ಗೋಧ್ರಾ ದುರಂತ ಹೇಗೆ ಇಡೀ ದೇಶದ ಚಿತ್ರಣವನ್ನೇ ಬದಲಾಯಿಸಿತು ?
ಗೋಧ್ರಾ: ಗುಜರಾತ್ ಸರಕಾರ ಹೇಳಿದ್ದೇನು ? ಅಲ್ಲಿ ನಿಜವಾಗಿ ಆಗಿದ್ದೇನು ? ► ಪ್ರಭಾಕರ್ ಭಟ್, ಅನಂತ್ ಹೆಗಡೆ ವಿಚಾರಣೆ ನಡೆಸಿದರಾ ಪೊಲೀಸರು ?
ಬಿ ಕೆ ಹರಿಪ್ರಸಾದ್
ಹಿರಿಯ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ಅವರು ಗೋಧ್ರಾ ಮಾದರಿಯ ಘಟನೆಯ ಬಗ್ಗೆ ಎಚ್ಚರಿಸಿದ್ದಕ್ಕೆ ಅವರಿಂದ ಹೇಳಿಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಇದು ಅವರ ವಿಚಾರಣೆಯೇ ಅಥವಾ ಅವರ ಹೇಳಿಕೆ ಆಧರಿಸಿ ಇಂತಹ ಅಪಾಯ ಸಂಭವಿಸುವ ಕುರಿತ ತನಿಖೆಯೇ ಎಂದು ಸ್ಪಷ್ಟವಾಗಿಲ್ಲ.
ಈ ಬಗ್ಗೆ ಹರಿಪ್ರಸಾದ್ ಕೂಡ ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ತೀರಾ ಪ್ರಚೋದನಕಾರಿಯಾಗಿ ಮಾತಾಡಿರುವ ಕಲ್ಲಡ್ಕ ಪ್ರಭಾಕರ್ ಭಟ್ ಹಾಗು ಅನಂತ್ ಕುಮಾರ್ ಹೆಗಡೆಯ ವಿಚಾರಣೆ ಇನ್ನೂ ನಡೆಯದೆ ಇರುವುದೂ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಮಹಿಳಾ ಸಮುದಾಯವನ್ನೇ ಅಪಮಾನಿಸುವಂತಹ ಹೇಳಿಕೆ ನೀಡಿದ್ದ ಆರೆಸ್ಸೆಸ್ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಏಕೆ ಎಂಬುದು ಹರಿಪ್ರಸಾದ್ ಅವರ ಪ್ರಶ್ನೆಯಾಗಿದೆ.
ಕಲ್ಲಡ್ಕ ಪ್ರಭಾಕರ್ ಭಟ್ ಜಾಮೀನು ಪಡೆದುಕೊಳ್ಳುತ್ತಾರೆ, ಸಂಸದರು ಏನು ಮಾಡಿದ್ದಾರೆ ಗೊತ್ತಿಲ್ಲ. ನಾನು ಪಕ್ಷದಲ್ಲಿ ಇಷ್ಟು ವರ್ಷ ಸೇವೆ ಸಲ್ಲಿಸಿದ್ದೇನೆ. ನನ್ನನ್ನು ವಿಚಾರಣೆ ಮಾಡಲು ಪೊಲೀಸರನ್ನು ಕಳುಹಿಸುತ್ತಾರೆಂದರೆ ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಹರಿಪ್ರಸಾದ್ ಬೇಸರ ವ್ಯಕ್ತಪಡಿಸಿದ್ದಾರೆ.
"ನಾನು ಹೇಳಿಕೆ ನೀಡಿದ್ದು ಸಾರ್ವಜನಿಕ ಹಿತದೃಷ್ಟಿಯಿಂದ ಮಾತ್ರವಷ್ಟೇ. ಅದಕ್ಕೆ ನಾನು ಈಗಲೂ ಬದ್ಧನಾಗಿದ್ದೇನೆ. ನನ್ನ ಹೇಳಿಕೆ ಸರಿಯಲ್ಲ ಎಂದಾದರೆ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ಮಾಡುವಂತೆ" ಅವರು ಹೇಳಿದ್ದಾರೆ. "ಬಿಜೆಪಿಯ ಆಡಳಿತ ಅವಧಿಯಲ್ಲಿ ನಾನು ಆ ರಾಜ್ಯದಲ್ಲಿ ನಾಲ್ಕೂವರೆ ವರ್ಷ ಕಾಂಗ್ರೆಸ್ ಪಕ್ಷದ ಉಸ್ತುವಾರಿ ವಹಿಸಿದ್ದೆ. ಅವರು ಯಾವ ರೀತಿ ಕೆಲಸ ಮಾಡುತ್ತಾರೆಂದು ನನಗೆ ಗೊತ್ತಿದೆ. ಆ ನಿಟ್ಟಿನಲ್ಲಿ ಹೇಳಿದ್ದ ಮಾತುಗಳಿಗೆ ನನ್ನನ್ನು ವಿಚಾರಣೆ ಮಾಡುತ್ತಾರೆ ಎಂದರೆ ಅಚ್ಚರಿಯಾಗುತ್ತದೆ. ನಾನು ಯಾವ ಸರಕಾರಲ್ಲಿದ್ದೇನೆ ಎಂಬ ಗೊಂದಲ ಕಾಡುತ್ತದೆ. ಪಕ್ಷದ ಹಿರಿಯ ನಾಯಕನಾಗಿರುವ ನನಗೇ ಇಂಥ ಸ್ಥಿತಿಯಾದರೆ ಸಾಮಾನ್ಯ ಕಾರ್ಯಕರ್ತರ ಪರಿಸ್ಥಿತಿ ಏನು" ಎಂದು ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಆದರೆ ಹರಿಪ್ರಸಾದ್ ಹೇಳಿರುವ ಗೋಧ್ರಾ ರೀತಿಯ ಘಟನೆಯ ಸಂಭಾವ್ಯತೆ ಬಗ್ಗೆ ಏಕೆ ಸರಕಾರ ಬಹಳ ಗಂಭೀರವಾಗಿರಬೇಕು?. ಏಕೆ ಅದು ರಾಜಕೀಯ ಕೆಸರೆರಚಾಟದ ವಿಷಯವಲ್ಲ?. ಗೋಧ್ರಾ ದುರಂತ , ಅದರ ಸುತ್ತ ನಡೆದ ರಾಜಕೀಯ ಹಾಗೂ ವಾಸ್ತವಗಳ ಬಗ್ಗೆ ಹಿರಿಯ ಪತ್ರಕರ್ತ, ಅಂಕಣಕಾರ ಪ್ರೇಮ್ ಶಂಕರ್ ಝಾ ಅವರು ಕಳೆದ ವರ್ಷ ಬರೆದ ಲೇಖನದಲ್ಲಿ ವಿವರಿಸಿದ್ದಾರೆ.
ಹೇಗೆ ಗೋಧ್ರಾ ಗುಜರಾತ್ ಮಾತ್ರವಲ್ಲ ಇಡೀ ಭಾರತದ ರಾಜಕೀಯವನ್ನು, ಅದರ ಭವಿಷ್ಯವನ್ನು ಬದಲಾಯಿಸಿಬಿಟ್ಟಿತು?. ಯಾಕೆ ಅಂತಹದೊಂದು ಅವಘಡ ಸಂಭವಿಸದಂತೆ ಪ್ರತಿ ಸರಕಾರ ಎಚ್ಚರ ವಹಿಸಬೇಕು ಎಂದು ಪ್ರೇಮ್ ಶಂಕರ್ ಝಾ ದಿ ವೈರ್ನಲ್ಲಿನ ತಮ್ಮ ಬರಹದಲ್ಲಿ ವಿವರಿಸಿದ್ದಾರೆ.
ಅವತ್ತು, ಅಂದರೆ 2002ರ ಫೆಬ್ರವರಿ 27ರಂದು ಮುಂಜಾನೆ ಗೋಧ್ರಾ ನಿಲ್ದಾಣದ ಹೊರಗೆ ಸಾಬರಮತಿ ಎಕ್ಸ್ಪ್ರೆಸ್ನ ಬೋಗಿಯೊಂದರಲ್ಲಿನ ಬೆಂಕಿಯಿಂದಾಗಿ 59 ಜನರ ಸಾವು ಸಂಭವಿಸಿದ್ದನ್ನು ಹೇಗೆ ಗುಜರಾತ್ನ ಅಂದಿನ ಮೋದಿ ನೇತೃತ್ವದ ಸರ್ಕಾರ ಧಾರ್ಮಿಕ ಧ್ರವೀಕರಣದ ಲಾಭಕ್ಕೆ ಬಳಸಿಕೊಂಡಿತು ಎಂಬುದನ್ನು ಝಾ ವಿವರಿಸುತ್ತಾರೆ.
ಪ್ರೇಮ್ ಶಂಕರ್ ಝಾ ಹೇಳುವ ಪ್ರಕಾರ ಗೋಧ್ರಾ ದುರಂತ ಸಂಭವಿಸದೇ ಇದ್ದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲೋದು ಖಚಿತವಿತ್ತು. ಮೋದಿ ಮತ್ತೆ ಸಿಎಂ ಆಗುತ್ತಿರಲಿಲ್ಲ. ಬಳಿಕ ಈ ದೇಶದ ಪ್ರಧಾನಿಯೂ ಆಗುತ್ತಿರಲಿಲ್ಲ. ರೈಲಿನಲ್ಲಿ ಅಯೋಧ್ಯೆಯಲ್ಲಿ ಬಲವಂತವಾಗಿ ಹತ್ತಿದ ಕರಸೇವಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅದು ಗೋಧ್ರಾಕ್ಕೆ ಬಂದಾಗ, ಅದರ ಸಾಮರ್ಥ್ಯವನ್ನೂ ಮೀರಿ 2,000ಕ್ಕೂ ಹೆಚ್ಚು ಪ್ರಯಾಣಿಕರಿದ್ದರು.
