ಮೊದಲು ಬಾಂಬ್ ಗೆ, ಈಗ ಹಸಿವಿಗೆ ಬಲಿಯಾಗುತ್ತಿದ್ದಾರೆ ಪುಟ್ಟ ಮಕ್ಕಳು
► ಪ್ರಾಣಿಗಳ ಆಹಾರ ತಿನ್ನುವ ಅನಿವಾರ್ಯತೆಯಲ್ಲಿ ಫೆಲೆಸ್ತೀನಿಯರು ! ► ಆಹಾರ ತಯಾರಿಸುವವರ ಮೇಲೆ ಹಸಿದವರಿಂದ ದಾಳಿಯ ಅಪಾಯ ! ► ಮೂಕ ಪ್ರೇಕ್ಷಕರಾದ ಭಾಷಣಕೋರ ಜಾಗತಿಕ ನಾಯಕರು
Photo: NDTV
ಗಾಝಾದಲ್ಲಿ ಕಳೆದ ಅಕ್ಟೋಬರ್ ನಿಂದ ಬಿದ್ದ ಬಾಂಬುಗಳಿಗೆ ಲೆಕ್ಕವಿಲ್ಲ. ಗಾಝಾದ ಮೇಲೆ ಇಸ್ರೇಲ್ ಒಂದಾದ ಮೇಲೊಂದು ಬಾಂಬ್ ಹಾಕಿ ಹಾಕಿ ಆ ನಗರವನ್ನು ಸರ್ವನಾಶ ಮಾಡಿಬಿಟ್ಟಿದೆ. ಅದೆಷ್ಟು ಬಾಂಬನ್ನು ಗಾಝಾದ ಮೇಲೆ ಹಾಕಿದೆಯೋ ಅಷ್ಟೇ ಸುಳ್ಳನ್ನು ಇಸ್ರೇಲ್ ಈ ಜಗತ್ತಿಗೆ ಹೇಳಿದೆ. ಈಗ ಅಲ್ಲಿ ಈವರೆಗೆ ಹಾಕಿರುವ ಬಾಂಬ್ ಗಳಿಗೆ ಬಲಿಯಾಗದೆ ಉಳಿದವರ ಮೇಲೆ ಹೊಸತೊಂದು ಬಾಂಬ್ ಬಿದ್ದಿದೆ.
ಅದು ಹಸಿವಿನ ಬಾಂಬ್. ಅಲ್ಲಿನ ಇಪ್ಪತ್ತು ಲಕ್ಷ ಜನರ ಹೊಟ್ಟೆಗೆ ಹಸಿವಿನ ಬಾಂಬ್ ಕಟ್ಟಿಬಿಡಲಾಗಿದೆ. ಸತತ ಬಾಂಬ್ ದಾಳಿಯಿಂದಾಗಿ ನರಮೇಧವೊಂದು ದೊಡ್ಡ ಮಟ್ಟದಲ್ಲಿ ನಡೆದುಹೋದ ಬೆನ್ನಿಗೇ ಈಗ ಅಲ್ಲಿ ಮತ್ತೊಂದು ಬಗೆಯಲ್ಲಿ ಜನರು ಸಾವಿನ ಬಾಯಿಗೆ ಬೀಳುವಂತಾಗಿದೆ.
ಘೋರವೇನೆಂದರೆ, ಹಸಿವಿನಿಂದಾಗುವ ಈ ಸಾವುಗಳು ಸದ್ದೇ ಆಗುವುದಿಲ್ಲ. ತಣ್ಣಗೆಂದರೆ ತಣ್ಣಗೆ ಎಲ್ಲ ನಡೆದುಹೋಗಿರುತ್ತದೆ. ಅದು ಚರ್ಚೆಯೇ ಆಗುವುದಿಲ್ಲ. ವಿಶ್ವದ ನಾಯಕರುಗಳಿಗೆಲ್ಲ ಗಾಝಾದಲ್ಲಿನ ಈ ಹಸಿವಿನ ಬಾಯಿಗೆ ಬಿದ್ದ ಅಮಾಯಕ ಜೀವಗಳ ಬಗ್ಗೆ ಯಾವುದೇ ಚಿಂತೆಯಿಲ್ಲವಾಗಿದೆ.
