ಬಿಜೆಪಿಗಾಗಿ ಈಡಿ ವಸೂಲಿ ದಂಧೆ : ಕೋರ್ಟ್ ನಲ್ಲಿ ಕೇಜ್ರಿವಾಲ್
► ಆರೋಪಿಗಳನ್ನೇ ಮಾಫಿ ಸಾಕ್ಷಿಯಾಗಿ ಮಾಡುತ್ತಿರುವವರು ಯಾರು ? ► ಹವಾಲಾ ಮೂಲಕ ಕೋಟಿಗಟ್ಟಲೆ ಹೋಗಿದ್ದರೆ ಚುನಾವಣಾ ಆಯೋಗ ಕೇಳಬೇಕಿತ್ತಲ್ಲವೆ ?
ಕೇಜ್ರಿವಾಲ್| PC : PTI
ಮದ್ಯ ಹಗರಣದ ಬಗ್ಗೆ ಕೇಜ್ರಿವಾಲ್ ನ್ಯಾಯಾಲಯದಲ್ಲಿ ಏನು ಹೇಳಲಿದ್ದಾರೆ ಎಂದು ದೇಶಾದ್ಯಂತ ಭಾರೀ ಕುತೂಹಲವಿತ್ತು.
ಹಾಗಾದರೆ ಏನು ಹೇಳಿದರು ಕೇಜ್ರಿವಾಲ್ ನಿನ್ನೆ ಕೋರ್ಟ್ ನಲ್ಲಿ ? ಅರವಿಂದ್ ಕೇಜ್ರಿವಾಲ್ ಅವರನ್ನು ಪುನಃ ಈಡಿ ಕಸ್ಟಡಿಗೆ ಕೊಡಲಾಗಿದ್ದು, ಏಪ್ರಿಲ್ 1ರಂದು ಕೋರ್ಟ್ಗೆ ಅವರನ್ನು ಈಡಿ ಹಾಜರುಪಡಿಸಬೇಕಿದೆ. ಆದರೆ, ದೆಹಲಿಯ ರೋಸ್ ಅವೆನ್ಯೂ ಕೋರ್ಟ್ನಲ್ಲಿ ಕೇಜ್ರಿವಾಲ್ ಹೇಳಿದ ಮಾತುಗಳು ಮಾತ್ರ ಈಡಿಯ ಅಸಲಿ ಮುಖವನ್ನು ಬಯಲು ಮಾಡುವ ಹಾಗಿದ್ದವು.
ಜನರು ಆರಿಸಿದ ಒಬ್ಬ ಮುಖ್ಯಮಂತ್ರಿಯನ್ನು ಜೈಲಿಗೆ ಕಳಿಸಲು ಮೋದಿ ಸರ್ಕಾರ ಏನೆಲ್ಲವನ್ನೂ ಮಾಡಿತು ಎಂಬುದು ಅವರ ಹೇಳಿಕೆಯಲ್ಲಿ ಬಯಲಾಗಿದೆ. ತಮ್ಮ ಬಂಧನದ ಬಗ್ಗೆ ಪ್ರತಿಭಟಿಸಲು ಬಂದಿಲ್ಲ. ಈಡಿ ಎಷ್ಟು ದಿನ ಬೇಕಾದರೂ ಜೈಲಿನಲ್ಲಿಡಲಿ ಎಂದು ಕೋರ್ಟ್ನಲ್ಲಿ ಕೇಜ್ರಿವಾಲ್ ಹೇಳಿದರು. ಒಬ್ಬ ಮಾಫಿ ಸಾಕ್ಷಿಯ ಹೇಳಿಕೆಯನ್ನು ಇಟ್ಟುಕೊಂಡು ಒಂದು ರಾಜ್ಯದ ಮುಖ್ಯಮಂತ್ರಿಯನ್ನು ಜೈಲಿಗೆ ಕಳಿಸಲಾಗುತ್ತದೆ. ಆದರೆ ಈಡಿ ಬಿಜೆಪಿಗೋಸ್ಕರ ವಸೂಲಿ ದಂಧೆ ನಡೆಸುತ್ತಿದೆ ಎಂಬುದು ಎಲ್ಲರಿಗೂ ಗೊತ್ತಾಗಬೇಕಿದೆ ಎಂದು ಕೇಜ್ರಿವಾಲ್ ಹೇಳಿದರು.