ಕೋಚ್ S-6ರಲ್ಲಿ ಬೆಂಕಿ ಹೊತ್ತಿಕೊಂಡಾಗ, ಅದರಲ್ಲಿ ಕೆಲವು ಕರಸೇವಕರಿದ್ದರು. ಕರಸೇವಕರಲ್ಲಿ ಕೆಲವರು ಅಯೋಧ್ಯೆಗೆ ಹೋಗುವಾಗ ಮತ್ತು ಹಿಂದಿರುಗುವಾಗ ಗೋಧ್ರಾ ಪ್ಲಾಟ್ಫಾರ್ಮ್ನಲ್ಲಿ ಮುಸ್ಲಿಂ ವ್ಯಾಪಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಮತ್ತು ಜಗಳವೂ ನಡೆದಿತ್ತು. ಹಾಗಾಗಿ, ಅದೇ ಆಧಾರದಲ್ಲಿ ರೈಲಿಗೆ ಬೆಂಕಿ ಹಚ್ಚಿದವರು ಮುಸ್ಲಿಮರೇ ಆಗಿದ್ದಾರೆ ಎಂಬ ಕಥೆ ಗುಜರಾತಿನಲ್ಲಿ ವ್ಯಾಪಕವಾಗಿ ಹರಡುವಂತಾಯಿತು.
ಈ ಕೃತ್ಯವನ್ನು ಸಮೀಪದ ಜೋಪಡಿ ನಿವಾಸಿ ಮುಸ್ಲಿಮರೇ ಮಾಡಿದ್ದಾರೆ ಎಂಬ ಸುದ್ದಿಯನ್ನು ಸ್ಥಳೀಯ ಗುಜರಾತಿ ಪತ್ರಿಕೆಗಳು ಅದೇ ದಿನ ಮಧ್ಯಾಹ್ನದ ಹೊತ್ತಿಗೆ ಹರಡಿದವು. ಅವರು ಕಲ್ಲುಗಳು ಮತ್ತು ಸೀಮೆಎಣ್ಣೆಯಲ್ಲಿ ಅದ್ದಿದ ಚಿಂದಿಗಳೊಂದಿಗೆ ಕಾಯುತ್ತಿದ್ದರು. ರೈಲು ನಿಂತ ಕೂಡಲೇ ಕಿಟಕಿಗಳನ್ನು ಒಡೆದು ಸೀಮೆಎಣ್ಣೆಯಲ್ಲಿ ನೆನೆಸಿದ್ದ ಉರಿಯುತ್ತಿರುವ ಚಿಂದಿಗಳನ್ನು ಕೋಚ್ ಗೆ ಎಸೆದು ಬೆಂಕಿ ಹಚ್ಚಿದರು ಎಂದು ವರದಿಗಳು ಗುಲ್ಲು ಹರಡಿದ್ದವು.
ಪೊಲೀಸರ ಮೊದಲ ಚಾರ್ಜ್ ಶೀಟ್ ಗೆ ಈ ವರದಿಗಳೇ ಆಧಾರವಾಗಿದ್ದವು. ಕೋಚ್ ಒಳಕ್ಕೆ ಉರಿಯುವ ಚಿಂದಿಬಟ್ಟೆಗಳನ್ನು ಎಸೆದುದನ್ನು ಕಣ್ಣಾರೆ ಕಂಡೆವೆಂಬ ಪ್ರತ್ಯಕ್ಷದರ್ಶಿಗಳನ್ನು ತಯಾರು ಮಾಡಲಾಗಿತ್ತು ಮತ್ತು ಅವರೆಲ್ಲರೂ ವಿಶ್ವ ಹಿಂದೂ ಪರಿಷತ್ನವರೇ ಆಗಿದ್ದರು. ನಂತರ ನಡೆದ ಹತ್ಯಾಕಾಂಡ ಈಗ ಇತಿಹಾಸ.
ಆದರೆ, ವ್ಯಂಗ್ಯವೆಂದರೆ, ರೈಲಿನ ಬೆಂಕಿಯ ಬಗ್ಗೆ ಪೊಲೀಸರ ಈ ಆರಂಭಿಕ ವಾದ ಸಂಪೂರ್ಣವಾಗಿ ಆಧಾರರಹಿತವಾಗಿತ್ತು. ಆದರೆ, ಆ ಘಟನೆಗೆ ಮುಸ್ಲಿಮರೇ ಕಾರಣ ಎಂದು ಮೊದಲ ದಿನದಿಂದಲೂ ಹೇಳಿದ್ದನ್ನು ಸಮರ್ಥಿಸುವುದಕ್ಕೇ ಅನಂತರ ಸತತ ಯತ್ನ ನಡೆದಿತ್ತೆಂದು ಪ್ರೇಮ್ ಶಂಕರ್ ಝಾ ವರದಿಗಳು, ಅಧ್ಯಯನಗಳ ಆಧಾರದಲ್ಲಿ ಹೇಳುತ್ತಾರೆ.
ಮೋದಿ ನೇತೃತ್ವದ ರಾಜ್ಯ ಸರ್ಕಾರ ತಾನು ಪ್ರತಿಪಾದಿಸಿದ ವಾದವನ್ನೇ ಬಲಪಡಿಸಲು ಮತ್ತು ಅದನ್ನೇ ಎತ್ತಿಹಿಡಿಯಲು ಯತ್ನಿಸಿದ್ದು ಆಕಸ್ಮಿಕವಾಗಿರಲಿಲ್ಲ. ಗುಜರಾತ್ನಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಇಸ್ಲಾಮೋಫೋಬಿಯಾದ ಅಲೆಯನ್ನು ಸೃಷ್ಟಿಸುವ ಸ್ಪಷ್ಟ ಉದ್ದೇಶ ಮೋದಿಯವರದಾಗಿತ್ತು ಎಂದು ಪ್ರೇಮ್ ಶಂಕರ್ ಬರೆದಿದ್ದಾರೆ.
