ಕಾಶ್ಮೀರಿ ಪಂಡಿತೆಯನ್ನು ವಿಮಾನ ನಿಲ್ದಾಣದಿಂದಲೇ ಗಡಿಪಾರು ಮಾಡಿದ ಮೋದಿ ಸರಕಾರ | Nitasha Kaul | Kashmiri Pandit
ಸಂವಿಧಾನ, ಬಹುತ್ವ ಎಂದರೆ ಮೋದಿ ಸರಕಾರಕ್ಕೆ ಇಷ್ಟೊಂದು ಅಸಹನೆ ಏಕೆ ? ► ಮದರ್ ಆಫ್ ಡೆಮಾಕ್ರಸಿ ಬುದ್ಧಿಜೀವಿಗಳ ಜೊತೆ ಹೀಗೆ ಮಾಡುತ್ತಾ ?
Photo: PTI
ವಿಶ್ವಗುರು ಒಬ್ಬ ಚಿಂತಕಿ ಜೊತೆ ಈ ರೀತಿ ನಡೆದು ಕೊಳ್ಳುತ್ತದಾ ? ಮದರ್ ಆಫ್ ಡೆಮಾಕ್ರಸಿ ಯಲ್ಲಿ ಈ ರೀತಿ ನಡೆಯುತ್ತಾ ? ಮೋದಿ ಸರ್ಕಾರಕ್ಕೆ ತನ್ನ ವಿರುದ್ಧವಾಗಿ, ಸಂಘ ಪರಿವಾರದ ವಿರುದ್ಧವಾಗಿ ಮಾತನಾಡುವವರ ಬಗ್ಗೆ ಮೊದಲನೆಯದಾಗಿ ಅಸಹಿಷ್ಣುತೆ ಮತ್ತು ದ್ವೇಷ. ಜೊತೆಗೆ ಅಷ್ಟೇ ಭಯ.
ಈ ಅಸಹನೆಯನ್ನು ಅದು ಬಹಿರಂಗವಾಗಿಯೇ ವ್ಯಕ್ತಪಡಿಸುತ್ತ ಬಂದಿದೆ. ಮತ್ತು ಇದೇ ಕಾರಣಕ್ಕೆ ಭಾರತೀಯ ಮೂಲದ ಮತ್ತು ಲಂಡನ್ನಲ್ಲಿ ಪ್ರಾಧ್ಯಾಪಕಿಯಾಗಿರುವ ಲೇಖಕಿ ನಿತಾಶಾ ಕೌಲ್ ಅವರೊಡನೆ ಅತ್ಯಂತ ಅಗೌರವದಿಂದ ನಡೆದುಕೊಂಡಿದೆ. ಆದರೆ, ಪ್ರಶ್ನೆಗಳೇನೆಂದರೆ, ಮೋದಿ ಸರ್ಕಾರಕ್ಕೆ ಚಿಂತಕರ ಬಗ್ಗೆ, ಬುದ್ಧಿಜೀವಿಗಳ ಬಗ್ಗೆ, ಸತ್ಯದ ಬಗ್ಗೆ ಇಷ್ಟೊಂದು ಅಸಹನೆ, ಸೇಡು ಯಾಕೆ?
ಆಕೆ ಪಾಲ್ಗೊಳ್ಳಬೇಕಿದ್ದ ಸಂವಿಧಾನ ಸಮಾವೇಶದ ವಿಚಾರವಾಗಿ ಏಕೆ ಇಷ್ಟೊಂದು ಅಸಹನೆ? ಯಾಕೆ ಒಂದು ಭಾಷಣದ ಹಿನ್ನೆಲೆಯಲ್ಲಿ, ಒಂದು ಬರಹದ ಹಿನ್ನೆಲೆಯಲ್ಲಿ ದೇಶಕ್ಕೇ ಪ್ರವೇಶ ನಿರಾಕರಿಸುವ ಮಟ್ಟಕ್ಕೆ ಹೋಗಿಬಿಡುತ್ತದೆ ಈ ಸರ್ಕಾರ?
