಕ್ಕಿದೆ. ಅಂದರೆ ಕೇಂದ್ರ ತನಿಖಾ ಸಂಸ್ಥೆಗಳನ್ನು ಕಳಿಸಿ ಕಂಪೆನಿಗಳನ್ನು ಪರೋಕ್ಷವಾಗಿ ಬೆದರಿಸಿ ಹಣ ವಸೂಲಿ ಮಾಡಲಾಯಿತೇ ? ಹಣ ನೀಡಿದ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳ ತನಿಖೆಯನ್ನು ಸಡಿಲಗೊಳಿಸಲಾಯಿತೇ ? ಹಣ ನೀಡಿದ್ದಕ್ಕೆ ಕೋಟಿಗಟ್ಟಲೆಯ ಸರಕಾರಿ ಕಾಮಗಾರಿಗಳ ಕೆಲಸ ಕೊಡಲಾಯಿತೇ ?
ಹಾಗಾಗಿದೆ ಎಂದಾದರೆ ಇದೆಂತಹ ಕಳ್ಳಾಟ ? ಇದ್ಯಾವ ಸೀಮೆಯ ಪಾರದರ್ಶಕತೆ ? ಇದ್ಯಾವ ರೀತಿಯ ಜನಪರ ಆಡಳಿತ ? ಇದೆಷ್ಟು ದೊಡ್ಡ ಮೋಸ ? ಇದನ್ನು ಎಲ್ಲ ಮಾಧ್ಯಮಗಳು ಒಟ್ಟಾಗಿ ಪ್ರಶ್ನಿಸಿದರೆ ಪ್ರಧಾನಿ ತಮ್ಮ ಹುದ್ದೆಯಲ್ಲಿ ಮುಂದುವರಿಯಲು ಸಾಧ್ಯವೇ ? ಆದರೆ ಯಾರೂ ಈ ಬಗ್ಗೆ ಚರ್ಚೆಯೇ ಮಾಡುತ್ತಿಲ್ಲ ಯಾಕೆ ? ಇಷ್ಟು ದೊಡ್ಡ ಹಗರಣವನ್ನು ಯಾರೂ ಚರ್ಚಿಸುತ್ತಿಲ್ಲ ಯಾಕೆ ? ಎಲ್ಲವೂ ಇಷ್ಟೊಂದು ವಿವರವಾಗಿ ಬಹಿರಂಗವಾದರೂ ಯಾವುದೇ ಮಡಿಲ ಮಾಧ್ಯಮದ ಆಂಕರ್ ಗಳು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಯಾಕೆ ?
ಬಾಂಡ್ ವಿವರ ಕೊಡಲು ತಿಂಗಳುಗಟ್ಟಲೆ ಸಮಯ ಬೇಕೆಂದು ಮೊದಲು ಅಟ ಆಡಲು, ಸತಾಯಿಸಲು ನೋಡಿದ್ದ ಎಸ್ಬಿಐ ಸುಪ್ರೀಂ ಕೋರ್ಟ್ನಿಂದ ತಪರಾಕಿ ಬಿದ್ದದ್ದೇ ಕಡೆಗೂ ಮಾಹಿತಿಯನ್ನು ಹೊರಕ್ಕೆ ತಂದಿತು. ಆದರೆ ಅದಕ್ಕೂ ಮೊದಲು ಅದನ್ನು ಮರೆಮಾಡಲು ಪದೇ ಪದೇ ಪ್ರಯತ್ನಿಸಲಾಯಿತು. ಇಷ್ಟಾದ ಮೇಲೂ ಎಲ್ಲಾ ಮಾಹಿತಿಗಳು ಹೊರಬಂದಿಲ್ಲ. ಹೊಂದಾಣಿಕೆ ಮಾಡಲು ಸಾಧ್ಯವಾಗುವಂತೆ ಬಾಂಡ್ ಸಂಖ್ಯೆಗಳನ್ನು ಸಹ ಬಿಡುಗಡೆ ಮಾಡಲು ಎಸ್‌ಬಿಐಗೆ ಸುಪ್ರೀಂ ಕೋರ್ಟ್ ಕೇಳಿದೆ.
