ಈ ದೇಶದ ಪ್ರಜಾಸತ್ತೆಯ ಕತ್ತು ಹಿಸುಕಿದ್ದು ಹೇಗೆ?
ಪ್ರತಿಪಕ್ಷದ ರಾಜಕಾರಣಿ ತನ್ನ ವಿರುದ್ಧ ಭ್ರಷ್ಟಾಚಾರ ಆರೋಪ ಬಂದೊಡನೆ ಬಿಜೆಪಿ ಸೇರುತ್ತಾನೆ. ಇದ್ದಕ್ಕಿದ್ದಂತೆ ಅವನ ವಿರುದ್ಧದ ಎಲ್ಲ ಆರೋಪಗಳೂ ಇಲ್ಲವಾಗಿಬಿಡುತ್ತವೆ. ಆತನ ವಿರುದ್ಧದ ಎಲ್ಲ ಕೇಸ್ಗಳನ್ನು ಕೈಬಿಡಲಾಗುತ್ತದೆ. ‘ವಾಷಿಂಗ್ ಪೌಡರ್ ಮೋದಿ’ ಎಂದು ಯಾರೋ ಒಂದು ಕವಿತೆಯನ್ನೂ ಬರೆದಿದ್ದರು. ಸುಳ್ಳು ಮತ್ತು ಧೋಖಾ ಏನೇ ಇದ್ದರೂ ಅಡಗಿಸಿಬಿಡುತ್ತದೆ. ಗಂಭೀರ ಆರೋಪಗಳೇ ಇದ್ದರೂ ಕಣ್ಣು ಮಿಟುಕಿಸುವಷ್ಟರಲ್ಲಿ ಇಲ್ಲವಾಗುತ್ತವೆ ಎಂದಿತ್ತು ಆ ಕವಿತೆಯಲ್ಲಿ. ‘ಬಿಜೆಪಿ ವಾಷಿಂಗ್ ಮೆಷಿನ್’ ಎಂದು ಮೀಮ್ಗಳೂ ಬಹಳಷ್ಟು ಹರಿದಾಡಿವೆ.
ಈ ದೇಶದಲ್ಲಿ ಪ್ರಜಾಸತ್ತೆ ಮುಗಿದುಹೋಯಿತೆ?
ಇದು ಬಹಳ ಗಂಭೀರ ಪ್ರಶ್ನೆ.
ನಾವು ನಮಗಿಷ್ಟವಾದ ಯಾವುದೇ ಪಕ್ಷಕ್ಕೆ ಮತ ನೀಡಬಹುದು. ಅತಿ ಹೆಚ್ಚು ಮತ ಪಡೆದವರು ಅಧಿಕಾರಕ್ಕೆ ಬರುತ್ತಾರೆ. ಹಾಗಾಗಿ ಇನ್ನೂ ಈ ದೇಶದಲ್ಲಿ ಪ್ರಜಾಸತ್ತೆ ಇದೆ. ಆದರೆ ಪ್ರಶ್ನೆ ಇದಕ್ಕಿಂತ ಆಳವಾದದ್ದಾಗಿದೆ. ಈಗ ಹೇಳುತ್ತಿರುವ ವಿಚಾರ ತೀರಾ ಆಘಾತಕಾರಿಯಾದದ್ದು.
ಇಲ್ಲಿ ಪ್ರಧಾನಿ ಮೋದಿಯನ್ನು ದೇವರ ಅವತಾರ ಎನ್ನುವವರಿದ್ದಾರೆ. ಅವರು ಸಾಧಾರಣ ಮನುಷ್ಯರಲ್ಲ, ಈ ಪ್ರಧಾನಿ ವಿಷ್ಣುವಿನ ಅವತಾರ ಎನ್ನುವವರಿದ್ದಾರೆ. ನೀವೂ ಅವರಲ್ಲಿ ಒಬ್ಬರಾಗಿರಬಹುದು. ಮೋದಿಯ ಪ್ರತೀ ಹೆಜ್ಜೆಯೂ ಮಾನವತೆಗೆ ನೆರವಾಗುತ್ತಿದೆ ಎಂದುಕೊಳ್ಳುವವರೂ ಆಗಿರಬಹುದು.
ನಿಮ್ಮ ಮನಸ್ಸನ್ನು ಈಗಾಗಲೇ ಮೋದಿ ಆವರಿಸಿಬಿಟ್ಟಿದ್ದರೆ ಕಣ್ತೆರೆದು ಸತ್ಯವನ್ನು ತಿಳಿಯಲು ನಿಮಗೆ ಆಗದೇ ಹೋಗಬಹುದು. ಆದರೆ ನಿಜವಾಗಿಯೂ ದೇಶದ ಬಗ್ಗೆ ಕಳಕಳಿ ಉಳ್ಳವರು ನಾವೀಗ ಹೇಳುತ್ತಿರುವುದನ್ನು ಗಮನಿಸಲೇಬೇಕು.
