ರಾಯ್ ಬರೇಲಿ ಅಥವಾ ವಯನಾಡ್? ರಾಹುಲ್ ಗಾಂಧಿ ಉಳಿಸಿಕೊಳ್ಳುವ ಕ್ಷೇತ್ರ ಯಾವುದು?
ರಾಹುಲ್ ಗಾಂಧಿ | PC : PTI
ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ರಾಯ್ ಬರೇಲಿ ಹಾಗು ಕೇರಳದ ವಯನಾಡ್ ನಿಂದ ಸ್ಪರ್ಧಿಸಿದ್ದ ರಾಹುಲ್ ಗಾಂಧಿ ಎರಡೂ ಕಡೆ ಭರ್ಜರಿ ಬಹುಮತದಿಂದ ಗೆದ್ದಿದ್ದಾರೆ.
ತಮ್ಮ ತಾಯಿ ಸೋನಿಯಾ ಗಾಂಧಿ ಈವರೆಗೆ ಪ್ರತಿನಿಧಿಸುತ್ತಿದ್ದ ರಾಯ್ ಬರೇಲಿಯಲ್ಲಿ ಈ ಬಾರಿ ರಾಹುಲ್ ಗಾಂಧಿ 6,87,649 ಮತಗಳನ್ನು ಗಳಿಸಿ ಕೇವಲ 2,97,619 ಮತ ಗಳಿಸಿದ ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ ಅವರನ್ನು 3,90,030 ಮತಗಳಿಂದ ಭರ್ಜರಿಯಾಗಿ ಸೋಲಿಸಿದ್ದಾರೆ.
ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ 6,47,445 ಮತ ಪಡೆದ ರಾಹುಲ್ ಗಾಂಧಿ ಸಿಪಿಐ ನ ಅನ್ನಿ ರಾಜಾ ಅವರನ್ನು 3,64,422 ಮತಗಳಿಂದ ಸೋಲಿಸಿದ್ದಾರೆ. ಹೀಗೆ ಎರಡೂ ಕ್ಷೇತ್ರಗಳಿಂದ ಗೆದ್ದಿರುವ ರಾಹುಲ್ ಗಾಂಧಿ ಈಗ ಎರಡರ ಪೈಕಿ ಒಂದು ಕ್ಷೇತ್ರವನ್ನು ಬಿಡಲೇಬೇಕಾದ ಅನಿವಾರ್ಯತೆ ಇದೆ.
Representation of the People Act, 1951 ರ ಪ್ರಕಾರ ಒಬ್ಬ ಅಭ್ಯರ್ಥಿ ಒಂದು ಚುನಾವಣೆಯಲ್ಲಿ ಗರಿಷ್ಟ ಎರಡು ಕಡೆ ಸ್ಪರ್ಧಿಸಬಹುದು. ಆದರೆ ಎರಡೂ ಕಡೆ ಗೆದ್ದರೆ ಒಂದನ್ನು ಮಾತ್ರ ಉಳಿಸಿಕೊಂಡು ಒಂದನ್ನು ಕೈಬಿಡಬೇಕು. ಚುನಾವಣಾ ಫಲಿತಾಂಶ ಪ್ರಕಟವಾದ ಎರಡು ವಾರಗಳ ಒಳಗೆ ಈ ಬಗ್ಗೆ ಚುನಾಯಿತ ಅಭ್ಯರ್ಥಿ ತೀರ್ಮಾನ ತೆಗೆದುಕೊಂಡು ಒಂದು ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಬೇಕು. ಹಾಗೆ ಮಾಡದಿದ್ದರೆ ಆ ಗೆದ್ದ ಅಭ್ಯರ್ಥಿ ಎರಡೂ ಕ್ಷೇತ್ರಗಳನ್ನು ಕಳಕೊಳ್ಳುವ ಸಾಧ್ಯತೆ ಇದೆ.
ಈಗ ಕಾಂಗ್ರೆಸ್ ನೊಳಗೆ ರಾಹುಲ್ ಗಾಂಧಿ ಯಾವ ಕ್ಷೇತ್ರ ಉಳಿಸಿಕೊಳ್ಳಬೇಕು ಎಂಬ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಮೂಲಗಳ ಪ್ರಕಾರ ಕೇರಳ ಸಂಸದರು ಹಾಗು ಅಲ್ಲಿನ ಪಕ್ಷದ ನಾಯಕರನ್ನು ಬಿಟ್ಟರೆ ಉಳಿದವರೆಲ್ಲರೂ ರಾಹುಲ್ ಗಾಂಧಿ ರಾಯ್ ಬರೇಲಿಯನ್ನೇ ಉಳಿಸಿಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಉತ್ತರ ಪ್ರದೇಶದಲ್ಲಿ ಈ ಬಾರಿ ರಾಹುಲ್ , ಪ್ರಿಯಾಂಕ ಅವರಿಗೆ ಸಿಕ್ಕಿರುವ ಭಾರೀ ಜನಬೆಂಬಲ ಹಾಗು ಕಾಂಗ್ರೆಸ್ ಗೆ ಸಿಕ್ಕಿರುವ ಉತ್ತಮ ಫಲಿತಾಂಶವನ್ನು ನೋಡಿದರೆ ಇದು ಸಹಜವೇ. ಹೊಸ ರಾಮ ಮಂದಿರ ನಿರ್ಮಿಸಿದ ಅತ್ಯುತ್ಸಾಹದಲ್ಲಿ ಲೋಕಸಭಾ ಚುನಾವಣೆ ಗೆದ್ದೇ ಬಿಟ್ಟೆವು ಎಂದು ಹೊರಟಿದ್ದ ಬಿಜೆಪಿಗೆ ಉತ್ತರ ಪ್ರದೇಶದಲ್ಲಿ ಭಾರೀ ಮುಖಭಂಗವಾಗಿದೆ. ಅಯೋಧ್ಯೆ ಇರುವ ಫೈಝಬಾದ್ ನಲ್ಲೇ ಬಿಜೆಪಿ ಸೋತಿದೆ. ಅದರ ಸ್ಥಾನಗಳ ಸಂಖ್ಯೆ ಅಲ್ಲಿ ಗಣನೀಯವಾಗಿ ಕಡಿಮೆಯಾಗಿದೆ.
