ಹರೀಶ್ ಸಾಳ್ವೆಯ ಲಂಡನ್ ಪಾರ್ಟಿಯಲ್ಲಿ ಲಲಿತ್ ಮೋದಿ, ಮೊಯಿನ್ ಖುರೇಷಿ !
ವಂಚಕರ ಜೊತೆ ಪಾರ್ಟಿ ಮಾಡುವ ಮೋದಿ ಸರಕಾರದ ಸಮಿತಿಯ ಸದಸ್ಯರನ್ನು ಕೇಳೋರೇ ಇಲ್ವಾ ? ► ತೆರಿಗೆ ವಂಚನೆ ಆರೋಪಿ ಮೊಯಿನ್ ಖುರೇಷಿ ಮೋದಿ ಆಪ್ತರ ಜೊತೆ ಏಕಿದ್ದ ?
ಭಾರತದ ಖ್ಯಾತ ವಕೀಲ, ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ಮೊನ್ನೆ ಲಂಡನ್ನಿನಲ್ಲಿ ಮೂರನೇ ಮದುವೆಯಾದರು. ಅದು ಅವರ ವೈಯಕ್ತಿಕ ವಿಚಾರ. ಹಾಗಾಗಿ ಅದರ ಬಗ್ಗೆ ಇಲ್ಲಿ ಯಾವುದೇ ಚರ್ಚೆ ಇಲ್ಲ. ಸಾಳ್ವೆ ಮದುವೆ ಪಾರ್ಟಿಯಲ್ಲಿ ದೇಶದಿಂದ ಪಲಾಯನಗೈದಿರುವ ಲಲಿತ್ ಮೋದಿ ಎಂಬ ವಂಚಕ ಹಾಗು ಆರ್ಥಿಕ ಅಕ್ರಮಗಳ ಆರೋಪಿ ಮೋಯಿನ್ ಖುರೇಷಿ ಯಾವ ಭೀತಿಯೂ ಇಲ್ಲದೆ ಮಿಂಚುತ್ತಿದ್ದುದು ಹೇಗೆ ಎಂಬುದೇ ಪ್ರಶ್ನೆ.
ಪಾರ್ಟಿಯಲ್ಲಿ ಮುಖೇಶ್ ಅಂಬಾನಿ, ನೀತಾ ಅಂಬಾನಿ, ಉದ್ಯಮಿ ಲಕ್ಷ್ಮಿ ಮಿತ್ತಲ್ ಮತ್ತು ಮಾಡೆಲ್ ಉಜ್ವಲಾ ರಾವತ್ ಸೇರಿದಂತೆ ಗಣ್ಯ ಅತಿಥಿಗಳೆಲ್ಲ ಇದ್ದರು. ಅವರೊಂದಿಗೆ, ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಹಾಗು ಮೋಯಿನ್ ಖುರೇಷಿ ಇದ್ದುದು, ಫೋಟೊಗಳಿಗೆ ಪೋಸು ಕೊಡುತ್ತಿದ್ದುದು ದೊಡ್ಡ ವಿಪರ್ಯಾಸ.
ದೇಶದ ಪ್ರತಿಷ್ಠಿತ ವಕೀಲರಲ್ಲಿ ಒಬ್ಬರಾದ ಸಾಳ್ವೆ, ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ಮೊನ್ನೆ ರಚಿಸಲಾಗಿರುವ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಸದಸ್ಯರು. ದೇಶದಲ್ಲಿ ಹೊಸ ಕಾನೂನು ತರಲು ಭಾರತ ಸರಕಾರ ರಚಿಸಿರುವ ಅತ್ಯುನ್ನತ ಸಮಿತಿಯ ಸದಸ್ಯ ಅವರು. ಅವರು ದೇಶದ ಕಾನೂನಿಂದ ತಪ್ಪಿಸಿಕೊಂಡು ಲಂಡನ್ನಿನಲ್ಲಿ ಅವಿತುಕೊಂಡಿರುವ ಲಲಿತ್ ಮೋದಿ ಹಾಗು ಕೋಟಿಗಟ್ಟಲೆ ಆದಾಯ ತೆರಿಗೆ ವಂಚಿಸಿದ ಆರೋಪ ಹೊತ್ತಿರುವ ಮೋಯಿನ್ ಖುರೇಷಿ ಜೊತೆ ಪಾರ್ಟಿ ಮಾಡುತ್ತಾರೆ ಎಂದರೆ ಏನರ್ಥ?
