ನಮ್ಮ ಆಟಿಕೆಯ ಉದ್ದಿಮೆ ಎತ್ತ ಸಾಗಿದೆ?
ಆಟಿಕೆಯ ಉದ್ದಿಮೆ ತೀರಾ ಸಣ್ಣ ಕ್ಷೇತ್ರವಾದರೂ ಉದ್ಯೋಗದ ಸೃಷ್ಟಿಯ ದೃಷ್ಟಿಯಿಂದ ಇದೊಂದು ಮಹತ್ವದ ಕ್ಷೇತ್ರ. ಹಾಗಾಗಿಯೇ ಹಲವು ದೇಶಗಳು ಇದನ್ನು ಉತ್ತೇಜಿಸುತ್ತಾ ಬಂದಿವೆ. ಭಾರತ ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರೂಪಿಸುತ್ತಾ ಬಂದಿರುವ ನೀತಿಗಳು ಮೊದಲಿನಿಂದಲೂ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ ಅನ್ನುವ ಟೀಕೆಯನ್ನು ತಳ್ಳಿಹಾಕಲಾಗುವುದಕ್ಕೆ ಸಾಧ್ಯವಿಲ್ಲ. ಕೇವಲ ಎರಡು ವರ್ಷಗಳ ಅಂಕಿಅಂಶವನ್ನು ಆಧಾರವಾಗಿಟ್ಟುಕೊಂಡು ಮಹತ್ವದ ಬೆಳವಣಿಗೆಯಾಗಿದೆ ಅಂತ ಭಾವಿಸುವುದು ಸೂಕ್ತವಲ್ಲ. ಆ ಮೂಲಕ ಮೇಕ್ ಇನ್ ಇಂಡಿಯಾ ಯೋಜನೆ ಸಫಲವಾಗಿದೆ ಎಂದು ಭಾವಿಸುವುದರಿಂದ ಏನನ್ನೂ ಸಾಧಿಸಿದಂತೆ ಆಗುವುದಿಲ್ಲ.
ಇತ್ತೀಚಿನ ದಿನಗಳಲ್ಲಿ ಆಟಿಕೆಗಳ ಉದ್ದಿಮೆ ಭಾರತದಲ್ಲಿ ತುಂಬಾ ಸುದ್ದಿ ಮಾಡುತ್ತಿದೆ. ನಿಜ ಹೇಳಬೇಕೆಂದರೆ ಭಾರತದ ಒಟ್ಟಾರೆ ಆರ್ಥಿಕತೆಯಲ್ಲಿ ಅದೊಂದು ತೀರಾ ಸಣ್ಣ ಕೈಗಾರಿಕೆ. 2015-16ರಲ್ಲಿ ಸುಮಾರು 15,000 ಉದ್ದಿಮೆಗಳು ಅದರಲ್ಲಿ ತೊಡಗಿಸಿಕೊಂಡಿದ್ದವು. ಹೆಚ್ಚೆಂದರೆ 35,000 ಕಾರ್ಮಿಕರು ಅವುಗಳಲ್ಲಿ ಕೆಲಸ ಮಾಡುತ್ತಿದ್ದರು. ಒಟ್ಟಾರೆ 1,688 ಕೋಟಿ ರೂಪಾಯಿಯಷ್ಟು ಮೌಲ್ಯದ ಆಟಿಕೆಗಳು ತಯಾರಾಗುತ್ತಿದ್ದವು. ಅದರಲ್ಲಿ ಹೂಡಿಕೆಯಾಗಿದ್ದ ಸ್ಥಿರ ಬಂಡವಾಳ ಒಟ್ಟಾರೆ 626 ಕೋಟಿಯಷ್ಟಿತ್ತು. ಇದ್ದ ಉದ್ದಿಮೆಗಳಲ್ಲಿ ಕೇವಲ ಶೇ. 1 ಉದ್ದಿಮೆಗಳಲ್ಲಿ ಹತ್ತು ಜನಕ್ಕಿಂತ ಹೆಚ್ಚಿನ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ನಾವು ರಫ್ತು ಮಾಡುತ್ತಿದ್ದ ಆಟಿಕೆಗಳಿಗಿಂತ ಮೂರು ಪಟ್ಟು ಆಟಿಕೆಗಳನ್ನು ಆಮದು ಮಾಡುಕೊಳ್ಳುತ್ತಿದ್ದೆವು. ಜಾಗತಿಕ ಆಟಿಕೆ ವ್ಯಾಪಾರದಲ್ಲಿ ಭಾರತದ ಪಾಲು ಕೇವಲ ಶೇ. 0.5ರಷ್ಟಿತ್ತು.
