ಗಾಂಧಿ-ಅಂಬೇಡ್ಕರ್ ಜುಗಲ್ ಬಂದಿ
ತಾನು ಸನಾತನ ಹಿಂದೂ ಎಂದು ತನ್ನ ಜೀವನವನ್ನು ಆರಂಭಿಸಿದ ಗಾಂಧಿ ಕೊನೆಗೆ- ಸಹನೆ ಮತ್ತು ಪ್ರೀತಿ ನನ್ನ ಧರ್ಮ- ಎಂಬಲ್ಲಿಗೆ ಬಂದು ನಿಲ್ಲುತ್ತಾರೆ. ಹಾಗೇನೆ ಹಿಂದೂ ಧರ್ಮದ ನರಕದಿಂದ ಬಚಾವಾಗಲು ಅಂಬೇಡ್ಕರ್ ಬುದ್ಧನ ಕಾರುಣ್ಯಕ್ಕೆ, ಭ್ರಾತೃತ್ವಕ್ಕೆ ಬಂದು ತಲುಪುತ್ತಾರೆ. ಸಹನೆ, ಪ್ರೀತಿ, ಕಾರುಣ್ಯ, ಭ್ರಾತೃತ್ವ- ಈ ನಾಲ್ಕೂ ಬೇರೆ ಬೇರೆ ಪದಗಳು ಇರಬಹುದು. ಈ ನಾಲ್ಕು ಪದಗಳ ಆಳದಲ್ಲಿರುವುದು ಒಂದೇ ಅಲ್ಲವೇ? ಇವು ತಲುಪುವುದು ಎಲ್ಲರನ್ನೂ ಮಾನವೀಯವಾಗಿ ಒಳಗೊಳ್ಳುವತ್ತಲೇ. ಒಟ್ಟಿನಲ್ಲಿ ಈ ಇಬ್ಬರೂ ಆಳದಲ್ಲಿ ಧಾರ್ಮಿಕತೆಯ ಸ್ವಭಾವದವರಾಗಿದ್ದರು. ಇದನ್ನು ಅರ್ಥ ಮಾಡಿಕೊಂಡು ನಾವು ಮುಂದುವರಿಯಬೇಕಾಗುತ್ತದೆ
ಇತಿಹಾಸತಜ್ಞ ರಾಮಚಂದ್ರ ಗುಹಾ ಅವರನ್ನು ಭೇಟಿಯಾದೆ. ಇದು ಹೇಗಿತ್ತು ಅಂದರೆ ಚಿಕ್ಕಂದಿನಲ್ಲಿ, ಅಣ್ಣ ಎಲ್ಲೋ ಒಂದು ಕಡೆಗೆ, ತಮ್ಮ ಇನ್ನೊಂದು ಕಡೆಗೆ ಅಗಲಿ ಬಿಡುತ್ತಾರೆ. ಹೀಗೆ ಬೇರೆಬೇರೆಯಾದವರು ತಮ್ಮ ಇಳಿಗಾಲದಲ್ಲಿ ಅಂದರೆ ಸೀನಿಯರ್ ಸಿಟಿಜನ್ಸ್ ಆದ ಮೇಲೆ ಭೇಟಿಯಾದರೆ ಹೇಗಿರುತ್ತೋ ಹಾಗಿತ್ತು.
ಇದಕ್ಕೆ ಕಾರಣವೂ ಇಂದು ತಿಳೀತು. ನಾಲ್ವಡಿಯವರು ಆರಂಭಿಸಿದ ಪಂಚಮರ ಶಾಲೆ, ಹಾಸ್ಟೆಲ್ಗಳನ್ನು ರಾಜ್ಯದಾದ್ಯಂತ ಬೈಸಿಕಲ್ನಲ್ಲಿ ಸುತ್ತುತ್ತ ದಲಿತ ಮಕ್ಕಳನ್ನು ತನ್ನ ಮಕ್ಕಳಂತೆ ಪೊರೆದವರು ಗೋಪಾಲಸ್ವಾಮಿ ಅಯ್ಯರ್ ಅವರು. ಈ ಪಂಚಮರ ಗೋಪಾಲಸ್ವಾಮಿ ಅಯ್ಯರ್, ಗುಹಾ ಅವರ ತಾತನ ಸಹೋದರ. ನನಗೆ ಗುಹಾ ಅವರ ಭೇಟಿಯು ನನ್ನೊಬ್ಬ ಸಹೋದರನ ಭೇಟಿ ಅನ್ನಿಸಿದ್ದಕ್ಕೆ ಬಹುಶಃ ಇದೂ ಕಾರಣವಿರಬಹುದು.