ಇದು ಒಂದು ಘಟನೆಯ ಪ್ರಶ್ನೆಯಲ್ಲ. ಆದರೆ ಅಂಥ ಹಲವು ಘಟನೆಗಳು ಒಂದರ ಬೆನ್ನಿಗೊಂದು ನಡೆದಿವೆ. ಕಳೆದ ಕೆಲವು ತಿಂಗಳುಗಳಿಂದ, ಕಳೆದ ಕೆಲವು ವರ್ಷಗಳಿಂದ ನಡೆದಿವೆ. ಆ ಎಲ್ಲ ಘಟನೆಗಳೂ ಒಂದು ಅಂಶವನ್ನು ಹೇಳುತ್ತವೆ. ಏನೆಂದರೆ, ಒಂದು ರಾಷ್ಟ್ರ ಒಂದು ಪಕ್ಷ ಎಂಬುದರ ಕಡೆಗೆ ಈ ದೇಶ ಹೊರಟಿದೆ.
ಮಾಧ್ಯಮಗಳಲ್ಲಿ ವಿಪಕ್ಷಗಳ ದನಿಯೇ ಇಲ್ಲದಂತೆ ಮಾಡುವುದು, ಸಂಸದರು, ಶಾಸಕರ ಖರೀದಿ, ಹೊಸ ಕಾನೂನುಗಳನ್ನು ಮಾಡುವ ಮೂಲಕ ಚುನಾಯಿತ ಸರಕಾರದಿಂದಲೇ ಅಧಿಕಾರವನ್ನು ಕಿತ್ತುಕೊಳ್ಳುವುದು, ತನಿಖಾ ಏಜನ್ಸಿಗಳನ್ನು ಅಸ್ತ್ರವಾಗಿಸುವುದು, ಈ.ಡಿ., ಸಿಬಿಐ ಮೂಲಕ ವಿಪಕ್ಷ ನಾಯಕರ ಮೇಲೆ ಒತ್ತಡ ತರುವುದು, ಅವರನ್ನು ಜೈಲಿಗೆ ಹಾಕುವುದು, ರಾಜ್ಯಪಾಲರುಗಳ ಮೂಲಕ ರಾಜ್ಯ ಸರಕಾರಗಳ ಕೆಲಸದಲ್ಲಿ ಮೂಗು ತೂರಿಸುವುದು, ರಾಜ್ಯ ಸರಕಾರಗಳಿಗೆ ಕೊಡಬೇಕಾದ ಆರ್ಥಿಕ ನೆರವನ್ನು ತಡೆಹಿಡಿಯುವುದು, ನಾಗರಿಕರ ಪ್ರತಿಭಟನೆಯ ಹಕ್ಕನ್ನು ಕಸಿಯುವುದು, ಪ್ರತಿಭಟನೆ ಮಾಡಿದರೆ ಅವರ ಮೇಲೆ ಅಶ್ರುವಾಯು, ರಬ್ಬರ್ ಬುಲೆಟ್ಗಳ ದಾಳಿ ಮಾಡುವುದು, ತಮಗೆ ಬರುವ ಹಣದ ಮೂಲ ರಹಸ್ಯವಾಗಿಡಲು ಚುನಾವಣಾ ಬಾಂಡ್ ಬಳಸುವುದು, ವಿಪಕ್ಷದವರು ಚುನಾವಣೆ ಗೆಲ್ಲುವುದು ಸಾಧ್ಯವಿದ್ದರೂ ಚುನಾವಣಾ ಅಕ್ರಮದ ಮೂಲಕ ತಾವೇ ಗೆಲ್ಲುವುದು.
ಪ್ರಜಾಸತ್ತೆಯ ಬಗ್ಗೆ ಹೇಳುವುದಕ್ಕೆ ಮೊದಲು ಪ್ರಜಾತಂತ್ರವೆಂದರೆ ಏನು ಎಂಬುದನ್ನು ತಿಳಿಯಬೇಕು.
ಬಹಳಷ್ಟು ಮಂದಿ ಇದನ್ನು ತಪ್ಪಾಗಿ ಭಾವಿಸಿರುವುದೇ ಹೆಚ್ಚು.
ದೇಶದಲ್ಲಿ ನಿಯಮಿತವಾಗಿ ಚುನಾವಣೆಗಳು ನಡೆದರೆ, ಮತ ಚಲಾಯಿಸಿದರೆ ದೇಶದಲ್ಲಿ ಪ್ರಜಾತಂತ್ರ ಇದೆ ಎಂದು ಕೆಲವರು ಭಾವಿಸುತ್ತಾರೆ. ಆದರೆ ಅಂಥವರಿಗೆ ಗೊತ್ತಿರಬೇಕು, ಚುನಾವಣೆಗಳು ಉತ್ತರ ಕೊರಿಯಾದಲ್ಲೂ ನಡೆಯುತ್ತವೆ. ಆ ಚುನಾವಣೆಗಳಲ್ಲಿ ನೂರಕ್ಕೆ ನೂರರಷ್ಟು ಮತದಾನವೂ ಆಗುತ್ತದೆ. ಆದರೆ ಒಂದೇ ವ್ಯತ್ಯಾಸವೆಂದರೆ, ಸರಕಾರ ಆಯ್ಕೆ ಮಾಡಿದ ಅಧಿಕೃತ ಅಭ್ಯರ್ಥಿಗೆ ನೀವು ಮತ ಹಾಕದೆ ಹೋದರೆ ನಿಮ್ಮನ್ನು ರಾಷ್ಟ್ರವಿರೋಧಿ ಎಂದು ಪರಿಗಣಿಸಲಾಗುತ್ತದೆ. ಡೆಮಾಕ್ರಸಿ ಎಂಬ ಪದವನ್ನಷ್ಟೇ ತೆಗೆದುಕೊಂಡರೆ, ಉತ್ತರ ಕೊರಿಯಾದ ಅಧಿಕೃತ ಹೆಸರಿನಲ್ಲಿ ಆ ಪದವಿದೆ. DPRK ಅಂದರೆ, ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ.ಆದರೆ ಸತ್ಯವೇನು? ಅದು ಸಂಪೂರ್ಣ ಸರ್ವಾಧಿಕಾರದ ದೇಶ.
