FAO Report :ಕ್ಷೀಣ ಬೆಳವಣಿಗೆಯ 5 ವರ್ಷಕ್ಕಿಂತ ಕೆಳಗಿನ ಮಕ್ಕಳ ಸಂಖ್ಯೆ ಭಾರತದಲ್ಲಿಯೇ ಅತಿ ಹೆಚ್ಚು
Photo: PTI
ಅದೆಷ್ಟೇ ಪರದೆ, ಟಾರ್ಪಾಲು ಅಡ್ಡ ಕಟ್ಟಿದರೂ, ಸತ್ಯ ಮರೆಮಾಚಲು ಯತ್ನಿಸಿದರೂ ವಾಸ್ತವ ಬದಿಯಿಂದ ಇಣುಕಿ ಹೊರ ಬಂದೇ ಬರುತ್ತೆ.
ನಾವು ವಿಶ್ವದ ಮೂರನೇ ದೊಡ್ಡ ಆರ್ಥಿಕತೆ ಆಗುತ್ತಿದ್ದೇವೆ, ವಿಶ್ವಗುರು ಆಗುತ್ತಿದ್ದೇವೆ ಎಂದು ಅದೆಷ್ಟೇ ಬಾಜಾ ಭಜಂತ್ರಿ ಬಾರಿಸಿದರೂ ಕಹಿ ಸತ್ಯ ಆ ಪರದೆಯ, ಮರೆಯಿಂದ ಆಚೆ ಬರುತ್ತಲೇ ಇರುತ್ತದೆ.
ಬಹಳಷ್ಟು ವಿಚಾರಗಳಲ್ಲಿ ಅಂಥ ದೊಡ್ಡ ಕಹಿ ಸತ್ಯಗಳು ಮತ್ತೆ ಮತ್ತೆ ಬಯಲಾಗುತ್ತಲೇ ಇವೆ. ಸರಕಾರ ಮಾತ್ರ ಅದನ್ನು ನಿರಾಕರಿಸುತ್ತಲೇ ಇದೆ.
ಈ ವಿಶ್ವಗುರು ದೇಶದ ಶೇ.74.1ರಷ್ಟು ಜನರಿಗೆ 2021ರಲ್ಲಿ ಪೌಷ್ಟಿಕ ಆಹಾರ ಸಿಗುವುದು ಅಸಾಧ್ಯವಾಗಿತ್ತು ಎಂದು ವಿಶ್ವಸಂಸ್ಥೆಯ ಆಹಾರ ಸಂಸ್ಥೆಯ ವರದಿ ಹೇಳುತ್ತಿದೆ. 2020 ರಲ್ಲಿ ಈ ಪ್ರಮಾಣ 76.2% ಇತ್ತು.
ವಿಶೇಷ ಅಂದ್ರೆ, ವಿಶ್ವ ಹಸಿವು ಸೂಚ್ಯಂಕವೇ ಸರಿಯಿಲ್ಲ ಎಂದು ಸರಕಾರ ಹೇಳಿತ್ತು. ಈಗ ಸರಕಾರದೊಂದಿಗೇ ಸೇರಿ ಕೆಲಸ ಮಾಡುವ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯೇ ಈ ಕಹಿ ಸತ್ಯವನ್ನು ಜಗತ್ತಿನ ಮುಂದಿಟ್ಟಿದೆ. ಆ ವರದಿಯಲ್ಲಿ ಬಹಿರಂಗವಾಗಿರುವ ವಿಷಯಗಳು ತೀರಾ ಆಘಾತಕಾರಿ ಹಾಗು ನಾಚಿಕೆಗೇಡಿನದ್ದಾಗಿವೆ.
