ತ್ವರಿತ ನ್ಯಾಯಾಲಯ, ವಿಶೇಷ ಪಿಪಿ ಶೀಘ್ರ ನೇಮಕಕ್ಕೆ ಹೆಚ್ಚಿದ ಆಗ್ರಹ
ನೇಜಾರು ಒಂದೇ ಕುಟುಂಬದ ನಾಲ್ವರ ಕಗ್ಗೊಲೆ ಪ್ರಕರಣಕ್ಕೆ 1 ತಿಂಗಳು
ಉಡುಪಿ: ಸರಿಯಾಗಿ ಒಂದು ತಿಂಗಳ ಹಿಂದೆ ಇಡೀ ರಾಜ್ಯವೇ ಬೆಚ್ಚಿ ಬೀಳುವ ಬರ್ಬರ ಕೃತ್ಯವೊಂದು ಉಡುಪಿಯಲ್ಲಿ ನಡೆದಿತ್ತು. ನ.12ರಂದು ನೇಜಾರಿನ ತೃಪ್ತಿ ಲೇಔಟ್ ನ ಲ್ಲಿ ಹಾಡುಹಗಲೇ ತಾಯಿ ಮತ್ತು ಮೂವರು ಮಕ್ಕಳನ್ನು ಆರೋಪಿ ಪ್ರವೀಣ್ ಪ್ರದೀಪ್ ಚೌಗುಲೆ(39) ಬರ್ಬರವಾಗಿ ಹತ್ಯೆಗೈದಿದ್ದನು. ಈ ಕೃತ್ಯ ನಡೆದು ಇಂದಿಗೆ(ಡಿ.12) ಒಂದು ತಿಂಗಳಾಗಿವೆ.
ಈ ಮಧ್ಯೆ ನಾಲ್ವರನ್ನು ಕಗ್ಗೊಲೆಗೈದ ಗಂಭೀರ ಪ್ರಕರಣದ ವಿಚಾರಣೆಗೆ ತ್ವರಿತ ನ್ಯಾಯಾಲಯ ಹಾಗೂ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡ ಬೇಕೆಂಬ ಕುಟುಂಬದವರು, ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಒಕ್ಕೋರಲಿನ ಬೇಡಿಕೆಯನ್ನು ರಾಜ್ಯ ಸರಕಾರ ಇನ್ನೂ ಈಡೇರಿಸಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಆದುದರಿಂದ ಸರಕಾರ ಶೀಘ್ರವೇ ತ್ವರಿತ ನ್ಯಾಯಾ ಲಯ ಹಾಗೂ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡಿ ಆರೋಪಿಗೆ ಕಠಿಣ ಶಿಕ್ಷೆ ಆಗುವಂತೆ ಮಾಡಬೇಕೆಂದು ಕುಟುಂಬಸ್ಥರು ಹಾಗೂ ವಿವಿಧ ಸಂಘಟನೆಗಳು ಒತ್ತಾಯಿಸಿವೆ.
ಬೆಚ್ಚಿಬೀಳಿಸಿದ ಬರ್ಬರ ಕೃತ್ಯ: ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಏಕ್ಸ್ಪ್ರೆಸ್ ಸಂಸ್ಥೆಯಲ್ಲಿ ಗಗನಸಖಿ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೇಜಾರಿನ ನೂರ್ ಮುಹಮ್ಮದ್ ಅವರ ಪುತ್ರಿ ಐನಾಝ್(21)ಳ ಮೇಲಿನ ಅತೀಯಾದ ವ್ಯಾಮೋಹದಿಂದ ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಾರಾಷ್ಟ್ರ ಸಾಂಗ್ಲಿ ಮೂಲದ ಪ್ರವೀಣ್ ಪ್ರದೀಪ್ ಚೌಗುಲೆ ನ.12ರಂದು ಕೊಲೆಗೆ ಯೋಜನೆ ರೂಪಿಸಿದ್ದನು.