ಹಾಗೆಯೇ ರಶ್ಯ ಕೂಡ ಸರ್ವಾಧಿಕಾರ ದೇಶ. ಆದರೆ ಅಲ್ಲಿಯೂ ಚುನಾವಣೆಗಳು ನಡೆಯುತ್ತವೆ. ಒಂದೇ ವ್ಯತ್ಯಾಸವೆಂದರೆ, ಪುಟಿನ್ ವಿರುದ್ಧ ಯಾರೇ ಸ್ಪರ್ಧಿಸಿದರೂ ಅನರ್ಹಗೊಳ್ಳುತ್ತಾರೆ ಅಥವಾ ದೇಶಭ್ರಷ್ಟರಾಗುತ್ತಾರೆ ಅಥವಾ ನಿಗೂಢವಾಗಿ ಹತ್ಯೆಯಾಗುತ್ತಾರೆ.
ಇದರಿಂದ ಒಂದು ಅಂಶವಂತೂ ಸ್ಪಷ್ಟವಾಗುತ್ತದೆ. ಚುನಾವಣೆಗಳು ನಡೆಯುತ್ತವೆ ಎಂದ ಮಾತ್ರಕ್ಕೆ ಆ ದೇಶ ಪ್ರಜಾಸತ್ತಾತ್ಮಕ ಎನ್ನಲಾಗದು. ಚುನಾವಣೆಗಳು ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕು. ಮುಕ್ತ ಎಂದರೆ ಜನರು ತಮಗೆ ಯಾರು ಬೇಕೋ ಅವರಿಗೆ ಮತ ಹಾಕುವ ಸ್ವಾತಂತ್ರ್ಯ. ನ್ಯಾಯಸಮ್ಮತವೆಂದರೆ ಬೇರೆ ಬೇರೆ ಪಕ್ಷಗಳು, ಬೇರೆ ಬೇರೆ ಅಭ್ಯರ್ಥಿಗಳು ಗೆಲ್ಲಲು ಅವಕಾಶವಿರುವುದು.
ಈಚೆಗೆ ಚಂಡಿಗಡ ಮೇಯರ್ ಚುನಾವಣೆ ನಡೆಯಿತು. ಒಟ್ಟು 35 ಮತಗಳಲ್ಲಿ ಕಾಂಗ್ರೆಸ್ ಎಎಪಿ ಮೈತ್ರಿಗೆ 20 ಮತಗಳಿದ್ದವು. ಮೈತ್ರಿ ಗೆಲುವು ನಿಶ್ಚಿತವಾಗಿತ್ತು. ಆದರೆ ಚುನಾವಣಾಧಿಕಾರಿ ಮಾಡಿದ್ದೇನು? ಮೈತ್ರಿ ಪಕ್ಷಗಳ 8 ಮತಪತ್ರಗಳನ್ನು ಆತ ಅಸಿಂಧು ಎಂದು ಘೋಷಿಸಿದ. ಅದಕ್ಕೂ ಮೊದಲು ತಾನೇ ಅವುಗಳ ಮೇಲೆ ಗುರುತು ಹಾಕಿದ್ದ. ಸಿಸಿಟಿವಿ ಕ್ಯಾಮರಾದ ನದರಿನಡಿಯಲ್ಲಿಯೇ ಅದೆಲ್ಲ ನಡೆದಿತ್ತು. ಚುನಾವಣಾ ಅಕ್ರಮ ಬಯಲಾಗಿತ್ತು. ಇಷ್ಟು ರಾಜಾರೋಷವಾಗಿ ಚುನಾವಣಾ ಅಕ್ರಮ ದೇಶದಲ್ಲಿ ಹಿಂದೆಂದೂ ಆಗಿರಲಿಲ್ಲ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅದನ್ನು ಪ್ರಜಾತಂತ್ರದ ಹತ್ಯೆ ಎಂದರು.
ಆದರೆ ಪ್ರಶ್ನೆ, ಅಕಸ್ಮಾತ್ ಅಲ್ಲಿ ಸಿಸಿಟಿವಿ ಕ್ಯಾಮರಾ ಇಲ್ಲದೆ ಹೋಗಿದ್ದರೆ ಅಥವಾ ಮತಪತ್ರಗಳು ಇಲ್ಲದೆ ಇದ್ದಲ್ಲಿ ಏನಾಗಿರುತ್ತಿತ್ತು? ಆಗ ಆ ಅಕ್ರಮ ಬಯಲಾಗುತ್ತಿತ್ತೆ? ಇದು ಒಂದು ಉದಾಹರಣೆ ಮಾತ್ರ.
ಹಿಂದೆ 2021ರಲ್ಲಿ ಅಸ್ಸಾಮಿನಲ್ಲಿ ಬಿಜೆಪಿ ಅಭ್ಯರ್ಥಿಯ ಕಾರಿನಲ್ಲಿ ಇವಿಎಂ ಪತ್ತೆಯಾಗಿತ್ತು. ಆನಂತರ ಅಲ್ಲಿ ಮರುಚುನಾವಣೆ ನಡೆಯಿತು.