ಹೆಡ್ಲೈನ್ಗಳಲ್ಲಿ, ಫೋಟೊಗಳಲ್ಲಿ, ವೀಡಿಯೊಗಳಲ್ಲಿ ಮಿಂಚುವ ವಿಶ್ವನಾಯಕರೆಲ್ಲ ತಮ್ಮ ತಮ್ಮ ಚುನಾವಣೆಗಳಲ್ಲಿ ಮುಳುಗಿಹೋಗಿದ್ದಾರೆ.
ಯುದ್ಧ ನಿಲ್ಲಿಸುವ ಮಾತಾಡುತ್ತಿದ್ದವರು ಈಗ ತಮ್ಮ ಗೆಲುವಿನ ಲೆಕ್ಕಾಚಾರದಲ್ಲಿ ಬಿದ್ದಿದ್ದಾರೆ. ಗಾಝಾದಲ್ಲಿ ಬಲಿಯಾಗಿರುವ ಮತ್ತು ಈಗಲೂ ಸಾಯುತ್ತಿರುವ ಮಕ್ಕಳ ಲೆಕ್ಕ ಈ ಮಹಾ ನಾಯಕರುಗಳಿಗೆ ಈಗ ಇಲ್ಲವಾಗಿದೆ.
ಗಾಝಾದ ಮೇಲೆ ಇಸ್ರೇಲ್ ಬಾಂಬುಗಳ ಸುರಿಮಳೆ ಸುರಿಸಲು ಪ್ರಾರಂಭಿಸಿದಾಗ ಇಸ್ರೇಲ್ ಗೆ ಬಂದಿಳಿದು ಇಸ್ರೇಲ್ ನ ಬೆನ್ನುತಟ್ಟಿ ಪ್ರೋತ್ಸಾಹಿಸಿ, ಅಭಿನಂದಿಸಿ ಹೋದ ಅಮೇರಿಕ ಅಧ್ಯಕ್ಷ ಜೋ ಬೈಡನ್ ವಾರದ ಹಿಂದೆ ಜ್ಞಾನೋದಯ ಆದವರ ಹಾಗೆ ಮಾತಾಡಿದ್ದಾರೆ. ಗಾಝಾದಲ್ಲಿ ಇಸ್ರೇಲ್ ಆಕ್ರಮಣದಿಂದ ಭಾರೀ ವಿನಾಶವಾಗಿದೆ. ನಾವು ಅಲ್ಲಿನ ಜನರ ಸಂಕಷ್ಟ ನಿವಾರಣೆಗೆ ಅಲ್ಲೊಂದು ತಾತ್ಕಾಲಿಕ ಪರಿಹಾರ ಕೇಂದ್ರವನ್ನು ನಿರ್ಮಿಸುತ್ತೇವೆ. ಅದರ ಮೂಲಕ ಗಾಝಾದ ಜನರಿಗೆ ಬೇಕಾದ ಪರಿಹಾರ ಸಾಮಗ್ರಿಗಳು ಬೇಗ ತಲುಪುವ ಹಾಗೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇಸ್ರೇಲ್ ಗೆ ಬೇಕಾದಷ್ಟು ಶಸ್ತ್ರಾಸ್ತ್ರ ಕೊಟ್ಟು ಅದಕ್ಕೆ ಸಂಪೂರ್ಣ ಸಹಕಾರವನ್ನೂ ಕೊಟ್ಟು ಗಾಝಾವನ್ನು ಸರ್ವನಾಶ ಮಾಡುವವರೆಗೆ ಮೂಕ ಪ್ರೇಕ್ಷಕನಾಗಿ ನೋಡಿದ ಬೈಡನ್ ರನ್ನು ಈಗ ಅಮೆರಿಕನ್ನರೇ ತರಾಟೆಗೆ ತೆಗೆದುಕೊಂಡಿದ್ದಾರೆ. ನಾವು ನಿಮಗೆ ಧನಸಹಾಯ ಮಾಡಿ ಅಧ್ಯಕ್ಷ ಹುದ್ದೆಗೆ ತಲುಪುವಂತೆ ಮಾಡಿದ್ದು ಈ ವಿನಾಶಕ್ಕೆ ಸಹಕರಿಸಲು ಅಲ್ಲ ಎಂದು ಅವರಿಗೆ ದೇಣಿಗೆ ನೀಡಿದವರೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಗಾಝಾದ ಜನರ ಪಾಲಿಗೆ ಇದರಿಂದ ಇನ್ನು ದೊಡ್ಡ ಪ್ರಯೋಜನ ಆಗುವುದು ಅಷ್ಟರಲ್ಲೇ ಇದೆ. ಹಸಿವಿನಿಂದ ಕಂಗೆಟ್ಟು ಅಳುತ್ತಿದ್ದ ಗಾಝಾದ ಮಕ್ಕಳು ಈಗ ಅಳುವುದನ್ನೂ ನಿಲ್ಲಿಸಿಬಿಟ್ಟಿದ್ದಾರೆ.
