ರೇಪಿಸ್ಟ್ ಗಳ ಜೊತೆ ಶಾಮೀಲಾದ ಗುಜರಾತ್ ಸರಕಾರ !
ಸುಪ್ರೀಂ ಕೋರ್ಟ್ ಗೇ ಮೋಸ ಮಾಡಿದವರ ಹಿಂದಿದ್ದವರು ಯಾರು ? ► ಬೇಟಿ ಬಚಾವೋ, ನಾರೀ ಶಕ್ತಿ ಎಂದು ಹೇಳುತ್ತಲೇ ಮೋದಿ ಸರಕಾರ ಮಾಡಿದ್ದೇನು ?
Photo: NDTV
“ಮಹಿಳೆಯೊಬ್ಬರು ಯಾವುದೇ ಧರ್ಮಕ್ಕೆ ಸೇರಿರಬಹುದು. ಅಥವಾ ಯಾವುದೇ ನಂಬಿಕೆಯನ್ನು ಅನುಸರಿಸುತ್ತಿರಬಹುದು. ಆದರೆ ಅವರ ಮೇಲೆ ಘೋರ ಅಪರಾಧ ನಡೆಸಿದವರಿಗೆ ಕ್ಷಮಾಪಣೆ ನೀಡಲು ಸಾಧ್ಯವೆ?”
ಇದು, ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಬಿಡುಗಡೆಗೊಳಿಸಿದ್ದ ಗುಜರಾತ್ ಸರ್ಕಾರದ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ಪೀಠ ಎತ್ತಿದ ಗಂಭೀರ ಪ್ರಶ್ನೆ. ಈ ದೇಶದ ಆತ್ಮಸಾಕ್ಷಿಯನ್ನೇ ಕಲಕಿದಂಥ ಗುಜರಾತ್ ಸರ್ಕಾರದ ಆದೇಶ ರದ್ದಾಗಿದೆ ಮತ್ತು ಬಿಲ್ಕಿಸ್ ಬಾನು ಅವರ ನಿರಂತರ ಹೋರಾಟಕ್ಕೆ ಕಡೆಗೂ ನ್ಯಾಯ ಸಂದಿದೆ.
ಬಿಲ್ಕಿಸ್ ಬಾನು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸೋಮವಾರ ನೀಡಿರುವ ತೀರ್ಪಿಗೆ ಎಷ್ಟೊಂದು ಮಹತ್ವವಿದೆ ಎಂಬುದನ್ನು ಈ ದೃಷ್ಟಿಯಿಂದ ನೋಡಬೇಕಿದೆ. ಅದು ಗುಜರಾತ್ ಸರಕಾರ ಹಾಗು ಅದರ ನಿರ್ಣಯಕ್ಕೆ ಮೊಹರು ಒತ್ತಿದ ಕೇಂದ್ರ ಸರಕಾರದ ಬಗ್ಗೆ ಈ ದೇಶಕ್ಕೆ ನೀಡಿರುವ ಸಂದೇಶವೇನು?.
ಈ ಐತಿಹಾಸಿಕ ತೀರ್ಪು ನೀಡಿದ ಕನ್ನಡತಿಯ ನೇತೃತ್ವದ ನ್ಯಾಯ ಪೀಠ ಈ ದೇಶದ ಜನರಿಗೆ ಹೇಳಿರುವುದೇನು?. ಬಿಲ್ಕಿಸ್ ಪ್ರಕರಣದಲ್ಲಿ ಗುಜರಾತ್ ಹಾಗು ಕೇಂದ್ರ ಸರಕಾರಗಳು ನಡೆದುಕೊಂಡ ಬಗೆ ಮೋದಿಯವರ ವರ್ಚಸ್ಸಿಗೆ, ಅವರಿಗಿರುವ ಜನಪ್ರಿಯತೆಗೆ, ಜನರು ಅವರ ಮೇಲಿಟ್ಟಿರುವ ನಂಬಿಕೆಗೆ, ಶ್ರೀರಾಮನ ದೇಶಕ್ಕೆ ಒಂದಿಷ್ಟಾದರೂ ತಕ್ಕುದಾಗಿತ್ತೇ?
