ಬಿಜೆಪಿಗೆ ಮೋದಿ, ಅಮಿತ್ ಶಾ ಕೊಡುವ 2 ಸಾವಿರ ರೂ. ಬೇಕೇ ?
5 ರೂ. ಕೊಡುವವರ ಇಮೇಲ್, ಮೊಬೈಲ್ ನಂಬರ್ ಕೇಳೋ ಬಿಜೆಪಿ ಬಳಿ ಕೋಟಿ ಕೋಟಿ ಕೊಟ್ಟವರ ವಿವರ ಯಾಕಿಲ್ಲ ? ► ಐನೂರು, ಸಾವಿರ ಕೊಟ್ಟವರ ಫೋಟೋ ಹಾಕ್ತಿದ್ದ ಬಿಜೆಪಿ ಕೋಟಿ ಕೊಡುವವರ ಹೆಸರು ಮುಚ್ಚಿಡೋದೇಕೆ ?
ಅಮಿತ್, ಮೋದಿ | Photo; PTI
ಮೊನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಗೆ 2 ಸಾವಿರ ರೂಪಾಯಿ ದೇಣಿಗೆ ಕೊಟ್ಟರು. ಎಷ್ಟು, ಎರಡು ಸಾವಿರ ರೂಪಾಯಿ !! ಇಷ್ಟೊಂದು ದೊಡ್ಡ ಮೊತ್ತದ ದೇಣಿಗೆಯನ್ನು ಪಕ್ಷಕ್ಕೆ ಕೊಡೋದು ಅಂದ್ರೆ ಏನು ಸುಮ್ನೇನಾ... ಆ ಎರಡು ಸಾವಿರ ರೂಪಾಯಿಯನ್ನೂ ಅವರು ರಶೀದಿ ಪಡೆದು ಅಧಿಕೃತವಾಗಿಯೇ ಕೊಟ್ಟಿದ್ದಾರೆ. ಅಂದ್ರೆ ಅದೇನು ಎಲೆಕ್ಟೋರಲ್ ಬಾಂಡ್ , ಎಲೆಕ್ಟೋರಲ್ ಟ್ರಸ್ಟ್ ಮೂಲಕ ಕೊಟ್ಟಿದ್ದಲ್ಲ. ನೇರವಾಗಿ ಪಾರ್ಟಿಗೆ ಕೊಟ್ಟಿರೋದು.
ದೇಶದ ಜನ, ಅದರಲ್ಲೂ ಅವರ ಕಟ್ಟಾ ಅಭಿಮಾನಿಗಳು ಹೇಗೂ ಪ್ರತಿಯೊಂದಕ್ಕೂ ಮೋದೀಜಿ ಅವರನ್ನೇ ಫಾಲೋ ಮಾಡ್ತಾರೆ. ಈಗ ಯಾರಿಗಾದರೂ ಏನಾದರೂ ದೇಣಿಗೆ ಕೊಡೋದಿದ್ರೆ ಅದಕ್ಕೂ ಮೋದೀಜಿ ಅವರನ್ನೇ ಫಾಲೋ ಮಾಡಬಹುದು. ಎರಡು ಸಾವಿರ ರೂಪಾಯಿಯಷ್ಟು ದೊಡ್ಡ ಮೊತ್ತದ ದೇಣಿಗೆ ಕೊಟ್ಟು ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಚುನಾವಣೆ ಕೂಡ ಸಮೀಪಿಸ್ತಾ ಇರೋದ್ರಿಂದ ಬಿಜೆಪಿಗೆ ಈ ಎರಡು ಸಾವಿರ ರೂಪಾಯಿಯಿಂದ ಒಂದಷ್ಟು ಖರ್ಚು ವೆಚ್ಚ ನೀಗಿಸೋದು ಸಾಧ್ಯ ಆಗಬಹುದು.
ಅಂದ ಹಾಗೆ, ಬಿಜೆಪಿಗೆ ಎಲೆಕ್ಟೋರಲ್ ಬಾಂಡ್ , ಎಲೆಕ್ಟೋರಲ್ ಟ್ರಸ್ಟ್ ಹಾಗು ನೇರ ದೇಣಿಗೆಗಳ ಮೂಲಕ 2018 ರಿಂದ 2023 ರವರೆಗಿನ ಆರು ವರ್ಷಗಳಲ್ಲೇ ಬಂದಿರುವ ದುಡ್ಡು 12 ಸಾವಿರದ 930 ಕೋಟಿ ರೂಪಾಯಿ. ಪ್ರಧಾನಿಯವರಿಂದ ಪ್ರೇರಣೆ ಪಡೆದು ಗೃಹ ಸಚಿವ ಅಮಿತ್ ಶಾ ಅವರೂ ಅಷ್ಟೇ ದೊಡ್ಡ ಮೊತ್ತ ಎರಡು ಸಾವಿರ ರೂಪಾಯಿ ಕೊಟ್ಟಿದ್ದಾರೆ. ಅಂದ್ರೆ ಅವರಿಬ್ಬರೂ ಸೇರಿ ನಾಲ್ಕು ಸಾವಿರ ರೂಪಾಯಿ ಕೊಟ್ಟಿದ್ದಾರೆ. ಅದೆಂತಹ ಹೃದಯ ವೈಶಾಲ್ಯತೆ ಅಲ್ವಾ...
