ಚಂಡೀಗಢದಲ್ಲಿ ತಿರುಗುಬಾಣವಾದ ಚುನಾವಣಾ ಮೋಸ
ಚಂಡೀಗಢದಲ್ಲಿ ಪಾಕಿಸ್ತಾನದಂತಹ ದುಸ್ಥಿತಿ ಬಂದಿದ್ದು ಯಾರಿಂದ ? ► ಪ್ರಜಾಪ್ರಭುತ್ವವನ್ನು ಹೊಸಕಿ ಹಾಕಿ, ಜನಾದೇಶವನ್ನು ಸೋಲಿಸಿ ಬಿಜೆಪಿ ಗೆಲ್ಲಬೇಕೆ ?
ಗೆಲ್ಲುವುದೊಂದೇ ಮುಖ್ಯ ಎಂದುಕೊಳ್ಳುವ ಬಿಜೆಪಿ ಅದಕ್ಕಾಗಿ ಏನು ಮಾಡುವುದಕ್ಕೂ ಹೇಸುವುದಿಲ್ಲ ಎಂಬುದು ಮತ್ತೆ ಮತ್ತೆ ಬಯಲಾಗುತ್ತಲೇ ಇದೆ. ಚಂಡೀಗಢ ಮೇಯರ್ ಚುನಾವಣೆ ಸುಪ್ರೀಂ ಕೋರ್ಟ್ ನಲ್ಲಿ ಸೋಮವಾರ ಐತಿಹಾಸಿಕ ಘಟನೆಗೆ ಕಾರಣವಾಯಿತು. ದೇಶದ ಇತಿಹಾಸದಲ್ಲೇ ಮೊದಲ ಬಾರಿ ಸುಪ್ರೀಂ ಕೋರ್ಟ್ ನಲ್ಲಿ ಮುಖ್ಯ ನ್ಯಾಯಮೂರ್ತಿಗಳು ಒಬ್ಬ ಚುನಾವಣಾಧಿಕಾರಿಯ ಪಾಟೀ ಸವಾಲು ನಡೆಸಿದರು. ಸಿ ಜೆ ಐ ಅವರ ಖಡಕ್ ಪ್ರಶ್ನೆಗೆ ಚುನಾವಣಾಧಿಕಾರಿ ಕೊನೆಗೂ ಸತ್ಯ ಒಪ್ಪಿಕೊಳ್ಳಲೇಬೇಕಾಯಿತು.
ಚಂಡೀಘಡ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಎಷ್ಟು ಹೇಯ ಹಾದಿಯನ್ನು ಹಿಡಿಯಿತು ಎಂಬುದನ್ನು ದೇಶವೇ ನೋಡಿದ ಮೇಲೂ ಕುದುರೆ ವ್ಯಾಪಾರದ ತನ್ನ ಕೊಳಕು ಚಾಳಿಯನ್ನು ಬಿಜೆಪಿ ಬಿಟ್ಟಿಲ್ಲ. ಈ ವಿಚಾರ, ಆ ಪಕ್ಷ ಅದೆಷ್ಟು ಭಂಡತನ ಉಳ್ಳದ್ದಾಗಿದೆ ಎನ್ನುವುದಕ್ಕೆ ನಿದರ್ಶನ. ಇಷ್ಟೊಂದು ಸ್ಪಷ್ಟವಾಗಿ ತನ್ನ ಅಕ್ರಮಗಳು ಬಯಲಾಗಿದ್ದರೂ ಬಿಜೆಪಿ ಏಕೆ ಗೆಲ್ಲಲೇಬೇಕೆಂಬ ಹಠದಲ್ಲಿ ಮತ್ತೂ ಅಕ್ರಮ ಹಾದಿಯನ್ನೇ ತುಳಿಯುತ್ತದೆ? ಅಷ್ಟರ ಮಟ್ಟಿಗೆ ಅದಕ್ಕೆ ಪ್ರಜಾತಂತ್ರದ ಮೌಲ್ಯಗಳು ಮತ್ತು ಸಾಂವಿಧಾನಿಕ ಕ್ರಮಗಳೆಂದರೆ ಅಸಡ್ಡೆಯೆ?
