ಬಿಜೆಪಿ, ಮೋದಿ ವಿರುದ್ಧ ರಾಹುಲ್ ಗಾಂಧಿಯ ಐದು ದೊಡ್ಡ ಅಸ್ತ್ರಗಳು | BJP | Modi | Rahul Gandhi
2024 ರ ಮಹಾ ಸಮರಕ್ಕೆ ತಿರುವು ನೀಡಬಲ್ಲ ಘೋಷಣೆಗಳು ! ► ರಾಹುಲ್, ಇಂಡಿಯಾದ ಈ ರಣತಂತ್ರಕ್ಕೆ ಬಿಜೆಪಿಯ ಉತ್ತರವೇನು ?
ರಾಹುಲ್ ಗಾಂಧಿಯವರ ನಿಜವಾದ ಹೋರಾಟ ರೂಪುಗೊಳ್ಳತೊಡಗಿದೆ. ಮತ್ತದರಲ್ಲಿ ಒಂದು ಸ್ಪಷ್ಟತೆಯೂ ಕಾಣಿಸತೊಡಗಿದೆ.
ಬಿಜೆಪಿ ಹಾಗು ಮೋದಿ ವಿರುದ್ಧ ಮಾಡು ಇಲ್ಲವೆ ಮಡಿ ಹೋರಾಟಕ್ಕೆ ಸಜ್ಜಾಗಿರುವ ರಾಹುಲ್ ಗಾಂಧಿ ಮೋದಿಯನ್ನು ಸೋಲಿಸುವ ಈ ಅಂತಿಮ ಅವಕಾಶದಲ್ಲಿ ಇರುವ ಒಂದೇ ಒಂದು ಪ್ರಯತ್ನವನ್ನೂ ಬಿಡೋದಿಲ್ಲ ಎಂದು ನಿರ್ಧರಿಸಿದ ಹಾಗಿದೆ.
ಅದಕ್ಕಾಗಿಯೇ ಅವರು ಇಂಡಿಯಾ ಒಕ್ಕೂಟದ ಮಿತ್ರಪಕ್ಷಗಳ ನಾಯಕರಲ್ಲಿ ನೇರವಾಗಿ, ಸ್ಪಷ್ಟವಾಗಿ ಮಾತಾಡಿ ನಮ್ಮ ಈ ಹೋರಾಟದಲ್ಲಿ ಯಾವುದೇ ಲೋಪಕ್ಕೆ ಅಥವಾ ಏನನ್ನೂ ಬಿಟ್ಟು ಬಿಡುವ ಅವಕಾಶವೇ ಇಲ್ಲ ಎಂದು ಹೇಳಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ ನಾವು ಏನನ್ನು ಜನರಿಗೆ ಹೇಳಲು ಬಯಸುತ್ತೇವೆ ಅದನ್ನು ಅತ್ಯಂತ ಸ್ಪಷ್ಟವಾಗಿಯೇ ಘೋಷಿಸಿಬಿಡಬೇಕು ಎಂದು ಅವರೂ ತೀರ್ಮಾನಿಸಿದ್ದಾರೆ ಹಾಗು ಅದನ್ನೇ ಮಿತ್ರಪಕ್ಷಗಳ ನಾಯಕರಿಗೂ ಹೇಳಿದ್ದಾರೆ.
ನಾವು ದಿಲ್ಲಿಯಿಂದ ಹೊರಟು ದೇಶಾದ್ಯಂತ ಬೀದಿಗಿಳಿದು ಜನರ ನಡುವೆ ಹೋದಾಗ ಅವರು ಇಂತಹ ಸಂಕಟಗಳನ್ನು ಅನುಭವಿಸುತ್ತಿದ್ದಾರೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಅದರ ಆಧಾರದಲ್ಲೇ ನಾವು ನಮ್ಮ ಭರವಸೆಗಳನ್ನು ಸ್ಪಷ್ಟವಾಗಿ ಘೋಷಿಸಬೇಕು ಎಂದು ಅವರು ಮಿತ್ರ ಪಕ್ಷಗಳ ನಾಯಕರಿಗೆ ಮನವರಿಕೆ ಮಾಡಿ ಕೊಟ್ಟಿದ್ದಾರೆ.
