ಕ್ರೆಮ್ಲಿನ್ ಬಿಟ್ಟು ಹೋಗುತ್ತಿಲ್ಲವೇ ರಷ್ಯಾ ಅಧ್ಯಕ್ಷ Vladimir Putin
ದಿಲ್ಲಿಗೆ ಬರಲು ಹಿಂದೇಟು ಹಾಕಿದ್ದೇಕೆ ಪುಟಿನ್ ? ► ದೇಶ ಬಿಟ್ಟು ಹೋಗೋದೇ ಇಲ್ವಾ ಪುಟಿನ್ ?
Vladimir Putin | Photo: PTI
ಭಾರತ ಈ ವರ್ಷ ಪ್ರತಿಷ್ಠಿತ ಜಿ ೨೦ ಶೃಂಗಸಭೆಯ ಆತಿಥ್ಯ ಹಾಗು ಅಧ್ಯಕ್ಷತೆಯ ದೇಶ. ಇದು ಭಾರತದಲ್ಲಿ ಮಾತ್ರವಲ್ಲ ದಕ್ಷಿಣ ಏಷ್ಯಾದಲ್ಲೇ ಇದೇ ಮೊದಲ ಬಾರಿ ನಡೆಯುತ್ತಿರುವ ಶೃಂಗ ಸಭೆ. ಕಳೆದ ವರ್ಷ ಇದು ಇಂಡೋನೇಷ್ಯಾ ಅಧ್ಯಕ್ಷತೆಯಲ್ಲಿ ಬಾಲಿಯಲ್ಲಿ ನಡೆದಿತ್ತು. ಈ ವರ್ಷ ಭಾರತದ ಸರದಿ. ಇಪ್ಪತ್ತು ದೇಶಗಳ ನಾಯಕರ ಈ ಮಹತ್ವದ ಶೃಂಗಸಭೆಯ ಅಧ್ಯಕ್ಷತೆಯನ್ನು ಈ ಬಾರಿ ಪ್ರಧಾನಿ ಮೋದಿ ವಹಿಸಲಿದ್ದಾರೆ.
ಹಾಗಾಗಿ ಭಾರತ ಈ ಬಾರಿ ಜಿ 20 ಶೃಂಗಸಭೆ ಯಶಸ್ವಿಯಾಗಲು ಪ್ರತಿ ಆಯಾಮದಲ್ಲೂ ಪ್ರಯತ್ನಿಸ್ತಾ ಇದೆ.
ಸೆಪ್ಟೆಂಬರ್ 9 ಹಾಗು 10 ರಂದು ರಾಜಧಾನಿ ದಿಲ್ಲಿಯಲ್ಲಿ ನಡೆಯುವ ಜಿ 20 ಶೃಂಗ ಸಭೆಗೆ ಭಾರೀ ತಯಾರಿ ನಡೆಯುತ್ತಿದೆ.
20 ಪ್ರಮುಖ ದೇಶಗಳ ನಾಯಕರು ದೆಹಲಿ ತಲುಪಲಿದ್ದಾರೆ. ಆದರೆ ಈ ಮಧ್ಯೆ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇದರಲ್ಲಿ ಭಾಗಿಯಾಗುವುದಿಲ್ಲ ಎಂದು ವರದಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಜಾಗತಿಕ ರಾಜಕೀಯದಲ್ಲಿ ಪುಟಿನ್ ವಿವಾದಾತ್ಮಕ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಈಗ ಅವರು ಭಾರತದಲ್ಲಿ ನಡೆಯುವ ಜಿ 20 ಶೃಂಗಸಭೆಗೆ ಬರುತ್ತಿಲ್ಲ, ಇದು ಭಾರೀ ಚರ್ಚೆಯ ವಿಷಯವಾಗಿದೆ.
