ಬಲಪಂಥಿಯರನ್ನು ಸೋಲಿಸಿದ ಫುಟ್ಬಾಲ್ ಹೀರೋ ಎಂಬಾಪೆ!
ಭಾರತದ ಸೆಲೆಬ್ರಿಟಿಗಳಿಗೆ ಫ್ರಾನ್ಸ್ ಕ್ರೀಡಾಪಟುಗಳ ಸಂದೇಶ !
ಎಂಬಾಪೆ | PC : PTI
ಫ್ರಾನ್ಸ್ ಚುನಾವಣೆಯ ಫಲಿತಾಂಶ ಹೊರಬಂದಿದೆ. ಬಲಪಂಥೀಯ ಶಕ್ತಿಗಳು ಆ ಚುನಾವಣೆಯಲ್ಲಿ ಹೀನಾಯವಾಗಿ ಸೋತಿವೆ.
ಮೊದಲ ಹಂತದ ಚುನಾವಣೆಯ ಬಳಿಕ ಬಲಪಂಥೀಯರು ಅಲ್ಲಿ ಅಧಿಕಾರಕ್ಕೆ ಬರುವ ಎಲ್ಲಾ ಸಾಧ್ಯತೆಗಳು ಕಂಡಿದ್ದವು. ಆದರೆ ಫ್ರಾನ್ಸ್ ನ ಹಲವು ಖ್ಯಾತ ಕಲಾವಿದರು, ಫುಟ್ಬಾಲ್ ಆಟಗಾರರು ನಮ್ಮ ದೇಶದಲ್ಲಿ ದ್ವೇಷ ಬೇಡ ಎಂಬ ಸಂದೇಶವನ್ನು ನೀಡಿದ್ದರು. ಅಷ್ಟೇ ಅಲ್ಲ ಜನರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊರಬಂದು ಬಲಪಂಥೀಯ ಶಕ್ತಿಗಳ ವಿರುದ್ಧ ಮತದಾನ ಮಾಡಲು ಕರೆ ನೀಡಿದ್ದರು.
ಫ್ರಾನ್ಸ್ ಫುಟ್ಬಾಲ್ ತಂಡದ ನಾಯಕ, ವರ್ಲ್ಡ್ ಕಪ್ ವಿಜೇತ್ ಹೀರೊ , ಕಿಲಿಯನ್ ಎಂಬಾಪೆ ಫ್ರಾನ್ಸ್ ಚುನಾವಣೆಯ ಮೊದಲ ಸುತ್ತಿನ ಫಲಿತಾಂಶಗಳನ್ನು "ದುರಂತ" ಎಂದು ನೇರವಾಗಿ ಹೇಳಿದ್ದರು. ಎರಡನೇ ಸುತ್ತಿನಲ್ಲಿ ಮತದಾರರು ಬಲಪಂಥೀಯ ಶಕ್ತಿಗಳ ವಿರುದ್ಧ ಮತ ಚಲಾಯಿಸಬೇಕೆಂದು ಎಂಬಾಪೇ ಕರೆ ನೀಡಿದ್ದರು.
“ನಮ್ಮ ದೇಶ ಈ ಜನರ ಕೈಗೆ ಬೀಳಲು ನಾವು ಬಿಡಬಾರದು. ಹಾಗೆ ಆಗುವಂತಿದೆ. ನಾವು ಫಲಿತಾಂಶಗಳನ್ನು ನೋಡಿದ್ದೇವೆ, ಅವು ದುರಂತವಾಗಿದೆ. ಫಲಿತಾಂಶಗಳು ಬದಲಾಗಲಿದೆ ಎಂದು ನಾವು ನಿಜವಾಗಿಯೂ ನಿರೀಕ್ಷಿಸುತ್ತೇವೆ. ಎಲ್ಲರೂ ಒಟ್ಟಾಗಿ ಹೋಗಿ ಮತ ಚಲಾಯಿಸುತ್ತಾರೆ ಮತ್ತು ಸರಿಯಾದ ಪಕ್ಷಕ್ಕೆ ಮತ ಚಲಾಯಿಸುತ್ತಾರೆ ಎಂದು ನಾವು ನಿಜವಾಗಿಯೂ ನಿರೀಕ್ಷಿಸುತ್ತೇವೆ ಎಂದು ಎಂಬಾಪೇ ಹೇಳಿದ್ದರು. ಈಗ, ಎಂದಿಗಿಂತಲೂ ಹೆಚ್ಚು ಮತದಾನಕ್ಕೆ ಪ್ರಾಮುಖ್ಯತೆಯಿದೆಯೆಂದು ಎಂಬಾಪೇ ಒತ್ತಿ ಹೇಳಿದ್ದರು.