ಈಗಲಾದರೂ ಜನ ಎಚ್ಚೆತ್ತುಕೊಳ್ಳುತ್ತಾರಾ ? ಯಾಕೆ ಹೀಗೆ ಕಾನೂನನ್ನು, ನೈತಿಕತೆಯನ್ನು, ಸಭ್ಯತೆಯನ್ನು ಎಲ್ಲವನ್ನೂ ಕಾಲಡಿ ಹೊಸಕಿ ಹಾಕಿ ರೇಪಿಸ್ಟ್ ಗಳನ್ನು ಬಿಡುಗಡೆ ಮಾಡಿದ್ರಿ ಎಂದು ಆಳುವವರನ್ನು ಕೇಳುತ್ತಾರಾ?. ಅಥವಾ ಈಗಲೂ ಆಳುವವರದೇ ಗುಣಗಾನ ಮಾಡುತ್ತಾ ಅವರ ಅಂಧ ಹಿಂಬಾಲಕರಾಗಿಯೇ ಉಳಿದು ಬಿಡುತ್ತಾರಾ?
ನಾರಿ ಶಕ್ತಿ ಬಗ್ಗೆ ದೊಡ್ಡ ದೊಡ್ಡ ಮಾತಾಡುತ್ತಲೇ, ಅವರ ಕಣ್ಣೀರಿಗೂ ಕಾರಣವಾಗುತ್ತಿರುವವರು, ಮರ್ಯಾದಾ ಪುರುಷೋತ್ತಮ ರಾಮನ ಹೆಸರಿನಲ್ಲಿ ರಾಜಕೀಯ ಮಾಡುವವರು, ಚುನಾವಣೆ ಸಮೀಪಿಸುತ್ತಿರುವಾಗ ರಾಮಮಂದಿರ ಪ್ರತಿಷ್ಠಾಪನೆ ಮಾಡಲು ತಯಾರಾಗುತ್ತಿರುವ ಹೊತ್ತಿನಲ್ಲಿ ಈ ಮಹತ್ವದ ತೀರ್ಪು ಬಂದಿದೆ.
ಆರೋಪಿಗಳ ಬಿಡುಗಡೆಯಲ್ಲಿ ಕಾನೂನು ಪ್ರಕ್ರಿಯೆ ಅನುಸರಿಸಿಲ್ಲ ಎಂದು ಸುಪ್ರೀಂ ಕೋರ್ಟ್ನ ತೀರ್ಪು ಸ್ಪಷ್ಟವಾಗಿ ಹೇಳಿದೆ. ಗುಜರಾತ್ ಸರ್ಕಾರ ಕಾನೂನು ಉಲ್ಲಂಘಿಸಿ ಆದೇಶ ಹೊರಡಿಸಿದ್ದು, ಅಪರಾಧಿಗಳನ್ನು ಚುನಾವಣೆಗೆ ಮುನ್ನ ಬಿಡುಗಡೆ ಮಾಡುವ ಆತುರ ತೋರಿದ್ದು ಬಯಲಾಗಿದೆ.
ಮತ್ತು ಏಕೆ ಅಂಥ ಆತುರವಿತ್ತು, ಏಕೆ ಅಪರಾಧಿಗಳ ಪರ ಅಷ್ಟೊಂದು ಮುತುವರ್ಜಿ ವಹಿಸಿ ಬಿಡುಗಡೆಗೆ ಅದೇಶಿಸಬೇಕಿತ್ತು ಎಂಬ ಪ್ರಶ್ನೆ ಎದ್ದಿದೆ.
ಇನ್ನೂ ಗಮನಿಸಬೇಕಿರುವ ಸಂಗತಿಯೆಂದರೆ, ಗುಜರಾತ್ ಸರ್ಕಾರದ ಈ ಆದೇಶವನ್ನು ಕೇಂದ್ರ ಸರ್ಕಾರ ಅನುಮೋದಿಸಿತ್ತು ಎಂಬುದು.ಇದು ರಾಮನ ಘನತೆಯ ಭಾರತವೋ, ಸಾಂವಿಧಾನಿಕ ಘನತೆಯ ಭಾರತವೋ ಅಥವಾ ಎಲ್ಲ ಘನತೆಯನ್ನು ಕಾಲಡಿ ಹಾಕಿರುವ ಮೋದಿಯವರ ಘನತೆಯ ಭಾರತವೋ?