ಈಡಿ ಹೇಗೆ ರಾಜಕೀಯವಾಗಿ ಬಳಕೆಯಾಗುತ್ತಿದೆ ಎಂಬುದು ಮತ್ತೊಮ್ಮೆ ಗೊತ್ತಾಗುವಂತಾಯಿತು. ಕೇಜ್ರಿವಾಲ್ ನಾಲ್ವರ ಹೇಳಿಕೆ ಕುರಿತಾಗಿ ಕೋರ್ಟ್ನಲ್ಲಿ ಹೇಳಿದರು.
1. ಮನಿಶ್ ಸಿಸೋಡಿಯಾ ಅವರ ಕಾರ್ಯದರ್ಶಿಯಾಗಿದ್ದ ಸಿ ಅರವಿಂದ್ ಹೇಳಿಕೆ
ನನ್ನ ಮನೆಗೆ ಮಂತ್ರಿಗಳು ಬರುತ್ತಾರೆ, ಅಧಿಕಾರಿಗಳು ಬರುತ್ತಾರೆ, ದಾಖಲೆ ವಿನಿಮಯ ಆಗುತ್ತದೆ. ಇದು ಮುಖ್ಯಮಂತ್ರಿ ಬಂಧನಕ್ಕೆ ಒಂದು ಕಾರಣವಾಗುತ್ತದೆಯೆ? ಎಂಬುದು ಕೇಜ್ರಿವಾಲ್ ಪ್ರಶ್ನೆಯಾಗಿತ್ತು.
2. ಜಗನ್ ರೆಡ್ಡಿ ಪಕ್ಷದ ಸಂಸದ ಮಾಗುಂಟಾ ಶ್ರೀನಿವಾಸುಲು ರೆಡ್ಡಿ ಹೇಳಿಕೆ.
ನನ್ನನ್ನು ನನ್ನ ಕಚೇರಿಯಲ್ಲಿ ಭೇಟಿಯಾಗಿದ್ದ ಅವರು ಫ್ಯಾಮಿಲಿ ಚಾರಿಟೇಬಲ್ ಟ್ರಸ್ಟ್ ಗಾಗಿ ಜಮೀನು ಕೇಳಿದ್ದರು. ಅದು ಲೆಫ್ಟಿನೆಂಟ್ ಗವರ್ನರ್ ವ್ಯಾಪ್ತಿಗೆ ಬರುವುದರಿಂದ, ಅರ್ಜಿ ಕೊಡಿ, ಅವರಿಗೆ ಕಳಿಸುವ ಎಂದಿದ್ದೆ.
ಅನಂತರ ಅವರ ಮನೆ ಮೇಲೆ ದಾಳಿ ಆದಾಗ ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದಿರಾ ಎಂದು ಅವರನ್ನು ಕೇಳಲಾಗುತ್ತದೆ. ಫ್ಯಾಮಿಲಿ ಟ್ರಸ್ಟ್ಗಾಗಿ ಜಮೀನು ಕೇಳಲು ಭೇಟಿಯಾಗಿದ್ದೆ ಎನ್ನುತ್ತಾರೆ.
ಆದರೆ ಯಾವಾಗ ಪುತ್ರ ರಾಘವ್ ಮಾಗುಂಟಾ ಬಂಧನವಾಗಿ, ಐದು ತಿಂಗಳು ಜೈಲಿನಲ್ಲಿರುವಂತಾಗುತ್ತದೊ ಆಗ ಅವರು ಹೇಳಿಕೆ ಬದಲಿಸುತ್ತಾರೆ. ಅದಾದ ಬಳಿಕ ಮಗನ ಬಿಡುಗಡೆಯಾಗುತ್ತದೆ. ನನ್ನ ವಿರುದ್ದ ಅವರು ಹೇಳಿಕೆ ಕೊಡುತ್ತಾರೆ. ಈಡಿಗೆ ನನ್ನ ವಿರುದ್ಧ ಹೇಳಿಕೆ ಪಡೆದುಕೊಳ್ಳುವುದು ಬೇಕಿತ್ತು ಎನ್ನುತ್ತಾರೆ ಕೇಜ್ರಿವಾಲ್.
3. ರಾಘವ್ ಮಾಗುಂಟಾ ಹೇಳಿಕೆ ವಿಚಾರ.