ಈ ಫಲಿತಾಂಶ ಬರುವಲ್ಲಿ ರಾಹುಲ್ ಗಾಂಧಿಯವರ ಪಾತ್ರವೂ ಪ್ರಮುಖವಾಗಿದೆ ಎಂಬ ಅಭಿಪ್ರಾಯ ವ್ಯಾಪಕವಾಗಿದೆ. ಅಖಿಲೇಶ್ ಯಾದವ್ ಜೊತೆ ಅವರ ಸಮೀಕರಣ , ಅವರಿಬ್ಬರೂ ಸೇರಿ ನಡೆಸಿದ ಪ್ರಚಾರ ಪಕ್ಷದ ಕೈ ಹಿಡಿದಿದೆ.
ಹಿಂದಿ ಭಾಷಿಕರಿರುವುದು ಮಾತ್ರವಲ್ಲದೇ, ಇಡೀ ದೇಶದಲ್ಲೇ ರಾಜಕೀಯವಾಗಿ ಅತ್ಯಂತ ಪ್ರಮುಖ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಗೆ ಹೊಸ ಚೈತನ್ಯ ತುಂಬುವ ಸುವರ್ಣಾವಕಾಶ ಈಗ ಪಕ್ಷಕ್ಕೆ ಕಾಣುತ್ತಿದೆ. ಈ ಅವಕಾಶವನ್ನು ಯಾವ ಕಾರಣಕ್ಕೂ ಬಿಟ್ಟು ಕೊಡಬರದು ಎಂಬುದು ಪಕ್ಷದ ಎಲ್ಲ ಪ್ರಮುಖ ನಾಯಕರ ಅಭಿಪ್ರಾಯ. ಇದರ ಮೊದಲ ಹೆಜ್ಜೆಯಾಗಿ ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಜೂ. 11ರಿಂದ ಜೂ.15ದರ ವರೆಗೆ ಧನ್ಯವಾದ ಯಾತ್ರೆಯನ್ನೂ ಹಮ್ಮಿಕೊಂಡಿದೆ.
ರಾಯ್ ಬರೇಲಿ ಗಾಂಧಿ ಕುಟುಂಬಕ್ಕೆ ತೀರಾ ಆಪ್ತ ಕ್ಷೇತ್ರ. 1952 ರಿಂದ ಕೇವಲ ಮೂರು ಬಾರಿ ಬಿಟ್ಟರೆ ಸತತವಾಗಿ ಆ ಕ್ಷೇತ್ರ ಗಾಂಧಿ ಕುಟುಂಬದ ಕೈಯಲ್ಲೇ ಇದೆ. ಸೋನಿಯಾ ಗಾಂಧಿಯವರೇ ಅಲ್ಲಿ ಎರಡು ದಶಕಗಳ ಕಾಲ ಲೋಕಸಭಾ ಸದಸ್ಯೆಯಾಗಿದ್ದರು. ಹಾಗಾಗಿ ರಾಹುಲ್ ಗಾಂಧಿ ರಾಯ್ ಬರೇಲಿಯನ್ನು ಉಳಿಸಿಕೊಂಡು ಕೇರಳದ ವಯನಾಡ್ ಕ್ಷೇತ್ರಕ್ಕೆ ರಾಜೀನಾಮೆ ಕೊಡುವುದು ಬಹುತೇಕ ಖಚಿತ ಎನ್ನಲಾಗಿದೆ.
ಜೂನ್ 17 ರೊಳಗೆ ಅವರು ಈ ಬಗ್ಗೆ ನಿರ್ಧಾರ ಪ್ರಕಟಿಸಲೇ ಬೇಕಿದ್ದು ಅದಕ್ಕೂ ಮೊದಲೇ ಈ ಕುರಿತ ನಿರ್ಧಾರವಾಗುವ ಸಾಧ್ಯತೆಯಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ರಾಹುಲ್ ತಾನು ಗೆದ್ದ ಎರಡೂ ಕ್ಷೇತ್ರಗಳಿಗೆ ಭೇಟಿ ಕೊಟ್ಟು ಅಲ್ಲಿನ ಮತದಾರರಿಗೆ ಕೃತಜ್ಞತೆ ಸಲ್ಲಿಸಲಿದ್ದಾರೆ. ಆ ಬಳಿಕವೇ ರಾಜೀನಾಮೆ ನಿರ್ಧಾರ ಹೊರಬೀಳಲಿದೆ ಎಂದು ತಿಳಿದು ಬಂದಿದೆ.