ಕೇರಳ: ಯುಡಿಎಫ್ ಕ್ಲೀನ್ ಸ್ವೀಪ್ ಹಾದಿಗೆ ಸ್ಥಾನ ಹಂಚಿಕೆ ಸೂತ್ರ ತೊಡಕಾದೀತೇ?
ಸರಣಿ 14
ಅಧಿಕಾರದಲ್ಲಿಲ್ಲದಿದ್ದರೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಾಬಲ್ಯ. ಏಕೈಕ ಸ್ಥಾನಕ್ಕೆ ಕುಸಿದಿರುವ ಎಡಪಕ್ಷ. ಹಿಂದುತ್ವ ಸಂಘಟನೆ ಜೋರಾಗಿದ್ದರೂ ರಾಜಕೀಯ ನೆಲೆಯನ್ನೇ ಕಂಡುಕೊಳ್ಳಲಾರದ ಬಿಜೆಪಿ. ಇದು ಕೇರಳದಲ್ಲಿನ ಸನ್ನಿವೇಶ. ಈ ಸಲದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಇನ್ನೂ ದೊಡ್ಡ ಗೆಲುವಿನ ಗುರಿಯೊಂದಿಗೆ ಕಾರ್ಯೋನ್ಮುಖವಾಗಿದೆ. ಪಿಣರಾಯಿ ವಿಜಯನ್ ಪಡೆ ಕೂಡ ಪ್ರತಿತಂತ್ರ ಹೆಣೆಯದೇ ಇಲ್ಲ. ಕೇರಳದಲ್ಲಿ ನೆಲೆಯೂರಲು ಶತಪ್ರಯತ್ನದಲ್ಲಿರುವ ಬಿಜೆಪಿಯ ಆಟವೂ ಕುತೂಹಲ ಕೆರಳಿಸಿದೆ.
20 ಲೋಕಸಭಾ ಸ್ಥಾನಗಳಿರುವ ಕೇರಳದ ಒಟ್ಟು 3.46 ಕೋಟಿ ಜನಸಂಖ್ಯೆಯಲ್ಲಿ ಶೇ.54.73 ಹಿಂದೂಗಳಿದ್ದರೆ ಮುಸ್ಲಿಮರು ಶೇ.26.56 ಹಾಗೂ ಕ್ರೈಸ್ತರು ಶೇ.18.38
ಕೇರಳದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ 19 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಅದರಲ್ಲಿ ಕಾಂಗ್ರೆಸ್ ಗೆದ್ದ ಸೀಟುಗಳೇ 15 ಇದ್ದವು.
2014ರಲ್ಲಿಯೂ 12 ಸೀಟುಗಳು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪಾಲಾಗಿದ್ದರೆ, ಉಳಿದ 8ರಲ್ಲಿ ಎಲ್ಡಿಎಫ್ ಗೆದ್ದಿತ್ತು. ಬಿಜೆಪಿಗೆ ಇಲ್ಲಿ ನೆಲೆಯೂರಲು ಆಗಿಲ್ಲ.
2016ರಿಂದ ಕಾಂಗ್ರೆಸ್ ಕೇರಳದಲ್ಲಿ ಅಧಿಕಾರದಲ್ಲಿಲ್ಲ. ಹಾಗಿದ್ದೂ 2019ರ ಲೋಕಸಭೆ ಚುನಾವಣೆಯಲ್ಲಿ ಯುಡಿಎಫ್ ಮೈತ್ರಿಕೂಟ ಒಟ್ಟು 20ರಲ್ಲಿ 19 ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಾಬಲ್ಯ ಸಾಧಿಸಿದೆ.
ಈಗ 2024ರ ಚುನಾವಣೆಯಲ್ಲೂ ಅಂಥದೇ ಸಾಧನೆಗಾಗಿ ರಾಜ್ಯ ಕಾಂಗ್ರೆಸ್ ತಯಾರಿ ನಡೆಸಿದೆ.
ಇತ್ತೀಚೆಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದ ರಾಜ್ಯ ಕಾಂಗ್ರೆಸ್ ನಾಯಕರು ದೊಡ್ಡ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿರುವುದಾಗಿ ವರದಿಗಳು ಹೇಳುತ್ತಿವೆ.
ರಾಜಕೀಯ ಪರಿಸ್ಥಿತಿ ನಮಗೆ ಅನುಕೂಲಕರವಾಗಿದೆ. ರಾಜ್ಯದಲ್ಲಿ ಈಗಿರುವ ಸರಕಾರ ಹೆಸರು ಕೆಡಿಸಿಕೊಂಡಿದೆ. ಮುಖ್ಯಮಂತ್ರಿ ಪಿಣರಾಯಿ ಮೇಲೆ ಜನತೆ ಭರವಸೆ ಕಳೆದುಕೊಂಡಿದ್ದಾರೆ. ಸರಕಾರದ ಭ್ರಷ್ಟಾಚಾರ ಬಯಲು ಮಾಡಲಿದ್ದೇವೆ. ಗೆಲುವಿನ ವಿಶ್ವಾಸ ಹೊಂದಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ.
ಇತ್ತೀಚೆಗೆ ನಡೆದ ಪುತ್ತುಪ್ಪಲ್ಲಿ ಉಪಚುನಾವಣೆಯ ಗೆಲುವು ಕೇರಳದಲ್ಲಿ ಕಾಂಗ್ರೆಸ್ಗೆ ನೈತಿಕ ಸ್ಥೈರ್ಯವನ್ನು ತಂದಿದೆ, ಕಾಂಗ್ರೆಸ್ ನಾಯಕರಾಗಿದ್ದ ಉಮ್ಮನ್ ಚಾಂಡಿ ಅವರ ಪುತ್ರ ಚಾಂಡಿ ಉಮ್ಮನ್ ಅವರು ತಮ್ಮ ತಂದೆಯ ತವರು ಕ್ಷೇತ್ರದಲ್ಲಿ ಸಿಪಿಐ(ಎಂ) ಅನ್ನು ಮಣಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲೂ ಇದೇ ರೀತಿಯ ಗೆಲುವನ್ನು ಸಾಧಿಸುವ ವಿಶ್ವಾಸವನ್ನು ಕಾಂಗ್ರೆಸ್ ಹೊಂದಿದ್ದು, ಎಲ್ಲಾ 20 ಕ್ಷೇತ್ರಗಳನ್ನು ಗೆಲ್ಲುವ ಗುರಿಯೊಂದಿಗೆ ಕಾರ್ಯಪ್ರವೃತ್ತವಾಗಿದೆ.
ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣರಾದ ಚುನಾವಣಾ ತಂತ್ರಗಾರ ಸುನಿಲ್ ಕನುಗೋಳು ಅವರ ಸಲಹೆಯೊಂದಿಗೆ ಕೇರಳ ರಾಜ್ಯ ಕಾಂಗ್ರೆಸ್ ಕೂಡ ಚುನಾವಣಾ ತಂತ್ರ ರೂಪಿಸುತ್ತಿದೆ ಎನ್ನಲಾಗಿದೆ.
ಎಲ್ಡಿಎಫ್ ಸರಕಾರ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕುಟುಂಬದಲ್ಲಿನ ಭ್ರಷ್ಟಾಚಾರವನ್ನು ಜನರ ಮುಂದಿಡುವ ರೀತಿಯಲ್ಲಿ ಪ್ರಚಾರವನ್ನು ರೂಪಿಸಲಾಗುತ್ತಿದೆ. 140 ವಿಧಾನಸಭಾ ಕ್ಷೇತ್ರಗಳಲ್ಲೂ ಜನ ಜಾಗೃತಿ ಸಭೆಗಳನ್ನು ಆಯೋಜಿಸುತ್ತಿದೆ.
ಎಲ್ಲ ಕ್ಷೇತ್ರಗಳನ್ನೂ ಗೆಲ್ಲಲು ಹೀಗೆ ಕಾಂಗ್ರೆಸ್ ತಂತ್ರ ರೂಪಿಸಿರುವಾಗ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಸುಮ್ಮನಿರಲಾರರು ಎನ್ನಲಾಗಿದೆ. ಪಿಣರಾಯಿ ವಿಜಯನ್ ಅವರಿಗೆ ಈಗಿನ ರಾಜಕೀಯ ಪರಿಸ್ಥಿತಿಯ ಅರಿವಿದೆ. ಅವರು ತಮ್ಮ ಎದುರಾಳಿಗಳನ್ನು ಗುರಿಯಾಗಿಸುವ ಎಲ್ಲಾ ಸಾಧ್ಯತೆಗಳನ್ನು ಬಳಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಅಧಿಕೃತವಾಗಿ ಘೋಷಿಸದೆಯೂ ಪಿಣರಾಯಿ ಈಗಾಗಲೇ ತಮ್ಮ ಪ್ರಚಾರವನ್ನು ಆರಂಭಿಸಿದ್ದಾರೆ, ಪ್ರದೇಶವಾರು ಸಾರ್ವಜನಿಕ ಸಂಪರ್ಕ ಸಭೆಗಳ ಮೂಲಕ ತಮ್ಮ ಸರಕಾರದ ಯೋಜನೆಗಳ ಪ್ರಗತಿ ಪರಿಶೀಲನೆಗೆ ಅವರು ತಮ್ಮ ಸಚಿವರುಗಳಿಗೆ ಸೂಚಿಸಿದ್ದಾರೆ. ಪ್ರಗತಿ ಪರಿಶೀಲನಾ ಕಾರ್ಯ ಆರಂಭವಾಗಿದ್ದು ಜನರ ದೂರು ಆಧರಿಸಿ ಕುಂದುಕೊರತೆ ಪರಿಹರಿಸುವತ್ತ ಸರಕಾರ ಗಮನ ಹರಿಸಿದೆ.
