ಮುಖ್ತಾರ್ ಅನ್ಸಾರಿ ಸಾವಿನ ಸುತ್ತ ಅನುಮಾನಗಳ ಹುತ್ತ!
ಬಿಜೆಪಿಯ ಪ್ರಭಾವಶಾಲಿ ನಾಯಕನೂ ಆರೋಪಿಯಾಗಿರುವ ಪ್ರಕರಣದಲ್ಲಿ ಕೂಡ ತಂದೆ ಆರೋಪಿಯಾಗಿದ್ದರು. ತಂದೆಯ ವಿಚಾರಣೆ ಶುರುವಾದರೆ ಬಿಜೆಪಿ ನಾಯಕನಿಗೆ ತೊಂದರೆಯಾಗಲಿದೆ ಎಂಬ ಕಾರಣವೊಂದು ಅವರ ವಿರುದ್ಧದ ಸಂಚಿನ ಹಿಂದೆ ಇತ್ತು ಎಂಬುದು ಉಮರ್ ಅನುಮಾನ.
ಇದರ ಬಗ್ಗೆ ಅವರು ಕೋರ್ಟ್ನಲ್ಲಿ ಹೇಳಿದ್ದರು.
ಈ ಕಾರಣದಿಂದ ಹತ್ಯೆ ಪ್ರಯತ್ನ ನಡೆಯುತ್ತಿದೆ ಎಂಬ ಅನುಮಾನವನ್ನು ಉಮರ್ ವ್ಯಕ್ತಪಡಿಸಿದ್ದರು.
ಅನ್ಸಾರಿ ಸಾವು ಮತ್ತು ಅತೀಕ್ ಅಹ್ಮದ್ ಕೊಲೆ ಎರಡನ್ನೂ ಸರಿಯಾಗಿ ಗಮನಿಸಿದರೆ ಏನೋ ಸಂಚು ಇದೆಯೆಂಬುದು ಗೊತ್ತಾಗುತ್ತದೆ.
ಜೈಲಿನಲ್ಲಿದ್ದ ಉತ್ತರ ಪ್ರದೇಶದ ರಾಜಕಾರಣಿ, ಮಾಜಿ ಶಾಸಕ ಮುಖ್ತಾರ್ ಅನ್ಸಾರಿ ಗುರುವಾರ ರಾತ್ರಿ ಸಾವನ್ನಪ್ಪಿದ್ದಾರೆ.
ಹೃದಯಾಘಾತದಿಂದ ಅನ್ಸಾರಿ ಮೃತಪಟ್ಟಿರುವುದಾಗಿ ಹೇಳಲಾಗುತ್ತಿದೆ. ಅದೇ ರೀತಿ ಮಾಧ್ಯಮಗಳೂ ಸುದ್ದಿ ಮಾಡಿವೆ. ಆದರೆ ಅದರ ಹಿಂದಿನ ನೆರಳುಗಳಲ್ಲಿ ಕಾಣಿಸುವ ಸತ್ಯವೇ ಬೇರೆ ಇದೆ ಎಂಬ ಅನುಮಾನಗಳೂ ವ್ಯಕ್ತವಾಗತೊಡಗಿವೆ.
ಜೈಲಿನೊಳಗೇ ಅನ್ಸಾರಿಗೆ ವಿಷವಿಕ್ಕಲಾಗುತ್ತಿತ್ತು ಎಂಬ ಆರೋಪಗಳನ್ನು ಅವರ ಕುಟುಂಬದವರು ಮಾಡಿದ್ದಾರೆ. ಈ ಹಿಂದೆಯೂ ಇಂಥ ಆರೋಪಗಳನ್ನು ಕುಟುಂಬದವರು ಮಾಡಿದ್ದರು. ಸ್ವತಃ ಅನ್ಸಾರಿ ಕೂಡ ತನಗೆ ಅಪಾಯವಿದೆ ಎಂದು ಹೇಳಿಕೊಂಡಿದ್ದರು.