ಎಲ್ಲರಿಗೂ ನೆನಪಿದೆ. ಮೋದಿ ಹೆಸರನ್ನು ಉಲ್ಲೇಖಿಸಿ ಕಳ್ಳರು ಎಂದು ಹೇಳಿದ್ದಕ್ಕಾಗಿ ರಾಹುಲ್ ಗಾಂಧಿಯವರು ಸಂಸದ ಸ್ಥಾನದಿಂದಲೇ ಅನರ್ಹಗೊಳ್ಳುವಂತಾಗಿತ್ತು. ಆಗ ರಾಹುಲ್ ಹೇಳಿಕೆಯನ್ನು ಟೀಕಿಸಿದ್ದವರಲ್ಲಿ ಹರೀಶ್ ಸಾಳ್ವೆ ಕೂಡ ಒಬ್ಬರು.
ರಾಹುಲ್ ಗಾಂಧಿಯನ್ನು ಸಂಸದನ ಸ್ಥಾನದಿಂದ ಅನರ್ಹಗೊಳಿಸುವಲ್ಲಿ ತೋರಿದ್ದ ತರಾತುರಿಯನ್ನು ಲಲಿತ್ ಮೋದಿಯಂಥ ವಂಚಕರನ್ನು ದೇಶಕ್ಕೆ ಕರೆತಂದು ಶಿಕ್ಷಿಸುವ ವಿಚಾರದಲ್ಲಿ ಸರ್ಕಾರ ಯಾವತ್ತೂ ತೋರಿಸಿಲ್ಲ. ಈಗ ಅದೇ ವಂಚಕ ಈ ದೇಶದ ಉನ್ನತ ಸಮಿತಿಯೊಂದರ ಸದಸ್ಯರಾಗಿರುವ ಖ್ಯಾತ ವಕೀಲರ ಮದುವೆ ಪಾರ್ಟಿಯಲ್ಲಿ ಗಣ್ಯ ಅತಿಥಿ. ಇದೆಲ್ಲ ಏನನ್ನು ಹೇಳುತ್ತಿದೆ?
ಅಷ್ಟೇ ಅಲ್ಲ. ಹರೀಶ್ ಸಾಳ್ವೆ ಅವರ ಪಾರ್ಟಿಯಲ್ಲಿ ಮಜಾ ಮಾಡುತ್ತಿದ್ದ ಇನ್ನೊಬ್ಬ ಮೋಯಿನ್ ಖುರೇಷಿ ಮೇಲೂ ದೇಶದಲ್ಲಿ ತೆರಿಗೆ ವಂಚನೆ, ಮನಿ ಲಾಂಡರಿಂಗ್ ಸಹಿತ ಹಲವು ಗಂಭೀರ ಆರ್ಥಿಕ ಅಕ್ರಮ ಆರೋಪಗಳಿವೆ. ಕನಿಷ್ಠ ಇಬ್ಬರು ಸಿಬಿಐ ನಿರ್ದೇಶಕರ ಬದಲಾವಣೆಗೂ ಈ ಮೋಯಿನ್ ಖುರೇಷಿಗೂ ನಂಟಿದೆ ಎಂದು ಆರೋಪಿಸಲಾಗಿತ್ತು. ಆದರೆ ಮೋಯಿನ್ ಖುರೇಷಿ ಭಾರತದಲ್ಲೇ ವಾಸವಾಗಿದ್ದಾರೆ. ದೇಶ ಬಿಟ್ಟಿಲ್ಲ.
