ರಾಹುಲ್ ಗಾಂಧಿಯನ್ನು ಖಂಡಿಸುವ ನೈತಿಕತೆ ಬಿಜೆಪಿಗೆ ಇದೆಯೇ ?
► ಬಿಜೆಪಿ ಕೆಟ್ಟ ರಾಜಕೀಯ ಮಾಡದೇ ಇರುವ ಯಾವುದಾದರೂ ಕ್ಷೇತ್ರ ಇದೆಯೇ ? ► ನೆಹರೂ, ಇಂದಿರಾ, ಸೋನಿಯಾ, ರಾಹುಲ್ ಬಗ್ಗೆ ಬಿಜೆಪಿ ಮಾಡಿರುವ ಅಪಪ್ರಚಾರ, ಅವಹೇಳನಕ್ಕೆ ಲೆಕ್ಕವಿದೆಯೇ ?
ರಾಹುಲ್ ಗಾಂಧಿ
ವಿಶ್ವಕಪ್ ಸೋಲಿನ ಕೊರಗಿನಲ್ಲಿ ವ್ಯಾಪಕವಾಗಿ ವ್ಯಕ್ತವಾಗಿದ್ದ 'ಪನೌತಿ' ಎಂಬ ಟೀಕೆಗೆ ಕೇಸರಿ ಪಾಳೆಯವೆಲ್ಲ ಕುದೀತಾ ಇರುವಾಗ ಈ ರಾಹುಲ್ ಗಾಂಧಿಯವರು ಸುಮ್ಮನಾದರೂ ಇರಬಾರದಿತ್ತೆ?. ಭಾರತ ವಿಶ್ವಕಪ್ ಸೋತ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಜನ ಪರೋಕ್ಷವಾಗಿ ಪ್ರಧಾನಿ ಮೋದಿಯನ್ನು ಮತ್ತು ಕೆಲವರು ನೇರವಾಗಿಯೇ ಪನೌತಿ ಎಂದು ಕರೆದಿದ್ದರು.
ಅವರು ಪಂದ್ಯ ವೀಕ್ಷಿಸಲು ಹೋಗಿದ್ದರಿಂದಲೇ ಭಾರತ ಸೋತಿತು, ಅಪಶಕುನ ಎಂಬ ಅರ್ಥದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಜನರು ಟ್ರೋಲ್ ಮಾಡಿದ್ದರು. ಇದರಿಂದಾಗಿ ಬಿಜೆಪಿಯವರಿಗೆ ಸರಿಯಾಗಿಯೇ ಉರಿ ಬಿದ್ದಿತ್ತಾದರೂ ಜನರ ವಿರುದ್ಧ ಮಾತಾಡಲಾರದೆ ಕೈಕೈ ಹೊಸಕಿಕೊಳ್ಳುತ್ತಿದ್ದರು.
ಇಂಥ ಹೊತ್ತಲ್ಲಿ ರಾಹುಲ್ ಗಾಂಧಿಯವರು ಪಿಎಂ ಅಂದರೆ ಪನೌತಿ ಮೋದಿ ಎಂದು ಹೇಳಿ, ಬಿಜೆಪಿಯವರ ಬಾಯಿಗೆ ಬಿದ್ದಿದ್ಧಾರೆ. ಸಾಮಾಜಿಕ ಜಾಲತಾಣದಲ್ಲಿ ಜರೆದಿದ್ದ ಜನರ ವಿರುದ್ಧ ಹರಿಹಾಯಲಾರದೆ ಕಾದಿದ್ದವರು ಈಗ ರಾಹುಲ್ ವಿರುದ್ಧ ಮುಗಿಬಿದ್ದಿದ್ದಾರೆ. ಎಲ್ಲ ಸಿಟ್ಟನ್ನೂ ರಾಹುಲ್ ಮೇಲೆ ತಿರುಗಿಸಿ, ದೇಶದ ಪ್ರಧಾನಿ ಕುರಿತು ಹೀಗೆ ಹೇಳಿರುವುದು ಅತ್ಯಂತ ನಾಚಿಕೆಗೇಡು ಹಾಗು ಅವಹೇಳನಕಾರಿ. ಇದು ಖಂಡನೀಯ ಎಂದು ಬಿಜೆಪಿಯವರು ಹೇಳತೊಡಗಿದ್ದಾರೆ.
