ಬೆಲೆ ಏರಿಕೆ ಮತ್ತು ಎರಡು ಭಾರತ
ಈರುಳ್ಳಿ ತಿನ್ನಬೇಡಿ!
ಈ ಹಿಂದೊಮ್ಮೆ ಈರುಳ್ಳಿ ಮತ್ತು ಬೆಳ್ಳುಳ್ಳಿಗಳ ಬೆಲೆ ವಿಪರೀತವಾಗಿ ಏರಿದಾಗ ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ತಾನು ಅವುಗಳನ್ನು ತಿನ್ನುವ ಕುಟುಂಬಕ್ಕೆ ಸೇರಿಲ್ಲ ಎಂದು ಹಾರಿಕೆಯ ಉತ್ತರ ನೀಡಿದ್ದರು. ಇತ್ತೀಚೆಗೆ ಟೊಮೆಟೊ ಬೆಲೆ ರೂ.150 ದಾಟಿದಾಗ ಸಂಸತ್ತಿನಲ್ಲಿ ಅದರ ಬಗ್ಗೆ ಚರ್ಚೆ ಮಾಡಲು ಅವಕಾಶವೇ ಇರಲಿಲ್ಲ; ಹಾಗಾಗಿ ಅವರ ಸಮಜಾಯಿಷಿ ಬರಲಿಲ್ಲ. ಈಗ ಈರುಳ್ಳಿ ದುಬಾರಿಯಾಗುವ ಸುದ್ದಿ ಬರುತ್ತಿದ್ದಂತೆ ಮಹಾರಾಷ್ಟ್ರದ ಮಂತ್ರಿಯೊಬ್ಬರು ಎರಡು ತಿಂಗಳು ಈರುಳ್ಳಿ ತಿನ್ನದಿದ್ದರೆ ಏನೂ ನಷ್ಟವಿಲ್ಲ ಎಂದು ಹೇಳಿದ್ದಾರೆ; ಮಾತ್ರವಲ್ಲ, 10 ಲಕ್ಷ ರೂ.ಯ ಕಾರು ಕೊಳ್ಳಲು ಸಾಧ್ಯವಾದವರಿಗೆ ಈರುಳ್ಳಿಯ ಬೆಲೆ ಎಷ್ಟಾದರೂ ಅಡ್ಡಿ ಇಲ್ಲ ಎಂದೂ ಘೋಷಿಸಿದ್ದಾರೆ.
ಮಾಧ್ಯಮಗಳ ವರದಿಯಂತೆ ಜನಪ್ರಿಯ ಬರ್ಗರ್ ತನ್ನ ‘ಪಿಝ್ಝಾ’ದಲ್ಲಿ ಟೊಮೆಟೊ ಹಾಕುವುದನ್ನು ನಿಲ್ಲಿಸಿದೆ- ‘ಟೊಮೆಟೊ ರಜೆಯಲ್ಲಿದೆ’ ಎಂದು ಕಂಪೆನಿ ಹೇಳಿಕೊಂಡಿತು. ‘ಮೆಕ್ ಡೋನಲ್ಡ್’ ಮತ್ತು ‘ಸಬ್ ವೇ’ ಸ್ಟೋರ್ಗಳೂ ತಮ್ಮ ತಿಂಡಿಗಳಿಂದ ಟೊಮೆಟೊವನ್ನು ವರ್ಜಿಸಿವೆ. ತಮ್ಮ ಗಳಿಕೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ತಮ್ಮ ವ್ಯಾಪಾರತಂತ್ರವನ್ನು ಶ್ರೀಮಂತರೇ ಪೋಷಿಸುವ ‘ಪಿಝ್ಝಾ’ ಕಂಪೆನಿಗಳು ಬದಲಾಯಿಸಿದವು.