2005ರಲ್ಲಿ ಆಗಿನ ಯುಪಿಎ ಸರ್ಕಾರದ ರೈಲ್ವೇ ಸಚಿವ ಲಾಲು ಪ್ರಸಾದ್ ಯಾದವ್ ಅವರು ಕಲ್ಕತ್ತಾ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶ ಯು.ಸಿ. ಬ್ಯಾನರ್ಜಿ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿದರು. ಬ್ಯಾನರ್ಜಿ ಆಯೋಗ ಸಾಕ್ಷ್ಯಗಳನ್ನು ಮರು ಪರಿಶೀಲಿಸಲು ಐವರು ತಜ್ಞರ ತಂಡವನ್ನು ನೇಮಿಸಿತು. ಸತ್ಯಾಸತ್ಯತೆ ತಿಳಿಯಲು ತಜ್ಞರ ಸಮಿತಿಗೆ ಕಂಡ ಒಂದೇ ದಾರಿಯೆಂದರೆ, ಬೆಂಕಿ ಹೊತ್ತಿಕೊಂಡಿದ್ದ ಇತರ ಗಾಡಿಗಳಲ್ಲಿನ ಮಾದರಿಯನ್ನು ಪರಿಶೀಲಿಸುವುದಾಗಿತ್ತು.
ರೈಲ್ವೆ ಯಾರ್ಡ್ಗಳಲ್ಲಿ ಸಂರಕ್ಷಿಸಲಾಗಿದ್ದ ಐದು ಸುಟ್ಟಗಾಡಿಗಳಲ್ಲಿ ಒಂದರೊಳಗೆ ಸುಟ್ಟ ಮತ್ತು ಹೊಗೆಯ ಮಾದರಿ ಕೋಚ್ S-6ನಲ್ಲಿ ಕಂಡುಬಂದ ಮಾದರಿಯನ್ನು ಹೋಲುತ್ತಿತ್ತು. ಅದು ಊಟ ಬಿಸಿ ಮಾಡಲು ಅಥವಾ ಚಹ ಮಾಡಿಕೊಳ್ಳಲು ಸ್ಟೌ ಹೊತ್ತಿಸಿದ್ದರಿಂದಾಗಿ ಸಂಭವಿಸಿದ್ದ ಅನಾಹುತವಾಗಿತ್ತು. ಅದರಲ್ಲಿ ಬೆಂಕಿ ಅಷ್ಟಕ್ಕೇ ಸೀಮಿತವಾಗಿದ್ದರೂ ಹೊಗೆ ಮಾತ್ರ ಇಡೀ ಬೋಗಿಗೆ ಹರಡಿತ್ತು.
ಗೋಧ್ರಾದಲ್ಲಿನ S-6 ಕೋಚ್ನಲ್ಲಿ ಆದಂತೆ ಹೆಚ್ಚಿನ ಸಾವುಗಳು ಉಸಿರುಗಟ್ಟುವಿಕೆಯಿಂದ ಸಂಭವಿಸಿದ್ದವು.ರೈಲಿನೊಳಗೆ ದೀರ್ಘ ಪ್ರಯಾಣದಲ್ಲಿ ಸ್ವಂತ ಆಹಾರ ಬೇಯಿಸುವುದು ಅಥವಾ ಬಿಸಿ ಮಾಡಿಕೊಳ್ಳುವುದು ಸಂಪ್ರದಾಯಸ್ಥ ಹಿಂದೂಗಳ ಸಾಮಾನ್ಯ ಅಭ್ಯಾಸವಾಗಿರುವುದರಿಂದ ಅಂಥದೊಂದು ಸಾಧ್ಯತೆ ಕಂಡಿತ್ತು.
ಬ್ಯಾನರ್ಜಿ ಆಯೋಗದ ವರದಿಯನ್ನು ಬಿಜೆಪಿ ತಿರಸ್ಕರಿಸಿತು. ಪಕ್ಷದ ಆಗಿನ ವಕ್ತಾರ ಅರುಣ್ ಜೇಟ್ಲಿ ಆಕ್ಷೇಪಣೆಗಳನ್ನು ಎತ್ತಿದರು. ರೈಲ್ವೆ ಸಚಿವಾಲಯ ಅಂತಹ ತನಿಖೆ ನಡೆಸುವ ಹಕ್ಕು ಹೊಂದಿಲ್ಲ ಎಂದರಲ್ಲದೆ, ಅದು ಆಕಸ್ಮಿಕವೇ ಆಗಿದ್ದಲ್ಲಿ ಪ್ರಯಾಣಿಕರು ಹೊರಗೆ ಜಿಗಿದು ಪಾರಾಗಬಹುದಿತ್ತು ಎಂಬ ವಾದ ಮುಂದೆ ಮಾಡಿದ್ದರು.