ಈ ನಡುವೆ ರಾಜ್ಯದಲ್ಲಿ ಕಾಂಗ್ರೆಸ್ ಬಿಜೆಪಿಯ ಬಿ ಟೀಂ ಆಗಿದೆ ಎಂಬ ಆರೋಪವನ್ನೂ ಸಿಪಿಐಎಂ ಮಾಡುತ್ತಿದೆ.
ಲೋಕಸಭೆ ಚುನಾವಣೆಗೆ ನಮ್ಮಲ್ಲಿ ಸ್ಪಷ್ಟ ಕಾರ್ಯತಂತ್ರವಿದೆ. ಹೆಚ್ಚು ಸ್ಥಾನಗಳನ್ನು ಗೆಲ್ಲುವುದಕ್ಕೆ ಪ್ರಯತ್ನ ನಡೆದಿದೆ. ಕೇರಳದ ಜನರು ಪಿಣರಾಯಿ ಸರಕಾರದ ಕಲ್ಯಾಣ ವಿತರಣೆಯನ್ನು ಮೆಚ್ಚಿದ್ದಾರೆ ಎಂದು ಸಿಪಿಐಎಂ ಹೇಳುತ್ತಿದೆ.
2019ರಲ್ಲಿ, ವಯನಾಡಿನ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಸ್ಪರ್ಧಿಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವುದಕ್ಕೆ ಅದು ಕೂಡ ಸಹಾಯ ಮಾಡಿತು. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಶೇ.47.48ರಷ್ಟು ಮತಗಳನ್ನು ಮತ್ತು 19 ಸ್ಥಾನಗಳನ್ನು ಪಡೆದಿದ್ದರೆ, ಎಲ್ಡಿಎಫ್ನ ಶೇ.32.05ರಷ್ಟು ಮತಗಳೊಂದಿಗೆ ಒಂದು ಸ್ಥಾನವನ್ನು ಮಾತ್ರ ಗೆದ್ದಿತ್ತು.
ಬಿಜೆಪಿ ನೇತೃತ್ವದ ಎನ್ಡಿಎ ಶೇ.14.88ರಷ್ಟು ಮತಗಳನ್ನು ಪಡೆದಿತ್ತು. 2024ರಲ್ಲಿ ಬಿಜೆಪಿಯ ಮತಗಳಿಕೆ ಹೆಚ್ಚಾದರೆ, ಕೇರಳದಲ್ಲಿ ಕಾಂಗ್ರೆಸ್ನ ಕ್ಲೀನ್ಸ್ವೀಪ್ ಗುರಿ ದಿಕ್ಕು ತಪ್ಪಬಹುದು ಎಂಬುದು ರಾಜಕೀಯ ವಲಯದಲ್ಲಿರುವ ಲೆಕ್ಕಾಚಾರವಾಗಿದೆ.
ಇನ್ನು, ಕೇರಳದ ಪ್ರಮುಖ ಪ್ರಾದೇಶಿಕ ಪಕ್ಷ ಕೇರಳ ಕಾಂಗ್ರೆಸ್ (ಎಂ). ಅದಕ್ಕೆ ಮಧ್ಯ ಕೇರಳದ ಕ್ರಿಶ್ಚಿಯನ್ ಮತ ಬ್ಯಾಂಕ್ ಬಲ ದೊಡ್ಡ ಪ್ರಮಾಣದಲ್ಲಿ ಇದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಅದು ಒತ್ತಡದ ತಂತ್ರ ಶುರು ಮಾಡಿರುವ ಬಗ್ಗೆ ವರದಿಗಳಿವೆ.