ದಾನಿಗಳ ಪಟ್ಟಿಯನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಗೊತ್ತಾಗಿರುವುದು, ಗರಿಷ್ಠ ದೇಣಿಗೆ ನೀಡಿದ ಅರ್ಧದಷ್ಟು ಕಂಪನಿಗಳು ತನಿಖಾ ಸಂಸ್ಥೆಗಳ ದಾಳಿಗೆ ತುತ್ತಾದವುಗಳೇ ಆಗಿವೆ ಎಂಬುದು. ಈಗಾಗಲೇ ಗೊತ್ತಿರುವಂತೆ ಚುನಾವಣಾ ದೇಣಿಗೆಯಿಂದ ಎಲ್ಲ ಪಕ್ಷಗಳಿಗಿಂತಲೂ ಹೆಚ್ಚಿನ ಪಾಲು ಬಂದಿರುವುದು ಬಿಜೆಪಿಗೆ. ಪಾರದರ್ಶಕತೆಯ ಹೆಸರಿನಲ್ಲಿ ತಂದ ಕಾನೂನಿನ ಮರ್ಮ ಹಲವು ವರ್ಷಗಳಿಂದ ಜನರ ಪಾಲಿಗೆ ಅರ್ಥವಾಗದೆ ಉಳಿದಿದೆ.
ಆದರೆ ಕೆಲವು ಪತ್ರಕರ್ತರ ಪರಿಶ್ರಮದ ಫಲವಾಗಿ ಸತ್ಯ ಹೊರಬರುತ್ತಿದೆ. ಮಡಿಲ ಮೀಡಿಯಾಗಳಲ್ಲಿ ಮಾತ್ರ ಈ ಅತಿ ದೊಡ್ಡ ಹಗರಣದ ಬಗ್ಗೆ ಮಾತಿಲ್ಲ, ಕಥೆಯಿಲ್ಲ. ಚುನಾವಣಾ ಬಾಂಡ್ ಹೆಸರಲ್ಲಿ ಅದೆಷ್ಟು ದೊಡ್ಡ ಮೋಸ ನಡೆದುಹೋಗಿದೆ ಎಂಬುದು ಈಗ ಜನರಿಗೆ ಅರ್ಥವಾಗುತ್ತಿರಬಹುದು. ಈಗ್ ಯೂನಿಕ್ ನಂಬರ್ ಕೂಡ ಸಿಕ್ಕಿಬಿಟ್ಟರೆ ಯಾರ ದುಡ್ಡು ಯಾವ ಪಕ್ಷಕ್ಕೆ ಸಿಕ್ಕಿದೆ ಎಂಬುದೂ ಸಾಬೀತಾಗಲಿದೆ.
ಬಿಜೆಪಿಯ ಸಂಬಂಧ ಯಾವ್ಯಾವ ಕಂಪನಿಗಳ ಜೊತೆ ಇದೆಯೆಂಬುದೂ ಬಯಲಾಗಲಿದೆ.
ಈಗ ಬಯಲಾಗಿರುವ ವಿವರಗಳಲ್ಲಿ ಅತಿ ಹೆಚ್ಚು ದೇಣಿಗೆ ನೀಡಿರುವ ಕಂಪನಿ ಫ್ಯೂಚರ್ ಗೇಮಿಂಗ್ & ಹೊಟೇಲ್ ಸರ್ವೀಸಸ್ – 1,368 ಕೋಟಿ ರೂ. ಅನಂತರದ್ದು ಮೇಘಾ ಎಂಜಿನೀರಿಂಗ್ & ಇನ್ಫ್ರಾಸ್ಟ್ರಕ್ಚರ್ ಲಿ. – 966 ಕೋಟಿ ರೂ. ಹಲ್ದಿಯಾ ಎನರ್ಜಿ ಲಿ. – 377 ಕೋಟಿ ರೂ. ವೇದಾಂತ ಲಿ. – 376 ಕೋಟಿ ರೂ. ಭಾರತದಲ್ಲಿ ನೋಂದಾಯಿತ 16 ಲಕ್ಷ ಕಂಪನಿಗಳಲ್ಲಿ ಬಾಂಡ್ ಖರೀದಿಸಿದ ಕಂಪನಿಗಳ ಸಂಖ್ಯೆ 1,300 ಮಾತ್ರ. ಇವುಗಳಲ್ಲೂ ದೊಡ್ಡ ಪ್ರಮಾಣದಲ್ಲಿ ದೇಣಿಗೆ ಕೊಡಬಲ್ಲ ಕಂಪನಿಗಳ ಸಂಖ್ಯೆ 50 ಕೂಡ ಇಲ್ಲ.