ಇತ್ತೀಚೆಗೆ ಆಟಿಕೆ ವ್ಯಾಪಾರದಲ್ಲಿ ಒಂದಿಷ್ಟು ಸುಧಾರಣೆಯಾಗಿದೆ. ಪ್ರಧಾನ ಮಂತ್ರಿಯವರು ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಆಟಿಕೆ ಉದ್ದಿಮೆಯಲ್ಲಿ ಯಾರೂ ಊಹಿಸಲೂ ಸಾಧ್ಯವಾಗದ ಮಟ್ಟಿನ ಪ್ರಗತಿಯಾಗಿದೆ ಎಂದು ತಿಳಿಸಿದ್ದಾರೆ. 300 ಕೋಟಿ ರೂಪಾಯಿಗಳಿಷ್ಟಿದ್ದ ರಫ್ತು 2,600 ಕೋಟಿ ರೂಪಾಯಿಯಷ್ಟಾಗಿದೆ. ಅಷ್ಟೇ ಅಲ್ಲ ನಾವು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದ ಆಟಿಕೆಗಳ ಪ್ರಮಾಣದಲ್ಲಿ ಶೇ.70ರಷ್ಟು ಕಡಿಮೆಯಾಗಿದೆ ಎಂದು ಹೇಳಿದ್ದಾರೆ.
ಭಾರತ 2014ರಲ್ಲಿ ಪ್ರಾರಂಭಿಸಿದ ಮೇಕ್ ಇನ್ ಇಂಡಿಯಾ ಯೋಜನೆಯ ಯಶಸ್ಸಿಗೆ ಉದಾಹರಣೆಯಾಗಿ ಇದನ್ನು ನೋಡಲಾಗುತ್ತಿದೆ. ಲಕ್ನೊದಲ್ಲಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಈ ಕುರಿತು ಅಧ್ಯಯನ ನಡೆಸಿ ‘ಸಕ್ಸಸ್ ಸ್ಟೋರಿ ಆಫ್ ಮೇಡ್ ಇನ್ ಇಂಡಿಯಾ ಟಾಯ್ಸ್’ ಎಂಬ ವರದಿಯನ್ನು ತಯಾರಿಸಿದೆ ಎಂದು ವರದಿಯಾಗಿದೆ. ಅದು ಪ್ರಮೋಷನ್ ಆಫ್ ಇಂಡಸ್ಟ್ರಿ ಆ್ಯಂಡ್ ಇಂಟರ್ನಲ್ ಟ್ರೇಡ್ ವಿಭಾಗದ ಪರವಾಗಿ ಈ ಅಧ್ಯಯನವನ್ನು ನಡೆಸಿದೆ. ಆದರೆ ಈ ವರದಿಯನ್ನು ಅದು ಈವರೆಗೆ ಪ್ರಕಟಿಸಿಲ್ಲ. ಹಾಗಾಗಿ ಅದರ ವಿವರಗಳು ಲಭ್ಯವಿಲ್ಲ. ಪತ್ರಿಕೆಯ ವರದಿಗಳ ಪ್ರಕಾರ 2014 ಹಾಗೂ 2023ರ ನಡುವೆ ಆಟಿಕೆಗಳ ರಫ್ತು ಶೇ. 239ರಷ್ಟು ಹೆಚ್ಚಾಗಿದೆ ಮತ್ತು ಆಮದು ಶೇ. 52ರಷ್ಟು ಕಮ್ಮಿಯಾಗಿದೆ ಎಂದು ಅಧ್ಯಯನ ತಿಳಿಸಿದೆ.
