ಕಾಂಗ್ರೆಸ್ ಗ್ಯಾರಂಟಿ ಕೊಟ್ಟರೆ ದಿವಾಳಿ, ಬಿಜೆಪಿ ಕೊಟ್ಟರೆ ದೀಪಾವಳಿ !
► ಜನರಿಗೆ ಕೊಡೋದನ್ನು ವಿರೋಧಿಸುವ ಜನ ವಿರೋಧಿ ಬಿಜೆಪಿ ► "ಫ್ರೀ ಸಾಕಪ್ಪ" ಎಂದು ಜನರನ್ನೇ ಜರೆಯುತ್ತಿರುವ ಬಿಜೆಪಿ
ಸಾಂದರ್ಭಿಕ ಚಿತ್ರ
ಕಳೆದ ವಿಧಾನಸಭೆ ಚುನಾವಣೆಯ ಹೊತ್ತಿನಿಂದಲೂ ಕಾಂಗ್ರೆಸ್ ವಿರುದ್ದ ಟೀಕಿಸುವುದಕ್ಕೆ ಬಿಜೆಪಿ ಗುರಿ ಮಾಡುತ್ತಿರುವುದು ಕಾಂಗ್ರೆಸ್ ಗ್ಯಾರಂಟಿಯನ್ನು. ರಾಜ್ಯ ಬಿಜೆಪಿ ನಾಯಕರ ದುರ್ದೆಸೆ ಯಾವ ಮಟ್ಟಕ್ಕೆ ಕುಸಿದಿದೆಯೆಂದರೆ , ಅಲ್ಲಿ ಪ್ರಧಾನಿ ಮೋದಿ, ಮೋದಿ ಕೀ ಗ್ಯಾರಂಟಿ ಅಂತ ಜಾಹೀರಾತು ಬಿಡುಗಡೆ ಮಾಡಿ ಜನರನ್ನು ಸೆಳೆಯುತ್ತಿದ್ದರೆ, ಇಲ್ಲಿ ಬಿಜೆಪಿ ಮುಖಂಡರು ಕಾಂಗ್ರೆಸ್ ಗ್ಯಾರಂಟಿಯಿಂದ ಆರ್ಥಿಕತೆ ಹಾಳಾಗುತ್ತಿದೆ ಎಂದು ಗೋಳಾಡುತ್ತಿದ್ದಾರೆ.
ಇವರ ಈ ದ್ವಂದ್ವವನ್ನು ನೋಡಿ ಊಸರವಳ್ಳಿಯೂ ನಾಚಿಕೆಯಿಂದ ತಲೆ ತಗ್ಗಿಸಿದೆ. ಮೊದಲು ಕಾಂಗ್ರೆಸ್ ಗ್ಯಾರಂಟಿಯಿಂದ ರಾಜ್ಯ ದಿವಾಳಿಯಾಗುತ್ತದೆ, ಅಭಿವೃದ್ಧಿ ನಿಂತು ಹೋಗುತ್ತದೆ ಎಂದವರು ಇವರೇ. ತಮಾಷೆಯೆಂದರೆ, ಅದೇ ಕಾಂಗ್ರೆಸ್ ಗ್ಯಾರಂಟಿಗಳನ್ನು ಕಾಪಿ ಮಾಡಿ ಮೋದಿ ಕಿ ಗ್ಯಾರಂಟಿ ಎಂದು ಘೋಷಿಸಿ ಪಂಚ ರಾಜ್ಯ ಚುನಾವಣೆಯಲ್ಲಿ ತಾವೇ ಪೈಪೋಟಿಗಿಳಿದರು.