ಗುಹಾ ಅವರು ನನ್ನನ್ನು ಕೇಳಿದರು, ‘‘ಗೋಪಾಲಸ್ವಾಮಿ ಅಯ್ಯರ್ ಅವರನ್ನು ದಲಿತರು ಈಗಲೂ ನೆನಪಿಸಿಕೊಳ್ತಾರ?’’ ಅಂತ. ಅದಕ್ಕೆ ನಾನೆಂದೆ- ‘‘ದಲಿತ ಸಮುದಾಯದಲ್ಲಿ ನನ್ನ ಬಗ್ಗೆ ಅನೇಕಾನೇಕ ಭಿನ್ನಾಭಿಪ್ರಾಯ, ಅಸಮಾಧಾನ ಇರಬಹುದು. ನನ್ನನ್ನು ‘ದಲಿತ ವಿರೋಧಿ’ ಅನ್ನುವವರೂ ಇದ್ದಾರೆ. ಆದರೆ ಗೋಪಾಲಸ್ವಾಮಿ ಅಯ್ಯರ್ ಮತ್ತು ಕುದ್ಮುಲ್ ರಂಗರಾವ್ ಅವರನ್ನು ಈಗಲೂ ಕೃತಜ್ಞತೆಯಿಂದ ಹೃದಯಪೂರ್ವಕವಾಗಿ ದಲಿತರು ನೆನಪಿಸಿಕೊಳ್ತಾರೆ’’ ಎಂದು ಹೇಳಿದೆ.
‘ಗಾಂಧಿ ಮತ್ತು ಅಂಬೇಡ್ಕರ್ ಪ್ರಸ್ತುತತೆ’ ಎಂಬ ಈ ವಿಷಯ ಇದೆಯಲ್ಲ, ಇದು ತಂತಿಯ ಮೇಲಿನ ನಡಿಗೆ. ಜೊತೆಗೆ ಹಳೆಯದರಲ್ಲೇ ನೇತಾಕಿಕೊಂಡು, ಯಾರೂ ಪ್ರಸ್ತುತತೆಯನ್ನು ಚರ್ಚೆ ಮಾಡುವುದಿಲ್ಲ. ಅದೇನೇ ಇರಲಿ, ಇಲ್ಲಿ ನಾನು ಒಂದೆರಡು ವಿಷಯಗಳನ್ನಷ್ಟೇ ನಿಮ್ಮೊಡನೆ ಹಂಚಿಕೊಳ್ಳುತ್ತೇನೆ: ಗಾಂಧಿ ಮತ್ತು ಅಂಬೇಡ್ಕರ್ ಅವರ ಅಂತರಾಳದ ಚಿಲುಮೆಯು ಬೇರೆ ಬೇರೆಯದೇ ಆಗಿತ್ತು. ಅಂತರಾಳಕ್ಕೆ ತಕ್ಕಂತೆ ಅಭಿವ್ಯಕ್ತಿಗಳು ಭಿನ್ನಭಿನ್ನವಾಗಿ ಕಾಣಿಸುತ್ತಿರುತ್ತವೆ. ನಾವು ಅಭಿವ್ಯಕ್ತಿಯ ರೀತಿಯನ್ನು ನೋಡುವ ಬದಲು, ಈ ಇಬ್ಬರ ಅಂತರಾಳವನ್ನು ದರ್ಶಿಸಬೇಕಾಗಿದೆ. ಉದಾಹರಣೆಗೆ ಗಾಂಧಿಯವರದು ಹೆಚ್ಚಾಗಿ ಅಂತರ್ಬೋಧೆಯ [Intuitive] ಚಿಂತನಾ ಕ್ರಮ ಆಗಿತ್ತು. ಗಾಂಧಿಗೆ ಏನಾದರೂ ಸಮಸ್ಯೆ ಎದುರಾದರೆ, ‘ದೇವರೇ ದೇವರೇ ದಾರಿ ತೋರಿಸಪ್ಪಾ’ ಅಂತ ರಾತ್ರಿಯೆಲ್ಲಾ ಒದ್ದಾಡುತ್ತಿದ್ದರು. ಎಚ್ಚರವಾದಾಗ ಏನು ಕಾಣಿಸುತ್ತಿತ್ತೊ ಅದನ್ನು ನುಡಿಯುತ್ತಿದ್ದರು. ತಮ್ಮ ನುಡಿಗೆ ತಕ್ಕಂತೆ ನಡೆಯುತ್ತಿದ್ದರು.