ಈಗ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಜಿ 20 ಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಪುಟಿನ್ ಪ್ರಧಾನಿ ಮೋದಿಗೆ
ತಿಳಿಸಿದ್ದಾರೆ. ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ದೆಹಲಿಯಲ್ಲಿ ರಷ್ಯಾವನ್ನು ಪ್ರತಿನಿಧಿಸಲಿದ್ದಾರೆ ಎಂದು ರಷ್ಯಾ ಅಧ್ಯಕ್ಷರ ಪತ್ರಿಕಾ ಕಾರ್ಯದರ್ಶಿ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
ಜಿ20 ಶೃಂಗಸಭೆಗೆ ಪುಟಿನ್ ಬರದಿರುವುದು ತೀರಾ ಆಶ್ಚರ್ಯವೇನಿಲ್ಲ. ಏಕೆಂದರೆ ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಕೂಡಾ ಪುಟಿನ್ ಭಾಗವಹಿಸಿರಲಿಲ್ಲ. ಅಲ್ಲಿಗೂ ವಿದೇಶಾಂಗ ಸಚಿವ ಲಾವ್ರೊವ್ ಅವರನ್ನೇ ಕಳುಹಿಸಿದ್ದರು. ಇದಕ್ಕೂ ಮೊದಲು, ಪುಟಿನ್ ಕಳೆದ ವರ್ಷ ಬಾಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲೂ ಭಾಗವಹಿಸಿರಲಿಲ್ಲ. ಇಂತಹ ಜಾಗತಿಕ ಶೃಂಗಸಭೆಗಳಿಗೆ ಪುಟಿನ್ ಹೋಗುವುದನ್ನು ಏಕೆ ತಪ್ಪಿಸುತ್ತಿದ್ದಾರೆ ಎಂಬ ಪ್ರಶ್ನೆ ಈಗ ಉದ್ಭವಿಸುತ್ತದೆ?
ಮೊದಲಿಗೆ, ಈ ಬಗ್ಗೆ ರಷ್ಯಾ ಏನು ಹೇಳುತ್ತದೆ ಎಂದು ತಿಳಿಯೋಣ. ಪುಟಿನ್ ದೆಹಲಿಗೆ ಹೋಗುತ್ತಿಲ್ಲ ಎಂದು ಪುಟಿನ್ ಅವರ ಪತ್ರಿಕಾ ಕಾರ್ಯದರ್ಶಿ ಡಿಮಿಟ್ರಿ ಪೊಸ್ಕೋವ್ ರಷ್ಯಾದ ಮಾಧ್ಯಮಗಳಿಗೆ ಮೊನ್ನೆ ಆಗಸ್ಟ್ 25 ರಂದು ತಿಳಿಸಿದ್ದಾರೆ.
ದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ಪುಟಿನ್ ಹೋಗುವ ಯಾವುದೇ ಯೋಜನೆ ಇಲ್ಲ ಎಂದು ಪೊಸ್ಕೋವ್ ಹೇಳಿದ್ದಾರೆ. ಈಗ ಅವರ ಸಂಪೂರ್ಣ ಗಮನ ಉಕ್ರೇನ್ನಲ್ಲಿ ವಿಶೇಷ ಮಿಲಿಟರಿ ಕಾರ್ಯಾಚರಣೆ ಮೇಲಿದೆ ಎಂದು ಪೆಸ್ಕೋವ್ ಹೇಳಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಮಾಡಿರುವ ದಾಳಿಯನ್ನು ರಷ್ಯಾ ಅಧಿಕೃತವಾಗಿ ವಿಶೇಷ ಮಿಲಿಟರಿ ಕಾರ್ಯಾಚರಣೆ ಎಂದೇ ಕರೆಯುತ್ತದೆ.
ಹಾಗೆ ನೋಡಿದರೆ, ಪುಟಿನ್ ವಿದೇಶ ಪ್ರವಾಸಕ್ಕೆ ಹೋಗದೇ ಇರಲು ಉಕ್ರೇನ್ ಯುದ್ಧವು ಒಂದು ಪ್ರಮುಖ ಕಾರಣ ಎಂಬುದೂ ನಿಜ. ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಯುದ್ಧದ ಮೇಲಿಂದ ಗಮನ ಬೇರೆಡೆ ಹರಿಸುವುದು ದೇಶದ ಅಧ್ಯಕ್ಷರಿಗೆ ಕಷ್ಟ ಎಂಬುದು ಸಹಜ. ಆದರೆ ಇದು ಮೇಲ್ನೋಟಕ್ಕೆ ಕಾಣುವ ಕಾರಣ. ಪುಟಿನ್ ದೇಶ ಬಿಡದೆ ಇರಲೂ ಬೇರೆ ಕಾರಣಗಳೂ ಇವೆ.
