ಕಣ್ಮರೆಯಾದ ಒಂದೇ ಬಳ್ಳಿಯ ಹೂಗಳು
ಉಡುಪಿ ಜಿಲ್ಲಾ ಲೇಖಕಿಯರಾಗಿ ಅರಳಿ ಪರಿಮಳ ಬೀರಿದ ಎರಡು ಹಿರಿಯ ಜೀವಗಳು ಕಳೆದ ಎರಡು ತಿಂಗಳಲ್ಲಿ ಒಬ್ಬರಾದ ನಂತರ ಒಬ್ಬರು ಕಣ್ಮುಚ್ಚಿದ್ದಾರೆ. ಅಕ್ಕ ತಾರಾ ಭಟ್ ಸುಮಾರು ತಮ್ಮ 81ನೇ ವಯಸ್ಸಿನಲ್ಲಿ ಕಣ್ಮುಚ್ಚಿದರೆ, ತಂಗಿ ಶಾರದಾ ಭಟ್ ಅವರು ಇದೇ ಜನವರಿ ಒಂದರಂದು ಸುಮಾರು ತಮ್ಮ 75ನೇ ವಯಸ್ಸಿನಲ್ಲಿ ತನ್ನ ಅಕ್ಕನನ್ನು ಅಗಲಿ ಇನ್ನು ಹೆಚ್ಚು ಕಾಲ ಇರುವುದು ತನಗೆ ಸಾಧ್ಯವಿಲ್ಲವೆಂಬಂತೆ ಗತಿಸಿದ್ದಾರೆ.
ಈ ಅಕ್ಕತಂಗಿಯರನ್ನು ಸ್ವಲ್ಪ ಸಮಯದಿಂದಾದರೂ ಆಪ್ತವಾಗಿ ಬಲ್ಲ ನನಗೆ ಅವರ ಜೀವನಗಾಥೆಯತ್ತ ಒಂದು ಪಕ್ಷಿನೋಟ ಬೀರಿ ಅವಲೋಕಿಸುವುದು ಕಿರಿಯಳಾದರೂ ಅವರ ಸಮಕಾಲೀನ ಲೇಖಕಿಯಾಗಿ ಕರ್ತವ್ಯವೆನಿಸುತ್ತದೆ. ಸುಮಾರು 25 ವರ್ಷಗಳ ಹಿಂದೆ ನನಗೆ ಈ ಅಕ್ಕತಂಗಿಯರ ಪರಿಚಯ ಸಾಹಿತ್ಯ ವೇದಿಕೆಗಳಲ್ಲಿ ಒದಗಿ ಅವರ ಅಭಿಮಾನಕ್ಕೆ ಪಾತ್ರಳಾಗುವ ಸುಯೋಗ ಒದಗಿತ್ತು. ನನಗೆ ಸಾಧ್ಯವಾಗುವಾಗ ಅವರುಗಳನ್ನೂ ಜೊತೆಯಲ್ಲಿ ಕೆಲವು ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗಿ ಉಡುಪಿ ಅವರ ಮನೆ ಶಾಂತಾನಂದ ರೆಸಿಡೆನ್ಸಿ ಬಳಿ ಬಿಟ್ಟು ಬರುತ್ತಿದ್ದೆ. ನನ್ನೊಂದಿಗೆ ಸುರಕ್ಷಿತ ಭಾವದ ಸಂವಾದ ಅವರುಗಳಿಗೆ ಸಾಧ್ಯವಾಗಿತ್ತು. ಕಳೆದ ಎರಡು-ಮೂರು ವರ್ಷಗಳಿಂದ ಇವರುಗಳ ಸಂಪರ್ಕವಿಲ್ಲದೆ ಒಂದು ರೀತಿ ತಾತ್ಕಾಲಿಕ ಮರೆವು ಆವರಿಸಿದಂತಾಗಿತ್ತು. ಇದ್ದಕ್ಕಿದ್ದಂತೆ ತಾರಾಭಟ್ ಅವರ ನಿಧನ ಸುದ್ದಿ ಕಳೆದ ನವೆಂಬರ್ ಮೊದಲ ವಾರ ತಿಳಿದ ತಕ್ಷಣ ವ್ಯಾಕುಲತೆ ಆವರಿಸಿ ಮಮತೆ ಪುಟ್ಟಿದೆದ್ದು ಅವರ ತಂಗಿ ಶಾರದಾ ಭಟ್ ಎಲ್ಲಿರುವರೆಂದು ಹುಡುಕಿಕೊಂಡು ಹೊರಟು ಕಳೆದ ನವೆಂಬರ್ 8ರಂದು ಕೋಟೇಶ್ವರದ ಆಚಾರ್ಯ ಆಸ್ಪತ್ರೆಯ 58ನೇ ನಂಬರ್ ಕೋಣೆಯಲ್ಲಿ ಹಾಸಿಗೆ ಹಿಡಿದಿದ್ದ ಶಾರದಾ ಭಟ್‌ರೊಡನೆ ಬೆಳಗ್ಗಿನಿಂದ ಸಂಜೆವರೆಗೆ ಕಳೆಯಲು ಸಾಧ್ಯವಾಗಿ ಸ್ವಲ್ಪವಾದರೂ ಅವರ ಶುಶ್ರೂಷೆ ಮಾಡಿ ಅವರ ನೆನಪುಗಳನ್ನು ಹೊಸತು ಮಾಡಿ, ಅವರ ಮೊಗದ ಒಂದು ಮುಗುಳ್ನಗೆ ಹಿಡಿಯಲು ಸಾಧ್ಯವಾಗಿತ್ತು. ನಾನು ಹೋಗಿದ್ದಕ್ಕೆ ತುಂಬಾ ಸಂಭ್ರಮಪಟ್ಟು ನನ್ನ ಹೆಸರನ್ನು ಗಟ್ಟಿಯಾಗಿ ಕರೆದಿದ್ದರು. ಅವರ ಹೆಚ್ಚಿನ ಮಾತು ಕೆಲವು ದಿನಗಳ ಹಿಂದೆ ಅಗಲಿದ್ದ ತನ್ನ ಅಕ್ಕ ತಾರಾಭಟ್ ಬಗ್ಗೆಯೇ ಇತ್ತು-‘‘ತುಂಬಾ ಧೈರ್ಯವಂತೆ ಆಗಿದ್ದಳು ಅವಳು. ಒಳ್ಳೆಯ ಲೇಖಕಿ, ಚಿಂತಕಿ, ಹೋರಾಟಗಾರ್ತಿಯಾಗಿದ್ದಳು. ಮಹಿಳಾ ದೌರ್ಜನ್ಯದ ವಿರುದ್ಧ ಸಿಡಿಯುತ್ತಿದ್ದಳು, ದನಿಯೆತ್ತುತ್ತಿದ್ದಳು’’ ಎಂದು ಅಕ್ಕನನ್ನು ಅಭಿಮಾನದಿಂದ ನೆನೆದು ಕಂಬನಿ ಮಿಡಿದಿದ್ದರು.
ಶಾರದಾ ಭಟ್ ಮತ್ತು ತಾರಾಭಟ್ ಎಂಬ ಹೆಣ್ಣು ಮಕ್ಕಳು ಇಬ್ಬರೇ ಮಕ್ಕಳಾಗಿ ಕುಂದಾಪುರದ ಕೋಟೇಶ್ವರದಲ್ಲಿ ವಿಠ್ಠಲ ಪೈ ಮತ್ತು ಕಾವೇರಿಯಮ್ಮ ದಂಪತಿಗೆ ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿದರು. ಎಳೆಯ ಪ್ರಾಯದಲ್ಲಿ ತಂದೆ ವಿಠ್ಠಲ ಪೈ ಅವರು ರಥದ ಚಕ್ರಕ್ಕೆ ಸಿಕ್ಕಿಹಾಕಿಕೊಂಡು ಅಸು ನೀಗಿದಾಗ ಈ ಹೆಣ್ಣು ಮಕ್ಕಳಿಗೆ ಮೊದಲ ಆಘಾತವಾಯಿತು. ಆ ಕಾಲದಲ್ಲಿ ತಂದೆ ದಿಕ್ಕಿಲ್ಲದ ಮನೆಯನ್ನು ಹೆಣ್ಣು ಮಕ್ಕಳೇ ನಿರ್ವಹಿಸುವುದೆಂದರೆ ದೊಡ್ಡ ಸವಾಲು. ಪ್ರೌಢಶಾಲಾ ಶಿಕ್ಷಣ ಪೂರೈಸಿದ್ದ ತಾರಾ ಭಟ್ ಅವರು ಆರ್ಥಿಕ ಸ್ವತಂತ್ರರಾಗಲು ಬೆಂಗಳೂರಿನಲ್ಲಿ ಸಿಕ್ಕಿದ ಒಂದು ಉದ್ಯೋಗಕ್ಕೆ ಸೇರಿದರು. ಮುಂದೆ ಅವರ ತಂಗಿ ಶಾರದಾ ಭಟ್ ಸಹ ಕುಂದಾಪುರದ ಭಂಡಾರ್ಕರ್ ಕಾಲೇಜಿನಲ್ಲಿ ಪಿಯುಸಿ ವರೆಗಿನ ಶಿಕ್ಷಣ ಮುಗಿಸಿ ಪ್ರಾದೇಶಿಕವಾಗಿ ದೊರೆತ ದೂರವಾಣಿ ಇಲಾಖೆಯ ಉದ್ಯೋಗಕ್ಕೆ ಸೇರಿಕೊಂಡು ಸಂಸಾರದ ನೊಗ ಹೊತ್ತರು. ಮುಂದೆ ಬೆಂಗಳೂರಿಗೆ ವರ್ಗಾವಣೆಯಾದಾಗ ಅಕ್ಕ ತಂಗಿಯರಿಬ್ಬರೂ ಜೊತೆಗೆ ಇದ್ದು ಜೀವನ ನಿರ್ವಹಣೆಯ ಜೊತೆ ಜೊತೆಗೆ ಬೆಂಗಳೂರಿನ ಆಚಾರ್ಯ ಪಾಠ ಶಾಲೆಯ ಸಂಜೆ ಕಾಲೇಜಿನ ಮೂಲಕ ಪದವಿ ಮುಗಿಸಿ, ಬೆಂಗಳೂರು ವಿಶ್ವವಿದ್ಯಾನಿಲಯದ ಮೂಲಕ ಬಾಹ್ಯ ಸಂಪರ್ಕದ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ಸಾಧಕರಾದರು. ಈ ಸಾಧನೆಯ ಜೊತೆ ಜೊತೆಗೇ ಇವರುಗಳ ಚೇತನ ವಿಚಾರವಂತಿಕೆಯಿಂದ ಅರಳುತ್ತಿತ್ತು. ಮಹಿಳಾ ದೌರ್ಜನ್ಯದ ವಿರುದ್ಧ ಮಿಡಿಯುತಿತ್ತು. ಕಥೆ, ಕಾದಂಬರಿ, ಅನುವಾದ ಪ್ರಕಾರಗಳಲ್ಲಿ ಬೆಳಗಲು ಆರಂಭಿಸಿದರು. ಅಕ್ಕ ತಂಗಿಯರು ಅವಿವಾಹಿತರಾಗಿಯೇ ಉಳಿದುಹೆಣ್ಣಿಗೆ ವಿವಾಹವೇ ಮುಖ್ಯ ಸಂಗತಿಯೇನಲ್ಲ ಎಂಬಂಬಂತೆ ಬದುಕಿದರು.