ಬಂಧನವಾದಾಗ 5 ಬಾರಿ ಹೇಳಿಕೆ ಕೊಡುತ್ತಾರೆ. ಹೇಳಿಕೆ ಬದಲಿಸದ ಕಾರಣಕ್ಕೆ ಐದು ತಿಂಗಳು ಜೈಲಾಗುತ್ತದೆ. ಕಡೆಗೆ ಆತನ ತಂದೆ ಮಾಗುಂಟಾ ಶ್ರಿನಿವಾಸುಲು ರೆಡ್ಡಿ ಹೇಳಿಕೆ ಬದಲಿಸುತ್ತಾರೆ.
4. ಅರಬಿಂದೋ ಫಾರ್ಮಾ ನಿರ್ದೇಶಕ ಪೆನಕಾ ಶರತ್ಚಂದ್ರ ರೆಡ್ಡಿ ಹೇಳಿಕೆ ವಿಚಾರ.
ಮೊದಲು ಅವರ ಹೇಳಿಕೆ ನನ್ನ ವಿರುದ್ಧವಾಗಿರುವುದಿಲ್ಲ. 6 ತಿಂಗಳು ಜೈಲಿನಲ್ಲಿಟ್ಟ ಬಳಿಕ ಹೇಳಿಕೆ ಬದಲಿಸುತ್ತಾರೆ ಎಂದು ಕೇಜ್ರಿವಾಲ್ ಕೋರ್ಟ್ ಎದುರು ಹೇಳಿದರು.
ಈ ನಾಲ್ವರ ಹೇಳಿಕೆಗಳು ಒಬ್ಬ ಮುಖ್ಯಮಂತ್ರಿಯ ಬಂಧನಕ್ಕೆ ಆಧಾರವಾಗುತ್ತವೆಯೆ ಎಂಬುದು ಕೇಜ್ರಿವಾಲ್ ಪ್ರಶ್ನೆಯಾಗಿತ್ತು.
ಸಿ ಅರವಿಂದ್, ರಾಘವ್ ಮಾಗುಂಟಾ, ಅವರ ತಂದೆ ಮಾಗುಂಟಾ ಶ್ರೀನಿವಾಸುಲು ರೆಡ್ಡಿ ಹಾಗೂ ಶರತ್ ರೆಡ್ಡಿ ಹೇಳಿಕೆಗಳನ್ನು ಉಲ್ಲೇಖಿಸಿದ ಕೇಜ್ರಿವಾಲ್, ಈ ಪ್ರಕರಣದಲ್ಲಿ ಆರೋಪಿಗಳನ್ನು ಅಪ್ರೂವರ್ ಆಗಿಸಿ, ಹೇಳಿಕೆಗಳನ್ನು ಬದಲಾಯಿಸಲು ಬಲವಂತ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಈಡಿ ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಅವರ ಮುಂದೆ ನೀಡಿದ ಹೇಳಿಕೆಯಲ್ಲಿ ಕೇಜ್ರಿವಾಲ್, ತಮ್ಮ ಬಂಧನದ ನ್ಯಾಯಸಮ್ಮತತೆ ಪ್ರಶ್ನಿಸಿದರು.
ನನ್ನನ್ನು ಬಂಧಿಸಲಾಗಿದೆ, ಆದರೆ ಯಾವುದೇ ನ್ಯಾಯಾಲಯ ನನ್ನನ್ನು ಅಪರಾಧಿ ಎಂದು ಸಾಬೀತುಪಡಿಸಿಲ್ಲ.
ಸಿಬಿಐ 31,000 ಪುಟಗಳನ್ನು ಮತ್ತು ಈಡಿ ಈ ವಿಷಯಕ್ಕೆ ಸಂಬಂಧಿಸಿದಂತೆ 25,000 ಪುಟಗಳನ್ನು ಸಲ್ಲಿಸಿದೆ.
ನನ್ನನ್ನು ಏಕೆ ಬಂಧಿಸಲಾಗಿದೆ ಎಂದು ಕೇಳಲು ಬಯಸುತ್ತೇನೆ. ನಾಲ್ವರ ಹೇಳಿಕೆಗಳಲ್ಲಿ ಮಾತ್ರ ನನ್ನ ಹೆಸರು ಬಂದಿದೆ ಎಂದು ಕೇಜ್ರಿವಾಲ್ ಹೇಳಿದರು. ಚುನಾವಣಾ ಬಾಂಡ್ಗಳ ವಿಚಾರವಾಗಿಯೂ ಕೇಜ್ರಿವಾಲ್ ಹೇಳಿಕೆ ನೀಡಿ, ಬಿಜೆಪಿ ಹಣ ಪಡೆಯುತ್ತಿರುವ ವಿಚಾರ ಹೇಳಿದರು.