ದೇಶ ಹಿಡಿದು ತರಲಾರದ ವಂಚಕನೊಬ್ಬ ವಿದೇಶದಲ್ಲಿ ಈ ದೇಶದ ಪ್ರಮುಖ ರಾಜಕೀಯ ಸಮಿತಿಯೊಂದರ ಭಾಗವಾಗಿರುವವರೊಬ್ಬರ ಜೊತೆ ಪಾರ್ಟಿಯಲ್ಲಿ ಮೆರೆದಾಡುವುದು ಸಾಧ್ಯವಾಗುತ್ತಿದೆ ಎಂದಾದರೆ, ಇದು ಯಾರಿಗೆ ಅವಮಾನ?. ರಾಹುಲ್ ವಿದೇಶದಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದಿಸುತ್ತ ಸತ್ಯ ಹೇಳುತ್ತಿದ್ದರೆ ದೇಶದ ಮಾನ ಹೋಯಿತು ಎಂದು ಬೊಬ್ಬೆ ಹಾಕುವವರು ಈಗ ಯಾರ ಮಾನವೂ ಹೋಗಿಲ್ಲ ಎಂಬಂತೆ ಮೌನವಾಗಿರುವುದು ಏಕೆ?
ಮೊದಲು ಹರೀಶ್ ಸಾಳ್ವೆ ಮತ್ತು ಲಲಿತ್ ಮೋದಿ ಬಗ್ಗೆ ಸ್ವಲ್ಪ ತಿಳಿಯೋಣ. ಸಾಳ್ವೆ ದೇಶದ ಅತ್ಯಂತ ಪ್ರತಿಷ್ಠಿತ ವಕೀಲರಲ್ಲಿ ಒಬ್ಬರು.
1999ರಿಂದ 2002ರವರೆಗೆ ಭಾರತ ಸರ್ಕಾರದ ಸಾಲಿಸಿಟರ್ ಜನರಲ್ ಆಗಿದ್ದವರು. ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು. ಹಲವಾರು ಹೈಪ್ರೊಫೈಲ್ ಕೇಸ್ಗಳನ್ನು ಗೆದ್ದ ಹೆಗ್ಗಳಿಕೆ ಸಾಳ್ವೆ ಅವರಿಗಿದೆ.
ಗೂಢಚಾರಿಕೆ ಆರೋಪದ ಮೇಲೆ ಪಾಕಿಸ್ತಾನದ ಮಿಲಿಟರಿ ಕೋರ್ಟ್ನಿಂದ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ಕುಲಭೂಷಣ್ ಜಾಧವ್ ಪ್ರಕರಣದಲ್ಲಿಯೂ 2017ರ ಮೇನಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದ ಎದುರು ವಾದಿಸಿ ಗೆದ್ದವರು ಸಾಳ್ವೆ. ಆಗ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸಂಭಾವನೆ ನೀಡಲು ಮುಂದಾದಾಗ ಭಾರತ ಸರ್ಕಾರದಿಂದ ಸಾಳ್ವೆ ಕೇವಲ 1 ರೂ. ಸಂಭಾವನೆ ಪಡೆದಿದ್ದರು.
ಕೃಷ್ಣಾ ಗೋದಾವರಿ ಜಲಾನಯನ ಅನಿಲ ವಿವಾದ, ಬಿಲ್ಕಿಸ್ ಬಾನು ಪ್ರಕರಣ, ಸಲ್ಮಾನ್ ಖಾನ್ ಹಿಟ್ & ರನ್ ಕೇಸ್ ಮೊದಲಾದ ಹಲವಾರು ಪ್ರಕರಣಗಳಲ್ಲಿ ವಾದಿಸಿದ್ದಾರೆ.