ಇಳಿವಯಸ್ಸಿನ ವೇಳೆಗೆ ಹುಟ್ಟೂರು ಉಡುಪಿಗೆ ಹಿಂದಿರುಗಿ ಉಡುಪಿಯ ಶಾಂತಾನಂದ ರೆಸಿಡೆನ್ಸಿಯಲ್ಲಿ ವಾಸಿಸುತ್ತಿದ್ದ ಈ ಅಕ್ಕತಂಗಿಯರ ಆರೋಗ್ಯ ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ಶಾರದಾ ಭಟ್‌ರನ್ನು ಸಂಧಿವಾತ ಸಮಸ್ಯೆ ಬಾಧಿಸುತ್ತಿದ್ದರೆ ತಾರಾಭಟ್ ಅವರನ್ನು ಮೈಗ್ರೇನ್ ಎಂಬ ತಲೆನೋವಿನ ಸಮಸ್ಯೆ ಕಾಡುತ್ತಿತ್ತು. ಬಹುಶಃ ಅವರುಗಳ ಜೀವನದ ಕಷ್ಟ-ಕೋಟಲೆಯ ಒತ್ತಡವೇ ಹೀಗೆಲ್ಲ ಕಾಯಿಲೆಯ ರೂಪವಾಗಿ ಕಾಣಿಸಿಕೊಂಡಿತ್ತೆನ್ನಿಸುತ್ತಿದೆ. ನೋವನ್ನೇ ಉಂಡ ಜೀವಗಳಿಗೆ ಮತ್ತೆ ಚೇತರಿಸಿಕೊಳ್ಳುವುದೇ ಒಂದು ಸಮಸ್ಯೆಯಾಗಿ ಹೋಯಿತೆನ್ನಿಸುತ್ತಿದೆ. ಶಾರದಾ ಭಟ್ ಅವರಿಗೆ ಬೈಕ್ ಗುದ್ದಿ ಒಂದು ಅಪಘಾತವಾಗಿ ಅದೇ ಅವರ ಅನಾರೋಗ್ಯಕ್ಕೆ ನಾಂದಿಯಾಯಿತು. ಕತ್ತಿನ ಬಳಿ ಸ್ವಾಧೀನ ಕಳೆದುಕೊಂಡು, ನರ ದೌರ್ಬಲ್ಯವಾಗಿ ಮೆದುಳಿನೊಳಗೆ ಸಮಸ್ಯೆ ಕಾಣಿಸಿಕೊಂಡು ದುರ್ಬಲರಾದಾಗ ಅಕ್ಕ ತಾರಾ ಭಟ್ ರವರಿಗೆ ತಂಗಿಯನ್ನು ತಾನೊಬ್ಬಳೇ ಸಂಭಾಳಿಸುವುದು ಕಷ್ಟವಾಗಿ ಕುಟುಂಬದ ಹಿತೈಷಿಯಾದ ಆಚಾರ್ಯ ಆಸ್ಪತ್ರೆಯ ಡಾ. ಭಾಸ್ಕರಾಚಾರ್ಯರ ಆಸ್ಪತ್ರೆಯನ್ನೇ ಈಗ್ಗೆ ಎರಡು ವರ್ಷಗಳಿಂದ ತಮ್ಮ ಆಶ್ರಯ ತಾಣವನ್ನಾಗಿ ಮಾಡಿಕೊಂಡಿದ್ದರು. ಡಾ. ಭಾಸ್ಕರಾಚಾರ್ಯರನ್ನೂ, ಅಲ್ಲಿಯ ದಾದಿಯರಾದ ನಾಗವೇಣಿ, ಸುನಂದಾರನ್ನೂ ತಂಪು ಹೊತ್ತಿನಲ್ಲಿ ನೆನೆಯಬೇಕು. ಈ ಅಕ್ಕ-ತಂಗಿಯರ ನಂಬಿಕೆಗೆ ತಕ್ಕಂತೆ ಒಬ್ಬ ಅಕ್ಕರೆಯ ಸಹೋದರನಂತೆ ಅವರ ಅಂತ್ಯಕಾಲದಲ್ಲಿ ಡಾ. ಭಾಸ್ಕರಾಚಾರ್ಯರು ಗೌರವಯುತವಾದ ಆಶ್ರಯ-ಚಿಕಿತ್ಸೆ ನೀಡಿದರು. ಆದರೇನು ಮಾಡುವುದು? ಪುನಃ ಚೇತರಿಕೆಗೆ ಈ ಅಕ್ಕ ತಂಗಿಯರಿಗೆ ಇಚ್ಛಾಶಕ್ತಿಯೇ ಸಾಲದಾಯಿತೇನೋ ಎಂಬಂತೆ ಆರೋಗ್ಯ ಸಮಸ್ಯೆಗಳು ಕಾಡಹತ್ತಿದವು. ತಾರಾ ಭಟ್‌ರಿಗೆ ಖಿನ್ನತೆಯ ಪ್ರಭಾವವೇನೋ ಎಂಬಂತೆ ಮರೆವು ಆವರಿಸತೊಡಗಿತು. ಒಂದು ದಿನ ಮಲಗಿದಲ್ಲೇ ಹೃದಯಾಘಾತವಾಯಿತು. ಆ ವೇಳೆಗೆ ಸಂಧಿವಾತದಿಂದ ಹಾಸಿಗೆ ಹಿಡಿದು ಬಾಯಿ ತೊದಲುತ್ತಿದ್ದ ಶಾರದಾ ಭಟ್ ಸಹ ಈ ಆಘಾತವನ್ನು ತಾಳಲಾರದವರಂತೆ ಒಂದೆರಡು ತಿಂಗಳಲ್ಲಿ ಪರಿಸ್ಥಿತಿ ಬಿಗಡಾಯಿಸಿ ಆಮ್ಲಜನಕದ ಕೊರತೆಯಾಗಿ ಕೊನೆಗೆ ಅಂತ್ಯ ಸಮೀಪಿಸಿತು. ನೋವುಣ್ಣುತ್ತಿದ್ದ ಜೀವಕ್ಕೆ ಮುಕ್ತಿ ದೊರೆಯಿತು. ಆದರೆ ಇಷ್ಟೊಂದು ನೋವು ಇಂತಹ ಒಳ್ಳೆಯ ಜೀವಗಳಿಗೆ ಬರಲೇ ಬೇಕಿತ್ತೇ?