ಅದೇ ಗ್ಯಾರಂಟಿ ತೋರಿಸಿ ಅಲ್ಲಿ ಗೆದ್ದ ಮೇಲೆ ಈಗ ಮತ್ತೆ ಇಲ್ಲಿ " ಫ್ರೀ ಸಾಕಪ್ಪ, ಅಭಿವೃದ್ಧಿ ಮಾಡಪ್ಪಾ " ಎಂದು ಹೇಳುತ್ತಾ ಊರೂರು ತಿರುಗುತ್ತಿದ್ದಾರೆ. ಅಂದರೆ ಏನರ್ಥ?. ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಮಾಡಿದರೆ ರಾಜ್ಯ ದಿವಾಳಿಯಾಗುತ್ತದೆ. ಆದರೆ ಅದೇ ಬಿಜೆಪಿ ಹಾಗು ಮೋದಿ ಕಿ ಗ್ಯಾರಂಟಿಯಿಂದ ದೇಶ ಸಮೃದ್ಧವಾಗುತ್ತದೆ.
ಇದ್ಯಾವ ಲಾಜಿಕ್ಕು? ಇದ್ಯಾವ ರೀತಿಯ ರಾಜಕೀಯ?. ತಮ್ಮ ಈ ನಡೆಯೇ ಹಾಸ್ತಾಸ್ಪದ ಅನ್ನೋದು ಕೂಡ ಈ ಬಿಜೆಪಿಯವರಿಗೆ ಅನ್ನಿಸುತ್ತಿಲ್ಲವೆ? ಇದೆಂತಹ ಸೋಗಲಾಡಿತನ ?. ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಮಾಡಿದಾಗ ಅಪಪ್ರಚಾರ ಮಾಡಿದವರೇ ಇವರು. ಆಮೇಲೆ ಅದನ್ನೇ ಕಾಪಿ ಮಾಡಿ ಮೋದಿ ಕಿ ಗ್ಯಾರಂಟಿ ಅಂತ ಜನರ ಮುಂದೆ ಹೋದವರೂ ಇವರೇ.
ಕಾಂಗ್ರೆಸ್ಅನ್ನೇ ಕಾಪಿ ಮಾಡಿದವರು ಮತ್ತೆ ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ಗ್ಯಾರಂಟಿಯಿಂದ ಎಲ್ಲ ಹಾಳಾಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಿರುವುದು ಎಷ್ಟು ಕೆಟ್ಟ ರಾಜಕೀಯವಲ್ಲವೆ?. ಈ ಹಿಪಾಕ್ರಸಿಗೆ ಮಿತಿಯೇ ಇಲ್ವಾ?. ಜನರ ಕೈಗೆ ಹಣ ಹೋದರೆ, ಅವರಿಗೆ ಅಕ್ಕಿ ಧಾನ್ಯ ಸಿಕ್ಕಿದ್ರೆ ನಾಡು ಹಾಳಾಗುತ್ತೆ ಅನ್ನೋದು ಯಾವ ಬಗೆಯ ತರ್ಕ ? ಅದೆಂತಹ ಹಾಳು ರಾಜಕೀಯ?.
ಜನರಿಂದ ತೆರಿಗೆ, ದಂಡ ಇನ್ನೊಂದು ಅಂತ ವಸೂಲಿ ಮಾಡಿ ಆಪ್ತ ಉದ್ಯಮಿಗಳಿಗೆ ವಿನಾಯ್ತಿ ಕೊಡುವುದು ಯಾವ ಘನ ರಾಜಕೀಯ?. ಮಾತೆತ್ತಿದರೆ ಕಾಂಗ್ರೆಸ್ ಗ್ಯಾರಂಟಿಗಳ ವಿಚಾರವನ್ನೇ ತೆಗೆದುಕೊಂಡು ಬಂದು ಕಂಡಕಂಡದ್ದಕ್ಕೆಲ್ಲ ಲಿಂಕ್ ಮಾಡುವುದು ಬಿಜೆಪಿ ರಾಜ್ಯ ನಾಯಕರಿಗಂತೂ ಚಾಳಿಯೇ ಆಗಿಬಿಟ್ಟಿದೆ.