ಇತ್ತೀಚಿನವರೆಗೂ ನಾವು ರಫ್ತು ಮಾಡುತ್ತಿದ್ದ ಆಟಿಕೆಗಳಿಗಿಂತ ಹೆಚ್ಚು ಪ್ರಮಾಣದ ಆಟಿಕೆಗಳನ್ನು ಆಮದು ಮಾಡಿಕೊಳ್ಳುತ್ತಿದ್ದೆವು. ಹಾಗಾಗಿ ಭಾರತದ ಆಟಿಕೆಗಳ ನಿವ್ವಳ ರಫ್ತು ಅಂದರೆ ರಫ್ತಿನಲ್ಲಿ ಆಮದನ್ನು ಕಳೆದು ಬರುವ ಪ್ರಮಾಣ ಕಳೆದ 23 ವರ್ಷಗಳಲ್ಲಿ ಋಣಾತ್ಮಕವಾಗಿತ್ತು. 2021-22ರಲ್ಲಿ ಮೊತ್ತಮೊದಲ ಬಾರಿಗೆ ನಾವು ಆಮದಿಗಿಂತ 1,614 ಕೋಟಿ ರೂಪಾಯಿಯಷ್ಟು ಹೆಚ್ಚು ಆಟಿಕೆಗಳನ್ನು ರಫ್ತು ಮಾಡಿದ್ದೇವೆ. ಅದು ಕೋವಿಡ್ ಪಿಡುಗಿನ ಸಮಯ. ಆಗ ಜಾಗತಿಕವಾಗಿ ಆಟಿಕೆಗಳ ವ್ಯಾಪಾರದಲ್ಲಿ ಎಂದೂ ಇಲ್ಲದಷ್ಟು ಹೆಚ್ಚಳವಾಗಿತ್ತು. 2020ರಲ್ಲಿ 119 ಬಿಲಿಯನ್ ಡಾಲರ್ ಅಷ್ಟು ಇದ್ದ ಜಾಗತಿಕ ವ್ಯಾಪಾರ 2021ರಲ್ಲಿ 158 ಬಿಲಿಯನ್ ಡಾಲರಿಗೆ ಅಂದರೆ ಶೇ. 31ರಷ್ಟು ಹೆಚ್ಚಿತ್ತು.
ಆ ಸಮಯದಲ್ಲಿ ಅತಿ ಹೆಚ್ಚು ಆಟಿಕೆಗಳನ್ನು ಆಮದು ಮಾಡಿಕೊಂಡ ದೇಶವೆಂದರೆ ಅಮೆರಿಕ. 2020ರಲ್ಲಿ 36 ಬಿಲಿಯನ್ ಡಾಲರ್ ಪ್ರಮಾಣದ ಆಟಿಕೆಗಳನ್ನು ಆಮದು ಮಾಡಿಕೊಂಡಿದ್ದ ಅಮೆರಿಕ 2021ರಲ್ಲಿ 52 ಬಿಲಿಯನ್ ಡಾಲರಿನಷ್ಟು ಆಮದು ಮಾಡಿಕೊಂಡಿತ್ತು. ಅಂದರೆ ಶೇ. 44ರಷ್ಟು ಹೆಚ್ಚಿನ ಆಟಿಕೆಗಳನ್ನು ಆಮದು ಮಾಡಿಕೊಂಡಿತ್ತು. ಜರ್ಮನಿ, ಇಂಗ್ಲೆಂಡ್, ಫ್ರಾನ್ಸ್, ಜಪಾನ್ ಹಾಗೂ ಕೆನಡಾ ದೇಶಗಳಲ್ಲೂ ಆಮದು ಹೆಚ್ಚಾಗಿತ್ತು. ಆದರೆ ಅಮೆರಿಕಕ್ಕೆ ಹೋಲಿಸಿದರೆ ಅದು ತುಂಬಾ ಕಡಿಮೆ. ಅಮೆರಿಕದ ಬಹುತೇಕ ಬೇಡಿಕೆಯನ್ನು ಪೂರೈಸಿದ್ದು ಚೀನಾ. 2020ರಲ್ಲಿ 71 ಬಿಲಿಯನ್ ಡಾಲರ್ ಆಟಿಕೆಗಳನ್ನು ರಫ್ತು ಮಾಡಿದ್ದ ಚೀನಾ 2021ರಲ್ಲಿ 101 ಬಿಲಿಯನ್ ಡಾಲರ್ ಪ್ರಮಾಣದ ಆಟಿಕೆಗಳನ್ನು ರಫ್ತು ಮಾಡಿತ್ತು. ಆಟಿಕೆಗಳ ರಫ್ತಿನಲ್ಲಿ ಎರಡನೇ ಸ್ಥಾನದಲ್ಲಿರುವ ಜರ್ಮನಿಯಿಂದ ರಫ್ತಾದ ಆಟಿಕೆಗಳ ಮೌಲ್ಯ ಕೇವಲ 11 ಬಿಲಿಯನ್ ಡಾಲರ್.
