ದೊಡ್ಡವರ ಸಮ್ಮುಖದಲ್ಲಿ ‘ಕಣ್ಣು ಬಿಟ್ಟ ಕರಿಯ!’
ಬಸವನ ನೆಲದಲ್ಲಿ ಬುದ್ಧ, ಭೀಮರ ಕನಸುಗಳನ್ನು ಬೆಳೆಯುವ, ಜೀವಗಳ ಬೆಸೆಯುವ ಘನವಂತರು ಖರ್ಗೆ ಸಾಹೇಬರು ಅನ್ನಿಸಿತ್ತು. ನಾವು ಹೊರಡುವಾಗ ಊಟ, ಪ್ರಯಾಣದ ಬಗ್ಗೆ ವಿಚಾರಿಸಿಕೊಂಡರು. ದೊಡ್ಡವರಿಗೆ ಕೈ ಮುಗಿದು ಹೊರಟೆವು. ಬುದ್ಧ ವಿಹಾರದ ಮುಂದೆ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ನಾಯಕರ ನೋಡುತ್ತ ಹೊರಡುವಾಗ ಖರ್ಗೆ ಸಾಹೇಬರು ಕೂಡ ಎಲ್ಲಾ ಶೋಷಿತರ, ನೊಂದವರ, ಮಹಿಳೆಯರ ಪರವಾಗಿ ಮುಂಚೂಣಿಯಲ್ಲಿ ಅವರ ಒಳಿತಿಗಾಗಿ ಮುನ್ನಡೆಯುತ್ತಿರುವ ಹಾಗೆ ಕಾಣಿಸಿತು.
ಪರಮಹಂಸರ ಒಂದು ಘಟನೆಯನ್ನು ನೆನಪಿಸಿಕೊಳ್ಳುತ್ತ, ಕೆಲವು ವಿಷಯಗಳನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳೋಣವೆಂದು ಕೊಂಡಿದ್ದೇನೆ. ಪರಮಹಂಸರು ಅಧ್ಯಾತ್ಮದಲ್ಲಿ ನಮ್ಮ ನೆಲದ ದೊಡ್ಡ ಹೆಸರು. ಅವರ ಚಿಂತನೆಗಳು, ನಮ್ಮ ನಡೆ ನುಡಿಗಳಿಗೆ ಪ್ರೇರಣೆ ಮತ್ತು ಬದುಕಿನ ಮಾರ್ಗಗಳಿಗೆ ದಾರಿ ದೀಪವೆಂದು, ನಾವೆಲ್ಲ ಭಾವಿಸುತ್ತೇವೆ. ಇದು ನಿಜ ಕೂಡ.
ಅವರು ಒಂದು ಶುಭ್ರ ಮುಂಜಾನೆ ಸ್ನಾನಕ್ಕಾಗಿ ಒಂದು ನದಿ ತೀರಕ್ಕೆ ಬರುತ್ತಾರೆ. ಎಲ್ಲ ಮುಗಿಸಿಕೊಂಡು ಹೊರಡುವಾಗ, ಒಂದು ಚೇಳು ಅವರ ಕಣ್ಣಿಗೆ ಬೀಳುತ್ತದೆ. ಆ ಚೇಳು ನೀರಿನಿಂದ ದಡಕ್ಕೆ ಹತ್ತುತ್ತಿರುವಾಗ ಸರಿಯಾದ ಹಿಡಿತ ಸಿಗದೆ ಮತ್ತೆ ನೀರಿಗೆ ಬೀಳುತ್ತದೆ. ಹೀಗೆ ಎರಡು ಮೂರು ಸಲ ಪ್ರಯತ್ನಿಸಿ, ಮತ್ತೆ ಮತ್ತೆ ನೀರಿಗೆ ಬೀಳುತ್ತಲೇ ಇರುತ್ತದೆ. ಪರಮಹಂಸರು ಸಕಲ ಜೀವಿಗಳ ಲೇಸ ಬಯಸುವವರು. ಅದರ ತೊಂದರೆ ನೋಡಿ ಅದನ್ನು ದಡಕ್ಕೆ ಬೀಡಬೇಕು ಅನ್ನಿಸಿ ಆ ಚೇಳ ಬಳಿಗೆ ಹೋಗುತ್ತಾರೆ. ಇದನ್ನು ಗಮನಿಸಿದ ಅವರ ಶಿಷ್ಯ, ‘ಗುರುಗಳೇ ಅದು ಚೇಳು ಅಪಯಕಾರಿ’ ಎನ್ನುತ್ತಾನೆ. ಇದೆಲ್ಲ ಗೊತ್ತಿಲ್ಲದ ವಿಷಯಗಳೇ ಪರಮಹಂಸರಿಗೆ? ಇಂತಹ ವಿಷ ಜಂತುಗಳಿಗಿಂತಲೂ ಮನುಷ್ಯ ಅಪಾಯಕಾರಿ ಎನ್ನುವುದು ಪರಮಹಂಸರಿಗೆ ತಿಳಿಯದ ವಿಷಯವೇನಲ್ಲ. ಶಿಷ್ಯನ ಮಾತನ್ನು ಲೆಕ್ಕಿಸದೇ ಚೇಳನ್ನು ಮೃದುವಾಗಿ ಹಿಡಿದು ದಡಕ್ಕೆ ಬಿಡುವ ಹೊತ್ತಿಗೆ, ಪರಮಹಂಸರಿಗೆ ಆ ಚೇಳು