ಇನ್ನೊಬ್ಬ ಫುಟ್ಬಾಲ್ ಆಟಗಾರ ಜೂಲ್ ಕೌಂಡೆ ಅವರು ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಮತ್ತು ನಾವು ಒಟ್ಟಿಗೆ ವಾಸಿಸುವುದನ್ನು ಕಸಿದುಕೊಳ್ಳಲು ಪ್ರಯತ್ನಿಸುವ ಪಕ್ಷಕ್ಕೆ ಬೆಂಬಲದ ಮಟ್ಟ ನೋಡಿ ನಿರಾಶೆಯಾಗಿದೆ ಎಂದಿದ್ದರು. ಬಲಪಂಥೀಯರು ಸಂಪೂರ್ಣ ಬಹುಮತ ಪಡೆಯದಂತೆ ಖಚಿತಪಡಿಸಿಕೊಳ್ಳಬೇಕು. ಇದಕ್ಕಾಗಿ ಇವರೆಗೆ ಮತದಾನ ಮಾಡದವರನ್ನು ಮತದಾನ ಮಾಡುವಂತೆ ಪ್ರಯತ್ನಿಸಬೇಕು ಎಂದು ಅವರು ಹೇಳಿದ್ದರು.
ಖ್ಯಾತ ಫುಟ್ಬಾಲ್ ಆಟಗಾರರಾದ ಮಾರ್ಕಸ್ ಥುರಾಮ್ ಮತ್ತು ಉಸ್ಮಾನ್ ಡೆಂಬೆಲ್ ಅವರೂ ಮತ ಚಲಾಯಿಸಲು ಅರ್ಹರಿಗೆ ಇದೇ ರೀತಿಯ ಸಲಹೆ ನೀಡಿದ್ದರು. ಅವರೆಲ್ಲರ ನಿರೀಕ್ಷೆಯಂತೆ ಈಗ ಫ್ರಾನ್ಸ್ ನಲ್ಲಿ ಬಲಪಂಥೀಯರು ಹೀನಾಯವಾಗಿ ಸೋತಿದ್ದಾರೆ. ತೀವ್ರಗಾಮಿ ದೃಷ್ಟಿಕೋನಗಳಿಗೆ ಮತ್ತು ಜನರನ್ನು ವಿಭಜಿಸುವ ಆಲೋಚನೆಗಳಿಗೆ ನಾನು ವಿರುದ್ಧವಾಗಿದ್ದೇನೆ ಎಂದು ಎಂಬಾಪೇ ಹೇಳಿದ್ದರು.
ಇತ್ತೀಚೆಗೆ ಚಾಂಪಿಯನ್ಸ್ ಲೀಗ್ ವಿಜೇತ ರಿಯಲ್ ಮ್ಯಾಡ್ರಿಡ್ಗೆ ಸಹಿ ಹಾಕಿದ ಎಂಬಾಪೇ, ಫ್ರಾನ್ಸ್ನ ಸೂಪರ್ ಸ್ಟಾರ್ ಆಟಗಾರ ಮತ್ತು ದೇಶದ ಯುವಕರಲ್ಲಿ ವ್ಯಾಪಕ ಜನಪ್ರಿಯತೆ ಗಳಿಸಿದ್ದಾರೆ. ಇವತ್ತು ಫ್ರಾನ್ಸ್ ನ ಹೀರೊ ಆಗಿರುವ ಎಂಬಾಪೆ ಕುಟುಂಬ ಅಲ್ಜೀರಿಯಾ ಮೂಲದ್ದು.