ಇದು ಸ್ಪಷ್ಟವಾಗಿ ಅಧಿಕಾರಸ್ಥರು ಮತ್ತು ಉದ್ಯಮಿಗಳ ನಡುವಿನ ದುಷ್ಟ ಸಂಬಂಧವನ್ನೇ ಮತ್ತೆ ಮತ್ತೆ ನಿರೂಪಿಸುತ್ತಿದೆ. ತಮ್ಮ ಉದ್ಯಮ ನಡೆಸಲು ಸರ್ಕಾರದ ಸಹಕಾರಕ್ಕಾಗಿ, ಲೈಸೆನ್ಸ್ಗಾಗಿ ದೇಣಿಗೆ ಕೊಟ್ಟು ಹಾದಿ ಸುರಳೀತ ಮಾಡಿಕೊಂಡ ಕಂಪನಿಗಳೇ ಇವುಗಳಲ್ಲಿ ಹೆಚ್ಚಿವೆ. ಈಗಾಗಲೇ ಗೊತ್ತಿರುವಂತೆ ಚುನಾವಣಾ ಬಾಂಡ್ಗಳಿಂದ ಬಂದ ದೇಣಿಗೆಯಲ್ಲಿ ದೊಡ್ಡ ಪಾಲು ಬಿಜೆಪಿಗೇ ಹೋಗಿದೆ. ಆ ಮೊತ್ತ 6 ಸಾವಿರ ಕೋಟಿಗೂ ಹೆಚ್ಚು. ಅನಂತರದ ಪಾಲು ಸಂದಿರುವುದು ಟಿಎಂಸಿಗೆ – 1,610 ಕೋಟಿ ರೂ. ಕಾಂಗ್ರೆಸ್ – 1,422 ಕೋಟಿ ರೂ. ಬಿಜೆಡಿ – 776 ಕೋಟಿ ರೂ.
ಅತಿ ಹೆಚ್ಚು ದೇಣಿಗೆ ಕೊಟ್ಟಿರುವ ಫ್ಯೂಚರ್ ಗೇಮಿಂಗ್ ದೊಡ್ಡ ವಂಚಕ ಲಾಟರಿ ಕಂಪನಿಯೆಂಬುದು ಎಲ್ಲರಿಗು ಗೊತ್ತು. ಆದರೆ ಅದು ಚುನಾವಣಾ ಬಾಂಡ್ ಖರೀದಿಸುತ್ತದೆ. ನಂಬರ್ 1 ದಾನಿ ಕಂಪನಿ ಎನ್ನಿಸಿಕೊಳ್ಳುತ್ತದೆ. ಒಂದು ವಂಚಕ ಕಂಪನಿಯಿಂದ ಹಣ ಪಡೆಯುವುದು ಎಂದರೆ ಯಾವ ಥರದ ಪಾರದರ್ಶಕತೆ? ದೊಡ್ಡ ದೊಡ್ಡ ಯೋಜನೆಗಳಲ್ಲಿ ಭಾಗಿಯಾಗಲು ಸರ್ಕಾರ ನೀಡಿದ ಸಹಕಾರಕ್ಕೆ ಪ್ರತಿಯಾಗಿ ಬಂದ ಹಣವಲ್ಲವೆ ಅದೆಲ್ಲ? ಹಾಗಾದರೆ ಅದೆಂಥ ಪಾರದರ್ಶಕತೆ?
ಕಂಪನಿಗಳಿಗೆ ಧಮಕಿ ಹಾಕಿ, ಈಡಿ, ಸಿಬಿಐ ಐಟಿಗಳನ್ನು ಛೂಬಿಟ್ಟು ಭಯಗೊಳಿಸಿ ಮಾಡಿದ ವಸೂಲಿಯಲ್ಲವೆ ಅದೆಲ್ಲ? ಹಾಗಾದರೆ ಅದೆಂಥ ಪಾರದರ್ಶಕತೆ? ಹಾಗೆ ಬಾಂಡ್ ಖರೀದಿಸಿದ ಕೂಡಲೇ ಆ ಕಂಪೆನಿಗಳ ಅಕ್ರಮಗಳನ್ನು ಮುಚ್ಚಿ ಹಾಕಲಾಗಿದೆ ಎಂದರೆ ಅದೂ ದೇಶಕ್ಕೆ ವಂಚನೆಯಲ್ಲವೇ ? ಬಯಲಾಗಿರುವ ಪಟ್ಟಿಯಲ್ಲಿ ಇಲ್ಲದ ದೇಶದ ಬೃಹತ್ ಕಂಪನಿಗಳಿಂದ ಬೇರೆ ಬೇರೆ ದಾರಿಯ ಮೂಲಕ ಬಿಜೆಪಿಗೆ ಹಣ ಬಂದಿರಲೇಬೇಕು ಎಂದು ವಿಪಕ್ಷಗಳು ಅನುಮಾನ ವ್ಯಕ್ತಪಡಿಸುವುದು ಸಹಜವೇ ಆಗಿದೆ.