ಕುಟುಕಿರುತ್ತದೆ. ಚೇಳಿಗೆ ಏನು ಗೊತ್ತು, ಇವರು ಮಹಾ ಅಧ್ಯಾತ್ಮದ ಗುರುಗಳು, ನನ್ನ ರಕ್ಷಿಸಲು ಬಂದಿದ್ದಾರೆ ಎಂದು? ಅದು ಜೀವ ರಕ್ಷಣೆಗಾಗಿ ಕುಟುಕಿರುತ್ತದೆ. ಜಗತ್ತಿನಲ್ಲಿ ಅತಿ ಸಣ್ಣ ಜೀವಿ ಇರುವೆ ಕೂಡ ತನ್ನ ಜೀವ ರಕ್ಷಣೆಗಾಗಿ ನಮ್ಮನ್ನು ಕಚ್ಚುವುದಿಲ್ಲವೇ? ನಾನು ಎಚ್ಚರಿಸಿದ್ದರೂ, ಗುರುಗಳು ಮತ್ತೂ ಮುಂದುವರಿದರಲ್ಲ, ಎಂಬ ಭಾವನೆ ಶಿಷ್ಯನನ್ನು ಕಾಡಿತು. ಆದರೆ ಪರಮಹಂಸರು ಆತನನ್ನು ಗಮನಿಸಿ ‘ನೋಡು, ಚೇಳಿಗೆ ಕುಟುಕುವುದು ಅದರ ಗುಣ. ಆದರೆ ಮನುಷ್ಯ ಮಾತ್ರ, ಇರುವ ತನ್ನ ಒಂದು ದೇಹದಲ್ಲಿ ಸಾವಿರಾರು ಚೇಳುಗಳನ್ನು ಬಚ್ಚಿಟ್ಟುಕೊಂಡಿದ್ದಾನೆ. ಕುಟುಕುವ ಗುಣವೇ ತನ್ನ ಶ್ರೇಷ್ಠ ಜಾತಿಯ ಧರ್ಮ ಎಂದುಕೊಂಡಿದ್ದಾನೆ’ ಎಂದು ಕಿವಿ ಮಾತು ಹೇಳಿದರು. ಇವತ್ತಿನ ಕಾಲಕ್ಕೆ ನೂರು ಪರಮಹಂಸರು ಬಂದು ಇಂತಹ ನೂರಾರು ಉದಾಹರಣೆಗಳನ್ನು ಮುಂದಿಟ್ಟರೂ, ಮನುಷ್ಯ ಜಾತಿ ಧರ್ಮದ ಅಮಲಿನ ಮೇಲಾಟದಲ್ಲಿ ಮೊೆಯುತ್ತಿದ್ದಾನೆ. ಇದಕ್ಕೆ ಔಷದಿಯೇ ಇಲ್ಲವೆನೋ ಎನ್ನುವ ಮಿಲಿಯನ್ ಪ್ರಶ್ನೆಗಳು ನಮ್ಮನ್ನು ಕಾಡುತ್ತಲೇ ಇವೆ. ಇದಕ್ಕೆ ಹೊಂದಿಕೊಂಡಂತೆ ನನ್ನ ಬಾಲ್ಯದಲ್ಲೇ ನಡೆದ ಘಟನೆಯೊಂದನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳಬೇಕೆನ್ನಿಸಿದೆ. ಇದು ಅರವತ್ತು-ಎಪತ್ತರ ದಶಕದಲ್ಲಿ ನಾನು ಪ್ರೈಮರಿ ಶಾಲೆಯಲ್ಲಿ ಕಲಿಯುತ್ತಿದ್ದಾಗ ನಡೆದ ಘಟನೆ. ಉಳಿದ ಸಮುದಾಯದ ಮಕ್ಕಳನ್ನು ಅವರ ಹೆಸರಿನ ಜೊತೆಗೆ ಗೌಡ್ರೆ ಎಂದು ಹೆಸರಿಸಿ ಕರೆಯಬೇಕಿತ್ತು. ಹಾಗೇ ಕರೆಯುವುದನ್ನು ದುರುಪಯೋಗ ಮಾಡಿಕೊಂಡು ಆ ಹುಡುಗರು ನಮ್ಮನ್ನು ‘ ಹೇ ಹುಡುಗ, ಹೇ ಹೊಲೆಯರ ಹುಡುಗ’ ಎಂದು ಕರೆಯುತ್ತಿದ್ದರು. ಇನ್ನು ಕೆಲವರು ‘ಹೇ ಸುಬ್ಬಯ್ಯ’ ಅಂತ ಕೂಗುವುದಕ್ಕೆ ನಾವುಗಳು ಒಗ್ಗಿ ಹೋಗಿದ್ದೆವು. ಕೆಲವೊಮ್ಮೆ ನೋವು, ಅವಮಾನವಾಗುತ್ತಿತ್ತು. ಸಿಟ್ಟು ಬರುತ್ತಿತ್ತು. ನಮ್ಮ ಸಿಟ್ಟು, ಅವಮಾನ, ನೋವಿಗೆ ಬೆಲೆ ಇರುತ್ತಿರಲಿಲ್ಲ. ಸಹಿಸಿಕೊಳ್ಳುವುದೇ ನಮ್ಮ ಸಹನೆಯ ದಮ್ಮ ಆಗಿರುತ್ತಿತ್ತು. ದರ್ಪ ತೋರಿಸುವುದು, ಅವಮಾನಿಸುವುದು ಅವರ
ಜಾತಿಯ ಗುಣ ಎನ್ನುವಂತಿತ್ತು.
