TRP ವಂಚನೆ ಕೇಸು ವಾಪಸ್ ಪಡೆದ ಮಹಾರಾಷ್ಟ್ರ ಸರಕಾರ | Arnab Goswami | Republic TV | Narendra Modi | BJP
Arnab Goswami | Photo: PTI
ಹಗಲೂ ರಾತ್ರಿ ಪ್ರಧಾನಿ ಮೋದಿ ಹಾಗು ಬಿಜೆಪಿಯ ಗುಣಗಾನ ಮಾಡುವ ರಿಪಬ್ಲಿಕ್ ಟಿವಿ ಹಾಗು ಅದರ ಸಂಪಾದಕರಿಗೆ ಬಿಜೆಪಿ ಸರಕಾರ ದೊಡ್ಡ ಬಹುಮಾನ ಕೊಟ್ಟಿದೆ. ಅದರ ವಿರುದ್ಧದ ಟಿ ಆರ್ ಪಿ ವಂಚನೆ ಕೇಸನ್ನೇ ಬಿಟ್ಟುಬಿಟ್ಟಿದೆ.
ಕೋರ್ಟ್ ಕೂಡ ಅದನ್ನು ಹಿಂದೆಗೆದುಕೊಳ್ಳುವ ನಿರ್ಧಾರಕ್ಕೆ ಯಸ್ ಎಂದಿದೆ. ನ ಖಾವೂಂಗಾ, ನ ಖಾನೆ ದೂಂಗಾ ಎಂದು ಹೇಳುತ್ತಲೇ ಪ್ರಧಾನಿ ಮೋದಿ ಈ ದೇಶಕ್ಕೆ ಇಂತಹ ಅದೆಷ್ಟು ಅಚ್ಚರಿ ನೀಡಿಬಿಟ್ಟರು? ತಮ್ಮ ಜೊತೆ ಸೇರಿದ ಅದೆಷ್ಟು ಮಹಾ ಭ್ರಷ್ಟರನ್ನು ಪರಿಶುದ್ಧಗೊಳಿಸಿಬಿಟ್ಟರು ?
ಆದರೆ ದೇಶದಲ್ಲಿ ಸತ್ಯ ಹೇಳುತ್ತಿರುವ ಪತ್ರಕರ್ತರು ಹಾಗು ಸಂಸ್ಥೆಗಳು ಮಾತ್ರ ನಿರಂತರ ಕಿರುಕುಳ ಎದುರಿಸುತ್ತಲೇ ಇವೆ. ಇದು ಯಾವ ರೀತಿಯ ರಾಜಕೀಯ ? ಇದೆಂತಹ ಆಡಳಿತ ? ಅದು 2020. ಹಂಸಾ ರಿಸರ್ಚ್ ಗ್ರೂಪ್ನ ಕೆಲವು ಉದ್ಯೋಗಿಗಳು ನಿರ್ದಿಷ್ಟ ಟಿವಿ ಚಾನೆಲ್ಗಳನ್ನು ವೀಕ್ಷಿಸಲು ಜನರಿಗೆ ಹಣ ಪಾವತಿಸುವ ಮೂಲಕ ಮಾದರಿ ಮೀಟರಿಂಗ್ ಸೇವೆʼಗಳನ್ನು ತಮಗೆ ಬೇಕಾದ ಹಾಗೆ ನಿರ್ವಹಿಸುತ್ತಿದ್ದಾರೆ ಎಂದು ಮುಂಬೈ ಅಪರಾಧ ವಿಭಾಗ ಪತ್ತೆ ಮಾಡಿದಾಗ TRP ಹಗರಣ ಪ್ರಕರಣ ಬೆಳಕಿಗೆ ಬಂತು.