ಅದರ ಫಲಿತಾಂಶವಾಗಿ ರಾಹುಲ್ ಗಾಂಧಿ ಹಾಗು ಇಂಡಿಯಾ ಮೈತ್ರಿಕೂಟ ಚರ್ಚಿಸಿ ದೇಶಕ್ಕೆ ಐದು ಅತ್ಯಂತ ಮಹತ್ವದ ಗ್ಯಾರಂಟಿಗಳನ್ನು ಘೋಷಿಸಲು ಸಜ್ಜಾಗಿದ್ದಾರೆ ಎನ್ನುತ್ತಿವೆ ವರದಿಗಳು.
ಬಿಜೆಪಿಯನ್ನು ಹಿಮ್ಮೆಟ್ಟಿಸುವ ಒಂದೇ ಒಂದು ಅವಕಾಶವನ್ನೂ ಬಿಡಬಾರದು ಎಂದು ನಿರ್ಧರಿಸಿ ಬೀದಿಗಿಳಿದಿರುವ ರಾಹುಲ್ ಈಗ ಅತ್ಯಂತ ನಿರ್ಣಾಯಕ ಐದು ಗ್ಯಾರಂಟಿಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲು ಸಂಪೂರ್ಣ ತಯಾರಾಗಿದ್ದಾರೆ. ರಾಹುಲ್ ಈ ಮೂಲಕ ಒಂದು ಅಂತಿಮ ಯುದ್ಧಕ್ಕೆ ತಯಾರಾಗಿರುವ ಹಾಗಿದೆ.
ಚುನಾವಣೆಯನ್ನು ಎದುರಿಸಲು ಸಜ್ಜಾಗುತ್ತಿರುವ ಹೊತ್ತಲ್ಲಿನ ಈ ಸಲದ ರಾಹುಲ್ ನಡೆಯೇ ಅತ್ಯಂತ ಕುತೂಹಲಕಾರಿಯಾಗಿದೆ.
ಇದೇ ಮೊದಲ ಸಲ ಅವರು ಇಂಡಿಯಾ ಮೈತ್ರಿಕೂಟದಲ್ಲಿರುವ ಮಿತ್ರಪಕ್ಷಗಳ ಪ್ರತಿಯೊಬ್ಬ ನಾಯಕರ ಜೊತೆ ಖುದ್ದಾಗಿ ಚರ್ಚಿಸುತ್ತಿದ್ದಾರೆ ಎಂಬುದು ಮಹತ್ವದ ಬೆಳವಣಿಗೆ.
ಒಂದೆಡೆ ಸೀಟು ಹಂಚಿಕೆ ವಿಚಾರದಲ್ಲಿ ಪ್ರಮುಖ ರಾಜ್ಯಗಳಲ್ಲಿ ಮಾತುಕತೆ ಯಶಸ್ವಿಯಾಗುತ್ತಿರುವಾಗಲೇ ಈಗ ಐದು ಗ್ಯಾರಂಟಿಗಳನ್ನು ಜನರ ಮುಂದಿಡುವ ನಿರ್ಧಾರ ಮಹತ್ವ ಪಡೆಯುತ್ತಿದೆ.
ಯಾವುವು ಆ ಗ್ಯಾರಂಟಿಗಳು? ಮೊದಲನೆಯ ಪ್ರಮುಖ ಗ್ಯಾರಂಟಿ ಒಬಿಸಿ ಮೀಸಲಾತಿ ಹೆಚ್ಚಳ. ಈಗಾಗಲೇ ರಾಹುಲ್ ಗಾಂಧಿ ಜಾತಿ ಜನಗಣತಿಯ ವಿಚಾರವನ್ನು ಬಹಳ ಗಟ್ಟಿಯಾಗಿ ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶಾದ್ಯಂತ ಜಾತಿ ಜನಗಣತಿ ನಡೆಸುವುದಾಗಿ ಅವರು ಘೋಷಿಸಿದ್ದಾರೆ.