ಪಕ್ಷದ ನಾಯಕರಿಂದಲೇ ಭಾರೀ ವಿರೋಧ ಎದುರಿಸುತ್ತಿರೋ ವಿಪಕ್ಷ ನಾಯಕ ಆರ್ ಅಶೋಕ್ ಇನ್ನು ಬೇರೆ ಹೇಗೆ ಯೋಚಿಸಿಯಾರು? ಅವರೂ ಅದನ್ನೇ ಮಾಡುತ್ತಿದ್ದಾರೆ. ಅವರ ಪ್ರಕಾರ, ಗ್ಯಾರಂಟಿ ಯೋಜನೆ ಅನುಷ್ಠಾನದಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆಯಂತೆ. ಮೊನ್ನೆಯ ಚುನಾವಣೆಗಳಲ್ಲಿ ಗೆದ್ದ ರಾಜ್ಯಗಳಲ್ಲಿ ಮೋದಿ ಕಿ ಗ್ಯಾರಂಟಿಗಳಿಂದ ಆರ್ಥಿಕತೆ ಹಾಳಾಯಿತೊ ಅಥವಾ ಅವರೇ ಬಡಾಯಿ ಕೊಚ್ಚಿಕೊಳ್ಳುವ ಹಾಗೆ ಸಮೃದ್ಧವಾಯಿತೊ ಎಂದು ಆರ್ ಅಶೋಕ್ ಸ್ಟಡಿ ಮಾಡಿದ್ಧಾರೆಯೆ?.
ಅವರ ಪ್ರಕಾರ, ಲೋಕಸಭಾ ಚುನಾವಣೆಯ ನಂತರ ಉಚಿತ ಯೋಜನೆಗಳೆಲ್ಲ ನಿಂತುಹೋಗುತ್ತವಂತೆ. ಅಂದ್ರೆ ಜನರಿಗೆ ಏನಾದರೂ ಉಪಕಾರ ಆಗುತ್ತಿದ್ದರೆ ಅದನ್ನು ನಿಲ್ಲಿಸೋದೇ ಇವರ ಆದ್ಯತೆನಾ ?. ಕರ್ನಾಟಕ ವಿಧಾನಸಭೆ ಚುನಾವಣೆಯ ಸಂದರ್ಭವನ್ನು ನೆನಪಿಸಿಕೊಳ್ಳಿ.ಆಗ ಕಾಂಗ್ರೆಸ್ ಗ್ಯಾರಂಟಿಗಳನ್ನು ಘೋಷಣೆ ಮಾಡಿದಾಗ ಇದೇ ಬಿಜೆಪಿಯವರು ಕಾಂಗ್ರೆಸ್ ಗೆಲ್ಲುವುದೇ ಗ್ಯಾರಂಟಿಯಿಲ್ಲ, ಇನ್ನು ಜನರಿಗೇನು ಗ್ಯಾರಂಟಿ ಕೊಡುತ್ತದೆ? ಮೊದಲು ತಾನು ಗೆಲ್ಲೋದನ್ನು ಗ್ಯಾರಂಟಿ ಮಾಡಿಕೊಳ್ಳಲಿ ಎಂದು ಲೇವಡಿ ಮಾಡಿದ್ದರು.
ಮೋದಿಯವರೂ ಕಾಂಗ್ರೆಸ್ ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗಲಿದೆ ಎಂದು ಟೀಕಿಸಿದ್ದರು. ಆದಾದ ಬಳಿಕ ಕಾಂಗ್ರೆಸ್ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು. ಒಂದು ವಾರ ಕಳೆಯುವುದರೊಳಗೇ ಮತ್ತೆ ಬಿಜೆಪಿಯವರ ಅಪಪ್ರಚಾರ ಶುರುವಾಗಿತ್ತು. ಗೆಲ್ಲೋದಕ್ಕೆ ಮಾತ್ರವೇ ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಮಾಡಿದೆ, ಅದು ಯಾವ ಗ್ಯಾರಂಟಿಯನ್ನೂ ಈಡೇರಿಸೋದಿಲ್ಲ ಎಂದು ಅಪಪ್ರಚಾರ ಶುರುವಾಗಿತ್ತು.