ಅಡ್ಡ ಹಾದಿಯಲ್ಲಿಯೇ ನಡೆದು ಹೇಗಾದರೂ ಅಧಿಕಾರ ಪಡೆಯುವುದು ಬಿಜೆಪಿಗೆ ಚಟವೇ ಆಗಿಬಿಟ್ಟಿದೆಯೆ? ಯಾಕೆ ಅದಕ್ಕೆ ಇಡೀ ದೇಶದೆದುರು ತನ್ನ ಮಾನವೆಲ್ಲ ಹೋಯಿತೆಂಬ ಕನಿಷ್ಠ ಹಿಂಜರಿತವೂ ಇಲ್ಲ ಮತ್ತು ಹೇಗೆ ಅದು ಕುದುರೆ ವ್ಯಾಪಾರದ ಮೂಲಕ ಇಡೀ ಪ್ರಜಾತಂತ್ರ ವ್ಯವಸ್ಥೆಯೇ ಕುಸಿಯಲು ಕಾರಣವಾಗುತ್ತಿದೆ? ಚಂಡೀಘಡ ಮೇಯರ್ ಚುನಾವಣೆಯಲ್ಲಿ ನಡೆದಂಥದೇ ತಿರುಚುವಿಕೆ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿಯೂ ಆಗಿದೆ.
ಆರ್ಥಿಕತೆ ಸಹಿತ ದೇಶದ ಎಲ್ಲ ವ್ಯವಸ್ಥೆಗಳೂ ಅಧಪತನದ ದಾರಿ ಹಿಡಿದಿರುವ ದೇಶ ಪಾಕಿಸ್ತಾನ. ಅಲ್ಲೀಗ ಚುನಾವಣೆಯಲ್ಲೂ ಭಾರೀ ಅಕ್ರಮ ನಡೆದಿದೆ.ಆದರೆ ಅಂತಹ ದೇಶದಲ್ಲೂ ಚುನಾವಣಾಧಿಕಾರಿಯೊಬ್ಬರ ಆತ್ಮ ಸಾಕ್ಷಿ ಜೀವಂತವಾಗಿದೆ. ಅಲ್ಲಿ ಅಕ್ರಮಗಳು ನಡೆದಿರುವುದನ್ನು ಸ್ವತಃ ಒಪ್ಪಿಕೊಂಡು ರಾಜೀನಾಮೆ ನೀಡಿದ್ದಾರೆ.
ಆದರೆ ಇಲ್ಲಿ ಚಂಡೀಘಡ ಮೇಯರ್ ಚುನಾವಣೆಯಲ್ಲಿ ಲೈವ್ ಕ್ಯಾಮೆರಾದಲ್ಲಿಯೇ ತನ್ನ ಅಕ್ರಮ ಕಾಣಿಸುತ್ತಿದ್ದರೂ ಚುನಾವಣಾಧಿಕಾರಿ ಅದನ್ನು ಒಪ್ಪಲು ತಯಾರಿಲ್ಲ. ಕಡೆಗೆ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಗಂಭೀರ ಎಚ್ಚರಿಕೆಯ ಬಳಿಕ ತಾನು ತಪ್ಪೆಸಗಿರುವುದನ್ನು ಆ ಮಹಾನುಭಾವ ಒಪ್ಪಿಕೊಂಡಿದ್ಧಾಗಿದೆ.
ಕಳೆದ ತಿಂಗಳು ನಡೆದ ಚಂಡೀಘಡ ಮೇಯರ್ ಚುನಾವಣೆ ಸಂದರ್ಭದಲ್ಲಿ ಏನಾಯಿತು ಎಂಬುದನ್ನು ಒಮ್ಮೆ ನೆನಪು ಮಾಡಿಕೊಳ್ಳುವುದಾದರೆ,
ಚಂಡೀಘಡ ಚುನಾವಣೆಯಲ್ಲಿ ಆಪ್ ಅಭ್ಯರ್ಥಿ ಗೆಲುವು ಖಚಿತವಾಗಿತ್ತು. ಆಪ್ ಬಳಿ 13 ಹಾಗೂ ಕಾಂಗ್ರೆಸ್ ಬಳಿ 7 ಕೌನ್ಸಿಲರ್ಸ್ ಬಲವಿತ್ತು. ಮೈತ್ರಿಪಕ್ಷಗಳ ಗೆಲುವಿನ ಸಾಧ್ಯತೆ ಸ್ಪಷ್ಟವಿತ್ತು. ಆದರೆ ಅಂತಿಮ ಹಂತದಲ್ಲಿ ಅಚ್ಚರಿ ನಡೆದಿತ್ತು. 20 ವೋಟುಗಳಿದ್ದ ಮೈತ್ರಿಪಕ್ಷಗಳ ಎದುರು 16 ವೋಟುಗಳಿದ್ದ ಬಿಜೆಪಿ ದುರ್ನೀತಿಗಿಳಿದು ಗೆದ್ದಿತ್ತು.