ಹೇಗೆ ಹಿಂದುಳಿದ ವರ್ಗಗಳು ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಪಡೆದಿಲ್ಲ ಎಂಬ ವಾಸ್ತವದ ಬಗ್ಗೆ ಅವರು ಮತ್ತೆ ಮತ್ತೆ ಗಮನ ಸೆಳೆದಿದ್ಧಾರೆ. ಒಬಿಸಿಗಳ ಜೊತೆಗೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತರ ವಿಚಾರವೂ ಇಲ್ಲಿ ಪ್ರಾಮುಖ್ಯತೆ ಪಡೆಯಲಿದೆ.
ಎರಡನೆಯ ಗ್ಯಾರಂಟಿ, ರೈತರ ಆಂದೋಲನದೊಂದಿಗೆ ಸಹಮತ. ರೈತರು ಬೇಡಿಕೆಯಿಟ್ಟಿರುವ ಕನಿಷ್ಠ ಬೆಂಬಲ ಬೆಲೆ ಅಥವಾ ಎಂಎಸ್ಪಿಯ ಕಾನೂನಾತ್ಮಕ ಜಾರಿಗೆ ಆದ್ಯತೆ ನೀಡುವ ವಿಚಾರವನ್ನು ಇಂಡಿಯಾ ಮೈತ್ರಿಕೂಟದ ಪ್ರಮುಖ ಭರವಸೆಯಾಗಿಸಿರುವುದು ಈ ಹಂತದಲ್ಲಿ ಮಹತ್ವ ಪಡೆದಿದೆ.
ಎಂಎಸ್ಪಿ ಜಾರಿಗೆ ಆದ್ಯತೆ ನೀಡುವುದಾಗಿ ರಾಹುಲ್ ಹೇಳುವಾಗ, ಹಿಂದೆ ಯುಪಿಎ ಸರ್ಕಾರವಿದ್ದಾಗ ಅದನ್ನು ಜಾರಿಗೆ ತರಲಿಲ್ಲ ಎಂಬ ವಾದವನ್ನು ಮುಂದೆ ಮಾಡುವವರಿದ್ದಾರೆ. ಆದರೆ ರಾಹುಲ್ ಆ ಭರವಸೆಯನ್ನು ನೀಡುತ್ತಿರುವ ಸನ್ನಿವೇಶ ಮತ್ತು ರಾಹುಲ್ ಅದರ ಬಗ್ಗೆ ಯೋಚಿಸುತ್ತಿರುವ ಹೊತ್ತು ಸಂಪೂರ್ಣ ಭಿನ್ನವಾದುದಾಗಿದೆ.
ಭಾರತ್ ಜೋಡೋ ಯಾತ್ರೆಯ ಸಂದರ್ಭದಿಂದಲೂ ರಾಹುಲ್ ಅವರು ಈ ದೇಶದ ರೈತರ ವಾಸ್ತವ ಬದುಕಿನ ಬಗ್ಗೆ ಕುತೂಹಲ ತೋರಿಸಿದವರು. ರೈತರ ಅನುಭವದಲ್ಲಿ ಮಹತ್ವವಾದುದನ್ನು ಕಂಡವರು. ರೈತರ ಪ್ರತಿಭಟನೆ ವೇಳೆ ಅವರ ಪರವಾಗಿ ಧ್ವನಿಯೆತ್ತಿದವರು. ಈಗಲೂ ರಾಹುಲ್ ಮತ್ತು ಇಂಡಿಯಾ ಒಕ್ಕೂಟದ ದನಿ ರೈತರ ಪರವಾದುದು.
ಇಲ್ಲಿ ರೈತರನ್ನು ದಮನಿಸುವ ಮೋದಿ ಸರ್ಕಾರದ ನೀತಿಯ ವಿರುದ್ಧದ ನೆಲೆಯಿಂದ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟ ಮಾತನಾಡುತ್ತಿವೆ ಎಂಬುದು ಮುಖ್ಯ ವಿಚಾರ.