ಇದೆಲ್ಲದರ ಹೊರತಾಗಿಯೂ ಮುಖ್ತಾರ್ ಅನ್ಸಾರಿ ಸಾವು ಸಂಭವಿಸಿದೆ. ಮತ್ತದು ಸಹಜ ಸಾವು ಎನ್ನಲು ಸಾಧ್ಯವಿಲ್ಲದ ರೀತಿಯಲ್ಲಿ ಸಂಭವಿಸಿದೆ.
2005ರಿಂದಲೂ ಪಂಜಾಬ್ ಹಾಗೂ ಉತ್ತರ ಪ್ರದೇಶದ ವಿವಿಧ ಜೈಲುಗಳಲ್ಲಿ ಸೆರೆವಾಸ ಅನುಭವಿಸುತ್ತಿದ್ದ ಅನ್ಸಾರಿಗೆ, ತನ್ನ ಎದುರಾಳಿ ರಾಜಕಾರಣಿಯನ್ನು ಬರ್ಬರವಾಗಿ ಕೊಂದ ಪ್ರಕರಣದಲ್ಲಿ ಶಿಕ್ಷೆಯಾಗಿತ್ತು.
ಬಾಂದಾ ಜೈಲಿನಲ್ಲಿ ಜೀವ ಬೆದರಿಕೆ ಇದೆ ಎಂದು ಮುಖ್ತಾರ್ ಅನ್ಸಾರಿ ಅವರ ಕುಟುಂಬ ಸದಸ್ಯರು ಕಳೆದ ಒಂದು ವರ್ಷದಿಂದ ಅಲಹಾಬಾದ್ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಮೊನ್ನೆ ಮಾರ್ಚ್ 19 ಮತ್ತು ಅದಕ್ಕೂ 40 ದಿನಗಳ ಮೊದಲು ತನ್ನ ಆಹಾರದಲ್ಲಿ ವಿಷ ಹಾಕಲಾಗಿತ್ತು ಎಂದು ಮುಖ್ತಾರ್ ಅನ್ಸಾರಿ ಕೂಡ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು.
ಉತ್ತರ ಪ್ರದೇಶದ ಮಾವು ಕ್ಷೇತ್ರದಿಂದ 5 ಬಾರಿ ಶಾಸಕರಾಗಿದ್ದ ಅನ್ಸಾರಿ ಜೈಲಿನಲ್ಲಿ ಸಾವಿಗೀಡಾಗುವುದರೊಂದಿಗೆ ಅಲ್ಲಿನ ಬಿಜೆಪಿ ಸರಕಾರದ ಕರಾಳ ರೂಪ ಮತ್ತೊಮ್ಮೆ ಕಾಣತೊಡಗಿದೆ.
ಕಳೆದ ವರ್ಷ ಇದೇ ಉತ್ತರಪ್ರದೇಶದಲ್ಲಿ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ಅಹ್ಮದ್ ಇಬ್ಬರನ್ನೂ ಪೊಲೀಸರ ವಶದಲ್ಲಿರುವಾಗಲೇ ಅವರ ಎದುರಲ್ಲಿಯೇ ಗುಂಡಿಟ್ಟು ಕೊಲ್ಲಲಾಗಿತ್ತು.
ಲವಲೇಶ್ ತಿವಾರಿ, ಅರುಣ್ ಮೌರ್ಯ ಹಾಗೂ ಸನ್ನಿ ಸಿಂಗ್ ಎಂಬವರನ್ನು ಹತ್ಯೆ ಆರೋಪದಲ್ಲಿ ಬಂಧಿಸಲಾಗಿತ್ತು.
ಪಂಜಾಬ್ ಜೈಲಿನಲ್ಲಿದ್ದ ಮುಖ್ತಾರ್ ಅನ್ಸಾರಿಯನ್ನು ಉತ್ತರ ಪ್ರದೇಶಕ್ಕೆ ಕರೆತರಲಾಗಿತ್ತು.
ಅತೀಕ್ ಅಹ್ಮದ್ನನ್ನು ಕೂಡ ಗುಜರಾತ್ನ ಸಾಬರಮತಿ ಜೈಲಿನಿಂದ ಉತ್ತರ ಪ್ರದೇಶಕ್ಕೆ ಕರೆತರಲಾಗಿತ್ತು. ಅದಾದ ಕೆಲವೇ ದಿನಗಳಲ್ಲಿ ಆತನ ಹತ್ಯೆ ನಡೆದುಹೋಗಿತ್ತು.