ಇಂಥದೊಂದು ಗಂಭೀರ ಪ್ರಶ್ನೆಯನ್ನು ದೇಶದ ಜನತೆ ಈಗ ಎತ್ತಲೇಬೇಕಾಗಿದೆ. ದೊಡ್ಡ ಸಮಾಧಾನವೆಂದರೆ, ಈ ದೇಶದ ನ್ಯಾಯ ವ್ಯವಸ್ಥೆ ಎಂಥದೇ ಬಿಕ್ಕಟ್ಟಿನ ನಡುವೆಯೂ ಸತ್ಯದ ಪರವಾಗಿದೆ, ಪರವಾಗಿಯೇ ಇರುತ್ತದೆ ಎನ್ನುವುದು ಮತ್ತೊಮ್ಮೆ ಸಾಬೀತಾಯಿತು.
ಹಾಗಾಗಿಯೇ ಈಗ, ಬಿಲ್ಕಿಸ್ ಬಾನು ಪ್ರಕರಣದಲ್ಲಿ ಬಿಡುಗಡೆಗೊಂಡು ರಾಜಾರೋಷವಾಗಿ ಓಡಾಡಿಕೊಂಡಿದ್ದ,
ಮಾನ ಸಮ್ಮಾನಗಳನ್ನು ಅನುಭವಿಸುತ್ತಿದ್ದ "ಸಂಸ್ಕಾರಿ ಬ್ರಾಹ್ಮಣ" ಅಪರಾಧಿಗಳು ಮತ್ತೆ ಜೈಲಿಗೆ ಹೋಗುವುದು ಸಾಧ್ಯವಾಗಿದೆ.
ಇನ್ನೆರಡು ವಾರಗಳೊಳಗೆ ಅಪರಾಧಿಗಳು ಜೈಲಿಗೆ ಮರಳುವಂತೆ ಕೋರ್ಟ್ ಆದೇಶಿಸಿದೆ. ಅವರು ಕ್ಷಮೆಗೆ ಅರ್ಹರಾದವರಲ್ಲ ಎಂದು ನ್ಯಾಯಾಲಯ ಸ್ಪಷ್ಟ ಮಾತುಗಳಲ್ಲಿ ಹೇಳಿದೆ. 2002ರಲ್ಲಿ ಈ ಘೋರ ಘಟನೆ ನಡೆದಾಗ ಬಿಲ್ಕಿಸ್ ಬಾನು 21 ವರ್ಷದವರಾಗಿದ್ದರು. ಜತೆಗೆ 5 ತಿಂಗಳ ಗರ್ಭಿಣಿಯಾಗಿದ್ದರು. ಆ ವರ್ಷ ಫೆಬ್ರವರಿಯಲ್ಲಿ ಗೋದ್ರಾ ರೈಲು ಅಗ್ನಿ ದುರಂತದ ನಂತರ ಭುಗಿಲೆದ್ದಿದ್ದ ಕೋಮು ಗಲಭೆಯಲ್ಲಿ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು.
ಆಕೆಯ ಮೂರು ವರ್ಷದ ಮಗಳ ಸಹಿತ ಕುಟುಂಬದ 7 ಜನರನ್ನು ಹತ್ಯೆ ಮಾಡಲಾಗಿತ್ತು. ಇದರಲ್ಲಿ ಭಾಗಿಯಾಗಿದ್ದ 11 ಜನರಿಗೆ ಜೀವಾವಧಿ ಶಿಕ್ಷೆಯಾಗಿತ್ತು. ಆದರೆ 2022ರ ಆಗಸ್ಟ್ 15ರಂದು ಗುಜರಾತ್ ಸರ್ಕಾರ ಆ 11 ಜನರನ್ನೂ ಬಿಡುಗಡೆಗೊಳಿಸಿ ಆದೇಶ ನೀಡಿತ್ತು. ಜೈಲಿನಿಂದ ಬಿಡುಗಡೆಯಾದ ಅಪರಾಧಿಗಳನ್ನು ಬಿಜೆಪಿಯವರು ಹಾರ ಹಾಕಿ ಸ್ವಾಗತಿಸಿದ್ದರು ಮತ್ತು ಸಿಹಿ ಹಂಚಿ ಸಂಭ್ರಮಿಸಿದ್ದರು.
