ಸಿದ್ಧಾಂತ ಹಾಗೂ ನಿಲುವನ್ನು ಎಂದೂ ಸಡಿಲಿಸದ ರಾಹುಲ್ ಗಾಂಧಿ
► ರಾಹುಲ್ ರಲ್ಲಿರುವ ಸಿದ್ಧಾಂತ ಸ್ಪಷ್ಟತೆ ಕಾಂಗ್ರೆಸ್ಸಿಗರಲ್ಲಿ ಎಷ್ಟಿದೆ ?
ಮೊನ್ನೆ ಸುಪ್ರೀಂ ಕೋರ್ಟ್ ತನ್ನ ಶಿಕ್ಷೆಗೆ ತಡೆ ನೀಡಿ ತೀರ್ಪಿತ್ತ ಮೇಲೆ ಪಕ್ಷದ ಕಚೇರಿಗೆ ಬಂದ ರಾಹುಲ್ ಗಾಂಧಿಯನ್ನು ಗಮನಿಸಿ ನೋಡಿದ್ದೀರಾ ?
ಶುಕ್ರವಾರ ಎಐಸಿಸಿ ಕಚೇರಿಗೆ ಬರುವಾಗ ಅವರ ಹಾವಭಾವ, ಅವರ ಮುಖಭಾವ, ಅವರು ಮಾತನಾಡಿದ ಶೈಲಿ ಇವೆಲ್ಲವನ್ನೂ ನೋಡಿ. 2014 ಮತ್ತು 2019 ರ ಚುನಾವಣೆಗಳಲ್ಲಿ ಹೀನಾಯ ಸೋಲಿನ ಬಳಿಕ ಅವರು ಮಾಧ್ಯಮದವರೆದುರು ಬರುವಾಗ ಹೇಗೆ ಮುಗುಳ್ನಗುತ್ತಾ ಬಂದಿದ್ದಾರೋ ಮೊನ್ನೆ ಸುಪ್ರೀಂ ಕೋರ್ಟ್ ನಲ್ಲಿ ತಮ್ಮ ಪರವಾಗಿ ಐತಿಹಾಸಿಕ ತೀರ್ಪು ಬಂದ ಮೇಲೂ ಅದೇ ರೀತಿ ಕಂಡು ಬಂದರು.
ಅದು ರಾಹುಲ್ ಗಾಂಧಿ. ಸೋಲಿನಲ್ಲೂ, ಗೆಲುವಿನಲ್ಲೂ, ಹೋರಾಟದಲ್ಲೂ, ರಾಜಕೀಯದಲ್ಲೂ ಅವರದ್ದು ಸ್ಥಿತಪ್ರಜ್ಞ ಮನೋಭಾವ ಹಾಗು ಅತ್ಯಂತ ಸಹಜ ಸ್ವಭಾವ. ಅಲ್ಲಿ ಕೃತಕತೆಗೆ, ನೋಟಂಕಿಗೆ, ನಾಟಕಕ್ಕೆ ಜಾಗವಿಲ್ಲ. ಇಂದಿನ ಭಾರತದ ರಾಜಕಾರಣದಲ್ಲಿ ಇಂತಹ ಸ್ಥಿತಪ್ರಜ್ಞತೆ, ಸಹಜತೆ ಹಾಗು ಆಲಿಸುವ ಗುಣ ಬಹಳ ಅಪರೂಪ.
ಈ ದೇಶದಲ್ಲಿ ಅತ್ಯಂತ ಹೆಚ್ಚು ಟ್ರೋಲ್ ಗೊಳಗಾದ, ಅತ್ಯಂತ ವ್ಯವಸ್ಥಿತ ಅಭಿಯಾನದ ಮೂಲಕ ಚಾರಿತ್ರ್ಯ ಹರಣಕ್ಕೆ ಈಡಾದ, ಕಾರಣವೆ ಇಲ್ಲದೆ ನಿರಂತರ ಟೀಕೆ, ಕುಹಕ, ತಮಾಷೆಗಳಿಗೆ ಅತಿ ಹೆಚ್ಚು ತುತ್ತಾದ ರಾಜಕಾರಣಿ ರಾಹುಲ್ ಗಾಂಧಿ. ದೇಶವನ್ನು ಆಳುವ ಅತ್ಯಂತ ಬಲಿಷ್ಠ ಪಕ್ಷ, ಅದರ ಅತ್ಯಂತ ಪವರ್ ಫುಲ್ ನಾಯಕರು, ಇಡೀ ಆಡಳಿತ ವ್ಯವಸ್ಥೆ, ಬಹುತೇಕ ಎಲ್ಲ ಮಾಧ್ಯಮಗಳು - ಎಲ್ಲವೂ ಒಬ್ಬ ವ್ಯಕ್ತಿಯ ವಿರುದ್ಧ ನಿಂತಿದ್ದರೆ ಅದು ರಾಹುಲ್ ಗಾಂಧಿ.
ಆದರೆ ಇವೆಲ್ಲವುಗಳ ಮೂಲಕ ಯಾರನ್ನು ಈ ಬಿಜೆಪಿ ಮತ್ತು ಸಂಘಪರಿವಾರ ಪಪ್ಪು ಎಂದು ಬಿಂಬಿಸಿತ್ತೊ, ಹೆಜ್ಜೆಹೆಜ್ಜೆಗೂ ಹೀಗಳೆದು ಯಾರ ಆತ್ಮಸ್ಥೈರ್ಯವನ್ನು ಕುಂದಿಸಲು ನೋಡಿತ್ತೊ ಅದೇ ರಾಹುಲ್ ಗಾಂಧಿ ತಮ್ಮ ಪ್ರಬುದ್ಧತೆಯಿಂದಲೇ ಮತ್ತೆ ಮತ್ತೆ ಪುಟಿದೆದ್ದು ಬಂದು ರಾಷ್ಟ್ರ ರಾಜಕೀಯದಲ್ಲಿ ದಿನದಿಂದ ದಿನಕ್ಕೆ ಪ್ರಖರವಾಗುತ್ತಿದ್ದಾರೆ.
ಈ ಕುತ್ಸಿತ ಮನಃಸ್ಥಿತಿಯವರ ಎಲ್ಲ ಕಿರುಕುಳಗಳನ್ನು ಸ್ವಲ್ಪವೂ ಸಿಡುಕಿಲ್ಲದೆ, ಸಂಯಮದಿಂದಲೇ ದಾಟಿ ದೃಢಗೊಂಡಿರುವ ರಾಹುಲ್ ಇಂದು ನಮಗೆ ಕಾಣಿಸುತ್ತಿರುವುದು ರಾಜಿಯಾಗದ ನಾಯಕನಾಗಿ. ಅವರಿಂದು ಎತ್ತುತ್ತಿರುವ ಪ್ರಶ್ನೆಗಳು ಅದೆಷ್ಟೋ ಇಂಚಿನ ಎದೆಯನ್ನೂ ನಡುಗಿಸುತ್ತಿವೆ. ಅಷ್ಟು ಮಾತ್ರವಲ್ಲ, ಅವರ ಮಾತುಗಳಲ್ಲಿನ ಪ್ರಾಮಾಣಿಕತೆ ಮತ್ತು ಸತ್ಯ, ಒಂಬತ್ತು ವರ್ಷಗಳಿಂದಲೂ ಬರೀ ಸುಳ್ಳುಗಳ ಮೇಲೆಯೇ ನಿಂತವರ ಬೆನ್ನಟ್ಟುತ್ತಿದೆ.
ಸುಮಾರು ಒಂದು ವರ್ಷದ ಹಿಂದಿನವರೆಗೂ, ರಾಹುಲ್ ಗಾಂಧಿಯನ್ನು ಮೆಚ್ಚಬಯಸುವವರೂ ಅದನ್ನು ಧೈರ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಳ್ಳಲು ಹಿಂಜರಿಯುತ್ತಿದ್ದರು. ಅವರ ಪರವಾಗಿ ಬರೆದರೆ ಅದಕ್ಕೆ ಅಪಹಾಸ್ಯದ ಪ್ರತಿಕ್ರಿಯೆಗಳೇ ಬರುತ್ತವೆಂಬುದು ಅಂಥವರ ಅನುಭವವಾಗಿತ್ತು. ಆದರೆ ಅದೆಲ್ಲವೂ ಈಗ ಬದಲಾಗುತ್ತಿದೆ. ಇತ್ತೀಚೆಗೆ ರಾಹುಲ್ ತೋರುತ್ತಿರುವ ನಿಖರ ನಿಲುವು, ಸ್ಪಷ್ಟ ಧೋರಣೆ, ಸೈದ್ಧಾಂತಿಕ ಬದ್ಧತೆ, ಅವರ ಕಾರ್ಯವೈಖರಿ, ಕೃತಕತೆ ಇಲ್ಲದ ವ್ಯಕ್ತಿತ್ವ, ಎಲ್ಲರನ್ನೂ ಜೊತೆಗೆ ಕರೆದೊಯ್ಯುವ ನಾಯಕತ್ವ ಇದೆಲ್ಲವೂ ದೊಡ್ಡ ಮಟ್ಟದಲ್ಲಿ ದೇಶದ ಜನತೆಗೆ ಕಂಡಿದೆ, ಕಾಣುತ್ತಿದೆ. ಅದಕ್ಕೆ ಅಷ್ಟೇ ಸ್ಪಂದನೆಯೂ ಸಿಗುತ್ತಿದೆ.
ರಾಜಿಯಾಗದ ನಾಯಕನಾಗುವುದೆಂದರೆ, ತನಗೆ ತಾನು ಪ್ರಾಮಾಣಿಕವಾಗಿದ್ದೇನೆ ಮತ್ತು ತಾನು ಸತ್ಯವನ್ನು ಮಾತ್ರ ಪ್ರತಿಪಾದಿಸಲು ಹೊರಟಿದ್ದೇನೆ ಎಂದು ಸ್ವತಃ ಸ್ಪಷ್ಟತೆ ಹೊಂದಿರುವುದು. ಅಂಥದೊಂದು ವಿಶ್ವಾಸ ಮತ್ತು ಆತ್ಮವಿಶ್ವಾಸ ಇಲ್ಲದವನು ಎಂಥದೇ ಸಂದರ್ಭದಲ್ಲೂ, ರಾಜಿಯಾಗದ ಗಟ್ಟಿತನ ಮತ್ತು ದಿಟ್ಟತನವನ್ನು ಬೆಳೆಸಿಕೊಳ್ಳುವುದು ಸಾಧ್ಯವಿಲ್ಲ.
ರಾಹುಲ್ ಹೀಗೆ ಗಟ್ಟಿಗೊಳ್ಳುವಂತಾದ ಬಹಳ ಮುಖ್ಯ ಘಟ್ಟ ಅವರ ಭಾರತ್ ಜೋಡೋ ಯಾತ್ರೆ. ಅಲ್ಲಿಂದ ಶುರುವಾಗಿ, ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವಿನೊಂದಿಗೆ ‘ಪಪ್ಪು’ ಹಣೆಪಟ್ಟಿಯೂ ಕಳಚಿಬಿತ್ತು. ಕೋಟಿಗಟ್ಟಲೆ ರೂಪಾಯಿಗಳನ್ನು ವ್ಯಯಿಸಿ, ಬಹುದೊಡ್ಡ ವ್ಯವಸ್ಥೆಯೊಂದು ಅತ್ಯಂತ ವ್ಯವಸ್ಥಿತವಾಗಿ ಹೆಣೆದಿದ್ದ ಆ ಹಣೆಪಟ್ಟಿಯನ್ನು ಕಳಚಿ ಬಿಸಾಡಿದ್ದು ಸಣ್ಣ ಸಾಧನೆಯೇನಲ್ಲ.
ಅದರ ಜೊತೆಜೊತೆಗೆ ಪ್ರಾಮಾಣಿಕ ಕಾಳಜಿಯುಳ್ಳ ನಾಯಕನಾಗಿ ರಾಹುಲ್ ಕಾಣಿಸಿಕೊಂಡರು. ಈಗ ಪ್ರಧಾನಿಗಿಂತ ಸಮರ್ಥವಾಗಿ ಮಾತನಾಡಬಲ್ಲ, ಪ್ರಶ್ನೆಗಳಿಗೆ ಉತ್ತರಿಸಬಲ್ಲ ನಾಯಕನಾಗಿಯೂ ಅವರು ಗಮನ ಸೆಳೆಯುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅವರು ಪ್ರಶ್ನೆಗಳನ್ನು ಪ್ರೋತ್ಸಾಹಿಸುತ್ತಾರೆ. ಅದನ್ನು ಯಾವುದೇ ಅಳುಕಿಲ್ಲದೆ ಎದುರಿಸುತ್ತಾರೆ. ಸಮರ್ಥವಾಗಿ ಉತ್ತರಿಸುತ್ತಾರೆ. ಅವುಗಳಿಗೆ ಬೆನ್ನು ಮಾಡುವುದಿಲ್ಲ. ಪ್ರಶ್ನೆ ಕೇಳುವವರನ್ನು ಬೆದರಿಸುವುದಿಲ್ಲ.
ಒಬ್ಬ ವ್ಯಕ್ತಿ ನಾಲ್ಕೂವರೆ ತಿಂಗಳುಗಳಿಗೂ ಹೆಚ್ಚು ಕಾಲ ದೇಶದ ಉದ್ದಗಲಕ್ಕೂ ಕಾಲ್ನಡಿಗೆಯಲ್ಲಿ ಹೋಗುತ್ತಾರೆ, ಜನರ ಜೊತೆ ಅತ್ಯಂತ ಸಹಜವಾಗಿ ಬೆರೆಯುತ್ತಾರೆ ಎಂದರೆ ಅದು ಸುಮ್ಮನೆ ಮಾತಲ್ಲ. ಘನ ಉದ್ದೇಶದ ಅಂಥದೊಂದು ನಡಿಗೆಯನ್ನು ರಾಹುಲ್ ಸಾಧಿಸಿಯೇಬಿಟ್ಟರು. ಯಾತ್ರೆಯುದ್ದಕ್ಕೂ ಕಂಡಿದ್ದು ರಾಹುಲ್ ರ ನೈಜ ನಗೆ.
ಅವರು ಪಕ್ಷವನ್ನು ಮುನ್ನಡೆಸುತ್ತಾರಾ, ಮುತ್ಸದ್ದಿ ರಾಜಕಾರಣಿ ಆಗುತ್ತಾರಾ, ಕಾಂಗ್ರೆಸ್ಗೆ ಇದರಿಂದ ಲಾಭವಾಗುತ್ತದಾ, ಅವರು ಪ್ರಧಾನಿಯಾಗ್ತಾರಾ ಎಂಬುದನ್ನೆಲ್ಲ ಬದಿಗಿಟ್ಟರೂ, ಅವರೊಬ್ಬ ಅಪ್ಪಟ ಮಾನವೀಯ ಹೃದಯದ, ಸರಳ ಹಾಗೂ ಅಷ್ಟೇ ಪ್ರಬುದ್ಧ ನಾಯಕ ಎಂಬುದಂತೂ ಈ ಯಾತ್ರೆಯಿಂದ ಇಡೀ ದೇಶಕ್ಕೆ ಗೊತ್ತಾಯಿತು. ಈ ನಡಿಗೆಯಲ್ಲಿ ಅವರಿಗೆ ಸಿಕ್ಕ ಅನುಭವವೂ ಅಷ್ಟೇ ದೊಡ್ಡದು.
ಯಾತ್ರೆ ಮುಗಿಸಿ ಬಂದ ರಾಹುಲ್, ತಾವು ಆಲಿಸುವುದನ್ನು ಕಲಿತದ್ದರ ಬಗ್ಗೆ ಹೇಳಿದ್ದರು. "ನಮ್ಮ ದೇಶದ ಆತ್ಮ ಎಂದು ಯಾರನ್ನು ನಾವು ಬಣ್ಣಿಸುತ್ತೇವೆಯೊ ಅವರನ್ನು ನಾವು ಭೇಟಿಯಾದೆವು. ಮತ್ತು ಬಹಳ ಬೇಗ, ಹತ್ತು ದಿನಗಳಲ್ಲಿ ನಾವು ಮಾತು ನಿಲ್ಲಿಸಿ ಮೌನವಾಗುವಂತಾಯಿತು " ಎಂದಿದ್ದರು ರಾಹುಲ್.
" ಜನರಿಗೆ ವಿಷಯಗಳನ್ನು ವಿವರಿಸಲು ಹೊರಟಿದ್ದ ನಾವು ಇದ್ದಕ್ಕಿದ್ದಂತೆ ಮೌನವಾದೆವು. ಬದಲಿಗೆ ಅವರ ಮಾತುಗಳನ್ನು ಕೇಳತೊಡಗಿದೆವು" ಎಂಬ ರಾಹುಲ್ ಮಾತು ಬಹಳ ಮಹತ್ವದ್ದು."ನಾವು ಹಿಂದೆಂದೂ ನೋಡಿರದ ಬುದ್ಧಿವಂತಿಕೆ, ತಿಳುವಳಿಕೆ ನಮಗಲ್ಲಿ ಕಾಣಿಸತೊಡಗಿತು. ನಾವು ಅವಿದ್ಯಾವಂತರು ಎಂದುಕೊಂಡಿರುವ ಅನೇಕ ರೈತರು, ನಾವು ದಿಗ್ಭ್ರಮೆಗೊಳ್ಳುವಂತೆ ವಿಚಾರಗಳನ್ನು ನಮ್ಮ ಮುಂದೆ ಇಡತೊಡಗಿದರು. ನಾವು ಪೂರ್ತಿ ಮೌನ ವಹಿಸಿ ಅವರ ಮಾತು ಆಲಿಸುವಂತೆ ಅವರು ಎಲ್ಲವನ್ನೂ ವಿವರಿಸತೊಡಗಿದರು. ಬಳಿಕ ಇದು ಕೂಲಿಕಾರರು, ಸಣ್ಣ ವ್ಯಾಪಾರಸ್ಥರು ಮೊದಲಾದ ಜನರ ಎದುರಲ್ಲೂ ನಮಗೆ ಮತ್ತೆ ಮತ್ತೆ ಅನುಭವವಾಯಿತು. ನಾವು ಎಲ್ಲವನ್ನೂ ಆಲಿಸಲು ಪ್ರಾರಂಭಿಸಿದೆವು. ಅಪಾರವಾದ ಸಂಕಟದ ಕಥೆಗಳನ್ನು ಕೇಳಿಸಿಕೊಂಡೆವು. ನಮ್ಮ ರಾಜಕೀಯ ಮತ್ತು ನಮ್ಮ ಜನರ ನಡುವೆ ದೊಡ್ಡ ಕಂದಕ ಬಿದ್ದಿದೆ ಎಂಬುದು ಸ್ಪಷ್ಟವಾಗಿ ಕಂಡಿದ್ದು ಆಗಲೇ " ಎಂದರು ರಾಹುಲ್.
ರಾಹುಲ್ ಎಷ್ಟು ಆಳವಾಗಿ ಗ್ರಹಿಸಬಲ್ಲರು ಮತ್ತು ತೀವ್ರವಾಗಿ ಯೋಚಿಸಬಲ್ಲರು ಎಂಬುದನ್ನು ತಿಳಿಯಲು ಅವರ ಈ ಮಾತುಗಳೇ ಸಾಕು. ಬಹುಶಃ ಈ ನೆಲದ ಜನರ ಮನಸ್ಸಿನಲ್ಲೇನಿದೆ ಎಂಬುದನ್ನು ಪ್ರಾಮಾಣಿಕವಾಗಿ ಕೇಳುವ ರಾಹುಲ್ ಗಾಂಧಿಯವರ ಗುಣವೇ ಅವರ ದೊಡ್ಡ ಸಾಮರ್ಥ್ಯ. ಸಹಾನುಭೂತಿಯಿಂದ ಆಲಿಸುವಲ್ಲಿ ಶಕ್ತಿಯಿದೆ ಎಂಬ ರಾಹುಲ್ ಅಭಿಪ್ರಾಯ ಗಮನೀಯ.
ಏಕೆಂದರೆ ಕಳೆದ ಒಂಬತ್ತು ವರ್ಷಗಳಲ್ಲಿ ಈ ದೇಶವನ್ನು ಆಳಿದವರು ತಮ್ಮ ಮನ್ ಕೀ ಬಾತ್ ಅನ್ನೇ ಜನರಿಗೆ ಕೇಳಿಸಿ ಎದ್ದು ಹೋಗುತ್ತಿದ್ದಾರೆಯೇ ವಿನಃ ಜನರ ಮನ್ ಕೀ ಬಾತ್ ಗೆ ಕವಡೆ ಕಾಸಿನ ಕಿಮ್ಮತ್ತೂ ಕೊಡುತ್ತಿಲ್ಲ. ರಾಹುಲ್ ಗಾಂಧಿ ತಮಗೆ ಎಲ್ಲವೂ ಗೊತ್ತಿದೆ ಎಂದು ತೋರಿಸಿಕೊಳ್ಳುವುದಿಲ್ಲ. ಗೊತ್ತಿರದೇ ಇರುವ ವಿಚಾರವನ್ನು ಗೊತ್ತಿಲ್ಲ ಎಂದು ಒಪ್ಪಿಕೊಳ್ಳಲು ಅವರು ಯಾವತ್ತೂ ಹಿಂದೆಮುಂದೆ ನೋಡಿದ್ದಿಲ್ಲ.
ರಾಹುಲ್ ಮಾತಿನಲ್ಲಿ ನಮಗೆ ಹೆಚ್ಚು ನಿರರ್ಗಳತೆ ಕಾಣದೇ ಇರಬಹುದು. ವಾಕ್ಚಾತುರ್ಯ ತೋರುವುದು ಅವರಿಗೆ ಬೇಕಾಗಿಯೂ ಇಲ್ಲ. ಆದರೆ ಅವರು ಆಡುವ ವಿಚಾರದಲ್ಲಿ ಪ್ರಾಮಾಣಿಕತೆಯಿದೆ. ಮನುಷ್ಯ ಹೊಂದಿರಬೇಕಾದ ಪ್ರೀತಿ, ಒಗ್ಗಟ್ಟು, ನ್ಯಾಯ ಮತ್ತು ಸಮತಾವಾದದ ಕುರಿತು ರಾಹುಲ್ ಹೇಳುತ್ತಿದ್ದಾರೆ.
ಕಾಶ್ಮೀರದಲ್ಲಿ ಯಾತ್ರೆಯ ಸಮಾರೋಪದ ವೇಳೆ ಮಾತನಾಡಿದ ರಾಹುಲ್, " ಹಿಂಸೆಯ ಅನುಭವ ಎಷ್ಟು ಕರಾಳವಾದುದು ಎಂಬುದು ಕಾಶ್ಮೀರದ ಜನತೆಗೆ, ಪುಲ್ವಾಮಾ ದಾಳಿಯಲ್ಲಿ ಸಂಬಂಧಿಗಳನ್ನು ಕಳೆದುಕೊಂಡವರಿಗೆ ಗೊತ್ತು. ನನ್ನ ತಂದೆಯ ಹತ್ಯೆಯನ್ನು ನೆನಪಿಸಿಕೊಳ್ಳುವಾಗ ನನಗೆ ಆ ಹಿಂಸೆಯ ನೋವೆಂಥದು ಎಂಬುದು ಅರ್ಥವಾಗುತ್ತದೆ. ಹಿಂಸೆಗೆ ಕುಮ್ಮಕ್ಕು ನೀಡುವ ಮೋದಿ, ಶಾ, ಧೋವಲ್ ಅಂಥವರಿಗೆ, ಆರೆಸ್ಸೆಸ್ಗೆ ಈ ನೋವು ಅರ್ಥವಾಗಲಾರದು. ಹಿಂಸೆಗೆ ಕೊನೆ ಹಾಡುವುದು ಈ ಯಾತ್ರೆಯ ಗುರಿ " ಎಂದಿದ್ದರು.
"ನನ್ನ ಪೂರ್ವಜರು ಕಾಶ್ಮೀರದಿಂದ ಅಲಹಾಬಾದ್ನೆಡೆ ಹೋಗಿದ್ದರು. ಇಲ್ಲಿ ಯಾತ್ರೆಯಲ್ಲಿ ತೊಡಗಿರುವಾಗ ನನಗೆ ನನ್ನ ಮನೆಗೆ ಬಂದಿರುವ ಅನುಭವವಾಗುತ್ತಿದೆ. ನಮ್ಮ ಸುತ್ತ ಕಟ್ಟಿಕೊಂಡಿರುವ ಕೋಟೆ ಒಡೆಯಬೇಕಿದೆ. ಆ ಮೂಲಕ ಶೂನ್ಯವನ್ನು ಸಾಧಿಸಬೇಕು. ಹಿಂದೂ ಧರ್ಮದಲ್ಲಿ ಶೂನ್ಯ ಎನ್ನುತ್ತೇವೆ. ಇಸ್ಲಾಂನಲ್ಲಿ ಫನಾ ಎನ್ನುತ್ತಾರೆ. ಈ ವಿಚಾರಧಾರೆಗಳನ್ನು ಒಟ್ಟಿಗೆ ಕೊಂಡೊಯ್ಯುವುದೇ ಕಾಶ್ಮೀರಿತನ. ಗಾಂಧೀಜಿ, ಬಸವಣ್ಣ, ತಿರುವಳ್ಳವರ್, ನಾರಾಯಣಗುರು, ಜ್ಯೋತಿಬಾ ಫುಲೆ ಎಲ್ಲರೂ ಇದನ್ನೇ ಹೇಳಿದರು " ಎಂಬ ರಾಹುಲ್ ಮಾತುಗಳು ಅವತ್ತು ಹಿಮ ಬೀಳುತ್ತಿದ್ದ ಶ್ರೀನಗರದ ತಂಪಿನಲ್ಲಿ ಜನರ ಮನಸ್ಸಿನಾಳಕ್ಕೆ ಇಳಿದಿದ್ದವು.
"ನನಗಾಗಿಯಾಗಲೀ ಕಾಂಗ್ರೆಸ್ಗಾಗಿಯಾಗಲೀ ಈ ಯಾತ್ರೆಯನ್ನು ಮಾಡಲಿಲ್ಲ. ಬದಲಿಗೆ ಈ ದೇಶದ ಜನರಿಗಾಗಿ ಈ ಯಾತ್ರೆ ಮಾಡಿದೆ. ದೇಶವನ್ನು ಛಿದ್ರಗೊಳಿಸುವ ಸಿದ್ಧಾಂತಗಳ ಕೊನೆಯಾಗಬೇಕಿದೆ " ಎಂದು ರಾಹುಲ್ ಹೇಳಿದ್ದು ಮಹತ್ವಪೂರ್ಣವಾಗಿತ್ತು. ಈ ವರ್ಷದ ಫೆಬ್ರವರಿಯಲ್ಲಿ, ರಾಷ್ಟ್ರಪತಿಗಳು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾಡಿದ ಭಾಷಣಕ್ಕೆ ವಂದನಾರ್ಪಣೆ ಚರ್ಚೆಯಲ್ಲಿ ಭಾಗವಹಿಸಿ ರಾಹುಲ್ ಗಾಂಧಿ ಸುದೀರ್ಘ ಭಾಷಣ ಮಾಡಿದ್ದರು. ಅಲ್ಲಿ ಅವರು ಈ ಯಾತ್ರೆಯ ಅನುಭವ ಬಿಚ್ಚಿಟ್ಟಿದ್ದರು. ಸೇನೆಯ ಮೇಲೆ ಹೇರಲಾಗಿದೆ ಎನ್ನುವ ಅಗ್ನಿವೀರ್ ಯೋಜನೆ, ನಿರುದ್ಯೋಗ, ಬೆಲೆಯೇರಿಕೆ ಮೊದಲಾದ ಹಲವಾರು ವಿಚಾರಗಳನ್ನು ಎತ್ತಿದ್ದರು. ಮೋದಿ, ಅದಾನಿ ನಂಟಿನ ವಿಚಾರವನ್ನು ನೇರವಾಗಿ ಪ್ರಶ್ನಿಸಿದ್ದರು.
ನೂತನ ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸದೇ ಇದ್ದುದಕ್ಕೆ ಪ್ರತಿಕ್ರಿಯಿಸಿದ್ದ ರಾಹುಲ್, " ಸಂಸತ್ ಭವನವನ್ನು ಸಾಂವಿಧಾನಿಕ ಮೌಲ್ಯಗಳಿಂದ ನಿರ್ಮಿಸಬೇಕೇ ಹೊರತು ಗರ್ವದ ಇಟ್ಟಿಗೆಗಳಿಂದಲ್ಲ" ಎಂದಿದ್ದರು. ಹೇಗೆ ದೇಶದಲ್ಲಿ ಬಡವರನ್ನು ದಮನಿಸುತ್ತ ಕೆಲವೇ ಕೆಲವು ಶ್ರೀಮಂತರನ್ನು ಬೆಳೆಸಲಾಗುತ್ತಿದೆ ಎಂಬುದನ್ನು ಪ್ರಸ್ತಾಪಿಸುತ್ತ " ಎರಡು ಭಾರತಗಳಿವೆ, ಒಂದು ಶ್ರೀಮಂತರ ಭಾರತ, ಇನ್ನೊಂದು ಬಡವರ ಭಾರತ" ಎಂದಿದ್ದರು ರಾಹುಲ್.
ರಾಹುಲ್ ಅವರ ಈ ಹೇಳಿಕೆಗಳೆಲ್ಲ ಇತರ ರಾಜಕೀಯ ನಾಯಕರ ಹೇಳಿಕೆಗಳ ಹಾಗೆ ಅಲ್ಲ. ರಾಹುಲ್ ಮಾತುಗಳಲ್ಲಿ ಈ ದೇಶದ ಅಂತರ್ಗತ ಶಕ್ತಿಯನ್ನು ಮುಟ್ಟುವ ವಿಶಿಷ್ಟತೆಯಿದೆ. ಅವರ ಮಾತುಗಳು ಅವರೆಷ್ಟು ಪ್ರಬುದ್ಧತೆ ಸಾಧಿಸಿದ್ದಾರೆ ಎಂಬುದನ್ನು ಹೇಳುತ್ತವೆ. ಈ ಪ್ರಬುದ್ಧತೆ ಮತ್ತು ಪ್ರಾಮಾಣಿಕತೆಗಳೇ ಅವರನ್ನು ರಾಜಿಯಾಗದ ರಾಹುಲ್ ಎಂದಾಗಿಸಿರುವುದು. ಇತ್ತೀಚಿನ ಹಲವಾರು ಸಂದರ್ಭಗಳಲ್ಲಿ ನಾವದನ್ನು ಕಂಡಿದ್ದೇವೆ.
ಮೋದಿ ಉಪನಾಮ ಹೇಳಿಕೆ ವಿಚಾರದಲ್ಲಿಯೂ ಅವರು " ತಾನು ತಪ್ಪೆಸಗಿಲ್ಲ, ಹಾಗಾಗಿ ಕ್ಷಮೆ ಕೆಳುವ ಪ್ರಶ್ನೆಯೇ ಇಲ್ಲ" ಎಂದರು. " ಹಾಗೆ ರಾಜಿಯಾಗುವುದಿದ್ದರೆ ಯಾವತ್ತೋ ಆಗಿಬಿಡುತ್ತಿದ್ದೆ" ಎಂದರು. ಮೋದಿ ಉಪನಾಮ ಹೇಳಿಕೆ ವಿಚಾರದಲ್ಲಿ ಎದುರಿಸಿದಂಥದೇ ಸಂಕಷ್ಟವನ್ನು ಅವರು ಮತ್ತೊಂದು ಹೇಳಿಕೆಗಾಗಿಯೂ ಎದುರಿಸಬೇಕಾಗಿ ಬಂತು. ಅದು, ಅವರು ಆರೆಸ್ಸೆಸ್ ಬಗ್ಗೆ ನೀಡಿದ್ದ ಹೇಳಿಕೆಯಾಗಿತ್ತು.
ಜನವರಿಯಲ್ಲಿ ಭಾರತ್ ಜೋಡೋ ಯಾತ್ರೆ ವೇಳೆ ಹರ್ಯಾಣದ ಅಂಬಾಲಾದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಆರೆಸ್ಸೆಸ್ ಸದಸ್ಯರು '21ನೇ ಶತಮಾನದ ಕೌರವರು' ಎಂದು ಟೀಕಿಸಿದ್ದರು. ಈ ಹೇಳಿಕೆ ವಿಚಾರದಲ್ಲೂ ಅವರನ್ನು ಕೋರ್ಟ್ಗೆ ಎಳೆಯಲಾಯಿತು. ಮಾನನಷ್ಟ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡ ಬಳಿಕ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ರಾಹುಲ್ ಗಾಂಧಿ, 'ಕ್ಷಮೆ ಕೇಳಲು ನನ್ನ ಹೆಸರು ಸಾವರ್ಕರ್ ಅಲ್ಲ, ಗಾಂಧಿ ಎಂದಿಗೂ ಕ್ಷಮೆ ಕೇಳುವುದಿಲ್ಲ ಎಂದು ಹೇಳಿದ್ದು ಮತ್ತೊಮ್ಮೆ ಅವರನ್ನು ವಿವಾದದ ಕೇಂದ್ರದಲ್ಲಿ ತಂದು ನಿಲ್ಲಿಸಿತ್ತು.
ಇದಕ್ಕೂ ಹಿಂದೆ, ರಫೇಲ್ ಡೀಲ್ ವಿಚಾರವಾಗಿ, ಅನಿಲ್ ಅಂಬಾನಿ ಕಂಪನಿಯೊಂದಿಗೆ ಸಹಭಾಗಿತ್ವ ಹೊಂದಲು ಫ್ರಾನ್ಸ್ ಮುಂದಾಗಿದ್ದಕ್ಕೆ ಭಾರತ ಸರ್ಕಾರದ ಒತ್ತಡವೇ ಕಾರಣವಾಗಿತ್ತು ಎಂಬ ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೊ ಒಲಾಂಡ್ ಹೇಳಿಕೆ ಹೊರಬಿದ್ದಾಗ ಅದಕ್ಕೆ ರಾಹುಲ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.
"ಪ್ರಧಾನಿ ಮೋದಿ ಅವರು ಖುದ್ದಾಗಿ ಈ ವ್ಯವಹಾರವನ್ನು ಕುದುರಿಸಿದ್ದಾರೆ ಮತ್ತು ರಫೇಲ್ ಒಪ್ಪಂದವನ್ನು ಮುಚ್ಚಿದ ಬಾಗಿಲಿನ ಹಿಂಬದಿಯಲ್ಲಿ ಬದಲಿಸಿದ್ದಾರೆ " ಎಂದಿದ್ದ ರಾಹುಲ್, "ಪ್ರಧಾನಿ ದೇಶಕ್ಕೆ ಮೋಸ ಮಾಡಿದ್ದಾರೆ. ಅವರು ನಮ್ಮ ಸೈನಿಕರ ರಕ್ತಕ್ಕೆ ಅಗೌರವ ತೋರಿಸಿದ್ದಾರೆ" ಎಂದು ಟೀಕಿಸಿದ್ದರು.
ಇದೆಲ್ಲ ಮಾತುಗಳನ್ನು ಹೇಳುವಾಗ ರಾಹುಲ್ ಅವರಲ್ಲಿದ್ದುದು ಖಚಿತತೆ. ಈ ದೇಶವನ್ನು ಆಳುತ್ತಿರುವವರು ಮತ್ತವರ ಹಿಂದಿರುವವರು ಎಷ್ಟು ಘಾತುಕ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂಬುದರ ಕುರಿತ ಆಕ್ರೋಶವನ್ನೇ ಅವರು ಈ ಮಾತುಗಳ ಮೂಲಕ ವ್ಯಕ್ತಗೊಳಿಸಿದ್ದರು. ರಾಹುಲ್ ಹೇಳಿಕೆಗಳನ್ನೇ ನೆಪವಾಗಿಸಿಕೊಂಡು, ಅವರನ್ನು ಹಣಿಯುವ ಯತ್ನಗಳು ಮತ್ತೊಂದೆಡೆ ನಡೆದೇ ಇದ್ದವು. ದೇಶದ ವಿವಿಧೆಡೆ ಅವರ ವಿರುದ್ಧ ಬಿಜೆಪಿ ನಾಯಕರು 10 ಪ್ರಕರಣಗಳನ್ನು ಹಾಕಿದ್ದಾರೆ.
" ಭಾರತದಲ್ಲಿ ಪ್ರಜಾಪ್ರಭುತ್ವ ವಿನಾಶದ ಅಂಚಿನಲ್ಲಿದೆ" ಎಂದು ತಮ್ಮ ಲಂಡನ್ ಪ್ರವಾಸದ ವೇಳೆ ರಾಹುಲ್ ಹೇಳಿದ್ದನ್ನಂತೂ ಬಿಜೆಪಿ ದೊಡ್ಡ ಸಮಸ್ಯೆಯೆಂಬಂತೆ ತೀವ್ರವಾಗಿ ವಿರೋಧಿಸಿತು. ಆ ಹೇಳಿಕೆಗಾಗಿ ರಾಹುಲ್ ಕ್ಷಮೆ ಯಾಚಿಸಬೇಕೆಂದು ಸಂಸತ್ತಿನಲ್ಲಿಯೇ ಬಿಜೆಪಿ ಸದಸ್ಯರು ಒತ್ತಾಯಿಸಿದ್ದರು. ಆಗಲೂ ರಾಹುಲ್ ಕ್ಷಮೆ ಕೇಳದೆ, ತಮ್ಮ ಹೇಳಿಕೆಗೆ ಬದ್ಧವಾಗಿದ್ದರು.
ಪ್ರಜಾಪ್ರಭುತ್ವದ ಎಲ್ಲ ಮೂಲತತ್ವಗಳನ್ನು ಮೀರುವಂಥ ಅತಿರೇಕವನ್ನು ಆಡಳಿತದಲ್ಲಿರುವವರು ತೋರಿಸುತ್ತಿರುವ ಹೊತ್ತಿನಲ್ಲಿ ರಾಹುಲ್ ಅವರ ಈ ಧ್ವನಿ ಬಹಳ ಪ್ರಮುಖವಾಗಿದೆ. ತಾವು ಹೇಳುತ್ತಿರುವುದರ ಬಗ್ಗೆ ಸ್ಪಷ್ಟತೆ ಹೊಂದಿರುವ ರಾಹುಲ್, ಆ ಖಚಿತತೆಯ ಕಾರಣದಿಂದಲೇ ದೃಢವಾಗಿ ನಿಲ್ಲುತ್ತಾರೆ.
ಇಲ್ಲದೆ ಹೋಗಿದ್ದಲ್ಲಿ ಇಂದೊಂದು ಹೇಳಿಕೆ ಕೊಟ್ಟು ನಾಳೆ ಕ್ಷಮೆ ಕೇಳುವ, ಯಾವ ನಿಖರತೆಯಾಗಲೀ ಬದ್ಧತೆಯಾಗಲೀ ಇಲ್ಲದ ಇತರ ಎಷ್ಟೋ ರಾಜಕಾರಣಿಗಳಲ್ಲಿ ರಾಹುಲ್ ಕೂಡ ಒಬ್ಬರಾಗಿಬಿಡುತ್ತಿದ್ದರು. ಕಾಂಗ್ರೆಸ್ ನಲ್ಲೆ ಅಂತಹ ಅಸಂಖ್ಯ ರಾಜಕಾರಣಿಗಳಿದ್ದಾರೆ. ರಾಹುಲ್ ಮಾತುಗಳು ಸ್ಪಷ್ಟ ಮತ್ತು ಪ್ರಖರವಾಗಿರಲು, ಅವು ಅವರ ಪ್ರಾಮಾಣಿಕ ಅಭಿವ್ಯಕ್ತಿಯಾಗಿರುವುದೇ ಕಾರಣ. ಇಷ್ಟೊಂದು ದೃಢತೆಯಿಂದ ಮತ್ತು ಕಳಕಳಿಯಿಂದ ದೇಶದ ಗಮನ ಸೆಳೆಯುತ್ತಿರುವ ಈ ನಾಯಕನ ಎದುರಿನ ದೊಡ್ಡ ಸವಾಲು ಅವರ ಪಕ್ಷದವರೇ ಆಗಿದ್ದಾರೆ ಎಂಬುದನ್ನೂ ಗಮನಿಸಬೇಕಿದೆ.
ದ್ವೇಷ ಹರಡುವ ವ್ಯವಸ್ಥೆ ಮತ್ತು ಮನಃಸ್ಥಿತಿ ಇರುವಲ್ಲಿ ರಾಹುಲ್ ಕನಸುಗಳು ಬೇರೆಯೇ ಇವೆ. ಆದರೆ ರಾಹುಲ್ ಅವರೊಳಗಿನ ನಾಯಕನಿಗಿರುವ ಕನಸು, ಕಳಕಳಿ ಅವರದೇ ಪಕ್ಷದೊಳಗಿನ ಎಷ್ಟು ಮಂದಿಗಿದೆ?. ರಾಹುಲ್ ವಿಚಾರಗಳಿಗೆ ಬೆಂಬಲವಾಗಿ ನಿಲ್ಲಬಲ್ಲ, ಅವರೊಂದಿಗೆ ಕೈಜೋಡಿಸಬಲ್ಲವರು ಕಡಿಮೆ ಎಂಬುದು ಕೂಡ ಅವರೆದುರಿನ ಒಂದು ವಾಸ್ತವವಾಗಿದೆ.
ಒಂದೆಡೆ ರಾಹುಲ್ ಪ್ರಧಾನಿ ಮೋದಿಯ ವೈಫಲ್ಯಗಳನ್ನು ಒಂದೊಂದಾಗಿ ಬಿಚ್ಚಿಡುತ್ತಾ ಹೋಗುತ್ತಿದ್ದರೆ ಇನ್ನೊಂದೆಡೆ ಅವರದೇ ಪಕ್ಷದ ನಾಯಕರು "ಚುನಾವಣಾ ಪ್ರಚಾರದಲ್ಲಿ ಮೋದಿ ವಿರುದ್ಧ ಮಾತಾಡಬೇಡಿ" ಎಂದು ತಮ್ಮ ಪಕ್ಷದ ವಕ್ತಾರರಲ್ಲಿ, ಭಾಷಣಕಾರರಲ್ಲಿ ಹೇಳುತ್ತಾರೆ. ಸಾವರ್ಕರ್ ನಿಜರೂಪ ಏನು ಎಂದು ರಾಹುಲ್ ಹೇಳುತ್ತಿರುವಾಗಲೇ " ಸಾವರ್ಕರ್ ಪ್ರಾಥ ಸ್ಮರಣೀಯರು" ಎಂದು ಹೇಳುವ ಕಾಂಗ್ರೆಸಿಗರು ಬೇಕಾದಷ್ಟಿದ್ದಾರೆ.
2019 ರ ಚುನಾವಣಾ ಪ್ರಚಾರದ ಸಂದರ್ಭದಲ್ಲಂತೂ ರಾಹುಲ್ ಗಾಂಧಿಯನ್ನು ಅವರದೇ ಪಕ್ಷದ ನಾಯಕರು ಸಂಪೂರ್ಣ ಏಕಾಂಗಿ ಮಾಡಿ ಬಿಟ್ಟರು. ಅವರಿಗೆ ಸರಿಯಾಗಿ ಸಾಥ್ ನೀಡಲೇ ಇಲ್ಲ. ಒಂದೆಡೆ ಬಿಜೆಪಿಯ ವ್ಯವಸ್ಥಿತ ದಾಳಿ ಎದುರಿಸುತ್ತಲೇ ಇನ್ನೊಂದೆಡೆ ಪಕ್ಷದೊಳಗಿರುವ ಹಿತಶತ್ರುಗಳ ಕಾಟ ಅನುಭವಿಸಿ ಬಳಲಿಬಿಟ್ಟರು ರಾಹುಲ್ ಗಾಂಧಿ. ಇದೆಲ್ಲದರ ಹೊರತಾಗಿಯೂ, ವಿಚಿತ್ರ ರಾಜಕೀಯದ ವಿಷಮ ವಾತಾವರಣದಲ್ಲಿ ಅದೆಲ್ಲದಕ್ಕೂ ವಿರುದ್ಧವಾಗಿ ನಿಲ್ಲುವ ರಾಹುಲ್ ಅಂಥ ನಾಯಕರು ನಿಜಕ್ಕೂ ದೊಡ್ಡ ಭರವಸೆ.
ರಾಹುಲ್ ಗಾಂಧಿ ಲೋಪದೋಷ ಇಲ್ಲದ ರಾಜಕಾರಣಿಯಲ್ಲ. ಅವರ ವಿರುದ್ಧವೂ ಆರೋಪಗಳು ಕೇಳಿ ಬಂದಿವೆ. ಅವರೂ ತಪ್ಪುಗಳನ್ನು ಮಾಡಿದ್ದಾರೆ. ಆದರೆ ಅವರೊಳಗೊಬ್ಬ ಮಾನವೀಯ ಕಳಕಳಿಯ ರಾಜಕಾರಣಿ ಇದ್ದಾನೆ. ಕೇಳುವ ವಿವೇಕ ಅವರಲ್ಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅವರಲ್ಲಿ ಕೃತಕತೆ ಇಲ್ಲ, ಸಹಜತೆ ಇದೆ. ಅವರ ಮಾತು, ವರ್ತನೆ, ಹಾವಭಾವ, ಧೋರಣೆ, ಕಾರ್ಯವೈಖರಿ ಎಲ್ಲವೂ ಸಹಜ. ಅದರಲ್ಲಿ ನಾಟಕೀಯತೆ ಇಲ್ಲ. ಇವು ಇವತ್ತು ಭಾರತದ ರಾಜಕಾರಣದಲ್ಲಿ ಅತ್ಯಂತ ಅಪರೂಪದ ಗುಣಗಳು.