ಭಾರತದಲ್ಲಿನ ಪೌಷ್ಠಿಕ ಆಹಾರದ ಈ ದಯನೀಯ ಸ್ಥಿತಿಯನ್ನು ಗಮನಿಸಿದರೆ, ಪಾಕಿಸ್ತಾನ ಮತ್ತು ನೇಪಾಳ ಹೊರತುಪಡಿಸಿ ಏಷ್ಯಾದ ಇತರ ಕೆಲ ದೇಶಗಳು ಬಹುಪಾಲು ನಮಗಿಂತ ಮೇಲಿವೆ. ಬಾಂಗ್ಲಾದೇಶದಲ್ಲಿ ಪೌಷ್ಠಿಕ ಆಹಾರ ಪಡೆಯಲಾರದವರ ಸಂಖ್ಯೆ ಶೇ. 66.1
ಶ್ರೀಲಂಕಾದಲ್ಲಿ ಈ ಪ್ರಮಾಣ ಶೇ.55.5
ಬೂತಾನ್ನಲ್ಲಿ ಶೇ.45.2
ಇರಾನ್ನಲ್ಲಿ ಶೇ.30
ಮಾಲ್ಡೀವ್ಸ್ ನಲ್ಲಿ ಶೇ.1.2
ಹೆಚ್ಚುತ್ತಿರುವ ಆಹಾರ ವೆಚ್ಚಗಳಿಗೆ ಅನುಗುಣವಾಗಿ ಆದಾಯ ಇಲ್ಲದೇ ಹೋದರೆ ಹೆಚ್ಚು ಮಂದಿ ಪೌಷ್ಠಿಕ ಆಹಾರ ಪಡೆಯಲು ಅಸಮರ್ಥರಾಗುತ್ತಾರೆ ಎಂದು ವರದಿ ಎಚ್ಚರಿಸಿದೆ. ವಿಶ್ವದ ತೀವ್ರ ಆಹಾರ ಅಭದ್ರತೆಯ ಅರ್ಧದಷ್ಟು ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶದಲ್ಲೇ ಇರುವುದನ್ನು ಗುರುತಿಸುವ ವರದಿ, ಪುರುಷರಿಗಿಂತ ಮಹಿಳೆಯರು ಪೌಷ್ಠಿಕ ಆಹಾರದಿಂದ ಹೆಚ್ಚು ವಂಚಿತರಾಗುತ್ತಿರುವ ದಾರುಣ ಸ್ಥಿತಿಯತ್ತ ಗಮನ ಸೆಳೆಯುತ್ತದೆ.
ಇನ್ನು, ನಮ್ಮ ದೇಶದ ಜನಸಂಖ್ಯೆಯ ಶೇ.16.6ರಷ್ಟು ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ವರದಿ ಹೇಳುತ್ತಿದೆ. ಈ ಅಪೌಷ್ಟಿಕತೆಯ ಪರಿಣಾಮ ಕೇವಲ ಆರೋಗ್ಯಕ್ಕೆ ಸೀಮಿತವಲ್ಲ, ಇದು ಆರ್ಥಿಕ ಹಾಗು
ಸಾಮಾಜಿಕವಾಗಿಯೂ ಸಮಸ್ಯೆ ಸೃಷ್ಟಿಸುತ್ತದೆ.
ದೇಶದ ಐದು ವರ್ಷದೊಳಗಿನ ಶೇ.31.7 ಮಕ್ಕಳು ಕುಂಠಿತ ಬೆಳವಣಿಗೆಗೆ ತುತ್ತಾಗಿದ್ದಾರೆ. ಅಂದರೆ ವಯಸ್ಸಿಗೆ ಅನುಗುಣವಾಗಿ ಇರಬೇಕಾದ ಎತ್ತರವನ್ನು ಹೊಂದಿಲ್ಲ.
ಇನ್ನೊಂದೆಡೆ, ಎತ್ತರಕ್ಕೆ ಅನುಗುಣವಾಗಿ ಇರಬೇಕಾದುದಕ್ಕಿಂತ ಕಡಿಮೆ ತೂಕವಿರುವ ಅಂದರೆ ಕ್ಷೀಣ ಬೆಳವಣಿಗೆಯ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಂಖ್ಯೆ ಭಾರತದಲ್ಲಿಯೇ ಅತಿ ಹೆಚ್ಚು. ದೇಶದ ಶೇ.18.7 ಮಕ್ಕಳು ಈ ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಿರುವುದಾಗಿ ವರದಿ ಹೇಳುತ್ತದೆ.
ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ.2.8 ಮಕ್ಕಳು ಅಧಿಕ ತೂಕ ಹೊಂದಿದ್ದು, ಇದು ಮತ್ತೊಂದು ಆರೋಗ್ಯ ಸಮಸ್ಯೆಯಾಗಿದೆ. ದೇಶದ 15ರಿಂದ 49 ವರ್ಷಗಳ ನಡುವಿನ ಶೇ.53 ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.