ರಾಜ್ಯ ಸರ್ಕಾರ ಗುಜರಾತ್ ಹೈಕೋರ್ಟ್ನಲ್ಲಿ ಬ್ಯಾನರ್ಜಿ ಆಯೋಗದ ವರದಿಯನ್ನು ಪ್ರಶ್ನಿಸಿತು. ಬ್ಯಾನರ್ಜಿ ಸಮಿತಿಯ ರಚನೆಯನ್ನು ಅಸಂವಿಧಾನಿಕ, ಕಾನೂನುಬಾಹಿರ ಮತ್ತು ಅನೂರ್ಜಿತ ಎಂದು ಘೋಷಿಸಿದ ಗುಜರಾತ್ ಹೈ ಕೋರ್ಟ್, ಅದನ್ನು ದುರುದ್ದೇಶದಿಂದ ಕೂಡಿದ ಅಧಿಕಾರದ ಕಸರತ್ತು ಎಂದಿತು. ರಾಜ್ಯ ಸರ್ಕಾರ ಈಗಾಗಲೇ ಶಾ ಆಯೋಗವನ್ನು ನೇಮಿಸಿದಾಗ ಸಮಿತಿ ರಚಿಸಿದ್ದಕ್ಕಾಗಿ ರೈಲ್ವೆ ಸಚಿವಾಲಯವನ್ನು ಟೀಕಿಸಿತು.
ಆ ತೀರ್ಪು ಎಲ್ಲ ರೀತಿಯಿಂದಲೂ ತೀರಾ ಅಸಾಮಾನ್ಯವಾಗಿತ್ತು. 2002ರ ಮೇ 3ರಂದು ಅಹಮದಾಬಾದ್ನಲ್ಲಿರುವ ಗುಜರಾತ್ ಸರ್ಕಾರದ್ದೇ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸಿದ್ಧಪಡಿಸಿದ ವರದಿ, ಪೋಲೀಸರ ಈ ಹಿಂದಿನ ವಿವರಣೆಯನ್ನು ಅಧಿಕೃತವಾಗಿ ತಳ್ಳಿಹಾಕಿತ್ತು. ಮತ್ತು ಕೋಚ್ನೊಳಕ್ಕೆ ಬೆಂಕಿ ಹೊತ್ತಿಕೊಳ್ಳಬಲ್ಲ 60 ಲೀಟರ್ನಷ್ಟು ದ್ರವವನ್ನು ಬಕೆಟ್ನಂಥ ಕಂಟೇನರ್ಗಳಿಂದ ಸುರಿದು ಬೆಂಕಿ ಹಚ್ಚಿದ್ದರಿಂದ ಬೆಂಕಿ ಬೇರೆಡೆಗೆ ವ್ಯಾಪಿಸದೇ ಇತ್ತು ಎಂಬ ತೀರ್ಮಾನ ಕೊಟ್ಟಿತ್ತು.
ಎಫ್ಎಸ್ಎಲ್ ಹಾಗೆ ಪೊಲೀಸರ ವಾದವನ್ನು ಸಾರಾಸಗಟಾಗಿ ತಳ್ಳಿಹಾಕಿದ್ದರ ಹಿಂದೆಯೂ ಒಂದು ಕಾರಣವಿತ್ತು. ನಿವೃತ್ತ ನ್ಯಾಯಮೂರ್ತಿ ವಿ ಆರ್ ಕೃಷ್ಣ ಅಯ್ಯರ್ ನೇತೃತ್ವದ ಕನ್ಸರ್ನ್ಡ್ ಸಿಟಿಝನ್ಸ್ ಟ್ರಿಬ್ಯುನಲ್ ಮೇ ಮೊದಲ ವಾರದಲ್ಲೇ ಸ್ಥಳಕ್ಕೆ ಭೇಟಿ ನೀಡಲಿರುವ ವಿಚಾರ, ಗುಪ್ತದಳದ ಮೂಲಕ ಮೋದಿಗೆ ಗೊತ್ತಾಗಿತ್ತು. ಮುಸ್ಲಿಂರ ವಿರುದ್ಧದ ಪ್ರತೀಕಾರದ ಕಟ್ಟುಕಥೆ ಬಯಲಾಗಲಿದೆ ಎಂಬುದರ ಸುಳಿವು ಸಿಕ್ಕಿತ್ತು.
ವಿಶೇಷ ಅಂದ್ರೆ ಈ 60 ಲೀಟರ್ನಷ್ಟು ದ್ರವವನ್ನು ರೈಲಿನೊಳಗೆ ತರಲಾಯಿತು ಎಂದು ಹೇಳುವಾಗ ಎಫ್ ಎಸ್ ಎಲ್ ತಜ್ಞರು ಖಾಲಿ ಬೋಗಿಯಲ್ಲಿ ಇಂತಹ ದ್ರವ ಎಷ್ಟು ದೂರ ಹೋಗಬಹುದು ಎಂಬ ಆಧಾರದಲ್ಲಿ ಲೆಕ್ಕ ಹಾಕಿದ್ದರು. ಆದರೆ ಅವತ್ತು ತುಂಬಿ ತುಳುಕುತ್ತಿದ್ದ ಆ ಬೋಗಿಯಲ್ಲಿ ಕನಿಷ್ಠ 108 ಜನ ಇದ್ದರು, ಅವರ ಪಾದರಕ್ಷೆಗಳು, ಲಗೇಜ್ ಗಳೂ ಇದ್ದವು.