ಈಗ ಮುಖ್ತಾರ್ ಅನ್ಸಾರಿ ಸಾವು ಸಂಭವಿಸಿದೆ.
ಬಾಂದಾ ಜೈಲಿನಲ್ಲಿ ಮುಖ್ತಾರ್ ಅನ್ಸಾರಿಗೆ ಜೀವ ಬೆದರಿಕೆ ಇದೆ. ಆಹಾರದಲ್ಲಿ ವಿಷ ಪದಾರ್ಥ ಬೆರೆಸಿ ನೀಡಲಾಗಿದೆ ಎಂದು ಅನ್ಸಾರಿ ವಕೀಲರು ಈ ತಿಂಗಳ ಆರಂಭದಲ್ಲಿ ಕೋರ್ಟ್ನಲ್ಲಿ ಹೇಳಿದ್ದರು. ಅನ್ಸಾರಿ ಕಡೆಯಿಂದ ಪತ್ರವನ್ನೂ ಕೋರ್ಟ್ನಲ್ಲಿ ಸಲ್ಲಿಸಲಾಗಿತ್ತು. ಜೈಲಿನಲ್ಲಿ ತನಗೆ ಪ್ರಾಣಾಪಾಯ ಇದೆ. ಯಾವುದೇ ಕ್ಷಣದಲ್ಲೂ ಏನು ಬೇಕಾದರೂ ಆಗಬಹುದು ಎಂದು ಪತ್ರದಲ್ಲಿ ಆತ ಹೇಳಿಕೊಂಡಿದ್ದರು.
ಈ ಹಿಂದೆ ಕೂಡ ಅನ್ಸಾರಿ ಸಹೋದರ ಅಫ್ಝಲ್ ಅನ್ಸಾರಿ ಹಾಗೂ ಪುತ್ರ ಉಮರ್ ಅನ್ಸಾರಿ ಜೈಲಿನಲ್ಲಿ ವಿಷಪ್ರಾಷನವಾಗುತ್ತಿರುವ ಬಗ್ಗೆ ಆರೋಪಿಸಿದ್ದರು.
ಈ ಬಗ್ಗೆ ವಾರದ ಹಿಂದಷ್ಟೇ ಕೋರ್ಟ್ ವರದಿ ಕೇಳಿತ್ತು. ಆದರೆ ವರದಿ ಸಲ್ಲಿಕೆ ಆಗಿರಲಿಲ್ಲ. ಈಗ ಮುಖ್ತಾರ್ ಅನ್ಸಾರಿ ವ್ಯಕ್ತಪಡಿಸಿದ್ದ ಆತಂಕವೇ ನಿಜವಾಗಿಬಿಟ್ಟಿದೆ.
ಜೈಲಿನಲ್ಲಿ ಅನ್ಸಾರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಅಗತ್ಯ ಬಿದ್ದರೆ ಜೈಲಿನಲ್ಲಿಯೂ ಭದ್ರತೆ ಒದಗಿಸುವುದಾಗಿ ಸುಪ್ರೀಂ ಕೋರ್ಟ್ಗೆ ಉತ್ತರ ಪ್ರದೇಶ ಸರಕಾರ ಹೇಳಿತ್ತು.