ತಾನು, ಮನೆಗಳಿಗೆ ಹಣ ನೀಡುವ ಮೂಲಕ ಕೆಲವು ಟಿವಿ ಚಾನೆಲ್ ಗಳ ಟಿಆರ್ಪಿ ಹೆಚ್ಚಿಸುತ್ತಿದ್ದುದನ್ನು ಸ್ವತಃ ಬಹಿರಂಗಪಡಿಸಿದ ವಿಶಾಲ್ ವೇದ್ ಭಂಡಾರಿ ಎಂಬಾತನನ್ನು ಪ್ರಕರಣದಲ್ಲಿ ಬಂಧಿಸಲಾಯಿತು. ಪ್ರಕರಣದ ಕುರಿತು ವಿಚಾರಣೆ ಕೈಗೊಂಡಾಗ, ಮನೆಯ ಮಾಲೀಕರು ತಾವು ನೋಡದಿದ್ದರೂ ತಮ್ಮ ಟಿವಿ ಸೆಟ್ಗಳನ್ನು ನಿರ್ದಿಷ್ಟ ಚಾನಲ್ಗೆ ಬದಲಾಯಿಸಲೂ ಹಣ ಸ್ವೀಕರಿಸಿದ್ದಾರೆ ಎಂದು ಒಪ್ಪಿಕೊಂಡಿದ್ದರು.
ಮುಂಬೈ ಕ್ರೈಂ ಬ್ರಾಂಚ್ ನವೆಂಬರ್ 2020ರಲ್ಲಿ ಪ್ರಕರಣದ ಕುರಿತು ಚಾರ್ಜ್ಶೀಟ್ ಸಲ್ಲಿಸಿತು. ಈ ಹಗರಣದಿಂದ ರಿಪಬ್ಲಿಕ್ ಟಿವಿ ಚಾನೆಲ್ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಹೆಚ್ಚಿನ ಆದಾಯ ಗಳಿಸಿತು ಎಂದು ಉಲ್ಲೇಖಿಸಲಾಗಿತ್ತು.
ಪ್ರಕರಣದಲ್ಲಿ 10ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದ ಎಲ್ಲ ಆರೋಪಿಗಳಿಗೆ ಜಾಮೀನು ಮಂಜೂರಾಯಿತು. ಅರ್ನಬ್ ಗೋಸ್ವಾಮಿ ಮತ್ತು ಟೆಲಿವಿಷನ್ ರೇಟಿಂಗ್ ನೀಡುವ ಬಾರ್ಕ್ ಸಂಸ್ಥೆಯ ಮಾಜಿ ಮುಖ್ಯಸ್ಥ ಪಾರ್ಥೋ ದಾಸ್ ಗುಪ್ತಾ ನಡುವಿನ ವಾಟ್ಸ್ಆ್ಯಪ್ ಸಂಭಾಷಣೆ ಎನ್ನಲಾದ 500 ಪುಟಗಳ ದಾಖಲೆ ಕೂಡ 2021ರಲ್ಲಿ ಟ್ವಿಟರ್ನಲ್ಲಿ ಭಾರೀ ಸದ್ದೆಬ್ಬಿಸಿತ್ತು.
ಕೆಲವು ಆಂಗ್ಲ ಮಾಧ್ಯಮಗಳು ಆ ವಿಚಾರವನ್ನು ಎತ್ತಿಕೊಂಡು ವರದಿ ಮಾಡಿದ್ದವು. ಯಥಾ ಪ್ರಕಾರ ಮಡಿಲ ಮೀಡಿಯಾಗಳು ಏನೂ ಗೊತ್ತೇ ಇಲ್ಲವೆಂಬಂತೆ, ಒಂದೇ ಒಂದು ಮಾತನ್ನೂ ಅದರ ಬಗ್ಗೆ ಆಡದೆ, ಜಾಣ ಮೌನ ವಹಿಸಿದ್ದವು.
ಈಗ ಪ್ರಕರಣವನ್ನು ಹಿಂಪಡೆಯಲು ಮುಂಬೈ ನ್ಯಾಯಾಲಯ ಮುಂಬೈ ಪೊಲೀಸ್ ಕ್ರೈಮ್ ಬ್ರಾಂಚ್ ಗೆ ಬುಧವಾರ ಅನುಮತಿ ನೀಡಿರುವುದಾಗಿ ವರದಿಯಾಗಿದೆ. ವಿಚಾರಣೆಯನ್ನು ಮುಂದುವರಿಸುವುದರಿಂದ ಆರೋಪಿಗಳಿಗೆ ಶಿಕ್ಷೆಯಾಗುವುದಿಲ್ಲ, ಬದಲಿಗೆ ನ್ಯಾಯಾಲಯದ ಸಮಯ ವ್ಯರ್ಥವಾಗುತ್ತದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಶಿಶಿರ್ ಹಿರಾಯ್ ತಿಳಿಸಿದ ನಂತರ ನ್ಯಾಯಾಲಯ ಕೇಸ್ ಹಿಂಪಡೆಯಲು ಅನುಮತಿ ನೀಡಿದೆ ಎಂದು ತಿಳಿದು ಬಂದಿದೆ.