"ಅವರೆಲ್ಲ ಬ್ರಾಹ್ಮಣರು, ಅವರು ಒಳ್ಳೆಯ ಸಂಸ್ಕಾರದವರು" ಎಂದು ಅಪರಾಧ ಸಾಬೀತಾದ ರೇಪಿಸ್ಟ್ ಗಳ ಬಗ್ಗೆ ಅವತ್ತು ಗೋಧ್ರಾದ ಬಿಜೆಪಿ ಶಾಸಕ ಹಾಗು ರೇಪಿಸ್ಟ್ ಗಳನ್ನು ಬಿಡುಗಡೆಗೊಳಿಸಿದ ಸಮಿತಿಯ ಸದಸ್ಯ ಸಿ ಕೆ ರಾವುಜಿ ಹೇಳಿದ್ದರು. ದೇಶದ ಆತ್ಮಸಾಕ್ಷಿ ಎಂಬುದು ಅವತ್ತು ಸತ್ತುಹೋದಷ್ಟೇ ಚಡಪಡಿಸಿತ್ತು. ಕಳಕಳಿಯಿದ್ದ ಮನಸ್ಸುಗಳು ಕನಲಿದ್ದವು. ಆದರೆ ಬಿಜೆಪಿಯವರಿಗೆ ಮಾತ್ರ ಅದು ಸಂಭ್ರಮಿಸುವ ಸಂಗತಿಯಾಗಿತ್ತು.
ಯಾಕೆಂದರೆ ಅಪರಾಧಿಗಳ ಪರ ನಿಂತವರು, ಅವರನ್ನು ಬಿಡುಗಡೆಗೊಳಿಸುವಲ್ಲಿ ಮುತುವರ್ಜಿ ವಹಿಸಿದ್ದವರು, ಅವರು ಬಿಡುಗಡೆಯಾಗುವಂತೆ ನೋಡಿಕೊಂಡಿದ್ದವರು, ಹಾರ ಹಾಕಿ ಬರಮಾಡಿಕೊಂಡಿದ್ದವರು, ಅದೇ ಅಪರಾಧಿಗಳೊಂದಿಗೆ ವೇದಿಕೆ ಹಂಚಿಕೊಂಡಿದ್ದವರು ಎಲ್ಲರೂ ಅವರೇ ಆಗಿದ್ದರು.
ಬಿಲ್ಕಿಸ್ ಬಾನು ಸುಮ್ಮನಾಗಲಿಲ್ಲ. ನ್ಯಾಯಕ್ಕಾಗಿ ದಿಟ್ಟ ಹೋರಾಟಕ್ಕೆ ನಿಂತರು. ಈ ಹಾದಿಯಲ್ಲಿ ಅವರು ಬಹಳ ಸಲ ಹತಾಶೆಗೂ ಒಳಗಾಗುವಂಥ ಸಂದರ್ಭಗಳು ಕಂಡವು. ಕಡೆಗೂ ಒಂದೂ ಕಾಲು ವರ್ಷಕ್ಕೂ ಹೆಚ್ಚು ಸಮಯದ ಬಳಿಕ ಅವರ ಹೋರಾಟಕ್ಕೆ ಜಯ ಸಿಕ್ಕಿದೆ.