ಸೂಚ್ಯವಾಗಿ ಈ ಅಕ್ಕತಂಗಿಯರ ಸಾಧನೆಗಳನ್ನು ನೆನೆಯಬೇಕೆಂದರೆ-
ಶಾರದಾ ಭಟ್: ಮಹಿಳೆಯ ಸಾಮಾಜಿಕ ಸಮಸ್ಯೆಗಳಿಗಾಗಿ ‘ಅಭಿಯಾನ ಪ್ರತಿಷ್ಠಾನ’ದ ಮೂಲಕ ಕ್ರಿಯಾಶೀಲರಾಗಿದ್ದರು. ಪಯಣ, ಪಲಾಯನ, ಪರಿಭ್ರಮಣ, ಪದರುಗಳು ಕಾದಂಬರಿಗಳು, ಸಾತತ್ತೆಗೊಂದು ಸನ್ಮಾನ, ಸೆಕ್ರೆಟರಿ ಸಾಹೇಬರ ಹೆಂಡತಿ ಮತ್ತು ಇತರ ಕಥೆಗಳು ಸೇರಿದಂತೆ ಕೊಂಕಣಿಯಲ್ಲೂ ‘ಅಸ್ತಮಾ’ ಎಂಬ ಕಾದಂಬರಿ ಬರೆದರು. 20ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ‘ವಾರ್ತಾಭಾರತಿ’ಯ ‘ಉತ್ತರೆಯ ಅಳಲು’ ಎಂಬ ಅಂಕಣ ಶಾರದಾ ಭಟ್‌ರವರ ಮಾನವಪರ ದಿಟ್ಟ ನಿಲುವಿಗೆ ಸಾಕ್ಷಿಯಾಗಿತ್ತು. ಅತ್ಯುತ್ತಮ ಸಂಘಟಕ ಶಕ್ತಿ ಅವರಿಗಿತ್ತು. 10 ವರ್ಷಗಳ ಕಾಲ ‘ಚಡಗ ಪ್ರಶಸ್ತಿ’ ವಿಭಾಗದ ಸಂಚಾಲಕರಾಗಿ ಯಶಸ್ವಿಯಾಗಿ ದುಡಿದ್ದರು. ಇವರ ಸಾಧನೆಗೆ ಕುಂದಣ ವಿಟ್ಟಂತೆ ಕಾಂತಾವರ ಕನ್ನಡ ಸಂಘದ ಗೌರವ ಪ್ರಶಸ್ತಿ ದೊರೆತಿದೆ. ಬಡವರ-ದುರ್ಬಲರ ಪರವಾಗಿ ಶಾರದಾ ಭಟ್ ಧ್ವನಿ ಇದ್ದೇ ಇರುತ್ತಿತ್ತು. ಆಕಾಶವಾಣಿಗೂ ಸ್ತ್ರೀ ಶೋಷಣೆ ವಿರುದ್ಧ ನಾಟಕ ಬರೆದಿದ್ದರು.