ಸಿಪಿಎಂ ನೇತೃತ್ವದ ಎಲ್ಡಿಎಫ್ ಮೈತ್ರಿಕೂಟದ ಪಾಲುದಾರ ಪಕ್ಷವಾಗಿರುವ ಕೆಸಿ(ಎಂ), ಈಗಾಗಲೇ ತಾನು ಹೊಂದಿರುವ ಒಂದು ಸ್ಥಾನವನ್ನಲ್ಲದೆ ಹೆಚ್ಚುವರಿ ಸೀಟುಗಳಿಗಾಗಿ ಕೇಳುತ್ತಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಈಗಾಗಲೇ ಕೆಸಿ(ಎಂ) ಅನ್ನು ಸಂಪರ್ಕಿಸಿದ್ದು, ಮೈತ್ರಿಯ ಭಾಗವಾಗುವಂತೆ ಆಹ್ವಾನಿಸಿರುವ ಹಿನ್ನೆಲೆಯಲ್ಲಿ ಅದು ಈ ಒತ್ತಡ ತಂತ್ರಕ್ಕೆ ಮುಂದಾಗಿದೆ.
ಕೇರಳದ ಪ್ರಭಾವಿ ನಾಯಕರಾಗಿದ್ದ ಕೆ.ಎಂ. ಮಣಿ ಸ್ಥಾಪಿಸಿದ ಕೆಸಿ(ಎಂ) ದೀರ್ಘಕಾಲದಿಂದ ಕಾಂಗ್ರೆಸ್ ಮೈತ್ರಿಕೂಟದ ಪಾಲುದಾರ ಪಕ್ಷವಾಗಿತ್ತು. 2020ರಲ್ಲಿ ಮಣಿ ನಿಧನದ ನಂತರ ಪಕ್ಷದಲ್ಲಿ ಅಧಿಕಾರಕ್ಕಾಗಿ ಹೋರಾಟ ಶುರುವಾಯಿತು. ನಂತರ ಪಕ್ಷವು ಯುಡಿಎಫ್ ಬಿಟ್ಟು ಎಲ್ಡಿಎಫ್ ಒಕ್ಕೂಟವನ್ನು ಸೇರಿತು.
ಇದರಿಂದಾಗಿ, 2021ರ ವಿಧಾನಸಭೆ ಚುನಾವಣೆಯಲ್ಲಿ ಕ್ರೈಸ್ತರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಎಲ್ಡಿಎಫ್ಗೆ ಲಾಭವೂ ಆಯಿತು. ಕೆಲವು ಕಾಂಗ್ರೆಸ್ ನಾಯಕರು ಇತ್ತೀಚೆಗೆ ಕೆಸಿ(ಎಂ) ಅನ್ನು ಯುಡಿಎಫ್ಗೆ ಮರಳಿ ಸೇರಿಸಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಪಕ್ಷದ ಅಧ್ಯಕ್ಷ ಜೋಸ್ ಕೆ. ಮಣಿ ಅವರ ರಾಜ್ಯಸಭಾ ಸ್ಥಾನದ ಹೊರತಾಗಿ, ಕೆಸಿ(ಎಂ) ಈಗ ಕೊಟ್ಟಾಯಂ ಲೋಕಸಭಾ ಕ್ಷೇತ್ರವನ್ನು ಹೊಂದಿದೆ. ಕೇರಳ ಸರಕಾರದಲ್ಲಿ ಪಕ್ಷದವರೊಬ್ಬರು ಸಚಿವರೂ ಆಗಿದ್ದಾರೆ.
ಅದು ಈಗ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇನ್ನೂ ಒಂದು ಸ್ಥಾನಕ್ಕಾಗಿ ಒತ್ತಡ ಹೇರುತ್ತಿದೆ. ಇಡುಕ್ಕಿ ಕ್ಷೇತ್ರದ ಮೇಲೆ ಪಕ್ಷ ಕಣ್ಣಿಟ್ಟಿದೆ ಎಂದು ತಿಳಿದುಬಂದಿದೆ. ಕಾಂಗ್ರೆಸ್ನ ಡೀನ್ ಕುರಿಯಕೋಸ್ ಈಗ ಇಡುಕ್ಕಿ ಸಂಸದರಾಗಿದ್ದಾರೆ.
ಸಿಪಿಎಂ ಮತ್ತು ಇತರ ಎಡರಂಗ ನಾಯಕರು ಕೆಸಿ(ಎಂ) ಬೇಡಿಕೆಗೆ ಇನ್ನೂ ಪ್ರತಿಕ್ರಿಯಿಸಿಲ್ಲ.