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರೂ ಹಿಂದೆ ಬಿದ್ದಿಲ್ಲ. ಅವರೂ ಒಂದು ಸಾವಿರ ರೂಪಾಯಿಯಷ್ಟು ದೊಡ್ಡ ಮೊತ್ತವನ್ನು ಪಕ್ಷಕ್ಕೆ ದೇಣಿಗೆ ಕೊಟ್ಟಿದ್ದಾರೆ. ಎಷ್ಟೊಂದು ದೊಡ್ಡ ಮೊತ್ತ ಕೊಟ್ಟಿದ್ದಾರೆ ನೋಡಿ. ಹಾಗೆ ಕಳೆದ ಹತ್ತು ವರ್ಷಗಳಿಂದ ಮೋದಿ ಸರಕಾರದಲ್ಲಿ ಮಂತ್ರಿಗಳಾಗಿರೋ ಸ್ಮೃತಿ ಇರಾನಿ ಹಾಗು ಪಿಯೂಷ್ ಗೋಯಲ್ ಅವರೂ ತಲಾ ಒಂದೊಂದು ಸಾವಿರ ರೂಪಾಯಿ ಕೊಟ್ಟಿದ್ದಾರೆ.
ಆದರೆ ವಿದೇಶಾಂಗ ಸಚಿವ ಜೈಶಂಕರ್ ಅವರು ನಾನೇನೂ ಕಮ್ಮಿಯಲ್ಲ ಎಂದು ಪ್ರಧಾನಿ ಕೊಟ್ಟಷ್ಟೇ ದೊಡ್ಡ ಮೊತ್ತ ಅಂದ್ರೆ ಎರಡು ಸಾವಿರ ರೂಪಾಯಿ ಕೊಟ್ಟು ಬಿಟ್ಟಿದ್ದಾರೆ. ಹೀಗೇ ಆದರೆ ಬಿಜೆಪಿಗೆ ಮೋದಿ ಮಂತ್ರಿ ಮಂಡಲದ ಒಟ್ಟು ದೇಣಿಗೆ ಒಂದು ಲಕ್ಷ ರೂಪಾಯಿ ದಾಟೋದು ಬಹಳ ಕಷ್ಟ.
ಆದರೆ ಆಗಲೇ 12 ಸಾವಿರದ 930 ಕೋಟಿ ರೂಪಾಯಿ ಖಜಾನೆಯಲ್ಲಿ ಇಟ್ಟುಕೊಂಡಿರೋ ಬಿಜೆಪಿ ಈ ಎರಡು ಸಾವಿರ, ಒಂದು ಸಾವಿರ ರೂಪಾಯಿಗಳನ್ನು ಅದೆಷ್ಟು ಜೋಪಾನವಾಗಿ ಖರ್ಚು ಮಾಡಬಹುದು ಅಲ್ವಾ ? ಒಂದೊಂದು ಪೈಸೆಯನ್ನೂ ಲೆಕ್ಕ ಇಟ್ಟು ಎಲ್ಲೂ ದುಂದು ವೆಚ್ಚ ಆಗದ ಹಾಗೆ ಈ ದುಡ್ಡನ್ನು ಬಿಜೆಪಿ ಖರ್ಚು ಮಾಡಬಹುದು.
ಅಂದ ಹಾಗೆ ದೇಶದ ಯಾವುದೋ ಮೂಲೆಯಲ್ಲಿರುವ ಬಿಜೆಪಿಯ ತಾಲೂಕು ಮಟ್ಟದ ನಾಯಕರೇ ಒಂದೊಂದು ಸ್ಥಳೀಯ ಸಮಾವೇಶಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡೋದನ್ನು ನೀವು ನೋಡಿರಬಹುದು. ಆದರೆ ದೇಶಕ್ಕಾಗಿ ದಿನಕ್ಕೆ ಹದಿನೆಂಟು ಗಂಟೆ ನಿಸ್ವಾರ್ಥವಾಗಿ ಕೆಲಸ ಮಾಡುವವರು ಎರಡು ಸಾವಿರ , ಒಂದು ಸಾವಿರ ರೂಪಾಯಿ ಉಳಿಸಿ ಪಕ್ಷಕ್ಕೆ ಕೊಡೋದು ಬಹಳ ದೊಡ್ಡ ವಿಷಯ. ಹಾಗಾಗಿ ಅದರ ಜೊತೆ ಇಂತಹ ಸಣ್ಣ ಸಣ್ಣ ವಿಷಯಗಳನ್ನೆಲ್ಲ ಹೇಳೋದು ಸರಿಯಲ್ಲ.