ಆದರೆ ಅಧಿಕಾರಕ್ಕೆ ಬಂದ 20 ದಿನಗಳಲ್ಲೇ ಕಾಂಗ್ರೆಸ್ ಜನರಿಗೆ ಕೊಟ್ಟ ಮಾತಿನಂತೆ ಎಲ್ಲ ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸಿ ಆದೇಶ ಹೊರಡಿಸಿತು. ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿಯಾಗಿ ಬೇಕಿರುವ ಒಂದೂವರೆ ಲಕ್ಷ ಟನ್ ಅಕ್ಕಿಯನ್ನು ಹಣ ಕೊಟ್ಟು ಕೇಂದ್ರದಿಂದ ಖರೀದಿಸಲು ರಾಜ್ಯ ಮುಂದಾದರೂ, ಕೇಂದ್ರ ಅದಕ್ಕೆ ಅಡ್ಡಗಾಲು ಹಾಕಿತು.
ಆಗಲೂ ಅದಕ್ಕೊಂದು ಪರ್ಯಾಯ ವ್ಯವಸ್ಥೆ ಮಾಡಿ, ಜನರಿಗೆ ಕೊಟ್ಟ ಮಾತನ್ನು ಕಾಂಗ್ರೆಸ್ ಸರ್ಕಾರ ಉಳಿಸಿಕೊಂಡಿತು. ಇದರ ನಡುವೆಯೇ, ಹೇಳಿದಷ್ಟು ಅಕ್ಕಿ ಕೊಡದಿದ್ದರೆ ಪ್ರತಿಭಟನೆ ಮಾಡುತ್ತೇವೆ ಎಂದು ಮಾಜಿ ಸಿಎಂ ಬೊಮ್ಮಾಯಿ ಸೇರಿದಂತೆ ಇದೇ ಬಿಜೆಪಿ ನಾಯಕರು ಹೇಳಲಾರಂಭಿಸಿದ್ದರು.
ಎಷ್ಟು ಹಾಸ್ಯಾಸ್ಪದ ನೋಡಿ. ಇವರದೇ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಬಡವರಿಗೆ ಕೊಡಲು ಸರ್ಕಾರ ಬಯಸಿರೋ ಅಕ್ಕಿಯನ್ನು ನೂರಾರು ಲಕ್ಷ ಟನ್ ಹೆಚ್ಚುವರಿ ದಾಸ್ತಾನು ಬಿದ್ದಿದ್ದರೂ ಕೊಡಲಿಲ್ಲ. ಬೇಕೆಂತಲೇ ಬೇಡದ ಆದೇಶ ಹೊರಡಿಸಿ ಅಡ್ಡಗಾಲು ಹಾಕಿತು. ಅದರ ಬಗ್ಗೆ ಮಾತಾಡಲು ಧೈರ್ಯ ಇಲ್ಲದ ಇವರು ಕಾಂಗ್ರೆಸ್ ಸರ್ಕಾರದ ವಿರುದ್ದ ಪ್ರತಿಭಟನೆಯ ಮಾತಾಡುತ್ತಿದ್ದರು.
ಸರ್ಕಾರದ ವಿರುದ್ಧ ಅಪಪ್ರಚಾರ ಹಬ್ಬಿಸುವುದರಲ್ಲಿ ಇವರು ಪರಮ ನಿಪುಣರು.ಯಾಕೆಂದರೆ ಬಿಜೆಪಿಯವರಿಗೆ ಗೊತ್ತಿರೋದು ಅದು ಮಾತ್ರ. ಜನರ ಹಾದಿ ತಪ್ಪಿಸುವ ಕೆಲಸ. ಚುನಾವಣೆಯಲ್ಲಿ ಹೀನಾಯವಾಗಿ ಸೋತ ಕೂಡಲೇ ಹತಾಶರಾಗಿ ಗ್ಯಾರಂಟಿ ವಿರುದ್ಧ ಮುಗಿಬಿದ್ದರು.
