ಕೆ.ಜಿ.ಯೊಂದಕ್ಕೆ 540 ರೂ.ಗೆ ಇಳಿದ ಕಾಳುಮೆಣಸು ದರ
ಕೊಯ್ಲಿಗೆ ಮುನ್ನ ಬೆಳೆಗಾರರಿಗೆ ಬೆಲೆ ಕುಸಿತದ ಹೊಡೆತ
ಮಡಿಕೇರಿ: ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾದ ಕಾಳುಮೆಣಸು ಕೊಯ್ಲಿಗೆ ಮುನ್ನ ಕೊಡಗು ಜಿಲ್ಲೆಯ ಬೆಳೆಗಾರರಿಗೆ ಬೆಲೆ ಇಳಿಕೆ ಹೊಡೆತ ಬಿದ್ದಿದೆ. ಕ್ವಿಂಟಾಲ್ಗೆ 60 ಸಾವಿರ ರೂ. ಇದ್ದ ದರ ದಿಢೀರ್ 54 ಸಾವಿರ ರೂ.ಗೆ ಇಳಿಕೆಯಾಗಿದೆ.
ಕಳೆದ ಎರಡು ವರ್ಷಗಳಿಂದ ಕಾಳುಮೆಣಸು ದರ ಕೆಜಿಯೊಂದಕ್ಕೆ 600ರೂ. ಆಸುಪಾಸಿನಲ್ಲೇ ಇತ್ತು. ಆದರೆ ಇದೀಗ ಕಳೆದ ಒಂದುವಾರಗಳಿಂದ ದರ ಇಳಿಕೆ ಕಂಡಿದ್ದು, ಕಾಳುಮೆಣಸು ಮಾರಾಟ ಮಾಡದೆ, ದಾಸ್ತಾನಿನಲ್ಲಿ ಸಂಗ್ರಹಿಸಿಟ್ಟಿದ್ದ ಬೆಳೆಗಾರರಿಗೆ ಆತಂಕ ಎದುರಾಗಿವೆ.
ಕಪ್ಪು ಬಂಗಾರ ಎಂದೇ ಕರೆಯಲ್ಪಡುವ ಕಾಳುಮೆಣಸು ಮಾರ್ಚ್ ತಿಂಗಳಲ್ಲಿ ಕೆಜಿಯೊಂದಕ್ಕೆ 500ರೂ. ತಲುಪುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಕೊಡಗು ಜಿಲ್ಲೆಯ ಕೆಲವು ಭಾಗಗಳಲ್ಲಿ ಇದೀಗ ಕಾಳುಮೆಣಸು ಕೊಯ್ಲು ಆರಂಭಗೊಂಡಿದ್ದು, ಮಾರ್ಚ್ ತಿಂಗಳಲ್ಲಿ ಪೂರ್ಣಪ್ರಮಾಣದಲ್ಲಿ ಜಿಲ್ಲೆಯಾದ್ಯಂತ ಕರಿಮೆಣಸು ಕೊಯ್ಲು ಮಾಡಲಾಗುತ್ತದೆ. ಮಾರ್ಚ್ ತಿಂಗಳಿನಿಂದ ಎಪ್ರಿಲ್ ತಿಂಗಳ ಕೊನೆಯವರೆಗೂ ಬೆಳೆಗಾರರು ಕರಿಮೆಣಸು ಕೊಯ್ಲು ಕೆಲಸದಲ್ಲಿ ತೊಡಗು ವುದು ಜಿಲ್ಲೆಯಲ್ಲಿ ಸಾಮಾನ್ಯವಾಗಿದೆ.
ಬೆಳೆಗಾರರಿಗೆ ಆಸರೆಯಾಗಿದ್ದ ಕಾಳುಮೆಣಸು
ಕಾಳುಮೆಣಸು ಬೆಳೆಗಾರರಿಗೆ ಆಸರೆಯಾಗಿದೆ. ಯಾಕೆಂದರೆ ಕಳೆದ ಮೂರ್ನಾಲ್ಕು ವರ್ಷಗಳಿಂದ ನಿರಂತರವಾಗಿ ಅಕಾಲಿಕ ಮಳೆ, ಅತಿವೃಷ್ಟಿ, ಬೆಲೆ ಕುಸಿತ, ಕಾರ್ಮಿಕರ ಸಮಸ್ಯೆಯಿಂದ ಜಿಲ್ಲೆಯ ಕಾಫಿ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಈ ವರ್ಷ ಅಕಾಲಿಕ ಮಳೆಯಿಂದ ಜಿಲ್ಲೆಯ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರು. ಕಾಫಿಯಲ್ಲಿ ಉಂಟಾದ ನಷ್ಟವನ್ನು ಕಳೆದ ವರ್ಷಗಳಿಂದ ಕಾಳುಮೆಣಸಿನಲ್ಲಿ ಸರಿದೂಗಿಸುತ್ತಿದ್ದ ಬೆಳೆಗಾರರಿಗೆ ಕಾಳುಮೆಣಸು ದರ ಇಳಿಕೆ ದೊಡ್ಡ ಹೊಡೆತ ಕೊಟ್ಟಿದೆ.