"ಸಂತ್ರಸ್ತೆಯ ಹಕ್ಕುಗಳೂ ಮುಖ್ಯ. ಮಹಿಳೆ ಗೌರವಕ್ಕೆ ಅರ್ಹಳು. ಮಹಿಳೆಯರ ವಿರುದ್ದ ನಡೆಸಲಾಗುವ ಬರ್ಬರ ಅಪರಾಧಗಳಲ್ಲಿ ಅಪರಾಧಿಗಳ ಶಿಕ್ಷೆ ಕಡಿತಗೊಳಿಸಲು ಸಾಧ್ಯವೆ " ಎಂದು, ಕನ್ನಡತಿ ನ್ಯಾ.ಬಿ ವಿ ನಾಗರತ್ನ ಮತ್ತು ನ್ಯಾ.ಉಜ್ವಲ್ ಭುಯಾನ್ ಅವರಿದ್ದ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ಪ್ರಶ್ನಿಸಿದೆ.
ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಅಪರಾಧಿಗಳ ಶಿಕ್ಷೆಯನ್ನು ಕಡಿತ ಮಾಡಿ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವ ಹಕ್ಕು ಗುಜರಾತ್ ಸರ್ಕಾರಕ್ಕೆ ಇರಲೇ ಇಲ್ಲ ಎಂದೂ ಕೋರ್ಟ್ ಹೇಳಿದೆ. ಬಿಲ್ಕಿಸ್ ಬಾನು ಪ್ರಕರಣವನ್ನು ಮುಕ್ತ ಮತ್ತು ನ್ಯಾಯಯುತ ವಿಚಾರಣೆ ದೃಷ್ಟಿಯಿಂದ 2004ರಲ್ಲಿ ಗುಜರಾತ್ನಿಂದ ಮುಂಬೈಗೆ ವರ್ಗಾಯಿಸಲಾಗಿತ್ತು.
ಹಾಗಿರುವಾಗ ಗುಜರಾತ್ ಸರ್ಕಾರ ಅಂಥದೊಂದು ಆದೇಶ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ವಿಚಾರದಲ್ಲಿ ನ್ಯಾಯಾಲಯಕ್ಕೆ ವಂಚಿಸಲಾಗಿದೆ ಎಂಬುದನ್ನೂ ಸುಪ್ರೀಂ ಕೋರ್ಟ್ ಗಮನಿಸಿದೆ. 1992ರ ಶಿಕ್ಷೆ ಕಡಿತ ನೀತಿಯಾನುಸಾರ ಗುಜರಾತ್ ಸರ್ಕಾರ ಅಪರಾಧಿಗಳನ್ನು ಬಿಡುಗಡೆಗೊಳಿಸಿತ್ತು. ಆದರೆ ಈ ಕಾನೂನಿನ ಸ್ಥಾನದಲ್ಲಿ, 2014ರಲ್ಲಿ ಜಾರಿಗೊಳಿಸಲಾದ ಕಾನೂನಿನ ಪ್ರಕಾರ, ದೊಡ್ಡ ಶಿಕ್ಷೆ ಎದುರಿಸುವ ಪ್ರಕರಣಗಳಲ್ಲಿ ಶಿಕ್ಷೆ ಕಡಿತಗೊಳಿಸುವುದನ್ನು ನಿಷೇಧಿಸಲಾಗಿದೆ.
1992ರ ನೀತಿಯ ಪ್ರಕಾರ ಕ್ಷಮಾದಾನ ನಿರ್ಧರಿಸಲು ಗುಜರಾತ್ ಸರ್ಕಾರಕ್ಕೆ ನಿರ್ದೇಶಿಸಿದ 2022, ಮೇ 13ರ ಸುಪ್ರೀಂಕೋರ್ಟ್ ಆದೇಶವನ್ನು ಸತ್ಯಗಳನ್ನು ಮರೆಮಾಚುವ ಮೂಲಕ ಪಡೆಯಲಾಗಿದೆ ಎಂದು ಪೀಠ ಹೇಳಿದೆ.