ಇನ್ನು ಲಲಿತ್ ಮೋದಿ. ಐಪಿಎಲ್‌ನ ಮಾಜಿ ಸಂಸ್ಥಾಪಕ. ಹಣಕಾಸಿನ ಅಕ್ರಮಗಳು ಮತ್ತು ದುರ್ನಡತೆ ಆರೋಪದ ನಂತರ ಬಿಸಿಸಿಐನಿಂದ ಲಲಿತ್ ಮೋದಿಯನ್ನು ಅಮಾನತು ಮಾಡಲಾಯಿತು. ವಿಶ್ವ ಕ್ರೀಡಾ ಸಮೂಹದ ಅಧಿಕಾರಿಗಳೊಂದಿಗೆ ಶಾಮೀಲಾಗಿ ಬಿಸಿಸಿಐಗೆ 753 ಕೋಟಿ ರೂ. ವಂಚಿಸಿದ ಆರೋಪದ ಮೇಲೆ ಭಾರತಕ್ಕೆ ಬೇಕಾಗಿರುವ ವ್ಯಕ್ತಿ.
ತೆರಿಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ತನಿಖೆಯ ಮಧ್ಯೆಯೇ, ಇಡಿ ಕೇಸ್ ದಾಖಲಿಸುವ ಸ್ವಲ್ಪ ಮೊದಲು 2010ರ ಮೇನಲ್ಲಿ ಭಾರತದಿಂದ ಪಲಾಯನ. ಭೂಗತ ಲೋಕದಿಂದ ಪ್ರಾಣ ಬೆದರಿಕೆ ಎಂದು ನೆಪವೊಡ್ಡಿ ದೇಶದಿಂದ ಪಲಾಯನ ಗೈದ ಲಲಿತ್ ಮೋದಿ 2010ರಿಂದಲೂ ಲಂಡನ್ ವಾಸಿ.
ಎರಡು ವರ್ಷಗಳ ಹಿಂದೆ ಕೂಡ ಕೇಂದ್ರ ಸರ್ಕಾರ ಪ್ರಕಟಿಸಿದ್ದ ದೇಶ ವಂಚಿಸಿದವರ ಪಟ್ಟಿಯಲ್ಲಿ ಲಲಿತ್ ಮೋದಿ ಹೆಸರಿತ್ತು. ಭಾರತಕ್ಕೆ ವಾಪಸ್ಸು ಕರೆತರುವ ಪ್ರಯತ್ನ ನಡೆದಿದೆ ಎಂದು ಸರ್ಕಾರ ಹೇಳಿತ್ತು. ಲುಕ್ಔಟ್ ನೊಟೀಸ್, ರೆಡ್ ಕಾರ್ನರ್ ನೊಟೀಸ್, ಗಡೀಪಾರು ಮನವಿ ಈ ಎಲ್ಲ ಮಾರ್ಗಗಳನ್ನು ಬಳಸುವ ಮಾತಿನ ನಂತರವೂ ಲಲಿತ್ ಮೋದಿಯನ್ನು ಭಾರತಕ್ಕೆ ವಾಪಸ್ ಕರೆತರಲು ಆಗುತ್ತಿಲ್ಲ.
ಆದರೆ ಆತ ಮಾತ್ರ ಅಲ್ಲಿ ದೇಶದ ಗಣ್ಯಾತಿಗಣ್ಯರ ಜೊತೆ ಪಾರ್ಟಿಯಲ್ಲಿ ಮೆರೆಯುತ್ತ, ಮಾಡೆಲ್ ಜೊತೆ ಪೋಸು ಕೊಡುತ್ತ, ಹೊಸ ಪ್ರೇಮ ಸಂಬಂಧಗಳ ಬಗ್ಗೆ ಹೇಳಿಕೊಳ್ಳುತ್ತ ಹಾಯಾಗಿರುವುದು ಮಾತ್ರವಲ್ಲ, ಈಗ ಹರೀಶ್ ಸಾಳ್ವೆ ಮದುವೆ ಪಾರ್ಟಿಯಲ್ಲೂ ಆತ ಆಹ್ವಾನಿತ ಗಣ್ಯರಲ್ಲೊಬ್ಬ.