ಅಷ್ಟು ಹಳೆಯ ವಿಚಾರ ಬಿಟ್ಟುಬಿಡಿ. ಮೊನ್ನೆ ಮೊನ್ನೆ ಇದೇ ತಿಂಗಳಲ್ಲಿ ಪುಣೆಯಲ್ಲಿನ ಸಸ್ವಾಡ್ ತಹಶೀಲ್ದಾರ್ ಕಚೇರಿಗೆ ಮೂವರು ಅಪರಿಚಿತರು ಹೋದರು. ಇವಿಎಂನ ಕಂಟ್ರೋಲ್ ಯೂನಿಟ್ ಕದಿಯುವುದು ಅವರ ಉದ್ದೇಶವಾಗಿತ್ತು.
ಹಾಗಾದರೆ ನಮ್ಮಲ್ಲಿ ಚುನಾವಣೆಗಳು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಯುತ್ತಿವೆಯೇ? ಹಾಗೆ ನಡೆಯುವಂತೆ ನೋಡಿಕೊಳ್ಳುವುದು ಚುನಾವಣಾ ಆಯೋಗದ ಹೊಣೆ. ಆದರೆ ಅದು ಪಕ್ಷಪಾತಿ ಎಂಬ ಆರೋಪವಿದೆ. ಇದು ಹಿಂದಿನಿಂದಲೂ ಇರುವ ಆರೋಪ.
ಮೊದಲು ಹಾಗೆ ಆರೋಪಿಸಿದ್ದು ನರೇಂದ್ರ ಮೋದಿಯೇ. 2014ರ ಚುನಾವಣೆಗೆ ಮೊದಲು ಚುನಾವಣಾ ಆಯೋಗದ ವಿರುದ್ಧ ಮೋದಿ ಆ ಆರೋಪ ಮಾಡಿದ್ದರು. ಅಷ್ಟಾದರೂ ಚುನಾವಣೆಯಲ್ಲಿ ಅವರೇ ಗೆದ್ದರು.
ಆದರೆ ಕಳೆದ 10 ವರ್ಷಗಳಲ್ಲಿ ಚುನಾವಣಾ ಆಯೋಗ ಎಂಥ ಪಕ್ಷಪಾತಿಯೆಂಬ ಬಗ್ಗೆ ಸಿಕ್ಕಾಪಟ್ಟೆ ಆರೋಪಗಳು ಬಂದಿವೆ. ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರಂತೂ ಚುನಾವಣಾ ಆಯೋಗವನ್ನು ಬಿಜೆಪಿಯ ಎಕ್ಸ್ಟೆನ್ಷನ್ ಎಂದಿದ್ದಾರೆ. ಚುನಾವಣಾ ಆಯೋಗ ಇಷ್ಟೊಂದು ಪಕ್ಷಪಾತಿಯಾದದ್ದನ್ನು ಹಿಂದೆಂದೂ ಕಂಡಿರಲಿಲ್ಲ ಎನ್ನುತ್ತಾರೆ ಅವರು.
ಅದು ಬರೀ ನಿಯಮಗಳನ್ನು ಮುರಿಯುತ್ತಲೇ ಬಂದಿದೆ ಮತ್ತದು ಚುನಾವಣೆ ದಿನಾಂಕಗಳನ್ನು ಘೋಷಿಸುವುದು ಕೂಡ ಬಿಜೆಪಿಗೇ ಯಾವಾಗಲೂ ಲಾಭವಾಗುವ ರೀತಿಯಲ್ಲಿಯೇ.
ಚುನಾವಣಾ ಆಯೋಗದ ಸ್ಪಷ್ಟ ಸೂಚನೆ ಇರುವ ಪ್ರಕಾರ ಚುನಾವಣೆ ಪ್ರಚಾರದ ವೇಳೆ ಭಾರತೀಯ ಸೇನೆಯ ಉಲ್ಲೇಖ ಮಾಡಕೂಡದು. ಆದರೆ 2019ರ ಚುನಾವಣೆಗೆ ಮೊದಲು ಮೋದಿ ಸ್ವಲ್ಪವೂ ಲಜ್ಜೆಯಿಲ್ಲದೆ, ಪುಲ್ವಾಮಾ ಹುತಾತ್ಮ ಸೈನಿಕರ ಹೆಸರಲ್ಲಿ ಮತ ಹಾಕುವಂತೆ ಜನತೆಗೆ ಕರೆಕೊಟ್ಟರು.
ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಭಾರತೀಯ ಸೇನೆಯನ್ನು ಮೋದಿ ಸೇನೆ ಎನ್ನುವ ಮಟ್ಟಕ್ಕೆ ಹೋಗಿದ್ದರು. ಇದರ ಬಗ್ಗೆ ಚುನಾವಣಾ ಆಯೋಗಕ್ಕೆ ದೂರಿದರೆ, 21 ದಿನಗಳಾದರೂ ಕ್ರಮ ತೆಗೆದುಕೊಂಡಿರಲಿಲ್ಲ. ಅದಾದ ಬಳಿಕ ಕ್ಲೀನ್ ಚಿಟ್ ಕೊಟ್ಟಿತು. ನಿಯಮಗಳು ಸಾರ್ವಜನಿಕವಾಗಿಯೇ ಉಲ್ಲಂಘನೆಯಾದಾಗಲೂ ಕ್ಲೀನ್ ಚಿಟ್. ಪ್ರಧಾನಿ ಮೋದಿಗೆ ಏನಿಲ್ಲವೆಂದರೂ ಅಂಥ ನಾಲ್ಕು ಪ್ರಕರಣಗಳಲ್ಲಿ ಕ್ಲೀನ್ ಚಿಟ್ ಕೊಡಲಾಗಿತ್ತು.