ಸಮಸ್ಯೆ ಎದುರಾದಾಗ ಅಂಬೇಡ್ಕರ್ ಅವರು ರಾತ್ರಿಯೆಲ್ಲಾ ನಿದ್ದೆಗೆಟ್ಟು ಚಿಂತಿಸುತ್ತಿದ್ದರು. ಬೌದ್ಧಿಕವಾಗಿ ವೈಚಾರಿಕವಾಗಿ ತಾರ್ಕಿಕವಾಗಿ ಅವರೊಳಗೇ ಘರ್ಷಣೆ ನಡೆಯುತ್ತಿತ್ತು. ಎಚ್ಚರವಾದ ಮೇಲೆ ಆ ಘರ್ಷಣೆಯ ಬೆಳಕಿನ ಎಳೆ ಹಿಡಿದು ನುಡಿಯುತ್ತಿದ್ದರು. ತಮ್ಮ ನುಡಿಗೆ ತಕ್ಕಂತೆ ನಡೆಯುತ್ತಿದ್ದರು. ಒಬ್ಬರು Intuitive ಇನ್ನೊಬ್ಬರು Rational! ಈ ಅಂತರಾಳದ ಚಿಲುಮೆಗೆ ತಕ್ಕಂತೆ ಅವರ ನುಡಿಗಟ್ಟು, ಭಾಷೆ, ಅಭಿವ್ಯಕ್ತಿಗಳು ಭಿನ್ನಭಿನ್ನವಾಗಿ ಹೊರಹೊಮ್ಮುತ್ತಿತ್ತು. ಹಾಗಾಗಿ ಗಾಂಧಿಯವರ ನುಡಿಗಳಲ್ಲಿ ತರ್ಕ ಇಲ್ಲ, ಅಂಬೇಡ್ಕರ್ ತರ್ಕಬದ್ಧ ಅನ್ನಿಸಬಹುದು. ಇವರಿಬ್ಬರ ನಡುವೆ ಸಮಸ್ಯೆ ಉಂಟಾಗಲು ಇದು ಕಾರಣ ಅನ್ನಿಸುತ್ತದೆ.
ಉದಾಹರಣೆಗೆ- ಅಸ್ಪಶ್ಯತೆ ಪಾಪ ಅಂತ ಗಾಂಧಿ ಹೇಳ್ತಾರೆ. ಹಾಗೇ ಅಸ್ಪಶ್ಯತೆ ಅಪರಾಧ ಅಂತ ಅಂಬೇಡ್ಕರ್ ಹೇಳ್ತಾರೆ. ನಾವು ಎರಡನ್ನೂ ಹೇಳೋಣ. ಏನಂತೆ ಈಗ? ಅಸ್ಪಶ್ಯತೆ ಪಾಪವೂ ಹೌದು, ಅಪರಾಧವೂ ಹೌದು. ಇಲ್ಲಿ ಭಿನ್ನಾಭಿಪ್ರಾಯ ಹುಡುಕುವುದೇಕೆ? ಆದರೆ ಇಂದು ಎಲ್ಲರೂ ತನ್ನಂತೆಯೇ ನುಡಿಯಬೇಕು, ನಡೆಯಬೇಕು, ಆಲೋಚಿಸಬೇಕು ಎಂಬ ಆಕಾಂಕ್ಷೆ ಹೆಚ್ಚಾಗಿದೆ. ಈ ನನ್ನ ಸಹಜೀವಿಗಳಲ್ಲಿ ಒಂದು ನಿವೇದನೆ ಮಾಡುವೆ- ಒಂದು ಕ್ಷಣ ಕಣ್ಮುಚ್ಚಿಕೊಳ್ಳಿರಿ. ನಿಮ್ಮೊಳಗೆ ಕಲ್ಪಿಸಿಕೊಳ್ಳಿ. ಒಂದು ದೊಡ್ಡ ಹಾಲ್ನಲ್ಲಿ- ಸಾವಿರಾರು ಜನರು ಸೇರಿದ್ದಾರೆ. ಅಲ್ಲಿರುವ ಎಲ್ಲರೂ ನಿಮ್ಮಂತೆ ನುಡಿಯುತ್ತಿದ್ದಾರೆ, ನಗುತ್ತಿದ್ದಾರೆ, ಕಿರುಚುತ್ತಿದ್ದಾರೆ, ಆಲೋಚಿಸುತ್ತಿದ್ದಾರೆ ಕೂಡ. ಎಲ್ಲವೂ ನಿಮ್ಮದೇ ಪ್ರತಿರೂಪ- ನಿಮ್ಮದೇ ರೋಬೋಟ್ನಂತೆ ಎಲ್ಲರೂ! ಈಗ ಕಣ್ಣು ತೆರೆಯಿರಿ. ಹೇಳಿ, ನೀವು ಕಣ್ಮುಚ್ಚಿ ಕಂಡದ್ದು ಹೇಗಿತ್ತು? ನನಗಂತು ಈ ಕಲ್ಪನೆ ಕಣ್ಮುಂದೆ ಬಂದರೆ ಬದುಕು ನರಕ ಅನ್ನಿಸಿಬಿಡುತ್ತೆ. ಇಂದು, ಬಹುತ್ವದ ಹಿಂದೂ ಧರ್ಮಗಳ ಮೇಲೆ ಏಕಮುಖದ ಚಾತುರ್ವರ್ಣದ ಹಿಂದುತ್ವ ಸವಾರಿ ಮಾಡುತ್ತಿದೆಯಲ್ಲಾ ಹಾಗೆ.