ಅನ್ಸಾರಿಯ ವಕೀಲ ಕಪಿಲ್ ಸಿಬಲ್ ಸುಪ್ರೀಂ ಕೋರ್ಟ್ ನಲ್ಲಿ ಇದು ತುಂಬಾ ಅಪಾಯಕಾರಿಯಾದ ವಿಚಾರ ಎಂದು ಹೇಳಿದ್ದರು. ಯಾಕೆಂದರೆ ಮುಖ್ತಾರ್ ಅನ್ಸಾರಿ ಬಿಜೆಪಿ ಶಾಸಕ ಕೃಷ್ಣಾನಂದ ರಾಯ್ ಹತ್ಯೆಯ ಆರೋಪಿಗಳಲ್ಲಿ ಒಬ್ಬರು. 8 ಆರೋಪಿಗಳಲ್ಲಿ ನಾಲ್ವರ ಹತ್ಯೆ ಆಗಿತ್ತು. ಒಬ್ಬ ಆರೋಪಿಯ ಹತ್ಯೆ ಕೋರ್ಟ್ ಆವರಣದಲ್ಲೇ ನಡೆದಿತ್ತು. ಹಾಗೆ ಹತ್ಯೆಯಾದ ಸಂಜೀವ್ ಮಾಹೇಶ್ವರಿ ಈ ಮುಖ್ತಾರ್ ಅನ್ಸಾರಿಯ ಸಹಚರ ಎನ್ನಲಾಗಿತ್ತು. ಶಾಸಕ ಕೃಷ್ಣಾನಂದ ರಾಯ್ ಹತ್ಯೆ ಪ್ರಕರಣದಲ್ಲಿ ಆತನ ಹೆಸರೂ ಇತ್ತು.
ಕೃಷ್ಣಾನಂದ ರಾಯ್ ಹತ್ಯೆಯಲ್ಲಿ ಮುನ್ನಾ ಭಜರಂಗಿ ಕೂಡ ಒಬ್ಬ ಆರೋಪಿಯಾಗಿದ್ದು, ಆತನನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಕೃಷ್ಣಾನಂದ ರಾಯ್ ಹತ್ಯೆಯ ಆರೋಪಿಗಳಲ್ಲಿ ನಾಲ್ವರ ಹತ್ಯೆಯಾಗಿ ಹೋಗಿದೆ. ಅಂದರೆ ಇಲ್ಲಿ ಅನುಮಾನಗಳು ಮೂಡುತ್ತವಲ್ಲವೆ?
ಜೈಲಿನಲ್ಲಿ ಕೊಲೆಯಾಗುವುದು, ಕೋರ್ಟ್ ಆವರಣ ದೊಳಗೇ, ಪೊಲೀಸರ ಸಮ್ಮುಖದಲ್ಲಿಯೇ ಕೊಲೆಯಾಗುವುದು, ಕಡೆಗೆ ಎನ್ಕೌಂಟರ್ಗಳೂ ನಡೆದುಹೋಗುವುದು ಇವೆಲ್ಲವೂ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ.
ಮಂಗಳವಾರ ಕೂಡ ಅನ್ಸಾರಿ ಹೊಟ್ಟೆ ನೋವಿನ ಬಗ್ಗೆ ಹೇಳಿಕೊಂಡಾಗ ಆಸ್ಪತ್ರೆಗೆ ಕರೆದೊಯ್ದು ಸುಮಾರು 14 ಗಂಟೆಗಳ ಕಾಲ ದಾಖಲಿಸಲಾಗಿತ್ತು. ಜಾಸ್ತಿ ಊಟ ಮಾಡಿದ್ದರಿಂದ ಸಮಸ್ಯೆಯಾಗಿದೆ ಎಂದು ವೈದ್ಯರು ಹೇಳಿದ್ದಾಗಿ ವರದಿಯಾಗಿತ್ತು.
ಹಲವು ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಇರಿಸಿಕೊಂಡ ಬಳಿಕ ಮತ್ತೆ ಜೈಲಿಗೆ ಕಳಿಸಲಾಗಿತ್ತು.
ಅದಾದ ಬಳಿಕ ಅನ್ಸಾರಿ ಜೈಲಿನಲ್ಲಿ ರಮಝಾನ್ ಉಪವಾಸ ಆಚರಿಸುವಾಗ ಆರೋಗ್ಯ ಹದಗೆಟ್ಟಿತ್ತು ಎಂದು ಕಾರಾಗೃಹ ಅಧಿಕಾರಿಗಳು ಹೇಳಿರುವುದು ವರದಿಯಾಗಿದೆ.