ರಾಹುಲ್ ಗಾಂಧಿಯ ಕ್ಷೇತ್ರವನ್ನು ಅಮಿತ್ ಶಾ ಪಾಕಿಸ್ತಾನಕ್ಕೆ ಹೋಲಿಸಿದ್ದರು. ಅದು ಕೂಡ ನಿಯಮಕ್ಕೆ ವಿರುದ್ಧವಾಗಿತ್ತು. ಆದರೆ ಅದಕ್ಕೂ ಚುನಾವಣಾ ಆಯೋಗ ಕ್ಲೀನ್ ಚಿಟ್ ಕೊಟ್ಟಿತು. ಮೋದಿ ಮತ್ತು ಶಾ ಕ್ಲೀನ್ ಚಿಟ್ ಪಡೆದ ಅಂಥ 7 ಪ್ರಕರಣಗಳಿದ್ದವು.
ಆ ವೇಳೆ ಎನ್ಡಿಟಿವಿ, ಮೂವರು ಚುನಾವಣಾ ಆಯುಕ್ತರಲ್ಲಿ ಒಬ್ಬರು 7 ಪ್ರಕರಣಗಳಲ್ಲಿ 5ರ ಬಗ್ಗೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರ ಬಗ್ಗೆ ವರದಿ ಮಾಡಿತ್ತು. ಅಂದರೆ ಕ್ಲೀನ್ಚಿಟ್ ಕೊಡುವ ಪ್ರಕರಣಗಳು ಅವಲ್ಲ ಎಂದು ಭಾವಿಸುವ ಒಬ್ಬ ಆಯುಕ್ತರು ಅಲ್ಲಿದ್ದರು.
ಆ ಆಯುಕ್ತರ ಹೆಸರು ಅಶೋಕ್ ಲವಾಸಾ ಎಂಬುದು ಆನಂತರ ಗೊತ್ತಾಗಿತ್ತು. ಅದಾದ ಮೇಲೆ, ಅವರ ಪತ್ನಿ, ಪುತ್ರ, ಪುತ್ರಿ, ಸಹೋದರಿ ಎಲ್ಲರಿಗೂ ಸರಕಾರದ ಏಜನ್ಸಿಗಳಿಂದ ನೊಟೀಸ್ ಬಂತು. ಚುನಾವಣೆಗಳ ಕುರಿತ ಸಿಟಿಜನ್ಸ್ ಕಮಿಷನ್ ತನ್ನ ವರದಿಯಲ್ಲಿ, ಅಶೋಕ್ ಲವಾಸಾ ಅವರನ್ನು ಹುದ್ದೆಯಿಂದ ಸದ್ದಿಲ್ಲದೆ ತೆಗೆದದ್ದರ ಬಗ್ಗೆ ಹೇಳಿತ್ತು.
ಹಾಗಾದರೆ ಇದು ಪ್ರಜಾತಂತ್ರವೆ, ಸರ್ವಾಧಿಕಾರವೆ? ಪ್ರಜಾತಂತ್ರದಲ್ಲಿ ಅಧಿಕಾರ ವಿಕೇಂದ್ರೀಕರಣ, ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆ ಇರುತ್ತದೆ.
ಚುನಾವಣಾ ಆಯೋಗದ ಸ್ವಾಯತ್ತತೆಯನ್ನು ಬಲಪಡಿಸಬೇಕೆಂಬ ಆದೇಶವನ್ನು ಸುಪ್ರೀಂ ಕೋರ್ಟ್ ಕೊಟ್ಟಿತ್ತು. ಮುಖ್ಯ ಚುನಾವಣಾ ಆಯುಕ್ತ ಮತ್ತಿಬ್ಬರು ಆಯುಕ್ತರ ನೇಮಕಕ್ಕೆ ಪ್ರಧಾನಿ, ವಿಪಕ್ಷ ನಾಯಕ ಮತ್ತು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಈ ಮೂವರ ಸಮಿತಿ ಇರಬೇಕೆಂದು ಅದು ಹೇಳಿತ್ತು. ಅಂಥ ಸಮಿತಿಯಿಂದ ನೇಮಕಗೊಂಡ ಚುನಾವಣಾ ಆಯುಕ್ತರು ನಿಜವಾದ ಅರ್ಥದಲ್ಲಿ ಸ್ವತಂತ್ರರಾಗಿರುವುದು ಸಾಧ್ಯವಿತ್ತು. ಯಾರ ವಿಚಾರದಲ್ಲಿಯೂ ಪಕ್ಷಪಾತಿಯಾಗುವುದಕ್ಕೆ ಅವಕಾಶವಿರುತ್ತಿರಲಿಲ್ಲ.