ಇದರೊಡನೆ, ಇವರಿಬ್ಬರ ನಡುವೆ ಇನ್ನೊಂದು ಹೋಲಿಕೆ ಮಾಡುವೆ. ತಾನು ಸನಾತನ ಹಿಂದೂ ಎಂದು ತನ್ನ ಜೀವನವನ್ನು ಆರಂಭಿಸಿದ ಗಾಂಧಿ ಕೊನೆಗೆ- ಸಹನೆ ಮತ್ತು ಪ್ರೀತಿ ನನ್ನ ಧರ್ಮ- ಎಂಬಲ್ಲಿಗೆ ಬಂದು ನಿಲ್ಲುತ್ತಾರೆ. ಹಾಗೇನೆ ಹಿಂದೂ ಧರ್ಮದ ನರಕದಿಂದ ಬಚಾವಾಗಲು ಅಂಬೇಡ್ಕರ್ ಬುದ್ಧನ ಕಾರುಣ್ಯಕ್ಕೆ, ಭ್ರಾತೃತ್ವಕ್ಕೆ ಬಂದು ತಲುಪುತ್ತಾರೆ. ಸಹನೆ, ಪ್ರೀತಿ, ಕಾರುಣ್ಯ, ಭ್ರಾತೃತ್ವ- ಈ ನಾಲ್ಕೂ ಬೇರೆ ಬೇರೆ ಪದಗಳು ಇರಬಹುದು. ಈ ನಾಲ್ಕು ಪದಗಳ ಆಳದಲ್ಲಿರುವುದು ಒಂದೇ ಅಲ್ಲವೇ? ಇವು ತಲುಪುವುದು ಎಲ್ಲರನ್ನೂ ಮಾನವೀಯವಾಗಿ ಒಳಗೊಳ್ಳುವತ್ತಲೇ. ಒಟ್ಟಿನಲ್ಲಿ ಈ ಇಬ್ಬರೂ ಆಳದಲ್ಲಿ ಧಾರ್ಮಿಕತೆಯ ಸ್ವಭಾವದವರಾಗಿದ್ದರು. ಇದನ್ನು ಅರ್ಥ ಮಾಡಿಕೊಂಡು ನಾವು ಮುಂದುವರಿಯಬೇಕಾಗುತ್ತದೆ.
ಆದರೆ ನಾವು ಮುಂದುವರಿಯುತ್ತಿಲ್ಲ! ಹಳತರಲ್ಲೆ ಹೂತು ಹೋಗಿದ್ದೇವೆ. ಉದಾಹರಣೆಗೆ ಇಲ್ಲೇ ಸಂಶೋಧನಾ ವಿದ್ಯಾರ್ಥಿಯೊಬ್ಬರು ಒಂದೆರಡು ಪ್ರಶ್ನೆ ಕೇಳಿದರು- ‘ಗಾಂಧಿಯವರ ಆತ್ಮಕತೆಯಲ್ಲಿ ಅಂಬೇಡ್ಕರ್ ಅವರ ಬಗ್ಗೆ ಒಂದು ಮಾತೂ ಪ್ರಸ್ತಾಪವಾಗುವುದಿಲ್ಲ, ಪೂನಾ ಒಪ್ಪಂದದ ಬಗ್ಗೆ ಒಂದೇ ಒಂದು ಸಾಲು ಬರೆಯುವುದಿಲ್ಲ: ಜೊತೆಗೆ ಮುಸ್ಲಿಮರಿಗೆ, ಕ್ರಿಶ್ಚಿಯನ್ನರಿಗೆ, ಸಿಖ್ಖರಿಗೆ, ಪ್ರತ್ಯೇಕ ಚುನಾಯಕ (Separate Electorate) ಇದ್ದಾಗ, ಗಾಂಧಿಯವರು ನಿಮ್ನ ವರ್ಗಗಳಿಗೆ ಪ್ರತ್ಯೇಕ ಚುನಾಯಕ ನೀಡುವುದಕ್ಕೆ ಸಮ್ಮತಿಸದೇ, ಯಾಕೆ ಆಮರಣಾಂತ ಉಪವಾಸ ಕೈಗೊಂಡರು?’ ಎಂದು ಪ್ರಶ್ನಿಸಿದರು. ಇದಕ್ಕೇನು ಹೇಳಲಿ? ಗಾಂಧಿಯವರ ಜೀವನ ಕಥನವು ಅವರ ಬಾಲ್ಯದಿಂದ 1921ನೆಯ ಇಸವಿವರೆಗಿನ ಕಾಲಮಾನದ ದಾಖಲು ಮಾತ್ರ. ಹೀಗಿರುವಾಗ ಅಂಬೇಡ್ಕರ್ ಅವರ ಪ್ರಸ್ತಾಪವು ಹೇಗೆ ತಾನೇ 1921ರವರೆಗಿನ ಆತ್ಮಕತೆಯಲ್ಲಿ ಬರಲು ಸಾಧ್ಯ? 1921 ರಲ್ಲಿ ಅಂಬೇಡ್ಕರ್ ಅವರು ಆಗಷ್ಟೇ ಮಾಸ್ಟರ್ ಡಿಗ್ರಿ ಮುಗಿಸಿದ ವಿದ್ಯಾರ್ಥಿಯಾಗಿದ್ದರು. ಸಮಾಧಾನದಿಂದ ಇಂತಹವುಗಳನ್ನು ನಾವು ಗಮನಿಸಬೇಕಾಗಿದೆ.