ಮುಂಬೈ ಪೊಲೀಸರ ಎಫ್ಐಆರ್ ಆಧರಿಸಿ, ಈಡಿ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿತ್ತು. ತನ್ನ ತನಿಖಾ ವರದಿಯಲ್ಲಿ, ಪ್ರಕರಣದಲ್ಲಿ ಟಿಆರ್ಪಿ ಸಂಖ್ಯೆಗಳನ್ನು ದುರ್ಬಳಕೆ ಮಾಡಿದ ಆರೋಪದಿಂದ ರಿಪಬ್ಲಿಕ್ ಟಿವಿ ಮತ್ತು ರಿಪಬ್ಲಿಕ್ ಭಾರತ್ ಅನ್ನು ಈಡಿ ಈಗಾಗಲೇ ಮುಕ್ತಗೊಳಿಸಿತ್ತು.
ಸೆಕ್ಷನ್ 321 ರ ಅಡಿಯಲ್ಲಿ ಪ್ರಕರಣವನ್ನು ಹಿಂಪಡೆಯಲು ಅವಕಾಶ ನೀಡುವಂತೆ ಕ್ರೈಂ ಬ್ರಾಂಚ್ ನವೆಂಬರ್ 2023 ರಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಮುಂಬೈ ಪೊಲೀಸ್ ತನಿಖೆಯಲ್ಲಿನ ವಿರೋಧಾಭಾಸಗಳು ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿ ರಾಜ್ಯ ಗೃಹ ಇಲಾಖೆ ಪ್ರಕರಣವನ್ನು ಹಿಂಪಡೆಯಲು ನಿರ್ಧಾರ ಕೈಗೊಂಡಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.
ಪ್ರಕರಣದ ಕುರಿತು ಆಲಿಸಿದ ನ್ಯಾಯಾಲಯವು ಬುಧವಾರ ಪ್ರಕರಣವನ್ನು ಹಿಂಪಡೆಯಲು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿತು. ಅರ್ಜಿಯನ್ನು ಹಿಂಪಡೆಯಲು ಅನುಮತಿ ನೀಡುವ ಆದೇಶವನ್ನು ಜಾರಿಗೊಳಿಸಿತು.
ಹೇಗಿದೆ ನೋಡಿ ಬಿಜೆಪಿ ಸೇವಾ ಮಹಾತ್ಮೆ? ಬಿಜೆಪಿ ಸೇವೆಯಲ್ಲಿದ್ದರೆ, ಸದಾ ಬಿಜೆಪಿಯನ್ನು, ಮೋದಿಯನ್ನು ಹಾಡಿ ಹೊಗಳಿಕೊಂಡಿದ್ದರೆ ಅದರ ಫಲ ಇದ್ದೇ ಇದೆ ಎಂದಾಯಿತಲ್ಲವೆ? ಅರ್ನಬ್ ಅದೆಷ್ಟು ಬಾರಿ ವಿಪಕ್ಷಗಳ ಬಗ್ಗೆ ಸುಳ್ಳುಗಳನ್ನು ಹೇಳಿದ್ದಾರೊ ಲೆಕ್ಕವಿಲ್ಲ. ಮತ್ತು ಮೋದಿ ಗುಣಗಾನದಲ್ಲಿ ನಿರಂತರ ತೊಡಗಿದ್ದ ವ್ಯಕ್ತಿ ಆತ.
ಇದರ ಪರಿಣಾಮ ಸುಳ್ಳು ಟಿಆರ್ಪಿ ಕೇಸ್ನಿಂದ ಮುಕ್ತಿ ಸಿಕ್ಕಿದೆ. ತಪ್ಪು ಹಾದಿಯಲ್ಲಿ ತನ್ನ ಚಾನೆಲ್ನ ಟಿಆರ್ಪಿ ಹೆಚ್ಚಿಸಿಕೊಂಡಿದ್ದ ಆರೋಪ ಹೊತ್ತಿದ್ದ ವ್ಯಕ್ತಿ ಈಗ ನಿರಾಳ. ಇದಕ್ಕೂ ಮೊದಲೇ ಈ ಡಿ ಕೂಡ ಅರ್ನಬ್ ವಿರುದ್ಧದ ಕೇಸನ್ನು ಕೈಬಿಟ್ಟಿದೆ. ಅದಕ್ಕೆ ವಿಪಕ್ಷಗಳ ನಾಯಕರ ವಿರುದ್ಧ ಹೋಗುವುದಕ್ಕೇ ಸಮಯ ಸಾಲುತ್ತಿಲ್ಲ. ಇನ್ನು ಅರ್ನಬ್ ವಿರುದ್ಧ ಕ್ರಮ ಕೈಗೊಳ್ಳೋದಾದರೂ ಯಾವಾಗ ?
ಬಿಜೆಪಿ ಸಾನ್ನಿಧ್ಯದಲ್ಲಿ, ಮೋದಿ ಶ್ಲಾಘನೆಯಲ್ಲಿ ಇದ್ದವರಿಗೆ ಹೀಗೆ ಪರಿಶುದ್ಧವಾಗುವ ಯೋಗ ಇರುವುದು ಹೊಸದೇನೂ ಅಲ್ಲ. ಅರ್ನಬ್ ವಿಚಾರದಲ್ಲಿ ಅದು ಈಗ ಮತ್ತೊಮ್ಮೆ ಸಾಬೀತಾದಂತಾಗಿದೆ ಅಷ್ಟೆ. ಬಿಜೆಪಿಯ ಜನರೆನ್ನಿಸಿಕೊಳ್ಳುವ ಮೂಲಕ ಎಂಥ ಕಡುಭ್ರಷ್ಟರು ಕೂಡ ಶುದ್ಧರಾಗುವ ಜಾದೂ ಇತ್ತೀಚಿನ ವರ್ಷಗಳಲ್ಲಿ ಜೋರಾಗಿಯೇ ನಡೆದುಬಂದಿದೆ.
ವಿಪಕ್ಷಗಳನ್ನು ಹೆದರಿಸುವುದು, ಅವರ ನೆತ್ತಿಯ ಮೇಲೆ ಈಡಿ, ಐಟಿ. ಸಿಬಿಐ ತೂಗುಗತ್ತಿಯನ್ನು ಬಿಡುವುದು, ಅ ಮೂಲಕ ಅವರನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವುದು ಇದನ್ನೇ ಬಿಜೆಪಿ ಉದ್ದಕ್ಕೂ ಮಾಡಿಕೊಂಡು ಬಂದಿದೆ. ಮೊನ್ನೆಯಷ್ಟೇ ಟಿಎಂಸಿಯ ತಾಪಸ್ ರಾಯ್ ಬಿಜೆಪಿ ಸೇರಿಕೊಂಡು ಶುದ್ಧರಾದರು. ಭ್ರಷ್ಟಾಚಾರದ ಆರೋಪ ಹೊತ್ತಿದ್ದ, ಬಿಜೆಪಿ ದೃಷ್ಟಿಯಲ್ಲಿ ಕಳಂಕಿತರಾಗಿದ್ದ, ಬಿಜೆಪಿ ನಾಯಕ ರಿಂದಲೇ ಕಳ್ಳ ಎನ್ನಿಸಿಕೊಂಡಿದ್ದ ತಾಪಸ್ ರಾಯ್ ಈಗ ಬಿಜೆಪಿ ಪಾಳಯದವರಾಗುತ್ತಲೇ ಫಳಫಳಾಂತ ಹೊಳೆಯುತ್ತಿರುವುದು ಎಂಥ ಸೋಜಿಗ ಅಲ್ಲವೆ?
ಒಮ್ಮೆ ನೆನಪು ಮಾಡಿಕೊಳ್ಳುವುದಾದರೆ, ಜನವರಿ 12ರಂದು ಕೊಲ್ಕೊತ್ತಾದಲ್ಲಿ ತಾಪಸ್ ರಾಯ್ ಮನೆ ಮೇಲೆ ಈಡಿ ದಾಳಿ ನಡೆಯಿತು.
ಅದೇ ದಿನ ಬಿಜೆಪಿಯ ಸುವೇಂದು ಅಧಿಕಾರಿ ತಮ್ಮ ಹೇಳಿಕೆಯಲ್ಲಿ ತಾಪಸ್ ರಾಯ್ ಬಗ್ಗೆ "ಚೋರ್" ಎಂಬ ಪದ ಬಳಸಿದ್ದರು.
ಆತ ಜೈಲಿನ್ಲಲಿರಬೇಕೆಂದು ಬಂಗಾಳದ ಜನತೆ ಬಯಸುತ್ತಿದೆ ಎಂದು ಕೂಡ ಅದೇ ಸುವೇಂದು ಅಧಿಕಾರಿ ಹೇಳಿದ್ದರು. ಹಾಗಾದರೆ ತಾಪಸ್ ರಾಯ್ ಜೈಲಿಗೆ ಹೋಗಬೇಕಿತ್ತಲ್ಲವೆ? ಆದರೆ ಆದದ್ದೇನು? ದಾಳಿ ನಡೆದ ದಿನ, ಅದನ್ನು ರಾಜಕೀಯ ಪ್ರೇರಿತ, ಆರೋಪಗಳಲ್ಲಿ ಯಾವುದೇ ಸತ್ಯ ಇಲ್ಲ ಎಂದು ಟಿಎಂಸಿ ಹೇಳಿತ್ತು. ಮಾರ್ಚ್ 4ರಂದು ಟಿಎಂಸಿಗೆ ತಾಪಸ್ ರಾಯ್ ರಾಜೀನಾಮೆ ನೀಡಿದ್ದರು.
ಎರಡು ತಿಂಗಳ ಹಿಂದೆ ಯಾರ ಬಗ್ಗೆ "ಚೋರ್" ಎಂದು ಸುವೇಂದು ಅಧಿಕಾರಿ ಜರೆದಿದ್ದರೊ ಅದೇ ತಾಪಸ್ ರಾಯ್ ಬಗ್ಗೆ ಮಾತಿನ ಧಾಟಿಯೇ ಬದಲಾಗಿತ್ತು. ಅವರು ನಮ್ಮ ರಾಜ್ಯದ ಒಬ್ಬ ಹಿರಿಯ ನಾಯಕ. ಮಾಜಿ ಸಚಿವರು. 5 ಬಾರಿ ಶಾಸಕರಾಗಿದ್ದವರು. ಅವರನ್ನು ನಾನು ಬಿಜೆಪಿಗೆ ಸ್ವಾಗತಿಸುತ್ತೇನೆ ಎಂದು ಸುವೇಂದು ಅಧಿಕಾರಿ ಹೇಳಿಕೆ ಕೊಟ್ಟಿದ್ದರು.
ಮಾರ್ಚ್ 6ರಂದು ತಾಪಸ್ ರಾಯ್ ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ಈಡಿ ಭಯದ ಭಾರವನ್ನು ಕಳಚಿಕೊಂಡುಬಿಟ್ಟರು. ಪರಿಶುದ್ಧರಾಗಿಬಿಟ್ಟರು. ಅವತ್ತು ಬಿಜೆಪಿ ದೃಷ್ಟಿಯಲ್ಲಿ ಚೋರ್. ಅದೇ ತಾಪಸ್ ರಾಯ್ ಇವತ್ತು ಬಿಜೆಪಿಯ ಲೀಡರ್.
ಇದು ನೋಡಿ ಬಿಜೆಪಿ ಸೇವಾ ಮಹಾತ್ಮೆ. ಇದಕ್ಕಿಂತ ಲಜ್ಜೆಗೇಡಿ ರಾಜಕೀಯ ಯಾವುದಾದರೂ ಇದೆಯಾ ? ಬಿಜೆಪಿ ಹಾಗು ಮೋದಿಯವರ ಬೆಂಬಲಿಗರಾದರೂ ಅವರನ್ನು ಹೀಗ್ಯಾಕೆ ಮಾಡ್ತೀರಿ ಎಂದು ಕೇಳಬಾರದೇ ? ಬಿಜೆಪಿ ವಾಷಿಂಗ್ ಮಷಿನ್ ಸೇರಿ "ದೂಧ್ ಸೀ ಸಫೇದಿ" ತಂದುಕೊಂಡ ವಿಪಕ್ಷ ನಾಯಕರು ಹಲವರು. ಅಶೋಕ್ ಚವ್ಹಾಣ್ ಬಿಜೆಪಿ ಸೇರ್ಪಡೆ ಮೂಲಕ ಆದರ್ಶ ಹೌಸಿಂಗ್ ಹಗರಣದ ಕಳಂಕ ತೊಳೆದುಕೊಂಡರು. ಬಿಜೆಪಿ ಬೆಂಬಲದಿಂದ ರಾಜ್ಯಸಭೆಗೂ ಹೋದರು.
ಅಜಿತ್ ಪವಾರ್ ಬಗ್ಗೆಯಂತೂ ಮೋದಿ ತಿವಿದು ತಿವಿದು ಸಾವಿರಾರು ಕೋಟಿ ಹಗರಣದ ಆರೋಪ ಮಾಡಿ ಟೀಕಿಸಿದ್ದರು. ದೇವೇಂದ್ರ ಫಡ್ನವೀಸ್ ಕೂಡ ಪವಾರ್ ಬಗ್ಗೆ ಅತಿ ಕಟುವಾಗಿ ಮಾತನಾಡಿದ್ದವರೇ. ಈಗ ಅದೇ ಫಡ್ನವೀಸ್ ಅದೇ ಅಜಿತ್ ಪವಾರ್ ಜೊತೆ ಡಿಸಿಎಂ ಆಗಿ ಕೂತಿದ್ದಾರೆ.
ಛಗನ್ ಭುಜ್ಬಲ್, ನಾರಾಯಣ ರಾಣೆ ಎಲ್ಲರೂ ಬಿಜೆಪಿ ವಾಷಿಂಗ್ ಮಷಿನ್ನಲ್ಲಿ ತೊಳೆಯಲ್ಪಟ್ಟವರೇ. ಸ್ವತಃ ಸುವೇಂದು ಅಧಿಕಾರಿ ಕೂಡ ಭ್ರಷ್ಟಾಚಾರ ಆರೋಪ ಹೊತ್ತಿದ್ದವರು. ಆದರೆ ಟಿಎಂಸಿಯಿಂದ ಬಿಜೆಪಿಗೆ ಬರುತ್ತಲೇ... ನೋಡಿ ಎಷ್ಟು ಹೊಳೆಯುತ್ತಿದ್ದಾರೆ.
ಸ್ವತಃ ತಾನು ಚೋರ್ ಆಗಿದ್ದುದನ್ನೇ ಮರೆತು ಬೇರೆಯವರನ್ನೆಲ್ಲ ಚೋರ್ ಎನ್ನುವಷ್ಟು ಅವರೀಗ ಪರಿಶುದ್ಧರು. ಈಗ ಬಿಜೆಪಿಯಿಂದ ಅಸ್ಸಾಂ ಸಿಎಂ ಆಗಿರುವ ಹಿಮಂತ್ ಬಿಸ್ವ ಶರ್ಮ ಕೂಡ ಕಾಂಗ್ರೆಸ್ನಲ್ಲಿದ್ದಾಗ ಭ್ರಷ್ಟಾಚಾರ ಆರೋಪ ಹೊತ್ತಿದ್ದರು. ಬಿಜೆಪಿಗೆ ಬರುತ್ತಿದ್ದಂತೆ ಸಿಎಂ ಹುದ್ದೆಗೆ ಏರುವಷ್ಟು ಶುದ್ಧರಾಗಿಬಿಟ್ಟರು.
ಬಿಜೆಪಿಯ ಈ ಮಹಾ ಭ್ರಷ್ಟತೆ ಬಗ್ಗೆ ಮಡಿಲ ಮೀಡಿಯಾಗಳು ಪ್ರಶ್ನೆಗಳನ್ನೇ ಎತ್ತುವುದಿಲ್ಲ. 400 ಸೀಟು ಗೆಲ್ಲುವ ತಯಾರಿಯಲ್ಲಿರುವ ಬಿಜೆಪಿಗೆ, ಮೋದಿಜೀಗೆ ಇಂತಹ ಚೋರ್ ಗಳು ಯಾಕೆ ಬೇಕಾಗುತ್ತಾರೆ ? 400 ಸೀಟು ಗೆಲ್ಲುವವರಿಗೆ ಅಲ್ಲಲ್ಲಿ ಸರಕಾರಗಳನ್ನು ಉರುಳಿಸುವ, ಮೈತ್ರಿ ಕೂಟಗಳನ್ನು ಒಡೆಯುವ ಅಗತ್ಯ ಯಾಕೆ ಬೀಳುತ್ತಿದೆ ?