ಇದೇ ಸಂದರ್ಭದಲ್ಲಿ ಇನ್ನೊಂದು ವರದಿಯ ಪ್ರಕಾರ ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಸಮಿತಿಯ ಅಧ್ಯಕ್ಷರಾಗಿರುವ ವಿವೇಕ್ ದೇವರಾಯ್ ಅವರು ಎಲ್ಲ ವಸ್ತುಗಳ ಮೇಲೆಯೂ ಸರಕು ಮತ್ತು ಸೇವಾ ತೆರಿಗೆಗಳನ್ನು (ಜಿಎಸ್ಟಿ) ಹೇರಬೇಕು ಮತ್ತು ಅದು ಸಮಾನವಾಗಿ ಶೇ. 15 ಇರಬೇಕು ಎಂದಿದ್ದಾರೆ. ಹಾಗೆ ಮಾಡಿದಾಗ ‘ಪ್ಯಾಕ್’ ಮಾಡಿದ ಅಕ್ಕಿ, ಬೇಳೆಕಾಳು, ಕೊತ್ತಂಬರಿ, ಸಾಸಿವೆ, ಮೆಣಸು ಮುಂತಾದವುಗಳ ಬೆಲೆ ಇನ್ನೂ ಏರಲಿದೆ.(ಅವರು ಇತ್ತೀಚೆಗಷ್ಟೆ ಭಾರತದ ಸಂವಿಧಾನ ಹಳತಾಗಿದೆ; ಹೊಸ ಸಂವಿಧಾನವನ್ನು ಬರೆಯಬೇಕೆಂಬ ಸಲಹೆಯನ್ನೂ ನೀಡಿದ್ದಾರೆ ಎಂಬುದನ್ನು ಬದಿಗಿರಿಸೋಣ)
ಈ ಮೂರು ಘಟನೆಗಳು ದೇಶದ ಒಂದು ಮುಖವನ್ನು ತೋರಿಸುತ್ತವೆ. ಆ ತರದ ಹೇಳಿಕೆ ನೀಡುವ ಗಣ್ಯರಿಗೆ ಮತ್ತು ಅವರ ಹಿಂಬಾಲಕರಿಗೆ ಬೆಲೆ ಏರಿಕೆಯ ಬಿಸಿ ನಾಟುವುದಿಲ್ಲ. ಅವರದು ಒಂದು ಭಾರತ.
ಇನ್ನೊಂದು ಭಾರತವನ್ನು ಕಾಣಲು ನಾವು ಮಾಧ್ಯಮಗಳ ವರದಿಗಳನ್ನು ಓದಬೇಕಾಗಿಲ್ಲ, ತಜ್ಞರ ಅಭಿಪ್ರಾಯವೂ ಅಗತ್ಯವಿಲ್ಲ. ನಮ್ಮ ಸುತ್ತಮುತ್ತಲಿನ ತರಕಾರಿ ಮತ್ತು ಹಣ್ಣುಗಳ ಮಾರುಕಟ್ಟೆಗೆ, ಜಿನಸಿನ ಅಂಗಡಿಗಳಿಗೆ, ಔಷಧಿ ಅಂಗಡಿಗಳಿಗೆ ಬರುವ ಗಿರಾಕಿಗಳ ವ್ಯಾಪಾರದಿಂದ ಅರಿತುಕೊಳ್ಳಬಹುದು.
ತರಕಾರಿ ಮಾರುವವನ ಬಳಿ ಬರುವವರನ್ನು ಸೂಕ್ಷ್ಮವಾಗಿ ಗಮನಿಸಿ. ಒಬ್ಬರು 30 ಅಥವಾ 50 ರೂ. ತಂದಿರುತ್ತಾರೆ. ಅವರು ಕೊಟ್ಟ ದುಡ್ಡಿಗೆ ಬರುವಷ್ಟು ತರಕಾರಿಗಳನ್ನು -ಸಾಮಾನ್ಯವಾಗಿ ಬಟಾಟೆ, ಈರುಳ್ಳಿ, ಟೊಮೆಟೊ ಮತ್ತು ಹಸಿಮೆಣಸು-ಇವುಗಳನ್ನು ತೂಗಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಎಲ್ಲವನ್ನು ಒಟ್ಟಿಗೆ ಸುರಿದು ಕೊಡುತ್ತಾನೆ ಅಂಗಡಿಯವನು. ಎರಡನೇ ಬಾರಿ ಬರುವಾಗ ಆ ಗಿರಾಕಿಯ ಬಳಿ ಅಷ್ಟೇ ಹಣ ಇರುತ್ತದೆ. ಆಗ ಎಷ್ಟು ತರಕಾರಿ ಸಿಗುತ್ತದೋ ಅಷ್ಟು ಮಾತ್ರ ಕೊಡಿ ಎನ್ನುತ್ತಾನೆ.