ಯಾರೂ ವಿದ್ಯುತ್ ಬಿಲ್ ಕಟ್ಟಬೇಡಿ, ಬಸ್ಸಲ್ಲಿ ಟಿಕೆಟ್ ತೇಗೋಬೇಡಿ ಎಂದು ಜನರನ್ನು ಎತ್ತಿಕಟ್ಟತೊಡಗಿದರು. ರಾಜ್ಯ ಸರ್ಕಾರವನ್ನು ನಡೆಸಿದ್ದವರು, ರಾಷ್ಟ್ರೀಯ ಪಕ್ಷವೊಂದರ ನಾಯಕರು ಆಡುವ ಮಾತುಗಳಾಗಿದ್ದವೆ ಅವು?. ಈಗಲೂ ಅವರಿಗೆ ಬುದ್ಧಿ ಬಂದಂತಿಲ್ಲ. ಜನ ತಮ್ಮನ್ನೇಕೆ ಮನೆಗೆ ಕಳಿಸಿದರು ಎಂಬುದು ಈಗಲೂ ಅವರಿಗೆ ಅರ್ಥವಾಗುತ್ತಿಲ್ಲ.
ನಿಜವಾಗಿಯೂ ಜನರ ಬಗ್ಗೆ ಕಾಳಜಿ ಇದ್ದಿದ್ದರೆ, ಅವತ್ತೇ ಸರ್ಕಾರ ಬಡವರಿಗೆ ಕೊಡುವ ಅಕ್ಕಿಯಲ್ಲಿ ತಮ್ಮದೂ ಪಾಲಿರಲಿ ಎಂದುಕೊಂಡಾದರೂ,
ನಾಳೆ ಚುನಾವಣೆ ವೇಳೆ, ಅಕ್ಕಿ ಕೊಟ್ಟದ್ದು ತಾವು ಎಂದು ಹೇಳಿಕೊಳ್ಳುವುದಕ್ಕಾದರೂ ಕೊಡುವ ಮನಸ್ಸು ಮಾಡುತ್ತಿದ್ದರು. ಆದರೆ ಅವರದು ಸೇಡಿನ ರಾಜಕಾರಣ ಮಾತ್ರ. ಡಬಲ್ ಎಂಜಿನ್ ಸರ್ಕಾರದ ಹಲ್ಲು ಕಿತ್ತು ಗುಜರಿಗೆ ಎಸೆದ ಜನರ ವಿರುದ್ಧ ಸೇಡಿನ ಮನೋಭಾವ.
ಡಬಲ್ ಎಂಜಿನ್ ಸರ್ಕಾರವಾಗಿ ಜನರಿಗೆ ಏನನ್ನೂ ಮಾಡದವರು, ಗ್ಯಾರಂಟಿ ವಿರುದ್ಧ ಸೇಡು ತೀರಿಸಿಕೊಳ್ಳುವುದರಲ್ಲಿ ಮಾತ್ರ ಕಡಿಮೆಯಿಲ್ಲ.
ಗುಜರಾತ್ ಮಾಡೆಲ್, ಯುಪಿ ಮಾಡೆಲ್ ಎಂದೆಲ್ಲ ಬಿಜೆಪಿ ಬಳಸುತ್ತಿತ್ತು. ಆದರೆ ಕಡೆಗೆ ಅವರಿಗೆ ಕಾಂಗ್ರೆಸ್ನ ಕರ್ನಾಟಕ ಮಾಡೆಲ್ ಬೇಕಾಯಿತು.
ಅದನ್ನು ಇಟ್ಟುಕೊಂಡು ಮೊನ್ನೆಯ ಮೂರು ರಾಜ್ಯಗಳ ವಿಧಾನಸಭೆ ಚುನಾವಣೆ ಗೆದ್ದರು. ಮಧ್ಯಪ್ರದೇಶದಲ್ಲಂತೂ ಕಾಂಗ್ರೆಸ್ ಗ್ಯಾರಂಟಿಗಳಿಗೆ ಪೈಪೋಟಿಯನ್ನೇ ನೀಡಿತ್ತು ಬಿಜೆಪಿ.