ರಾಹುಲ್ ಪ್ರಸ್ತಾವಿಸಿರುವ ಮೂರನೇ ಮಹತ್ವದ ಗ್ಯಾರಂಟಿ ಅಗ್ನಿಪಥ ಯೋಜನೆ ರದ್ದತಿ. ಈ ಯೋಜನೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ. ಈ ವ್ಯವಸ್ಥೆಯಿಂದ ಯುವಕರಿಗೆ ಘೋರ ಅನ್ಯಾಯವಾಗಿದೆ ಎಂದಿರುವ ಅದು, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಅಗ್ನಿಪಥ ಯೋಜನೆ ರದ್ದುಗೊಳಿಸುವುದಾಗಿ ಹೇಳಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಳೆಯ ನೇಮಕಾತಿ ವ್ಯವಸ್ಥೆಯಡಿ ಸೇನೆಗೆ ಸೇರಲು ಬಯಸಿದ್ದ ಲಕ್ಷಾಂತರ ಯುವಕರಿಗೆ ಅಗ್ನಿಪಥ ಯೋಜನೆಯಿಂದ ಅನ್ಯಾಯವಾಗಿದ್ದು, ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.
2019ರಿಂದ 2022ರವರೆಗೆ ಸುಮಾರು 2 ಲಕ್ಷ ಯುವಕ ಯುವತಿಯರು ಕಠಿಣ ದೈಹಿಕ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸೇನೆಗೆ ಸೇರಲು ಅರ್ಹತೆ ಪಡೆದಿದ್ದರು. ಕನಸು ಕೈಗೂಡುತ್ತಿದೆ ಎಂದು ನೇಮಕಾತಿ ಪತ್ರಕ್ಕಾಗಿ ಕಾಯುತ್ತಿದ್ದರು. ಆದರೆ ಕೇಂದ್ರ ಸರ್ಕಾರ ಅಗ್ನಿಪಥ ಯೋಜನೆ ಘೋಷಿಸುವುದರೊಂದಿಗೆ ಅವರ ಕನಸು ನುಚ್ಚುನೂರಾದವು ಎಂದು ಖರ್ಗೆ ಪತ್ರದಲ್ಲಿ ಹೇಳಿದ್ದಾರೆ.
ರಾಹುಲ್ ಕೂಡ ಅಗ್ನಿಪಥ ಯೋಜನೆಯಿಂದ ಸರ್ಕಾರ ಯುವಕರ ಕನಸುಗಳನ್ನು ನಾಶ ಮಾಡಿದೆ ಎಂದು ಹೇಳುತ್ತಲೇ ಬಂದಿದ್ದಾರೆ.
ದೇಶದ ಸೇನೆ ಬಗ್ಗೆ ಭಾರಿ ಭಾರಿ ಮಾತುಗಳನ್ನಾಡುತ್ತ ಜನರ ಮನಸೆಳೆವ ಮತ್ತವರ ವೋಟುಗಳನ್ನು ಸೆಳೆಯುವ ಮೋದಿ ಸರ್ಕಾರ ವಾಸ್ತವದಲ್ಲಿ ಸೇನೆಯ ಬಗ್ಗೆ ಯಾವ ಕಾಳಜಿಯನ್ನೂ ಹೊಂದಿಲ್ಲ ಎಂಬುದನ್ನು ರಾಹುಲ್ ಗಾಂಧಿ ಮತ್ತೆ ಮತ್ತೆ ಹೇಳಿದ್ದಾರೆ. ಸೈನಿಕರಿಗೆ ಅತಿ ಕಡಿಮೆ ಸಂಬಳ ಕೊಡುವ ಮೋದಿ ಸರಕಾರದ ಹುನ್ನಾರ ಎಂಥದಿತ್ತು ಎಂಬುದು ಕೂಡ ಅಗ್ನಿಪಥ ಯೋಜನೆಯಲ್ಲಿದ್ದುದು ಬಯಲಾಗಿತ್ತು.