ವಿಶ್ವಕಪ್ ಸೋಲಿನ ಬೆನ್ನಿಗೇ ಸೋಷಿಯಲ್ ಮೀಡಿಯಾದಲ್ಲಿ ಪನೌತಿ ಬಹಳಷ್ಟು ಚರ್ಚೆಯಾಗಿದೆ, ಬಳಕೆಯಾಗಿದೆ. ಪ್ರಧಾನಿ ಮೋದಿ ಹೆಸರಿನ ಅಹಮದಾಬಾದ್ ಸ್ಟೇಡಿಯಂನಲ್ಲಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪ್ರಧಾನಿ ಮೋದಿ ಅವರ ಉಪಸ್ಥಿತಿಯಲ್ಲೇ ಭಾರತ ತಂಡ ಸೋತ ನಂತರ ಪನೌತಿ ಎನ್ನುವ ಪದ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ.
ಚಂದ್ರಯಾನ ಯಶಸ್ವಿಯಾಗಿದ್ದು ಹೇಗೆ ಎಂದು ಗೊತ್ತಲ್ವಾ? ಆಗ ಪ್ರಧಾನಿ ವಿದೇಶದಲ್ಲಿದ್ದರು ಅಂತಾನೂ ಬಹಳಷ್ಟು ಮಂದಿ ಹೇಳಿದ್ದಾರೆ. ಇದನ್ನೆಲ್ಲ ಹಲ್ಲುಕಚ್ಚಿ ಸಹಿಸಿಕೊಂಡಿದ್ದ ಬಿಜೆಪಿಯ ಸಿಟ್ಟಿಗೆ ಗುರಿಯಾಗಲು ಯಾರಾದರೊಬ್ಬರು ಬೇಕಿತ್ತು.
ಅದೇ ಹೊತ್ತಿಗೆ ರಾಹುಲ್ ಇಂಥದೊಂದು ವ್ಯಂಗ್ಯ ಮಾಡಿದ್ದಕ್ಕೆ ಬಿಜೆಪಿ ಮಂದಿ ಗರಂ ಆಗಿ ಬಿಟ್ಟಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಕ್ರಿಕೆಟ್ ವಿಶ್ವಕಪ್ ಫೈನಲ್ನಲ್ಲಿ ಭಾರತದ ಸೋಲನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ ಕೂಡ ಅದೇ ಪನೌತಿ ಪದವನ್ನು ಬಳಸಿದರು. "ನಮ್ಮ ಹುಡುಗರು ವಿಶ್ವಕಪ್ ಗೆಲ್ಲೋ ಉತ್ಸಾಹದಲ್ಲಿದ್ದರು. ಅಲ್ಲಿಗೆ ಪನೌತಿ ವ್ಯಕ್ತಿಯೊಬ್ಬರು ಬಂದು ಎಲ್ಲವನ್ನೂ ಹಾಳು ಮಾಡಿದರು" ಎಂದು ರಾಹುಲ್ ವ್ಯಂಗ್ಯವಾಡಿದರು.
"ಒಮ್ಮೊಮ್ಮೆ ಟಿವಿಯಲ್ಲಿ ಬರುವ ಅವರು ಹಿಂದು-ಮುಸ್ಲಿಂ ಎಂದು ಹೇಳುತ್ತಾರೆ. ಅವರು ಕ್ರಿಕೆಟ್ ಮ್ಯಾಚ್ ನೋಡಲು ಹೋಗಿದ್ದರು. ಆದರೆ ಭಾರತ ಸೋತಿತು. ಪಿಎಂ ಅಂದ್ರೆ ಪನೌತಿ ಮೋದಿ" ಎಂದು ರಾಹುಲ್ ಹೇಳಿದರು.
ಈ ವ್ಯಂಗ್ಯದ ಜೊತೆಗೇ, "ಉದ್ಯಮಿ ಗೌತಮ್ ಅದಾನಿ ಅವರು ಜನರ ಜೇಬುಗಳಿಗೆ ಕನ್ನ ಹಾಕುವಾಗ ಮೋದಿ ಜನರ ಗಮನವನ್ನು ಬೇರೆಡೆಗೆ ತಿರುಗಿಸುತ್ತಾರೆ " ಎಂದು ಕೂಡ ರಾಹುಲ್ ಗಾಂಧಿ ಆರೋಪಿಸಿದ್ದು ಬಿಜೆಪಿಯವರನ್ನು ಕೆರಳಿಸಿದೆ. ಕ್ರೀಡೆಯ ಫಲಿತಾಂಶವನ್ನು ಹೀಗೆ ರಾಜಕೀಯಕ್ಕೆ ಎಳೆದು ತರಬಾರದಿತ್ತು ರಾಹುಲ್ ಗಾಂಧಿ. ಅದು ಸಭ್ಯ ವರ್ತನೆ ಅಲ್ಲ. ಹಿರಿಯ ನಾಯಕರಿಗೆ ಇದೆಲ್ಲ ಗೊತ್ತಿರಬೇಕು.
ಆದರೆ... ಹಾಗೆ ಮಾಡಬಾರದು ಎಂದು ರಾಹುಲ್ ಗಾಂಧಿಗೆ ಹೇಳುವ ಒಂದು ಕಾಳಿನಷ್ಟಾದರೂ ನೈತಿಕತೆ ಬಿಜೆಪಿಗೆ ಇದೆಯೇ ಎಂದೂ ಕೇಳಲೇಬೇಕಾಗುತ್ತದೆ. ಎಲ್ಲವನ್ನೂ ರಾಜಕೀಯದ ಜೊತೆಗೆ ಬೆರೆಸಿಯೇ ನೋಡುವುದು ಅದರದ್ದೇ ಚಾಳಿ ಎಂಬುದು ದೇಶಕ್ಕೇ ಗೊತ್ತಿದೆ.
ಒಂದು ವೇಳೆ ಮೊನ್ನೆಯ ಪಂದ್ಯದಲ್ಲಿ ಭಾರತ ಗೆದ್ದಿದ್ದರೆ ಆಗ ಗೆದ್ದವರು ಮುಖ್ಯರಾಗದೆ ಮೋದಿಗೇ ಕ್ರೆಡಿಟ್ ಹೋಗಬೇಕೆಂದು ನಿಸ್ಸಂದೇಹವಾಗಿಯೂ ಇದೇ ಬಿಜೆಪಿಯವರು ರಾಜಕೀಯ ತರುತ್ತಿದ್ದರು. ಯಾರಿಗಾದರೂ ಅದರಲ್ಲಿ ಒಂದಿಷ್ಟಾದರೂ ಸಂಶಯ ಇದೆಯೇ ?. ಕಾಂಗ್ರೆಸ್ ಟೀಕಿಸುವ ಹಾಗೆ, ಮಣಿಪುರದ ಜನರ ಕಷ್ಟ ಕೇಳಲು ಹೋಗಲಾರದೆ ಅಮಾನವೀಯ ಪ್ರತಿಷ್ಠೆ ತೋರುತ್ತಿರುವ ವ್ಯಕ್ತಿಗೆ ಕ್ರಿಕೆಟ್ ಮ್ಯಾಚ್ ನೊಡಲು ಮಾತ್ರ ಸಿಕ್ಕಾಪಟ್ಟೆ ಪುರುಸೊತ್ತಿರುತ್ತದೆ.
ಪ್ರಧಾನಿಯೊಬ್ಬರು ಕ್ರಿಕೆಟ್ ಮ್ಯಾಚ್ ನೋಡಲು ಹೋಗಿ ಕುಳಿತುಕೊಳ್ಳುವ ಅಗತ್ಯವಾದರೂ ಏನಿದೆ ? ಅದು ರಾಜಕೀಯವೇ ಅಲ್ಲವೆ ?. ಇದೇ ಸ್ಟೇಡಿಯಂನಲ್ಲಿ ಇದೇ ಮೋದಿ ಕ್ರಿಕೆಟ್ ಪಂದ್ಯವೊಂದಕ್ಕೆ ಮೊದಲು ಚುನಾವಣಾ ರ್ಯಾಲಿ ಥರಾ ಶೋ ಕೊಟ್ಟು ಕ್ಯಾಮೆರಾಗಳಿಗೆ ಕೈಬೀಸಿದ್ದು ರಾಜಕಾರಣವೇ ಆಗಿರಲಿಲ್ಲವೆ?.