13 ಸಾವಿರಕ್ಕೂ ಹೆಚ್ಚು ಮಕ್ಕಳು ಇಸ್ರೇಲ್ ನ ಆಕ್ರಮಣದಲ್ಲಿ ಕೊಲ್ಲಲ್ಪಟ್ಟಿದ್ಧಾರೆ. ಅಳಿದುಳಿದವರನ್ನು ಹಸಿವು ಕಂಗೆಡಿಸುತ್ತಿದೆ. ಪ್ರಾಣಿಗಳಿಗೆ ಹಾಕುವ ಆಹಾರದಿಂದ ಮಾಡಲಾದ ಬ್ರೆಡ್ ಅನ್ನು ತಿನ್ನುವ ಅನಿವಾರ್ಯತೆ ಅಲ್ಲಿನ ಮಕ್ಕಳಿಗೆ ಬಂದೊದಗಿರುವುದಾಗಿ ವರದಿಗಳು ಹೇಳುತ್ತಿವೆ.
ಚಹದ ರುಚಿ ಕೊಡುವ ಯಾವುದೋ ಎಲೆಗಳನ್ನು, ಮರದ ಕಡ್ಡಿಗಳನ್ನು ಕುದಿಸಿ ಕುಡಿಯುವ ಹತಾಶ ಸ್ಥಿತಿ ಅಲ್ಲಿದೆ. ಕುಡಿಯಲು ಸ್ವಚ್ಛ ನೀರು ಕೂಡ ಸಿಗದಂಥ ಸ್ಥಿತಿಯಲ್ಲಿ ಅವರ ಬದುಕು ಕರಾಳವಾಗಿದೆ. ತಾವು ತಿನ್ನುತ್ತಿರುವುದು ಪ್ರಾಣಿಗಳೂ ತಿನ್ನಲಾರದ ಮಟ್ಟದಲ್ಲಿದೆ ಎಂದು ಗಾಝಾಪಟ್ಟಿಯ ಆ ಜೀವಗಳು ಅಳಲು ತೋಡಿಕೊಳ್ಳುತ್ತಿವೆ. ಆಹಾರ ಎಷ್ಟು ಕೆಟ್ಟದಾಗಿದೆ ಮತ್ತು ಎಷ್ಟು ಕಡಿಮೆ ಪ್ರಮಾಣದಲ್ಲಿದೆ ಎಂದರೆ, ಪ್ರತಿ ಕುಟುಂಬವೂ ಒಂದು ಹೊತ್ತಿನ ಊಟವನ್ನು ಬಿಡಲೇಬೇಕಾಗಿದೆ.
ಊಟ ತಯಾರಿಸುತ್ತಿರುವುದು ಕಬ್ಬಿಣದ ಸರಳುಗಳ ಹಿಂದೆ. ಹಸಿದವರು ತಡೆಯಲಾರದೆ ದಾಳಿ ಮಾಡಿಬಿಡಬಹುದು ಎಂಬ ಭಯದಿಂದ ಹಾಗೆ ಮಾಡಲಾಗುತ್ತಿದೆ. ಹಸಿವದರು ಬಾಂಬ್ ಎಸೆಯಲಾರರು, ಬಾಂಬ್ ತಯಾರಿಸಲಾರರು. ಅಬ್ಬಬ್ಬಾ ಎಂದರೆ ರೊಟ್ಟಿಯ ಚೂರುಗಳನ್ನು ಲೂಟಿ ಮಾಡಬಹುದು ಅಷ್ಟೆ. ಹಾಗೆ ತಯಾರಾಗುತ್ತಿರುವ ಊಟಕ್ಕಾಗಿ ಖಾಲಿ ತಟ್ಟೆ ಹಿಡಿದುಕೊಂಡು ಮಕ್ಕಳೂ ಸೇರಿದಂತೆ ಹಸಿದವರು ಸಾಲಿನಲ್ಲಿ ಕಾದಿದ್ದಾರೆ.