2021ರಲ್ಲಿ ಭಾರತದಿಂದ ಆಟಿಕೆಗಳ ರಫ್ತಿನಲ್ಲಿ ಹೆಚ್ಚಳವಾಗಿದ್ದಕ್ಕೆ ಅಮೆರಿಕದ ಆಮದಿನಲ್ಲಿ ಹೆಚ್ಚಳವಾಗಿದ್ದೇ ಕಾರಣ. ಆದರೆ ಅಮೆರಿಕದ ಆಮದಿನ ಒಟ್ಟಾರೆ ಪ್ರಮಾಣದಲ್ಲಿ ಭಾರತದಿಂದ ಹೋಗಿದ್ದು ಕೇವಲ 0.5ರಷ್ಟು ಮಾತ್ರ. ಅಂದರೆ ಜಾಗತಿಕ ಆಟಿಕೆಗಳ ವ್ಯಾಪಾರದಲ್ಲಿ ಭಾರತದ ಪಾತ್ರ ತುಂಬಾ ಕಡಿಮೆ. ಚೀನಾ ಭಾರತಕ್ಕಿಂತ ಸುಮಾರು 200 ಪಟ್ಟು ಹೆಚ್ಚು ರಫ್ತು ಮಾಡುತ್ತಿದೆ. ಭಾರತ 26ನೇ ಸ್ಥಾನದಲ್ಲಿದೆ.
ಆದರೂ 2021ರಲ್ಲಿ ಭಾರತದ ವ್ಯಾಪಾರದಲ್ಲಿ ಸುಧಾರಣೆಯಾಗಿದ್ದು ಒಳ್ಳೆಯ ಬೆಳವಣಿಗೆ. ಈ ಹೆಚ್ಚಳಕ್ಕೆ ಕಾರಣವೇನು? ಎರಡು ಸಾಧ್ಯತೆಗಳು ಇರಬಹುದು. ಒಂದು ಭಾರತದ ಉತ್ಪಾದನಾ ಸಾಮರ್ಥ್ಯ ಹೆಚ್ಚಿ, ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸುವ ಸಾಮರ್ಥ್ಯ ಬಂದಿರಬಹುದು. ಎರಡನೆಯದು ಭಾರತ ತೆಗೆದುಕೊಂಡ ರಕ್ಷಣಾ ಕ್ರಮಗಳಿಂದ ಭಾರತದ ಆಟಿಕೆಯ ಉದ್ದಿಮೆಗಳಿಗೆ ಅನುಕೂಲವಾಗಿರಬಹುದು.
ಮೊದಲಿಗೆ ಭಾರತ ತೆಗೆದುಕೊಂಡ ರಕ್ಷಣಾ ಕ್ರಮಗಳನ್ನು ಗಮನಿಸೋಣ. ನಮ್ಮಲ್ಲಿನ ಆಟಿಕೆ ಉದ್ದಿಮೆಗಳ ರಕ್ಷಣೆಗಾಗಿ ವಿದೇಶಿ ಗೊಂಬೆಗಳ ಮೇಲೆ ಸುಂಕವನ್ನು ಹೆಚ್ಚಿಸಲಾಗಿದೆ. ಇದರಿಂದ ವಿದೇಶಿ ಆಟಿಕೆಗಳು ದುಬಾರಿಯಾಗಿ ಅವುಗಳಿಗೆ ಬೇಡಿಕೆ ಕಡಿಮೆಯಾಗುತ್ತದೆ. ಅಂದರೆ ಆಮದು ಕಡಿಮೆಯಾಗುತ್ತದೆ. ಈ ಉದ್ದೇಶದಿಂದ ಫೆಬ್ರವರಿ 2020ರಲ್ಲಿ ಕೆಲವು ಆಟದ ಸಾಮಾನುಗಳ ಮೇಲೆ ಆಮದು ಸುಂಕವನ್ನು ಶೇ. 20ರಿಂದ ಶೇ.60ಕ್ಕೆ ಏರಿಸಿತು. ಜೊತೆಗೆ ಹೊರಗಿನಿಂದ ಬರುವ ವಸ್ತುಗಳ ಗುಣಮಟ್ಟ ನಿಯಂತ್ರಣವನ್ನು ಕಠಿಣಗೊಳಿಸಿತು. ಅದರಿಂದಾಗಿ ಎಷ್ಟೋ ಆಟಿಕೆಗಳು ತಿರಸ್ಕೃತಗೊಂಡವು.