ಆದರೆ ಕೆಲ ತಿಂಗಳುಗಳ ಹಿಂದೆ ಸರಕಾರ ಹೊಸ ಕಾನೂನು ತಂದಿತು. ಸಮಿತಿಯಿಂದ ಮುಖ್ಯ ನ್ಯಾಯಮೂರ್ತಿಯನ್ನು ತೆಗೆದು, ಕೇಂದ್ರ ಮಂತ್ರಿಯೊಬ್ಬರಿಗೆ ಅವಕಾಶ ಮಾಡಿತು. ಹಾಗಾಗಿ ಚುನಾವಣಾ ಆಯುಕ್ತರನ್ನು ನೇಮಿಸುವ ಮೂವರು ಸದಸ್ಯರ ಸಮಿತಿಯಲ್ಲಿ ಇಬ್ಬರು ಸರಕಾರದ ಕಡೆಯವರೇ ಆದರು. ಬಿಜೆಪಿಯ ಉದ್ದೇಶ ಸ್ಪಷ್ಟವಿತ್ತು. ಇಲ್ಲದೆ ಹೋಗಿದ್ದರೆ ಅಂಥ ಕಾನೂನನ್ನು ಅದು ಏಕೆ ಮಾಡುತ್ತಿತ್ತು? ಯಾಕೆ ಅದು ಚುನಾವಣಾ ಆಯುಕ್ತರ ನೇಮಕದ ಮೇಲೆ ಹಿಡಿತ ಹೊಂದಲು ಬಯಸುತ್ತದೆ?
ಇದನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಯಿತು. ಆದರೆ ಸುಪ್ರೀಂ ಕೋರ್ಟ್ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ.
ಇವತ್ತಿಗೂ ಚುನಾವಣಾ ಆಯೋಗ ಎಂಎಲ್ಎ ಮತ್ತು ಎಂಪಿ ಚುನಾವಣೆಗೆ ಮಾಡಬೇಕಾದ ವೆಚ್ಚದ ಬಗ್ಗೆ ಮಿತಿಯನ್ನು ಹೇರಿದೆ.
ಎಂಪಿ ಚುನಾವಣೆಯಲ್ಲಿ 95 ಲಕ್ಷ ರೂ. ಮಿತಿ ಇದೆ.
ಬಿಜೆಪಿ 437 ಸೀಟುಗಳಿಗಾಗಿ ಸ್ಪರ್ಧಿಸಿತ್ತು. ಪಕ್ಷದ ಒಟ್ಟು ವೆಚ್ಚ ರೂ. 415 ಕೋಟಿಗಿಂತ ಹೆಚ್ಚಾಗಬಾರದಿತ್ತು. ಆದರೆ ಬಿಜೆಪಿ ಮಾಡಿದ ವೆಚ್ಚ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿಯೇ ಉಲ್ಲೇಖವಾಗಿರುವ ಹಾಗೆ 1,264 ಕೋಟಿ ರೂ. ಹಾಗಾದರೆ ಇದಕ್ಕೆ ಚುನಾವಣಾ ಆಯೋಗ ಹೇಗೆ ಅವಕಾಶ ಕೊಟ್ಟಿತು?
ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ಲೆಕ್ಕಾಚಾರದ ಪ್ರಕಾರ ಬಿಜೆಪಿ 2019 ರ ಲೋಕಸಭಾ ಚುನಾವಣೆಯಲ್ಲಿ 27 ಸಾವಿರ ಕೋಟಿ ರೂ. ಖರ್ಚು ಮಾಡಿತ್ತು. ಅಂದರೆ ಒಟ್ಟು ಚುನಾವಣಾ ವೆಚ್ಚದ ಶೇ.45ರಷ್ಟು.
ಈಗಿನ ಅಂಕಿಅಂಶಗಳ ಪ್ರಕಾರ, 16 ಸಾವಿರ ಕೋಟಿ ರೂ. ಮೊತ್ತದ ಚುನಾವಣಾ ಬಾಂಡ್ಗಳ ಮಾರಾಟವಾಗಿದೆ. ಇದರಲ್ಲಿ 10 ಸಾವಿರ ಕೋಟಿ ಬಿಜೆಪಿಗೇ ಹೋಗಿದೆ. ಈ ಎಲ್ಲ ಮೊತ್ತಗಳು ಚುನಾವಣಾ ಆಯೋಗ ಹಾಕಿದ ಎಲ್ಲ ಮಿತಿಯನ್ನು ದಾಟುತ್ತವೆ.
ಬಿಜೆಪಿ ನಾಯಕಿ ಉಮಾಭಾರತಿ ಒಮ್ಮೆ ಹೇಳಿದ್ದರು ‘‘ಚುನಾವಣೆ ಎಂದರೆ ಕೆಟ್ಟದ್ದು ಮತ್ತು ಅತಿ ಕೆಟ್ಟದ್ದರ ನಡುವಿನ ಆಯ್ಕೆ’’ ಎಂದು. ಅದು ನಿಜ.
ಒಬ್ಬ ಸಾಮಾಜಿಕ ಹೋರಾಟಗಾರ ಜನಸೇವೆಗೆ ಬದುಕು ಮುಡಿಪಾಗಿಟ್ಟರೆ ಚುನಾವಣೆಯಲ್ಲಿ ಸ್ಪರ್ಧಿಸಲು 90 ಲಕ್ಷ ರೂ. ಹೇಗೆ ತರಲು ಸಾಧ್ಯ?
ಚುನಾವಣೆ ವಿಚಾರಕ್ಕೇ ಈ ಅಕ್ರಮ ಮುಗಿಯುವುದಿಲ್ಲ.