ಈ ವರ್ಷದ ಮಾರ್ಚ್ 17 ರಂದು, ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್, ಅಂದರೆ ಐಸಿಸಿ, ಪುಟಿನ್ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು. ಅದು ಇಡೀ ಜಾಗತಿಕ ರಾಜಕಾರಣದಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ. ಉಕ್ರೇನ್ ಮೇಲೆ ಯುದ್ಧ ನಡೆಯುತ್ತಿದ್ದಾಗ ಅಲ್ಲಿಂದ ಅಲ್ಲಿನ ಮಕ್ಕಳನ್ನು ಅಕ್ರಮವಾಗಿ ರಷ್ಯಾಕ್ಕೆ ಕರೆತಂದಿರುವ ಆರೋಪದ ಮೇಲೆ ಪುಟಿನ್ ವಿರುದ್ಧ ಐಸಿಸಿ ಬಂಧನಾದೇಶ ಹೊರಡಿಸಿತ್ತು.
ಈ ವಾರಂಟ್ ಪ್ರಕಾರ ಪುಟಿನ್ ಈ ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ನ ಯಾವುದೇ ಸದಸ್ಯ ದೇಶಗಳಿಗೆ ಹೋದರೆ, ಆ ದೇಶವು ಬಂಧನ ವಾರಂಟ್ ಅನ್ನು ಜಾರಿಗೊಳಿಸಬೇಕಾಗುತ್ತದೆ. ಸರಳವಾಗಿ ಹೇಳುವುದಾದರೆ, ಪುಟಿನ್ ಅವರನ್ನು ಆ ದೇಶ ಬಂಧಿಸಬಹುದು. ೧೨೩ಕ್ಕೂ ಹೆಚ್ಚು ದೇಶಗಳು ಈ ಐಸಿಸಿಯ ಸದಸ್ಯತ್ವ ಪಡೆದು ಸಹಿ ಹಾಕಿವೆ.
ಬಹುಶಃ ಅದಕ್ಕಾಗಿಯೇ ಪುಟಿನ್ ಜಿ 20 ಶೃಂಗಸಭೆಯಲ್ಲಿ ಭಾಗವಹಿಸುತ್ತಿಲ್ಲ ಎಂದು ಚರ್ಚೆ ಶುರುವಾಗಿದೆ. ಪುಟಿನ್ ಮೊನ್ನೆ ಬ್ರಿಕ್ಸ್ ಶೃಂಗ ಸಭೆಗಾಗಿ ಜೋಹಾನ್ಸ್ಬರ್ಗ್ಗೆ ಹೋಗಿದ್ದರೆ, ದಕ್ಷಿಣ ಆಫ್ರಿಕಾ ಅವರನ್ನು ಬಂಧಿಸುವ ಒತ್ತಡಕ್ಕೆ ಒಳಗಾಗಬೇಕಾಗಿತ್ತು. ಏಕೆಂದರೆ ದಕ್ಷಿಣ ಆಫ್ರಿಕಾ ಐಸಿಸಿ ಸದಸ್ಯತ್ವ ಇರುವ ದೇಶ.
ಎಲ್ಲಾದರೂ ಪುಟಿನ್ ರನ್ನು ದಕ್ಷಿಣ ಆಫ್ರಿಕಾ ಬಂಧಿಸಿದರೆ ಅದು ಉಭಯ ದೇಶಗಳ ನಡುವಿನ ಉತ್ತಮ ಬಾಂಧವ್ಯದ ಮೇಲೆ ಭಾರೀ ಕೆಟ್ಟ ಪರಿಣಾಮ ಬೀರುತ್ತದೆ. ಏಕೆಂದರೆ ಪುಟಿನ್ ವಿರುದ್ಧದ ಅಂತಹ ಯಾವುದೇ ಕ್ರಮ ರಷ್ಯಾ ವಿರುದ್ಧ ಯುದ್ಧ ಸಾರುವುದಕ್ಕೆ ಸಮ ಎಂದು ಈಗಾಗಲೇ ರಷ್ಯಾ ಹೇಳಿದೆ.
ಈಗ ಭಾರತದ ವಿಷಯಕ್ಕೆ ಬರೋಣ. ಭಾರತವು ಐಸಿಸಿ ಸದಸ್ಯತ್ವ ಹೊಂದಿಲ್ಲ. ಅಮೇರಿಕ, ರಷ್ಯಾ , ಚೀನಾ ಕೂಡ ಐಸಿಸಿಯ ಸದಸ್ಯತ್ವ ಪಡೆದಿಲ್ಲ. ಹಾಗಾಗಿ ಐಸಿಸಿ ಪುಟಿನ್ ವಿರುದ್ಧ ಹೊರಡಿಸಿರುವ ಬಂಧನ ವಾರೆಂಟ್ಗೆ ಸಹಕರಿಸಬೇಕು ಎನ್ನುವ ಯಾವುದೇ ಒತ್ತಡ ಭಾರತದ ಮೇಲೆ ಇಲ್ಲ. ಹಾಗಾಗಿ ಪುಟಿನ್ ಭಾರತಕ್ಕೆ ಬಂದರೂ ಇಲ್ಲಿ ಅವರ ಬಂಧನ ಆಗೋದಿಲ್ಲ. ಮತ್ಯಾಕೆ ಪುಟಿನ್ ದಿಲ್ಲಿಗೆ ಬರುತ್ತಿಲ್ಲ ?