ಗುರುವಾರ ರಾತ್ರಿ ವಾಂತಿ ಮಾಡಿಕೊಂಡು ಅಸ್ವಸ್ಥರಾಗಿ, ಪ್ರಜ್ಞಾಹೀನರಾದ ಅನ್ಸಾರಿಯನ್ನು ಜೈಲು ಅಧಿಕಾರಿಗಳು ರಾಣಿ ದುರ್ಗಾದೇವಿ ಮೆಡಿಕಲ್ ಕಾಲೇಜ್ಗೆ ದಾಖಲು ಮಾಡಿದ್ದರು. ಕಡೆಗೆ ಅಲ್ಲಿಯೇ ಅನ್ಸಾರಿ ಸಾವು ಸಂಭವಿಸಿದೆ.
ತಂದೆಯನ್ನು ಕಾಣಲು ತಮ್ಮನ್ನು ಆಸ್ಪತ್ರೆಯೊಳಗೆ ಬಿಡಲಿಲ್ಲ ಎಂದು ಉಮರ್ ಅನ್ಸಾರಿ ಆರೋಪಿಸಿದ್ದಾರೆ. ಅವರನ್ನು ನೋಡಲು 900 ಕಿ.ಮೀ. ದೂರಿದಿಂದ ಬಂದಿದ್ದೆ ಎಂದಿದ್ದಾರೆ ಉಮರ್.
ಮಾರ್ಚ್ 19ರಂದು ಅವರ ರಾತ್ರಿಯ ಊಟದಲ್ಲಿ ವಿಷ ಹಾಕಲಾಗಿದೆ. ನಾವು ನ್ಯಾಯಾಂಗದ ಮೊರೆ ಹೋಗುತ್ತೇವೆ, ನಮಗೆ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದು ಉಮರ್ ಅನ್ಸಾರಿ ಹೇಳಿದ್ದಾರೆ.
ಇದು ಎರಡನೇ ಬಾರಿ ನಡೆದಿದೆ. 40 ದಿನಗಳ ಹಿಂದೆ ಕೂಡ ಅವರಿಗೆ ವಿಷ ನೀಡಲಾಗಿತ್ತು. ಇತ್ತೀಚೆಗೆ, ಮಾರ್ಚ್ 19ರಂದು ಮತ್ತೆ ವಿಷವಿಕ್ಕಲಾಗಿತ್ತು. ಇದರಿಂದ ಅವರ ಆರೋಗ್ಯ ಸ್ಥಿತಿ ಬಹಳ ಹದಗೆಟ್ಟಿತ್ತು ಎಂದು ಅನ್ಸಾರಿ ಸಹೋದರ ಅಫ್ಝಲ್ ಅನ್ಸಾರಿ ಕೂಡ ಆರೋಪ ಮಾಡಿದ್ದಾರೆ.
ಬಿಜೆಪಿಯ ಪ್ರಭಾವಶಾಲಿ ನಾಯಕನೂ ಆರೋಪಿಯಾಗಿರುವ ಪ್ರಕರಣದಲ್ಲಿ ಕೂಡ ತಂದೆ ಆರೋಪಿಯಾಗಿದ್ದರು. ತಂದೆಯ ವಿಚಾರಣೆ ಶುರುವಾದರೆ ಬಿಜೆಪಿ ನಾಯಕನಿಗೆ ತೊಂದರೆಯಾಗಲಿದೆ ಎಂಬ ಕಾರಣವೊಂದು ಅವರ ವಿರುದ್ಧದ ಸಂಚಿನ ಹಿಂದೆ ಇತ್ತು ಎಂಬುದು ಉಮರ್ ಅನುಮಾನ.
ಇದರ ಬಗ್ಗೆ ಅವರು ಕೋರ್ಟ್ನಲ್ಲಿ ಹೇಳಿದ್ದರು.
ಈ ಕಾರಣದಿಂದ ಹತ್ಯೆ ಪ್ರಯತ್ನ ನಡೆಯುತ್ತಿದೆ ಎಂಬ ಅನುಮಾನವನ್ನು ಉಮರ್ ವ್ಯಕ್ತಪಡಿಸಿದ್ದರು.
ಅನ್ಸಾರಿ ಸಾವು ಮತ್ತು ಅತೀಕ್ ಅಹ್ಮದ್ ಕೊಲೆ ಎರಡನ್ನೂ ಸರಿಯಾಗಿ ಗಮನಿಸಿದರೆ ಏನೋ ಸಂಚು ಇದೆಯೆಂಬುದು ಗೊತ್ತಾಗುತ್ತದೆ.