ಇನ್ನು ಪೂನಾ ಒಪ್ಪಂದದ ವಿಚಾರದಲ್ಲಿ ಇನ್ನೂ ಹೆಚ್ಚು ಸಮಾಧಾನದಿಂದ ಗಮನಿಸಬೇಕಾಗಿದೆ.
ಮೊದಲನೆಯದಾಗಿ, ಬ್ರಿಟಿಷ್ ನೇರ ಆಳ್ವಿಕೆಗೆ ಒಳಪಟ್ಟ ಎಂಟು ಪ್ರಾಂತಗಳಲ್ಲಿ ಮುಸ್ಲಿಮ್, ಕ್ರಿಶ್ಚಿಯನ್, ಸಿಖ್ ಧರ್ಮದವರಿಗೆ ಪ್ರತ್ಯೇಕ ಚುನಾಯಕ ವ್ಯವಸ್ಥೆ ಅದಾಗಲೇ 1909ರಿಂದಲೇ ಆರಂಭವಾಗಿತ್ತು. ಇದನ್ನು ಪ್ರತಿಭಟಿಸಿ ಪ್ರಾಣ ಪಣವಿಟ್ಟು ಗಾಂಧೀಜಿ ಹೋರಾಡಲಿಲ್ಲ ನಿಜ. ಆ 1909ರ ಸಮಯದಲ್ಲಿ ಗಾಂಧಿ ದಕ್ಷಿಣ ಆಫ್ರಿಕಾದಲ್ಲಿ, ಬಹುಶಃ ಜೈಲಿನಲ್ಲಿದ್ದರು. ಆದಾಗ್ಯೂ ಮುಸ್ಲಿಮ್, ಕ್ರಿಶ್ಚಿಯನ್, ಸಿಖ್ಖರು ಪ್ರತ್ಯೇಕ ಅಲ್ಪಸಂಖ್ಯಾತ ಧರ್ಮದವರು ಎಂದು ಗಾಂಧೀಜಿ ಅಂದುಕೊಂಡಿದ್ದರು. ಸಹಿಸಿಕೊಂಡಿದ್ದಕ್ಕೆ ಇದೆಲ್ಲಾ ಕಾರಣವಿರಬಹುದು. ಜೊತೆಗೆ ಗಾಂಧೀಜಿ ನಿಮ್ನ ವರ್ಗಗಳು ತನ್ನ ಧರ್ಮಕ್ಕೆ ಸೇರಿದವರು ಎಂದು ಬಲವಾಗಿ ನಂಬಿಕೊಂಡಿದ್ದರು. ಆ ಕಾಲದ ನಿಮ್ನ ವರ್ಗಗಳಾಗಲಿ ಅಥವಾ ಡಾ.ಅಂಬೇಡ್ಕರ್ ಅವರಾಗಲಿ ತಾವು ಹಿಂದೂ ಧರ್ಮಕ್ಕೆ ಸೇರಿದವರಲ್ಲ ಎಂದು ಅಂದುಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ನಾವು ನೋಡಬೇಕಾಗಿದೆ. ಇದೆಲ್ಲಾ ನಡೆದದ್ದು ನೂರಾರು ವರ್ಷಗಳ ಹಿಂದೆ. ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ. ನಾವು ಕಾಲದ ಏರಿಳಿತಗಳನ್ನು ಗಮನಿಸದೇ ಆ ಭೂತಕಾಲಕ್ಕೇ ಹೋಗಿ ಸಿಲುಕಿಕೊಂಡರೆ, ವರ್ತಮಾನವನ್ನೂ ಜಟಿಲ ಮಾಡಿಕೊಳ್ಳುತ್ತೇವೆ. ಇಂದು ಏನಾಗಿದೆ? ಭಾರತವು ಸ್ವಾತಂತ್ರ್ಯ ಪಡೆದ ಮೇಲೆ, ಪ್ರತ್ಯೇಕ ಅಲ್ಪಸಂಖ್ಯಾತ ಧರ್ಮಗಳ ಚುನಾಯಕ ಪ್ರಸ್ತಾಪವೇ ಅಪ್ರಸ್ತುತವಾಗಿಬಿಟ್ಟಿತು. ಜೊತೆಗೆ 1909ರಲ್ಲೇ ಪ್ರತ್ಯೇಕ ಚುನಾಯಕ ಪಡೆದಿದ್ದ ಮುಸ್ಲಿಮರನ್ನಂತೂ ಇಂದು ರಾಜಕೀಯ ಪ್ರಾತಿನಿಧ್ಯದಿಂದಲೇ ಹೊರ ಎಸೆಯಲಾಗುತ್ತಿದೆ.