ಇನ್ನೊಬ್ಬ ಮೊಯಿನ್ ಖುರೇಷಿ. ದೇಶದ ಅತಿದೊಡ್ಡ ಮಾಂಸ ರಫ್ತ್ತುದಾರರಲ್ಲಿ ಒಬ್ಬ. ಸಣ್ಣದಾಗಿ ಶುರು ಮಾಡಿದ ಮಾಂಸ ರಫ್ತ್ತು ಉದ್ಯಮ ಬಳಿಕ ಬಹುಕಂಪೆನಿಗಳ ಸ್ಥಾಪನೆವರೆಗೆ ಬಂದು ತಲುಪಿತ್ತು. ನೂರಾರು ಕೋಟಿ ಆದಾಯ ತೆರಿಗೆ ವಂಚನೆ ಮಾಡಿದ ಆರೋಪ ಈತನ ಮೇಲಿದೆ. ಸಿಬಿಐ ನಿರ್ದೇಶಕರೇ ಈತನಿಗೆ ಆಪ್ತರು ಎಂಬ ಆರೋಪವಿತ್ತು. ಕಾಂಗ್ರೆಸ್ ಹಾಗು ಸೋನಿಯಾ ಗಾಂಧಿ ಅವರಿಗೆ ಆಪ್ತ ಎಂಬ ಆರೋಪವೂ ಇತ್ತು. ಪ್ರಧಾನಿ ಮೋದಿ 2014 ರ ಚುನಾವಣಾ ಪ್ರಚಾರದಲ್ಲೂ ಅದನ್ನು ಉಲ್ಲೇಖಿಸಿದ್ದರು.
ಈಗ ನೋಡಿದರೆ ಅದೇ ಮೊಯಿನ್ ಖುರೇಷಿ ಮೋದಿ ಸರಕಾರದ ಆಪ್ತ ವಕೀಲರ ಪಾರ್ಟಿಯಲ್ಲಿ ಮೆರೆಯುತ್ತಿದ್ದಾನೆ. ಸಾಳ್ವೆ ಪಾರ್ಟಿಯಲ್ಲಿ ಲಲಿತ್ ಮೋದಿ ಮಿಂಚಿದ ವಿಚಾರವೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಪ್ರತಿಪಕ್ಷಗಳ ತೀವ್ರ ಟೀಕೆಗೆ ತುತ್ತಾಗಿದೆ. ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಈ ವಿಚಾರವಾಗಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರಿ ಬಿಜೆಪಿ ವಕೀಲರು ಮೂರನೇ ಬಾರಿಗೆ ಮದುವೆಯಾಗುವುದರ ಬಗ್ಗೆ ಕಳವಳವಾಗುತ್ತಿಲ್ಲ. ಭಾರತದ ಕಾನೂನಿನಿಂದ ತಪ್ಪಿಸಿಕೊಂಡು ಪಲಾಯನಗೈದಿರುವ ವ್ಯಕ್ತಿ ಮೋದಿ ಸರ್ಕಾರದ ನೆಚ್ಚಿನ ವಕೀಲರ ಮದುವೆ ಪಾರ್ಟಿಯಲ್ಲಿ ಆಹ್ವಾನಿತ ಎಂಬುದಕ್ಕಾಗಿ ಎಲ್ಲರೂ ಕಳವಳ ಪಡಬೇಕಾಗಿದೆ . ಯಾರು ಯಾರಿಗೆ ಸಹಾಯ ಮಾಡುತ್ತಿದ್ದಾರೆ, ಯಾರನ್ನು ಯಾರು ರಕ್ಷಿಸುತ್ತಿದ್ದಾರೆ ಎಂಬುದು ಈಗ ಪ್ರಶ್ನೆಯಾಗಿ ಉಳಿದಿಲ್ಲ ಎಂದು ಪ್ರಿಯಾಂಕ ಚತುರ್ವೇದಿ ಟ್ವೀಟ್ ಮಾಡಿದ್ದಾರೆ.