ತಮ್ಮ ಬಂಧನದ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಆರೋಪಿಸಿದರು.
ಪ್ರಕರಣದಲ್ಲಿ ಆರೋಪಿಗಳನ್ನು ಅಪ್ರೂವರ್ ಆಗಿಸಿ ಅವರು ಹೇಳಿಕೆಗಳನ್ನು ಬದಲಾಯಿಸುವಂತೆ ಬಲವಂತ ಪಡಿಸಲಾಗುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದರು.
ಶರತ್ ಚಂದ್ರರೆಡ್ಡಿ ಬಿಜೆಪಿಗೆ 55 ಕೋಟಿ ರೂಪಾಯಿ ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡಿದ್ದಾರೆ ಎಂದು ಕೂಡ ಕೇಜ್ರಿವಾಲ್ ಆರೋಪಿಸಿದರು. ನನ್ನ ಬಳಿ ಇದಕ್ಕೆ ಪುರಾವೆಗಳಿವೆ. ಅವರ ಬಂಧನವಾದ ಬಳಿಕ ಅವರು ಬಿಜೆಪಿಗೆ ದೇಣಿಗೆ ನೀಡಿದ್ದಾರೆ ಎಂದರು.
ಮನೀಶ್ ಸಿಸೋಡಿಯಾ ಅವರಿಗೆ ಕೆಲವು ದಾಖಲೆಗಳನ್ನು ತಾವು ನೀಡಿರುವುದಾಗಿಯೂ ತಮ್ಮ ಹೇಳಿಕೆಯಲ್ಲಿ ಕೇಜ್ರಿವಾಲ್ ಹೇಳಿದ್ದಾರೆ. ಎಎಪಿ ಭ್ರಷ್ಟ ಎಂದು ದೇಶದೆದುರು ಬಿಂಬಿಸಲಾಗುತ್ತಿದೆ. ಈಡಿ ಎಎಪಿಯನ್ನು ಹತ್ತಿಕ್ಕಲು ಬಯಸಿದೆ ಎಂದು ಕೇಜ್ರಿವಾಲ್ ಹೇಳಿದರು.
ಮದ್ಯದ ಹಗರಣದಲ್ಲಿ 100 ಕೋಟಿ ರೂಪಾಯಿ ವ್ಯವಹಾರ ನಡೆದಿದೆ ಎಂದು ಆರೋಪಿಸಲಾಗುತ್ತಿದೆ. ಹಣದ ಜಾಡು ಇನ್ನೂ ಪತ್ತೆಯಾಗಿಲ್ಲ ಎಂದು ನ್ಯಾಯಮೂರ್ತಿ ಸಂಜೀವ್ ಖನ್ನಾ ಹೇಳಿದ್ದಾರೆ ಎಂಬುದನ್ನೂ ಕೇಜ್ರಿವಾಲ್ ಪ್ರಸ್ತಾಪಿಸಿದರು. ಅಬಕಾರಿ ಹಗರಣದ ಹಣ ಎಲ್ಲಿದೆ ? ಅದಿನ್ನೂ ಪತ್ತೆಯಾಗಿಲ್ಲ. ಹಗರಣದ ಅಸಲೀ ರೂಪ ಏನೆಂದರೆ, ಈ ನೆಪದಲ್ಲಿ ಆಮ್ ಆದ್ಮಿ ಪಾರ್ಟಿಯನ್ನು ನಾಶ ಮಾಡುವುದೇ ಇದರ ಉದ್ದೇಶವಾಗಿದೆ.
ಶರತ್ ರೆಡ್ಡಿ 55 ಕೋಟಿ ಚಂದಾ ಕೊಡುತ್ತಾರೆ. ಬಿಜೆಪಿ ತೆಗೆದುಕೊಳ್ಳುತ್ತದೆ. ಆದರೆ ಎಎಪಿ ವಿರುದ್ಧ, ಹವಾಲಾ ಹಣವನ್ನು ಗೋವಾ ಚುನಾವಣೆಗೆ ಬಳಸಿಕೊಳ್ಳಲಾಗಿದೆ ಎಂಬ ಆರೋಪ ಹೊರಿಸಲಾಗುತ್ತದೆ. ಆದರೆ ಗೋವಾ ಚುನಾವಣೆಯಲ್ಲಿ ಅತಿ ಹೆಚ್ಚು ಖರ್ಚು ಮಾಡಿದ್ದು ಟಿಎಂಸಿ, ಅನಂತರ ಬಿಜೆಪಿ. ಆದರೆ ಎಎಪಿ ಖರ್ಚು ಮಾಡಿದ್ದು 4 ಕೋಟಿ ಮಾತ್ರ. ಹವಾಲಾ ಮೂಲಕ ಕೋಟಿಗಟ್ಟಲೆ ಹಣ ಹೋಗಿದ್ದರೆ ಚುನಾವಣಾ ಆಯೋಗ ಕೇಳಬೇಕಿತ್ತಲ್ಲವೆ?