ಬ್ರಿಟಿಷ್ ಆಳ್ವಿಕೆ ಕಾಲದಿಂದ ಇಂದಿಗೂ ಗುಣವಾಗದೆ, ಒಣಗದ ಗಾಯವಾಗಿ ಉಳಿದಿರುವ ಸಂಘಷರ್- ಪೂನಾ ಒಪ್ಪಂದ. ಈ ಒಪ್ಪಂದದಿಂದಾಗಿ ಆಗ ಅಂಬೇಡ್ಕರ್ ಬಯಸಿದ್ದಂತೆ ನಿಮ್ನ ವರ್ಗಗಳಿಗೆ, ಬ್ರಿಟಿಷ್ ಇಂಡಿಯಾ ನೇರ ಆಳ್ವಿಕೆಯ ಎಂಟು ಪ್ರಾಂತಗಳಲ್ಲಿ ಪ್ರತ್ಯೇಕ ಚುನಾಯಕ ಸಿಗಲಿಲ್ಲ. ಆಗ ಅಂಬೇಡ್ಕರ್ ಅವರು 71 ಪ್ರತ್ಯೇಕ ಚುನಾಯಕಗಳನ್ನು ಡಿಮ್ಯಾಂಡ್ ಮಾಡಿದ್ದರು. ಪೂನಾ ಒಪ್ಪಂದದಂತೆ, ತರುವಾಯ ನಿಮ್ನ ವರ್ಗಗಳನ್ನು ಪ್ರತ್ಯೇಕ ಅಲ್ಪಸಂಖ್ಯಾತರು ಎಂದು ಪರಿಗಣಿಸದೆ, ಎರಡು ಪಟ್ಟು ಪ್ರಾತಿನಿಧ್ಯದ 148 ಮೀಸಲು ಕ್ಷೇತ್ರಗಳು ನಿಮ್ನ ವರ್ಗದ ಸಮುದಾಯಕ್ಕೆ ಸಿಕ್ಕಿತು. ಇದಲ್ಲದೇ ಶೇಕಡ 18 ಪ್ರಾತಿನಿಧ್ಯ ಸೆಂಟ್ರಲ್ ಲೆಜಿಸ್ಲೇಚರ್ನಲ್ಲೂ ಸಿಕ್ಕಿತು. ತದನಂತರ ಈ ಸೂತ್ರ ಇಡೀ ಭಾರತಕ್ಕೆ ಅನ್ವಯಿಸಿತು.
ಇಷ್ಟೆಲ್ಲಾ ಆಯ್ತು. ಕೊನೆಗೆ, ಈ ಗಾಂಧಿ ಮತ್ತು ಅಂಬೇಡ್ಕರ್ ಸಂಘರ್ಷ ನಿರುಪಯುಕ್ತವೇ ಎಂದು ಕೇಳಿಕೊಂಡಾಗ- ಖಂಡಿತ ನಿರುಪಯುಕ್ತ ಅಲ್ಲ. ಯಾಕೆಂದರೆ, ಆಗಲೇ ನಿಮ್ನ ವರ್ಗಗಳಿಗೆ ಪ್ರತ್ಯೇಕ ಚುನಾಯಕ (Separate Electorate) ಸಿಕ್ಕಿಬಿಟ್ಟಿದ್ದರೆ ಇದೂ ಕೂಡ ಭಾರತ ಸ್ವಾತಂತ್ರ್ಯ ಪಡೆದ ಮೇಲೆ ಇಲ್ಲವಾಗುತ್ತಿತ್ತು. ಮುಂದೆ ನಾವೇ ಮೀಸಲು ಕ್ಷೇತ್ರಗಳಿಗೆ ಹೋರಾಡಬೇಕಾಗೂ ಬರುತ್ತಿತ್ತೇನೋ. ಆಗ ಆ ಹೋರಾಟ ಬಗೆಹರಿಯದೇ ಹತ್ತಾರು ವರ್ಷಗಟ್ಟಲೆ ಮುಂದುವರಿದಿದ್ದರೆ, ನಮಗೆ ಗಾಂಧಿಯೂ ಇರುತ್ತಿರಲಿಲ್ಲ, ಅಂಬೇಡ್ಕರ್ ಅವರೂ ಇರುತ್ತಿರಲಿಲ್ಲ. ನಾವು