ತಾರಾ ಭಟ್: ತಾರಾ ಭಟ್ ವ್ಯಕ್ತಿತ್ವ ತಂಗಿ ಶಾರದಾ ಭಟ್ ಜೊತೆ ಬೆರೆತು ಇವರಿಬ್ಬರದೂ ಏಕಕಂಠವಾಗಿತ್ತೆಂದರೆ ಅತಿಶಯೋಕ್ತಿಯಲ್ಲ. ಅವರು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡುವ ನುರಿತ ಕಾಯಕದಲ್ಲೂ ತೊಡಗಿದ್ದರು. ಲೋಹಿಯಾ ಪ್ರಕಾಶನದಿಂದ ಪ್ರಕಟವಾಗಿ ಎರಡು ಮುದ್ರಣಗಳನ್ನು ಕಂಡು ಪ್ರಸಿದ್ಧವಾಗಿ, ಇವರಿಗೆ ಯಶಸ್ಸನ್ನೂ ವರ್ಧಮಾನ ಪ್ರಶಸ್ತಿಯನ್ನೂ ತಂದುಕೊಟ್ಟು ಇಂಗ್ಲಿಷ್‌ಗೂ ಅನುವಾದವಾಗಿರುವ ಇವರ ಕೃತಿ ‘ಲೋಟಸ್ ಪಾಂಡ್’ ಇವರ ಕ್ರಿಯಾಶೀಲತೆಗೆ, ಮನೋಧರ್ಮಕ್ಕೆ ಸಾಕ್ಷಿಯಾಗಿದೆ. ಹಿರಿಯ ವಿಮರ್ಶಕ ಜಿ. ರಾಜಶೇಖರ್ ಈ ಕಾದಂಬರಿಗೆ ಬರೆದಿರುವ ಮುನ್ನುಡಿ ಮಾತುಗಳು ಈ ಕಾದಂಬರಿಯ ಸ್ತ್ರೀಪರ ಕಾಳಜಿಯ ಒಳನೋಟವನ್ನು ಸಾರ್ವಕಾಲಿಕವಾಗಿ ಬಿಂಬಿಸುತ್ತವೆ-‘‘ಲೋಟಸ್ ಪಾಂಡ್ ಕಾದಂಬರಿ ಹೆಣ್ಣಿನ ಸ್ಥಿತಿಯನ್ನು ಶೋಧಿಸುವುದು ಬರೀ ಭಾವುಕತೆಯ ನೆಲೆಗಳಲ್ಲಿ ಅಲ್ಲ. ಲೇಖಕಿಯ ಗ್ರಹಿಕೆಯನ್ನು ಸ್ತ್ರೀವಾದಿ ವೈಚಾರಿಕತೆ ಪ್ರಭಾವಿಸಿ ರುವುದನ್ನು ಸ್ಪಷ್ಟವಾಗಿ ಇಲ್ಲಿ ಗುರುತಿಸಬಹುದಾಗಿದೆ. ಈ ಕಾದಂಬರಿಯಲ್ಲಿ ಹೆಣ್ಣಿನ ದೇಹವೇ ಅವಳಿಗೆ ಅನಿವಾರ್ಯವಾಗಿ ಬಂದೊದಗಿರುವ ವಿಧಿ ಮತ್ತು ಸದಾ ಎಚ್ಚರದಲ್ಲಿ ರಕ್ಷಿಸಿಕೊಳ್ಳಬೇಕಾದ ಕ್ಷೇತ್ರ; ಬಿಡುಗಡೆಯಿಲ್ಲದ ಪಾಡು ಅದು. ಹೆಣ್ಣಿನ ಈ ಅಸಹಾಯಕತೆ ಮಾತ್ರ ಇಲ್ಲಿ ಸಿರಿವಂತರ ಕಾಲನಿ, ಗಾರ್ಡನ್ ವ್ಯೆ ಮತ್ತು ಅದರ ಪಕ್ಕಗಳಲ್ಲಿ ಇರುವ ಕೊಳಗೇರಿಗಳಿಗೆ ಇರುವ ಸಮಾನ ಗುಣ ಎಂಬುದು ಈ ಸ್ಥಿತಿಯ ವ್ಯಂಗ್ಯ. ಪ್ರತಿಷ್ಠಿತ ಮಹಿಳೆ ಕೃಪಾಳ ಮನಸ್ಸಿನ ಮೇಲೆ ನಡೆಯುವ ದಾಳಿ ಮತ್ತು ಕೊಂಪೆಯ ಹಸುಳೆ, ಚಾಮಿಯ ಮೇಲೆ ಎರಗಿದ ಹಿಂಸೆ ಎರಡರ ಮೂಲ ವೂ ಗಂಡಿನ ಆಕ್ರಮಣ ಒಂದೇ.’’ ಹೀಗೆ ತಮ್ಮ ಕಾದಂಬರಿ ಮೂಲಕ ಸ್ತ್ರೀ ದೌರ್ಜನ್ಯದ ವಿರುದ್ಧ ಸಿಡಿದಿರುವ ತಾರಾ ಭಟ್ ‘ಗಾಳಿಯೊಂದಿಗಿನ ಮೌನ’ ಎಂಬ ಕಥಾ ಸಂಕಲನ, ‘ಸರ್ವಾಧಿಕಾರಿ’ ನಾಟಕವನ್ನೂ ಬರೆದಿದ್ದಾರೆ.