ವಿಧಿವಿಜ್ಞಾನ ತಜ್ಞರು ಇಂತಹ ಪ್ರಾಥಮಿಕ ತಪ್ಪು ಹೇಗೆ ಮಾಡಿದರು ? ಪ್ರೇಮ್ ಶಂಕರ್ ಝಾ ಪ್ರಕಾರ ಇದಕ್ಕಿರುವ ಏಕೈಕ ವಿವರಣೆ - ಮುಸ್ಲಿಮರ ವಿರುದ್ಧವೇ ಆರೋಪ ತಿರುಗುವಂತೆ ಒಂದು ಕಾರಣ ಕೊಡಲು ಅವರ ಮೇಲೆ ಒತ್ತಡ ಹಾಕಲಾಗಿತ್ತು. ಕೃಷ್ಣ ಅಯ್ಯರ್ ನೇತೃತ್ವದ ನಾಗರಿಕರ ಸತ್ಯಶೋಧನಾ ಸಮಿತಿ ಹೇಳಿದ್ದು ಹೀಗಿತ್ತು:
7-5-2002ರಂದು ನಾವು ಸ್ಥಳ ಪರಿಶೀಲನೆ ಮಾಡಿದಂತೆ, ರೈಲು ನಿಂತ ಸ್ಥಳ ಸುಮಾರು 12ರಿಂದ 15 ಅಡಿ ಎತ್ತರದಲ್ಲಿತ್ತು. ಮೇಲ್ಭಾಗದಲ್ಲಿ, ಟ್ರ್ಯಾಕ್ನ ಎರಡೂ ಬದಿಯಲ್ಲಿ 2,000 ವ್ಯಕ್ತಿಗಳು ಒಟ್ಟುಗೂಡಲು ಸಾಕಷ್ಟು ಸ್ಥಳಾವಕಾಶವಿಲ್ಲ. ಆ ಸ್ಥಳದಲ್ಲಿ ಅನೇಕರು ಜಮಾಯಿಸಿದ್ದರು ಎಂದು ಊಹಿಸಿದರೆ, ಕೋಚ್ S-6ರ ವ್ಯಾಪ್ತಿಗಿಂತ ಹೆಚ್ಚಿನ ಪ್ರದೇಶದಲ್ಲಿ ಜನಸಂದಣಿ ಹರಡಿರಬೇಕಿತ್ತು. ಸರಕಾರದ ವಾದವೇ ನಿಜವಾಗಿದ್ದಲ್ಲಿ ಇತರ ಕೋಚ್ಗಳೂ ಬೆಂಕಿಗೆ ತುತ್ತಾಗಬೇಕಿತ್ತು.
ರೈಲು ನಿಂತಿದ್ದ ಸ್ಥಳದ ಎತ್ತರ ಮತ್ತು ರೈಲಿನ ಎತ್ತರವನ್ನು ನೋಡಿದರೆ, ರೈಲಿಗೆ ಬೆಂಕಿಯ ಚೆಂಡುಗಳನ್ನು ಎಸೆದಿದ್ದಲ್ಲಿ ಕೋಚ್ನ ಹೊರಭಾಗ ಸುಟ್ಟುಹೋಗಬೇಕಿತ್ತು. ಆದರೆ ಕಿಟಕಿಗಳ ಕೆಳಗೆ ಅಂತಹ ಗುರುತುಗಳಿಲ್ಲ ಎಂಬುದನ್ನು ಪತ್ತೆ ಮಾಡಿದ್ದೇವೆ. ಬೆಂಕಿಯು ಕೋಚ್ ನ ಒಳಗೇ ಉಂಟಾದದ್ದು ಎಂಬುದು ಸ್ಪಷ್ಟ ಎಂದು ಸಮಿತಿ ಹೇಳಿತ್ತು. ಆದರೆ, ಗುಜರಾತ್ ಸರ್ಕಾರಕ್ಕೆ ಮುಸ್ಲಿಮರ ವಿರುದ್ದ ಈಗಾಗಲೇ ಮಾಡಲಾದ ಆಪಾದನೆಯನ್ನು ಸಮರ್ಥಿಸುವ ಉತ್ತರ ಬೇಕಿತ್ತು.
ಹಾಗಾಗಿ ಪೊಲೀಸರು ಎಫ್ಎಸ್ಎಲ್ನ ವಿಶ್ಲೇಷಣೆಯ ಆಧಾರದಲ್ಲಿ ಹೊಸ ವಿವರಣೆ ನೀಡಿದರು. ರೈಲು ನಿಂತಾಗ ಕೆಲವು ಮುಸ್ಲಿಮರು ರೈಲಿಗೆ ಹತ್ತಿದರು ಮತ್ತು S-6 ಅನ್ನು ಬಲವಂತವಾಗಿ ಪ್ರವೇಶಿಸಿ 60 ಲೀಟರ್ ಪೆಟ್ರೋಲ್ ಅನ್ನು ಸುರಿದು ಬೆಂಕಿ ಹಚ್ಚಿದರು ಎಂದು ಹೇಳಲಾಯಿತು.ಈ ವಾದದಲ್ಲಿನ ಅಸಂಬದ್ಧತೆಗಳನ್ನು ಕಳೆದ ಎರಡು ದಶಕಗಳಲ್ಲಿ ಹಲವು ಬಾರಿ ಎತ್ತಿ ತೋರಿಸಲಾಗಿದೆ.