ಒಂದು ವೇಳೆ ವಿರೋಧ ಪಕ್ಷ ಗೆದ್ದು ಸರಕಾರ ರಚಿಸಿದರೆ ತಕ್ಷಣ ಅದನ್ನು ಒಡೆಯುವ ಕೆಲಸ ಆಗುತ್ತದೆ. ಕುದುರೆ ವ್ಯಾಪಾರದ ಬಗ್ಗೆ ಬೇಕಾದಷ್ಟು ಆರೋಪಗಳು ಬಿಜೆಪಿ ವಿರುದ್ಧ ಇವೆ. ಊಹಿಸಲಾಗದಷ್ಟು ದೊಡ್ಡ ಮೊತ್ತದ ಹಣ ಕೊಟ್ಟು ಶಾಸಕರನ್ನು ಬಿಜೆಪಿ ಖರೀದಿಸಿದ ಆರೋಪಗಳಿವೆ.
ಕುದುರೆ ವ್ಯಾಪಾರದ ಆರೋಪಗಳು ನಿಜವೆ? ಅಂಥ ಆರೋಪಗಳ ತನಿಖೆ ಮಾಡುವುದು ತನಿಖಾ ಏಜನ್ಸಿಗಳ ಕೆಲಸ. ಆದರೆ ಅವೆಲ್ಲವೂ ಒಂದೇ ಒಂದು ರಾಜಕೀಯ ಪಕ್ಷದ ತಾಳಕ್ಕೆ ಕುಣಿಯುತ್ತಿವೆ. ಹಾಗಿರುವಾಗ ಈ ಆರೋಪಗಳ ಬಗ್ಗೆ ತನಿಖೆ ಮಾಡುವವವರು ಯಾರು?
ಹಾಗೆ ಹಣ ಕೊಟ್ಟು ಶಾಸಕರನ್ನು ಖರೀದಿಸಿದವರು ಜನರ ದನಿಯನ್ನು ದಮನಿಸುತ್ತಾರೆ. ಪ್ರಜಾಸತ್ತೆಯ ಕತ್ತು ಹಿಸುಕುತ್ತಾರೆ. ಕುದುರೆ ವ್ಯಾಪಾರ ಮತ್ತು ಹಣದ ಆಮಿಷ ಒಡ್ಡುವುದು ಒಂದು ದಾರಿ ಅಷ್ಟೆ. ಹಣದ ಆಮಿಷಕ್ಕೆ ಶಾಸಕ ಒಳಗಾಗದಿದ್ದರೆ ಆಗ ಅವನ ವಿರುದ್ಧ ಕೇಂದ್ರ ತನಿಖಾ ಏಜನ್ಸಿಗಳನ್ನು ಬಿಡಲಾಗುತ್ತದೆ. ಐಟಿ, ಈ.ಡಿ.ಯಂಥ ಏಜನ್ಸಿಗಳನ್ನು ಅಸ್ತ್ರವಾಗಿ ಬಳಸಲಾಗುತ್ತದೆ.
ಹೇಗೆ ಸರಕಾರ ಸಿಬಿಐ, ಈ.ಡಿ.ಯನ್ನು ವಿಪಕ್ಷ ನಾಯಕರ ವಿರುದ್ದ ಬಳಸುತ್ತಿದೆ ಎಂಬುದರ ಬಗ್ಗೆ ಕಳೆದ ವರ್ಷ 14 ರಾಜಕೀಯ ಪಕ್ಷಗಳು ಸುಪ್ರೀಂ ಕೋರ್ಟ್ಗೆ ದೂರು ಕೊಟ್ಟವು. ರಾಜಕೀಯ ನಾಯಕರ ವಿರುದ್ಧ 3,000ಕ್ಕೂ ಹೆಚ್ಚು ರೇಡ್ ಮಾಡಿರುವುದಾಗಿ ಅವು ಹೇಳುತ್ತವೆ.
2014ಕ್ಕೆ ಹೋಲಿಸಿದರೆ, ರಾಜಕಾರಣಿಗಳ ವಿರುದ್ಧದ ಈ.ಡಿ. ಪ್ರಕರಣಗಳು ನಾಲ್ಕು ಪಟ್ಟು ಹೆಚ್ಚಿವೆ. ಅವುಗಳಲ್ಲಿ ಶೇ.95ರಷ್ಟು ಪ್ರಕರಣಗಳು ಪ್ರತಿಪಕ್ಷಗಳ ವಿರುದ್ಧವೇ ಇವೆ. ಶಿಕ್ಷೆಗೊಳಗಾದವರ ಪ್ರಮಾಣ ಹೆಚ್ಚು ಎಂದು ಈ.ಡಿ. ಹೇಳುತ್ತದೆ. ಶೇ.96ರಷ್ಟು ಎಂಬುದು ಅದು ಕೊಡುವ ಲೆಕ್ಕ. 25 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದೆ. 24 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ.
ಆದರೆ ವಾಸ್ತವ ಬೇರೆಯೇ ಇದೆ. 2005ರಿಂದ ಇಲ್ಲಿಯವರೆಗೆ ಈ.ಡಿ. 5,900ಕ್ಕೂ ಹೆಚ್ಚು ಕೇಸ್ಗಳನ್ನು ದಾಖಲಿಸಿದೆ. ವಿಚಾರಣೆ ನಡೆದಿರುವುದು 25ರಲ್ಲಿ ಮಾತ್ರ. ಶಿಕ್ಷೆಯಾಗಿರುವುದು 24ರಲ್ಲಿ ಮಾತ್ರ. ಅಂದರೆ ಶೇ.0.5 ಪ್ರಕರಣಗಳು ಮಾತ್ರ.