ಅದೇ ರೀತಿ ಯಾವುದೇ ಸುಳಿವು ಲಭಿಸ ದಂತೆ ತನ್ನ ಕಾರನ್ನು ಹೆಜಮಾಡಿ ಟೋಲ್ಗೆ ಮೊದಲೇ ನಿಲ್ಲಿಸಿ, ಅಟೋ, ಬಸ್, ಬೈಕ್ಗಳ ಮೂಲಕ ನೇಜಾರು ತಲುಪಿದ್ದನು. ಅಲ್ಲಿ ಬೆಳಗ್ಗೆ 9ಗಂಟೆ ಸುಮಾರಿಗೆ ಐನಾಝ್ ಮನೆಯೊಳಗೆ ಹೋದ ಪ್ರವೀಣ್, ಐನಾಝ್ ಮತ್ತು ತಡೆಯಲು ಬಂದ ಆಕೆಯ ತಾಯಿ ಹಸೀನಾ(48), ಅಕ್ಕ ಅಫ್ನಾನ್(23) ಹಾಗೂ ತಮ್ಮ ಆಸೀಮ್(13)ನನ್ನು ಬರ್ಬರವಾಗಿ ಚೂರಿಯಿಂದ ಕೊಲೆಗೈದು ಪರಾರಿಯಾಗಿದ್ದನು. ಮನೆಯಲ್ಲಿದ್ದ ಹಸೀನಾರ ಅತ್ತೆ ಹಾಜಿರಾ(80) ಚೂರಿ ಇರಿತಕ್ಕೆ ಒಳಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ನ.14ರಂದು ಬೆಳಗಾವಿಯ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಪ್ರವೀಣ್ನನ್ನು ಬಂಧಿಸಿದ್ದರು.
ಇನ್ನೂ ಈಡೇರದ ಭರವಸೆ: ಗಂಭೀರ ಪ್ರಕರಣದ ಆರೋಪಿಗೆ ಗಲ್ಲುಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಬೇಕೆಂಬ ಒತ್ತಾಯ ಗಳು ಕೃತ್ಯ ನಡೆದ ಆರಂಭದಿಂದಲೂ ಕೇಳಿ ಬರುತ್ತಿದ್ದವು. ಆದರೆ ಸರಕಾರ ತಿಂಗಳಾದರೂ ಪ್ರಕರಣದ ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಮತ್ತು ಸಮರ್ಥವಾದ ಮಂಡಿಸಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡುವ ನಿಟ್ಟಿನಲ್ಲಿ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಈ ಕುರಿತು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳು ವ್ಯಾಪಾಕ ಅಸಮಾಧಾನ ವ್ಯಕ್ತಪಡಿಸಿವೆ.
ಅದೇ ರೀತಿ ಕುಟುಂಬಸ್ಥರನ್ನು ಭೇಟಿ ಮಾಡಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಈ ಕುರಿತು ಶೀಘ್ರವೇ ಸರಕಾರ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ನೀಡಿದ್ದರು. ಅಲ್ಲದೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರು ಕೂಡ ಈ ಕುರಿತು ಸರಕಾರಕ್ಕೆ ಶಿಫಾರಸು ಮಾಡುವುದಾಗಿ ಕುಟುಂಬಕ್ಕೆ ಹೇಳಿದ್ದರು.
ಅದೇ ರೀತಿ ನ.22ರಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಸಂತೆಕಟ್ಟೆ ಕಲ್ಯಾಣಪುರದ ಮೌಂಟ್ ರೋಸರಿ ಮಿಲ್ಲೆನಿಯಮ್ ಹಾಲ್ನಲ್ಲಿ ನಡೆದ ಸಂತಾಪ ಸಭೆಯಲ್ಲಿ ಸಹಸ್ರಾರು ಸಂಖ್ಯೆಯ ಸರ್ವ ಧರ್ಮಿಯರು ಸಾಕ್ಷಿಯಾಗಿ ಠರಾವು ಮಂಡಿಸಿ, ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಸಲ್ಲಿಸಲಾಗಿತ್ತು.