ಮೊದಲನೆಯದಾಗಿ, ಬಕೆಟ್ಗಳನ್ನು ಕೈಯಿಂದ ಒಯ್ಯಬೇಕಾಗಿತ್ತು. ಅಲ್ಲದೆ 20 ಲೀಟರ್ಗಳ ಕನಿಷ್ಠ ಮೂರು ಬಕೆಟ್ಗಳನ್ನಾದರೂ ರೈಲಿಗೆ ಸಾಗಿಸಬೇಕಾಗಿತ್ತು. ಆದರೆ ಪೆಟ್ರೋಲ್ನಂಥ ದ್ರವ ವಾಸನೆ ಹರಡುವಾಗ, ಕರಸೇವಕರಿಂದ ತುಂಬಿಹೋಗಿದ್ದ ರೈಲಿನೊಳಗೆ ಹೇಗೆ ತೆಗೆದುಕೊಂಡು ಹೋಗಲು ಸಾಧ್ಯವಿತ್ತು?
ಇಂಥದೊಂದು ಅಸಂಬದ್ಧ ಹೇಳಿಕೆ ದೃಢೀಕರಿಸಬಲ್ಲ ಒಬ್ಬನೇ ಒಬ್ಬ ಪ್ರಯಾಣಿಕನನ್ನಾದರೂ ಪತ್ತೆ ಹಚ್ಚುವುದು ಪೊಲೀಸರಿಗೆ ಸಾಧ್ಯವಾಗಲಿಲ್ಲ.ಅಂತೂ ಮುಸ್ಲಿಂರ ವಿರುದ್ಧ ಆರೋಪವನ್ನೇ ದೃಢಪಡಿಸುವ ಏನಾದರೂ ಒಂದು ಕಥೆ ಕಟ್ಟುವಂತೆ ಸರ್ಕಾರ ಸೂಚಿಸಿತ್ತು. ಅವರು ಅದನ್ನು ಮಾಡಿದ್ದರು, ಅಷ್ಟೆ. ಕರಸೇವಕರನ್ನು ಗೋಧ್ರಾದಲ್ಲಿ ಮುಸ್ಲಿಮರು ಜೀವಂತವಾಗಿ ಸುಟ್ಟುಹಾಕಿದ್ದಾರೆ ಎಂದು ಆರೋಪಿಸಿ ಅಹಮದಾಬಾದ್ನಲ್ಲಿ 2022ರ ಫೆಬ್ರವರಿ 27ರಂದು VHP ಕಾರ್ಯಕರ್ತರ ಗುಂಪು ಸೇರಿತು. ಅದಾದ ಮಾರನೇ ದಿನ ಅವರು ಇನ್ನಷ್ಟು ದ್ವೇಷ ಹರಡಲು ಸುಟ್ಟ ಮತ್ತು ಗುರುತಿಸಲಾಗದ ಶವಗಳನ್ನು ಎತ್ತರದಲ್ಲಿ ಹಿಡಿದು ನಗರದಲ್ಲಿ ಮೆರವಣಿಗೆ ನಡೆಸಿದರು. ಅವರನ್ನು ಯಾರೂ ಅನುಮಾನಿಸಲಿಲ್ಲ ಮತ್ತು ಅವು ನಿಜವಾಗಿಯೂ ಕರಸೇವಕರ ಶವಗಳಾಗಿದ್ದವೆ ಎಂಬ ಪ್ರಶ್ನೆಗಳೂ ಏಳಲಿಲ್ಲ.
ದುರದೃಷ್ಟಕರ ಸಂಗತಿಯೆಂದರೆ, S-6 ಕೋಚ್ನಲ್ಲಿದ್ದ ಪ್ರಯಾಣಿಕರ ಗುರುತುಗಳ ನಿಕಟ ವಿಶ್ಲೇಷಣೆಯಿಂದ ಗೊತ್ತಾಗಿರುವ ಸತ್ಯವೇನೆಂದರೆ, ಲಕ್ನೋ ಮತ್ತು ಮಧ್ಯಂತರ ನಿಲ್ದಾಣಗಳಲ್ಲಿ ರೈಲು ಹತ್ತಿದ ಸಾಮಾನ್ಯ ಪ್ರಯಾಣಿಕರೇ ಸಾವನ್ನಪ್ಪಿದವರಲ್ಲಿ ಹೆಚ್ಚು ಇದ್ದರು.