ಇನ್ನೊಬ್ಬರು ಸಾಮಾನ್ಯವಾಗಿ ಬೆಲೆ ಕೇಳುವುದಿಲ್ಲ. ಬೇಕಾದ ತರಕಾರಿಯನ್ನು ಹೇಳಿದ ಬೆಲೆ ನೀಡಿ ತಮ್ಮ ಚೀಲದಲ್ಲಿ ಹಾಕಿಸಿ ಅಥವಾ ನಾಲ್ಕೈದು ಪ್ಲಾಸ್ಟಿಕ್ ಚೀಲಗಳಲ್ಲಿ ಹಾಕಿಸಿ ಹತ್ತಿರದ ಕಾರಿನಲ್ಲಿಯೋ, ದ್ವಿಚಕ್ರವಾಹನದಲ್ಲಿಯೋ ಇಡಿಸಿ ಮನೆಗೆ ಬರುತ್ತಾರೆ.
ಹಣ್ಣಿನ ಅಂಗಡಿಯಲ್ಲಿಯೂ ಅಷ್ಟೆ. ಒಬ್ಬರು ಪೂಜೆ ಅಥವಾ ಹಬ್ಬವಿದ್ದರೆ- ದೇವರಿಗಿಡಲು ಅಥವಾ ದೇವಸ್ಥಾನದಲ್ಲಿ ನೈವೇದ್ಯ ಮಾಡಲು- 50 ರೂ.ಗೆ ಎಷ್ಟು ಹಣ್ಣು ಬರುತ್ತದೋ-ನಾಲ್ಕು ಬಾಳೆ ಹಣ್ಣು, ಒಂದು ಮೂಸಂಬಿ, ಎರಡು ಕಿತ್ತಳೆ-ಎಲ್ಲವನ್ನೂ ಒಟ್ಟಿಗೆ ಒಂದೇ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಕೊಡಲು ವ್ಯಾಪಾರಿಯ ಬಳಿ ಹೇಳುತ್ತಾರೆ. ಇನ್ನೊಬ್ಬರು ತಮಗೆ ಬೇಕಾದ, ಮಾವಿನ ಹಣ್ಣು, ದಾಳಿಂಬೆ, ಪಪ್ಪಾಯ, ಮೂಸಂಬಿ ಇತ್ಯಾದಿ ಆಯ್ದು ತಮ್ಮ ಚೀಲದಲ್ಲಿ ಅಥವಾ ಅಂಗಡಿಯವನ ದೊಡ್ಡ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿಕೊಂಡು ಹೊರಡುತ್ತಾರೆ. ಅವರಿಗೆ ಹಣದ ಮಿತಿ ಇಲ್ಲ; ‘ಬಿಲ್ಲಿ’ನ ಹಣವನ್ನು ಈಗ ಸಾಮಾನ್ಯವಾಗಿರುವ ಯುಪಿಐ ಮಾಧ್ಯಮದ ಮೂಲಕ ಪಾವತಿಸಿ ಹೋಗುತ್ತಾರೆ.
ಜಿನಸಿನ ಅಂಗಡಿಗಳಲ್ಲಿಯೂ ಅದೇ ರೀತಿಯ ಚಿತ್ರವನ್ನು ಗಮನಿಸಬಹುದು: ಒಬ್ಬರು ಕೈಯಲ್ಲಿ ದುಡ್ಡು ಎಷ್ಟಿದೆ ಅದಕ್ಕೆ ಸರಿಯಾದಷ್ಟೆ ಅಕ್ಕಿ, ಬೇಳೆ, ಉಪ್ಪು, ಮೆಣಸು ಕೊಂಡುಕೊಂಡು ಹೊರಡುತ್ತಾರೆ. ಇನ್ನೊಬ್ಬರು ತಮಗೇನು ಬೇಕೆಂಬ ಪಟ್ಟಿಯ ಪ್ರಕಾರ ಖರೀದಿಸಿ ಯುಪಿಐ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ರೂ. 500 ಅಲ್ಲ 700 ಆದರೂ ಕೊಟ್ಟು ಹೊರಡುತ್ತಾರೆ.