ಸುಪ್ರೀಂ ಕೋರ್ಟ್ ಅನ್ನೇ ವಂಚಿಸಿ ತಮಗೆ ಬೇಕಾದಂತೆ ಆದೇಶ ಪಡೆದಿದ್ದರು ಎಂದರೆ ಅದೆಷ್ಟು ದೊಡ್ಡ ಮೋಸ ?. ಅಂತಹ ಅದೆಷ್ಟು ಮೋಸ ಈ ದೇಶದ ಜನರಿಗೆ ಆಗಿದೆ ?. ಅದರ ಅರಿವಾದರೂ ಜನರಿಗೆ ಇದೆಯೇ ?. 2022ರ ಆಗಸ್ಟ್ 15ರಂದು ಗುಜರಾತ್ ಸರ್ಕಾರ ಬಿಲ್ಕಿಸ್ ಬಾನು ಪ್ರಕರಣದಲ್ಲಿ ಭಾಗಿಯಾಗಿದ್ದ 11 ಅಪರಾಧಿಗಳನ್ನು ಬಿಡುಗಡೆ ಮಾಡಿದಾಗ ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ಆದರೆ ನಿರ್ಲಜ್ಜ ಸರ್ಕಾರ, ಅಪರಾಧಿಗಳು 14 ವರ್ಷ ಮತ್ತು ಅದಕ್ಕಿಂತ ಹೆಚ್ಚು ಕಾಲ ಜೈಲಿನಲ್ಲಿ ಪೂರ್ಣಗೊಳಿಸಿರುವುದರಿಂದ, ಜೊತೆಗೆ ಅವರ ನಡವಳಿಕೆ ಉತ್ತಮವಾಗಿರುವುದು ಕಂಡುಬಂದಿದ್ದರಿಂದ ಬಿಡುಗಡೆ ನಿರ್ಧಾರ ಕೈಗೊಳ್ಳಲಾಯಿತು ಎಂದು ಸಮರ್ಥಿಸಿಕೊಂಡಿತ್ತು. ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಂತ್ರಸ್ತೆ ಬಿಲ್ಕಿಸ್ ಬಾನು ಸುಪ್ರೀಂ ಕೋರ್ಟ್ನಲ್ಲಿ ಹೋರಾಟ ಆರಂಭಿಸಿದ್ದರು. ಸಿಪಿಎಂ ನಾಯಕಿ ಸುಭಾಷಿಣಿ ಅಲಿ, ಪತ್ರಕರ್ತೆ ರೇವತಿ ಲಾಲ್, ಲಕ್ನೋ ವಿವಿ ಮಾಜಿ ಕುಲಪತಿ ರೂಪ್ ರೇಖಾ ವರ್ಮಾ ಸೇರಿ ಹಲವರು ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಕೋರ್ಟ್ನಲ್ಲಿ ಪಿಐಎಲ್ ಸಲ್ಲಿಸಿದ್ದರು.
ಅವರೆಲ್ಲರ ಕಳಕಳಿಗೆ ಸುಪ್ರೀಂ ಕೋರ್ಟ್ ತೀರ್ಪಿನಿಂದ ಜಯ ದೊರೆತಂತಾಗಿದೆ. ಅಪರಾಧಿಗಳಾದ ಜಸ್ವಂತ್ ನಾಯ್, ಗೋವಿಂದ್ ನಾಯ್, ಶೈಲೇಶ್ ಭಟ್, ರಾಧೇಶಾಮ್ ಶಾ, ಬಿಪಿನ್ ಚಂದ್ರ ಜೋಶಿ, ಕೇಸರಭಾಯಿ ವೋಹಾನಿಯಾ, ಪ್ರದೀಪ್ ಮೋರ್ಧಿಯಾ, ಬಕಾಭಾಯ್ ವೋಹಾನಿಯಾ, ರಾಜುಭಾಯ್ ಸೋನಿ, ಮಿತೇಶ್ ಭಟ್ ಮತ್ತು ರಮೇಶ್ ಚಂದನಾ ಪರವಾಗಿ ಬಿಜೆಪಿಯ ದಂಡೇ ನಿಂತುಬಿಟ್ಟಿತ್ತು.