ಕರ್ನಾಟಕದಲ್ಲಿ ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಮಾಡಿ ಗೆಲುವನ್ನು ಕಂಡ ಬಳಿಕ ಎಚ್ಚೆತ್ತುಕೊಂಡಿದ್ದ ಮಧ್ಯಪ್ರದೇಶ ಸರ್ಕಾರ, ಅಂಥದೇ ಗ್ಯಾರಂಟಿಗಳ ನಕಲು ಮಾಡಿತ್ತು. ಲಾಡ್ಲಿ ಬೆಹೆನಾ ಯೋಜನೆ ಘೋಷಣೆ ಮಾಡಿ, ಮಹಿಳೆಯರ ಮತ ಸೆಳೆಯೋಕ್ಕೆ ಆಗಲೇ ವೇದಿಕೆ ನಿರ್ಮಿಸಿತ್ತು. ಕಳೆದ ಜೂನ್ನಿಂದಲೇ ಮಹಿಳೆಯರಿಗೆ ಪ್ರತಿ ತಿಂಗಳೂ 1,250 ರೂ ನೀಡುವುದು ಶುರುವಾಗಿತ್ತು. ಗೆದ್ದರೆ ಈ ಮೊತ್ತವನ್ನು 3 ಸಾವಿರ ರೂ ಗೆ ಏರಿಸುವ ಭರವಸೆಯನ್ನೂ ಬಿಜೆಪಿ ಕೊಟ್ಟಿತ್ತು.
ಹಾಗೆಯೇ 500ರೂ ಗೆ ಸಿಲಿಂಡರ್ ಎಂಬ ಕಾಂಗ್ರೆಸ್ ಘೋಷಣೆಗೆ ಪೈಪೋಟಿಯಾಗಿ, ಇನ್ನೂ 50 ರೂ ಇಳಿಸಿ 450 ರೂ. ಗೆ ಸಿಲಿಂಡರ್ ಕೊಡೋದಾಗಿ ಬಿಜೆಪಿ ಹೇಳಿತ್ತು. ಮದುವೆ ವೇಳೆ ಹೆಣ್ಣುಮಕ್ಕಳಿಗೆ 55 ಸಾವಿರ ರೂ. ಹಣ ನೀಡುವುದಾಗಿಯೂ, ಮಹಿಳಾ ಶಿಕ್ಷಣಕ್ಕೆ 25 ಸಾವಿರ ರೂ. ಹಣ ನೀಡೋದಾಗಿಯೂ ಬಿಜೆಪಿ ಹೇಳಿತ್ತು.
ಅಲ್ಲದೆ, ಮಹಿಳೆಯರಿಗೆ ಸಬ್ಸಿಡಿ ದರದಲ್ಲಿ ಸಾಲ ನೀಡುವ ಭರವಸೆಯನ್ನೂ ಬಿಜೆಪಿ ಕೊಟ್ಟಿತ್ತು. ಇವೆಲ್ಲವೂ ಕಾಂಗ್ರೆಸ್ ಪಕ್ಷದ ಭರವಸೆಗಳಿಗೆ ಪ್ರತಿಯಾಗಿಯೇ ಬಿಜೆಪಿ ಕೊಟ್ಟಿದ್ದ ಭರವಸೆಗಳಾಗಿದ್ದವು. ರಾಜಸ್ಥಾನ ಮತ್ತು ಛತ್ತೀಸ್ಗಢದಲ್ಲಿ ಬಿಜೆಪಿ ರೈತರನ್ನು ಗಮನದಲ್ಲಿಟ್ಟುಕೊಂಡು ರೈತರಿಗೆ ನೀಡಿರುವ ಸಹಾಯಧನ ವಿಚಾರ, ಭತ್ತ ಖರೀದಿ ಪ್ರಕ್ರಿಯೆಯಂಥ ಘೋಷಣೆಗಳಿಗೆ ಒತ್ತು ಕೊಟ್ಟಿತ್ತು.