ಈಗಲೂ ಗ್ರಾಮಾಂತರ ಪ್ರದೇಶಗಳಲ್ಲಿ ದುರಹಂಕಾರಿ ಜಾತಿಗಳ ದರ್ಪ, ದೌರ್ಜನ್ಯ ಶೇ.99 ಭಾಗ ಹಾಗೇ ಇದೆ. ಆಗ ಬಾಲ್ಯದಲ್ಲಿ ನನಗೆ ಒಮ್ಮೊಮ್ಮೆ ಇದರ ವಿರುದ್ಧ ಸಿಡಿದು ನಿಲ್ಲಬೇಕು ಅನ್ನಿಸುತ್ತಿತ್ತು. ಆದರೆ ನಮ್ಮವ್ವ ಹೇಳುತ್ತಿದ್ದ ಒಂದು ಮಾತು ‘ಮಗನೇ, ಯಾರೇ ಆದರೂ, ‘ಹೋಗಿ ಬನ್ನಿ’ ಂತ
ಮಾತನಾಡಿಸಬೇಕು’ ಎನ್ನುವ ಒಳ್ಳೆಯ ಗುಣ ನನ್ನ ತಲೆಯನ್ನು ಹೊಕ್ಕಿತ್ತು. ನನ್ನ ಸಹಪಾಠಿಯೊಬ್ಬ ನನಗೆ ತುಂಬ ನೋಯಿಸುತ್ತಿದ್ದ. ಅವರ ಮನೆಗೆ ಅವ್ವನೊಟ್ಟಿಗೆ ಹೋದಾಗಲೆಲ್ಲ ‘ಹೇ... ಏನೂ... ಅದು ಮಾಡಲೇ... ಇದು ಮಾಡಲೇ...’ ಅನ್ನುತ್ತಿದ್ದ. ಅವ್ವ ಅವರ ದನಗಳ ಕೊಟ್ಟಿಗೆ ಗುಡಿಸುವಾಗ ‘ನೀನು ಇಲ್ಲೇ ಕುಳಿತಿರು. ಯಾರ ಕಣ್ಣಿಗೂ ಬೀಳಬೇಡ. ನೀನು ಅವರ ಕಣ್ಣಿಗೆ ಬಿದ್ದರೆ ಏನಾದರೂ ಕೆಲಸ ಹೇಳುತ್ತಾರೆ’ ಎಂದು ಹೇಳಿರುತ್ತಿತ್ತು. ಆದರೆ ನಾನು ಅದು ಹೇಗೋ ಅವನ ಕಣ್ಣಿಗೆ ಬಿದ್ದು, ನನ್ನೊಂದಿಗೆ ತುಂಬ ಹಗುರವಾಗಿ ಮಾತನಾಡುತ್ತಿದ್ದ. ಹಾಗೇ ಅಂದಾಗಲೆಲ್ಲ ಅವರ ಮುಖಕ್ಕೆ ಗುದ್ದಿ ಬಿಡಬೇಕೆನ್ನಿಸುತ್ತಿತ್ತು. ಆದರೂ ತಡೆದುಕೊಂಡಿದ್ದೆ . ಒಂದು ದಿನ ಬೆಳಗ್ಗೆ ಅವನು ನಮ್ಮ ಮನೆಗೆ ಬಂದ. ನಾನು ನಮ್ಮ ಮನೆಯ ಪುಟ್ಟ ಜಗಲಿ ಮೇಲೆ ಕುಳಿತು, ಬಿಸಿಲು ಕಾಯಿಸುತ್ತಿದ್ದೆ. ನನ್ನ ನೋಡಿ ‘ಹೇ... ಏನಾ?’ ಅಂದ. ನಾನು ಆತನನ್ನು ಗಮನಿಸದ ಹಾಗೆ ಕುಳಿತೇ ಇದ್ದೆ. (ಅವರಪ್ಪ ನಮ್ಮ ಮನೆಯ ಎದುರು ಬಂದಾಗ ನಾವು ಎದ್ದು ಒಳಗೆ ಹೋಗಬೇಕಿತ್ತು). ನಾನು ಅವನಿಗೆ ಕಿವಿಗೊಡದೇ ಇದ್ದುದನ್ನು, ಗಮನಿಸಿ ಅವ್ವನನ್ನು ಕುರಿತು ‘ಹೇ ತಿಪ್ಪಿ... ತಿಪ್ಪಿ....’ ಅಂತ ಏಕವಚನದಲ್ಲಿ ಕೂಗಿದ. ನನಗೆ ಎಲ್ಲಿತ್ತೊ ಸಿಟ್ಟು . ನರಪೇತನಂತಿದ್ದ ನಾನು ಛಂಗನೆ ನೆಗೆದು ಅವನ ಕೊರಳಿಗೆ ಕೈ ಹಾಕಿ ಬೀಳಿಸಿ ಎರಡು ಬಿಗಿದೆ. ಅವನು ಕೂಗಿಕೊಂಡ. ಅವ್ವ ಒಳಗಿನಿಂದ ಏನಾಯಿತೋ ಎಂದೂ ಓಡಿ ಬಂದು ಜಗಳ ಬಿಡಿಸಿ ನನ್ನ ಕೆನ್ನೆಗೆ ಎರಡು ಬಾರಿಸಿ ಬಳಿಕ ‘ಅಯ್ಯಾ... ಗೌಡ್ರ ಮಕ್ಕಳಿಗೆ ಹೊಡಿತ್ತಾರಾ? ನಿನ್ನ ಬಾಯಿಗೆ ಮಣ್ಣಾಕಾ? ನನ್ನ ಮಾನ ಮರ್ಯಾದೆ ತೆಗೆದಲ್ಲ ’ ಎಂದು ಹಣೆ ಬಡಿದುಕೊಳ್ಳುತ್ತಿತ್ತು. ಅವನು ಕ್ಷಣ ಮಾತ್ರದಲ್ಲಿ ಓಡಿ ಹೋಗಿದ್ದ . ನನಗೆ ಅದು ಎಲ್ಲಿತ್ತೋ ಶಕ್ತಿ?
ಇದೆಲ್ಲ ಕ್ಷಣ ಮಾತ್ರದಲ್ಲಿ ನಡೆದು ಹೋಗಿತ್ತು. ಇವತ್ತು ಯಾವ ಮಗ್ಗುಲಲ್ಲಿ ಎದ್ದೆನೂ ಕಾಣೇ... ‘ಇನ್ನ ಊರಲ್ಲಿ ನಾನು ತಲೆ ಎತ್ತಿಕೊಂಡು ಹೆಂಗೆ ಬದುಕೋದು? ಆ ಗೌಡ್ರ ಬಿಡ್ತಾರಾ, ಸಣ್ಣ ಗೌಡ್ರು ಹೋಗಿ ಹೇಳಿ, ಈಗ ಅವ್ರ ಬತ್ತಾರೆ ತಡಿ. ನಿನ್ನ ಚರ್ಮ ಸುಲಿತ್ತಾರೆ’ ಅಂತ ಹೇಳುತ್ತಲೆ ಇತ್ತು.
ನನ್ನ ಶಕ್ತಿಯನ್ನೆಲ್ಲ ಉಪಯೋಗಿಸಿಕೊಂಡು ‘ಅವ್ವ... ಸುಮ್ಮನಿರವ್ವ ’ ಅಂತ ಕೂಗಿದೆ. ಅವ್ವನ ಬಾಯಿ ಬಂದಾಯಿತು. ‘ಯಾಕವ್ವ ಅವನು ನಿನ್ನ ಹೆಸರಿಡಿದು ಏಕವಚನದಲ್ಲಿ ಕರಿಬೇಕು?’ ಎಂದು ಕೇಳಿದೆ. ಅವ್ವ ಸ್ವಲ್ಪ ಹೊತ್ತು ಸುಮ್ಮನಿದ್ದು ನನ್ನ ಸಮಾಧಾನ ಮಾಡುವುದಕ್ಕೆ ಬಂತು. ನಾನು ಅವ್ವನಿಗೆ ‘ಹೇಳವ್ವ , ನನ್ನ ವಯಸ್ಸಿನ ಅವನು ನಿನ್ನ ಹೆಸರಿಡಿದು ಏಕವಚನದಲ್ಲಿ ಮಾತನಾಡುವುದು ಸರಿಯೇ?’ ಅಂದೆ. ಅವ್ವ ನನ್ನ ಬೆನ್ನು ಸವರುತ್ತ ‘ಹೋಗಲಿ ಬಿಡು ಮಗನೇ. ಅವರ ‘ಬುದ್ಧಿಮಟ್ಟನೇ’ ಅಷ್ಟು ಅಂತ ಸಮಾಧಾನ ಮಾಡಿತು. ಅವ್ವ ನನಗೆ ಕೆನ್ನೆಗೆ ಹೊಡೆದ ಬೆರಳುಗಳ ಅಚ್ಚು ಹೊತ್ತಿದ್ದವು. ಆದರೆ ಸಿಟ್ಟಿನ ಆವೇಗದಲ್ಲಿ ಅವ್ವ ಹೊಡೆದಿದ್ದು ನೋವೇ ಆಗಿರಲಿಲ್ಲ. ಈ ಘಟನೆಯನ್ನು ಕವಿತಾ ಲಂಕೇಶ್ ಮೇಡಮ್ ಅವರು ನನ್ನ ಪುಟ್ಟ ಕಥೆ ಆಧಾರಿತ ‘ಕರಿಯ ಕಣ್ಣ್ ಬಿಟ್ಟ’ ಎನ್ನುವ ಕಲಾತ್ಮಕ ಚಿತ್ರದಲ್ಲಿ ಚಿತ್ರಿಸಿದ್ದಾರೆ.