ಯಾಕೆಂದರೆ ನ ಖಾವೂಂಗಾ ನ ಖಾನೇ ದೂಂಗಾ ಎಂದವರ ಅಸಲಿ ಆಟಗಳೇ ಬೇರೆ ಇರುವುದು ಇಷ್ಟು ವರ್ಷಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಬಯಲಿಗೆ ಬರುತ್ತಲೇ ಇದೆ. ಇದರ ಜೊತೆಗೇ ವಿಪಕ್ಷಗಳ ವಿರುದ್ದ ಬಿಜೆಪಿ ಸರ್ಕಾರ ಹೂಡುವ ಸಂಚು ಬೇರೆ. ಕಾಂಗ್ರೆಸ್ ಆರೋಪಿಸಿದ ಹಾಗೆ ವಿಪಕ್ಷಗಳ ಮೇಲೆ ಚುನಾವಣೆಗೆ ಮೊದಲು ಸರ್ಜಿಕಲ್ ಸ್ಟ್ರೈಕ್ ಮಾಡಲಾಗುತ್ತಿದೆ.
ಕಾಂಗ್ರೆಸ್ ಬ್ಯಾಂಕ್ ಖಾತೆಗಳನ್ನು ತನಿಖಾ ಸಂಸ್ಥೆಗಳ ನದರಿನಡಿ ತೆಗೆದುಕೊಳ್ಳಲಾಗುತ್ತದೆ. ಇದ್ದಕ್ಕಿದ್ದಂತೆ, ವಿದ್ಯುತ್ ಬಿಲ್ ಕಟ್ಟುವುದಕ್ಕೆ ಹಣ ಸಿಗದ ಹಾಗೆ ಖಾತೆಗಳನ್ನು ಸೀಝ್ ಮಾಡಲಾಗುತ್ತದೆ. ಯಾಕೆ ಈ ಎಲ್ಲ ಸತ್ಯಗಳ ಬಗ್ಗೆ ಪ್ರಧಾನಿ ಬಾಯಿಂದ ಮಾತು ಹೊರಬರುವುದಿಲ್ಲ. ಮೂರೂ ಹೊತ್ತೂ ಮಂದಿರ ಮಂದಿರ ಎಂದು ಜನರನ್ನು ಧರ್ಮದ ಮತ್ತಿಗೆ ತಳ್ಳುವ, ಸಮುದ್ರದಡಿಯಲ್ಲಿ ಹೋಗಿಯೂ ಧ್ಯಾನಕ್ಕೆ ಕೂರುವ ಮೋದಿ ಸುಳ್ಳುಗಳನ್ನು ಹೇಳಬಾರದಲ್ಲವೆ?
ಚುನಾವಣಾ ಬಾಂಡ್ ಯೋಜನೆಯನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದಾಗಲೂ ಪ್ರಧಾನಿ ಮಾತನಾಡಲಿಲ್ಲ. ಪ್ರಧಾನಿಯೊಬ್ಬರು ದಿನಬೆಳಗಾದರೆ ಧರ್ಮ ಉಪದೇಶ ಮಾಡಬೇಕೊ ಅಥವಾ ಜನರಿಗೆ ಉತ್ತರ ಕೊಡಬೇಕಾದ ಸ್ಥಾನದಲ್ಲಿದ್ದು ಇಂಥ ವಿಚಾರಗಳ ಬಗೆಗಿನ ಸತ್ಯವನ್ನು ಹೇಳಬೇಕೊ? ಆದರೆ ಪ್ರಧಾನಿ ಮೋದಿಗೆ ಮಾತ್ರ ಮಂದಿರಗಳಲ್ಲಿ ಪೂಜೆಗಳಲ್ಲಿ ಕಳೆಯುವುದಕ್ಕೆ ಬೇಕಾದಷ್ಟು ಸಮಯವಿದೆ. ಇಂಥ ಸತ್ಯಗಳನ್ನು ಹೇಳಲು ಮಾತ್ರ ಸಮಯವೇ ಇಲ್ಲ. ಯಾವಾಗ ಸಮಯ ಸಿಗುತ್ತದೊ ಗೊತ್ತಿಲ್ಲ.
ಮನಮೋಹನ್ ಸಿಂಗ್ ಅವರನ್ನು ಮೌನ ಮೋಹನ್ ಎಂದು ಹಂಗಿಸಿದ್ದು ಇದೇ ಮೋದಿಯವರಲ್ವಾ ? ಅವರು ನೂರರಷ್ಟು ಪತ್ರಕರ್ತರೆದುರು ಕೂತು ಕೇಳಿದ ಎಲ್ಲ ಕಟು ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಆದರೆ ಮೋದಿಯವರು ಒಂದೇ ಒಂದು ಪತ್ರಿಕಾ ಗೋಷ್ಠಿ ಮಾಡಿ ಮಾತಾಡುವುದೇ ಇಲ್ಲ. ಹಾಗಾದರೆ ನಿಜವಾದ ಮಾತುಗಾರ ಯಾರು ?
ಈಗ ಸುಪ್ರೀಂ ಕೋರ್ಟ್ ಖಡಕ್ಕಾಗಿ ಸೂಚಿಸಿರುವಂತೆ ಯೂನಿಕ್ ನಂಬರ್ ಅನ್ನು ಎಸ್ಬಿಐ ಕೊಟ್ಟರೆ ಯಾರ ಹಣ ಯಾರ ಜೇಬು ಸೇರಿದೆ ಎನ್ನುವುದು ಪತ್ತೆಯಾಗಲಿದೆ. ನಂಬರ್ 1 ದೇಣಿಗೆದಾರ ಸ್ಯಾಂಟಿಯಾಗೊ ಮಾರ್ಟಿನ್ ಅಷ್ಟು ದೊಡ್ಡ ಮೊತ್ತದ ಬಾಂಡ್ ಖರೀದಿ ಮಾಡಿದ್ದು, ಆ ಹಣ ಬಿಜೆಪಿಗೇ ಸೇರಿತೆ ಎಂಬುದು ಗೊತ್ತಾಗಿಲ್ಲ.
ಆದರೆ ಈಡಿ ದಾಳಿಯ ಬಳಿಕ ಆ ಕಂಪನಿ ಚುನಾವಣಾ ಬಾಂಡ್ ಖರೀದಿಸಿತ್ತು ಎಂಬುದು ಸ್ಪಷ್ಟ. ಲಾಟರಿ ವ್ಯವಹಾರದಲ್ಲಿ ಸರ್ಕಾರದ ಪಾಲೇನಿತ್ತು? ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲಾಟರಿ ವ್ಯವಹಾರದ ಕಂಪನಿ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ್ದನ್ನು ಸಾಬೀತುಪಡಿಸುವ ವಿವರಗಳಿವೆ.
ಆಲ್ ಇಂಡಿಯಾ ಫೆಡರೇಷನ್ ಆಫ್ ಲಾಟರಿ ಟ್ರೇಡ್ & ಅಲೈಡ್ ಇಂಡಸ್ಟ್ರೀಸ್ ಪ್ರತಿನಿಧಿಗಳು ಅವರನ್ನು ಚೆನ್ನೈನಲ್ಲಿ ಭೇಟಿ ಮಾಡಿದ್ದುದರ ಬಗ್ಗೆ ಅವರದೇ ಅಧಿಕೃತ ಟ್ವಿಟರ್ ಖಾತೆಯಲ್ಲಿ 2023ರ ಏಪ್ರಿಲ್ 2ರ ದಿನಾಂಕದಲ್ಲಿ ಚಿತ್ರಸಹಿತ ಪೋಸ್ಟ್ ಇದೆ. ಹಾಗೆ ಭೇಟಿಯಾದವರಲ್ಲಿ ಸ್ಯಾಂಟಿಯಾಗೊ ಮಾರ್ಟಿನ್ ಹಿರಿಯ ಪುತ್ರ ಚಾರ್ಲ್ಸ್ ಜೋಸ್ ಮಾರ್ಟಿನ್ ಕೂಡ ಇದ್ದರು.
ಲಾಟರಿ ವಂಚನೆಯಲ್ಲಿ ಹಲವಾರು ಕೇಸ್ಗಳನ್ನು ಎದುರಿಸುತ್ತಿರುವ ಸ್ಯಾಂಟಿಯಾಗೊ ಮಾರ್ಟಿನ್ ಪುತ್ರ ಚಾರ್ಲ್ಸ್ ಜೋಸ್ ಮಾರ್ಟಿನ್ ಮಾತ್ರ 2015ರಿಂದಲೂ ಬಿಜೆಪಿಯಲ್ಲಿ ಇದ್ದಾರೆ ಎಂಬುದು ಇಲ್ಲಿ ಗಮನಾರ್ಹ. ಅದೇ ಲಾಟರಿ ಕಿಂಗ್ ಸ್ಯಾಂಟಿಯಾಗೊ ಮಾರ್ಟಿನ್ ಪತ್ನಿ ಲೀಮಾ ರೋಸ್ ಪ್ರಧಾನಿ ಅಭ್ಯರ್ಥಿಯಾಗಿದ್ದ ಮೋದಿ ಜೊತೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು ಎಂಬುದನ್ನೂ ನಾವು ಗಮನಿಸಬೇಕು.
ಹಾಗೆ ವೇದಿಕೆಯಲ್ಲಿ ಆಕೆ ಮೋದಿ ಜೊತೆ ಕಾಣಿಸಿಕೊಂಡಿದ್ದ ಹೊತ್ತಲ್ಲಿ ಸ್ಯಾಂಟಿಯಾಗೊ ಮಾರ್ಟಿನ್ ಜೈಲಿನಲ್ಲಿದ್ದರು. ಹಣಕಾಸು ಅವ್ಯವಹಾರದಲ್ಲಿ ಭಾಗಿಯಾಗಿ ಜೈಲುಪಾಲಾಗಿದ್ದವನ ಪತ್ನಿ ಜೊತೆ ಮೋದಿ ಯಾಕೆ ವೇದಿಕೆಯಲ್ಲಿದ್ದರು ಅಥವಾ ಮೋದಿ ಜೊತೆ ಆಕೆ ಯಾಕೆ ವೇದಿಕೆಯಲ್ಲಿದ್ದರು?
ಸ್ಯಾಂಟಿಯಾಗೊ ಪುತ್ರ ಬಿಜೆಪಿ ಸೇರಿದ್ದ ವಿಚಾರವಾಗಿ ಮಾತನಾಡಿದ್ದ ಬಿಜೆಪಿ ನಾಯಕನೊಬ್ಬ, ಲಾಟರಿ ಹಗರಣದ ಆರೋಪವಿರುವುದು ಆತನ ತಂದೆಯ ಮೇಲೆಯೇ ಹೊರತು ಚಾರ್ಲ್ಸ್ ಮೇಲಲ್ಲ. ಚಾರ್ಲ್ಸ್ ಒಳ್ಳೆಯ ವ್ಯಕ್ತಿ. ಮೋದಿ ಬಗ್ಗೆ ಗೌರವ ಹೊಂದಿರೋ ವ್ಯಕ್ತಿ ಎಂದೆಲ್ಲ ಸರ್ಟಿಫಿಕೇಟು ಕೊಟ್ಟಿದ್ದು ಕೂಡ ವರದಿಯಾಗಿತ್ತು.
ಕೇರಳದಲ್ಲಿ ಸಿಪಿಐಎಂ ಮುಖವಾಣಿ ದೇಶಾಭಿಮಾನಿಗೆ ಸ್ಯಾಂಟಿಯಾಗೊ ಮಾರ್ಟಿನ್ 2 ಕೋಟಿ ದೇಣಿಗೆ ಕೊಟ್ಟಾಗಲೂ ಪಕ್ಷದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಕಡೆಗೆ ಆ ಹಣವನ್ನು ಮಾರ್ಟಿನ್ಗೇ ವಾಪಸ್ ಕೊಡಬೇಕಾಗಿ ಬಂದಿತ್ತು. ತಮಿಳುನಾಡಿನಲ್ಲೂ ಮಾರ್ಟಿನ್ ರಾಜಕೀಯ ಸಂಬಂಧವುಳ್ಳ ಉದ್ಯಮಿ.
ಕೇರಳದ ಮಾಜಿ ಹಣಕಾಸು ಸಚಿವ ಥಾಮಸ್ ಐಸ್ಸಾಕ್ ಟ್ವೀಟ್ ಮಾಡಿದ್ದು, ಲಾಟರಿ ಮೇಲಿನ ಜಿಎಸ್ಟಿ ತೆಗೆದು ಹಾಕುವುದಕ್ಕೇನಾದರೂ ಸ್ಯಾಂಟಿಯಾಗೊ ಮಾರ್ಟಿನ್ ಈ ದೇಣಿಗೆ ಕೊಟ್ಟಿರಬಹುದೇ ಎಂಬ ಅನುಮಾನ ಎತ್ತಿದ್ಧಾರೆ. ಇಲ್ಲೊಂದು ತಮಾಷೆ ಏನೆಂದರೆ, ಮಾರ್ಟಿನ್ ಪುತ್ರ 2015ರಿಂದ ಬಿಜೆಪಿಯಲ್ಲಿದ್ದರೂ, ಅಕ್ಟೋಬರ್ 2023ರವರೆಗೂ ಮಾರ್ಟಿನ್ ವಿರುದ್ಧ ಈಡಿ ದಾಳಿಯಾಗುತ್ತಲೇ ಇತ್ತು.
ಮಾರ್ಟಿನ್ ಕಂಪನಿ ಇಷ್ಟೊಂದು ಮೊತ್ತದ ಬಾಂಡ್ ಖರೀದಿಸಿದೆ ಎಂದರೆ ಅದಕ್ಕೆ ಅಷ್ಟೊಂದು ಹಣ ಎಲ್ಲಿಂದ ಬಂತು? ಅಥವಾ ಇನ್ನಾವುದೋ ಹಣ ಆ ಕಂಪನಿ ಮೂಲಕ ಹೀಗೆ ಹೋಗಿದೆಯೆ? ಯಾವ ಪಕ್ಷಕ್ಕೆ ಹಣ ಹೋಗಿದೆ? ಫ್ರೂಡೆಂಟ್ ಎಲೆಕ್ಟೋರಲ್ ಟ್ರಸ್ಟ್ 2013ರಿಂದ 2,255 ಕೋಟಿಯಷ್ಟು ಹಣವನ್ನು ಬಿಜೆಪಿಗೇ ನೀಡಿದೆ. ಅಂದರೆ ಒಟ್ಟು ಮೊತ್ತದ ಪಾಲು ಶೇ.75ರಷ್ಟು. ಆದರೆ ಇದೇ ಟ್ರಸ್ಟ್ ನಿಂದ ಕಾಂಗ್ರೆಸ್ಗೆ ಸಲ್ಲಿಕೆಯಾದದ್ದು 167 ಕೋಟಿ ಮಾತ್ರ.
ಮಾರ್ಟಿನ್ ಕಂಪನಿ ಈ ಟ್ರಸ್ಟ್ಗೆ 100 ಕೋಟಿ ಕೊಟ್ಟಿದೆ. ಇದೆಲ್ಲವೂ ಬಿಜೆಪಿಗೇ ಹೋಗಿದೆಯೆ? ಎಸ್ಬಿಐ ಯೂನಿಕ್ ಕೋಡ್ ನಂಬರ್ ಕೊಟ್ಟ ಕೂಡಲೇ ಇದೆಲ್ಲವೂ ಗೊತ್ತಾಗಲಿದೆ.
ದೇಣಿಗೆ ವಸೂಲು ಮಾಡುವುದಕ್ಕಾಗಿಯೇ ಈಡಿ ದಾಳಿ ನಡೆಯಿತೆ ಎಂಬುದು ಒಂದು ಪ್ರಶ್ನೆಯಾದರೆ. ದಾಳಿ ಬಳಿಕ ಕಂಪನಿ ಉಳಿಸಿಕೊಳ್ಳಲು ಬಿಜೆಪಿಗೆ ಚಂದಾ ನೀಡುವ ಅವಕಾಶ ಮಾಡಿಕೊಡಲಾಯಿತೆ ಎಂಬುದು ಇನ್ನೊಂದು ಪ್ರಶ್ನೆ.