ಬಿಜೆಪಿ ಅಭ್ಯರ್ಥಿ ಸೋಂಕರ್ 16 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಆಮ್ ಆದ್ಮಿ ಪಾರ್ಟಿಯ ಕುಲ್ದೀಪ್ ಕುಮಾರ್ 12 ಮತಗಳನ್ನು ಪಡೆದು ಸೋತಿದ್ದರು. ಎಎಪಿ ಮತ್ತು ಕಾಂಗ್ರೆಸ್ ಒಟ್ಟು 20 ಮತಗಳನ್ನು ಹೊಂದಿದ್ದವು. ಆದರೆ ಎಎಪಿ ಮತ್ತು ಕಾಂಗ್ರೆಸ್ನ 8 ಮತಗಳನ್ನು ಅಸಿಂಧು ಎಂದು ಘೋಷಿಸಿದರು ಚುನಾವಣಾಧಿಕಾರಿ ಹಾಗು ಬಿಜೆಪಿ ಸದಸ್ಯರೇ ಆಗಿದ್ದ ಅನಿಲ್ ಮಸಿಹ್.
ಆದರೆ ಚಲಾವಣೆಗೊಂಡ ಮತಪತ್ರಗಳ ಮೇಲೆ ಚುನಾವಣಾಧಿಕಾರಿ ಎಕ್ಸ್ ಗುರುತು ಹಾಕುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು.
ಲೈವ್ ಕ್ಯಾಮರಾ ಎದುರಲ್ಲಿಯೇ ಚುನಾವಣಾಧಿಕಾರಿ ಹೀಗೆ ಅನಾಚಾರದಲ್ಲಿ ತೊಡಗಿದ್ದರು ಮತ್ತು ಮತಗಳನ್ನು ಎಲ್ಲರ ಕಣ್ಣೆದುರಲ್ಲಿಯೇ ಅನರ್ಹಗೊಳಿಸಿದ್ದರು.
ಮೇಯರ್ ಚುನಾವಣೆಯ ರಿಟರ್ನಿಂಗ್ ಆಫೀಸರ್ ಮತಪತ್ರಗಳನ್ನು ತಿದ್ದುವ ಅಥವಾ ವಿರೂಪಗೊಳಿಸುವ ಮೂಲಕ ಪ್ರಜಾಪ್ರಭುತ್ವವನ್ನು ಕೊಲೆ ಮಾಡುತ್ತಿದ್ದಾರೆಯೇ? ಪ್ರಜಾಪ್ರಭುತ್ವದ ಕಗ್ಗೊಲೆಗೆ ಅವಕಾಶ ನೀಡುವುದಿಲ್ಲ ಎಂದು ಕೋರ್ಟ್ ಫೆಬ್ರವರಿ 5ರಂದು ಹೇಳಿತ್ತು. ಚುನಾವಣೆಗೆ ಸಂಬಂಧಿಸಿದ ವೀಡಿಯೋಗ್ರಫಿ ಸೇರಿದಂತೆ ಎಲ್ಲಾ ಮತಪತ್ರಗಳು ಮತ್ತು ಇತರ ಮೂಲ ದಾಖಲೆಗಳನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್‌ಗೆ ಹಸ್ತಾಂತರಿಸುವಂತೆ ಆ ದಿನ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.
ಚುನಾವಣಾಧಿಕಾರಿ ಅನಿಲ್ ಮಸಿಹ್ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತ ಪಡಿಸಿತ್ತು. ಇದಾದ ಬಳಿಕ ನಿನ್ನೆ ಫೆಬ್ರವರಿ 19ರಂದು ಕೋರ್ಟ್ ಮಹತ್ವದ ಆದೇಶವನ್ನು ಕೊಟ್ಟಿದೆ. ಚಂಡೀಗಢ ಮೇಯರ್ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬುದನ್ನು ಸುಪ್ರೀಂ ಕೋರ್ಟ್ ಗಮನಿಸಿದೆ. ಮೇಯರ್ ಚುನಾವಣೆಯ ಮತಪತ್ರಗಳನ್ನು ಮತ್ತು ದಾಖಲೆಗಳನ್ನು ಸುರಕ್ಷಿತವಾಗಿ ದೆಹಲಿಗೆ ತರಲು ನ್ಯಾಯಾಂಗ ಅಧಿಕಾರಿಯನ್ನು ನಿಯೋಜಿಸುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ನಿರ್ದೇಶನ ನೀಡಿದೆ.