ಲಕ್ನೋದ ರೈಲ್ವೇ ಬುಕಿಂಗ್ ಚಾರ್ಟ್ ಪ್ರಕಾರ, ಕ್ಯಾರೇಜ್ S-6 ನಲ್ಲಿನ 72 ಬರ್ತ್ಗಳಲ್ಲಿ 43 ಬುಕಿಂಗ್ ಆಗಿತ್ತು. ಬುಕ್ ಮಾಡಿದ ಪ್ರಯಾಣಿಕರಲ್ಲಿ ಅರ್ಧಕ್ಕಿಂತ ಹೆಚ್ಚು ಕುಟುಂಬಗಳು ಒಟ್ಟಿಗೆ ಪ್ರಯಾಣಿಸುತ್ತಿದ್ದವು. ಇನ್ನೂ 23 ಪ್ರಯಾಣಿಕರು ಮಧ್ಯಂತರ ನಿಲ್ದಾಣಗಳಲ್ಲಿ ರೈಲು ಹತ್ತಿದ್ದರು. ಅವರೆಲ್ಲರಿಗೂ ಬರ್ತ್ಗಳಿದ್ದ ಕಾರಣ, ಕೆಲವರು ಗಾಡಿಯ ಎರಡು ತುದಿಗಳಲ್ಲಿರುವ ಬಾಗಿಲುಗಳ ಬಳಿ ಇರುತ್ತಿದ್ದರು ಮತ್ತು ಆದ್ದರಿಂದ ಬೆಂಕಿ ಪ್ರಾರಂಭವಾದಾಗ ತಪ್ಪಿಸಿಕೊಳ್ಳಲು ಅವಕಾಶವಿತ್ತು. ಇಂತಹ ದುರಂತ ನಡೆದರೆ ಮೊದಲು ಸಾಯುವವರು ಅವರಲ್ಲಿ ದುರ್ಬಲರು, ಮಹಿಳೆಯರು ಮತ್ತು ಮಕ್ಕಳು. ಘಟನೆಯ ಮೂರು ದಿನಗಳ ನಂತರ ನಡೆಸಿದ ವಿಧಿವಿಜ್ಞಾನ ಪರೀಕ್ಷೆಯಲ್ಲಿ ಮೃತರಲ್ಲಿ 20 ಪುರುಷರು, 26 ಮಹಿಳೆಯರು ಮತ್ತು 12 ಮಕ್ಕಳು ಎಂಬುದು ದೃಢವಾಗಿತ್ತು.
ಬಲಿಯಾದ 58 ಜನರಲ್ಲಿ 38 ಜನರು ಕರಸೇವಕರು ಎನ್ನಲಾಗಿತ್ತು. ಆದರೆ ಸತ್ತ ಕರಸೇವಕರ ಸಂಖ್ಯೆ ಇನ್ನೂ ಕಡಿಮೆಯಿದ್ದಿರಬಹುದು. ಏಕೆಂದರೆ ನ್ಯಾ. ವಿ.ಆರ್. ಕೃಷ್ಣ ಅಯ್ಯರ್ ಅವರು ಗಮನ ಸೆಳೆದಿರುವಂತೆ ಅವರಲ್ಲಿ ಹೆಚ್ಚಿನವರು ದೈಹಿಕವಾಗಿ ಸದೃಢರಾಗಿದ್ದ ಯುವಕರು ಮತ್ತು ತಪ್ಪಿಸಿಕೊಳ್ಳಬಲ್ಲಂಥವರಾಗಿದ್ದರು. ಅವತ್ತು ಆ ರೈಲಿನಿಂದ ಹೊರಬಂದು ಬಚಾವಾದ 43 ಮಂದಿಯಲ್ಲಿ ಕೇವಲ ಐವರನ್ನು ಮಾತ್ರ ಆಸ್ಪತ್ರೆಗೆ ಸೇರಿಸುವಂತ ಗಾಯಗಳಾಗಿತ್ತು. ಇದನ್ನೆಲ್ಲ ನೋಡಿಕೊಂಡರೆ ಅಂದು ಮೃತಪಟ್ಟವರಲ್ಲಿ 10-12 ಮಂದಿಯಾದರೂ ಕರ ಸೇವಕರು ಇದ್ದಿದ್ದರೊ ಇಲ್ಲವೊ.
ಇದನ್ನೆಲ್ಲ ವಿವರಿಸುವ ಪ್ರೇಮ್ ಶಂಕರ್ ಝಾ ಅವರು, ಕಡೆಯಲ್ಲಿ ಒಂದು ಮಾತು ಸೇರಿಸುತ್ತಾರೆ: 2002ರ ಫೆಬ್ರವರಿ 27ರ ಘಟನೆಗಳನ್ನು ಅವಲೋಕಿಸಿದಾಗ, ಭಾರತದ ಪ್ರಜಾಸತ್ತೆಯ ಪತನ ಅಲ್ಲಿಂದ ಶುರುವಾಯಿತು ಎಂದು ಹೇಳದೇ ಇರಲು ಆಗುತ್ತಿಲ್ಲ. ಗೋಧ್ರಾ ಘಟನೆ ಗುಜರಾತ್ನಲ್ಲಿ ನರೇಂದ್ರ ಮೋದಿಯನ್ನು ಅಧಿಕಾರಕ್ಕೆ ತಂದಿತು ಮತ್ತು ಅವರು ದೇಶದ ಪ್ರಧಾನಿಯಾಗುವ ಹಾದಿ ತೆರೆದುಕೊಂಡಿತು. ಗುಜರಾತಿನಲ್ಲಿ ಮೋದಿ ಸಮುದಾಯಗಳ ನಡುವೆ ಭಯ ಮತ್ತು ಅನುಮಾನಗಳನ್ನು ಬಿತ್ತುವ ಮೂಲಕ ತಮ್ಮ ಪಕ್ಷದ ಅಧಿಕಾರವನ್ನು ಭದ್ರಪಡಿಸಿದರು. ಈಗ ದೇಶಾದ್ಯಂತ ಕೂಡ ಅದನ್ನೇ ಮಾಡುತ್ತಿದ್ದಾರೆ. ಮತ್ತು ಅವರನ್ನು ತಡೆಯುವವರೇ ಯಾರೂ ಇಲ್ಲ.