ಹೀಗೆ ತಾರಾ ಮತ್ತು ಶಾರದಾ ಎಂಬ ಕುಸುಮಗಳು ಸಮಾಜಕ್ಕೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ಕೊಟ್ಟು ಸಾರ್ಥಕವಾಗಿ ನಿರ್ಗಮಿಸಿವೆ. ಇವರಿಬ್ಬರ ಮಾನವ ಪರ ನಿಲುವುಗಳ ಸಾಹಿತ್ಯ ಕೃತಿಗಳು ಮರುಮುದ್ರಣಗೊಂಡು, ವಿಮರ್ಶೆಗೊಳಪಟ್ಟು ಇವರುಗಳ ಹೆಸರಿನಲ್ಲಿ ಸಾಮಾಜಿಕ-ಸಾಹಿತ್ಯ ಸಂಘಟನೆಗಳ ಮೂಲಕ ನೆನಪಿನ ಕಾರ್ಯಕ್ರಮಗಳು ನಡೆದು ಈ ಹಿರಿಯ ಜೀವಗಳ ಜೀವಿತೋದ್ದೇಶದ ದಿಕ್ಸೂಚಿಯನ್ನು ನಾವು ಉಳಿದವರು ಮುನ್ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಈ ಅಕ್ಕತಂಗಿಯರ ಬಂಧುಗಳಾಗಿ ಶಿವಮೊಗ್ಗದಲ್ಲಿರುವ ಅಜಯ್ ಶೆಣೈ ಮತ್ತು ಶ್ರೀಮತಿ ಜಯಶೀಲ ಪೈ ಅವರುಗಳನ್ನು ಸ್ಮರಿಸಬೇಕು. ಇವರುಗಳು ಈ ಸಹೋದರಿಯರ ಅಕ್ಕನ ಮಕ್ಕಳು. ಅವರುಗಳ ಬಗ್ಗೆ ಕಾಳಜಿ ವಹಿಸಿ ಅವರ ಅಂತಿಮ ವಿಧಿಯನ್ನು ಗೌರವಯುತವಾಗಿ ನೆರವೇರಿಸಿ ದರು. ಮುಂದೆ ಈ ಸಹೋದರಿಯರ ಮನೆಯಲ್ಲಿರುವ ಅವರ ಕೃತಿಗಳನ್ನು ಒದಗಿಸುವ ಭರವಸೆ ನೀಡಿದ್ದಾರೆ.
ತಮ್ಮ ಮೃತದೇಹಗಳನ್ನು ಕೆಎಂಸಿ ಆಸ್ಪತ್ರೆಗೆ ದಾನ ಮಾಡಿ, ‘ಧನ್ಯವಾಯಿತು ಹುಟ್ಟು ಸಾವಿನಲ್ಲಿ’ ಎಂಬ ಕವಿವಾಣಿಗೆ ಜೀವ ತುಂಬಿರುವ ಅಕ್ಕ-ತಂಗಿಯರ ಹೆಸರುಗಳು ಚಿರಕಾಲವಿರಲಿ ಎಂದು ಆಶಿಸುತ್ತೇನೆ.