ಸೇನೆಯಲ್ಲಿರುವವರಿಗೇ ಮೋದಿ ಸರ್ಕಾರದ ಈ ನೀತಿ ಅಸಮಾಧಾನ ಉಂಟು ಮಾಡಿತ್ತು. ಆದರೆ ಅದೇ ಸೈನಿಕರ ಹೆಸರು ಬಳಸಿ ಮೋದಿ ಮಾಡುತ್ತಿರುವ ರಾಜಕೀಯ ಎಂಥದು? ಕಳೆದ ಬಾರಿ ಮೋದಿ ಪುಲ್ವಾಮಾ ಹುತಾತ್ಮ ಸೈನಿಕರ ಹೆಸರಲ್ಲಿ ವೋಟು ಕೇಳಿದ್ದರು.
ಮೊದಲ ಸಲ ಮತದಾನ ಮಾಡುವ ಯುವಕರು ಪುಲ್ವಾಮಾ ಹುತಾತ್ಮರ ಹೆಸರಲ್ಲಿ ಮತ ನೀಡಿ ಎಂದು ಸೈನಿಕರ ದುರಂತವನ್ನು ರಾಜಕೀಯಗೊಳಿಸಿ ಗೆದ್ದು ಬಂದಿದ್ದರು.
ಆದರೆ ಅದೇ ಸೇನೆಯಲ್ಲಿ ವಿಚಿತ್ರ ಸ್ಥಿತಿಯಿದೆ. ಸೇನೆಯಲ್ಲಿ ನಿಯಮಿತ ಉದ್ಯೋಗ ಬಯಸುತ್ತಿರುವ ಯುವಕರಿಗೂ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ. ಇಂಥ ಹೊತ್ತಿನಲ್ಲಿ, ಮೋದಿ ಸರ್ಕಾರದಿಂದ ಅನ್ಯಾಯಕ್ಕೊಳಗಾಗಿರುವ ಆ ಯುವಕರ ಜೊತೆ ಕಾಂಗ್ರೆಸ್ ಇದೆ ಎಂಬುದನ್ನು ಈ ಮೂಲಕ ಪ್ರತಿಪಾದಿಸಲಾಗುತ್ತಿದೆ.
ನಾಲ್ಕನೇ ವಿಚಾರ ಅದಾನಿ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದ್ದು. ಅದಾನಿ ಮತ್ತು ಮೋದಿ ಸರ್ಕಾರದ ನಡುವಿನ ಸಂಬಂಧದ ಬಗೆಗಿನ ರಾಹುಲ್ ಪ್ರಶ್ನೆಗಳು ಈಗಿನವಲ್ಲ. ಭಾರತ್ ಜೋಡೋ ಯಾತ್ರೆ ಹೊತ್ತಿನಿಂದಲೂ ಅದನ್ನು ಅವರು ಪ್ರಬಲವಾಗಿ ಎತ್ತುತ್ತ ಬಂದಿದ್ದಾರೆ. ಸಂಸತ್ತಿನಲ್ಲಿಯೂ ಅವರು ಮೋದಿ ಸರ್ಕಾರ ತತ್ತರಿಸುವ ಹಾಗೆ ಅದಾನಿ ವಿಚಾರವಾಗಿ ಮಾತನಾಡಿದ್ದರು.
ದೇಶದ ಹಿತಾಸಕ್ತಿ ಹೇಗೆ ಅದಾನಿ ಹಿತಾಸಕ್ತಿಗೆ ಬಲಿಯಾಗುತ್ತಿದೆ ಎಂಬುದನ್ನು, ಹೇಗೆ ಅದಾನಿಯ ರಕ್ಷಣೆಗೆ ನಿಂತಿರುವ ಮೋದಿ ಸರ್ಕಾರ ಪ್ರಶ್ನಿಸುವವರ ಮೇಲೆಲ್ಲ ಸೇಡು ತೀರಿಸಿಕೊಳ್ಳುತ್ತಿದೆ ಎಂಬುದನ್ನು ಟೀಕಿಸುತ್ತಲೇ ಬಂದಿದ್ದರು ರಾಹುಲ್.