ಆ ಬಳಿಕ ಅಪರಾಧಿಗಳು ಬಿಜೆಪಿ ಸಂಸದ ಮತ್ತು ಶಾಸಕರೊಂದಿಗೆ ವೇದಿಕೆ ಹಂಚಿಕೊಂಡಿದ್ದು ಕೂಡ ಸುದ್ದಿಯಾಗಿತ್ತು. ಅಪರಾಧಿಗಳಲ್ಲಿ ಒಬ್ಬನಾದ ರಾಧೇಶ್ಯಾಮ್ ಶಾ ವಕೀಲಿ ವೃತ್ತಿಯನ್ನು ಪ್ರಾರಂಭಿಸಿದ್ದ. ಅದನ್ನು ಸುಪ್ರೀಂಕೋರ್ಟ್ ಗಮನಕ್ಕೆ ತರಲಾಗಿತ್ತು. ಹೀಗೆ, ಮರ್ಯಾದಾ ಪುರುಷೋತ್ತಮನ ಹೆಸರಲ್ಲಿ ರಾಜಕಾರಣ ಮಾಡುತ್ತ ಜನರನ್ನು ಮರುಳು ಮಾಡುತ್ತಿರುವವರು ಅಂದು ಅತ್ಯಾಚಾರಿಗಳ ಬೆನ್ನಿಗೆ ನಿಂತಿದ್ದರು.
ಆದರೆ, ಮಹಿಳೆಯರಿಗೆ ನೆರವಾಗುವುದಕ್ಕಾಗಿಯೇ ದೇವರು ತನ್ನನ್ನು ಆರಿಸಿದ್ದಾನೆ ಎನ್ನುವ ಮೋದಿ ಮಾತಾಡಲೇ ಇಲ್ಲ. ಬಿಜೆಪಿ ನಾಯಕಿ ಸ್ಮೃತಿ ಇರಾನಿ ಆ 11 ಮಂದಿ ಅತ್ಯಾಚಾರ ಅಪರಾಧಿಗಳ ಬಿಡುಗಡೆಯಾದಾಗ ಮಾತಾಡಲೇ ಇಲ್ಲ. ಮಹಿಳೆಯರ ರಕ್ಷಣೆ ಹೆಸರು ಹೇಳುತ್ತ ಪೋಸ್ಟರುಗಳಿಗೆ ಮಾತ್ರವೇ ಮಹಿಳಾ ರಕ್ಷಣೆಯನ್ನು ಸೀಮಿತವಾಗಿಟ್ಟಿರುವವರ ಬಂಡವಾಳ ಇದೆಂಬುದು ಈಗಲಾದರೂ ದೇಶದ ಜನಕ್ಕೆ ಅರ್ಥವಾಗುವುದೆ?
ಆಝಾದಿ ಕಾ ಅಮೃತ ಮಹೋತ್ಸವದ ಬಗ್ಗೆ ಭಾರಿ ಭಾರಿ ಮಾತಾಡುವ ಪ್ರಧಾನಿ, ಅತ್ಯಾಚಾರ ಅಪರಾಧಿಗಳನ್ನು ಸನ್ನಡತೆ ಆಧಾರದ ಮೇಲೆ ಅವರದೇ ತವರು ರಾಜ್ಯ ಗುಜರಾತಿನ ಅವರದೇ ಪಕ್ಷದ ಸರ್ಕಾರ ಅದೇ ಅಮೃತ ಕಾಲದಲ್ಲಿ ಬಿಡುಗಡೆ ಮಾಡಿದ್ದನ್ನೂ,
ಕೇಂದ್ರದ ಅವರದೇ ಸರ್ಕಾರ ಅದಕ್ಕೆ ಸಮ್ಮತಿ ಕೊಟ್ಟಿದ್ದನ್ನೂ ಕುರಿತು ಮಾತನಾಡಬೇಕಲ್ಲವೆ?
ಯಾಕೆ ಅದರ ಬಗ್ಗೆ ಮೌನ?. ಜನರೆದುರಿನ ಭಾಷಣಗಳಲ್ಲಿ, ಮನ್ ಕಿ ಬಾತ್ನಲ್ಲಿ ಹೊಸ ಹೊಸ ಶಬ್ದಗಳನ್ನು ಪೋಣಿಸಿ ಮಾತಾಡುವುದೇ ಒಂದು,
ರಾಜಕೀಯವೇ ಮತ್ತೊಂದು ಅಲ್ಲವೆ?. ಇದೆಂಥ ಸೋಗಲಾಡಿತನ?. ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅಪರಾಧಿಗಳನ್ನು ಯಾರು ರಕ್ಷಿಸುತ್ತಿದ್ದಾರೆ ಎಂಬುದನ್ನು ಈ ತೀರ್ಪು ತೋರಿಸಿದೆ ಎಂದಿದ್ದಾರೆ.