ಕಳೆದ ಹತ್ತು ವರ್ಷಗಳಲ್ಲಿ ಮೋದಿಯಾಗಲೀ, ಬಿಜೆಪಿಯಾಗಲೀ ರಾಜಕೀಯವನ್ನು ಎಳೆದು ತರದೇ ಇದ್ದ ಒಂದಾದರೂ ಕ್ಷೇತ್ರ ಬಾಕಿ ಇದೆಯೇ?. ಪುಲ್ವಾಮಾ ದಾಳಿಯಲ್ಲಿ ಬಲಿಯಾದ ಸೈನಿಕರ ಪಾರ್ಥಿವ ಶರೀರದ ಮುಂದೆಯೂ ಶೋ ಕೊಡುವ ಅತಿ ಕೆಟ್ಟ ರಾಜಕೀಯವನ್ನು ಮಾಡಿದ್ದು ಇವರೇ ಅಲ್ಲವೆ?
ಹುತಾತ್ಮ ಸೈನಿಕರ ದೇಹವನ್ನು ಆದಷ್ಟು ಬೇಗ ಮನೆಯವರಿಗೆ ಬಿಟ್ಟು ಕೊಡದೆ ಅದನ್ನು ದಿಲ್ಲಿಗೆ ತಂದು ಅಲ್ಲಿ ಮೋದೀಜಿ ಬಂದು ದರ್ಶನ ಮಾಡಿ ಅದನ್ನು ಎಲ್ಲ ಚಾನಲ್ ಗಳು ಲೈವ್ ತೋರಿಸಿದ ಮೇಲೆಯೇ ಅದನ್ನು ಕುಟುಂಬದವರಿಗೆ ಬಿಟ್ಟು ಕೊಟ್ಟಿದ್ದಲ್ಲವೇ ? . ನೋಟ್ ಬ್ಯಾನ್ ಹೆಸರಿನಲ್ಲಿ, ವಿದೇಶದಲ್ಲಿನ ಭಾರತೀಯರ ಕಪ್ಪು ಹಣ ವಾಪಸ್ ತರುತ್ತೇವೆಂಬ ನೆಪದಲ್ಲಿ, ಕೋವಿಡ್ ಹೊತ್ತಿನ ಲಾಕ್ಡೌನ್ನಲ್ಲಿ ಇವರು ಮಾಡಿದ್ದು ಕೆಟ್ಟ ರಾಜಕಾರಣವೇ ಆಗಿರಲಿಲ್ಲವೆ?.
ತನಿಖಾ ಏಜನ್ಸಿಗಳ ಬಳಕೆಯಲ್ಲಿ ಇವರ ರಾಜಕಾರಣವೇ ಇಲ್ಲವೆ ? ಚುನಾವಣಾ ಆಯೋಗದಂಥ ಸಂಸ್ಥೆಯಲ್ಲೂ ಇವರು ತಮ್ಮ ರಾಜಕೀಯ ಬಿಡಲಿಲ್ಲ ಅಲ್ವಾ ?. ಕಡೆಗೆ ಸುಪ್ರೀಂ ಕೋರ್ಟ್ ಬಗ್ಗೆ, ಕೊಲಿಜಿಯಂ ಅಂಥ ವ್ಯವಸ್ಥೆಯ ಬಗ್ಗೆ ಮಾತನಾಡತೊಡಗಿದ್ದು ಕೂಡ ಮತ್ತೇನು ?
ಅಂಬೇಡ್ಕರ್ ಹೆಸರು ಹೇಳಿಕೊಂಡು, ಗಾಂಧೀಜಿ ಮಾತುಗಳನ್ನು ಕೋಟ್ ಮಾಡುತ್ತ ಇವರು ಮಾಡುತ್ತಿರುವುದು ತಮ್ಮ ಬೇಳೆ ಬೇಯಿಸಿಕೊಳ್ಳುವ ರಾಜಕಾರಣವನ್ನೇ ಅಲ್ಲವೆ?
ಅಂಬೇಡ್ಕರ್ ಮತ್ತು ಗಾಂಧಿಯ ನಡುವಿನ ಭಿನ್ನಮತದ ಬಗ್ಗೆ ಎತ್ತಿ ಎತ್ತಿ ಮಾತನಾಡುವ ಈ ಮಂದಿ, ಅದೇ ಅಂಬೇಡ್ಕರ್ ಆರೆಸ್ಸೆಸ್ ಬಗ್ಗೆ, ಆರೆಸೆಸ್ ಮಂದಿಯ ಬಗ್ಗೆ, ಇವರೆಲ್ಲ ಆರಾಧಿಸುವ ಮನುವಿನ ಬಗ್ಗೆ, ಇವರು ಪ್ರತಿಪಾದಿಸುವ ಹಿಂದುತ್ವದ ಬಗ್ಗೆ ಆಡಿದ್ದ ಮಾತುಗಳ ವಿಚಾರಕ್ಕೆ ಅಪ್ಪಿತಪ್ಪಿಯೂ ಏಕೆ ಹೋಗುವುದಿಲ್ಲ? ಅದು ರಾಜಕಾರಣವಲ್ಲವೆ?