ಚಿಂತಿಸಬೇಕು. ಆಯ್ತು, ಆಯಾಯ ಧರ್ಮದವರು, ಆಯಾಯ ಜಾತಿಯವರು, ತಂತಮ್ಮ ಜಾತಿ, ಧರ್ಮಗಳ ಜನಪ್ರತಿನಿಧಿಗಳನ್ನೇ ಆಯ್ಕೆ ಮಾಡಿಕೊಂಡರೆ, ಭಾರತ ಇರಲಿ, ಆಯಾಯ ಜಾತಿ, ಧರ್ಮಗಳಾದರೂ ಉದ್ಧಾರವಾಗುತ್ತವೆಯೇ? ನನಗಂತೂ ಗ್ಯಾರಂಟಿ ಇಲ್ಲ. ಇನ್ನೂ ಹೆಚ್ಚು ಜಟಿಲವೇ ಆಗಬಹುದು. ಈ ಗಳಿಗೆಯಲ್ಲಿ ನಾವು ಗಮನಿಸಬೇಕಾಗಿರುವ ಇನ್ನೊಂದು ಅಂಶವೆಂದರೆ- ಪರಿಶಿಷ್ಟ ಜಾತಿಯೊಳಗೆ ಸೇರಿರುವ ಅಸ್ಪಶ್ಯ ಸಮುದಾಯಗಳ ಪ್ರಾತಿನಿಧ್ಯ ಕ್ಷೀಣಿಸುತ್ತಾ ರಾಜಕಾರಣದ ಊರಾಚೆ ಎಸೆಯಲ್ಪಡುತ್ತಿದೆಯಲ್ಲಾ ಈ ಕಡೆಗೆ. ಇದರ ಜೊತೆಗೆ, ಇಂದು ನಮಗೆ ಬೇಕಾಗಿರುವ ಜನಪ್ರತಿನಿಧಿಗಳೆಂದರೆ- ನಡೆನುಡಿಗಳಲ್ಲಿ ಸಮಾಜವಾದಿಗಳು, ಸಮತಾವಾದಿಗಳು, ಜಾತ್ಯತೀತ ಸ್ವಭಾವದವರು, ತಮ್ಮೊಳಗೂ ಸಮತ್ವದವರು ಹಾಗೂ ರಚನಾತ್ಮಕ ಕ್ರಿಯೆಗಳ ನಡೆಯವರು ಅಲ್ಲವೇ? ಹೌದು ಎನ್ನುವುದಾದರೆ ನಾವೀಗ ನೋಡಬೇಕಾದ್ದು- ಚುನಾವಣಾ ಸುಧಾರಣೆ ಕಡೆಗೆ.
ನನ್ನ ಮಾತುಗಳು ಸಾಕು ಅನ್ನಿಸುತ್ತಿದೆ. ನನ್ನೊಳಗಿನ ಸ್ಪಂದನೆಗಳಿಗೆ ಇಲ್ಲಿ ಒಂದಿಷ್ಟು ನುಡಿ ಕೊಡುತ್ತೇನೆ. ಗಾಂಧಿಯವರದು ‘ಸರ್ವಜೀವಗಳಲ್ಲಿಯೂ ಭಗವಂತನನ್ನು ಕಾಣುವ’ ಉತ್ಕಟ ಚಿಲುಮೆ. ಇದು ನನ್ನಲ್ಲಿ ಅಷ್ಟಾಗಿ ಇಲ್ಲ. ಹಾಗೆ ನೊಂದುಬೆಂದ ಜೀವಿಗಳಿಗೆ ಸ್ಪಂದಿಸಿದ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರಖರ ವೈಚಾರಿಕತೆ, ಅಧ್ಯಯನಶೀಲತೆ, ಪ್ರಬುದ್ಧತೆಗಳೂ ನನ್ನಲ್ಲಿ ಅಷ್ಟಾಗಿ ಇಲ್ಲ. ಆದರೂ ಇವು ಏನೋ ಅಷ್ಟು ಇಷ್ಟು ಒಂದಿಷ್ಟು ಇರಬಹುದು.