ಔಷಧಿ ವ್ಯಾಪಾರಿಯಲ್ಲಿ ಹೋದಾಗ ಮತ್ತೆ ಅದೇ ಚಿತ್ರವನ್ನು ಕಾಣುತ್ತೇವೆ: ಒಂದು ವರ್ಗದ ಗಿರಾಕಿ ಜೀರ್ಣವಾದ ಒಂದು ಚೀಟಿ ತಂದು ಅದರಲ್ಲಿ ಬರೆದ ಔಷಧಿಗೆ ಎಷ್ಟು ಬೆಲೆ ಎಂದು ಕೇಳುತ್ತಾನೆ, ಇಲ್ಲವೇ ಹಿಂದೊಮ್ಮೆ ಖರೀದಿಸಿದ ಔಷಧಿಯ ‘ಸ್ಟ್ರಿಪ್’ ಅನ್ನು ತೋರಿಸಿ ತನ್ನಲ್ಲಿ ಎಷ್ಟು ದುಡ್ಡು ಇದೆಯೋ ಅಷ್ಟಕ್ಕೆ ಸರಿದೂಗುವ ಪ್ರಮಾಣದ ಔಷಧಿಯನ್ನು ಕೊಡಿ ಅನ್ನುತ್ತಾರೆ. ಇನ್ನೊಬ್ಬರು ಹೊಸ ಚೀಟಿ ಕೊಟ್ಟು ಅದರಲ್ಲಿ ಬರೆದಿರುವ ಎಲ್ಲಾ ಔಷಧಿಗಳನ್ನು ಕೊಡಿ ಎಂದು ಹೇಳಿ ಯುಪಿಐ ಮೂಲಕ 1,000 ಅಥವಾ 1,200 ರೂ. ಕೊಟ್ಟು ಹೋಗುತ್ತಾರೆ.
ನಮ್ಮ ಮನೆಗೆ ಕೆಲಸಕ್ಕೆ ಬರುವ ಪಾರ್ವತಿ, ಹಿತ್ತಿಲು ಶುಚಿಗೊಳಿಸುವ ರಾಮ, ನಗರಪಾಲಿಕೆಯ ಕಸಕೊಂಡೊಯ್ಯುವ ಲಾರಿಯಲ್ಲಿ ಬರುವ ಮುಖಕ್ಕೆ ಮುಖಗವಸು ಮತ್ತು ಕೈಗೆ ಕೈಗವಸು ಇಲ್ಲದ, ಹೆಸರಿಲ್ಲದ ಆ ಹೆಣ್ಣುಮಗಳು, ಮುಖ್ಯ ರಸ್ತೆಯ ಚಪ್ಪಲಿ ರಿಪೇರಿಯ ಗೂಡಂಗಡಿಯವನು, ಇನ್ನೊಂದು ರಸ್ತೆಯ ಗುಜರಿಯಲ್ಲಿ ಕಸವನ್ನು ಬೇರ್ಪಡಿಸುವ ಕೆಲಸದವರು- ಇವರೆಲ್ಲ ಒಂದು ಭಾರತಕ್ಕೆ ಸೇರಿದವರು. ಅವರ ಸಂಪಾದನೆ ಯಾವತ್ತೂ ಹೆಚ್ಚುವುದಿಲ್ಲ. ಆದರೆ ಬೆಲೆ ಏರಿದಂತೆ ಅವರ ಪಡಕೊಳ್ಳುವ ಸಾಮರ್ಥ್ಯ ಕುಗ್ಗುತ್ತಾ ಹೋಗುತ್ತದೆ.