ಲಾಟರಿಯವರು, ಎನರ್ಜಿ ಡ್ರಿಂಕ್ ಕಂಪೆನಿಯವರು ಕೋಟಿ ಕೋಟಿ ರೂಪಾಯಿ ದೇಣಿಗೆ ಕೊಡೋದೇ ಒಂದು ತೂಕವಾದ್ರೆ... ಪ್ರಧಾನಿ ಮೋದಿ ಎರಡು ಸಾವಿರ ರೂಪಾಯಿ ಕೊಡೋದೇ ಒಂದು ತೂಕ. ಏನಂತೀರಿ ? ಈ ಒಂದು ಸಾವಿರ, ಎರಡು ಸಾವಿರ ರೂಪಾಯಿಗಳನ್ನು ಒಟ್ಟುಗೂಡಿಸಿ ಬಿಜೆಪಿ ಈ ಬಾರಿ ವಿಕಸಿತ ಭಾರತವನ್ನು ನಿರ್ಮಿಸಲು ಹೊರಟಿದೆ.
ಅಂದರೆ ನೂರಾ ನಲ್ವತ್ತು ಕೋಟಿ ಜನರಿರುವ ಇಷ್ಟು ದೊಡ್ಡ ದೇಶವನ್ನು ಈ ಸಾವಿರಾರು ರೂಪಾಯಿ ದೇಣಿಗೆ ಮೂಲಕ ವಿಕಸಿತ ದೇಶ ಮಾಡಲು ಬಿಜೆಪಿ ಸಜ್ಜಾಗಿದೆ. ಅದನ್ನು ನಾವೆಲ್ಲರೂ ಪ್ರಶಂಸಿಸಬೇಕು. ಬಿಜೆಪಿಯ ಕಾರ್ಯಕರ್ತರು ಯಾರಾದ್ರೂ ಪಕ್ಷಕ್ಕೆ ಲಕ್ಷ ರೂಪಾಯಿ ದೇಣಿಗೆ ಕೊಟ್ಟಿದ್ರೆ ಈಗ ಪ್ರಧಾನಿ ಮೋದಿ ಎರಡು ಸಾವಿರ ರೂಪಾಯಿ ಕೊಟ್ಟಿದ್ದನ್ನು ನೋಡಿ ಅವರೂ ಪುಳಕಿತರಾಗಬಹುದು. ನಾವು ಲಕ್ಷ ಲಕ್ಷ ಕೊಡುವಾಗ ನಮ್ಮ ಪ್ರಧಾನಿ ಎರಡು ಸಾವಿರ ರೂಪಾಯಿ ಕೊಟ್ಟಿದ್ದಾರೆ. ಅಂದ್ರೆ ಆ ಎರಡು ಸಾವಿರಕ್ಕೆ ಅದೆಷ್ಟು ದೊಡ್ಡ ಮೌಲ್ಯವಿದೆ ಎಂದು ಅವರೂ ಭಾರೀ ತಲೆಕೆಡಿಸಿಕೊಂಡಿರಬಹುದು.
ಅಂದ ಹಾಗೆ ಪ್ರಧಾನಿ ಮೋದಿಯವರ ವೆಬ್ ಸೈಟ್ ನಲ್ಲಿ ದೇಣಿಗೆ ಕೊಡುವವರಿಗೆ ಒಂದು ವಿಭಾಗ ಇದೆ. ಇದರಲ್ಲಿ 5 ರೂಪಾಯಿಯಿಂದ ಒಂದು ಕೋಟಿ ರೂಪಾಯಿವರೆಗೂ ದೇಣಿಗೆ ಕೊಡುವ ಅವಕಾಶವಿದೆ.