400 ಸೀಟು ಗೆಲ್ಲುವ ಆತ್ಮ ವಿಶ್ವಾಸ ಇರುವವರು ನಾವು ಒಬ್ಬೇ ಒಬ್ಬ ಭ್ರಷ್ಟಾಚಾರ ಆರೋಪಿಯನ್ನು ಪಕ್ಷಕ್ಕೆ ತೆಗೆದುಕೊಳ್ಳಲ್ಲ ಎಂದು ಘಂಟಾಘೋಷವಾಗಿ ಸಾರಬೇಕಿತ್ತಲ್ವಾ ? ಪಕ್ಷದೊಳಗೆ ಇರುವ ಭ್ರಷ್ಟರನ್ನು ಒದ್ದು ಓಡಿಸಬೇಕಿತ್ತಲ್ವಾ ? ಆದರೆ ಇಲ್ಲಿ ಆಗ್ತಾ ಇರೋದೇನು ? ದೇಶಾದ್ಯಂತ ಎಲ್ಲ ಪಕ್ಷಗಳಿಂದ ಭ್ರಷ್ಟಾತಿಭ್ರಷ್ಠರನ್ನು ತಂದು ಬಿಜೆಪಿಗೆ ಸೇರಿಸಿ ಕೊಳ್ತಾ ಇರೋದು ಯಾಕೆ ?
ಭ್ರಷ್ಟರು, ಅತ್ಯಾಚಾರಿಗಳು, ಅಕ್ರಮದಲ್ಲಿ, ಅನೈತಿಕತೆಯಲ್ಲಿ ಪಾಲ್ಗೊಂಡವರೆಲ್ಲರೂ ಬಿಜೆಪಿಗೆ ಹೋದರೆ ಸಾಕು, ಶುದ್ಧರಾಗಿ ಬಿಡುತ್ತಾರೆ.
ಇದ್ಯಾವ ಮ್ಯಾಜಿಕ್ ಮೋದೀಜಿ ? ಮೋದಿ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಬೇರೆ ಏನನ್ನೂ ಮಾಡದೇ ಇದ್ದರೂ, ವಿಪಕ್ಷಗಳ ನಾಯಕರನ್ನು ಹೀಗೆ ಶುದ್ಧಗೊಳಿಸುವ ಕೆಲಸವನ್ನು ಮಾತ್ರ ಶ್ರದ್ಧೆಯಿಂದ ಮಾಡಿಕೊಂಡು ಬಂದಿದೆ.
ಅದರ ಫಲವಾಗಿ ಈಗ ಬಿಜೆಪಿ ಸಂಪೂರ್ಣ ಭ್ರಷ್ಟಾಚಾರಿಗಳಿಂದ ಮುಕ್ತ ಪಕ್ಷವಾಗುವ ಬದಲು, ಎಲ್ಲ ಪಕ್ಷಗಳ ಭ್ರಷ್ಟಾಚಾರಿಗಳು ಬಂದು ಸೇರಿಕೊಳ್ಳುವ ಮಹಾ ಭ್ರಷ್ಟ ಸಾಗರವಾಗಿಬಿಟ್ಟಿದೆ. ಬಿಜೆಪಿ ಬಿಜೆಪಿಗಿಂತ ಹೆಚ್ಚು ಕಾಂಗ್ರೆಸ್ ಆಗಿದೆ, ಬಿಜೆಪಿ ಬಿಜೆಪಿಗಿಂತ ಹೆಚ್ಚು ಟಿಎಂಸಿ ಆಗಿದೆ.
ಮತ್ತು ವಿಪಕ್ಷವನ್ನು ಆದಷ್ಟೂ ಖಾಲಿ ಖಾಲಿ ಮಾಡುವ, ಅಲ್ಲಿನವರನ್ನು ಕೊಂಡುಕೊಳ್ಳುವ ಮೂಲಕ ಅಡ್ಡದಾರಿಯಿಂದ ಅಧಿಕಾರ ಹಿಡಿಯುವ ಕೆಲಸದಲ್ಲಿ ಸತತವಾಗಿ ತೊಡಗಿಕೊಂಡಿದೆ. ಈ ಪರಮ ಭ್ರಷ್ಟತೆಯ ಬಗ್ಗೆ ಏನೆಂದು ಹೇಳುವುದು ?