ಕ್ರೈಸ್ತ ಮತ ಬ್ಯಾಂಕ್ಗಳಲ್ಲಿ ಅದು ಹೊಂದಿರುವ ಪ್ರಭಾವ ಪರಿಗಣಿಸಿ ಕೆಸಿ(ಎಂ)ಯನ್ನು ತನ್ನೊಂದಿಗೆ ಉಳಿಸಿಕೊಳ್ಳಲು ಎಡಪಕ್ಷಗಳು ಪ್ರಯತ್ನಿಸಬಹುದು ಎಂದು ಎಡರಂಗದ ಮೂಲಗಳು ಹೇಳುತ್ತಿರುವುದಾಗಿ ವರದಿಗಳಿವೆ.
ಅಲ್ಲದೆ, ಇಡುಕ್ಕಿಯಲ್ಲಿ ಎಡಪಕ್ಷಗಳ ಸಂಸದ ಇಲ್ಲದಿರುವುದರಿಂದ ಕೆಸಿ(ಎಂ)ಗೆ ಇಡುಕ್ಕಿ ಸ್ಥಾನ ನೀಡುವುದಕ್ಕೆ ಹೆಚ್ಚು ತಕರಾರು ಬರಲಾರದು ಎನ್ನಲಾಗಿದೆ.
ರಾಹುಲ್ ಗಾಂಧಿ ಈ ಬಾರಿ ಎಲ್ಲಿಂದ ಸ್ಪರ್ಧಿಸುತ್ತಾರೆ ಎಂಬುದು ಖಚಿತವಾಗಿಲ್ಲ. ಅವರು ವಯನಾಡಿನಲ್ಲಿ ಸ್ಪರ್ಧಿಸಬಾರದು ಎಂದು ‘ಇಂಡಿಯಾ’ ಮೈತ್ರಿಕೂಟದ ಪಾಲುದಾರ ಆಗಿರುವ ಎಡರಂಗ ಹೇಳುತ್ತಿದೆ. ಮಿತ್ರಪಕ್ಷಗಳ ವಿರುದ್ಧವೇ ಸ್ಪರ್ಧಿಸುವುದು ಸರಿಯಲ್ಲ, ಬಿಜೆಪಿ ಬಲಿಷ್ಠವಾಗಿರುವ ಕಡೆ ನೇರವಾಗಿ ಅದರ ವಿರುದ್ಧ ಸ್ಪರ್ಧಿಸಬೇಕು, ವಯನಾಡ್ ಅನ್ನು ನಮಗೆ ಬಿಟ್ಟುಕೊಡಿ ಎಂದು ಎಡರಂಗ ಕೇಳುತ್ತಿದೆ. ಇದು ಕೇರಳ ಕಾಂಗ್ರೆಸ್ ಅನ್ನು ಕೆರಳಿಸಿದೆ. ಅದಕ್ಕಾಗಿ ಅದು ಕೇರಳದ ಎಲ್ಡಿಎಫ್ ಸರಕಾರದ ವಿರುದ್ಧ ಲೋಕಸಭೆಯಲ್ಲೂ ಧ್ವನಿ ಎತ್ತಿದೆ.
ದಿಲ್ಲಿಯಲ್ಲಿ ಕಾಂಗ್ರೆಸ್ - ಎಡರಂಗ ಮೈತ್ರಿ ಪಕ್ಷಗಳು. ಕೇರಳದಲ್ಲಿ ಅವೆರಡೂ ಬದ್ಧ ಪ್ರತಿಸ್ಪರ್ಧಿಗಳು. ಅಲ್ಲಿ ಯಾವುದೇ ರೀತಿಯ ಸೀಟು ಹೊಂದಾಣಿಕೆಯನ್ನು ರಾಜ್ಯ ಕಾಂಗ್ರೆಸ್ ತೀವ್ರವಾಗಿ ವಿರೋಧಿಸುತ್ತಿದೆ. ದಿಲ್ಲಿ ಕಾಂಗ್ರೆಸ್ ನ ಪ್ರಮುಖ ನಾಯಕ ಕೆ.ಸಿ. ವೇಣುಗೋಪಾಲ್ ಕೂಡ ಕೇರಳದವರೇ.
ಕಾಂಗ್ರೆಸ್ ಹಾಗೂ ಎಡಪಕ್ಷಗಳು ಹೇಗೆ ರಾಜ್ಯದಲ್ಲಿ ಸೀಟು ಹಂಚಿಕೆ ಮಾಡಿಕೊಳ್ಳುತ್ತವೆ ಅಥವಾ ಮಾಡಿಕೊಳ್ಳುವುದಿಲ್ಲವೇ? ಎಂಬುದು ಈಗ ಮುಖ್ಯ ಪ್ರಶ್ನೆಯಾಗಿದೆ.