ಅದೆಷ್ಟು ಹೊತ್ತಿನಿಂದ ಕಾದಿದ್ದಾರೊ ಗೊತ್ತಿಲ್ಲ. ಅದೆಷ್ಟು ದಿನಗಳಿಂದ ಅವರೆಲ್ಲ ಹಸಿದಿದ್ಧಾರೊ ಗೊತ್ತಿಲ್ಲ. ಆ ಹಸಿದ ಮಕ್ಕಳ ಕಣ್ಣುಗಳಲ್ಲಂತೂ ಊಟ ಸಿಗುವುದೇ ಎಂಬ ಆತಂಕ, ಊಟ ಸಿಕ್ಕರೆ ಸಾಕು ಎಂಬ ನಿರೀಕ್ಷೆ ಕುದಿಯುತ್ತಿದೆ. ಆ ಮಕ್ಕಳ ತಾಯಂದಿರು ಇಲ್ಲಿ ಜೊತೆಯಲ್ಲಿಲ್ಲ. ಅವರು ಇಲ್ಲಿ ಕಾಯಲಾರದಷ್ಟು ಮಟ್ಟಿಗೆ ಹಸಿದು ಬಿದ್ದಿದ್ದಾರೊ ಅಥವಾ ಸತ್ತೇ ಹೋಗಿದ್ದಾರೊ ಗೊತ್ತಿಲ್ಲ.
ಈ ಮಕ್ಕಳಿಗಾಗಿ ಅಳುವುದಕ್ಕೆ, ನೊಂದುಕೊಳ್ಳುವುದಕ್ಕೆ ಯಾರಿಗೂ ಪುರುಸೊತ್ತಿರಲಾರದು. ಒಂದು ಹಂತದ ಬಳಿಕ ಗಾಝಾದಲ್ಲಿನ ವಾಸ್ತವ ಚಿತ್ರಗಳು ಸಿಗುವುದೂ ನಿಲ್ಲುತ್ತ ಬಂದಿರುವುದನ್ನು ಗಮನಿಸಬಹುದು.ಅದರ ನಡುವೆಯೂ ಕೆಲವು ಪತ್ರಕರ್ತರು ನಿತ್ಯವೂ ಬೆಳಗಾದರೆ ಅಲ್ಲಿನ ಕಟು ಚಿತ್ರಣವನ್ನು ಕೊಡುವ ಯತ್ನ ಮಾಡುತ್ತಲೇ ಇದ್ದಾರೆ. ಜಗತ್ತಿನ ಹಲವೆಡೆ, ಗಾಝಾದಲ್ಲಿನ ಯುದ್ಧ ನಿಲ್ಲಿಸಲು ಒತ್ತಾಯಿಸಿ ಪ್ರತಿಭಟನೆಗಳು ನಡೆಯುತ್ತಲೇ ಇವೆ.
ಗಾಝಾದ ಮಕ್ಕಳಿಗಾಗಿ ಭಾರತದ ಜನ ಹೀಗೆ ಮೆರವಣಿಗೆ ಮಾಡುತ್ತಿಲ್ಲ, ಮಾಡಲಾರರು. ಯಾರಿಗಾದರೂ ಯಾವ ನಾಯಕರಿಗಾದರೂ ಈ ಮಕ್ಕಳ ಬಗ್ಗೆ ದಯೆ, ಕರುಣೆ ಇದೆಯೆ? ಭಾರತದ ನಾಯಕರು ಎಲ್ಲರಿಗಿಂತ ಮೊದಲು ಇದಕ್ಕಾಗಿ ದೌಡಾಯಿಸಬೇಕಿತ್ತು. ಏಕೆಂದರೆ ಇದು ಗಾಂಧೀಜಿಯ ಭಾರತ. ಆದರೆ ಹಾಗಾಗಲಿಲ್ಲ.
ಶ್ವೇತಭವನದ ನಾಯಕರು ವಿಮಾನದಿಂದ ಫುಡ್ ಪ್ಯಾಕೆಟ್ ಕಳೆಗೆಸೆದಾದರೂ ತಾವು ದಯಾಮಯಿಗಳು ಎಂದು ತೋರಿಸಿಕೊಳ್ಳಬಹುದಿತ್ತು.