ಮಾರ್ಟಿನ್ ಕಡೆಯಿಂದ ತನಗೆ ದೇಣಿಗೆ ಬಂದಿಲ್ಲ ಎಂದು ಬಿಜೆಪಿ ಪೋಸ್ಟರ್ನಲ್ಲಿ ಘೋಷಿಸಿಕೊಳ್ಳಬಲ್ಲುದೆ? ಮೋದಿ ಮತ್ತು ಮಾರ್ಟಿನ್ ಮಧ್ಯೆ ಯಾವುದೇ ಸಂಬಂಧ ಇಲ್ಲವೆಂದು ಯಾವ ಅಳುಕೂ ಇಲ್ಲದೆ ಅದು ಹೇಳಬಲ್ಲುದೆ? ಬಡವರು ರಾತ್ರಿ ಕಳೆದು ಬೆಳಗಾಗುವುದರೊಳಗೆ ಶ್ರೀಮಂತರಾಗುವ ಕನಸುಗಳನ್ನು ಮಾರುವ ವ್ಯಕ್ತಿ ಮಾರ್ಟಿನ್. ಆದರೆ, ಮೋದಿ ಜನರಿಗೆ ಅಚ್ಚೇ ದಿನಗಳ ಭ್ರಮೆ ಮಾರುತ್ತಾರೆ. ಸ್ವಿಸ್ ಬ್ಯಾಂಕ್ ನಿಂದ ಕಪ್ಪು ಹಣ ತರುತ್ತೇನೆ ಎಂದು ಮೋದೀಜಿ ಮಾಡಿದ್ದೇನು ?
ಕಾನೂನು ಬದಲಾಯಿಸುವ ಮೂಲಕ, ಇಲ್ಲೇ ಸ್ಟೇಟ್ ಬ್ಯಾಂಕ್ ಮೂಲಕವೇ ಕಪ್ಪು ಹಣದ ಧಾರಾಳ ವಹಿವಾಟಿಗೆ ಅವಕಾಶ ಮಾಡಿ ಕೊಟ್ಟರೇ ಮೋದೀಜಿ ? ಅವರ ಪಕ್ಷವೇ ಆ ವಹಿವಾಟಿನ ದೊಡ್ಡ ಫಲಾನುಭವಿಯಾಯಿತೇ ? ಈಡಿಯನ್ನು ಪ್ರಭಾವಿಸುವ ತಾಕತ್ತೇನಿದ್ದರೂ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ. ಬಿಜೆಪಿ ವಿಶ್ವದಲ್ಲೇ ಅತಿ ದೊಡ್ಡ ಪಕ್ಷ. ಹಾಗಾಗಿ ಅದು ತನಗೆ ಯಾರಿಂದ ಎಷ್ಟು ಹಣ ಬಂತೆಂಬುದನ್ನು ಹೇಳಿ ಸಣ್ಣ ಪಕ್ಷಗಳಿಗೆ ಮಾದರಿಯಾಗುವುದು ಅಗತ್ಯ.
ಯಾವ್ಯಾವ ಕಂಪನಿಗಳು ಈಡಿ ದಾಳಿಗೆ ಒಳಗಾಗಿವೆಯೊ ಅವೆಲ್ಲವೂ ಚುನಾವಣಾ ಬಾಂಡ್ ಖರೀದಿಸಿವೆ. ಅಂದರೆ ಇದರ ಮರ್ಮವೇನು?
ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ಹಲವು ಕಂಪನಿಗಳು, ತಾವು ಬಾಂಡ್‌ಗಳನ್ನು ಖರೀದಿ ಮಾಡಿದ ಕೆಲವೇ ದಿನಗಳಲ್ಲಿ ಪ್ರಯೋಜನಗಳನ್ನು ಪಡೆದಿರುವುದು ಕೂಡ ಕಂಡುಬಂದಿದೆ. ಅಂತಹ ಕಂಪನಿಗಳು ಬೃಹತ್ ಮೊತ್ತದ ಯೋಜನೆಗಳ ಟೆಂಡರ್‌ಗಳನ್ನು ಪಡೆದಿವೆ.
ಅಲ್ಲದೆ, ಸ್ಯಾಂಟಿಯಾಗೊ ಮಾರ್ಟಿನ್ ಅವರ ಕಂಪನಿಯೂ ಸೇರಿದಂತೆ ಕೆಲವು ಕಂಪನಿಗಳು ತಮ್ಮ ಮೇಲೆ ಇಡಿ, ಐಟಿ ದಾಳಿಗಳು ನಡೆದ ಬಳಿಕ ಚುನಾವಣಾ ಬಾಂಡ್‌ಗಳನ್ನು ಖರೀದಿಸಿವೆ ತಮ್ಮ ಆದಾಯವನ್ನೂ ಮೀರಿ ದೇಣಿಗೆ ಕೊಟ್ಟ ಕಂಪನಿಗಳೂ ಇವೆ. ಹಾಗಾದರೆ ಈ ದೇಶದ ರಾಜಕಾರಣ ಯಾವ ಮಟ್ಟದಲ್ಲಿ ಭ್ರಷ್ಟವಾಗಿದೆ ?