ಕಡೆಗೆ ಜಾತಿ, ಧರ್ಮವನ್ನೂ ಬಿಡದೆ ಇವರು ಮಾಡುತ್ತಿರುವ ರಾಜಕಾರಣದ ಬಗ್ಗೆ ಈ ದೇಶದ ಜನಕ್ಕೆ ಗೊತ್ತಿಲ್ಲವೆ ?. ಇನ್ನು, ಕಳೆದ ಹತ್ತು ವರ್ಷಗಳಲ್ಲಿ ಮೋದಿಗೆ ಶ್ರೇಯಸ್ಸು, ಕ್ರೆಡಿಟ್ಟು ಕೊಡದ ಈ ದೇಶದ ಯಾವುದಾದರೂ ಸಾಧನೆ ಇದೆಯೇ ಎಂದು ಕೇಳಿಕೊಂಡರೆ, ಅಬ್ಬಬ್ಬಾ ಯಾವುದನ್ನೂ ಮೋದಿ ಮಾಡಿದ್ದಲ್ಲ ಎಂದು ಹೇಳೋ ಹಾಗೆಯೇ ಇಲ್ಲ.
ಇಸ್ರೋದವರು ಚಂದ್ರಯಾನ ಎಂದರೆ ಅಲ್ಲೂ ಮೋದಿ ಹಾಜರ್. ಚಂದ್ರಯಾನ ಗೆದ್ದಿತು ಎಂದಾಕ್ಷಣ ವಿದೇಶದಲ್ಲಿದ್ದರೂ ಇಲ್ಲಿ ಚಂದ್ರಯಾನದ ಲೈವ್ ಸ್ಕ್ರೀನ್ ನಲ್ಲಿ ಅವರೇ ವಿಜೃಂಭಿಸೋದು.
ಅಲ್ಲೊಂದು ರಸ್ತೆ, ಸೇತುವೆ, ಮಾಡಿದರೂ ಅದರ ಉದ್ಘಾಟನೆಗೆ ಅವರೇ ಬಂದು ಇಲ್ಲದ ಜನರತ್ತ ಕೈಬೀಸೋದು. ಮತ್ತೆಲ್ಲೋ ಒಂದು ಪ್ರತಿಮೆ ಉದ್ಘಾಟನೆ ಎಂದರೆ ಅಲ್ಲಿಯೂ ಪ್ರತ್ಯಕ್ಷರಾಗೋದು. ಸುರಂಗ ಮಾರ್ಗ ವೀಕ್ಷಣೆಗೂ ಹೋಗಿ ಜನರೇ ಇಲ್ಲದಲ್ಲಿ ಕ್ಯಾಮೆರಾಗಳಿಗೆ ಕೈಬೀಸೋದೇ ಬೀಸೋದು. ಅದನ್ನು ನೋಡುತ್ತಿದ್ದವರಿಗೇ ಕೈಸೋತಂತಾಗುವಷ್ಟು ಕೈಬೀಸೋದು.
ನೂತನ ಸಂಸತ್ ಭವನ ಕಟ್ಟಡ ಕಾಮಗಾರಿ ನಡೆಯುತ್ತಿದ್ದರೆ ಅಲ್ಲಿಯೂ ಹೆಲ್ಮೆಟ್ ಹಾಕಿಕೊಂಡು ಹೋಗಿ, ತಾನು ಕಟ್ಟಿಸುತ್ತಿರೋದು ಎಂದು ಪೋಸು ಕೋಡೋದು.
ನೂತನ ಸಂಸತ್ ಭವನ ಉದ್ಘಾಟನೆಯಾಗುವಾಗ ಸಂಸತ್ತಿನ ಯಜಮಾನರಾದ ರಾಷ್ಟ್ರಪತಿ ಬಂದರೆ ತನ್ನ ಮಹತ್ವ ಕಡಿಮೆಯಾಗುತ್ತದೆ ಎಂದು ಅವರನ್ನು ಕರೆಯದೇ ತಾವೇ ವಿಜೃಂಭಿಸೋದು. ಹೀಗೆ ಎಲ್ಲೆಲ್ಲಿ ಮಿಂಚಲು ಛಾನ್ಸುಗಳಿವೆಯೋ ಅಲ್ಲೆಲ್ಲ ಅವರೇ ಆವರಿಸಿರುತ್ತಾರೆ.