ಈ ಮೇಲ್ಕಂಡ ಎರಡು ಘಟನೆಗಳನ್ನು ಹೇಳುವುದಕ್ಕೆ ಕಾರಣವಿದೆ. ಒಂದು ಆದ್ಯಾತ್ಮಿಕ ಅರಿವನ್ನು ತಿಳಿ ಹೇಳುತ್ತದೆ. ಇದರಲ್ಲಿ ಕುಟುಕುವ ಪ್ರಾಣಿ ಪಕ್ಷಿಗಳಿಗೆ ಚಿಂತಿಸುವುದಕ್ಕೆ ಅವಕಾಶವಿಲ್ಲ. ಎರಡನೆಯದು ಘಟನೆಯಲ್ಲಿ ಅವಿವೇಕ, ಅಸಮಾನತೆ ಎದ್ದು ಕಾಣುತ್ತದೆ. ನಮ್ಮ ದೇಶದಲ್ಲಿ ಅತ್ಯಂತ ಶ್ರೇಷ್ಠ ಸಂವಿಧಾನವಿದೆ ಮತ್ತು ಪ್ರಜಾಪ್ರಭುತ್ವವಿದೆ. ಆದರೆ ನಮ್ಮ ಸಮಾಜದಲ್ಲಿ ಈಗಲೂ ಶತಮಾನಗಳಿಂದ ನಡೆದುಕೊಂಡು ಬಂದಿರುವ ಧರ್ಮ, ಜಾತಿ, ಮೇಲು, ಕೀಲು, ಅಸ್ಪಶ್ಯತೆ, ಲಿಂಗಭೇದ ಅಸ್ತಿತ್ವದಲ್ಲಿವೆ. ಇದರಿಂದ ಘೋರ ಕೃತ್ಯಗಳು ನಡೆಯುತ್ತಲೇ ಇವೆ. ಇದರಿಂದಾಗಿ ತಳ ಸಮುದಾಯಗಳಿಗೆ ವ್ಯಕ್ತಿ ಗೌರವ, ಮಾನವೀಯತೆ, ಪ್ರೀತಿ, ಕಾರುಣ್ಯ, ಮೈತ್ರಿ ಮುಂತಾದ ನಡೆನುಡಿಗಳು ಗೌಣವಾಗಿವೆ. ಇದರಿಂದ ಆ ಸಮುದಾಯಗಳಲ್ಲಿ ಎಷ್ಟು ದೊಡ್ಡವರಿರಲಿ, ಅವರು ಎಂತಹ ಅತ್ಯುನ್ನತ ಕಾರ್ಯಕ್ಕೆ ಪಾತ್ರರಾಗಿದ್ದರೂ ಅವರನ್ನು ಮುಂದೆ ಹೊಗಳುತ್ತ ಹಿಂದೆ ಅಂತಹವರನ್ನು ಇಂತಹ ಜಾತಿಗೆ ಸೇರಿದ್ದವರು ಎಂದು ಹೇಳುವುದು, ಇವರ ಮೆದುಳಿಗೆ ಅಂಟಿಕೊಂಡ ವಾಸಿ ಮಾಡಲಾಗದ ಘೋರ ಕಾಯಿಲೆಯಾ
ಗಿದೆ. ಈ ಹೊತ್ತಿಗೂ ವಿಶ್ವಜ್ಞಾನಿ, ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಭೀಮಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗಳನ್ನು, ಭಾವ ಚಿತ್ರಗಳನ್ನು, ಇವರ ಬರಹಗಳನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎನ್ನುವುದನ್ನು ನಾವು ಕಾಣಬಹುದು.
ತಳ ಸಮುದಾಯಗಳನ್ನು ಅವಮಾನಿಸುವುದು ಅಂದರೆ ಕೆಲವರಿಗೆ ಹಾಲು ಅನ್ನ ಉಂಡಷ್ಟು ಖುಷಿಯೆನಿಸುತ್ತದೆ. ಸಕಲ ಜೀವಿಗಳ ಲೇಸನ್ನು ಬಯಸಿದ ಬಸವಣ್ಣನವರು ಶರಣು ಶರಣಾರ್ಥಿ ಎಂದಿದ್ದಕ್ಕೆ ಹರಳಯ್ಯ ದಂಪತಿ ಮಾಡಿದ ಕಾರ್ಯ ಇನ್ನೂ ದೊಡ್ಡದು. ಇದನ್ನು ನೋಡಿದ ಬಸವಣ್ಣ ಚಮ್ಮಾಲಿಗೆಯನ್ನು ತಲೆ ಮೇಲೆ ಹೊತ್ತುಕೊಂಡು ನಡೆದರು. ನಾವು ಗೌರವ ಕೊಟ್ಟರೆ ನಮ್ಮ ಗೌರವ ಹೆಚ್ಚಾಗುತ್ತದೆ. ಗೌರವ ಪಡೆದವರ ಹೃದಯ ಸಂತೋಷ ಪಡುತ್ತದೆ. ಆದರೆ, ತುಳಿವುದರಲ್ಲೇ ಸಂತೋಷ ಪಡುವ ಮಂದಿಗೆ ಅದು ವಾಸಿಯಾಗದ ಕಾಯಿಲೆಯಾಗಿ ಉಳಿದಿದೆ.