ಚುನಾವಣಾಧಿಕಾರಿ ಅನಿಲ್ ಮಸಿಹ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಅಧಿಕಾರಿ ಮತಪತ್ರಗಳನ್ನು ತಿದ್ದಿರುವುದು ಸ್ಪಷ್ಟವಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದೆ. ಅಧಿಕಾರಿಯ ಈ ಕ್ರಮ ಕೊಲೆಗೆ ಸಮ ಮತ್ತು ಪ್ರಜಾಪ್ರಭುತ್ವದ ವ್ಯಂಗ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ, ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳ ಸುರಕ್ಷತೆ ಖಚಿತಪಡಿಸಿಕೊಳ್ಳಲು ಹೈಕೋರ್ಟ್ ನೇಮಿಸುವ ನ್ಯಾಯಾಂಗ ಅಧಿಕಾರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಚಂಡೀಗಢ ಆಡಳಿತಕ್ಕೆ ಕೂಡ ನಿರ್ದೇಶನ ನೀಡಿದೆ. ಸುಪ್ರೀಂ ಕೋರ್ಟ್‌ನ ನಿರ್ದೇಶನದ ಅನುಸಾರವಾಗಿ ಪೀಠದ ಮುಂದೆ ಹಾಜರಾಗಿದ್ದ ಚುನಾವಣಾಧಿಕಾರಿ ಮಸಿಹ್, 8 ಮತಪತ್ರಗಳನ್ನು ತಿರುಚಿರುವುದನ್ನು ಮೊದಲು ಒಪ್ಪಿಕೊಂಡಿಲ್ಲ. ನಾನು ಅದರ ಮೇಲೆ ಸಹಿ ಮಾಡಬೇಕಿತ್ತು ಎಂದು ವಾದಿಸಿದ್ದಾರೆ.
ಆಗ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ " ನೀವು ಕ್ಯಾಮರಾ ಕಡೆ ನೋಡಿ, ಮತಪತ್ರದ ಮೇಲೆ ಎಕ್ಸ್ ಗುರುತು ಹಾಕುತ್ತಿರುವುದು ವೀಡಿಯೊದಲ್ಲಿ ಕಾಣುತ್ತಿದೆ, ನನ್ನ ಪ್ರಶ್ನೆಗೆ ಸರಿಯಾಗಿ ಉತ್ತರಿಸಿ, ಇಲ್ಲದಿದ್ದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ, ನಿಮಗೆ ಮತಪತ್ರದ ಮೇಲೆ ಸಹಿಯಲ್ಲದೆ ಬೇರೆ ಯಾವುದೇ ಮಾರ್ಕ್ ಮಾಡುವ ಅಧಿಕಾರವಿದೆಯೇ ? ಎಲ್ಲಿದೆ ಅಂತಹ ನಿಯಮ, ನನಗೆ ತೋರಿಸಿ " ಎಂದು ಹೇಳಿದಾಗ ಅನಿಲ್ ಮಸೀಹ್ ಕೊನೆಗೂ ಒಪ್ಪಿಕೊಂಡಿದ್ದಾರೆ.
ಮತಪತ್ರಗಳು ಹರಿದಿವೆ ಅಥವಾ ವಿರೂಪಗೊಂಡಿವೆ ಎಂದು ಸಾಲಿಸಿಟರ್ ಜನರಲ್ ಹೇಳಿದಾಗ, ಆಪ್ ಪರ ವಕೀಲರು ಅದರ ಪರಿಶೀಲನೆ ಅಗತ್ಯವಿಲ್ಲ, ಎಂಟು ಮತಪತ್ರಗಳ ಪರಿಶೀಲನೆ ಮಾತ್ರ ಅಗತ್ಯವಿದ್ದು, ಅವುಗಳು ಹರಿದಿಲ್ಲ ಎಂದು ಹೇಳಿದರು.