ಆದರೆ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ ಕುಸಿಯುತ್ತಲೇ ಇರುವಾಗ, ಜಾಗತಿಕ ಹಸಿವು ಸೂಚ್ಯಂಕದಲ್ಲಿಯೂ ಪಾಕಿಸ್ತಾನಕ್ಕಿಂತ ತುಂಬಾ ಕೆಳಕ್ಕೆ ಭಾರತ ಕುಸಿದಿರುವಾಗ ಅಲ್ಲಿ ಇವರಿರುವುದಿಲ್ಲ. ಮತ್ತು ಆ ವರದಿಗಳೇ ಸುಳ್ಳು ಎಂದು ಹೇಳಲಾಗುತ್ತದೆ. ತಮ್ಮ ಪೊಳ್ಳುಗಳನ್ನು ಬಯಲಿಗೆಳೆಯೋ ಸತ್ಯಗಳು ಹೊರಬರುತ್ತಿದ್ದಂತೆ ಅದನ್ನು ಮುಚ್ಚಿಹಾಕಲು ಸಿಕ್ಕಾಪಟ್ಟೆ ಸರ್ಕಸ್ಸು ಮಾಡಲಾಗುತ್ತದೆ.
ಕಡೆಗೆ ಸತ್ಯ ಹೇಳುವವರ ವಿರುದ್ಧ, ಪ್ರಶ್ನೆ ಮಾಡುವವರ ವಿರುದ್ಧ ಅವಹೇಳನ, ಕೇಸು, ಜೈಲುಶಿಕ್ಷೆಯ ಅತಿರೇಕದವರೆಗೂ ಹೋಗುವ ಇವರು ಮಾಡಿಕೊಂಡು ಬಂದಿದ್ದೆಲ್ಲ ಇದೇ ಕೆಟ್ಟ ರಾಜಕಾರಣವಲ್ಲವೆ?
ಇನ್ನು ಅವಹೇಳನದ ವಿಷಯ. ಈ ದೇಶದ ಪ್ರಧಾನಿಯ ಅವಹೇಳನ, ಅವಮಾನಕರ, ಖಂಡನಾರ್ಹ ಎನ್ನುವ ಇವರಿಗೆ, ತಾವೇ ಈ ದೇಶದ ಮೊದಲ ಪ್ರಧಾನಿಯನ್ನು ಹೇಗೆಲ್ಲಾ ಜರೆದಿದ್ದೇವೆ, ಅವಹೇಳನ ಮಾಡಿದ್ದೇವೆ ಎಂಬುದು ನೆನಪಿಲ್ಲವೆ?
ಮತ್ತು ಈಗಲೂ ಅದನ್ನೇ ಇವರು ಮಾಡುತ್ತಿಲ್ಲವೆ?. ಮಾತೆತ್ತಿದರೆ ನೆಹರು ಕುಟುಂಬ, ಗಾಂಧಿ ಕುಟುಂಬ ಎಂದು ನಿಂದಿಸುವುದು ಇವರದೇ ಜಾಯಮಾನವಲ್ಲವೆ ?. ಗಾಂಧಿಯನ್ನು ನಿಂದಿಸುತ್ತ, ಗಾಂಧಿ ಹಂತಕನನ್ನು ಆರಾಧಿಸುತ್ತಿರುವುದು ಇವರಿಗೆ ಖಂಡನೀಯವಾಗಿ ಯಾವತ್ತೂ ಕಾಣಿಸಲಿಲ್ಲವೆ?.
ಬಿಜೆಪಿ ಇದೇ ರಾಹುಲ್ ಗಾಂಧಿಯನ್ನು, ಅವರ ಅಮ್ಮನನ್ನು, ಅಪ್ಪನನ್ನು, ಅಜ್ಜಿಯನ್ನು, ಈ ದೇಶದ ಪ್ರಥಮ ಪ್ರಧಾನಿಯನ್ನು ಅದೆಷ್ಟು ಕೆಟ್ಟದಾಗಿ ಅವಹೇಳನ ಮಾಡುತ್ತಲೇ ಬಂದಿಲ್ಲವೆ?. ಅವರೆಲ್ಲರ ವಿರುದ್ಧ ಬಿಜೆಪಿ ನಾಯಕರು, ಬೆಂಬಲಿಗರು ಅದೆಂತಹ ಅವಹೇಳನಕಾರಿ ಅಪಪ್ರಚಾರ ಅಭಿಯಾನವನ್ನೇ ನಡೆಸಿಲ್ಲವೆ?