ಮಹಾರಾಷ್ಟ್ರ ಕಾಂಗ್ರೆಸ್‌ನ ಪ್ರೀತೇಶ್ ಶಾ ಕೂಡ ಈ ಬಗ್ಗೆ ಟೀಕಿಸಿದ್ದಾರೆ. ಮೋದಿ ಉಪನಾಮ ಇರುವವರು ಕಳ್ಳರು ಎಂದಿದ್ದಕ್ಕೆ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಲಾಗಿತ್ತು. ರಾಹುಲ್ ಹೇಳಿಕೆಯನ್ನು ಹರೀಶ್ ಸಾಳ್ವೆ ಖಂಡಿಸಿದ್ದರು. ಇತ್ತೀಚೆಗೆ ಮೋದಿ ಸರ್ಕಾರ 'ಒಂದು ರಾಷ್ಟ್ರ, ಒಂದು ಚುನಾವಣೆ' ಕುರಿತು ಉನ್ನತ ಮಟ್ಟದ ಸಮಿತಿ ರಚಿಸಿದೆ. ಪರಾರಿಯಾಗಿರುವ ಲಲಿತ್ ಮೋದಿಯೊಂದಿಗೆ ಪಾರ್ಟಿ ಮಾಡುತ್ತಿರುವ ಹರೀಶ್ ಸಾಳ್ವೆ ಆ ಸಮಿತಿಯ ಭಾಗ ಎಂದು ಪ್ರೀತೇಶ್ ಶಾ ಟೀಕಿಸಿದ್ದಾರೆ.
ಎಎಪಿ ಕೂಡ ಸಾಳ್ವೆ ಪಾರ್ಟಿಯಲ್ಲಿ ಲಲಿತ್ ಮೋದಿ ಕಾಣಿಸಿಕೊಂಡದ್ದನ್ನು ಪ್ರಧಾನಿ ಮೋದಿಯವರ ಖ್ಯಾತಿಗೆ ಕಪ್ಪು ಚುಕ್ಕೆ ಎಂದು ವ್ಯಾಖ್ಯಾನಿಸಿದೆ. ಆದರೆ, ನಿಜವಾಗಿಯೂ ಮೋದಿಯವರಾಗಲೀ ಬಿಜೆಪಿಯವರಾಗಲೀ ಸಂಘ ಪರಿವಾರದ ಮಂದಿಯಾಗಲೀ, ಭಾರತ ಸರ್ಕಾರಕ್ಕೆ ಬೇಕಾಗಿರುವ ವಂಚಕನೊಬ್ಬ ಭಾರತ ಸರ್ಕಾರದ ಉನ್ನತ ಸಮಿತಿಯೊಂದರ ಭಾಗವಾಗಿರುವವರ ಜೊತೆ ಪಾರ್ಟಿಯಲ್ಲಿ ಕಾಣಿಸಿಕೊಂಡಿರುವುದು ಕಪ್ಪು ಚುಕ್ಕೆ ಎಂದು, ಅವಮಾನಕರ ಎಂದು ಭಾವಿಸುತ್ತಾರೆಯೆ?
ಇದು ಒಂದು ಅತ್ಯಂತ ದುರದೃಷ್ಟಕರ ಬೆಳವಣಿಗೆ ಎಂದು ಅವರಾರಿಗೂ ಅನ್ನಿಸುವುದಿಲ್ಲವೆ?. ಇದೇ ಲಲಿತ್ ಮೋದಿ ಮತ್ತು ಮೊಯಿನ್ ಖುರೇಷಿ ಯಾವುದಾದರೂ ಕಾಂಗ್ರೆಸ್ ನಾಯಕರ ಪಾರ್ಟಿಯಲ್ಲಿ ಇದೇ ರೀತಿ ಮಜಾ ಮಾಡಿಕೊಂಡು ಇದ್ದಿದ್ದು ಕಂಡು ಬಂದಿದ್ದರೆ ಈಗ ಬಿಜೆಪಿ ಪ್ರತಿಕ್ರಿಯೆ ಹೇಗಿರುತ್ತಿತ್ತು ? ದೇಶದ ಭಟ್ಟಂಗಿ ಟಿವಿ ಚಾನಲ್ ಗಳ ಅರಚಾಟ, ಬೊಬ್ಬೆ ಎಲ್ಲಿಗೆ ತಲುಪಿರುತ್ತಿತ್ತು ? ಬಿಜೆಪಿ ಐಟಿ ಸೆಲ್ ನ ಗೋಳಾಟ ಅದೆಷ್ಟು ಇರುತ್ತಿತ್ತು ?
ಆದರೆ ಅದೇ ಲಲಿತ್ ಮೋದಿ ಹಾಗು ಮೊಯಿನ್ ಖುರೇಷಿ ಬಿಜೆಪಿಗೆ ಆಪ್ತ ಹರೀಶ್ ಸಾಳ್ವೆ ಅವರ ಪಾರ್ಟಿಯಲ್ಲಿದ್ದರೆ ಎಲ್ಲರೂ ಗಪ್ ಚುಪ್. ಏನೂ ಚರ್ಚೆಯೇ ಇಲ್ಲ. ಯಾರದ್ದೂ ಏನೂ ತಕರಾರೇ ಇಲ್ಲ. ಇದೆಂತಹ ದ್ವಂದ್ವ ? ಇದೆಂತಹ ಸೋಗಲಾಡಿತನ ?. ಬಾರತವನ್ನು ಲೂಟಿ ಹೊಡೆದವರಲ್ಲಿ ಮೆಹುಲ್ ಚೋಕ್ಸಿಯಂತವರು , ಮೋದಿಯವರ ಜೊತೆಜೊತೆಗೇ ಕಾಣಿಸಿಕೊಂಡು ಕೈಕೊಟ್ಟು ಓಡಿಹೋಗಿ ವಿದೇಶಗಳಲ್ಲಿ ಕೂತು ಐಷಾರಾಮಿ ಬದುಕು ಸಾಗಿಸಿದ್ದಾರೆ. ಭಾರತಕ್ಕೆ ಬೇಕಾಗಿರುವ ಲಲಿತ್ ಮೋದಿಗೆ ಕೂಡ ಯಾವುದೇ ಭಯ ಇದ್ದಂತಿಲ್ಲ.
ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಹರೀಶ್ ಸಾಳ್ವೆ ತಮ್ಮ ನಡೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಲಲಿತ್ ಮೋದಿ ಹಾಗು ಮೊಯಿನ್ ಖುರೇಷಿಯನ್ನು ಪಲಾಯನ ಮಾಡಿದವರು ಎಂದು ಹೇಳಲು ಆಗೋದಿಲ್ಲ. ಅದು ನಾನ್ ಸೆನ್ಸ್ ಎಂದಿದ್ದಾರೆ ಸಾಳ್ವೆ. ಅವರಿಬ್ಬರೂ ಪಲಾಯನ ಮಾಡಿದವರಲ್ಲ. ಮೊಯಿನ್ ಖುರೇಷಿ ಭಾರತದಲ್ಲೇ ವಾಸಿಸುತ್ತಿದ್ದಾರೆ. ಲಲಿತ್ ಮೋದಿ ಕೂಡ ಪಲಾಯನ ಮಾಡಿದವರಲ್ಲ. ಅವರ ಪರವಾಗಿ ನಾನು ಸುಪ್ರೀಂ ಕೋರ್ಟ್ ನಲ್ಲಿ ವಾದಿಸುತ್ತಿದ್ದೇನೆ. ಅವರ ಸ್ನೇಹದ ಬಗ್ಗೆ ನಾನು ಮುಕ್ತವಾಗಿದ್ದೇನೆ. ಅದನ್ನು ಮುಚ್ಚಿಟ್ಟಿಲ್ಲ. ಖುರೇಷಿ ಭಾರತದಲ್ಲೇ ವಾಸಿಸುತ್ತಿದ್ದು ಯುಕೆಗೆ ಆಗಾಗ ಪ್ರಯಾಣಿಸುತ್ತಿರುತ್ತಾರೆ. ಅದಕ್ಕೆ ಅವರಿಗೆ ಅನುಮತಿ ಇದೆ. ಇದು ಕೇವಲ ಹೊಟ್ಟೆಕಿಚ್ಚಿನಿಂದ ಮಾಡಲಾಗುತ್ತಿರುವ ಆರೋಪ ಎಂದು ಹರೀಶ್ ಸಾಳ್ವೆ ಪ್ರತಿಕ್ರಿಯಿಸಿದ್ದಾರೆ.