ಚುನಾವಣಾ ಲಾಭಕ್ಕಾಗಿ ನ್ಯಾಯದ ಕೊಲೆಗೈಯುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಬಿಲ್ಕಿಸ್ ಬಾನು ಅವರ ದಣಿವರಿಯದ ಪ್ರಯತ್ನ ದುರಹಂಕಾರಿ ಬಿಜೆಪಿ ಸರ್ಕಾರದ ವಿರುದ್ಧದ ನ್ಯಾಯದ ಗೆಲುವಾಗಿದೆ ಎಂದು ರಾಹುಲ್ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ನಿಜ. ಒಂದು ದೊಡ್ಡ ಹೋರಾಟವನ್ನು ಬಿಲ್ಕಿಸ್ ಬಾನು ಅವರು ನಡೆಸಿದ್ದಾರೆ ಮತ್ತು ನ್ಯಾಯಕ್ಕಾಗಿ ನಿಲ್ಲಲೇಬೇಕಿರುವ ಜರೂರತ್ತನ್ನು ಈ ಮೂಲಕ ಅವರು ಪ್ರತಿಪಾದಿಸಿದ್ದಾರೆ.
ನ್ಯಾಯ ಕಡೆಗೂ ಕೈಹಿಡಿದಿದೆ ಎಂಬುದೇ ಈ ದೇಶದ ಪಾಲಿಗೆ ಈಗ ದೊರೆತಿರುವ ದೊಡ್ಡ ಭರವಸೆ. ಇದರ ನಡುವೆ, ಸುಪ್ರೀಂ ಕೋರ್ಟ್ನ ಈ ತೀರ್ಪು ಅವತ್ತು ಅಂಥದೊಂದು ದುಷ್ಟ ಉದ್ದೇಶದ ಆದೇಶವನ್ನು ಕೊಟ್ಟಿದ್ದ ಗುಜರಾತ್ ಸರ್ಕಾರಕ್ಕೂ, ಅದನ್ನು ಸಮ್ಮತಿಸಿದ್ದ ಕೇಂದ್ರ ಸರ್ಕಾರಕ್ಕೂ ದೊಡ್ಡ ಏಟು.
ಆದರೆ ಅದರಿಂದಾದ ಆಘಾತವನ್ನು ಮರೆಮಾಚುವಂತೆ ಮಡಿಲ ಮೀಡಿಯಾ ರಾಮಮಂದಿರ ಪ್ರತಿಷ್ಠಾಪನೆ ತಯಾರಿಯನ್ನೇ ದೊಡ್ಡದಾಗಿ ಪ್ರಸಾರ ಮಾಡುತ್ತ, ಜನರನ್ನೂ ಅದೇ ಗುಂಗಿನಲ್ಲಿ ಮುಳುಗುವಂತೆ ಮಾಡಲು ಸಿಕ್ಕಾಪಟ್ಟೆ ಶ್ರಮಿಸುತ್ತಿದೆ. ಮಾಧ್ಯಮ ಎಂಬ ಹೆಸರಿನಲ್ಲಿ ಇಷ್ಟೊಂದು ಲಜ್ಜೆಗೇಡಿ ನಡೆ ಎಷ್ಟು ಭಂಡತನದ್ದಾಗಿದೆಯೊ, ಬಿಜೆಪಿಯ ಭಂಡ ನಡೆ ಕೂಡ ಅಷ್ಟೇ ಲಜ್ಜೆಗೇಡಿಯಾಗಿದೆ. ಆದರೆ ಸತ್ಯದ ಪ್ರಖರತೆಯಲ್ಲಿ ಇವರ ಬಣ್ಣ ಮಾತ್ರ ಬಯಲಾಗುತ್ತಲೇ ಇದೆ. ಈಗಲೂ ಹಾಗೆ ಬಣ್ಣ ಬಯಲಾಗಿದೆ.