ನೆಹರೂ ಬಗ್ಗೆ, ಇಂದಿರಾ ಬಗ್ಗೆ, ಸೋನಿಯಾ ಗಾಂಧಿ ಬಗ್ಗೆ ಅದೆಷ್ಟು ಸುಳ್ಳು, ತಿರುಚಿದ ಫೋಟೋ, ವಿಡಿಯೋಗಳನ್ನು ಹರಡಿದ್ದಾರೆ ಅಲ್ಲವೆ?. ಅಷ್ಟಕ್ಕೂ ಮೊನ್ನೆಯೂ ಸೋತ ಮೇಲೆ ಡ್ರೆಸ್ಸಿಂಗ್ ರೂಮ್ ಗೆ ಹೋಗಿ ಮೋದಿ ಸಂತೈಸಿದ್ದರಲ್ಲೂ ಕಂಡಿದ್ದೇನು?
ಎಳೆದು ಆಲಂಗಿಸುವ, ಫೋಟೋ ಫ್ರೇಮ್ ಸರಿಯಾಗಿ ಪಡೆಯುವ ಕೃತಕತೆಯೇ ಅಲ್ಲಿ ಎದ್ದು ಕಾಣುತ್ತಿರಲಿಲ್ಲವೇ ?. ಮೋದಿ ಹೋಗಿ ಆಟಗಾರರಿಗೆ ಸಾಂತ್ವನ ಹೇಳಿದರು ಎಂದು ಬರೆಯುವ ಮಿಡಿಯಾಗಳಿಗೆ, ಮೋದಿಯ ಕ್ಯಾಮೆರಾ ಪ್ರೀತಿಯ ಬಗ್ಗೆ, ತಮ್ಮ ಮುಖವನ್ನು ಸೆರೆ ಹಿಡಿಯೋ ಅದರ ಒಂದೊಂದು ಫ್ರೇಮಿನ ಬಗ್ಗೆಯೂ ಆಪಾರ ಕಾಳಜಿಯ ಸತ್ಯ ಗೊತ್ತಿಲ್ಲವೆ?
ಚಂದ್ರಯಾನ 3 ಯಶಸ್ವಿಯಾದ ಬೆನ್ನಿಗೇ ಮೋದಿ ಬಂದ ಮೇಲೆಯೇ ಇಸ್ರೋ ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯವಾಗಿದ್ದು ಎಂದು ಇದೇ ಬಿಜೆಪಿ ಪಡೆ ಎಷ್ಟು ಅಪ ಪ್ರಚಾರ ಮಾಡಿಲ್ಲ ? ಎಷ್ಟು ಸುಳ್ಳು ಹರಡಿಲ್ಲ ?
ಅಂಥವರು ಮೊನ್ನೆ ಭಾರತ ವಿಶ್ವಕಪ್ ಗೆದ್ದಿದ್ದರೆ ಅದನ್ನೂ ರಾಜಕೀಯ ಲಾಭ ಪಡೆಯಲು ಬಳಸದೇ ಬಿಡುತ್ತಿದ್ದರೇ ? . ಎಂಥ ಒಂದು ಛಾನ್ಸ್ ಮಿಸ್ಸಾಗಿ, ಪನೌತಿ ಎನ್ನಿಸಿಕೊಳ್ಳೋ ಹಾಗಾಯಿತಲ್ಲ. ಈಗಲೂ ಒಂದು ರಾಜಕೀಯ ಮಾಡೋಕ್ಕೆ ಛಾನ್ಸ್ ಇದೆ. ಪನೌತಿ ಪದವನ್ನೇ ಬ್ಯಾನ್ ಮಾಡೋದು ಎಂಬ ಆಲೋಚನೆಯೂ ಈಗಾಗಲೇ ಬಿಜೆಪಿಯ ಯಾವುದಾದರೂ ಒಂದು ತಲೆಗೆ ಬಂದಿದ್ದರೂ ಅಚ್ಚರಿಯೇನಿಲ್ಲ.