ಪೆನ್ಶನ್ ಹೆಚ್ಚಾಗದ ನನ್ನಂತಹ ಹಿರಿಯ ನಾಗರಿಕರಿಗೂ ಬೆಲೆ ಏರಿಕೆಯ ಬಿಸಿ ನಾಟುತ್ತದೆ. ಟೊಮೆಟೊ ಬೆಲೆ ಏರಿದ ಬಳಿಕ ಈಗ ತರಕಾರಿ/ಹಣ್ಣಿನ ಅಂಗಡಿಗೆ ಹೋದಾಗ ಪ್ರತಿಯೊಂದರ ಬೆಲೆಯನ್ನೂ ಕೇಳಲು ಆರಂಭಿಸಿದ್ದೇನೆ. ತರಕಾರಿ ಅಂಗಡಿಯ ಲತೇಶನಿಗೆ ಆಶ್ಚರ್ಯ, ಯಾವತ್ತೂ ಬೆಲೆ ಕೇಳದೆ ಬೇಕಾದ ತರಕಾರಿಯನ್ನೋ ಹಣ್ಣನ್ನೋ ಕೊಳ್ಳುತ್ತಿದ್ದವರು ಈಗ ಯಾಕೆ ಕೇಳುತ್ತಿದ್ದಾರಪ್ಪ ಅಂತ! ಅವನ ಕುತೂಹಲಕ್ಕೆ ವಿವರಣೆ ನೀಡಿದೆ: ‘‘ಬೆಲೆ ಹೆಚ್ಚಾದ ಹಾಗೆ ನನ್ನ ‘ಪೆನ್ಶನ್’ ಹೆಚ್ಚಾಗುವುದಿಲ್ಲ, 10 ವರ್ಷ ಹಿಂದೆ ಎಷ್ಟು ಇತ್ತೋ ಅಷ್ಟೇ ಈಗಲೂ ಇದೆ, ಲತೇಶ’’ ಅಂದೆ. ಅವನಿಗೆ ನಂಬಲು ಸಾಧ್ಯವಾಗಲಿಲ್ಲ. ಪಕ್ಕದ ಹಣ್ಣಿನ ಅಂಗಡಿಯಲ್ಲಿ ‘‘ಬಾಳೆ ಹಣ್ಣಿಗೆ ಎಷ್ಟು, ಮಹೇಶ?’’ ಎಂದು ಕೇಳಿದೆ. ‘‘ಕದಳಿಗೆ ಕಿಲೊವಿಗೆ 100ರೂ. ಸರ್’’. ‘‘ಸ್ವಲ್ಪ ಸಮಯ ಹಿಂದೆ 80 ರೂ. ಇದ್ದದ್ದು ಈಗ ಅಷ್ಟು ಏರಿತೆ?’’ ಎಂದು ಕೇಳಿದೆ. ‘‘ಹೆಚ್ಚು ಪೂರೈಕೆ ಇಲ್ಲ ಸರ್’’ ಅಂತ ಉತ್ತರಿಸಿದ ಆತ. ಅನೇಕ ವರ್ಷಗಳಿಂದ ದಿನಾ ಒಂದೂವರೆ ಲೀಟರ್ ಹಾಲು ಹಾಕುತ್ತಿದ್ದ ಕೇಶವನಿಗೆ ಆಗಸ್ಟ್ ತಿಂಗಳಿನಿಂದ ಒಂದೇ ಲಿಟರ್ ಸಾಕು ಎಂದಾಗ ಆಶ್ಚರ್ಯವಾಯಿತು. ಕಾರಣವೇನೋ ಕೊಟ್ಟೆ; ಅವನೂ ಹೇಳಿದ: ‘‘ಈಗ ಬೆಲೆ ಹೆಚ್ಚಾಗಿದೆಯಲ್ಲ; ಇನ್ನೂ ಕೆಲವರು ಕಡಿಮೆ ತೆಗೆದುಕೊಳ್ಳುತ್ತಾ ಇದ್ದಾರೆ ಸರ್’’ ಅಂದ.
ತೀವ್ರವಾಗುವ ಅಸಮಾನತೆ
ಯಾವ ಸಾಮಾನನ್ನು ಯಾರು ಉಪಯೋಗಿಸುತ್ತಾರೆ, ಯಾರ ಕೊಂಡುಕೊಳ್ಳುವ ಸಾಮರ್ಥ್ಯ ಎಷ್ಟಿದೆ ಎಂಬುದು ಮುಖ್ಯವಲ್ಲ. ಬೆಲೆಗಳು ಏರುತ್ತಾ ಇವೆ ಎಂಬ ಕಹಿ ಸತ್ಯವನ್ನು ಈಗ ಸರಕಾರವೇ ಒಪ್ಪಿದೆ. ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ವಿಭಾಗವು (ಡಿಪಾರ್ಟ್ ಮೆಂಟ್ ಆಫ್ ಇಕನಾಮಿಕ್ ಅಫೆರ್ಸ್- ಡಿಇಎ) ಆಗಸ್ಟ್ ತಿಂಗಳಿನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದ ಜುಲೈಯ ಮಾಸಿಕ ಆರ್ಥಿಕ ವರದಿಯ ಪ್ರಕಾರ ಜುಲೈಯಲ್ಲಿ ಬೆಲೆಗಳು ಶೇ. 7.4 ಏರಿಕೆ ಕಂಡವು; ಇದು ಹಿಂದಿನ 15 ತಿಂಗಳಿನಲ್ಲಿ ಒಂದು ದಾಖಲೆ. ಟೊಮೆಟೊ, ಹಸಿಮೆಣಸು, ಶುಂಠಿ ಮತ್ತು ಬೆಳ್ಳುಳ್ಳಿಗಳ ಬೆಲೆಗಳೇ ಶೇ. 50ಕ್ಕಿಂತ ಹೆಚ್ಚಿವೆ. ಇವುಗಳ ಜೊತೆಗೆ ಆಹಾರ ಧಾನ್ಯಗಳ ಬೆಲೆಯೂ ಏರಿದೆ. ಇವುಗಳ ಒಟ್ಟು ಪರಿಣಾಮವಾಗಿ ಆಹಾರ ಪದಾರ್ಥಗಳ ಬೆಲೆಗಳಲ್ಲಿ ಉಬ್ಬರವಾಗುತ್ತಿದೆ ಎಂದೂ ಡಿಇಎ ಹೇಳಿದೆ.
ಡಿಇಎ ಪ್ರಕಾರ ಇದಕ್ಕೆ ಜಾಗತಿಕ ವಿದ್ಯಮಾನಗಳು ಹಾಗೂ ದೇಶೀಯ ಒತ್ತಡಗಳು ಕಾರಣ. 2014ರ ನಂತರದ ವರ್ಷಗಳಲ್ಲಿ ಆದ ಮೂರು ಅತ್ಯಂತ ಹೆಚ್ಚು ಏರಿಕೆಗಳಲ್ಲಿ ಜುಲೈ ತಿಂಗಳಿನಲ್ಲಿ ಆದ ಬೆಲೆಹೆಚ್ಚಳವು ಒಂದು ಎಂದು ಡಿಇಎ ಹೇಳಿದೆ. ಅದರ ಜೊತೆಗೆ, ಮತ್ತೆ ಬೆಲೆ ಏರಿಕೆಯ ಸಾಧ್ಯತೆ ಹೆಚ್ಚಿರುವುದರಿಂದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮತ್ತು ಸರಕಾರವು ಎಚ್ಚರವಾಗಿರಬೇಕೆಂದು ಸೂಚಿಸಿದೆ. ಸರಕಾರವೇ ಅಧಿಕೃತವಾಗಿ ಒಪ್ಪಿಕೊಂಡ ಬೆಳವಣಿಗೆ ಇದು.
ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಆಗಸ್ಟ್ 25ರಂದು ಭಾರತೀಯ ಕೈಗಾರಿಕಾ ಮಹಾಸಂಘದ (ಸಿಐಐ) ಒಂದು ಸಭೆಯಲ್ಲಿ ಚಿಲ್ಲರೆ ಹಣದುಬ್ಬರದ ನಿಯಂತ್ರಣಕ್ಕೆ ಆದ್ಯತೆ ನೀಡುತ್ತೇವೆ ಎಂದಿದ್ದಾರೆ; ಆದರೆ ನಿಖರವಾದ ದಾರಿ ಏನು ಎಂದು ಹೇಳಿಲ್ಲ. ಭಾರತೀಯ ರಿಸರ್ವ್ ಬ್ಯಾಂಕಿನ ಬಡ್ಡಿ (ರೆಪೊ) ದರ ಹೆಚ್ಚಳವನ್ನೇ ನೆಚ್ಚಿಕೊಂಡಿದ್ದರೆ ಹಣದ ಉಬ್ಬರ ನಿಯಂತ್ರಣಕ್ಕೆ ಬರುವುದಿಲ್ಲ, ಪೂರೈಕೆ ವ್ಯವಸ್ಥೆಯ ಸಮಸ್ಯೆಗಳನ್ನೂ ಪರಿಹರಿಸುವಲ್ಲಿ ಕ್ರಮಗಳು ಅಗತ್ಯ ಎಂದಿದ್ದಾರೆ.
ಇವೆಲ್ಲದರ ಜೊತೆಗೆ, ಈ ವರ್ಷ ಮಳೆ ಸಾಕಷ್ಟಿಲ್ಲದೆ, ಕೃಷಿಯ ಉತ್ಪನ್ನಗಳ ಪೂರೈಕೆಯಲ್ಲಿ ಏರುಪೇರಾಗುವ ಸಂಭಾವ್ಯತೆ ಇದೆ. ಇದೂ ಮತ್ತೆ ಬೆಲೆಗಳ ಏರಿಕೆಗೆ ಕಾರಣವಾಗಬಹುದು ಎಂದು ವರದಿಗಳು ಬಂದಿವೆ.