ನಾನು ನನ್ನ ಇಡೀ ಕುಟುಂಬವನ್ನು ಕಳೆದುಕೊಂಡಿದ್ದೇನೆ. ಇನ್ನೂ ನನಗೆ ಉಳಿದಿರುವುದು ನ್ಯಾಯ ಮಾತ್ರ. ಈ ನಿಟ್ಟಿನಲ್ಲಿ ಸರಕಾರ ಆದಷ್ಟು ಬೇಗ ತ್ವರಿತ ನ್ಯಾಯಾಲಯವನ್ನು ಸ್ಥಾಪಿಸಿ, ವಿಶೇಷ ಪಿಪಿಯನ್ನು ನೇಮಕ ಮಾಡಬೇಕು. ಅದು ಬಿಟ್ಟರೆ ನನಗೆ ಬೇರೆ ಯಾವ ಬೇಡಿಕೆಯೂ ಇಲ್ಲ.
| ನೂರ್ ಮುಹಮ್ಮದ್, ಸಂತ್ರಸ್ತ ಕುಟುಂಬದ ಯಜಮಾನ
ಪ್ರಕರಣ ನಡೆದು ಒಂದು ತಿಂಗಳಾದರೂ ರಾಜ್ಯ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ತ್ವರಿತ ನ್ಯಾಯಾಲಯ ಸ್ಥಾಪನೆ ಮತ್ತು ವಿಶೇಷ ಪಿಪಿ ನೇಮಕ ಮಾಡಲು ಮೀನಮೇಷ ಎದುರಿಸುತ್ತಿದೆ. ಪೊಲೀಸ್ ತನಿಖೆ ಹಂತದಲ್ಲಿಯೇ ವಿಶೇಷ ಪಿಪಿ ನೇಮಕ ಮಾಡಬೇಕು. ಇದೀಗ ನಡೆಯುತ್ತಿರುವ ಬೆಳಗಾವಿ ಅಧಿವೇಶನದಲ್ಲಿ ಈ ಕುರಿತು ಘೋಷಣೆ ಮಾಡ ಬೇಕು.
| ಹುಸೇನ್ ಕೋಡಿಬೆಂಗ್ರೆ, ರಾಜ್ಯ ಕಾರ್ಯದರ್ಶಿ, ಅಸೋಸಿಯೇಶನ್ ಫಾರ್ಪ್ರೊ ಟೆಕ್ಷನ್ ಆಫ್ ಸಿವಿಲ್ ರೈಟ್ಸ್
ಇಂದು ನಿಯೋಗದಿಂದ ಸಿಎಂ ಭೇಟಿ
ನೇಜಾರು ಪ್ರಕರಣಕ್ಕೆ ಸಂಬಂಧಿಸಿ ತ್ವರಿತ ನ್ಯಾಯಾಲಯ ಸ್ಥಾಪನೆ ಮತ್ತು ವಿಶೇಷ ಪಿಪಿ ನೇಮಕ ಮಾಡುವಂತೆ ಒತ್ತಾಯಿಸಿ ಡಿ.12ರಂದು ನಿಯೋಗವೊಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಲಿದೆ.
ಬೆಳಗಾವಿ ಅಧಿವೇಶನದಲ್ಲಿರುವ ಮುಖ್ಯಮಂತ್ರಿ ಯನ್ನು ಸಂತ್ರಸ್ತ ಕುಟುಂಬದ ಯಜಮಾನ ನೂರ್ ಮುಹಮ್ಮದ್, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಪದಾಧಿಕಾರಿಗಳು ಭೇಟಿ ಮಾಡಿ ಕೂಡಲೇ ಈ ಕುರಿತು ಆದೇಶ ಮಾಡುವಂತೆ ಒತ್ತಾಯಿಸಲಿದೆ ಎಂದು ಮೂಲಗಳು ತಿಳಿಸಿವೆ.