ಗಾಝಾದ ಜನರ ವಿರುದ್ದ ಹಸಿವನ್ನೇ ಅಸ್ತ್ರವಾಗಿ ಇಸ್ರೇಲ್ ಬಳಸುತ್ತಿರುವುದರ ಬಗ್ಗೆ ಕಳೆದ ಡಿಸೆಂಬರಿನಿಂದಲೂ ವರದಿಗಳು ಬರುತ್ತಲೇ ಇವೆ.
ಜನರನ್ನು ಹಸಿವಿಗೆ ದೂಡಲಾಗುತ್ತಿದೆ. ಬಂದೂಕಿನ ಗುಂಡುಗಳು ಮತ್ತು ಬಾಂಬುಗಳ ಬದಲಿಗೆ ಕೊಲ್ಲಲು ಹಸಿವನ್ನೇ ಅಸ್ತ್ರವಾಗಿಸಿಕೊಳ್ಳಲಾಗಿದೆ.
ಗಾಝಾದ ತಾಯಿಯೊಬ್ಬಳು ತನ್ನ ಮಕ್ಕಳಿಗಾಗಿ ತನ್ನ ಪಾಲಿನ ರೊಟ್ಟಿಯನ್ನು ಕೊಟ್ಟಿರುವುದಾಗಿ ಹೇಳಿದ್ದು ವರದಿಯಾಗಿತ್ತು. ಹಸಿವಿನಿಂದಲೇ ಸಾಯುತ್ತೀನೊ ಏನೋ ಎಂದು ಮಗು ಹೇಳುವುದನ್ನು ತಾಯಿ ಕೇಳಿಸಿಕೊಳ್ಳಬೇಕಾದ ದಾರುಣ ಸ್ಥಿತಿಯಿರುವ ಬಗ್ಗೆ ಇನ್ನೊಂದು ವರದಿ ಹೇಳಿತ್ತು.
ಆ ತಾಯಂದಿರ ಚಡಪಡಿಕೆ, ಆ ಸಂಕಟ ಅದೆಷ್ಟು ಭಯಂಕರವಾಗಿರಬಹುದು. ಅದೆಂಥ ದುಃಖವನ್ನು ಅವರು ತಮ್ಮ ಮಕ್ಕಳಿಗೆ ಕಾಣದಂತೆ ಒಳಗೊಳಗೇ ಅಳುತ್ತ ಭರಿಸಿರಬಹುದು ಎಂದು ಊಹಿಸಿದರೆ ಕರುಳು ಕಿತ್ತು ಬರುತ್ತದೆ.
ಕುಡಿಯುವುದಕ್ಕೂ ಶುದ್ಧ ನೀರಿಲ್ಲದ ಗಾಝಾದಲ್ಲಿ ಹಸೀ ಹಸೀ ಕಂದಮ್ಮಗಳು ಗಂಭೀರ ಸ್ಥಿತಿಯಲ್ಲಿವೆ. ಇಲಿಗಳು ತಿಂದು ಬಿಟ್ಟ ಆಹಾರವನ್ನು ತಿನ್ನಬೇಕಾದ ದಾರುಣ ಸ್ಥಿತಿ ಅಲ್ಲಿದೆ. ಉತ್ತರ ಗಾಝಾದಲ್ಲಿ ಪ್ರತಿ ಮೂವರು ಮಕ್ಕಳಲ್ಲಿ ಒಂದು ಮಗು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದೆ ಎಂದು ವರದಿಗಳು ಖಚಿತಪಡಿಸಿವೆ. ಅಳುವುದಕ್ಕೂ ಶಕ್ತಿಯಿಲ್ಲದ ಸ್ಥಿತಿಯನ್ನು ಅ ಕಂದಮ್ಮಗಳು ಮುಟ್ಟಿವೆ.
ಇಸ್ರೇಲ್ ಅದೆಷ್ಟು ಕ್ರೂರವಾಗಿ ಗಾಝಾ ವಿರುದ್ಧ ವರ್ತಿಸುತ್ತಿದೆ ಎಂದರೆ, ಹಸಿವಿನಿಂದಲೇ ಅವರೆಲ್ಲ ಸಾಯಲಿ ಎಂದು ಅದು ಬಯಸುತ್ತಿದೆ.
ಗಾಝಾಕ್ಕೆ ಮಾನವೀಯ ನೆರವನ್ನು ನೀಡಲು ಮುಂದಾಗುವಂತೆ ತನಗೆ ತುರ್ತು ಆದೇಶ ನೀಡಕೂಡದೆಂದು ಅದು ಅಂತರ ರಾಷ್ಟ್ರೀಯ ಕೋರ್ಟ್ ಅನ್ನು ಕೇಳಿಕೊಂಡಿದೆ.
ಗಾಝಾದಲ್ಲಿನ ಹಸಿವನ್ನು ನೀಗಿಸುವುದು ಅದಕ್ಕೆ ಬೇಕಿಲ್ಲ. ಅಲ್ಲಿ ಕುಡಿಯವ ನೀರಿನ ವ್ಯವಸ್ಥೆಯನ್ನು ಒದಗಿಸುವುದು ಅದಕ್ಕೆ ಬೇಕಿಲ್ಲ.
ಊಟಕ್ಕೆ ಸರತಿಯಲ್ಲಿ ನಿಂತಿದ್ದವರೆ ಮೇಲೆಯೂ ಗುಂಡಿನ ದಾಳಿ ಮಾಡಿ ನೂರಕ್ಕೂ ಹೆಚ್ಚು ಜನರನ್ನು ಕೊಂದ ಅದು ಯಾವ ಕರುಣೆಯನ್ನು ತೋರಿಸಬಲ್ಲುದು ಹೇಳಿ. ಎಲ್ಲವನ್ನೂ ಬಾಂಬ್ ಹಾಕಿ ಹಾಳುಗೆಡವಿರುವ ಇಸ್ರೇಲ್, ಗಾಝಾದಲ್ಲಿ ಬದುಕುಗಳನ್ನು ಅರಳಿಸುವ ಯಾವ ಉದ್ದೇಶವನ್ನೂ ಹೊಂದಿಲ್ಲ. ಅದು ನಿರ್ದಯಿ ರಣಹದ್ದಿನಂತೆ ಅಲ್ಲಿನ ಸಾವುಗಳನ್ನು ನೋಡಲು ಕಾದಿದೆ.
ಗಾಝಾದಲ್ಲಿ ಯುದ್ಧ ಶುರುವಾದ ಬಳಿಕ ಈವರೆಗೆ ಸತ್ತವರ ಸಂಖ್ಯೆ 32 ಸಾವಿರವನ್ನೂ ದಾಟಿದೆ. ಈಗ ತಿನ್ನಲು ಆಹಾರವಿಲ್ಲದೆ, ಕುಡಿಯಲು ನೀರಿಲ್ಲದೆ ಬದುಕು ಸಾವಿನ ಬಾಯಲ್ಲಿ ಸಿಕ್ಕಿಬಿದ್ದಂತೆ ಒದ್ದಾಡುತ್ತಿದೆ. ಸಾವಿಗೆ ಮೊದಲು ಅದೆಷ್ಟೋ ದಿನಗಳವರೆಗೆ, ವಾರಗಳ ವರೆಗೆ ಸಾಯುತ್ತಲೇ ಇರುವಂಥ ಸ್ಥಿತಿಯಿದೆ.
13,000 ಮಕ್ಕಳ ಸಾವಿನ ಬಳಿಕವೂ ಅದೆಷ್ಟೋ ಮಕ್ಕಳು ಹಸಿವಿನಿಂದ ಸತ್ತಿರುವ ವರದಿಗಳಿವೆ. ಅಲ್ಲಿನ ಪರಿಸ್ಥಿತಿ ಅದೆಷ್ಟು ದಾರುಣ ಅಂದ್ರೆ, ಎರಡು ವಾರಗಳ ಹಿಂದೆ ಯಾವುದೋ ದೇಶದ ವಿಮಾನದಿಂದ ಹಾಕಲಾದ ಪರಿಹಾರ ಸಾಮಗ್ರಿ ತಮ್ಮ ಮೇಲೆ ಬಿದ್ದೇ ಅಲ್ಲಿ ಕನಿಷ್ಠ ಐದು ಮಂದಿ ಬಲಿಯಾಗಿದ್ದಾರೆ. ಇದಕ್ಕಿಂತ ಕೆಟ್ಟ ಪರಿಸ್ಥಿತಿ ಇದೆಯೇ ? ಗಾಝಾದಲ್ಲಿನ ಈ ಸದ್ದಿಲ್ಲದ ಸಾವುಗಳ ಬಗ್ಗೆ ಕನಲುವವರು, ಕಣ್ಣೀರಿಡುವವರು ಯಾರು ?