ಅದಲ್ಲದೇ ಇತ್ತೀಚಿನ ದಿನಗಳಲ್ಲಿ ಕಾಳುಮೆಣಸು ಬಳ್ಳಿಗಳಿಗೆ ರೋಗ ಬಾಧಿಸಿ, ಬಳ್ಳಿಗಳು ನಾಶವಾಗುತ್ತಿರುವ ಮಧ್ಯೆ ಬೆಲೆ ಇಳಿಕೆಯಿಂದ ಬೆಳೆಗಾರರು ಅತಂತ್ರ ಸ್ಥಿತಿಗೆ ತಲುಪಿದ್ದಾರೆ. ಈ ವರ್ಷ ಜಿಲ್ಲೆಯಾದ್ಯಂತ ಬಹುತೇಕ ಕಡೆಗಳಲ್ಲಿ ಕಾಳುಮೆಣಸು ಉತ್ತಮ ಫಸಲು ಕೊಟ್ಟಿದೆ. ಆದರೆ ಬೆಲೆ ಇಳಿಕೆಯಿಂದ ಸಣ್ಣ ಬೆಳೆಗಾರರು ಅತೀ ಹೆಚ್ಚು ತೊಂದರೆಗೀಡಾಗಿದ್ದಾರೆ.
ಬೆಲೆ ಕುಸಿತಕ್ಕೆ ವಿಯೆಟ್ನಾಂ ಕಾಳುಮೆಣಸು ಆಮದು ಕಾರಣ?
ಭಾರತದ ಕಾಳುಮೆಣಸಿಗೆ ಒಂದು ಕಾಲದಲ್ಲಿ ಕೆಜಿಯೊಂದಕ್ಕೆ 800 ರೂ. ಬೆಲೆ ಇತ್ತು. ಆದರೆ ಕಾಲಕ್ರಮೇಣವಾಗಿ ಭಾರತಕ್ಕೆ ವಿಯೆಟ್ನಾಂ ಕಾಳು ಮೆಣಸು ಆಮದಿನಿಂದ ಭಾರತದ ಕರಿಮೆಣಸಿನ ದರ 280 ರೂ.ವರೆಗೂ ಇಳಿಕೆ ಕಂಡಿತ್ತು.
ಆದರೆ ಕಳೆದ ಎರಡು ವರ್ಷಗಳಿಂದ ಸ್ಥಿರವಾಗಿದ್ದ ಕಾಳುಮೆಣಸು ದರ ದಿಢೀರ್ ಕುಸಿತ ಕಾಣಲು ವಿಯೆಟ್ನಾಂ ದೇಶದಿಂದ ಭಾರತಕ್ಕೆ ಕಾಳುಮೆಣಸು ಆಮದಾಗುತ್ತಿರುವುದು ಕಾರಣ ಎನ್ನಲಾಗುತ್ತಿದೆ. ವಿಯೆಟ್ನಾಂ ದೇಶದ ಕಾಳುಮೆಣಸು ದರ ಕ್ವಿಂಟಾಲ್ಗೆ 48 ಸಾವಿರ ರೂ.ಯಿಂದ 52 ಸಾವಿರ ರೂ.ವರೆಗೆ ಇದೆೆ. ವಿಯೆಟ್ನಾಂನಿಂದ ಅಂದಾಜು ಭಾರತಕ್ಕೆ 400 ಮೆಟ್ರಿಕ್ ಟನ್ ಕಾಳುಮೆಣಸು ಆಮದಾಗುತ್ತಿದೆ. ಇದರಿಂದ ದೇಶಿಯ ಕಾಳುಮೆಣಸು ದರ ಕುಸಿತ ಕಂಡಿದೆ ಎನ್ನಲಾಗಿದೆ.