ಹರೀಶ್ ಸಾಳ್ವೆ ಅವರಿಗೆ ಕಾನೂನು ಬಹಳ ಚೆನ್ನಾಗಿ ಗೊತ್ತಿದೆ. ಹಾಗಾಗಿ ಕಾನೂನು ಪ್ರಕಾರ ಅವರು ಮಾಡಿರುವುದರಲ್ಲಿ ಯಾವುದೇ ತಪ್ಪಿರಲಿಕ್ಕಿಲ್ಲ. ಆದರೆ ದೇಶಕ್ಕೆ ವಂಚಿಸಿದವರನ್ನು ಈ ರೀತಿ ಸತ್ಕರಿಸುವುದು ನೈತಿಕವಾಗಿ ಎಷ್ಟು ಸರಿ ಎಂದು ಬಿಜೆಪಿ ಹೇಳಬೇಕಾಗಿದೆ. ಇದೇ ರೀತಿ ಬೇರೆ ಯಾವುದಾದರೂ ಪಕ್ಷದವರು ಅವರಿಬ್ಬರನ್ನು ತಮ್ಮ ಪಾರ್ಟಿಗೆ ಆಹ್ವಾನಿಸಿದ್ದರೆ ಬಿಜೆಪಿ ಏನು ಮಾಡುತ್ತಿತ್ತು ?
ದೇಶದಲ್ಲಿನ ಪ್ರಾಮಾಣಿಕ ಪತ್ರಕರ್ತರು, ಹೋರಾಟಗಾರರು ಅ ಎಂದರೂ ತಪ್ಪು ಆ ಎಂದರೂ ತಪ್ಪು ಎಂಬಂತೆ ನಡೆದುಕೊಳ್ಳುತ್ತ, ಮಾತೆತ್ತಿದರೆ ಎಫ್ಐಆರ್, ಜೈಲು ಎಂದು ಬೆದರಿಸುವ ಸರ್ಕಾರಕ್ಕೆ, ದೇಶವಂಚಕರು ವಿದೇಶದಲ್ಲಿ ಕುಳಿತು, ಪಾರ್ಟಿಗಳಲ್ಲಿ ಮಿಂಚುತ್ತಿರುವಾಗ ಕೊಂಚವೂ ನಾಚಿಕೆ ಆಗುತ್ತಿಲ್ಲವೆ?
ಇದೇ ಸರ್ಕಾರದ ಮಹತ್ವದ ಪ್ರಕ್ರಿಯೆಯೊಂದರ ಭಾಗವಾಗಿರುವವರು ಅಂಥ ವಂಚಕರೊಂದಿಗೆ ಕಾಣಿಸಿಕೊಳ್ಳುವುದು, ಪಾರ್ಟಿ ಮಾಡುವುದು ಅನೈತಿಕ, ಅಸಮರ್ಥನೀಯ ಎಂದು ಅನ್ನಿಸುವುದೇ ಇಲ್ಲವೆ?. ದೇಶ ವಂಚಿಸಿ ಓಡಿಹೋದವರನ್ನು ವಾಪಸ್ ಕರೆತರಲು ವಿಶ್ವಗುರು ಇಷ್ಟೊಂದು ಪ್ರಯಾಸಪಡಬೇಕಾಗಿದೆಯೆ?. ಇಂಥ ಪ್ರಶ್ನೆಗಳೆಲ್ಲ ಉತ್ತರವಿಲ್ಲದೆ ಉಳಿದುಬಿಡುತ್ತವೆ. ಯಾಕೆಂದರೆ, ಯಾರನ್ನು ಯಾರು ರಕ್ಷಿಸುತ್ತಿದ್ದಾರೆ ಎಂಬುದು ಈಗ ತೀರಾ ಗುಟ್ಟಾಗಿ ಉಳಿದಿಲ್ಲ.