ಆದರೆ ಐದು ರೂಪಾಯಿ ಕೊಡುವವರೂ ತಮ್ಮ ಮೊಬೈಲ್ ನಂಬರ್ ಹಾಗು ಇಮೇಲ್ ಐಡಿಯನ್ನೂ ಮೊದಲೇ ಕೊಡಬೇಕು. ಐದು ರೂಪಾಯಿ ಕೊಡುವವರಲ್ಲಿ ಮೊಬೈಲ್ ನಂಬರ್ ಹಾಗು ಇಮೇಲ್ ಐಡಿ ಕೇಳುವ ಬಿಜೆಪಿ ತನಗೆ ಕೋಟ್ಯಂತರ ರೂಪಾಯಿ ಎಲೆಕ್ಟೊರಲ್ ಬಾಂಡ್ ಕೊಟ್ಟವರ ವಿವರ ತನ್ನ ಬಳಿ ಇಲ್ಲ ಎಂದು ಹೇಳುತ್ತಿದೆ. ಈ ತಮಾಷೆಗೆ ಏನು ಹೇಳ್ತೀರಿ ?
ಸಾವಿರ, ಎರಡು ಸಾವಿರ ರೂಪಾಯಿ ಕೊಡುವ ಪ್ರಧಾನಿ , ಗೃಹ ಸಚಿವರು, ಇತರ ಸಚಿವರು ತಮ್ಮ ರಶೀದಿ ಟ್ವೀಟ್ ಮಾಡಿ ಬಹಿರಂಗ ಪಡಿಸ್ತಾ ಇದ್ದಾರೆ. ಆದರೆ ಕೋಟಿ ಕೋಟಿ ಕೊಟ್ಟವರ ಹೆಸರು, ವಿವರ ಮಾತ್ರ ಕೇಳ್ಬೇಡಿ, ಅದು ನಮ್ಮಲ್ಲಿ ಇಲ್ಲ ಎನ್ನುತ್ತಿದೆ ಬಿಜೆಪಿ.
ಇದನ್ನು ನೀವು ಅರ್ಥ ಮಾಡಿಕೊಳ್ಬೇಕು. ಈ ಸಾವಿರ, ಎರಡು ಸಾವಿರ ರೂಪಾಯಿ ಕೊಟ್ಟು ರಶೀದಿ ಟ್ವೀಟ್ ಮಾಡುವ ಹಿಂದಿರುವ ಗೇಮ್ ಪ್ಲ್ಯಾನ್ ಏನು ಎಂಬುದು ದೇಶದ ಜನ ತಿಳ್ಕೊಬೇಕು.
2014 ರಲ್ಲಿ ನರೇಂದ್ರ ಮೋದಿ ಮೊದಲ ಬಾರಿ ಪ್ರಧಾನಿ ಆಗಲು ಸ್ಪರ್ಧಿಸಿದ್ದಾಗ ಪಕ್ಷಕ್ಕೆ ದೇಣಿಗೆ ಕೊಟ್ಟವರ ಹೆಸರು, ಫೋಟೋ ಸಹಿತ ಬಿಜೆಪಿ ಟ್ವೀಟ್ ಮಾಡ್ತಾ ಇತ್ತು. ಹೆಮ್ಮೆಯಿಂದ ಇಂತವರು ಪಕ್ಷಕ್ಕೆ ದೇಣಿಗೆ ಕೊಟ್ಟಿದ್ದಾರೆ ಎಂದು ಹೇಳಿಕೊಳ್ಳುತ್ತಿತ್ತು. ಈಗ ನೋಡಿದ್ರೆ ಸಾವಿರ, ಎರಡು ಸಾವಿರ ಕೊಟ್ಟವರ ರಶೀದಿ ಟ್ವೀಟ್ ಮಾಡಿ, ಕೋಟಿ ಕೋಟಿ ಕೊಟ್ಟವರ ವಿವರ ಮಾತ್ರ ನಮ್ಮಲ್ಲಿಲ್ಲ ಎನ್ನುತ್ತಿದೆ.
ಅಂತೂ ಇಂತೂ 12 ಸಾವಿರದ 930 ಕೋಟಿ ರೂಪಾಯಿ ತನ್ನ ಬ್ಯಾಂಕ್ ಖಾತೆಯಲ್ಲಿ ಇಟ್ಟುಕೊಂಡಿರುವ ಬಿಜೆಪಿ ಆ ಕೋಟಿ ಕೋಟಿಗಳ ವಿವರ ಕೊಡ್ತಾ ಇಲ್ಲ. ಆದರೆ ನಾವು ಕೇಳೇ ಇಲ್ದಿದ್ರೂ ಒಂದು ಸಾವಿರ, ಎರಡು ಸಾವಿರ ರೂಪಾಯಿ ಕೊಟ್ಟ ಗಣ್ಯರ ಲೆಕ್ಕವನ್ನೂ ಜನರ ಮುಂದಿಡುತ್ತಿದೆ. ಇದು ಯಾವ ರೀತಿಯ ಆಟ ಎಂಬುದನ್ನು ಭಾರತೀಯರು ಅರ್ಥ ಮಾಡಿಕೊಳ್ಳಬೇಕಾಗಿದೆ.