ವಾರ್ಷಿಕವಾಗಿ ವಿಯೆಟ್ನಾಂನಿಂದ 5 ಸಾವಿರ ಟನ್ ಹಾಗೂ ಶ್ರೀಲಂಕಾದಿಂದ 10 ರಿಂದ 15 ಸಾವಿರ ಟನ್ ಕಾಳುಮೆಣಸು ಭಾರತಕ್ಕೆ ಆಮದಾಗುತ್ತಿದೆ. ವಿಯೆಟ್ನಾಂ ಹಾಗೂ ಶ್ರೀಲಂಕಾದಿಂದ ಕಾಳುಮೆಣಸು ಆಮದಾಗುತ್ತಿರುವುದರಿಂದ ಭಾರತದ ಕಾಳುಮೆಣಸಿನ ದರ ಕುಸಿತ ಕಾಣುತ್ತಿದೆ. ಬೆಲೆ ಇಳಿಕೆಯಿಂದ ಜಿಲ್ಲೆಯ ಬೆಳೆಗಾರರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ.
ಕಾಳುಮೆಣಸು ಕೊಯ್ಲಿಗೆ ಕಾರ್ಮಿಕರ ಸಮಸ್ಯೆ
ಜಿಲ್ಲೆಯಲ್ಲಿ ಮಾರ್ಚ್ ಮೊದಲ ವಾರದಿಂದ ಕಾಳುಮೆಣಸು ಕೊಯ್ಲು ಶುರುವಾಗಲಿದೆ.ಕಾಳುಮೆಣಸು ಕೊಯ್ಲಿಗೆ ಬೆಳೆಗಾರರಿಗೆ ಕಾರ್ಮಿಕರ ಸಮಸ್ಯೆ ಎದುರಾಗಿದೆ. ಸ್ಥಳೀಯ ಕಾರ್ಮಿಕರಿಗೆ ದಿನವೊಂದಕ್ಕೆ ಕಾಳುಮೆಣಸು ಕೊಯ್ಲಿಗೆ 750 ರಿಂದ 800 ರೂ. ಕೂಲಿ ನೀಡ ಬೇಕು. ದುಬಾರಿ ಸಂಬಳ ನೀಡುವ ಅನಿವಾರ್ಯ ಇದೀಗ ಬೆಳೆಗಾರರಿಗೆ ಎದುರಾಗಿದೆ.
ಕಾಳುಮೆಣಸು ಕೊಯ್ಲು ಮಾಡುವ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿದೆ. ಕಾರ್ಮಿಕರೇ ಸಿಗದೆ,ಬಹುತೇಕ ಬೆಳೆಗಾರರು, ವ್ಯಾಪಾರಿಗಳು, ಉತ್ತರ ಕರ್ನಾಟಕ, ತಮಿಳುನಾಡು ಭಾಗದ ಕಾರ್ಮಿಕರಿಂದ ಜಿಲ್ಲೆಯಲ್ಲಿ ಕಾಳುಮೆಣಸು ಕೊಯ್ಲು ಮಾಡುತ್ತಾರೆ. ದಿನವೊಂದಕ್ಕೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಕಾರ್ಮಿಕರಿಗೆ 500 ರಿಂದ 600 ರೂ. ಸಂಬಳ ನೀಡಿದರೆ ಸಾಕು. ಆದರೆ ಸ್ಥಳೀಯ ಕಾರ್ಮಿಕರಿಗೆ 750 ರಿಂದ 800 ರೂ. ಕೂಲಿ ನೀಡಬೇಕು.
ಹಿಂದಿನಂತೆ ಜಿಲ್ಲೆಗೆ ಹೊರ ರಾಜ್ಯ ಹಾಗೂ ಜಿಲ್ಲೆಯ ಕಾರ್ಮಿಕರು ಕಾಳುಮೆಣಸು ಕೊಯ್ಲು ಮಾಡಲು ಬಾರದೆ ಇರುವುದರಿಂದ ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ಬೆಲೆ ಕುಸಿತದ ನಡುವೆ ದುಬಾರಿ ಕೂಲಿ ನೀಡಿ,ಕಾಳುಮೆಣಸು ಕೊಯ್ಲು ಮಾಡುವ ಅನಿವಾರ್ಯತೆ ಇದೆ.