ಅರಬಿಂದೋ ಫಾರ್ಮಾ ದೇಣಿಗೆ ಕೊಟ್ಟಿರುವುದನ್ನು ಈಡಿ ನಿರಾಕರಿಸಿಲ್ಲ. ಆದರೆ ಅದು ಅಬಕಾರಿ ಹಗರಣದ ಸಂಬಂಧವಾಗಿ ಅಲ್ಲ ಎನ್ನುತ್ತದೆ.
ಈಡಿಗೆ ಹೇಗೆ ಗೊತ್ತು ಅದು ಅಬಕಾರಿ ಹಗರಣಕ್ಕೆ ಸಂಬಂಧಿಸಿಲ್ಲ ಎಂದು? ಇದು ಕೇಜ್ರಿವಾಲ್ ಅವರ ಪ್ರಶ್ನೆ. ಭ್ರಷ್ಟಾಚಾರದ ಹೆಸರಲ್ಲಿ ವಿಪಕ್ಷಗಳನ್ನು ನಾಶಗೊಳಿಸಲಾಗುತ್ತಿದೆ. ಅದೇ ಬಿಜೆಪಿ ಜೊತೆ ಹೋದರೆ ಎಲ್ಲರೂ ದೋಷಮುಕ್ತರು. ಕೇಸ್ ಕ್ಲೋಸ್.
ಸಾವಿರಾರು ಕೋಟಿ ಹಗರಣದ ಆರೋಪವನ್ನು ಬಿಜೆಪಿ ಯಾರ ಮೇಲೆ ಹೊರಿಸಿತ್ತೊ ಅದೇ ಅಜಿತ್ ಪವಾರ್ ಬಿಜೆಪಿ ಜೊತೆಗೆ ಸರ್ಕಾರದಲ್ಲಿ ಡಿಸಿಎಂ ಅಗಿದ್ಧಾರೆ. ಪ್ರಧಾನಿ ಅಜಿತ್ ಪವಾರ್ ಪಕ್ಷದ ಮೇಲೆ 70 ಸಾವಿರ ಕೋಟಿ ಹಗರಣದ ಆರೋಪ ಮಾಡಿದ ಮೂರ್ನಾಲ್ಕು ದಿನಗಳಲ್ಲೇ ಅದೇ ಪಕ್ಷದ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡು ಅಜಿತ್ ಪವಾರ್ ರನ್ನು ಡಿಸಿಎಂ ಮಾಡುತ್ತದೆ.
ಆದರೆ 100 ಕೋಟಿ ಆರೋಪದಲ್ಲಿ ದೆಹಲಿ ಡಿಸಿಎಂ ಮನಿಶ್ ಸಿಸೋಡಿಯಾ ಅವರನ್ನು ವರ್ಷದಿಂದ ಜೈಲಿನಲ್ಲಿಡಲಾಗಿದೆ.
ಈಗ ಸಿಎಂ ಕೇಜ್ರಿವಾಲ್ ಅವರನ್ನೂ ಜೈಲುಪಾಲು ಮಾಡಲಾಗಿದೆ. ಎಲ್ಲಿಯ ಎಪ್ಪತ್ತು ಸಾವಿರ ಕೋಟಿ ಹಗರಣ ? ಎಲ್ಲಿಯ ನೂರು ಕೋಟಿಯ ಹಗರಣ ? ಇದಕ್ಕಿಂತ ದೊಡ್ಡ ವಿಪರ್ಯಾಸ ಏನಿದೆ ? ಬಿಜೆಪಿಯ ಮುಖ ಜನರೆದುರು ಬಯಲಾಗುತ್ತಿದೆ. ಆದರೆ ಅದು ಮಾತ್ರ ತನ್ನ ಭಂಡತನ ಪ್ರದರ್ಶನವನ್ನು ನಿರ್ಲಜ್ಜೆಯಿಂದ ಮುಂದುವರಿಸಿಯೇ ಇದೆ.