‘ಶೀಘ್ರ ನೇಮಕವಾದರೆ ಉತ್ತಮ’
ಯಾವುದೇ ಪ್ರಕರಣದಲ್ಲೂ ವಿಶೇಷ ಸರಕಾರಿ ಅಭಿಯೋಜಕರ ನೇಮಕವನ್ನು ನ್ಯಾಯಾಲಯಕ್ಕೆ ಚಾರ್ಚ್ಶೀಟ್ ಸಲ್ಲಿಸುವ ಮೊದಲೇ ನೇಮಕ ಮಾಡಿದರೆ ಉತ್ತಮ ಎಂದು ವಿಶೇಷ ಪಿಪಿಯಾಗಿ ಕರ್ತವ್ಯ ನಿರ್ವಹಿಸಿರುವ ನ್ಯಾಯವಾದಿ ಶಿವಪ್ರಸಾದ್ ಆಳ್ವ ಅಭಿಪ್ರಾಯಪಟ್ಟಿದ್ದಾರೆ.
ಪ್ರಕರಣ ಪೊಲೀಸ್ ತನಿಖೆಯ ಹಂತದಲ್ಲಿರುವಾಗ ವಿಶೇಷ ನೇಮಕ ಮಾಡಿದರೆ ಬಾಕಿ ಇರುವ ಸಾಕ್ಷ್ಯಗಳ ಸಂಗ್ರಹಕ್ಕೆ ಪೊಲೀಸರಿಗೆ ಸಲಹೆ ನೀಡ ಬಹುದಾಗಿದೆ. ಅದೇ ರೀತಿ ಚಾರ್ಚ್ಶೀಟ್ನಲ್ಲಿ ಕೆಲವೊಂದು ವಿಚಾರಗಳನ್ನು ಸೇರಿಸಲು ಕೂಡ ಸೂಕ್ತ ಸಲಹೆ ನೀಡಬಹುದು. ಆದುದರಿಂದ ಎಷ್ಟು ಬೇಗ ವಿಶೇಷ ಪಿಪಿಯನ್ನು ನೇಮಕ ಮಾಡುತ್ತಾರೆಯೋ ವಿಚಾರಣೆ ಸಂದರ್ಭದಲ್ಲಿ ಸಮರ್ಥವಾಗಿ ವಾದ ಮಂಡಿಸಲು ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.
ಎಫ್ಎಸ್ಎಲ್ ವರದಿಯ ನಿರೀಕ್ಷಿಯಲ್ಲಿ ಇಲಾಖೆ
ಪ್ರಕರಣಕ್ಕೆ ಸಂಬಂಧಿಸಿ ತನಿಖೆಯ ಅಂತಿಮ ಘಟ್ಟದಲ್ಲಿ ರುವ ಪೊಲೀಸರು, ನ್ಯಾಯಾಲಯಕ್ಕೆ ಚಾರ್ಚ್ಶೀಟ್ ಸಲ್ಲಿಸಲು ಎಲ್ಲ ರೀತಿಯ ತಯಾರಿ ನಡೆಸುತ್ತಿದ್ದಾರೆ.
ಪ್ರಕರಣದ ತಾಂತ್ರಿಕ ಹಾಗೂ ವೈಜ್ಞಾನಿಕ ಸಾಕ್ಷ್ಯಗಳಿಗೆ ಸಂಬಂಧಿಸಿ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ನಮ್ಮ ಕೈ ಸೇರಲು ಬಾಕಿ ಇದ್ದು, ಆದಷ್ಟು ಬೇಗ ಈ ವರದಿ ಸಲ್ಲಿಸುವಂತೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮನವಿ ಮಾಡಿದ್ದೇವೆ. ಅಲ್ಲಿಂದ ವರದಿ ಬಂದ ಬಳಿಕ ಆದಷ್ಟು ಬೇಗ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ.
ಬಂಧಿತ ಆರೋಪಿ ಪ್ರವೀಣ್ ಚೌಗುಲೆ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾನೆ. ಆತನ ನ್ಯಾಯಾಂಗ ಬಂಧನವನ್ನು ಡಿ.18ರವರೆಗೆ ವಿಸ್ತರಿಸಲಾಗಿದೆ. ಸುರಕ್ಷತೆ ಹಿನ್ನೆಲೆಯಲ್ಲಿ ಆತನನ್ನು ವೀಡಿಯೊ ಕಾನ್ಫರೆನ್ಸ್ ಮೂಲಕವೇ ಉಡುಪಿಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತಿದೆ.