ಸಂಸತ್ತಿನಲ್ಲಿ ಕುರ್ ಆನ್ ಸೂಕ್ತ ಉಲ್ಲೇಖಿಸಿದ ರಾಹುಲ್ ಗಾಂಧಿ
ರಾಹುಲ್ ಗಾಂಧಿ | PC : PTI
ಸೋಮವಾರದ ರಾಹುಲ್ ಗಾಂಧಿ ಭಾಷಣ ಈಗ ಎಲ್ಲೆಡೆ ಚರ್ಚೆಯ ವಿಷಯವಾಗಿದೆ. ಶಿವನ ಚಿತ್ರವನ್ನು ಕೈಯಲ್ಲಿ ಇಟ್ಟುಕೊಂಡೇ ಬಿಜೆಪಿಗೆ ರಾಹುಲ್ ಗಾಂಧಿ ಅಹಿಂಸೆಯ ಪಾಠ ಮಾಡಿದ್ದರು.
ಎಲ್ಲ ಧರ್ಮಗಳು ಶಾಂತಿ, ಅಹಿಂಸೆ ಮತ್ತು ಧೈರ್ಯದ ಬಗ್ಗೆ ಮಾತನಾಡುತ್ತದೆ ಎಂದು ಆ ಭಾಷಣದಲ್ಲಿ ಒತ್ತಿ ಹೇಳಿದ್ದ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಕುರ್ ಆನಿನ ಸೂಕ್ತವೊಂದನ್ನು ಉಲ್ಲೇಖಿಸಿದ್ದರು.
ರಾಷ್ಟ್ರಪತಿಗಳ ಭಾಷಣದ ಧನ್ಯವಾದ ನಿರ್ಣಯಕ್ಕೆ ಪ್ರತಿಕ್ರಿಯಿಸಿ ಮಾತನಾಡುತ್ತಿದ್ದ ರಾಹುಲ್, ಚುನಾವಣೆಯ ವೇಳೆ ವಿಪಕ್ಷ ನಾಯಕರ ಧೈರ್ಯವನ್ನು ಶ್ಲಾಘಿಸಿದರು. ಶಿವನ ಕುರಿತು ಮಾತನಾಡುತ್ತಾ ಅವರ ವ್ಯಕ್ತಿತ್ವವು "ಅಹಿಂಸೆ" ಯನ್ನು ಸಂಕೇತಿಸುತ್ತದೆ ಮತ್ತು ಅವರ ಕುತ್ತಿಗೆಯ ಸುತ್ತಲಿನ ಹಾವು "ಧೈರ್ಯ" ವನ್ನು ಸಂಕೇತಿಸುತ್ತದೆ ಎಂದು ಹೇಳಿದರು.
ನಂತರ "ಇಸ್ಲಾಂನಲ್ಲಿಯೂ ಸಹ ... ಕುರ್ ಆನಿನಲ್ಲಿ ಇದನ್ನು ಬರೆಯಲಾಗಿದೆ" ಎಂದ ರಾಹುಲ್ ಕುರ್ ಆನಿನ 20 ನೇ ಅಧ್ಯಾಯ ತ್ವಾಹಾದ 46 ನೇ ಸೂಕ್ತ ಉಲ್ಲೇಖಿಸಿದರು. " ನೀವಿಬ್ಬರೂ ಅಂಜಬೇಡಿ. ನಾನು ಖಂಡಿತ ನಿಮ್ಮ ಜೊತೆಗಿದ್ದೇನೆ. ಎಲ್ಲವನ್ನೂ ಕೇಳುತ್ತಿರುತ್ತೇನೆ ಮತ್ತು ನೋಡುತ್ತಿರುತ್ತೇನೆ " ಎಂದು ಅಲ್ಲಾಹನು ಹೇಳುವ ಕುರ್ ಆನಿನ ಸೂಕ್ತವನ್ನು ರಾಹುಲ್ ಗಾಂಧಿ ಉಲ್ಲೇಖಿಸಿದರು. ನಂತರ ಇಸ್ಲಾಮಿನಲ್ಲಿಯೂ ಭಯಪಡಬೇಡಿ ಎಂದೇ ಹೇಳಲಾಗಿದೆ ಎಂದರು.
ಇದಲ್ಲದೆ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ , ಬಿಜೆಪಿ ನಾಯಕರನ್ನು ತೋರಿಸಿ ತಮ್ಮನ್ನು ಹಿಂದೂ ಎಂದು ಕರೆದುಕೊಳ್ಳುವವರಲ್ಲಿ ಬರೀ ಹಿಂಸೆ, ದ್ವೇಷ ಮತ್ತು ಸುಳ್ಳು ಮಾತ್ರ ಇದೆ ಎಂದು ಹೇಳಿದರು. ಪ್ರತಿಪಕ್ಷಗಳ ಮೇಲೆ ಹಲವಾರು ದಾಳಿಗಳು ನಡೆದರೂ ನಾವು ಧೈರ್ಯಶಾಲಿಯಾಗಿದ್ದೇವೆ ಎಂದೂ ರಾಹುಲ್ ಹೇಳಿದರು.
"ಆಪ್ ಹಿಂದೂ ಹೋ ಹಿ ನಹಿ ... ನೀವು ಹಿಂದೂ ಅಲ್ಲವೇ ಅಲ್ಲ.. ಎಂದ ರಾಹುಲ್ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ಇದು ಲೋಕಸಭೆಯಲ್ಲಿ ಗದ್ದಲವನ್ನು ಸೃಷ್ಟಿಸಿತು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ ರಾಹುಲ್ ಹಿಂದೂ ಸಮುದಾಯವನ್ನು ಹಿಂಸಾತ್ಮಕ ಎಂದು ಕರೆದಿದ್ದಾರೆ ಮತ್ತು ಇದು ಗಂಭೀರ ವಿಷಯ ಎಂದು ಹೇಳಿದರು.
ತಕ್ಷಣ ಪ್ರತಿಕ್ರಿಯಿಸಿದ ರಾಹುಲ್ " ನರೇಂದ್ರ ಮೋದಿ ಪೂರಾ ಹಿಂದೂ ಸಮಾಜ್ ನಹೀ ಹೈ, ಬಿಜೆಪಿ ಪೂರಾ ಹಿಂದೂ ಸಮಾಜ್ ನಹೀ ಹೈ, ಆರ್ಎಸ್ಎಸ್ ಪೂರಾ ಹಿಂದೂ ಸಮಾಜ್ ನಹೀ ಹೈ" ಅಂದ್ರೆ "ನರೇಂದ್ರ ಮೋದಿ ಎಂದರೆ ಇಡೀ ಹಿಂದೂ ಸಮುದಾಯವಲ್ಲ, ಬಿಜೆಪಿ ಎಂದರೆ ಇಡೀ ಹಿಂದೂ ಸಮುದಾಯವಲ್ಲ ಆರ್ಎಸ್ಎಸ್ ಎಂದರೆ ಇಡೀ ಹಿಂದೂ ಸಮುದಾಯವಲ್ಲ ಎಂದು ತಿರುಗೇಟು ನೀಡಿದರು.