ಯಾಕೆಂದರೆ ನನಗೆ ಸಮಸ್ಯೆ ಎದುರಾಗಿ ದಿಕ್ಕು ತೋಚದಾದಾಗ ಒಂದು ಕಡೆ, ‘ದೇವರೇ ದೇವರೇ ದಾರಿ ತೋರಿಸು’ ಅಂತ ಮೊರೆ ಇಡುತ್ತೇನೆ. ಆಗ ನನ್ನ ಒಳಗಣ್ಣಿಗೆ ಮೂಡುವ ದೇವರು ಅಂದರೆ- ಅದು ಒಂದು ಮರವೂ ಆಗಿರಬಹುದು. ದುಡಿಯುವವರ ಧೂಳಿನ ಪಾದಗಳೋ, ನಡು ಬಗ್ಗಿಸಿ ನಾಟಿಹಾಕುವ ಮಹಿಳೆಯರ ಕೆಸರು ಮೆತ್ತಿದ ಪಾದಗಳೋ, ಸಮಾಜದ ಗಲೀಜು ಮೆತ್ತಿದ ಪೌರ ಕಾರ್ಮಿಕರ ಪಾದಗಳೋ ಅಥವಾ ನಾಲ್ಕು ಚಪ್ಪಡಿ ಕಲ್ಲಿನ ನಡುವೆ ಇಟ್ಟ ಆಕಾರವಿಲ್ಲದ ಕಲ್ಲಿನಮೂರ್ತಿಯೋ... ಇಂಥವುಗಳು. ಇವುಗಳ ಸ್ಪಂದನಗಳಿಗೆ ನಾನು ಮೊರೆ ಇಡುತ್ತೇನೆ- ‘ದಾರಿ ತೋರಿಸು’ ಅಂತ. ಜೊತೆಗೆ ಇನ್ನೊಂದು ಕಡೆಗೆ- ಒಂದು ಕೇಸ್ ತೆಗೆದುಕೊಂಡ ಒಬ್ಬ ಪ್ರಾಮಾಣಿಕ ವಕೀಲನಂತೆ ಸಂಬಂಧಿಸಿದ್ದರ ಬಗ್ಗೆ ಓದುತ್ತೇನೆ, ಬಲ್ಲವರಿಂದ ತಿಳಿದುಕೊಳ್ಳುತ್ತೇನೆ, ನನಗೇನೂ ತಿಳಿಯುತ್ತಿಲ್ಲವಲ್ಲ ಎಂದು ಮತ್ತಷ್ಟು ದಿಕ್ಕೆಟ್ಟು ಕೂರುತ್ತೇನೆ. ಸುಸ್ತಾಗಿ ಕೊನೆಗೆ ಅದರ ನಾಡಿ ಹಿಡಿಯಲು ನೋಡುತ್ತೇನೆ. ಒಟ್ಟಾರೆ ಆ ಗಳಿಗೆಯಲ್ಲಿ ನನ್ನ ಗ್ರಹಿಕೆಗೆ ಸಿಕ್ಕಿದಷ್ಟಕ್ಕೆ ತೊದಲ ನುಡಿ ಕೊಡುತ್ತೇನೆ. ನುಡಿಯ ದಿಕ್ಕಲ್ಲಿ ಮುಖ ಮಾಡಿ ನಿಲ್ಲುತ್ತೇನೆ. ಆ ದಿಕ್ಕಲ್ಲಿ ಕಷ್ಟಪಟ್ಟು ಒಂದೊಂದೇ ಹೆಜ್ಜೆ ಇಡಲು ಪ್ರಯತ್ನಿಸುತ್ತೇನೆ.
ಕೊನೆಗೊಂದು ಆಸೆ. ಸುಧಾ ವಿಶೇಷ ಸಂಚಿಕೆಗೆ ನನಗೊಂದು ಪ್ರಶ್ನೆ ಕೇಳಿದ್ದರು- ‘ನಿಮ್ಮ ಧರ್ಮ ಯಾವುದು?’ ಅಂತ. ಇದಕ್ಕೆ ನನ್ನ ಉತ್ತರ ಹೀಗಿತ್ತು. ‘ಬೌದ್ಧ ಮತ್ತು ಲಿಂಗಾಯತ ಧರ್ಮಗಳು ಮದುವೆಯಾಗಿ ಹುಟ್ಟುವ ಶಿಶು ಧರ್ಮವೇ ನನ್ನ ಧರ್ಮ’ ಅಂದಿದ್ದೆ. ಇಂದು, ಬಹುತ್ವದ ವಿಶಾಲ ಹಿಂದೂ ಧರ್ಮಗಳ ಮೇಲೆ ಅಲ್ಪವಾದ ಏಕಮುಖದ ಚಾತುರ್ವರ್ಣದ ಹಿಂದುತ್ವ ಸವಾರಿ ಮಾಡುತ್ತಿರುವಾಗ, ಅದು ಹುಟ್ಟುವುದಕ್ಕೆ ಕಾಲ ಕೂಡಿಬಂದಿರಬಹುದು ಅನ್ನಿಸುತ್ತಿದೆ.