ಹೀಗಾಗಿ ಮರುಚುನಾವಣೆ ನಡೆಸುವ ಬದಲು ಚುನಾವಣಾಧಿಕಾರಿ ಮಾಡಿದ ಗುರುತುಗಳನ್ನು ಗಣನೆಗೆ ತೆಗೆದುಕೊಳ್ಳದೆ ಮತಪತ್ರಗಳನ್ನು ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸಬೇಕು ಎಂದು ಸುಪ್ರೀಂ ಕೊರ್ಟ್ ಆದೇಶಿಸಿದೆ. ಬಿಜೆಪಿಗೆ ಭಾರೀ ನಿರಾಸೆಯಾಗಿದೆ. ಯಾಕೆಂದರೆ, ಚುನಾವಣೆಯಲ್ಲಿ ಅಕ್ರಮ ನಡೆಸಿರುವುದು ಸಾಬೀತಾದ ಮೇಲೆಯೂ ಅದು ಹೇಗಾದರೂ ಚುನಾವಣೆ ಗೆಲ್ಲುವುದಕ್ಕಾಗಿ ಕುದುರೆ ವ್ಯಾಪಾರ ನಡೆಸಿತ್ತು.
ಆಮ್ ಆದ್ಮಿ ಪಕ್ಷದ ಮೂವರನ್ನು ತನ್ನತ್ತ ಸೆಳೆದುಕೊಂಡು, ಮತ್ತೆ ಚುನಾವಣೆ ನಡೆದರೂ ಗೆಲ್ಲುವುದಕ್ಕೆ ವ್ಯವಸ್ಥೆ ಮಾಡಿಕೊಂಡುಬಿಟ್ಟಿತ್ತು.
ಆದರೆ ಮತ್ತೆ ಚುನಾವಣೆ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿಬಿಟ್ಟಿದೆ. ಈ ಹೊತ್ತಲ್ಲಿಯೇ ಪಾಕಿಸ್ತಾನದಲ್ಲಿನ ವಿದ್ಯಮಾನ ಚಂಡೀಘಡ ಮೇಯರ್ ಚುನಾವಣೆಯಲ್ಲಿನ ಅಕ್ರಮಗಳ ನೆನಪಾಗಲು ಕಾರಣವಾಗಿದೆ. ಪಾಕಿಸ್ತಾನದ ಚುನಾವಣೆಯಲ್ಲಿ ಅಕ್ರಮ ನಡೆದಿದೆ. ಫೆಬ್ರವರಿ 8ರ ಚುನಾವಣೆಯ ಫಲಿತಾಂಶಗಳನ್ನು ತಿರುಚಲಾಗಿದೆ ಎಂದು ಒಪ್ಪಿಕೊಂಡಿರುವ ರಾವಲ್ಪಿಂಡಿ ಆಯುಕ್ತ ಲಿಯಾಖತ್ ಅಲಿ ಚತ್ತಾ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಾವಲ್ಪಿಂಡಿ ವಿಭಾಗದ ಜನರಿಗೆ ನಾನು ಅನ್ಯಾಯ ಮಾಡಿದ್ದೇನೆ ಎಂದು ಹೇಳಿ ಪೊಲೀಸರಿಗೆ ಶರಣಾಗಿರುವ ಚತ್ತಾ, ಅಕ್ರಮ ಎಸಗುವಂತೆ ಭಾರೀ ಒತ್ತಡಕ್ಕೆ ಒಳಗಾಗಬೇಕಾಗಿ ಬಂತೆಂದು ಹೇಳಿಕೊಂಡಿದ್ದಾರೆ. ರಾವಲ್ಪಿಂಡಿ ಆಯುಕ್ತರ ಈ ತಪ್ಪೊಪ್ಪಿಗೆಯೊಂದಿಗೆ, ಅಲ್ಲಿ ಗೆದ್ದ ಅಭ್ಯರ್ಥಿಗಳು ಸೋತಿದ್ದಾರೆ. ಎಲ್ಲವೂ ಬದಲಾಗುವಂತಾಗಿದೆ. ಪಾಕಿಸ್ತಾನದಲ್ಲೇನೋ ಆ ಹಿರಿಯ ಅಧಿಕಾರಿ ಖುದ್ದು ತಪ್ಪೊಪ್ಪಿಕೊಂಡರು. ತನಗೆ ಶಿಕ್ಷೆ ಆಗಬೇಕಾದ್ದೇ ಎಂದರು.