ನಾಗರಾಜ್ ಆರ್. ಹಾಗೂ ನವೀನ್ ಥಾಮಸ್ ಅವರು ಈ ಬಗ್ಗೆ ಮಾಡಿರುವ ಅಧ್ಯಯನದ ಪ್ರಕಾರ ಸರಕಾರದ ರಕ್ಷಣಾ ಕ್ರಮದಿಂದ ಭಾರತದಲ್ಲಿನ ಆಟಿಕೆ ಉದ್ದಿಮೆಗಳಿಗೆ ಅನುಕೂಲವಾಗಿದೆ. ಜೊತೆಗೆ ಆ ವರ್ಷ ಕೋವಿಡ್‌ನಿಂದಾಗಿ ಪೂರೈಕೆ ತುಂಬಾ ಅಸ್ತವ್ಯಸ್ತವಾಗಿತ್ತು. ಅದು ಕೂಡ ಆಮದು ಕಡಿಮೆಯಾಗುವುದಕ್ಕೆ ಕಾರಣ. 2022ರಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರುತ್ತಿದ್ದಂತೆ ನಿವ್ವಳ ರಫ್ತು ರೂ. 1,614 ಕೋಟಿಯಿಂದ 1,319 ಕೋಟಿಗೆ ಇಳಿದಿದ್ದು ಈ ಅನುಮಾನವನ್ನು ಸಮರ್ಥಿಸುತ್ತದೆ. ಆಮದಿನಲ್ಲೂ ಏರಿಕೆಯಾಯಿತು. ಸರಕಾರ 2023ರಲ್ಲಿ ಆಮದು ಸುಂಕವನ್ನು ಶೇ. 60ರಿಂದ 70ಕ್ಕೆ ಏರಿಸಿತು. ನಂತರದ ವರ್ಷಗಳಿಗೆ ಸಂಬಂಧಿಸಿದಂತೆ ಆಟಿಕೆಗಳ ರಫ್ತು ಹಾಗೂ ಆಮದಿಗೆ ಸಂಬಂಧಿಸಿದಂತೆ ಅಂಕಿ ಅಂಶಗಳು ಲಭ್ಯವಿಲ್ಲ.
2021ರಲ್ಲಿ ಉತ್ಪಾದನಾ ಸಾಮರ್ಥ್ಯದಲ್ಲಿ ಹೆಚ್ಚಳವೇನೂ ಆಗಿಲ್ಲ ಅನ್ನುವುದನ್ನು ನಾಗರಾಜ್ ಮತ್ತು ಥಾಮಸ್ ಅವರ ಅಧ್ಯಯನ ಸೂಚಿಸುತ್ತದೆ. ಅವರು ಕೈಗಾರಿಕೆಗೆ ಸಂಬಂಧಿಸಿದಂತೆ ಲಭ್ಯವಿರುವ ವಾರ್ಷಿಕ ಸಮೀಕ್ಷೆಯ ಅಂಕಿಅಂಶವನ್ನು ವಿಶ್ಲೇಷಿಸಿದ್ದಾರೆ. ಅವರ ಪ್ರಕಾರ ಉತ್ಪಾದಕತೆಯಲ್ಲಿ ಅಂತಹ ಸುಧಾರಣೆಯಾಗಿಲ್ಲ. ಬಂಡವಾಳದ ಹೂಡಿಕೆಯಲ್ಲಿ ಹಾಗೂ ತಲಾ ಉತ್ಪಾದಕತೆಯಲ್ಲಿ ಇಳಿತ ಕಂಡುಬರುತ್ತದೆ. ಹಾಗಾಗಿ ಅವರು ಹೇಳುವಂತೆ ರಾಷ್ಟ್ರದಲ್ಲಿ ಪೂರೈಕೆ ಹೆಚ್ಚಿದೆಯೆಂದಾಗಲಿ, ಸ್ಥಳೀಯ ಉದ್ದಿಮೆಗಳಿಗೆ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯ ಬಂದಿದೆಯೆಂದಾಗಲಿ ಭಾವಿಸುವುದಕ್ಕೆ ಆಧಾರವಿಲ್ಲ. ಹಾಗಾಗಿ ಸರಕಾರದ ರಕ್ಷಣಾ ಕ್ರಮ ಈ ಬೆಳವಣಿಗೆಗೆ ಬಹುತೇಕ ಕಾರಣ ಎಂದಷ್ಟೇ ಭಾವಿಸಬಹುದು. ಇದು ಸತ್ಯವಾದರೆ ಈ ಪ್ರವೃತ್ತಿ ದೀರ್ಘಕಾಲ ಮುಂದುವರಿಯದೆ ಇರಬಹುದು. ದೇಶೀಯ ಉದ್ದಿಮೆಗಳಿಗೆ ರಕ್ಷಣೆ ನೀಡುವುದರ ಜೊತೆಗೆ ಆಟಿಕೆಯ ಕ್ಷೇತ್ರದಲ್ಲಿ ಹೂಡಿಕೆಯನ್ನು ಹೆಚ್ಚಿಸಿ, ಸ್ಥಳೀಯ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲೂ ಯೋಚಿಸಬೇಕು. ಇಲ್ಲದೇ ಹೋದರೆ ಒಟ್ಟಾರೆ ಆರ್ಥಿಕತೆಯ ದೃಷ್ಟಿಯಿಂದ ಇದರಿಂದ ಅಂತಹ ಅನುಕೂಲವೇನೂ ಆಗುವುದಿಲ್ಲ.