ಇದೇ ವೇಳೆ ಎಂಬಾಪೆ ಫ್ರೆಂಚ್ ಜನರ ಪ್ರತಿನಿಧಿಯಲ್ಲ ಎಂದು ಹೇಳುವ ಮೂಲಕ ಅವರ ಸಂದೇಶದ ತೀವ್ರತೆ ತಗ್ಗಿಸುವ ಯತ್ನವೂ ಬಲಪಂಥೀಯರಿಂದ ನಡೆದಿತ್ತು. ಆದರೆ ಆ ಅಪಪ್ರಚಾರಕ್ಕೆ ಫ್ರೆಂಚರು ಸೊಪ್ಪು ಹಾಕಿಲ್ಲ. ಯುವಕರ ಮೇಲಿನ ತಮ್ಮ ಪ್ರಭಾವವನ್ನು ಎಂಬಾಪೆ ಮತ್ತು ಇತರ ಪುಟ್ಬಾಲ್ಗರು ಬಹಳ ಚೆನ್ನಾಗಿ, ರಚನಾತ್ಮಕವಾಗಿ ಬಳಸಿಕೊಂಡಿದ್ದಾರೆ.
ಫ್ರಾನ್ಸ್ ನಲ್ಲಿ ಎಂಬಾಪೇ ಯಂತಹ ವಿಶ್ವ ಚಾಂಪಿಯನ್ನರು ನೇರವಾಗಿ, ನಿಷ್ಠುರವಾಗಿ ಕೋಮುವಾದದ ವಿರುದ್ಧ, ಜನಾಂಗೀಯವಾದದ ವಿರುದ್ಧ, ವಿಭಜಕ ನೀತಿಗಳ ವಿರುದ್ಧ ಮಾತಾಡುವಾಗ, ಐಕ್ಯತೆಗೆ, ಸೌಹಾರ್ದವನ್ನು ಎತ್ತಿ ಹಿಡಿಯುವಾಗ ನಮ್ಮ ದೇಶದಲ್ಲಿ ಏನಾಗುತ್ತಿದೆ ಎಂಬ ಚರ್ಚೆ ಶುರುವಾಗಿದೆ.
ನಮ್ಮಲ್ಲಿ ಖ್ಯಾತ ಕ್ರಿಕೆಟಿಗರು, ಬಾಲಿವುಡ್ ನಟರು, ಕಲಾವಿದರಲ್ಲಿ ಹೆಚ್ಚಿನವರು ತೀರಾ ಇತ್ತೀಚಿನ ವರ್ಷಗಳವರೆಗೆ ಸಾಮಾನ್ಯವಾಗಿ ಯಾವುದೇ ರೀತಿಯ ಕೋಮುವಾದವನ್ನು, ತಾರತಮ್ಯವನ್ನು ಪ್ರೋತ್ಸಾಹಿಸುತ್ತಿರಲಿಲ್ಲ. ಆದರೆ ಅವರಲ್ಲಿ ಹೆಚ್ಚಿನವರು ಕೋಮುವಾದದ ವಿರುದ್ಧವೂ ಮಾತಾಡುವುದಿಲ್ಲ.
ತೀರಾ ಬೆರಳೆಣಿಕೆಯ ಕೆಲವು ಖ್ಯಾತನಾಮರು ಮಾತ್ರ ಸಂವಿಧಾನದ ಪ್ರಕಾರ ದೇಶ ನಡೀಬೇಕು, ಇಲ್ಲಿ ಸುಳ್ಳು, ದ್ವೇಷ ಇರಬಾರದು ಎಂದು ಮುಲಾಜಿಲ್ಲದೆ ಹೇಳುತ್ತಾರೆ.
ಕೋಟ್ಯಂತರ ಅಭಿಮಾನಿಗಳಿರುವ ಕ್ರಿಕೆಟಿಗರು, ನಟರು, ಕಲಾವಿದರು ಸ್ವತಃ ಜಾತ್ಯತೀತ ನಿಲುವು ಇಟ್ಟುಕೊಂಡರೆ ಸಾಲದು, ಅವರು ತಮ್ಮ ನಿಲುವಿನ ಬಗ್ಗೆ ಸ್ಪಷ್ಟವಾಗಿ ಮಾತಾಡಬೇಕು, ದೇಶದ ಸಂವಿಧಾನದ ಬಗ್ಗೆ, ಅದರ ಆಶಯಗಳ ಬಗ್ಗೆ ತಮ್ಮ ಬದ್ಧತೆಯನ್ನು ಸಾರಿ ಹೇಳಬೇಕು. ಫ್ರಾನ್ಸ್ ನ ಕ್ರೀಡಾ ಹೀರೋಗಳು ಭಾರತದ ಸೆಲೆಬ್ರಿಟಿಗಳಿಗೆ ಈ ಸಂದೇಶವನ್ನು ರವಾನಿಸಿದ್ದಾರೆ.