ಈ ನಾಡಿನ ದೇಶದ ಶ್ರೇಷ್ಠ ರಾಜಕಾರಣಿ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ ಐದು ದಶಕಗಳಿಂದಲೂ ಹೆಚ್ಚು ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಪಕ್ಷದ ಸಾಮಾನ್ಯ ಕಾರ್ಯಕರ್ತನಾ
ಗಿದ್ದ ಇವರು, ಈ ಹೊತ್ತು ಆ ಪಕ್ಷದ ಮುಖ್ಯ ನೇತಾರರಾಗಿ ಬೆಳೆದು ನಿಂತಿದ್ದಾರೆ. ಪಕ್ಷ ವಹಿಸಿದ ಎಲ್ಲಾ ಜವಾಬ್ದಾರಿಗಳನ್ನು ಅತ್ಯಂತ ಪ್ರೀತಿಯಿಂದ ನಿಷ್ಠೆ ಮತ್ತು ಶ್ರದ್ಧೆಯಿಂದ ನಾಡಿನ ಜನತೆ ಒಪ್ಪುವಂತೆ ಕೆಲಸ ಮಾಡಿದ್ದಾರೆ. ವಿಶೇಷವಾಗಿ ಬುದ್ಧ, ಬಸವ, ಅಂಬೇಡ್ಕರ್‌ರವರ ಕನಸುಗಳನ್ನು ಸಾಕಾರಗೊಳಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಾ ಬಂದಿದ್ದಾರೆ. ಇಂತಹ ನಾಯಕರು ಮಾಡಿದ ಕೆಲಸಗಳನ್ನು ಅವಮಾನಿಸುವ ಹಾಗೆ ಯಾರೋ ಒಬ್ಬರು ಮಾತನಾಡಿದ್ದಾರೆ ಎಂದು ಗೆಳೆಯರೊಬ್ಬರು ತುಂಬ ನೋವಿನಿಂದ ನನ್ನೊಡನೆ ಹಂಚಿಕೊಂಡರು. ಅದಕ್ಕೆ ನಾನು ಕೆಲವರಿಗೆ ನಾವು ಮನುಷ್ಯರಂತೆ ಬಾಳುವುದು ಇಷ್ಟವಿಲ್ಲ. ಅಂತಹವರು ತಮ್ಮ ಮೈ ಪರಚಿಕೊಂಡು ಮಾತನಾಡುತ್ತಾರೆ. ಪರಮಹಂಸರು ಹೇಳಿದ ಕುಟುಕುವ ಗುಣ ಇವರದ್ದು ಮತ್ತು ನಮ್ಮವ್ವ ಹೇಳಿದ ಹಾಗೆ, ಕೆಲವರ ಬುದ್ಧಿಮಟ್ಟವೇ ಅಷ್ಟು.
ಡಾ. ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರ ರಾಜಕಾರಣದಲ್ಲಿ ಮುಂಚೂಣಿಯಲ್ಲಿರುವವರು. ಇವರ ಅರಿವು, ಬುದ್ಧಿಮತ್ತೆ, ಅನುಭವ ಮತ್ತು ಇವರ ಅಪಾರ ಓದು ಇವರನ್ನು ಘನವಂತರನ್ನಾಗಿ ರೂಪಿಸಿದೆ. ಇವರು ಗಂಭೀರವಾಗಿರುವುದು, ನಗದೇ ಇರುವುದು ಒಂದು ದೌರ್ಬಲ್ಯವೇ?. ರಾಜಕಾರಣದ ಸಾರ್ವಜನಿಕ ಬದುಕು ಎಂದರೆ ಟೀಕೆ-ಟಿಪ್ಪಣಿ ಸಹಜ. ಆದರೆ ಉದ್ದೇಶಪೂರ್ವಕವಾಗಿ ಅವರನ್ನು ಜರಿಯುವುದು, ಈ ಸಮಾಜದ ಮತ್ತು ಜಾತಿಯ ಮಾನಸಿಕ ದಾರಿದ್ರ್ಯವೆಂದು ಅನ್ನಿಸಿದೆ. ನಾನು ಅವರನ್ನು ಒಂದೆರಡು ಭಾರಿ ಬೇಟಿಯಾಗಿದ್ದೇನೆ. ಮೊದಲ ಸಲ ಡಾ.ಶಿವಲಿಂಗಯ್ಯ ಅವರೊಂದಿಗೆ. ಆಕಾಶವಾಣಿಗೆ ಬಾಬಾ ಸಾಹೇಬರ ಚಿಂತನೆ ಕುರಿತು ಮಾತನಾಡಲಿಕ್ಕೆಂದು ಅವರನ್ನು ಭೇಟಿ ಮಾಡಿದ್ದೆ. ಆಗ ಅವರು ನಮ್ಮಿಬ್ಬರನ್ನೂ ಪ್ರೀತಿಯಿಂದ ಸ್ವಾಗತಿಸಿದ್ದರು. ಭೀಮಾ ಸಾಹೇಬರ ಬಗ್ಗೆ ಅಪರೂಪದ ಘಟನೆಗಳನ್ನು ಪಾರ್ಲಿಮೆಂಟಿನಲ್ಲಿ ಆಡಿದ ಮಾತುಗಳ ಬಗ್ಗೆ ಹೇಳಿದರು. ಜೊತೆಗೆ ಇಂತಹದೇ ಪುಟದಲ್ಲಿ ಹೀಗೆ ಹೇಳಿದ್ದಾರೆ ಎಂದು ನಮಗೆ ಬೆರಗು ಮೂಡಿಸುವಂತಹ ಮಾತುಗಳನ್ನು
ಅವತ್ತು ಆಡಿದ್ದರು.
ಹಾಗೇ ಇನ್ನೊಂದು ಅವರೂಪದ ಸಮಾರಂಭಕ್ಕೆ ನಾನು ಮುಖ್ಯ ಭಾಷಣಕಾರನಾಗಿ ಹೋಗಿದ್ದಾಗ ಖರ್ಗೆ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. 16-5-2022 ರಂದು ಬುದ್ಧ ಪೂರ್ಣಮಿಯ ಮಹಾ ದಿನದಂದು ಖರ್ಗೆ ಸಾಹೇಬರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರ ಎದುರಿಗೆ ಬುದ್ಧ್ದನ ಕುರಿತು ಮಾತನಾಡಿದೆ. ವೇದಿಕೆಯಲ್ಲಿ ನಾವಿಬ್ಬರೇ. ದೊಡ್ಡವರ ಎದುರಿನಲ್ಲಿ ನಿಂತು ನನ್ನಂತಹವರು ಮಾತನಾಡುವುದು ಅಷ್ಟು ಸುಲಭದ ವಿಷಯವಲ್ಲ. ನಾನು ಇದಕ್ಕಾಗಿ ಹದಿನೈದು ದಿನಗಳ ಪೂರ್ವ ತಯಾರಿ ನಡೆಸಿದ್ದೆ ಮತ್ತು ಅನೇಕ ಹಿರಿಯರೊಂದಿಗೆ ಬುದ್ಧನ ಕುರಿತು ವಿಷಯಗಳನ್ನು ತಿಳಿದುಕೊಂಡೆ. ಅಂತಿಮವಾಗಿ ಭೀಮ ಸಾಹೇಬರು ಬರೆದ ‘‘ಬುದ್ಧ ಮತ್ತು ದಮ್ಮ’’ ಕೃತಿ ನನ್ನ ಭಾಷಣಕ್ಕೆ ಸಹಾಯವಾಯಿತು. ಒಟ್ಟು ಎಂಟು ಪುಟಗಳ ಭಾಷಣದಲ್ಲಿ ನಡುನಡುವೆ ಬುದ್ಧ ದಮ್ಮ ಶೋಷಿತರಿಗೆ, ನೊಂದವರಿಗೆ, ಎಷ್ಟು ಅನಿವಾರ್ಯ ಎನ್ನುವುದನ್ನು ಸಭಿಕರಿಗೆ ಮನವರಿಕೆ ಆಗುವಂತೆ ಮಾತನಾಡಿದೆ. ಇಪ್ಪತೈದು ನಿಮಿಷಕ್ಕೆ ನಿಗದಿಪಡಿಸಿಕೊಂಡಿದ್ದ ನನ್ನ ಭಾಷಣ ಮೂವತ್ತು ನಿಮಿಷಕ್ಕೆ ಮುಗಿಯಿತು. ಅಷ್ಟು ಹೊತ್ತು ಖರ್ಗೆ ಸಾಹೇಬರು ಗಂಭೀರವಾಗಿ ಕೇಳಿಸಿಕೊಂಡಿದ್ದರು. ಇದು ನನ್ನ ಜೀವನದ ಮಹತ್ವದ ಕ್ಷಣಗಳಾಗಿದ್ದವು. ನನ್ನ ಮಾತುಗಳ ನಂತರ ಖರ್ಗೆ ಸಾಹೇಬರು ಮಾತನಾಡುತ್ತ, ಸುಬ್ಬು ಅವರು ಅಕಾಡಮಿಕ್ ಆಗಿ ಮಾತನಾಡಿದರು ಮತ್ತು ಅವರ ಮಾತುಗಳಿಂದ ನೀವು ಪ್ರೇರಣೆ ಪಡೆಯಬೇಕು, ಎನ್ನುತ್ತ ಬುದ್ಧ ಭೀಮ ಸಾಹೇಬರ ಕುರಿತು ತುಂಬ ಒಳ್ಳೆಯ ವಿಚಾರಗಳನ್ನು ಹೇಳಿದರು. ಸಭೆಯು ಮುಗಿಯುತ್ತಿದ್ದಂತೆ, ಜನ ಅವರ ಬಳಿ ಧಾವಿಸಿದ್ದರು. ನನ್ನನ್ನು ಅಲ್ಲಿಗೆ ಬರಮಾಡಿಕೊಂಡ ಡಾ. ಅಪ್ಪೆಗೆರೆ ಸೊಮಶೇಖರ್ ಮತ್ತು ಗೆಳೆಯರು, ನನ್ನ ಭಾಷಣದ ಬಗ್ಗೆ ಮಾತನಾಡಿದರು. ಆದರೆ ನನಗ್ಯಾಕೊ ಸಾಹೇಬರು ‘ಅಕಾಡಮಿಕ್ ಆಗಿ ಮಾತನಾಡಿದರು’ ಎಂದಿದ್ದು ಸಮಾಧಾನವಾಗಲಿಲ್ಲ.