ವಿದೇಶಾಂಗ ವ್ಯವಹಾರಗಳ ಕುರಿತ ತಜ್ಞರ ಪ್ರಕಾರ ಭಾರತ ಪುಟಿನ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೇ ಇದ್ದರೂ ಶೃಂಗ ಸಭೆಯಲ್ಲಿ ಇಪ್ಪತ್ತು ದೇಶಗಳ ನಾಯಕರು ಭಾಗವಹಿಸುತ್ತಿದ್ದಾರೆ. ಆ ಪೈಕಿ ಹಲವು ದೇಶಗಳು ಈಗಾಗಲೇ ಉಕ್ರೇನ್ ನಲ್ಲಿ ರಷ್ಯಾದ ದಾಳಿಯನ್ನು ಖಂಡಿಸಿವೆ. ಪುಟಿನ್ ಕ್ರಮ ಸರಿಯಲ್ಲ ಎಂದಿವೆ. ಹಾಗಾಗಿ ದಿಲ್ಲಿ ಶೃಂಗ ಸಭೆಗೆ ಬಂದರೆ ಪುಟಿನ್ ತನ್ನನ್ನು ಖಂಡಿಸಿದ ನಾಯಕರನ್ನು ಎದುರಿಸಬೇಕಾಗುತ್ತದೆ. ಅವರೊಂದಿಗೆ ಮಾತಾಡುವ ಸನ್ನಿವೇಶ ಉಂಟಾಗುತ್ತದೆ. ಇದರಿಂದ ಪುಟಿನ್ ಗೆ ಇರಿಸು ಮುರುಸಿನ ವಾತಾವರಣ ಸೃಷ್ಟಿಯಾಗಬಹುದು. ಅಂತಹ ಸಾಧ್ಯತೆ ಇರುವ ಯಾವುದೇ ವೇದಿಕೆಗೆ ಪುಟಿನ್ ಅಥವಾ ಬೇರಾವುದೇ ರಾಷ್ಟ್ರ ನಾಯಕರು ಹೋಗೋದೇ ಇಲ್ಲ.
ಇನ್ನು ಜಿ 20 ಶೃಂಗ ಸಭೆಯಲ್ಲಿ ಮುಖ್ಯವಾಗಿ ಆರ್ಥಿಕತೆ ಕುರಿತ ಚರ್ಚೆಯಾಗುತ್ತದೆ. ಆಗ ಸಹಜವಾಗಿ ಉಕ್ರೇನ್ ದಾಳಿಯಿಂದಾಗಿರುವ ಪರಿಣಾಮಗಳ ಉಲ್ಲೇಖವಾಗುತ್ತದೆ. ಆ ಕುರಿತು ಚರ್ಚೆಯಾಗುತ್ತದೆ. ಆಗ ಪರ ವಿರೋಧ ಎರಡೂ ಅಭಿಪ್ರಾಯಗಳು ಕೇಳಿ ಬರುತ್ತವೆ. ನೇರವಾಗಿ ದೇಶದ ಅಧ್ಯಕ್ಷರ ಎದುರೇ ಬೇರೆ ದೇಶಗಳ ನಾಯಕರು ಟೀಕೆ ಮಾಡಿದರೆ ಅದು ಅವರ ದೇಶದಲ್ಲಿಅಧ್ಯಕ್ಷರ ವರ್ಚಸ್ಸಿಗೆ ಭಾರೀ ಧಕ್ಕೆ ಉಂಟು ಮಾಡುತ್ತದೆ. ರಾಜಕೀಯವಾಗಿ ಅವರಿಗೆ ಅದರಿಂದ ಹಿನ್ನಡೆಯಾಗುವ ಸಾಧ್ಯತೆ ಇರುತ್ತದೆ.