ಆಟಿಕೆಯ ಉದ್ದಿಮೆ ತೀರಾ ಸಣ್ಣ ಕ್ಷೇತ್ರವಾದರೂ ಉದ್ಯೋಗದ ಸೃಷ್ಟಿಯ ದೃಷ್ಟಿಯಿಂದ ಇದೊಂದು ಮಹತ್ವದ ಕ್ಷೇತ್ರ. ಹಾಗಾಗಿಯೇ ಹಲವು ದೇಶಗಳು ಇದನ್ನು ಉತ್ತೇಜಿಸುತ್ತಾ ಬಂದಿವೆ. ಭಾರತ ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರೂಪಿಸುತ್ತಾ ಬಂದಿರುವ ನೀತಿಗಳು ಮೊದಲಿನಿಂದಲೂ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ ಅನ್ನುವ ಟೀಕೆಯನ್ನು ತಳ್ಳಿಹಾಕಲಾಗುವುದಕ್ಕೆ ಸಾಧ್ಯವಿಲ್ಲ. ಕೇವಲ ಎರಡು ವರ್ಷಗಳ ಅಂಕಿಅಂಶವನ್ನು ಆಧಾರವಾಗಿಟ್ಟುಕೊಂಡು ಮಹತ್ವದ ಬೆಳವಣಿಗೆಯಾಗಿದೆ ಅಂತ ಭಾವಿಸುವುದು ಸೂಕ್ತವಲ್ಲ. ಆ ಮೂಲಕ ಮೇಕ್ ಇನ್ ಇಂಡಿಯಾ ಯೋಜನೆ ಸಫಲವಾಗಿದೆ ಎಂದು ಭಾವಿಸುವುದರಿಂದ ಏನನ್ನೂ ಸಾಧಿಸಿದಂತೆ ಆಗುವುದಿಲ್ಲ.
ಭಾರತಕ್ಕಿಂತ ಸುಮಾರು 200 ಪಟ್ಟು ಹೆಚ್ಚು ರಫ್ತು ಮಾಡುತ್ತಿರುವ ಚೀನಾ ನಮಗಿಂತ ತುಂಬಾ ಮುಂದಿದೆ. ನಾವು ಮಹತ್ವದ್ದನ್ನು ಸಾಧಿಸಬೇಕಾದರೆ ಇನ್ನೂ ತುಂಬಾ ದೂರ ಸಾಗಬೇಕಾಗಿದೆ. ನಮ್ಮ ಉದ್ದಿಮೆಗಳು ಜಾಗತಿಕವಾಗಿ ಹೆಚ್ಚು ಸ್ಪರ್ಧಾತ್ಮಕವಾಗುವಂತೆ ಮಾಡುವ ನಿಟ್ಟಿನಲ್ಲಿ ನೀತಿಗಳನ್ನು ರೂಪಿಸುವ ಜರೂರು ಇದೆ. ಸಣ್ಣ, ಮಧ್ಯಮ ಹಾಗೂ ಅನೌಪಚಾರಿಕ ಉದ್ದಿಮೆಗಳ ಬೆಳವಣಿಗೆ ನಮ್ಮ ಆದ್ಯತೆಯಾಗಬೇಕಾಗಿದೆ. ಸಂಬಂಧಪಟ್ಟ ಅಂಕಿಅಂಶಗಳು ಸಾರ್ವಜನಿಕವಾಗಿ ಲಭ್ಯವಾದರೆ ಅರ್ಥಪೂರ್ಣ ಚರ್ಚೆ ಸಾಧ್ಯವಾಗುತ್ತದೆ.