ಈರುಳ್ಳಿಯ ರಫ್ತಿನ ಮೇಲೆ ಸುಂಕ, ಅಕ್ಕಿಯ ರಫ್ತಿನ ಮೇಲೆ ನಿಯಂತ್ರಣ ಮುಂತಾದ ಕ್ರಮಗಳನ್ನು ಸರಕಾರ ಘೋಷಿಸಿದೆ. ಈರುಳ್ಳಿ ಬೆಳೆಗಾರರು ಇದರ ವಿರುದ್ಧ ಪ್ರತಿಭಟನೆಗೆ ಹೊರಟಿದ್ದಾರೆ.
ಅವಶ್ಯ ವಸ್ತುಗಳ ಬೆಲೆ ಏರಿದಾಗ ಒಂದು ಭಾರತಕ್ಕೆ ಬಿಸಿ ನಾಟುತ್ತದೆ. ಮತ್ತೊಂದಕ್ಕೆ ಅದರ ಚಿಂತೆ ಇಲ್ಲ; ಹಾಗಾಗಿ ‘‘ಈರುಳ್ಳಿ ನಾನು ತಿನ್ನುವುದಿಲ್ಲ’’, ‘‘ಎರಡು ತಿಂಗಳು ಈರುಳ್ಳಿ ತಿನ್ನಬೇಡಿ’’ ಎಂದೆಲ್ಲ ಹೇಳುವ ಧಾರ್ಷ್ಟ್ಯ ಬರುತ್ತದೆ.
ನಿರಂತರ ಬೆಲೆ ಏರಿಕೆಯ ಪರಿಣಾಮ ಬಹುಮುಖವಾಗುತ್ತದೆ. ಕೊಳ್ಳುವ ಸಾಮರ್ಥ್ಯ ಕುಗ್ಗಿದಂತೆ ಆಹಾರ ವಸ್ತುಗಳ ಬಳಕೆಯಲ್ಲಿ ಬದಲಾವಣೆಯಾಗುತ್ತದೆ. ಇದರಿಂದ ಬೆಳೆಯುವ ಮಕ್ಕಳ ಮೇಲೆ ಮತ್ತು ದುಡಿಯುವ ಹೆಣ್ಮಕ್ಕಳಿಗೆ ಅಗತ್ಯವಾದ ಪೋಷಕಾಂಶವುಳ್ಳ ಆಹಾರ ಸೇವನೆಯಲ್ಲಿ ಕಡಿತವಾಗುವ ಸಾಧ್ಯತೆ ಇದೆ. ಅದು ಜನರ ಆರೋಗ್ಯದ ಮೇಲೆಯೂ ಪ್ರಭಾವವನ್ನು ಬೀರುತ್ತದೆ. ಸಂಪಾದನೆಯಲ್ಲಿ ಹೆಚ್ಚಳವಾಗದೆ ಬೆಲೆಗಳು ಏರುತ್ತಾ ಹೋದಂತೆ ವೆಚ್ಚ ಹೆಚ್ಚಾಗಿ ಬಡತನವು ಹೆಚ್ಚುತ್ತದೆ, ಮಾತ್ರವಲ್ಲ ಅಸಮಾನತೆ ಮತ್ತಷ್ಟು ತೀವ್ರವಾಗುತ್ತದೆ. ಸ್ಥಿರವಾದ ಸಾಮಾಜಿಕ ಭದ್ರತಾ ಯೋಜನೆಗಳಿಲ್ಲದಾಗ ಜನಸಾಮಾನ್ಯರ ಬದುಕು ದುಸ್ತರವಾಗುತ್ತದೆ. ದೇಶದ ಆಳುವ ವರ್ಗದವರು ಇದಕ್ಕೆ ಪರಿಹಾರ ಕಂಡುಹುಡುಕುವ ತುರ್ತು ಇಂದು ನಮ್ಮ ಮುಂದಿದೆ. ಪರಿಹಾರ ನಿಧಾನವಾದಷ್ಟು ಎರಡು ಭಾರತಗಳ ನಡುವಿನ ಕಂದಕ ಮತ್ತಷ್ಟು ಆಳವೂ ವಿಶಾಲವೂ ಆಗುತ್ತದೆ.