ವಿಶ್ವಗುರು ದೇಶ ಹಾಗೂ ಸರಕಾರ ನಡೆದುಕೊಳ್ಳುವ ರೀತಿಯೇ ಇದು ? ಮದರ್ ಆಫ್ ಡೆಮಾಕ್ರಸಿ ಹೀಗೂ ವರ್ತಿಸುತ್ತದೆಯೆ ?
ಮೊದಲು ಏನು ಘಟನೆ, ಆ ಪ್ರಾಧ್ಯಾಪಕಿ ಯಾರು ಎಂಬುದನ್ನು ಗಮನಿಸೋಣ. ಲೇಖಕಿ, ಕವಯಿತ್ರಿ, ಹೋರಾಟಗಾರ್ತಿ ನಿತಾಶಾ ಕೌಲ್ ಭಾರತೀಯ ಮೂಲದವರು. ಕಾಶ್ಮೀರಿ ಪಂಡಿತರಾಗಿರುವ ನಿತಾಶಾ, ಲಂಡನ್ನ ವೆಸ್ಟ್ ಮಿನಿಸ್ಟರ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕಿ.
ಸಾಗರೋತ್ತರ ಭಾರತೀಯ ಪ್ರಜೆಯೂ ಆಗಿರುವ ಆಕೆ, ಆರೆಸ್ಸೆಸ್ನ ಕಟು ಟೀಕಾಕಾರರೂ ಹೌದು. ಇಷ್ಟು ಗೊತ್ತಾಗುತ್ತಿದ್ದಂತೆ, ಮೋದಿ ಸರ್ಕಾರ ಆಕೆಯ ವಿಚಾರವಾಗಿ ಹೊಂದಿರಬಹುದಾದ ಭಾವನೆಗಳೇನು ಎಂಬುದನ್ನು ನೀವು ಊಹಿಸಬಲ್ಲಿರಿ. ನಿಜ. ಆಕೆ ಸಂಘ ಪರಿವಾರದ ವಿರೋಧಿಯಾಗಿದ್ದುದಕ್ಕೇ, ಸಂಘಪರಿವಾರದ ಬಗ್ಗೆ ಕಟುವಾಗಿ ಮಾತನಾಡಿದ್ದುದನ್ನು ಸಹಿಸದೆ, ಆಕೆಯ ವಿರುದ್ಧ ಮೋದಿ ಸರ್ಕಾರ ದುರ್ನಡತೆ ತೋರಿಸಿದೆ ಎನ್ನುವುದು ಸ್ಪಷ್ಟ. ಘಟನೆಯ ವಿವರವನ್ನು ಗಮನಿಸುವುದಾದರೆ, ಕರ್ನಾಟಕ ಸರಕಾರ ಆಯೋಜಿಸಿದ್ದ
ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ಮೌಲ್ಯಗಳ ಕುರಿತಾದ ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತೆ ಸಮ್ಮೇಳನದಲ್ಲಿ ಉಪನ್ಯಾಸ ನೀಡಲು ಕರ್ನಾಟಕ ಸರ್ಕಾರ ನಿತಾಶಾ ಕೌಲ್ ಅವರನ್ನು ಆಹ್ವಾನಿಸಿತ್ತು ಅದರಲ್ಲಿ ಪಾಲ್ಗೊಳ್ಳಲು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಅಲ್ಲಿಂದ ಹೊರಹೋಗಲು ಅವರಿಗೆ ಅನುಮತಿನಿರಾಕರಿಸಲಾಯಿತು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಅಧಿಕಾರಿಗಳು ತಡೆದರು ಮತ್ತು ಹೊರ ಹೋಗಲು ಬಿಡಲಿಲ್ಲ ಎಂಬ ವಿಚಾರವಾಗಿ ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ಧಾರೆ.
ಸುಮಾರು 24 ಗಂಟೆಗಳ ಬಳಿಕ ಅವರನ್ನು ಬ್ರಿಟಿಷ್ ಏರ್ವೇಸ್ ವಿಮಾನದ ಮೂಲಕ ಲಂಡನ್ಗೆ ವಾಪಸ್ ಕಳಿಸಲಾಯಿತು.
ತಮ್ಮನ್ನು ತಡೆದ ಅಧಿಕಾರಿಗಳು ಅದಕ್ಕೆ ನಿಖರ ಕಾರಣ ನೀಡಲಿಲ್ಲ. ನಾವು ಏನೂ ಮಾಡಲು ಸಾಧ್ಯವಿಲ್ಲ. ದಿಲ್ಲಿಯಿಂದ ಆದೇಶ ಬಂದಿದೆ ಎಂಬ ಮಾತು ಹೊರತುಪಡಿಸಿ ಬೇರಾವ ಕಾರಣವನ್ನೂ ಅಧಿಕಾರಿಗಳು ನನಗೆ ನೀಡಲಿಲ್ಲ ಎಂದು ಎಕ್ಸ್ನಲ್ಲಿ ನಿತಾಶಾ ಹೇಳಿಕೊಂಡಿದ್ದಾರೆ.
ವರ್ಷಗಳ ಹಿಂದೆ ಆರ್ಎಸ್ಎಸ್ ವಿರುದ್ಧ ಟೀಕೆ ಮಾಡಿದ್ದಕ್ಕಾಗಿ ಭಾರತಕ್ಕೆ ಪ್ರವೇಶ ನಿರಾಕರಿಸಲಾಗುತ್ತಿದೆ ಎಂದು ಅಧಿಕಾರಿಗಳು ಅನಧಿಕೃತವಾಗಿ ಹೇಳಿದರೆಂದು ನಿತಾಶಾ ಬರೆದುಕೊಂಡಿದ್ದಾರೆ. ಆದರೆ ನಾನು ಭಾರತ ಪ್ರವೇಶಿಸಲು ಸಾಧ್ಯವಿಲ್ಲ ಎಂಬ ಯಾವುದೇ ಪೂರ್ವಭಾವಿ ಮಾಹಿತಿ ಅಥವಾ ನೋಟಿಸ್ ಅನ್ನು ನನಗೆ ನೀಡಲಾಗಿರಲಿಲ್ಲ ಎಂದು ಆಕೆ ಬರೆದುಕೊಂಡಿದ್ದಾರೆ.
ನಾನು ಭಾರತಕ್ಕೆ ಹಲವಾರು ಬಾರಿ ಪ್ರವಾಸ ಮಾಡಿದ್ದೇನೆ. ನನ್ನನ್ನು ಕರ್ನಾಟಕ ಸರ್ಕಾರ ಆಹ್ವಾನಿಸಿತ್ತು, ಆದರೆ ಕೇಂದ್ರ ಸರ್ಕಾರವು ಪ್ರವೇಶವನ್ನು ನಿರಾಕರಿಸಿತು. ಪ್ರಜಾಸತ್ತಾತ್ಮಕ ಮತ್ತು ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಮಾತನಾಡಿದ್ದಕ್ಕಾಗಿ ಭಾರತಕ್ಕೆ ಪ್ರವೇಶವನ್ನು ನಿರಾಕರಿಸಲಾಗಿದೆ ಎಂದು ಅವರು ಬರೆದಿದ್ದಾರೆ. ತಾವು ಅನುಭವಿಸಿದ ಸಂಕಟವನ್ನು ಅವರು ವಿವರಿಸಿದ್ದಾರೆ.
ಕನಿಷ್ಠ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವುದಕ್ಕೂ ಅಧಿಕಾರಿಗಳು ನಿರಾಕರಿಸಿದರು. ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಹಲವಾರು ಬಾರಿ ಕರೆ ಮಾಡಿದರೂ, ಆಹಾರ, ನೀರು, ದಿಂಬು ಮತ್ತು ಹೊದಿಕೆಯನ್ನು ನೀಡಲಿಲ್ಲ ಎಂದು ಬರೆದುಕೊಂಡಿರುವ ಅವರು, ದಿಂಬಿಲ್ಲದೆ ಪೇಪರ್ ರೀಮ್ ಮೇಲೆ ತಲೆಯಿಟ್ಟು ಮಲಗಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ನಾನು ಜಾಗತಿಕವಾಗಿ ಗೌರವಾನ್ವಿತಳಾಗಿರುವ ಚಿಂತಕಿ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳ ಬಗ್ಗೆ, ಲಿಂಗ ಸಮಾನತೆ ಮೊದಲಾದವುಗಳ ಬಗ್ಗೆ ಕಳಕಳಿಯಿರುವವಳು. ನಾನು ಭಾರತ ವಿರೋಧಿ ಅಲ್ಲ. ಬದಲಾಗಿ ಸರ್ವಾಧಿಕಾರದ ವಿರೋಧಿ ಮತ್ತು ಪ್ರಜಾತಂತ್ರವಾದಿ ಎಂದು ನಿತಾಶಾ ಹೇಳಿದ್ದಾರೆ.
ತನ್ನ ವಿರುದ್ಧದ ಕೇಂದ್ರ ಸರ್ಕಾರದ ಕ್ರಮಕ್ಕೆ ಅವರು ನೋವಿನಿಂದಲೇ ಪ್ರತಿಕ್ರಿಯಿಸಿದ್ದಾರೆ. ಈ ಕ್ರಮದಿಂದಾಗಿ ನಾನು ಟಿಬೆಟಿಯನ್ ದೇಶಭ್ರಷ್ಟರು ಮತ್ತು ಉಕ್ರೇನಿಯನ್ ದೇಶಭ್ರಷ್ಟರ ಸಾಲಿಗೆ ಸೇರಿದಂತಾಗಿದೆ. ಇತಿಹಾಸದುದ್ದಕ್ಕೂ ವಿವೇಚನಾರಹಿತ ಅಧಿಕಾರದ ಅನಿಯಂತ್ರಿತ ನಡೆಯನ್ನು ಎದುರಿಸಿದವರ ಸಾಲಿಗೆ ಸೇರಿದಂತಾಗಿದೆ ಎಂದಿದ್ಧಾರೆ.
ಮೋದಿ ಸರ್ಕಾರವನ್ನು ಟೀಕಿಸಿದ ಅವರು, ನನ್ನ ಲೇಖನಿ ಮತ್ತು ಮಾತಿನಿಂದ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಕ್ಕೆ ಹೇಗೆ ಅಪಾಯವಿರಲು ಸಾಧ್ಯ? ರಾಜ್ಯ ಸರ್ಕಾರದಿಂದ ಆಹ್ವಾನಿತ ಪ್ರಾಧ್ಯಾಪಕಿಯೊಬ್ಬರಿಗೆ ಸಂವಿಧಾನದ ಸಮ್ಮೇಳನದಲ್ಲಿ ಕೇಂದ್ರ ಸರ್ಕಾರ ಅವಕಾಶ ನೀಡದಿರುವುದು ಎಷ್ಟು ಸರಿ? ಇದು ನಾವು ಗೌರವಿಸುವ ಭಾರತವಲ್ಲವೇ? ಎಂದು ಅವರು ಪ್ರಶ್ನಿಸಿದ್ಧಾರೆ.
ಮೋದಿ ಸರ್ಕಾರ ನಿತಾಶಾ ಬಗ್ಗೆ ಇoಥದೊಂದು ಸೇಡಿನ ನಡೆ ತೋರಿಸಲು ಇರುವ ಮುಖ್ಯ ಕಾರಣಗಳನ್ನು ಹೀಗೆ ನೆನಪಿಸಿಕೊಳ್ಳಬಹುದು. ಒಂದನೆಯದಾಗಿ, ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿಯನ್ವಯ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಂಡ ನಂತರ, ಕಾಶ್ಮೀರದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು 2019ರಲ್ಲಿ ನಿತಾಶಾ ಕೌಲ್ ಅಮೆರಿಕಾದ ವಿದೇಶಾಂಗ ವ್ಯವಹಾರಗಳ ಸದನ ಸಮಿತಿಯೆದುರು ಸಾಕ್ಷ್ಯ ನುಡಿದಿದ್ದರು.
ಎರಡನೆಯದಾಗಿ, ಮೋದಿ ಸರ್ಕಾರ ಹಾಡಿ ಹೊಗಳಿದ್ದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ವಿರುದ್ಧ ನಿತಾಶಾ ಬಹಿರಂಗವಾಗಿಯೇ ಟೀಕಿಸಿದ್ದರು.
ಆ ಸಿನಿಮಾ ಕಾಶ್ಮೀರದ ಇತಿಹಾಸ ಮತ್ತು ರಾಜಕೀಯವನ್ನು ಇಸ್ಲಾಮೋಫೋಬಿಕ್ ಕಥೆಯಾಗಿ ಬಿಂಬಿಸಿರುವುದಾಗಿಯೂ, ಹಿಂದುತ್ವ ರಾಜಕಾರಣಕ್ಕೆ ಅದರಿಂದ ಲಾಭವಿದೆಯೆಂದೂ ನಿತಾಶಾ ದಿ ನ್ಯೂಸ್ ಮಿನಿಟ್ನಲ್ಲಿ ಬರೆದಿದ್ದರು.
ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ಇರುವವರನ್ನು ಸಹಿಸಲಾರದ ಮೋದಿ ಸರ್ಕಾರ ನಿತಾಶಾ ಅವರ ಕಟು ಟೀಕೆಗೆ ಈಗ ಹೀಗೆ ಸೇಡು ತೀರಿಸಿಕೊಂಡಿತೆ? ಸಂವಿಧಾನ ಸಮ್ಮೆಳನದಲ್ಲಿ ಅವರು ಮಾತನಾಡಿದರೆ, ಚುನಾವಣೆಯ ಹೊತ್ತಿನಲ್ಲಿ ತನ್ನ ಜಾತಕ ಬಯಲಾಗಲಿದೆ ಎಂಬ ಭಯದಿಂದ ಮೋದಿ ಸರ್ಕಾರ ಹೀಗೆ ನಡೆದುಕೊಂಡಿತೆ?
ಆದರೆ ವಿದ್ವಾಂಸರೊಬ್ಬರ ವಿಚಾರವಾಗಿ, ಅವರು ಎಲ್ಲ ಅಧಿಕೃತ ದಾಖಲೆಗಳೊಂದಿಗೇ ಭಾರತಕ್ಕೆ ಬಂದಿದ್ದಾಗಲೂ ಪ್ರವೇಶ ನಿರಾಕರಿಸಲಾಯಿತು ಎಂಬುದು ಮಾತ್ರ ವಿಚಿತ್ರ ಧೋರಣೆ. ಪ್ರಜಾಪ್ರಭುತ್ವವಿರುವ ದೇಶದಲ್ಲಿ ಸರ್ವಾಧಿಕಾರಿ ನಡೆಯೊಂದು ಈ ಮೂಲಕ ಕಂಡಂತಾಯಿತಲ್ಲವೆ ಎಂಬ ಅನುಮಾನವೂ ಕಾಡದೇ ಇರುವುದಿಲ್ಲ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ವಿಚಾರಗಳನ್ನೂ ವಿರೋಧಿಸುವ ಮೋದಿ ಸರಕಾರದ ಈ ನಡೆಯನ್ನು ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ.