ಒಂದು ದೇಶ, ಒಂದು ಚುನಾವಣೆ ಸಂಸದೀಯ ಪ್ರಜಾಪ್ರಭುತ್ವದಿಂದ ಅಧ್ಯಕ್ಷೀಯ ಸರ್ವಾಧಿಕಾರದೆಡೆಗೆ
ಬಿಜೆಪಿಯ ಹಿರಿಯ ಮುಖಂಡ ಅಡ್ವಾಣಿ ಶುರು ಮಾಡಿದ ‘ಒಂದು ದೇಶ, ಒಂದು ಚುನಾವಣೆ’ ಎನ್ನುವ ಸಂಘಿ ಗೀಳನ್ನು 2014ರ ಚುನಾವಣೆಯ ನಂತರ ಪ್ರಧಾನಿ ಮೋದಿ ಮುಂದುವರಿಸಿಕೊಂಡು ಬಂದಿದ್ದರು. ಹಿಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ (ಗಣರಾಜ್ಯ ದಿನಾಚರಣೆಯಂದು) ಮತ್ತು ರಾಮನಾಥ ಕೋವಿಂದ್ (ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ) ಈ ಕುರಿತು ಪ್ರಸ್ತಾಪ ಮಾಡಿದ್ದರು. ಈ ಬೆಳವಣಿಗೆಗಳು ಇಲ್ಲಿನ ಪ್ರಜ್ಞಾವಂತರಿಗೆ ಆತಂಕಮಿಶ್ರಿತ ಅಚ್ಚರಿ ಮೂಡಿಸುತ್ತಿರುವಾಗಲೇ ಈಗ ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಗಳಿಗೆ ಒಟ್ಟಿಗೆ ಚುನಾವಣೆ ನಡೆಸುವ ‘ಒಂದು ದೇಶ, ಒಂದು ಚುನಾವಣೆ’ ವಿಚಾರ ಚರ್ಚೆಯಲ್ಲಿ ತೇಲಿ ಬಿಡಲಾಗಿದೆ.
ಹಠಾತ್ತನೆ ಮಾಜಿ ರಾಷ್ಟ್ರಪತಿ ಕೋವಿಂದ್ ಅವರ ಅಧ್ಯಕ್ಷತೆಯಲ್ಲಿ ಎಂಟು ಸದಸ್ಯರ ಸಮಿತಿ ನೇಮಕಾತಿ ಮಾಡಲಾಗಿದೆ. ಸೆಪ್ಟಂಬರ್ 23ರಂದು ಈ ಸಮಿತಿಯ ಸಭೆ ಕರೆಯಲಾಗಿದೆ. ಕೇವಲ ಕೆಲವೇ ದಿನಗಳ ಅವಧಿಯಲ್ಲಿ ಈ ಎಲ್ಲಾ ವಿದ್ಯಮಾನಗಳು ನಡೆದು ಹೋಯಿತು. ಈ ಹಿಂದೆ ಕಾನೂನು ಆಯೋಗ, ನೀತಿ ಆಯೋಗ ಮತ್ತು ಸಂಸದೀಯ ಸ್ಥಾಯಿ ಸಮಿತಿ ಇದರ ಕುರಿತು ತಮ್ಮ ಶಿಫಾರಸುಗಳನ್ನು ಪ್ರಕಟಿಸಿದ್ದವು. ರಾಜಕೀಯವಾಗಿ ಬಿಜೆಪಿಗೆ ಆತಂಕದ ಪರಿಸ್ಥಿತಿಯಿದೆ. ಕರ್ನಾಟಕದಲ್ಲಿ ಪಕ್ಷದ ಹೀನಾಯ ಸೋಲು ಮತ್ತು ಮುಂಬರುವ ಮಧ್ಯಪ್ರದೇಶ ಚುನಾವಣೆಯಲ್ಲಿ ಸೋಲುವ ಭೀತಿ ಒಂದೆಡೆಯಾದರೆ, ಅತ್ತ ರಾಜಸ್ಥಾನ ಮತ್ತು ಛತ್ತೀಸ್ಗಡದಲ್ಲಿ ಪಕ್ಷದ ಪರಿಸ್ಥಿತಿ ಬಿಗಡಾಯಿಸಿದೆ.
ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಗೆಲ್ಲುವ ದೂರದ ಸಾಧ್ಯತೆಗಳೂ ಇಲ್ಲ. ಮತ್ತೊಂದೆಡೆ ಮುಂಬರುವ ಲೋಕಸಭಾ ಚುನಾವಣೆಗಾಗಿ ವಿರೋಧ ಪಕ್ಷಗಳು ಒಗ್ಗಟ್ಟಾಗಿ ‘ಇಂಡಿಯಾ’ ಮೈತ್ರಿಕೂಟದ ಮೂಲಕ ಚುನಾವಣಾ ಕಣಕ್ಕಿಳಿಯಲು ತೀರ್ಮಾನಿಸಿರುವುದು (ಇದರ ಮಿತಿಗಳು ಅನೇಕ, ಅದು ಬೇರೆಯ ಚರ್ಚೆ) ಸಹ ಮೋದಿ ಸರಕಾರದ ನಿದ್ದೆ ಕೆಡಿಸಿದೆ. ಬಹುಶಃ ಈ ಎಲ್ಲಾ ಕಾರಣಗಳಿಂದ ಜನರ ದಿಕ್ಕು ಬೇರೆಡೆ ತಿರುಗಿಸಲು ಮತ್ತು ಕೇಂದ್ರ ಮತ್ತು ರಾಜ್ಯ ಚುನಾವಣೆಯನ್ನು ಒಟ್ಟಿಗೆ ನಡೆಸಿದರೆ ಬಿಜೆಪಿಗೆ ಲಾಭವಿದೆ ಎನ್ನುವ ಲೆಕ್ಕಾಚಾರವೂ ಇಲ್ಲಿ ಕೆಲಸ ಮಾಡಿದೆ.
ಸ್ವಾತಂತ್ರ್ಯ ಬಂದ ನಂತರ 1952, 1957, 1962, 1967ರಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಒಟ್ಟಿಗೆ ಚುನಾವಣೆ ನಡೆಸಲಾಗಿತ್ತು. 1971ರಲ್ಲಿ ಒಂದು ವರ್ಷಕ್ಕೂ ಮುಂಚೆ ಇಂದಿರಾ ಗಾಂಧಿಯವರು ಲೋಕಸಭಾ ಚುನಾವಣೆ ಘೋಷಣೆ ಮಾಡಿದರು. ನಂತರ 1976ರಲ್ಲಿ ನಡೆಯಬೇಕಿದ್ದ ಚುನಾವಣೆ ತುರ್ತುಪರಿಸ್ಥಿತಿಯ ಕಾರಣಕ್ಕೆ 1977ರಲ್ಲಿ ನಡೆಯಿತು ಮತ್ತು ಜನತಾ ಪಕ್ಷದ ಸರಕಾರ ರಾಜೀನಾಮೆ ಸಲ್ಲಿಸಿದ ಕಾರಣಕ್ಕೆ 1980ರಲ್ಲಿ ಚುನಾವಣೆ ನಡೆಸಬೇಕಾಯಿತು. 1967ರ ನಂತರ 47 ಬಾರಿ ವಿವಿಧ ಕಾರಣಗಳಿಗಾಗಿ ರಾಜ್ಯ ಸರಕಾರಗಳನ್ನು ವಜಾಗೊಳಿಸಲಾಗಿದೆ. ಅಂದಿನಿಂದ ಇಂದಿನವರೆಗೂ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಪ್ರತ್ಯೇಕವಾಗಿ ಚುನಾವಣೆ ನಡೆಸಲಾಗುತ್ತಿದೆ. ಆದರೆ ಈ ಒಕ್ಕೂಟ ಪ್ರಜಾಪ್ರಭುತ್ವ ವ್ಯವಸ್ಥೆ ತಮ್ಮ ಸರ್ವಾಧಿಕಾರ ಆಡಳಿತಕ್ಕೆ ಅಡ್ಡಿಯಾಗುವ ಕಾರಣಗಳಿಂದ ಉನ್ನತ ಅಧಿಕಾರದಲ್ಲಿರುವ ಮೋದಿಯವರ ನಾರ್ಸಿಸಂ ಮತ್ತು ಒಂದು ದೇಶ, ಒಂದು ಬಣ್ಣ, ಒಂದು ಭಾಷೆ, ಒಂದು ಊಟ ಇತ್ಯಾದಿಗಳ ಗೀಳಿನಿಂದ ಇಡೀ ದೇಶದ ವ್ಯವಸ್ಥೆ ಹದಗೆಡುತ್ತಿದೆ.
ಬೇರೆ ಸಂದರ್ಭವಾಗಿದ್ದರೆ ‘ಒಂದು ದೇಶ, ಒಂದು ಚುನಾವಣೆ’ಯ ಸಾಧಕಗಳ ಕುರಿತು ಚರ್ಚಿಸಬಹುದಾಗಿತ್ತು. ಆದರೆ ಮೋದಿ ನೇತೃತ್ವದ ಬಿಜೆಪಿ ಸರಕಾರವು ಪ್ರಜಾಪ್ರಭುತ್ವದ ಒಂದೊಂದೇ ಸ್ತಂಭಗಳ ಗೋಣು ಮುರಿದು ಹಾಕುತ್ತಿರುವುದರಿಂದ ಅವರು ಪ್ರಜೆಗಳ ನಂಬಿಕೆ, ವಿಶ್ವಾಸ ಕಳೆದುಕೊಂಡಿದ್ದಾರೆ. ಬಿಜೆಪಿ ಪಕ್ಷವು ಅಧಿಕಾರಕ್ಕಾಗಿ ಯಾವುದೇ ಬಗೆಯ ಕೀಳು ಹಂತಕ್ಕಾದರೂ ತಲುಪಬಲ್ಲದು ಎನ್ನುವ ಅಪಖ್ಯಾತಿ ಗಳಿಸಿದೆ. ಆಪರೇಷನ್ ಕಮಲ ಎನ್ನುವ ಅನೈತಿಕತೆ ಇದಕ್ಕೆ ಸಾಕ್ಷಿ. ತಮ್ಮ ನಿರಂಕುಶ ಆಡಳಿತದ ವೈಖರಿಯಿಂದ ಚುನಾಯಿತ ಸರ್ವಾಧಿಕಾರ ವ್ಯವಸ್ಥೆಗೆ ಕಾರಣರಾಗಿರುವ ಮೋದಿಯವರು ಏಕಪಕ್ಷೀಯವಾಗಿ, ಪ್ರಚಾರದ ಹಪಾಹಪಿತನದಿಂದ ಮತ್ತು ಅಧಿಕಾರ ಕಬಳಿಸುವ ಒಳ ಉದ್ದೇಶದಿಂದ ನೀತಿಗಳನ್ನು ಘೋಷಿಸುತ್ತಾರೆ. ಆದರೆ ದೇಶವು ಸಾಮಾಜಿಕ-ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವಂತಹ ಸಂದರ್ಭದಲ್ಲಿ ಈ ರೀತಿ ನೀತಿಗಳನ್ನು ಘೋಷಣೆ ಮಾಡುವುದು ಸ್ವಾಗತಾರ್ಹವೂ ಅಲ್ಲ.
ಬಾಧಕಗಳು
ಮೊದಲನೆಯದಾಗಿ ‘ಒಂದು ದೇಶ, ಒಂದು ಚುನಾವಣೆ’ ಎನ್ನುವ ಗೀಳಿನ ಕುರಿತು ವರದಿ ನೀಡಲು ನೇಮಿಸಿದ ಸಮಿತಿಯ ರಚನೆಯ ಚೌಕಟ್ಟು, ಸ್ವರೂಪವೇ ಪ್ರಶ್ನಾರ್ಹವಾಗಿದೆ. ಎಂಟು ಸದಸ್ಯರ ಸಮಿತಿಗೆ ಮಾಜಿ ರಾಷ್ಟ್ರಪತಿಗಳನ್ನು ಅಧ್ಯಕ್ಷರನ್ನಾಗಿ ನೇಮಿಸಿ ಅವರನ್ನೂ ಈ ರಾಜಕೀಯ ವಿವಾದಗಳಿಗೆ ಎಳೆದು ತಂದಿರುವುದು ವಿವೇಕಯುಕ್ತವಲ್ಲ ಮತ್ತು ಕೋವಿಂದ್ ಅವರು ರಾಷ್ಟ್ರಪತಿಗಳಾಗಿದ್ದಂತಹ ಸಂದರ್ಭದಲ್ಲಿ ಮೋದಿ ಸರಕಾರದ ರಬ್ಬರ್ ಸ್ಟಾಂಪ್ನಂತೆ ಕಾರ್ಯ ನಿರ್ವಹಿಸಿರುವುದರಿಂದ ಅವರಿಂದ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಇತರ ಸದಸ್ಯರಲ್ಲಿ ಗೃಹ ಮಂತ್ರಿ ಅಮಿತ್ ಶಾ ಮೊದಲಿನಿಂದಲೂ ಈ ಗೀಳಿನ ಸಮರ್ಥಕರಾಗಿದ್ದಾರೆ.
ಬಿಜೆಪಿ ಪಕ್ಷದ ಕದ ತಟ್ಟುತ್ತಿರುವ ಗುಲಾಬ್ ನಬಿ ಆಝಾದ್ ತಮ್ಮ ಸ್ವತಂತ್ರ ವಿಚಾರಗಳನ್ನು ಮಂಡಿಸುತ್ತಾರೆ ಎನ್ನುವ ಮಾತೇ ಅರ್ಥಹೀನ. ಇನ್ನುಳಿದಂತೆ 15ನೇ ಹಣಕಾಸು ಆಯೋಗದ ಅಧ್ಯಕ್ಷ ಎನ್.ಕೆ.ಸಿಂಗ್ ಮತ್ತು ನಿವೃತ್ತ ಲೋಕಸಭಾ ಜನರಲ್ ಕಾರ್ಯದರ್ಶಿ ಕಶ್ಯಪ್ ತಮ್ಮ ಮಾಲಕರ ವಿರುದ್ಧ ಒಂದಕ್ಷರವನ್ನೂ ಸಹ ಉಚ್ಚರಿಸಲಾರರು. ನೆಪ ಮಾತ್ರಕ್ಕೆ ವಿರೋಧ ಪಕ್ಷದ ನಾಯಕರನ್ನು ಸೇರಿಸಿಕೊಳ್ಳಲಾಗಿದೆ. ಆದರೆ ಈ ಏಳು ಸದಸ್ಯರ ಬಿಜೆಪಿ ಪರವಾದ ನಿಷ್ಠೆಯ ಮುಂದೆ ವಿರೋಧ ಪಕ್ಷದ ನಾಯಕ ಏಕಾಂಗಿಯಾಗಿ ಹೆಣಗಲು ಸಾಧ್ಯವಿಲ್ಲದ ಕಾರಣ ಅಧೀರ್ ಚೌಧುರಿ ಆ ಸಮಿತಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಮುಖ್ಯವಾಗಿ ಈ ಸಮಿತಿಯಲ್ಲಿ ಮಾಜಿ/ಹಾಲಿ ಚುನಾವಣಾ ಅಧಿಕಾರಿಗಳಿಲ್ಲ, ರಾಜ್ಯ ಸರಕಾರಗಳ, ಪ್ರಾದೇಶಿಕ ಪಕ್ಷಗಳ ಪ್ರತಿನಿಧಿಗಳಿಲ್ಲ.
ಒಕ್ಕೂಟ ವ್ಯವಸ್ಥೆಯನ್ನೇ ಧಿಕ್ಕರಿಸಿ ಸಂಪೂರ್ಣ ಕೇಂದ್ರೀಕರಣಗೊಳಿಸಲ್ಪಟ್ಟ ಈ ಸಮಿತಿಯ ಜವಾಬ್ದಾರಿಗಳೂ ಸಹ ಪೂರ್ವನಿರ್ಧರಿತವಾಗಿದೆ. ಒಂದು ದೇಶ, ಒಂದು ಚುನಾವಣೆ ಸಾಧಕವೇ, ಬಾಧಕವೇ ಎನ್ನುವ ವಿಚಾರವೇ ಈ ಸಮಿತಿಯ ಮುಂದಿಲ್ಲ. ಬದಲಿಗೆ ಈ ನಿರ್ಧಾರ ತೆಗೆದುಕೊಳ್ಳಲು ರಾಜ್ಯ ಸರಕಾರಗಳೊಂದಿಗೆ ಸಮಾಲೋಚನೆ ನಡೆಸಬೇಕೆ, ಬೇಡವೆ, ಈ ನೀತಿ ಜಾರಿಗೊಳಿಸಲು ಕಾನೂನು ತೊಡಕುಗಳೇನು ಮತ್ತು ಪರಿಹಾರವಾಗಿ ಸಂವಿಧಾನ ತಿದ್ದುಪಡಿಯ ಸ್ವರೂಪವೇನು ಎನ್ನುವಂತಹ ವಿಚಾರಗಳ ಕುರಿತು ಶಿಫಾರಸು ಮಾಡಲು ಸೂಚಿಸಲಾಗಿದೆ. ಈ ಹೊಸ ನೀತಿಯ ಮೂಲಕ ಚುನಾವಣೆಯನ್ನು ರಾಷ್ಟ್ರೀಕರಣ ಮತ್ತು ಕೇಂದ್ರೀಕರಣಗೊಳಿಸಲು ನಿರ್ಧರಿಸಿರುವ ಮೋದಿ ಸರಕಾರದ ಈ ಗೀಳಿಗೆ ಸಮಿತಿಯು ಶಿರಸಾವಹಿಸಿ ಕಪ್ಪ ಒಪ್ಪಿಸುತ್ತದೆ ಎನ್ನವುದರಲ್ಲಿ ಅನುಮಾನವಿಲ್ಲ.
ಎರಡನೆಯದಾಗಿ 543 ಲೋಕಸಭಾ ಸದಸ್ಯರು, 4,123 ವಿಧಾನಸಭಾ ಸದಸ್ಯರು ಮತ್ತು 31.9 ಲಕ್ಷ ಪಂಚಾಯತ್/ಮುನಿಸಿಪಾಲಿಟಿ ಸದಸ್ಯರನ್ನೊಳಗೊಂಡ 3 ಟೈರ್ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಅವುಗಳ ಅವಧಿ ಮುಗಿದ ನಂತರ ನಿಗದಿತವಾಗಿ ಚುನಾವಣೆ ನಡೆಸಲಾಗುತ್ತದೆ. ಇದು ವಿಕೇಂದ್ರೀಕರಣದ ಉದಾಹರಣೆ ಮತ್ತು ಒಕ್ಕೂಟ ವ್ಯವಸ್ಥೆಯ ಕಾರ್ಯ ವಿಧಾನವೂ ಇದೇ ಮಾದರಿಯಲ್ಲಿರುತ್ತದೆ. ಆದರೆ ಈ ಹೊಸ ಗೀಳಿನ ಮೂಲಕ ಮೇಲಿನ 3 ಟೈರ್ನ ಚುನಾವಣೆಯನ್ನು ಏಕೀಕೃತಗೊಳಿಸಿದರೆ ಸಂಪೂರ್ಣ ವ್ಯವಸ್ಥೆಯೇ ಹದಗೆಡುವ ಸಾಧ್ಯತೆಗಳಿವೆ. ವಿಧಾನಸಭಾ ಚುನಾವಣೆಯ ಆದ್ಯತೆಗಳು ಮತ್ತು ವಿಚಾರಗಳು ಸ್ಥಳೀಯ ಸಂಸ್ಥೆಗಳ ಚುನಾವಣೆಯ ವಿಷಯಗಳು, ಸಮಸ್ಯೆಗಳಿಗಿಂತ ಭಿನ್ನವಾಗಿರುತ್ತವೆ.
ಲೋಕಸಭಾ ಚುನಾವಣಾ ವಿಷಯಗಳು ಮಿಕ್ಕೆರಡರ ಚುನಾವಣೆಗಿಂತಲೂ ಭಿನ್ನವಾಗಿರುತ್ತದೆ. ಹೊಸ ಗೀಳಿನಿಂದ ಇಂತಹ ವೈವಿಧ್ಯವಾಗಿರುವ, ಸ್ಥಳೀಯವಾಗಿರುವ ಜ್ವಲಂತ ಸಮಸ್ಯೆಗಳನ್ನು, ವಿಭಿನ್ನವಾಗಿರುವ ಚುನಾವಣಾ ಆದ್ಯತೆಗಳನ್ನು ‘ಒಂದು ದೇಶ, ಒಂದು ಚುನಾವಣೆ’ ಹೆಸರಿನಲ್ಲಿ ನೇಪಥ್ಯಕ್ಕೆ ತಳ್ಳಿ ಕೇವಲ ಭಾರತದ ಸುರಕ್ಷತೆ ಮತ್ತು ಸದೃಢ ನಾಯಕ ಎನ್ನುವ ಘೋಷಣೆ ಮಾತ್ರ ಚುನಾವಣಾ ವಿಷಯವಾಗುತ್ತದೆ. ಆರ್ಥಿಕವಾಗಿ ಸದೃಢವಾಗಿರುವ ರಾಷ್ಟ್ರೀಯ ಪಕ್ಷಗಳ ಎದುರು ಪ್ರಾದೇಶಿಕ ಪಕ್ಷಗಳು ದುರ್ಬಲಗೊಳ್ಳುತ್ತವೆ. ಪ್ರಜಾಪ್ರಭುತ್ವದ ಬುನಾದಿಯನ್ನೇ ನಾಶ ಮಾಡಿದಂತಾಗುತ್ತದೆ.
29 ರಾಜ್ಯಗಳ ಪೈಕಿ ಒಂದು ಅವಧಿಗೆ ಐದು ರಾಜ್ಯಗಳ ಚುನಾವಣಾ ದಿನಾಂಕ ಸಾಮಾನ್ಯವಾಗಿದ್ದರೆ, ಇನ್ನೊಂದು ಅವಧಿಗೆ ಮೂರು ರಾಜ್ಯಗಳ ಚುನಾವಣಾ ದಿನಾಂಕ ಸಾಮಾನ್ಯವಾಗಿದೆ. ಮತ್ತೊಂದು ಅವಧಿಗೆ ನಾಲ್ಕು ರಾಜ್ಯಗಳ ಚುನಾವಣಾ ದಿನಾಂಕ ಸಾಮಾನ್ಯವಾಗಿದೆ. ಇನ್ನುಳಿದ 17 ರಾಜ್ಯಗಳಿಗೆ ಭಿನ್ನ ಭಿನ್ನ ದಿನಾಂಕದಂದು ಚುನಾವಣೆ ನಡೆಸಲಾಗುತ್ತದೆ. ಇನ್ನು 31.9 ಲಕ್ಷ ಸ್ಥಳೀಯ ಸಂಸ್ಥೆಗಳ ಚುನಾವಣೆಯೂ ಸಂಪೂರ್ಣವಾಗಿ ವಿಭಿನ್ನ ಅವಧಿಗಳಿಗೆ ನಡೆಸಬೇಕಾಗುತ್ತದೆ. ಇಂತಹ ಬೆಟ್ಟದಂತಹ ಸವಾಲು ಮುಂದಿಟ್ಟುಕೊಂಡು ಯಾವ ಮಾನದಂಡದಲ್ಲಿ ‘ಒಂದು ದೇಶ, ಒಂದು ಚುನಾವಣೆ’ ನಡೆಸುತ್ತಾರೆ? ನಾರ್ಸಿಸಂನಿಂದ ಬಾಧಿತ ಪ್ರಭಾವಶಾಲಿ ವ್ಯಕ್ತಿಯೊಬ್ಬರ ನಿರ್ಧಾರದಿಂದ ಇಡೀ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯೇ ನಾಶವಾಗಬೇಕೆ? ಈ ಸಮಿತಿಯು ತಮ್ಮ ‘ಖಾವಂದ’ರ ಆದೇಶಗಳಿಗೆ ಅನುಗುಣವಾಗಿ ವರ್ತಿಸಿ ದೇಶದ ಒಕ್ಕೂಟ ವ್ಯವಸ್ಥೆಯನ್ನೇ ಬುಡಮೇಲುಗೊಳಿಸುವಲ್ಲಿ ಮುಂದಾಗುವುದೇ? ಸಾರಾಂಶದಲ್ಲಿ ದೇಶವನ್ನು ಸಂಸದೀಯ ಪ್ರಜಾಪ್ರಭುತ್ವದಿಂದ ಅಧ್ಯಕ್ಷೀಯ ಸರ್ವಾಧಿಕಾರಕ್ಕೆ ಬದಲಾಯಿಸುವುದು ಸಂಘ ಪರಿವಾರದ ಉದ್ದೇಶ ಎನ್ನುವುದು ಉತ್ಪ್ರೇಕ್ಷೆಯಲ್ಲ
ಮೂರನೆಯದಾಗಿ ಕಾನೂನು ತಜ್ಞರ ಪ್ರಕಾರ ಯಾವುದೇ ರಾಜ್ಯದಲ್ಲಿನ ಸರಕಾರವು ವಿಶ್ವಾಸ ಕಳೆದುಕೊಂಡು ರಾಜೀನಾಮೆ ನೀಡಬೇಕಾದ ಸಂದರ್ಭದಲ್ಲಿ ಈ ಹೊಸ ನೀತಿಯನ್ನು ಅನ್ವಯಿಸುವುದು ಹೇಗೆ ಸಾಧ್ಯ? ಉದಾಹರಣೆಗೆ ‘ಅ’ ಎನ್ನುವ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷಗಳಲ್ಲಿ ಮೈತ್ರಿ ಪಕ್ಷಗಳು ಬೆಂಬಲ ಹಿಂಪಡೆದುಕೊಂಡು, ಅಥವಾ ಬಹುಸಂಖ್ಯೆಯಲ್ಲಿ ಆಡಳಿತ ಪಕ್ಷದ ಶಾಸಕರು ರಾಜೀನಾಮೆ ನೀಡಿ ಸರಕಾರ ಪತನವಾದರೆ ಹೊಸ ನೀತಿಯ ಅನುಸಾರ ಮುಂದಿನ ಮೂರು ವರ್ಷಗಳವರೆಗೂ ಚುನಾವಣೆ ನಡೆಸುವಂತಿಲ್ಲ. ಹಾಗಿದ್ದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗುವುದಿಲ್ಲವೇ? 2018ರಲ್ಲಿ ಬಿ.ಎಸ್.ಚೌಹಾಣ್ ಅಧ್ಯಕ್ಷತೆಯ ಕಾನೂನು ಆಯೋಗವು ಇಂತಹ ಬಿಕ್ಕಟ್ಟು ಎದುರಾದರೆ ಎರಡು ಪರಿಹಾರಗಳನ್ನು ಸೂಚಿಸುತ್ತದೆ. ಒಂದು ಉಳಿದ ಮೂರು ವರ್ಷಗಳ ಅವಧಿಗೆ ಮಾತ್ರ ಮಧ್ಯಂತರ ಚುನಾವಣೆ ನಡೆಸುವುದು (ಇದೂ ವೆಚ್ಚವಲ್ಲವೇ?). ಎರಡು ಬದಲಿ ಸರಕಾರ ರಚನೆಯಾಗುವ ಸಾಧ್ಯತೆಗಳಿದ್ದರೆ ಮಾತ್ರ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ಕೊಡುವುದು. ಅವಿಶ್ವಾಸ ನಿರ್ಣಯ ಮಂಡನೆಯ ಸಂಖ್ಯೆಯನ್ನು ಸೀಮಿತಗೊಳಿಸುವುದು. ‘ಒಂದು ದೇಶ, ಒಂದು ಚುನಾವಣೆ’ ಎನ್ನುವ ಗೀಳಿಗಾಗಿ ಇಂತಹ ಮೋಸದ ನಿರ್ಧಾರಗಳಿಗೆ ದೇಶ ಬಲಿಯಾಗಬೇಕೆ?
ನಾಲ್ಕನೆಯದಾಗಿ ಕಾನೂನು ತಜ್ಞರ ಪ್ರಕಾರ ಈ ‘ಒಂದು ದೇಶ, ಒಂದು ಚುನಾವಣೆ’ ಗೀಳಿಗಾಗಿ ಸಂವಿಧಾನದ ಕನಿಷ್ಠ ಐದು ವಿಧಿಗಳನ್ನು ತಿದ್ದುಪಡಿ ಮಾಡಬೇಕಾಗುತ್ತದೆ. (ಕೆಳಗಿನ ಮಾಹಿತಿಗಾಗಿ ವಿವಿಧ ಕಾನೂನು ತಜ್ಞರೊಂದಿಗೆ ಚರ್ಚಿಸಲಾಗಿದೆ)
ವಿಧಿ 83(2): ಲೋಕಸಭೆಯ ಅವಧಿ ಐದು ವರ್ಷಕ್ಕೆ ಮೇಲ್ಪಟ್ಟು ಮೀರುವಂತಿಲ್ಲ. ಅಗತ್ಯ ಬಿದ್ದರೆ ಅವಧಿಗೂ ಮುಂಚೆ ವಿಸರ್ಜನೆ ಮಾಡಬಹುದು
ವಿಧಿ 85 (ಬಿ): ಒಮ್ಮೆ ವಿಸರ್ಜನೆಗೊಂಡ ನಂತರ ಸಂಸತ್ತಿನ/ವಿಧಾನ ಸಭೆಯ ಅಸ್ತಿತ್ವ ಕೊನೆಗೊಳ್ಳುತ್ತದೆ.
ವಿಧಿ 172 (1): ವಿಸರ್ಜನೆಗೊಳ್ಳದಿದ್ದರೆ ರಾಜ್ಯ ವಿಧಾನಸಭೆಯ ಅವಧಿ 5 ವರ್ಷಗಳವರೆಗೆ ಅಬಾಧಿತವಾಗಿರುತ್ತದೆ.
ವಿಧಿ 172 (2) (ಬಿ): ಮಂತ್ರಿಮಂಡಲದ ಶಿಫಾರಸನ್ನು ಆಧರಿಸಿ ವಿಧಾನ ಸಭೆಯನ್ನು ವಿಸರ್ಜಿಸಲು ರಾಜ್ಯಪಾಲರಿಗೆ ಅಧಿಕಾರವಿದೆ. ಮುಖ್ಯಮಂತ್ರಿ ಶಿಫಾರಸು ಮಾಡಿದಾಗ ಅದನ್ನು ಜಾರಿಗೊಳಿಸುವುದಕ್ಕೂ ಮುಂಚೆ ರಾಜ್ಯಪಾಲರು ತಮ್ಮ ವಿವೇಚನೆಯನ್ನು ಬಳಸಬಹುದು
ವಿಧಿ 356: ರಾಜ್ಯಗಳ ಮೇಲೆ ರಾಷ್ಟ್ರಪತಿಗಳ ಆಡಳಿತ ಹೇರಿಕೆ.
ಸಂಸತ್ತಿನಲ್ಲಿ ಈ ಮಸೂದೆ ಅನುಮೋದನೆಗೊಳ್ಳಲು 2/3ರಷ್ಟು ಬಹುಮತದ ಅಗತ್ಯವಿದೆ. ಒಂದುವೇಳೆ ಮೇಲಿನ ವಿಧಿಗಳ ತಿದ್ದುಪಡಿ ಸಂಸತ್ತಿನಲ್ಲಿ ಪಾಸ್ ಆದರೆ ಕನಿಷ್ಠ ಶೇ.50ರಷ್ಟು ರಾಜ್ಯಗಳು ಆ ತಿದ್ದುಪಡಿಯನ್ನು ಅನುಮೋದಿಸಬೇಕಾಗುತ್ತದೆ. ಪ್ರಸಕ್ತ 14 ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ವಿರೋಧ ಪಕ್ಷಗಳು ‘ಒಂದು ದೇಶ, ಒಂದು ಚುನಾವಣೆ’ ನೀತಿಗೆ ಒಗ್ಗಟ್ಟಾಗಿ ವಿರೋಧಿಸಿದರೆ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗುವುದಿಲ್ಲವೇ? ಆದರೆ ಬಿಜೆಪಿಯು ತನ್ನ ಹಠ ಸಾಧನೆಗಾಗಿ ಯಾವುದೇ ಬಗೆಯ ವಾಮಮಾರ್ಗಕ್ಕೆ ಮುಂದಾಗುತ್ತದೆ. ಇದು ಮತ್ತಷ್ಟು ನೈತಿಕ ಭ್ರಷ್ಟತೆಗೆ, ಅರಾಜಕತೆಗೆ ದಾರಿ ಮಾಡಿಕೊಡುತ್ತದೆ. ಇಡೀ ಪ್ರಕ್ರಿಯೆ ಅರ್ಥಹೀನ ಎನಿಸುವುದಿಲ್ಲವೇ? ಇದು ಬೆಟ್ಟ ಅಗೆದು ಇಲಿಯನ್ನು ಸಹ ಹಿಡಿದಂತಾಗುವುದಿಲ್ಲ.
ದುರ್ಬಲ ಸಮರ್ಥನೆಗಳು
‘ಒಂದು ದೇಶ, ಒಂದು ಚುನಾವಣೆ’ ಸಮರ್ಥಕರು ಕೊಡುವ ಬಹುಮುಖ್ಯ ಕಾರಣವೆಂದರೆ ಹಣಕಾಸಿನ ಉಳಿತಾಯ. ಬೇರೆ ಬೇರೆ ಅವಧಿಗೆ ಚುನಾವಣೆ ನಡೆದರೆ ತಗಲುವ ವೆಚ್ಚವನ್ನು ಒಂದೇ ಅವಧಿಗೆ ನಡೆಸುವ ಚುನಾವಣೆಯ ವೆಚ್ಚದೊಂದಿಗೆ ಹೋಲಿಕೆ ಮಾಡಿ ಉಳಿತಾಯದ ಅಗಾಧ ಮೊತ್ತವನ್ನು ನಮ್ಮ ಮುಂದಿಡುತ್ತಾರೆ. ಮೇಲ್ನೋಟಕ್ಕೆ ಕಾಣುವಂತೆ ಇದು ಸತ್ಯ. ಆದರೆ ಇದಕ್ಕೆ ಬೇರೆ ಆಯಾಮಗಳಿವೆ. 2014ರ ಲೋಕಸಭಾ ಚುನಾವಣೆಗೆ 3,426 ಕೋಟಿ ರೂ. ವೆಚ್ಚವಾಗಿದ್ದರೆ 2019ರ ಚುನಾವಣೆಗೆ ಸರಕಾರವು 9,000 ಕೋಟಿ ರೂ. ವೆಚ್ಚ ಮಾಡಿದೆ. (ಇದು ಅಧಿಕೃತ ಮಾಹಿತಿ ಮಾತ್ರ, ಅನಧಿಕೃತ ಮೊತ್ತ ನಿಮ್ಮ ಊಹೆಗೆ ಬಿಟ್ಟಿದ್ದು). ಹರಿತಾ ಬೆಂಜಮಿನ್ ಅವರು ‘‘ಎರಡು ಅವಧಿಯ ನಡುವೆ 5,544 ಕೋಟಿ ರೂ. ವೆಚ್ಚ ಹೆಚ್ಚಾಗಿದೆ. ಇಲ್ಲಿ 5,400 ಕೋಟಿ ರೂ. ವೆಚ್ಚದಲ್ಲಿ 16 ಲಕ್ಷ ಹೊಸ ಇವಿಎಂ ಖರೀದಿಸಲಾಗಿದೆ. ‘ಒಂದು ದೇಶ, ಒಂದು ಚುನಾವಣೆ’ ನಡೆದರೆ ಈಗಿರುವುದಕ್ಕಿಂತ ದುಪ್ಪಟ್ಟು ಇವಿಎಂ ಮತ್ತು ವಿವಿಪ್ಯಾಟ್ ಖರೀದಿಸಬೇಕಾಗುತ್ತದೆ’’ ಎಂದು ಹೇಳುತ್ತಾರೆ. ಮುಖ್ಯವಾಗಿ 15 ವರ್ಷಗಳಿಗೊಮ್ಮೆ ಇವಿಎಂಗಳನ್ನು ಬದಲಾಯಿಸಬೇಕಾಗುತ್ತದೆ. ಇದು ವೆಚ್ಚದ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇವಿಎಂನ ಯಂತ್ರಗಳ ಸಂಗ್ರಹಣೆಯ ವೆಚ್ಚ ಹೆಚ್ಚಾಗುತ್ತದೆ. ಇದು ವೆಚ್ಚವನ್ನು ತಗ್ಗಿಸುತ್ತದೆಯೇ? ಹೆಚ್ಚಿಸುತ್ತದೆಯೇ? ‘ಒಂದು ದೇಶ, ಒಂದು ಚುನಾವಣೆ’ಗಾಗಿ ಸಿಬ್ಬಂದಿಯ ವೆಚ್ಚದ ಕುರಿತು ಚುನಾವಣಾ ಆಯೋಗವು ತನ್ನ ಆತಂಕವನ್ನು ವ್ಯಕ್ತಪಡಿಸಿದೆ. ಆದರೆ ಇದರ ಕುರಿತು ಸಂಬಂಧಪಟ್ಟವರು ಗಮನ ಹರಿಸಿದಂತಿಲ್ಲ.
ಚುನಾವಣೆ ಖರ್ಚಿಗೆ ಸಂಬಂಧಿಸಿದಂತೆ ಬಿಜೆಪಿಯು ವಿರೋಧ ಪಕ್ಷಗಳಿಗಿಂತ ತುಂಬಾ ಮುಂದಿದೆ. 2014ರ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳು 30,000 ಕೋಟಿ ರೂ. ವೆಚ್ಚ ಮಾಡಿವೆ (ಇದು ಅಧಿಕೃತ, ಅನಧಿಕೃತ ನಿಮ್ಮ ಊಹಾಶಕ್ತಿಯ ಮೇಲೆ ಅವಲಂಬಿತವಾಗಿದೆ). ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ ಒಟ್ಟು ಚುನಾವಣಾ ಫಂಡಿಗ್ನಲ್ಲಿ ಶೇ.57ರಷ್ಟು ಮೊತ್ತ ಬಿಜೆಪಿಗೆ ದೊರಕಿದೆ. 2022ರವರೆಗೆ 9,208 ಕೋಟಿ ರೂ. ಮೊತ್ತದ ಫಂಡಿಂಗ್ನಲ್ಲಿ 5,270 ಕೋಟಿ ರೂ. ಮೊತ್ತ ಬಿಜೆಪಿಗೆ ಹರಿದುಬಂದಿದೆ. ‘ಒಂದು ದೇಶ, ಒಂದು ಚುನಾವಣೆ’ ನಡೆದರೆ ಬಂಡವಾಳಶಾಹಿಗಳು ಬಲಿಷ್ಠ ಬಿಜೆಪಿಗೆ ಅತಿ ಹೆಚ್ಚಿನ ಆರ್ಥಿಕ ನೆರವು ಒದಗಿಸುತ್ತಾರೆ. ಇತರ ಪಕ್ಷಗಳು ಆರ್ಥಿಕವಾಗಿ ಪ್ರಬಲವಾಗಿರುವ ಬಿಜೆಪಿಯನ್ನು ಎದುರಿಸಿ ಗೆಲ್ಲುವುದು ಕಷ್ಟವಾಗುತ್ತದೆ.
ಮತ್ತೊಂದು ಸಮರ್ಥನೆಯೆಂದರೆ ಸದಾ ಕಾಲ ಚುನಾವಣೆ ನಡೆಸುವುದರಿಂದ ನೀತಿಗಳ ಅನುಷ್ಠಾನ ಮತ್ತು ಆಡಳಿತದ ದಕ್ಷತೆಗೆ ಭಂಗ ಉಂಟಾಗುತ್ತದೆ. ಇದೂ ಮೇಲ್ನೋಟಕ್ಕೆ ಸಹಜ ಎನಿಸುತ್ತದೆ. ಆದರೆ ಇಲ್ಲಿರುವ ಮುಖ್ಯ ಪ್ರಶ್ನೆಯೆಂದರೆ ರಾಜ್ಯ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ರಾಷ್ಟ್ರೀಯ ನಾಯಕರ ಅಗತ್ಯವೇನು? ಸ್ಥಳೀಯ ಮುಖಂಡರ ಹೊಣೆಗಾರಿಕೆಯಲ್ಲಿ ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವಂತಹ ವ್ಯವಸ್ಥೆ ನಿರ್ಮಿಸಬೇಕು. ಪ್ರತೀ ರಾಜ್ಯ ಚುನಾವಣೆಯ ಸಂದರ್ಭದಲ್ಲಿ ‘ನಮ್ಮ ಚುನಾವಣೆಯ ಮುಖ ಮೋದಿ’ ಎಂದು ಗೋಗೆರೆಯುವ ಬಿಜೆಪಿಯವರು ಇದಕ್ಕೆ ತಯಾರಿದ್ದಾರೆಯೇ?
ಕೊನೆಗೂ ಚುನಾವಣೆ ಖರ್ಚಿಗೆ ಸಂಬಂಧಿಸಿದಂತೆ ಬಿಜೆಪಿಯು ವಿರೋಧ ಪಕ್ಷಗಳಿಗಿಂತ ತುಂಬಾ ಮುಂದಿದೆ. 2014ರ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳು 30,000 ಕೋಟಿ ರೂ. ವೆಚ್ಚ ಮಾಡಿವೆ (ಇದು ಅಧಿಕೃತ, ಅನಧಿಕೃತ ನಿಮ್ಮ ಊಹಾಶಕ್ತಿಯ ಮೇಲೆ ಅವಲಂಬಿತವಾಗಿದೆ). ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ ಒಟ್ಟು ಚುನಾವಣಾ ಫಂಡಿಗ್ನಲ್ಲಿ ಶೇ.57ರಷ್ಟು ಮೊತ್ತ ಬಿಜೆಪಿಗೆ ದೊರಕಿದೆ. 2022ರವರೆಗೆ 9,208 ಕೋಟಿ ರೂ. ಮೊತ್ತದ ಫಂಡಿಂಗ್ನಲ್ಲಿ 5,270 ಕೋಟಿ ರೂ. ಮೊತ್ತ ಬಿಜೆಪಿಗೆ ಹರಿದುಬಂದಿದೆ. ‘ಒಂದು ದೇಶ, ಒಂದು ಚುನಾವಣೆ’ ನಡೆದರೆ ಬಂಡವಾಳಶಾಹಿಗಳು ಬಲಿಷ್ಠ ಬಿಜೆಪಿಗೆ ಅತಿ ಹೆಚ್ಚಿನ ಆರ್ಥಿಕ ನೆರವು ಒದಗಿಸುತ್ತಾರೆ. ಇತರ ಪಕ್ಷಗಳು ಆರ್ಥಿಕವಾಗಿ ಪ್ರಬಲವಾಗಿರುವ ಬಿಜೆಪಿಯನ್ನು ಎದುರಿಸಿ ಗೆಲ್ಲುವುದು ಕಷ್ಟವಾಗುತ್ತದೆ.
ಮತ್ತೊಂದು ಸಮರ್ಥನೆಯೆಂದರೆ ಸದಾ ಕಾಲ ಚುನಾವಣೆ ನಡೆಸುವುದರಿಂದ ನೀತಿಗಳ ಅನುಷ್ಠಾನ ಮತ್ತು ಆಡಳಿತದ ದಕ್ಷತೆಗೆ ಭಂಗ ಉಂಟಾಗುತ್ತದೆ. ಇದೂ ಮೇಲ್ನೋಟಕ್ಕೆ ಸಹಜ ಎನಿಸುತ್ತದೆ. ಆದರೆ ಇಲ್ಲಿರುವ ಮುಖ್ಯ ಪ್ರಶ್ನೆಯೆಂದರೆ ರಾಜ್ಯ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ರಾಷ್ಟ್ರೀಯ ನಾಯಕರ ಅಗತ್ಯವೇನು? ಸ್ಥಳೀಯ ಮುಖಂಡರ ಹೊಣೆಗಾರಿಕೆಯಲ್ಲಿ ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವಂತಹ ವ್ಯವಸ್ಥೆ ನಿರ್ಮಿಸಬೇಕು. ಪ್ರತೀ ರಾಜ್ಯ ಚುನಾವಣೆಯ ಸಂದರ್ಭದಲ್ಲಿ ‘ನಮ್ಮ ಚುನಾವಣೆಯ ಮುಖ ಮೋದಿ’ ಎಂದು ಗೋಗೆರೆಯುವ ಬಿಜೆಪಿಯವರು ಇದಕ್ಕೆ ತಯಾರಿದ್ದಾರೆಯೇ?