ಅದು ಈಗ ಇಂಡಿಯಾ ಒಕ್ಕೂಟದ ನಿಲುವಾಗುವುದರೊಂದಿಗೆ, ಕಾರ್ಪೊರೇಟ್ ವಲಯದಿಂದಾಗುತ್ತಿರುವ ದೇಶದ ಆರ್ಥಿಕ ಶೋಷಣೆಯ ವಿರುದ್ಧದ ಹೋರಾಟವಾಗಿ ಬೆಳೆಯುವ ಸೂಚನೆಗಳು ಕಾಣಿಸಿವೆ. ಐದನೆಯ ವಿಚಾರ ದೇಶದಲ್ಲಿ ತಾಂಡವವಾಡುತ್ತಿರುವ ನಿರುದ್ಯೋಗಕ್ಕೆ ಸಂಬಂಧಿಸಿದ್ದು. ಈ ವಿಚಾರವನ್ನು ಕೂಡ ರಾಹುಲ್ ಬಹಳ ತೀವ್ರವಾಗಿ ಪ್ರತಿಪಾದಿಸುತ್ತ ಬಂದಿದ್ದಾರೆ.
ಕೋಟಿಗಟ್ಟಲೆ ಉದ್ಯೋಗ ಸೃಷ್ಟಿಯ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೇರಿದ ಮೋದಿ ಸರ್ಕಾರ ಕಡೆಗೆ ದೇಶದಲ್ಲಿ ಎಂಥ ಸ್ಥಿತಿಯನ್ನು ತಂದಿಟ್ಟಿದೆ ಎಂಬುದು ಗೊತ್ತೇ ಇರುವ ವಿಚಾರ. ಕೆಲವೇ ಸಾವಿರ ಹುದ್ದೆಗಳಿಗೆ ಹಲವು ಲಕ್ಷ ಯುವಕರು ಅರ್ಜಿ ಹಾಕಿಕೊಳ್ಳುವ ಸ್ಥಿತಿಯಿದೆ. ಹತಾಶೆಯಿದೆ, ಹೋರಾಟಗಳು ನಡೆದಿವೆ. ಆ ಹೋರಾಟಗಳನ್ನು ಹತ್ತಿಕ್ಕುವ ಕೆಲಸವನ್ನೂ ಮೋದಿ ಸರ್ಕಾರ ಮಾಡುತ್ತಿದೆ.
ನಿತೀಶ್ ಕುಮಾರ್ ಅವರನ್ನು ಇಂಡಿಯಾ ಮೈತ್ರಿಕೂಟದಿಂದ ತನ್ನತ್ತ ಸೆಳೆಯುವ ಮೂಲಕ ವಿಪಕ್ಷಗಳನ್ನು ಛಿದ್ರಗೊಳಸಲು ಮೋದಿ ಸರ್ಕಾರ ಒಳಗೊಳಗೇ ಯತ್ನಿಸಿತ್ತು. ಆದರೆ ಅದರ ಲೆಕ್ಕಾಚಾರ ತಲೆಕೆಳಗಾಗಿದೆ. ನಿತೀಶ್ ಕುಮಾರ್ ಇಲ್ಲದೆಯೂ ಇಂಡಿಯಾ ಮೈತ್ರಿಕೂಟ ಸಕ್ರಿಯವಾಗಿದೆ, ದಿನದಿಂದ ದಿನಕ್ಕೆ ಸದೃಢವಾಗುತ್ತಿದೆ.
ಮೈತ್ರಿಕೂಟವನ್ನು ಒಡೆಯಲು ವಿಪಕ್ಷ ನಾಯಕರನ್ನು ಜೈಲಿಗಟ್ಟುವ ಕೆಲಸವನ್ನೂ ಮೋದಿ ಸರ್ಕಾರ ಮುಂದುವರಿಸಿಯೇ ಇದೆ. ಎಎಪಿ, ಜೆಎಂಎಂ ನಾಯಕರನ್ನು ಜೈಲಿಗೆ ಕಳಿಸುತ್ತ, ವಿಪಕ್ಷ ಒಕ್ಕೂಟವನ್ನು ದುರ್ಬಲಗೊಳಿಸುವ ಹುನ್ನಾರ ನಡೆದೇ ಇದೆ. ವಿಪಕ್ಷಗಳಿಗೆ ಹೆದರುವ ಮೋದಿ ಸರ್ಕಾರ, ವಿರೋಧ ಪಕ್ಷಗಳೇ ಇಲ್ಲದಂತೆ ಮಾಡಿ ತಾನೇ ಗೆದ್ದೆನೆಂದು ಬೀಗುವ, ಕಿಂಚಿತ್ ಲಜ್ಜೆಯಿಲ್ಲದ ರಾಜಕಾರಣವನ್ನೇ ಮಾಡಿಕೊಂಡು ಬಂದಿದೆ.
ಈಗಲೂ ಅದೇ ಪ್ರಯತ್ನದಲ್ಲಿ ಬಿಜೆಪಿ ತೊಡಗಿದೆ. ಹೀಗಿರುವಾಗ ಕಾಂಗ್ರೆಸ್, ಅದರ ನಾಯಕ ರಾಹುಲ್, ಇಂಡಿಯಾ ಒಕ್ಕೂಟದಲ್ಲಿನ ನಾಯಕರನ್ನು ಜೊತೆಯಾಗಿ ಕರೆದೊಯ್ಯುವ ನಿಟ್ಟಿನಲ್ಲಿ ರೂಪಿಸಿರುವ ಈ ಗ್ಯಾರಂಟಿಗಳು ಅವರನ್ನೂ ಅವರ ಕಾಂಗ್ರೆಸ್ ಅನ್ನೂ ಇಂಡಿಯಾ ಮೈತ್ರಿಕೂಟವನ್ನೂ ನಿರ್ದಿಷ್ಟ ಮತ್ತು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುವ ಹಾಗೆ ಕಾಣುತ್ತಿವೆ.
ಬಿಹಾರದಲ್ಲಿ ರಾಹುಲ್ ಮತ್ತು ತೇಜಸ್ವಿ ಜೋಡಿ, ಉತ್ತರ ಪ್ರದೇಶದಲ್ಲಿ ರಾಹುಲ್ ಹಾಗು ಅಖಿಲೇಶ್ ಜೋಡಿ ಮಾಡುತ್ತಿರುವ ಮೋಡಿ ಕೂಡ ಇಂಡಿಯಾ ಒಕ್ಕೂಟದ ಹಿನ್ನೆಲೆಯಲ್ಲಿ ಬಹಳ ಮಹತ್ವದ ವಿದ್ಯಮಾನವಾಗಿದೆ. ಮಾರ್ಚ್ 3ರಿಂದ ಬಿಹಾರದಲ್ಲಿ ನಡೆಯಲಿರುವ ರ್ಯಾಲಿ ಕೂಡ ಇಂಡಿಯಾ ಮೈತ್ರಿಕೂಟದ ಮುಂದಿನ ಹಲವು ಮಹತ್ವದ ಹೆಜ್ಜೆಗಳಿಗೆ ಒಂದು ಹೊಸ ಶಕ್ತಿಯಾಗುವ ಸಾಧ್ಯತೆಯನ್ನು ಊಹಿಸಬಹುದಾಗಿದೆ.
ಈಗಾಗಲೇ ತೇಜಸ್ವಿ ಯಾದವ್ ಎಲ್ಲ ಜನತೆಯನ್ನೂ ರ್ಯಾಲಿಗೆ ಆಹ್ವಾನಿಸಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಬರಬೇಕೆಂದು ಕೇಳಿಕೊಂಡಿದ್ದಾರೆ. ಜನರ ಹೋರಾಟದಲ್ಲಿ ಜೊತೆಯಾಗಿ ತಾವಿರುವ ಭರವಸೆಯನ್ನು ಅವರು ನೀಡಿದ್ದಾರೆ. ಬಿಹಾರದಲ್ಲಿನ ಈ ಮಾದರಿ ಬಹುಶಃ ಇಂಡಿಯಾ ಮೈತ್ರಿಕೂಟದ ಎದುರಲ್ಲಿನ ಹೊಸ ಸಾಧ್ಯತೆಯ ಹಾಗೆ ಬೆಳಗಲಿದೆ.