ಇದು ತಾಯಿ ಮತ್ತು ಹುಟ್ಟುವ ಮಗು ಇಬ್ಬರ ಮೇಲೆಯೂ ಪ್ರತಿಕೂಲ ಆರೋಗ್ಯ ಸ್ಥಿತಿಗೆ ಕಾರಣವಾಗುವ ಅಂಶವಾಗಿದೆ ಎಂದು ವರದಿ ಎಚ್ಚರಿಸಿದೆ. ವರದಿ ಪ್ರಕಾರ, 2000ದ ವೇಳೆಗೆ ಶೇ.1.6ರಷ್ಟು ವಯಸ್ಕರು ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದರು.
2016ರ ವೇಳೆಗೆ ಅಂಥವರ ಸಂಖ್ಯೆ ಶೇ.3.9ಕ್ಕೆ ಏರಿದೆ ಎಂಬುದು ವರದಿ ಉಲ್ಲೇಖಿಸಿರುವ ಇನ್ನೊಂದು ವಿಚಾರ. 5 ತಿಂಗಳವರೆಗಿನ ಶಿಶುಗಳಿಗೆ ಎದೆಹಾಲು ನೀಡುವ ಪ್ರಮಾಣದಲ್ಲಿ ಸುಧಾರಣೆ ಕಂಡಿದ್ದು, ಅದು ಶೇ.63.7 ಇದೆ. ಜಾಗತಿಕ ಪ್ರಮಾಣ ಕೇವಲ 47.7%.
ಇದೇ ವೇಳೆ, ಕಡಿಮೆ ಜನನ ತೂಕವಿದ್ದ ಮಕ್ಕಳ ಸಂಖ್ಯೆ ಕೂಡ ಭಾರತದಲ್ಲೇ ಹೆಚ್ಚು ದಾಖಲಾಗಿದ್ದು, ಈ ಪ್ರಮಾಣ ಶೇ.27.4 ರಷ್ಟಿದೆ. ನಂತರದ ಸ್ಥಾನದಲ್ಲಿ ಬಾಂಗ್ಲಾದೇಶ ಮತ್ತು ನೇಪಾಳ ಇವೆ. ಜಾಗತಿಕ ಹಸಿವು ಸೂಚ್ಯಂಕ ಕೂಡ ಇದೇ ಅಂಕಿಅಂಶಗಳನ್ನು ತೋರಿಸಿತ್ತು.
ಅದನ್ನು ಮೋದಿ ಸರ್ಕಾರ ತಪ್ಪೆಂದು ತಳ್ಳಿಹಾಕಿತ್ತು. ಆದರೆ ತನ್ನ ಸದಸ್ಯ ರಾಷ್ಟ್ರಗಳ ನಿಕಟ ಸಹಯೋಗದಲ್ಲಿಯೇ ಕೆಲಸ ಮಾಡುವ ವಿಶ್ವಸಂಸ್ಥೆಯ FAO ವರದಿಯ ಬಗ್ಗೆ ಇದೇ ಮೋದಿ ಸರ್ಕಾರ ಏನು ಹೇಳಬಹುದು?. ಸತ್ಯವನ್ನು ಎಷ್ಟೇ ಮುಚ್ಚಿಹಾಕಲು ಯತ್ನಿಸಿದರೂ ಅದು ಹೊರಗೆ ಬರುತ್ತಲೇ ಇರುತ್ತದೆ. ಮುಚ್ಚಿಹಾಕುವ ಯತ್ನದಲ್ಲಿರುವ ಸರ್ಕಾರದ ಹುಳುಕನ್ನೂ ಅದು ಬಯಲು ಮಾಡುತ್ತದೆ. ಮಡಿಲ ಮಾಧ್ಯಮಗಳು, ಐಟಿ ಸೆಲ್ ಗಳು ಅದೆಷ್ಟೇ ಬಣ್ಣಬಣ್ಣದ ಭ್ರಮೆ ಹರಡಿದರೂ ಸತ್ಯ ಮಾತ್ರ ಆಗಾಗ ಹೊರಬರುತ್ತಲೇ ಇರುತ್ತದೆ.