ಈ ನಡುವೆ ಇನ್ನೂ ಒಂದು ಬೆಳವಣಿಗೆಯಾಗಿದೆ. ಅದೂ ಕೂಡ ಪುಟಿನ್ ದಿಲ್ಲಿಗೆ ಬರೋದನ್ನು ತಡೆದಿರಬಹುದು ಎಂದು ಹೇಳಲಾಗುತ್ತಿದೆ. ಪುಟಿನ್ ವಿರುದ್ಧ ಬಂಡೆದಿದ್ದ ವ್ಯಾಗ್ನರ್ ಗುಂಪಿನ ಯೆವ್ಗೆನಿ ಪ್ರಿಗೊಝಿನ್ ಮೊನ್ನೆ ದಿಢೀರನೆ ವಿಮಾನ ಅವಘಡವೊಂದರಲ್ಲಿ ಬಲಿಯಾಗಿದ್ದಾರೆ. ಈ ಬಗ್ಗೆ ಏನೇನೋ ವದಂತಿಗಳು, ವಾದಗಳು ಹರಿದಾಡುತ್ತಿವೆ. ಪಾಶ್ಚಿಮಾತ್ಯ ದೇಶಗಳಲ್ಲಿ ಈ ಬಗ್ಗೆ ಭಾರೀ ಊಹಾಪೋಹಗಳು ಕೇಳಿ ಬರುತ್ತಿವೆ. ಪ್ರಿಗೊಝಿನ್ ಸಾವಿನಲ್ಲಿ ಪುಟಿನ್ ಪ್ರತ್ಯಕ್ಷ ಅಲ್ಲದಿದ್ದರೂ ಪರೋಕ್ಷ ಪಾತ್ರವಿರಬಹುದು ಎಂಬಂಥ ಆರೋಪಗಳು ಅಲ್ಲಲ್ಲಿ ವ್ಯಕ್ತವಾಗಿವೆ. ಆ ಚರ್ಚೆ ಇನ್ನೂ ಬಿಸಿ ಬಿಸಿ ಇರುವಾಗಲೇ ಪುಟಿನ್ ಬೇರೆ ದೇಶಗಳ ನಾಯಕರನ್ನು ಭೇಟಿ ಮಾಡಲು ಇಚ್ಛಿಸುತ್ತಿಲ್ಲ ಎಂದು ಹೇಳಲಾಗಿದೆ.
ಒಟ್ಟಾರೆ ಅಂತರ್ ರಾಷ್ಟ್ರೀಯ ವೇದಿಕೆಗಳಲ್ಲಿ ಯಾವುದೇ ರಾಜತಾಂತ್ರಿಕ ಇಕ್ಕಟ್ಟಿನ ಸ್ಥಿತಿಗೆ ಸಿಲುಕುವುದು ಬೇಡ ಎಂಬುದು ಪುಟಿನ್ ಹಾಗು ರಷ್ಯಾದ ಲೆಕ್ಕಾಚಾರ. ಎಲ್ಲಾದರೂ ಹಾಗಾದರೆ ಅದು ಪುಟಿನ್ ದಶಕಗಳಿಂದ ಬೆಳೆಸಿಕೊಂಡು ಬಂದಿರುವ ರಾಜಕೀಯ ವರ್ಚಸ್ಸು ಹಾಗು ಪ್ರಭಾವಕ್ಕೆ ಭಾರೀ ಹಿನ್ನಡೆ ಉಂಟುಮಾಡುತ್ತದೆ. ಹಾಗಾಗೋದು ಅವರಿಗೆ ಬೇಡವೇ ಬೇಡ. ಹಾಗಾಗಿ ಪುಟಿನ್ ದಿಲ್ಲಿಗೆ ಬರುತ್ತಿಲ್ಲ. ಅವರು ಬಾಲಿಗೂ ಹೋಗಿಲ್ಲ. ಜೋಹಾನ್ಸ್ ಬರ್ಗ್ ಗೂ ಹೋಗಿಲ್ಲ. ಅವರ ಮುಂದಿನ ವಿದೇಶ ಪ್ರವಾಸ ಎಲ್ಲಿಗೆ ಎಂಬ ಚರ್ಚೆ ಸದ್ಯಕ್ಕೆ ಜೋರಾಗಿದೆ. ಎಲ್ಲಿಗೆ ಪುಟಿನ್ ಭೇಟಿ ನೀಡ್ತಾರೆ ಎಂದು ಕಾದು ನೋಡೋಣ.