ನೆನಪಿಡಬೇಕು, ಇವೆಲ್ಲವನ್ನೂ ಮಾಡಿದ್ದು ಕರ್ನಾಟಕದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳ ಘೋಷಣೆ ಮಾಡಿದ್ದಾಗ ಜರೆದವರೇ ಆಗಿದ್ದರು. ಮತ್ತು ಕಾಂಗ್ರೆಸ್ ಗ್ಯಾರಂಟಿಗಳನ್ನು ಹೀಗಳೇದವರೇ ಪೈಪೋಟಿಯಿಂದೆಂಬಂತೆ ಗ್ಯಾರಂಟಿ ಘೋಷಣೆ ಮಾಡಿ ಗೆದ್ದೂಬಿಟ್ಟರು.
ಅವರು ಗ್ಯಾರಂಟಿ ಮುಂದಿಟ್ಟುಕೊಂಡರೆ ಅದು ಸಮೃದ್ಧಿ. ಕಾಂಗ್ರೆಸ್ ಗ್ಯಾರಂಟಿಯಿಂದ ಮಾತ್ರ ರಾಜ್ಯ ದಿವಾಳಿ ಎಂಬ ಪುಕಾರು.
ಕಾಂಗ್ರೆಸ್ ಗ್ಯಾರಂಟಿಗಳನ್ನು ಜಾರಿಗೆ ತರುವ ಹೊತ್ತಲ್ಲಿಯೇ ಸಿಎಂ ಸಿದ್ದರಾಮಯ್ಯ ಒಂದು ಮಾತು ಸ್ಪಷ್ಟಪಡಿಸಿದ್ದರು. 14 ಬಜೆಟ್ಗಳನ್ನು ಮಂಡಿಸಿರುವ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಸುದ್ದಿಗೋಷ್ಠಿಯಲ್ಲಿಯೇ ಆರ್ಥಿಕ ಹೊರೆಯಾಗದಂತೆ ಐದೂ ಗ್ಯಾರಂಟಿಗಳನ್ನು ಜಾರಿಗೆ ತರುವುದಾಗಿ ಘೋಷಿಸಿದ್ದರು.
ಆದರೆ ಬಾಯಿಗೆ ಬಂದಂತೆಯೇ ಮಾತನಾಡುವ, ಜನರಲ್ಲಿ ಸರ್ಕಾರದ ಬಗ್ಗೆ ತಪ್ಪು ಭಾವನೆ ಬರುವಂತೆ ಅಪಪ್ರಚಾರ ಮಾಡುವ ಬಿಜೆಪಿಯವರಿಗೆ ಮಾತ್ರ ಇದರ ಬಗ್ಗೆ ಗಮನವಿಲ್ಲ. ಇದ್ದರೂ ಅದನ್ನು ಬೇಕೆಂದೇ ಮರೆಮಾಚುತ್ತಾರೆ ಅವರು. ಮೋದಿ 10 ವರ್ಷ ಆಡಳಿತ ಮಾಡಿದ ಮೆಲೆಯೂ ಈ ದೇಶದ ಜನರ ಸ್ಥಿತಿ ಹೇಗಿದೆ ಎಂಬುದನ್ನು ನೋಡುತ್ತಿದ್ದೇವೆ.
ಹೇಗೆ ದುಡಿದು ತಿನ್ನುವ ಮಂದಿ ತೆರಿಗೆ ಕಟ್ಟುತ್ತಲೇ ಹೈರಾಣಾಗುತ್ತಿದ್ದಾರೆ, ಹೇಗೆ ಕಾರ್ಪೊರೇಟ್ ವಲಯದ ಮಂದಿ ಆರಾಮಾಗಿದ್ದಾರೆ ಎಂಬುದನ್ನು ನೋಡುತ್ತಿದ್ದೇವೆ. ಈ ದೇಶದ ಸಂಪತ್ತಿನ ಬಹುಭಾಗವನ್ನು ಅನುಭವಿಸುತ್ತಿರೋ ಶ್ರೀಮಂತರು ಕಟ್ಟುತ್ತಿರೋದು ಕಡಿಮೆ ತೆರಿಗೆ. ಆದರೆ ದುಡಿದು ತಿನ್ನುವ ಜನಸಾಮಾನ್ಯರದು ಮಾತ್ರ ತೆರಿಗೆ ಕಟ್ಟುವುದರಲ್ಲಿಯೇ ಸುಸ್ತಾಗುವ ಥರದ ಬದುಕು.