ಸುಮಾರು 18 ವರ್ಷಗಳಿಂದಲೂ ಮುಖ್ತಾರ್ ಅನ್ಸಾರಿ ಜೈಲಿನಲ್ಲಿದ್ದರು. ತನಗೆ ಜೈಲಿನಲ್ಲಿ ಅಪಾಯವಿದೆ, ವಿಷವಿಕ್ಕಲಾಗುತ್ತಿದೆ ಎಂದು ಹಲವು ಬಾರಿ ಹೇಳಿಕೊಂಡಾಗಲೂ ಸೂಕ್ತ ರಕ್ಷಣೆ ನೀಡಲಾಗಲಿಲ್ಲ ಎಂದರೆ ಅದು ಯಾರ ವೈಫಲ್ಯ?
ಮುಖ್ತಾರ್ ಅನ್ಸಾರಿಯ ತಂದೆಯ ತಂದೆ, ಮುಖ್ತಾರ್ ಅಹ್ಮದ್ ಅನ್ಸಾರಿ ಅವರು 1927ರಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದವರು. ಮುಸ್ಲಿಂ ಲೀಗ್ನಲ್ಲಿದ್ದ ಅವರು, ಅದರ ಪ್ರತ್ಯೇಕ ರಾಷ್ಟ್ರ ಕಾರ್ಯಸೂಚಿ ವಿರೋಧಿಸಿ ಅದರಿಂದ ಹೊರಬಂದಿದ್ದರು.
ಮುಖ್ತಾರ್ ಅನ್ಸಾರಿಯ ತಾಯಿಯ ತಂದೆ ಬ್ರಿಗೇಡಿಯರ್ ಮುಹಮ್ಮದ್ ಉಸ್ಮಾನ್, ಭಾರತೀಯ ಸೇನೆಯಲ್ಲಿ ಉನ್ನತ ಹುದ್ದೆಯಲ್ಲಿದ್ದವರು. ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿದ್ದವರು. ಕಡೆಗೆ 1948ರಲ್ಲಿ ಜಮ್ಮು ಮತ್ತು ಕಾಶ್ಮೀರದ ನೌಶೆರಾ ವಲಯದಲ್ಲಿ ಪಾಕಿಸ್ತಾನದ ವಿರುದ್ಧದ ಕಾದಾಟದಲ್ಲಿಯೇ ಹುತಾತ್ಮರಾಗಿದ್ದರು. ನೌಶೆರಾದ ಸಿಂಹ ಎಂದೇ ಹೆಸರಾದ ಅವರಿಗೆ ಮರಣೋತ್ತರವಾಗಿ ಮಹಾವೀರ ಚಕ್ರ ಗೌರವ ನೀಡಲಾಗಿತ್ತು.
ಅಂಥ ಕುಟುಂಬದ ಮುಖ್ತಾರ್ ಅನ್ಸಾರಿ ವಿರುದ್ಧ 61 ಕ್ರಿಮಿನಲ್ ಪ್ರಕರಣಗಳಿದ್ದವು. ಅವುಗಳಲ್ಲಿ 15 ಕೊಲೆ ಪ್ರಕರಣಗಳು.
1980ರ ದಶಕದಲ್ಲಿ ಗ್ಯಾಂಗ್ ಒಂದನ್ನು ಸೇರಿ ದುಷ್ಕೃತ್ಯಗಳಲ್ಲಿ ಭಾಗಿಯಾಗಿದ್ದ ಅನ್ಸಾರಿ, 1990ರಲ್ಲಿ ಸ್ಥಾಪಿಸಿದ್ದ ಗ್ಯಾಂಗ್ ಮಾವು, ಗಾಜಿಪುರ, ವಾರಣಾಸಿ ಮತ್ತು ಜೌನ್ಪುರ ಜಿಲ್ಲೆಗಳಲ್ಲಿ ಸುಲಿಗೆ ಹಾಗೂ ಅಪಹರಣಗಳಲ್ಲಿ ಸಕ್ರಿಯವಾಗಿತ್ತು.