ಸರಿ, ಊಟದ ಸಮಯವಾದುದರಿಂದ ಊಟಮಾಡಿ ವಿಶ್ರಾಂತಿ ತೆಗೆದುಕೊಂಡೆವು. ಸಂಜೆ ಟ್ರೈನ್‌ಗೆ ಹೋಗುವ ಮುಂಚೆ ಸಾಹೇಬರಿಗೆ ಹೇಳಿ ಹೋಗೋಣವೆಂದು ಸ್ನೇಹಿತರಿಗೆ ಕೇಳಿಕೊಂಡೆ. ಅದಕ್ಕೆ ಅವರು ‘ ಸಂಜೆ ಬುದ್ಧ ವಿಹಾರಕ್ಕೆ ಬಂದಿರುತ್ತಾರೆ. ಅಲ್ಲಿಗೆ ಹೋಗೊಣ’ ಎಂದರು. ನಾವು ಮತ್ತೆ ಬುದ್ಧ ವಿಹಾರಕ್ಕೆ ಹೋದಾಗ ಖರ್ಗೆ ಸಾಹೇಬರು ಬಸವಾದಿ ಶರಣರ ವಚನಗಳನ್ನು ಆಲಿಸುತ್ತಿದ್ದರು. ಸ್ಥಳೀಯ ಗಾಯಕರು ಅದ್ಭುತವಾಗಿ ಹಾಡುತ್ತಿದ್ದರು. ಇದರ ರಸಭಂಗ ಮಾಡಬಾರದೆಂದು ಒಂದು ಘಳಿಗೆ ಅಲ್ಲಿಯೇ ನಿಂತೆವು. ಆಕಸ್ಮಿಕವಾಗಿ ಗಮನಿಸಿದ ಸಾಹೇಬರು, ನಮ್ಮ ಕಡೆ ಕೈ ಬೀಸಿ ಕರೆದರು. ಹಿರಿಯ ದಂಪತಿ ನಡುವೆ ಅಕ್ಕ ಪಕ್ಕ ಕುರ್ಚಿ ಖಾಲಿ ಇದ್ದವು. ನಮ್ಮಿಬ್ಬರನ್ನು ಅಕ್ಕ ಪಕ್ಕ ಕೂರಿಸಿಕೊಂಡು ಮಾತನಾಡಿಸಿದರು. ಬೆಳಗ್ಗಿನ ಭಾಷಣದ ಬಗ್ಗೆ, ವಿಶೇಷವಾಗಿ ‘ಬಿಸಿಲೂರಿಗೆ ಬಂದ ಬುದ್ದ ಬೆಳದಿಂಗಳು’ ಎನ್ನುವ ಮಾತನ್ನು ನೆನಪು ಮಾಡಿಕೊಂಡ ಅವರು ಕೆಲಸದ ಬಗ್ಗೆ, ಮಕ್ಕಳ ಬಗ್ಗೆ ವಿಚಾರಿಸಿದರು. ಅವರ ಮಧ್ಯೆ ನಾವು ಪುಟ್ಟ ಮಕ್ಕಳಾಗಿದ್ದೆವು. ಇದು ನಮ್ಮ ಜೀವನದ ಅನುಭೂತಿ ಪಡೆದ ಕ್ಷಣಗಳೆನ್ನಿಸಿದ್ದವು. ಬಸವನ ನೆಲದಲ್ಲಿ ಬುದ್ಧ, ಭೀಮರ ಕನಸುಗಳನ್ನು ಬೆಳೆಯುವ, ಜೀವಗಳ ಬೆಸೆಯುವ ಘನವಂತರು ಖರ್ಗೆ ಸಾಹೇಬರು ಅನ್ನಿಸಿತ್ತು. ನಾವು ಹೊರಡುವಾಗ ಊಟ, ಪ್ರಯಾಣದ ಬಗ್ಗೆ ವಿಚಾರಿಸಿಕೊಂಡರು. ದೊಡ್ಡವರಿಗೆ ಕೈ ಮುಗಿದು ಹೊರಟೆವು. ಬುದ್ಧ ವಿಹಾರದ ಮುಂದೆ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ನಾಯಕರ ನೋಡುತ್ತ ಹೊರಡುವಾಗ ಖರ್ಗೆ ಸಾಹೇಬರು ಕೂಡ ಎಲ್ಲಾ ಶೋಷಿತರ, ನೊಂದವರ, ಮಹಿಳೆಯರ ಪರವಾಗಿ ಮುಂಚೂಣಿಯಲ್ಲಿ ಅವರ ಒಳಿತಿಗಾಗಿ ಮುನ್ನಡೆಯುತ್ತಿರುವ ಹಾಗೆ ಕಾಣಿಸಿತು.