ಈ ದೇಶದ ಆರ್ಥಿಕ ವಾಸ್ತವ ಕರಾಳವಾಗಿಬಿಟ್ಟಿದೆ. ಆದರೆ ಬಿಜೆಪಿಯವರು ಅದರ ಬಗ್ಗೆ ಮಾತಾಡದೆ, ಬಿಜೆಪಿಯೇತರ ರಾಜ್ಯಗಳ ವಿಚಾರ ಎತ್ತಿಕೊಂಡು ಕೊಂಕು ತೆಗೆಯೋದರಲ್ಲಿ ನಿರತವಾಗಿವೆ. ಈಗ "ಫ್ರೀ ಸಾಕಪ್ಪ, ಅಭಿವೃದ್ಧಿ ಮಾಡಪ್ಪ" ಎಂಬ ಅಭಿಯಾನವನ್ನು ಕರ್ನಾಟಕ ಬಿಜೆಪಿ ರಾಜ್ಯಾದ್ಯಂತ ಮಾಡೋಕ್ಕೆ ಹೊರಟಿದೆ. ಅಂತೂ ಬಡವರಿಗೆ ಒಂದಿಷ್ಟು ಉಚಿತವಾಗಿ ಕೊಟ್ಟರೆ ಬಿಜೆಪಿಯವರಿಗೆ ಅದೆಷ್ಟು ಹೊಟ್ಟೆಯುರಿ ನೋಡಿ.
ಅದೇ ಇವರ ಅಕ್ಕಪಕ್ಕದಲ್ಲೇ ಇರುವ ಕಾರ್ಪೊರೇಟ್ ವಲಯದ ಮಂದಿ ಕೋಟಿಗಟ್ಟಲೆ ಲೆಕ್ಕದಲ್ಲಿ ಸವಲತ್ತು ಪಡೆಯುತ್ತಾರೆ. ಅದರ ಬಗ್ಗೆ ಇವರಿಗೆ ಬೇಸರವಿಲ್ಲ. ಯಾಕೆಂದರೆ ಅವರೆಲ್ಲ ಇವರಿಗೆ ಬೇಕಾಗಿರೋ ಕುಳಗಳು. ಇವರ ಪ್ರಕಾರ ಬಡವರು ಮಾತ್ರ ಉಚಿತ ಸೌಲಭ್ಯ ಪಡೆದರೆ ಸೋಮಾರಿಗಳಾಗಿ ಹೋಗುತ್ತಾರಂತೆ .
ಅಭಿವೃದ್ಧಿ ಮಾಡೋಕೆ ಹೇಳುತ್ತಿರುವ ಇವರ ಕಾಲದಲ್ಲಿ ಅದೇನು ಅಭಿವೃದ್ಧಿ ಮಾಡಿದ್ದರು ಅಂತ ಹೇಳಿಕೊಳ್ಳೋದಕ್ಕಾದರೂ ಇವರ ಬಳಿ ಏನಾದರೂ ಇದೆಯೆ?. ಆದರೆ 40 ಪರ್ಸೆಂಟ್ ಕಮಿಷನ್ ಮಾತ್ರ ಮಾಡಿದ್ದು ಗುಲ್ಲಾಯಿತು. ಅದು ಬಿಜೆಪಿಯನ್ನು ನುಂಗಿಹಾಕಿಬಿಟ್ಟಿತು. ಬಹುಶಃ ಅಭಿವೃದ್ಧಿ ಬಗ್ಗೆ ದೊಡ್ಡದಾಗಿ ಹೇಳೋ ಈ ಮಂದಿ ಇದನ್ನು ಮರೆತೇಬಿಟ್ಟಿದ್ದಾರಾ ಅಥವಾ ಮರೆತುಹೋಗಲಿ ಎಂದು ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡುತ್ತಿದ್ಧಾರಾ?. ಇವರ ನಾಟಕಕ್ಕೆ ಕೊನೆಯೇ ಇಲ್ಲವೆ?.