ಮೊದಲು ಬಹುಜನ ಸಮಾಜ ಪಕ್ಷದಿಂದ ಶಾಸಕರಾಗಿದ್ದ ಅನ್ಸಾರಿ, 2002 ಮತ್ತು 2007ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದರು. 2012ರಲ್ಲಿ ಮೂವರು ಅನ್ಸಾರಿ ಸಹೋದರರು ಸೇರಿ ಕ್ವಾಮಿ ಏಕ್ತಾ ದಳ ಎಂಬ ಪಕ್ಷ ಸ್ಥಾಪಿಸಿದ್ದರು.
2016ರಲ್ಲಿ ಮತ್ತೆ ಬಿಎಸ್ಪಿ ಸೇರಿ, ಐದನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
1996ರಲ್ಲಿ ಮೊದಲ ಬಾರಿ ಶಾಸಕರಾದ ಅನ್ಸಾರಿಯ ಅಡಗುದಾಣದಲ್ಲಿ 2004ರಲ್ಲಿ ಮೆಷಿನ್ ಗನ್ ಪತ್ತೆಯಾದ ಹಿನ್ನೆಲೆಯಲ್ಲಿ ಅನ್ಸಾರಿ ವಿರುದ್ಧ ಭಯೋತ್ಪಾದನಾ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು. ಅದರ ಮರು ವರ್ಷದಿಂದಲೇ ಜೈಲು ವಾಸ ಶುರುವಾಗಿತ್ತು.
2023ರ ಎಪ್ರಿಲ್ನಲ್ಲಿ ಬಿಜೆಪಿ ಶಾಸಕ ಕೃಷ್ಣಾನಂದ ರಾಯ್ಕೊಲೆ ಪ್ರಕರಣದಲ್ಲಿ 10 ವರ್ಷ ಶಿಕ್ಷೆ ವಿಧಿಸಲಾಗಿತ್ತು. 1990ರ ನಕಲಿ ಗನ್ ಲೈಸೆನ್ಸ್ ಪ್ರಕರಣದಲ್ಲಿ ಈ ವರ್ಷದ ಮಾರ್ಚ್ 13ರಂದು ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
ಯೋಗಿ ಸರಕಾರದಲ್ಲಿ ಮಂತ್ರಿಯಾಗಿರುವ ಓಂ ಪ್ರಕಾಶ್ ರಾಜಭರ್ ತನ್ನ ಪುತ್ರನನ್ನು ಲೋಕಸಭೆ ಚುನಾವಣೆಗೆ ನಿಲ್ಲಿಸಿದಾಗ, ಪುತ್ರ ಅರವಿಂದ ರಾಜಭರ್ ತಮಗೆ ಅನ್ಸಾರಿಯ ಸಂಪೂರ್ಣ ಬೆಂಬಲ ಇರುವುದಾಗಿ ಹೇಳಿದ್ದು ವರದಿಯಾಗಿತ್ತು. ಅಂದರೆ ಚುನಾವಣೆ ಗೆಲ್ಲುವುದಕ್ಕಾಗಿ ಬಿಜೆಪಿ ತನಗಿದು ಗೊತ್ತೇ ಇಲ್ಲವೆಂಬಂತೆ ಇತ್ತು.
ಮೃತ ಅನ್ಸಾರಿ ಕುಟುಂಬದವರ ಆರೋಪದ ಕುರಿತು ತನಿಖೆ ನಡೆಸುವಂತೆ ಆರ್ಜೆಡಿ ನಾಯಕ ತೇಜಸ್ವಿ ಯಾದವ್, ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಮತ್ತು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಸೇರಿದಂತೆ ಅನೇಕರು ಆಗ್ರಹಿಸಿದ್ದಾರೆ.
ಅದು ಸಹಜ ಸಾವು ಎನ್ನುವುದಕ್ಕಿಂತಲೂ ಕೊಲೆ ಎಂಬ ಅನುಮಾನಗಳು ಎಲ್ಲೆಡೆ ಕೇಳಿಬರುತ್ತಿವೆ.