ಪ್ರತಿಪಕ್ಷದ ರಾಜಕಾರಣಿ ತನ್ನ ವಿರುದ್ಧ ಭ್ರಷ್ಟಾಚಾರ ಆರೋಪ ಬಂದೊಡನೆ ಬಿಜೆಪಿ ಸೇರುತ್ತಾನೆ. ಇದ್ದಕ್ಕಿದ್ದಂತೆ ಅವನ ವಿರುದ್ಧದ ಎಲ್ಲ ಆರೋಪಗಳೂ ಇಲ್ಲವಾಗಿಬಿಡುತ್ತವೆ. ಆತನ ವಿರುದ್ಧದ ಎಲ್ಲ ಕೇಸ್ಗಳನ್ನು ಕೈಬಿಡಲಾಗುತ್ತದೆ.‘ವಾಷಿಂಗ್ ಪೌಡರ್ ಮೋದಿ’ ಎಂದು ಯಾರೋ ಒಂದು ಕವಿತೆಯನ್ನೂ ಬರೆದಿದ್ದರು. ಸುಳ್ಳು ಮತ್ತು ಧೋಖಾ ಏನೇ ಇದ್ದರೂ ಅಡಗಿಸಿಬಿಡುತ್ತದೆ. ಗಂಭೀರ ಆರೋಪಗಳೇ ಇದ್ದರೂ ಕಣ್ಣು ಮಿಟುಕಿಸುವಷ್ಟರಲ್ಲಿ ಇಲ್ಲವಾಗುತ್ತವೆ ಎಂದಿತ್ತು ಆ ಕವಿತೆಯಲ್ಲಿ. ‘ಬಿಜೆಪಿ ವಾಷಿಂಗ್ ಮೆಷಿನ್’ ಎಂದು ಮೀಮ್ಗಳೂ ಬಹಳಷ್ಟು ಹರಿದಾಡಿವೆ.
ಹಿಮಂತ ಬಿಸ್ವಾ ಶರ್ಮಾ ಕಾಂಗ್ರೆಸ್ನಲ್ಲಿದ್ದಾಗ ಶಾರದಾ ಚಿಟ್ ಫಂಡ್ ಹಗರಣದ ಆರೋಪ ಬಂದಿತ್ತು. 2014ರ ನವೆಂಬರ್ನಲ್ಲಿ ಸಿಬಿಐ ಅವರನ್ನು ವಿಚಾರಣೆಗೆ ಕರೆದಿತ್ತು. 2015ರಲ್ಲಿ ಅವರು ಬಿಜೆಪಿ ಸೇರಿದಾಗಿನಿಂದ ಇನ್ನೂ 7 ಭ್ರಷ್ಟಾಚಾರ ಪ್ರಕರಣಗಳು ಅವರ ವಿರುದ್ಧ ದಾಖಲಾಗಿವೆ. ಭೂ ಹಗರಣದ ಬಗ್ಗೆ ಒಂದು ಆರೋಪವಿದೆ. ರೇಷ್ಮೆ ಉದ್ಯಮದಲ್ಲಿ ಸಿಂಡಿಕೇಟ್ ನಡೆಸುತ್ತಿರುವ ಮತ್ತೊಂದು ಆರೋಪವಿದೆ. ಆದರೆ ಯಾವುದೇ ತನಿಖೆ ಇಲ್ಲ. ಹೀಗೆ ಬಿಜೆಪಿ ವಾಷಿಂಗ್ ಮೆಷಿನ್ ಸೇರಿ ಶುದ್ಧವಾದ ರಾಜಕಾರಣಿಗಳ ಪಟ್ಟಿ ದೊಡ್ಡದಿದೆ. ಸುವೇಂದು ಅಧಿಕಾರಿ, ಜಿತೇಂದ್ರ ತಿವಾರಿ, ನಾರಾಯಣ ರಾಣೆ, ಬಿ.ಎಸ್. ಯಡಿಯೂರಪ್ಪ, ಪ್ರವೀಣ್ ಧಾರೇಕರ್, ಹಾರ್ದಿಕ್ ಪಟೇಲ್, ಅಜಿತ್ ಪವಾರ್ ಇನ್ನೂ ಹಲವರು. ಇವರಲ್ಲಿ ಹೆಚ್ಚಿನವರ ಹೆಸರನ್ನು ಈ ಮೊದಲು ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಭ್ರಷ್ಟಾಚಾರಕ್ಕೆ ಅವರನ್ನು ಉದಾಹರಿಸುತ್ತಿದ್ದರು. ಎನ್ಸಿಪಿಯನ್ನು ‘ನ್ಯಾಚುರಲಿ ಕರಪ್ಟ್ ಪಾರ್ಟಿ’ ಎಂದು ಕರೆದಿದ್ದರು. ಅದಕ್ಕೆ ಮತ ಹಾಕಬೇಡಿ ಎಂದಿದ್ದರು. ಆದರೆ ಅವರೆಲ್ಲ ಬಿಜೆಪಿ ಸೇರುತ್ತಿದ್ದಂತೆ ಎಲ್ಲ ತನಿಖೆ ನಿಂತುಹೋಯಿತು. ಎಲ್ಲ ಭ್ರಷ್ಟಾಚಾರ ಹಗರಣಗಳು ಮರೆತುಹೋದವು.