ಆದರೆ ಇಲ್ಲಿ, ಅಕ್ರಮವೆಸಗಿದ್ದ ಬಿಜೆಪಿ ಕಡೆಯವರಿಗೆ ತಪ್ಪು ಒಪ್ಪಿಕೊಳ್ಳುವ ಮನಸ್ಸಿಲ್ಲ. ಕಣ್ಣೆದುರೇ ಸಾಕ್ಷಿಗಳಿದ್ದರೂ ಇಲ್ಲವೆನ್ನುವಷ್ಟು ಭಂಡತನ.
ಬಿಜೆಪಿಗೆ ಬರೀ ಗೆಲ್ಲುವುದು ಬೇಕು ಎಂಬುದಕ್ಕೆ ಚಂಡೀಘಡ ಮೇಯರ್ ಚುನಾವಣೆಯಲ್ಲಿ ಅದು ನಡೆದುಕೊಂಡ ರೀತಿಯೇ ಸಾಕ್ಷಿ. ಆದರೆ ಆ ಗೆಲುವು ಅಸಾಂವಿಧಾನಿಕವೊ ಅನೈತಿಕವೊ ಎಂಬುದರ ಬಗ್ಗೆ ಅದಕ್ಕೆ ಒಂದಿಷ್ಟೂ ಕಳವಳವಿಲ್ಲ,
ಚುನಾವಣೆಯಲ್ಲಿನ ಅಕ್ರಮಗಳ ಬಗ್ಗೆ ಅನೇಕ ಬಾರಿ ಬಿಜೆಪಿ ವಿರುದ್ಧ ಆರೋಪಗಳು ಕೇಳಿಬಂದಿವೆ ಮತ್ತವನ್ನು ಬಿಜೆಪಿ ನಿರಾಕರಿಸುತ್ತಲೇ ಬಂದಿತ್ತು. ಆದರೆ ಮೇಯರ್ ಚುನಾವಣೆಯಲ್ಲಿ ಸಿಕ್ಕಿಬಿದ್ದು, ಅದರ ಬಣ್ಣವೆಲ್ಲ ಬಯಲಾಗಿದೆ. ಇಷ್ಟೆಲ್ಲ ಆದ ಮೇಲೂ ಅಂಥದೇ ಅನೈತಿಕ ನಡೆಗಳಲ್ಲಿ ಬಿಜೆಪಿ ಸಕ್ರಿಯವಾಗಿಯೇ ಇದೆಯೆಂಬುದು ವಿಪರ್ಯಾಸ. ಇದೆಲ್ಲ ಬೆಳವಣಿಗೆ ನಡಡುವೆಯೇ ಅದು ಮತ್ತೆ ಗೆಲ್ಲುವುದಕ್ಕಾಗಿ ಆಮ್ ಆದ್ಮಿ ಪಾರ್ಟಿಯ ಮೂವರನ್ನು ತನ್ನತ್ತ ಸೆಳೆದಿತ್ತು.
ತಪ್ಪು ಮಾಡಿರುವುದು ಸಾಬೀತಾಗಿರುವುದರ ನಡುವೆಯೂ ಅದು ಗೆಲ್ಲುವುದಕ್ಕಾಗಿ ಮತ್ತೆ ಅಂಥದೇ ಹಾದಿಯನ್ನು ಹುಡುಕುತ್ತದೆ ಮತ್ತು ಕುದುರೆ ವ್ಯಾಪಾರಲ್ಲಿ ತೊಡಗುತ್ತದೆ ಎಂದರೆ ಅಚ್ಚರಿ ಮತ್ತು ಆಘಾತವಾಗುತ್ತದೆ. ಇಂಥ ರಾಜಕೀಯ ಕುದುರೆ ವ್ಯಾಪಾರದ ಬಗ್ಗೆ ಸುಪ್ರಿಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಇಂಥ ಎಲ್ಲ ಅಡ್ಡದಾರಿಗಳ ನಡುವೆಯೂ ಆಶಾವಾದದಂತೆ ಸುಪ್ರೀಂ ಕೋರ್ಟ್ ತೀರ್ಪು ಕಾಣಿಸುತ್ತಿದೆ. ಮತ್ತು ಆ ಮೂಲಕ ಕುದುರೆ ವ್ಯಾಪಾರದ ಸತ್ಯಗಳು ಬಯಲಾಗಿವೆ. ಮುಂದಾದರೂ ಒಳ್ಳೆಯ ದಿನಗಳು ಬಂದಾವೆಯೆ?